ಕಸ್ತೂರ ಬಾ....ದಾರಿ ಕಥನ

ಈ ಕೃತಿಯ ಪಯಣದ ಹಾದಿಯೂ ಕೇವಲ ದಾರಿಯಾಗಿಲ್ಲ.ದಾರಿಯುದ್ದಕೂ ಎದುರಾದ ವ್ಯಕ್ತಿಗಳೊಂದಿಗೆ, ದರ್ಶಿಸಿದ ತಾಣಗಳೊಂದಿಗೆ, ಸ್ಪರ್ಶಿಸಿದ ಭಾವಗಳೊಂದಿಗೆ, ಅನ್ವೇಷಕಿಯಂತೆ,ವಿಶ್ಲೇಷಕಿಯಾಗಿ ಕಸ್ತೂರ ನಡೆಯುತ್ತಾಳೆ. ಆ ನಡಿಗೆಯು  "ಟ್ರಾನ್ಸೆಕ್ಟ್ ವಾಕ್" ರೀತಿಯದು. ಎಲ್ಲ ದಾರಿಗಳ ನಡಿಗೆ ಮುಕ್ತಾಯದ ನಂತರ ಮರದಡಿಗೆ ಕುಳಿತು, ಕಂಡ ಪಾತ್ರಗಳ ಒಟ್ಟಾಗಿಸಿ ಬೇರ್ಪಡಿಸುವ ರಾತ್ರಿ ಮೊರೆವ ಶರಧಿ ಕಥನ.

ಕಸ್ತೂರ ಬಾ....ದಾರಿ ಕಥನ

ದೇವರೇ ಸತ್ಯ ಎನ್ನುತ್ತಿದ್ದ ಹರಿಯ ಅಪ್ಪ,ಸತ್ಯವೇ ದೇವರು ಎಂದು ಹೇಳುವ ಬಾಪೂ ಆಗಿ ಪರಿವರ್ತನೆಯಾಗುವ ಕ್ರಿಯೆಯ ಈ ಹಾದಿಯ ಪಯಣ ಸುಲಭದ್ಧಲ್ಲ.ಒಂದು ನಿರ್ದಿಷ್ಟ ಗುರಿ ಹೊತ್ತು ಸಾಗುವವರಿಗೆ ದಾರಿ ಸಾಗಬಹುದೇನೋ..ಆದರೆ, ಗಂಡನ ಹೆಂಡತಿಯಾಗಿ ಸುಮ್ಮನೆ ಹಿಂಬಾಲಿಸುತ್ತ,ನಡೆಯುವುದು ಗಮ್ಯತೀರದ ಅನಿಶ್ಚಿತತೆ,ಮಕ್ಕಳ ಸಂಕಟಗಳ ಭಾರ ಹೊತ್ತು,ನಾನು ಅಮ್ಮ ಆಗಲೋ ಇಲ್ಲಾ  ಹೆಂಡತಿಯಾಗಿರಲೋ ಎನ್ನುವ ಕಸ್ತೂರಳ ಸಂಧಿಗ್ಧತೆ,ದೇಶದ ,ಊರಿನ ಓಣಿ-ಕೇರಿಗಳ ಎಲ್ಲ ಅವ್ವಂದಿರ ತಳಮಳಗಳನ್ನು  ನಾನು..ಕಸ್ತೂರ್ ಪ್ರತಿನಿಧಿಸುತ್ತಾಳೆ.

ಈ ಕೃತಿಯ ಪಯಣದ ಹಾದಿಯೂ ಕೇವಲ ದಾರಿಯಾಗಿಲ್ಲ.ದಾರಿಯುದ್ದಕೂ ಎದುರಾದ ವ್ಯಕ್ತಿಗಳೊಂದಿಗೆ, ದರ್ಶಿಸಿದ ತಾಣಗಳೊಂದಿಗೆ, ಸ್ಪರ್ಶಿಸಿದ ಭಾವಗಳೊಂದಿಗೆ, ಅನ್ವೇಷಕಿಯಂತೆ,ವಿಶ್ಲೇಷಕಿಯಾಗಿ ಕಸ್ತೂರ ನಡೆಯುತ್ತಾಳೆ. ಆ ನಡಿಗೆಯು  "ಟ್ರಾನ್ಸೆಕ್ಟ್ ವಾಕ್" ರೀತಿಯದು. ಎಲ್ಲ ದಾರಿಗಳ ನಡಿಗೆ ಮುಕ್ತಾಯದ ನಂತರ ಮರದಡಿಗೆ ಕುಳಿತು, ಕಂಡ ಪಾತ್ರಗಳ ಒಟ್ಟಾಗಿಸಿ ಬೇರ್ಪಡಿಸುವ ರಾತ್ರಿ ಮೊರೆವ ಶರಧಿ ಕಥನ.

ಇದು ಕೇವಲ ಆತ್ಮಕಥನವಲ್ಲ..ಬಾ..ಳ ದಾರಿಕಥನ.

1899,ಡರ್ಬಾನಿನ ಹೊರಗಿದ್ದ ಕ್ರೈಸ್ತ ಮಠ-ಆಶ್ರಮದಲ್ಲಿದ್ದಾಗ ಕಸ್ತೂರ,ತನಗಾದ ಅನುಭವದ ದಾಖಲೆ ಮಾಡಿದ್ದು ಕೂಡ ಪ್ರಾಮಾಣಿಕವಾದುದಾಗಿದೆ.

ಆಶ್ರಮದಲ್ಲಿ ತಮಿಳು ಮಾತನಾಡುವ ಗುಜರಾತಿ ಅಡುಗೆ ಮಾಡುವ ವಿನ್ಸೆಂಟ್ ಲಾರೆನ್ಸ್ ಎನ್ನುವವರಿದ್ದರು.ಅವರು ಆಶ್ರಮದ ಮನೆಯಲ್ಲಿಯೇ ಇರೋರು.ಭಾಯಿ ದೋಸ್ತರು.ಪದ್ದತಿಯಂತೆ ಸರತಿಯಲ್ಲಿ ಎಲ್ಲಾ ಕೆಲಸಗಳನ್ನು,ಎಲ್ಲರ ಕೆಲಸಗಳನ್ನು ಎಲ್ಲರೂ ಮಾಡಬೇಕಿತ್ತು.ಮಲದ ಕೊಡ ತೊಳೆಯುವ ಕೆಲಸ ತುಂಬ ಕಷ್ಟವಾಯಿತು.ಕಾರಣವೆಂದರೆ,ಕ್ರೈಸ್ತರಾಗುವುದಕ್ಕೂ ಮುನ್ನ ಅವರು ಪಂಚಮರಾಗಿದ್ದರು.ಕಸ್ತೂರ ತೊಳೆಯಲಾರೆ,ಅಷ್ಟೇ ಅಲ್ಲ,ಭಾಯಿ (ಗಾಂಧಿ)ಕೂಡ ತೊಳೆಯುವುದು ಸರಿಯಲ್ಲ ಎಂದು ಹೇಳಿದಾಗ...ಬನಿಯಾ ಕುಟುಂಬದ ನಗರ ಪ್ರದೇಶದ ವ್ಯಾಪಾರಿ ಕೌಟುಂಬಿಕ ಹಿನ್ನೆಲೆಯ ಕಸ್ತೂರ ಎಂಬ ಹೆಣ್ಣು ಮಗುವೊಂದು ಸಾಮಾಜಿಕ ಅಸ್ಪೃಶ್ಯತೆ ಬೆಟ್ಟವನೇರಲಾರದೆ ಏದುಸಿರು ಬಿಡುವ ಸಂದರ್ಭ ಕಣ್ಣಿಗೆ ಕಟ್ಟುತ್ತದೆ.

ಇಡೀ ಇಂಡಿಯಾದ ತುಂಬಾ ಈ ಹೊತ್ತೂ..ಅದೂ ನೂರು ಚಿಲ್ಲರೆ ವರ್ಷಗಳ ನಂತರವೂ ಅಸ್ಪೃಶ್ಯತೆ ಆಚರಣೆ ಚಾಲ್ತಿಯಲ್ಲಿರುವಾಗ ಕಸ್ತೂರ ಎಂಬ ಹೆಣ್ಣು ಆ ಕಾಲದಲ್ಲಿ ನಡೆದುಕೊಂಡ ರೀತಿ ಅಚ್ಚರಿಯದ್ದೇನಲ್ಲ.

ಆದರೆ, ಘಟನೆ ನಡೆದಾಗ ಗಾಂಧಿ ತೋರಿದ ಅಸಹನೆ,ಸಿಟ್ಟು,ಸತ್ಯಾಗ್ರಹ ,ಉಪವಾಸಗಳ ಗಾಯಗಳಿಂದ ಹೊರಬರಲು ಕಸ್ತೂರ...ಕಸ್ತೂರ ಬಾ...ಆಗುವ ರೂಪಾಂತರದ ಕ್ರಿಯೆ ಐತಿಹಾಸಿಕವಾದುದು.

ಗಾಂಧಿಯವರ ಜೊತೆ ದಕ್ಷಿಣ ಆಫ್ರಿಕಾ,ಲಂಡನ್ ಹೀಗೆ ಸುತ್ತಿ ಬಂದ  ಕಸ್ತೂರ್...ಬಾ ಆಗಿ ಮರಳಿ ಭಾರತಕ್ಕೆ ಬಂದು,ರಾಜಕೋಟೆಯಲ್ಲಿರುವಾಗ ಮನೆಯವರು ಕೆಲಸದವರಿಗೆ ತೋರಿಸುತ್ತಿದ್ದ ತಾತ್ಸಾರ,ಮಲದ ಗಡಿಗೆ ತೆಗೆಯಲು ಬರುವ ಭಂಗಿಗಳನ್ನು ಮುಟ್ಟಿಸಿಕೊಳ್ಳದಿರಲಿ ,ಮಾತನಾಡಿಸುತ್ತಿರಲಿಲ್ಲ.ಕಸ್ತೂರ್...ಬಾ ಇಲ್ಲಿ ಮತ್ತೆ ಕಸ್ತೂರ್ ಳಷ್ಟೆ ಆಗುವ ವಾತಾವರಣವಿತ್ತು.

ಅಲ್ಲಿಂದ ದಕ್ಷಿಣ ಆಫ್ರಿಕಾದ ಫೀನಿಕ್ಸ್ ನ ಆಶ್ರಮದಲ್ಲಿರುವಾಗಲೂ ಅಷ್ಟೆ.ಒಂದು ದಿನ,ಭಾರತದಿಂದ ಸ್ವಾಮಿ ಶಂಕರಾನಂದರು ಆಗಮಿಸಿದರು.ಆ ದಿನ ಮಗನಲಾಲನಿಗೆ,"ನೀನು,ಉಚ್ಛ ಜಾತಿಯಲ್ಲಿ ಹುಟ್ಟಿದವನು,ನೀನು ಜನಿವಾರ ಹಾಕಿಕೊಳ್ಳಲೇ ಬೇಕು"ಎಂದು ಮನವೊಲಿಸಲು ನೋಡಿದರು.

ದೂರದ ಸತ್ಯಾಗ್ರಹದಲ್ಲಿ ನಿರತರಾಗಿದ್ದ ಬಾಪೂ,"ಜನಿವಾರ-ಬರೀ ಜಾತಿ,ಅಹಂಕಾರದ ಸಂಕೇತಗಳಾಗಬಾರದು,ಜನಿವಾರ ಹಾಕುವುದು ಮನುಷ್ಯರಾಗಲಿಕ್ಕೆ ಅಡೆತಡೆಯೇ ವಿನಃ ಅದರಿಂದ ಬೇರೇನೂ ಉಪಯೋಗವಿಲ್ಲ"ಎಂದರು.

ಈ ಇಂತಹ ಅಭಿಪ್ರಾಯಗಳಿಂದಲೇ ಕಸ್ತೂರ ತನ್ನನ್ನು ತಾನು ಬಾ...ಆಗಿ ರೂಪಿಸಿಕೊಂಡದ್ದು.ಅಂಬೇಡ್ಕರ್ ಭೇಟಿಯ ಸಂದರ್ಭವೂ ಅವಳಿಗೆ 
ಡಾಕ್ಟರ್ ಸಾಹೇಬರು ಎಷ್ಟೊಂದು ತಿಳಿದುಕೊಂಡಿದ್ದಾರೆ...ಅವರು ಅನುಭವಿಸಿದ ನೋವು ಅವರಿಗಷ್ಟೆ ಗೊತ್ತು,ಅಸ್ಪೃಶ್ಯತೆಯೆನ್ನುವುದು ಎಷ್ಟೊಂದು ಜನರನ್ನು ಸುಟ್ಟಿದೆ ಎಂಬುದು ಅರಿವಾಯಿತು .

ಮಗ ಹರಿಲಾಲ ಮುಸ್ಲಿಮನಾಗಿ ಮತಾಂತರ ಹೊಂದಿದ.ಮುಂಬಯಿಯ ದೊಡ್ಡ ಸಮಾರಂಭವೊಂದರಲ್ಲಿ ಹರಿಲಾಲ -ಅಬ್ದಲ್ಲಾ ಗಾಂಧಿ ಆಗಿದ್ದ!.
ಅವನ ಸಾವಿನಷ್ಟೇ ಆಘಾತ ತಂದ ಸುದ್ದಿ ಕಸ್ತೂರ ಬಾ ದಾಗಿತ್ತು.

ಆಗ ಬಾಪೂ ತನ್ನ ಬಳಿ ಇರಬೇಕಿತ್ತು, ಎಲ್ಲ ಹೆಣ್ಣುಮಕ್ಕಳಂತೆ ಕಸ್ತೂರ ಕೂಡ ಕನಸಿದ್ದು ಸಹಜವೇ ಆಗಿತ್ತು.ಹೌದು, ಮಗ ಮುಸ್ಲಿಮನಾದರೆ ತನಗೇಕೆ ತಲ್ಲಣವಾಗಬೇಕು?ಎಂಬ ಸ್ವಗತದ ಹಿಂದೆ ಲೇಖಕರ ಪರಕಾಯ ಪ್ರವೇಶವಿದೆ.

ತದ ನಂತರ ಆರ್ಯಸಮಾಜದ ಪ್ರಭಾವಕ್ಕೊಳಗಾದ ಮಗ  ಅಬ್ದುಲ್ಲಾ ಗಾಂಧಿ-ಹೀರಾಲಾಲನಾದ.

ತನ್ನ ಹರಿ,ಹೀರಾಲಾಲನಾಗುವ ತನಕಮುಟ್ಟುವ ಅಧೋಗತಿ ಅದು,ತನಗಿನ್ನು ಮಾನವ ಜನ್ಮ ಬೇಡ,ಅದರಲ್ಲೂ ತಾಯಿ-ಹೆಂಡತಿ ಎಂಬ ಎರಡು ಪಾತ್ರಗಳ ನಡುವೆ ಸುಡುವ ಹೆಣ್ಣು ಜನ್ಮವಂತೂ ಬೇಡ...ಎನ್ನುವ ಹೊತ್ತಿಗೆಲ್ಲ ಮೋಹನದಾಸ ಹಣ್ಣಾಗಿ,ಗಾಂಧಿಯಾಗಿಬಿಟ್ಟಿದ್ದರು.ಅಷ್ಟೇ ಅಲ್ಲದೆ,ತಾನು ಅರ್ಧ ಹೆಣ್ಣು ಎಂದೂ ಘೋಷಿಸಿಕೊಂಡುಬಿಟ್ಟಿದ್ದರು.

ನಮ್ಮ ಹರಿಗಿಂತ ಐದಾರು ವರ್ಷ ದೊಡ್ಡವರು ಅಷ್ಟೆ.....ಹೀಗೆ ಹೇಳುವಾಗ ದಕ್ಷಿಣ ಆಫ್ರಿಕಾದ ಹೆನ್ರಿ ಪೊಲಾಕ್ ಕೂಡ ಮನೆಯ ಹುಡುಗನೇ ಆಗಿ ಬಿಡುವ-ಆಗುಮಾಡುವ ಭಾಷೆಯೊಂದರ ಅನನ್ಯತೆ ಈ ಕೃತಿಗೆ ದಕ್ಕಿದೆ.

ಗಾಂಧಿ ಕಣ್ತೆರೆಸಿದವರಲ್ಲಿ,ಮಿಲಿ ಹೆನ್ರಿ,ಮೀರಾ ಬೆಹೆನ್,ಮಣಿ,ಅಮೃತಾ,ಕಾಜಕುಮಾರಿ ಕೌರ್ ಪಾತ್ರ ಕೂಡ ಮಹತ್ವದ್ದೆ.

"ಹಾಗಾದರೆ, ಗಂಡ ಕುರ್ಚಿ ಮೇಲೆ ಕುಳಿತಿರಬೇಕು,ಹೆಂಡತಿ ಅವನ ಹಿಂದೆ ದಾಸಿಯ ಹಾಗೆ ಸೇವೆಗೆ ಸಿದ್ಧಳಾಗಿ ನಿಂತಿರಬೇಕು ಅಂತ ಯಾಕೆ ಬಯಸುತ್ತೀರ? ಗಂಡಸರು ಹೆಂಗಸರನ್ನು ಸಮಾನರು ಅಂತ ಪರಿಗಣಿಸ್ತಾರೆಂದು ಹೇಗೆ ಹೇಳ್ತೀರಿ ?"ಎಂದು ಕೇಳಿದ ಮಿಲಿ ಪ್ರಶ್ನೆಗೆ ಗಾಂಧಿಯ ಅದುವರೆಗಿನ ಭಾರತೀಯ ಸಂಸ್ಕೃತಿಯ ಚಿಂತನೆ ಬೇರೆ ತಿರುವು ಪಡೆದುಕೊಂಡಿದ್ದನ್ನು ಕಸ್ತೂರ ಬಾ ಗಮನಿಸುವುದು ವಿಶೇಷ.

ಬ್ರಹ್ಮಚರ್ಯ ಪಾಲಿಸೋಣ ಎಂದು ಹೇಳಿದ ಗಾಂಧಿಯ ಏಕಮುಖೀ ಚಿಂತನೆ ಕೂಡ ಬಾ....ಯೋಚಿಸುವಂತೆ ಮಾಡುತ್ತದೆ.

ದೇಹ ದೂರವಾದರೆ,ಮನಸ್ಸೂ ದೂರವಾದಂತೆ ಅಲ್ಲವೆ? ನನ್ನ ದೇಹಕ್ಕಿಂತ ಹೆಚ್ಚು ಈ ದೇಹದಿಂದ ಬಂದ ಮಕ್ಕಳಿಂದ,ಕುಟುಂಬದಿಂದ ದೂರವಾಗುತ್ತೀರಿ ಎಂಬರ್ಥವೇ...ಎಂದು ತೊಳಲಾಡುವ ಕಸ್ತೂರ ಬಾ...ಹೆಂಡತಿ ಅಂತ ತನಗಿರೋ ವಿಶೇಷ ಅಧಿಕಾರವನ್ನೂ ಕಿತ್ತುಕೊಂಡರೆ...ಮತ್ತಿನ್ನೇನು ಉಳಿದೀತು..ಹೀಗೆ ಸಹಜವಾಗಿ ಯೋಚಿಸುವ ಬಾ...ಕಥನ ಓದುಗರ ಎದೆಗೆ ಇಳಿಯುತ್ತದೆ.

ಹೀಗೆ ಗಾಂಧಿ ಜತೆ ಪಯಣದಲ್ಲಿ ಮಗನ ಸಂಕಟಗಳನ್ನು ಅರಿಯದ ತಂದೆಯ ಕುರಿತು ಇನ್ನಷ್ಟು ವಿವರಗಳನ್ನು ಸೇರಿಸಬಹುದಿತ್ತು.

ದೇಶ ತಿರುಗುವಾಗ ಹೋದಲ್ಲಿ ಬಂದಲ್ಲೆಲ್ಲಾ..ಗಾಂಧೀಜಿ ಕೀ ಜೈ ಎನ್ನುವ ಕೂಗಿನ ಹಿಂದೆ...ಹರಿಲಾಲನೊಬ್ಬನ ಕಸ್ತೂರಬಾ ಕೀ ಜೈ..ಎನ್ನುವ ಕೂಗೂ ಕೇಳಿಸಬೇಕಿತ್ತು.

ಒಂದು ಬಾರಿ,ಬಾಪು,ಕಸ್ತೂರ ಬಾ ರ ಇಂತಹದೇ ಪ್ರಯಾಣದಲ್ಲಿ,ರೈಲಿನಿಂದ ಇಳಿಯುವಾಗ ಅಪಾರ ಜನಸ್ತೋಮ.ಗಾಂಧೀಜಿ ಕೀ ....ಮಹಾತ್ಮ ಗಾಂಧೀಜೀ ಕೀ ಜೈ ಎಂಬ ಕಿವಿಗಡಚ್ಚಿಕ್ಕುವ ಜೈಕಾರದ ಮಧ್ಯೆ "ಕಸ್ತೂರ ಬಾ ಕೀ ಜೈ"ಎಂಬ  ಹರಿಲಾಲನ ವ್ಯಕ್ತಿತ್ವದ ಘಟನೆಗಳನ್ನು ಸೇರಿಸಿದ್ದರೆ ...ಬಾ ಪೂರ್ಣಳಾಗಿ ಓದುಗರಿಗೆ ದಕ್ಕುತ್ತಿದ್ದಳು.

ಅಷ್ಟೇ ಅಲ್ಲ,ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯ ಸತ್ಯಾಗ್ರಹದಲ್ಲಿ ಸಕ್ರಿಯನಾಗಿದ್ದ ಹರಿಲಾಲನನ್ನೂ ಜೈಲಿಗೆ ಹಾಕಿದರು.ಆಗ ಅಲ್ಲಿ ಕೊಡುತ್ತಿದ್ದ ಸಸ್ಯಾಹಾರ ಅಷ್ಟೇನೂ ಸರಿಯಿರುವುದಿಲ್ಲ.ಇದರ ವಿರುದ್ಧ ಪ್ರತಿಭಟಿಸಿ ಊಟ ಬಿಟ್ಟು ಕುಳಿತ ಹರಿಲಾಲ! ಇಡೀ ಜೈಲು ಸಿಬ್ಬಂದಿಯ ಗಮನ ಸೆಳೆಯಿತು.ಏನೂ ಮಾಡಲು ತೋಚದಂತೆ ಆಯಿತು.ಪಕ್ಕದ ಸೆಲ್ ನಲ್ಲಿ ಗಾಂಧಿಗೆ ಅಲ್ಲಿಯವರೆಗೂ ಸಿಗದಿದ್ದ ಬಹುದೊಡ್ಡ ಅಸ್ತ್ರವೊಂದನ್ನು ಹರಿಲಾಲ ತೋರಿಸಿದ್ದ !.!

ಮಹಾತ್ಮ ಗಾಂಧಿಯ ಉಪವಾಸ ಸತ್ಯಾಗ್ರಹಕ್ಕೆ ಬಹುದೊಡ್ಡ ಅಸ್ತ್ರ ಒದಗಿಸಿದ ಗುರು ಹರಿಲಾಲನಾಗಿದ್ದ.ಇಂತಹ ಮಗನ ಸಃಕಟಗಳ ನೆನಪುಗಳನ್ನು ....ನಾನು ಕಸ್ತೂರ್ ಕೃತಿ ದಾಖಲಿಸಬಹುದಿತ್ತು.

ಹೀಗೆ ಗಾಂಧಿಯ ನೆರಳಾಗಿ,ಎನ್ನುವುದಕ್ಕಿಂತಲೂ ಅವರ ನೆರಳಿನೊಂದಿಗೆ ಬಹುಕಾಲ ಬಾಳ್ವೆ ಮಾಡಿದ ಕಸ್ತೂರಳ ನೋವು,ಸಂಕಟ,ಅವಮಾನಗಳನ್ನೂದಾಖಲಿಸುವ ರೀತಿಯಲ್ಲಿಯೇ,ಕಸ್ತೂರ್ ಎಂಬ ಬಾಲೆಯೊಬ್ಬಳು ಮಹಾತ್ಮನ ಮಡದಿಯಾಗಿ,ಹಾದಿ ತಪ್ಪಿದ ಮಗನ ತಾಯಿಯಾಗಿ....ನಡೆಸಿದ ಸುದೀರ್ಘ ಪಯಣದಲ್ಲಿ ಎದುರಾದ ಜಿನ್ನಾ,ಅಂಬೇಡ್ಕರ್,ರಾಜಾಜಿ,ಷೇಕ್ ಅಬ್ದುಲ್ಲಾ,ಜೆ.ಪಿ,ಗೋಖಲೆ,ಬೋಸರು,...ಮುಂತಾದ ಘನ ವ್ಯಕ್ತಿತ್ವಗಳೊಂದಿಗಿನ ವಿಶಿಷ್ಟ ನೋಟಗಳನ್ನೂ ನೀಡಿದ್ದರೆ ಕೃತಿಗೆ ವಿಶಿಷ್ಟ ಅನನ್ಯತೆಯೊಂದು ದೊರಕಿ ಪರಿಪೂರ್ಣತೆಯೆನಿಸುತ್ತಿತ್ತು.

ಇಡೀ ಕೃತಿಯ ಉದ್ದಕ್ಕೂ ಲೇಖಕಿಯ ಶ್ರಮ ಎದ್ದು ಕಾಣುತ್ತದೆ.ಕೇವಲ ಹಿಸ್ಟರಿಯನ್ನು ನೆಚ್ಚಿ ಬರೆದಿದ್ದರೆ ಇದೊಂದು ಸಂಶೋಧನಾ ಕೃತಿಯಾಗಿ ಲೈಬ್ರರಿ ಸೇರುವ ಅಪಾಯವಿರುತ್ತಿತ್ತು.ಸಧ್ಯ ಲೇಖಕಿ ಅನುಪಮಾರ ಸಹಜ ಬರವಣಿಗೆಯ ನೇಯ್ಗೆಯಿಂದ ಓದುಗರ ಎದೆ ಸೇರುವ ಕೃತಿಯಾಗಿದೆ.

ಲಡಾಯಿ ಪ್ರಕಾಶನದ ಬಸೂ ಕೂಡ ಕನ್ನಡಕ್ಕೆ ಹೊಸಕೃತಿಯೊಂದನ್ನು ನೀಡಿದ್ದಕ್ಕೆ ಓದುಗ ಮಹಾಶಯರು ಚಿರರುಣಿಯಾಗಿರುತ್ತಾರೆ.

                                                                                         ಬಿ.ಶ್ರೀನಿವಾಸ,