ನನ್ನ ತಂದೆಯನ್ನು ಕಣ್ಣೆದುರೇ ಸಾಯಿಸುತ್ತಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ: ಸಂತ್ರಸ್ಥೆ

ನನ್ನ ತಂದೆಯನ್ನು ಕಣ್ಣೆದುರೇ ಸಾಯಿಸುತ್ತಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ: ಸಂತ್ರಸ್ಥೆ

ದೆಹಲಿ: ಶನಿವಾರ ರಾತ್ರಿ ಮಗಳ ಕಣ್ಣೆದುರೇ ತಂದೆಯನ್ನು ಕೊಂದು ಆಕೆಯ ಅಣ್ಣನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುರ್ಘಟನೆ ದೆಹಲಿಯ ಬಸಾಯಿ ದರಾಪುರ್‌ನಲ್ಲಿ ನಡೆದಿತ್ತು. ಈ ಹಿನ್ನೆಲೆ ನೊಂದ ಹೆಣ್ಣು ಮಗಳು ಸಮಾಜವನ್ನು ದೂಷಿಸಿದ್ದು. ದುಷ್ಕೃತ್ಯ ನಡೆಯುತ್ತಿದ್ದರೂ ಜನರು ವಿಡಿಯೋ ತೆಗೆಯುವದರಲ್ಲೇ ನಿರತರಾಗಿದ್ದರೇ ಹೊರತು ಯಾರು ಸಹಾಯಕ್ಕೆ ಮುಂದಾಗಲಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾಳೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ.

“ನಾನು ಸಹಾಯಕ್ಕೆಂದು ಪರಿಪರಿಯಾಗಿ ಬೇಡಿಕೊಂಡರೂ ಅಲ್ಲಿದ್ದವರು ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ವಿಡಿಯೋ ಮಾಡುತ್ತಿದ್ದರು. ನನಗೆ ಸಹಾಯ ಮಾಡಿದರೆ ಕಿಡಿಗೇಡಿಗಳು ಅವರಿಗೂ ತೊಂದರೆ ಕೊಡಬಹುದೆಂದು ಎಲ್ಲರೂ ಸಹಾಯಕ್ಕೆ ಹಿಂಜರಿದರು.” ಎಂದು ಯುವತಿ ಆರೋಪಿಸಿದ್ದಾಳೆ.

ಶನಿವಾರ ರಾತ್ರಿ  ಸಂತ್ರಸ್ಥೆ ಯು ತನ್ನ ತಂದೆ ಅಣ್ಣನ ಜೊತೆ ಆಸ್ಪತ್ರೆಯಿಂದ ಮನೆಯ ಕಡೆಗೆ ಬರುತ್ತಿದ್ದಳು. ದಾರಿ ಮಧ್ಯದಲ್ಲಿ 4 ಕಿಡಿಗೇಡಿಗಳು ಯುವತಿಯನ್ನು ನೋಡಿ ಅಸಭ್ಯ ಪದಗಳಿಂದ ಟೀಕೆಸಿದಾಗ ಸಿಟ್ಟಿಗೆದ್ದ ಆಕೆಯ ತಂದೆ ಅವರೊಡನೆ ಜಗಳಕ್ಕೆ ನಿಂತಿದ್ದಾರೆ. ಈ ಸಮಯದಲ್ಲಿ ತಮ್ಮ ಬಳಿ ಇದ್ದ ಚಾಕುವಿನಿಂದ ತಂದೆ ಮತ್ತು ಅಣ್ಣನಿಗೆ ಇರಿದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ನಂತರ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದು. ಮಗ ಆಸ್ಪತ್ರೆಯಲ್ಲಿ ಸಾವು ನೋವಿನ ನಡುವೆ ಹೋರಾಡುತ್ತಿದ್ದಾನೆ.

ಕೆಲ ಆರೋಪಿಗಳ ಮನೆಯ ಹೆಂಗಸರು ತಾವೇ ಆರೋಪಿಗಳಿಗೆ ಚಾಕು ನೀಡಿ ಇರಿಯುವುದಕ್ಕೆ ಪ್ರೇರೇಪಿಸಿದರು ಎಂದು ಯುವತಿ ದೂರಿದ್ದಾಳೆ.

“ಕಣ್ಣಾರೆ ನೋಡಿದವರೆಲ್ಲರೂ ವಿಡಿಯೋ ಮಾಡಿದ್ದರೂ ಅದನ್ನು ಪ್ರಸರಿಸಲು ಯಾರೂ ಧೈರ್ಯ ಮಾಡುತ್ತಿಲ್ಲ. ವಿಡಿಯೋ ಹಾಕುವುದರಿಂದ ತಮಗೆ ತೊದರೆ ಆಗಬಹುದು ಎಂದು ಎಲ್ಲರೂ ಹೆದರುತ್ತಿದ್ದಾರೆ.” ಎಂದು ಯುವತಿ ಅಳಲನ್ನು ತೋಡಿಕೊಂಡಿದ್ದಾರೆ.

“ಆರೋಪಿಗಳು ಅನೇಕ ಪ್ರಕರಣಗಳಲ್ಲಿ ಗುರುತಿಸಿಕೊಂಡವರು. ಸ್ವಲ್ಪ ದಿನಗಳ ಹಿಂದೆ ಒಬ್ಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆ ಯುವತಿಗೆ ಸಹಾಯ ಮಾಡುವ ಮನಸ್ಸು ನಮಗಿದೆ. ಆದರೆ ಮುಂದೆ ನಮ್ಮ ಕುಟುಂಬಕ್ಕೆ ಅದರಿಂದ ತೊಂದರೆಯಾಗಬಹುದು ಎಂದು ಹೆದರುತ್ತೇವೆ” ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.