ಯೋಗ್ಯ'ರಾಗಿ', ಭೋಗ್ಯ'ರಾಗಿ', ಭಾಗ್ಯವಂತ'ರಾಗಿ'

ಯೋಗ್ಯ'ರಾಗಿ', ಭೋಗ್ಯ'ರಾಗಿ', ಭಾಗ್ಯವಂತ'ರಾಗಿ'

   ಕೆಲವು ವರ್ಷಗಳ ಹಿಂದೆ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಕೃಷಿ ಮೇಳಕ್ಕೆ ಹೋಗಿದ್ದೆ, ಬೋಗುಣಿಯೊಂದರಲ್ಲಿ ಬಿಳಿರಾಗಿ ಇಟ್ಟಿದ್ದರು, ಅಲ್ಲೇ ಅದರ ಮೇಲ್ವಿಚಾರಣೆಯಲ್ಲಿದ್ದ ಇದ್ದ ಪ್ರೊಫೆಸರ್(ಕೃಷಿ ವಿಜ್ಞಾನಿ ಎನಿಸುತ್ತೆ) ಒಬ್ಬರನ್ನು "ಇದೇನು ಬಿಳಿರಾಗಿ..?" ಎಂದೆ ಆಶ್ಚರ್ಯ ಮತ್ತು ಕುತೂಹಲದಿಂದ. "ಹೌದು ಬಿಳೀರಾಗಿ.. ನಮ್ಮ ಈಚಿನ ಸಂಶೋಧನೆ" ಎಂದರು. "ಬಿಳೀರಾಗಿ ಏಕೆ..?" ಎಂದೆ. "ರಾಗಿ ಕಪ್ಪಗಿರುವುದರಿಂದ ಜನ ಇಷ್ಟಪಡಲ್ಲ.. ಕೊಂಚ ಹೆಸಿಟೇಟ್ ಮಾಡುತ್ತಾರೆ. ಆದ್ದರಿಂದ ನಾವು ಬಿಳೀರಾಗಿ ಮಾಡಿದ್ದೇವೆ.." ಯಾವ ಯಗ್ಗೂ ಇಲ್ಲದೆ ಕೊಂಚ ಮೆದುಗರ್ವದಿಂದಲೇ ಹೇಳಿದರು. "ನನಗೆ ಬಿಳೀ ಅಕ್ಕಿ, ಬಿಳೀ ಗೋದಿ ಇಷ್ಟವಾಗಲ್ಲ ಅಂದರೆ ಕಪ್ಪು ಅಕ್ಕಿ, ಕಪ್ಪು ಗೋಧಿ ಗಳನ್ನು ಸಂಶೋದಿಸಿ ಕೊಡುತ್ತೀರಾ ಎಂದೆ, ಪ್ರೊಫೆಸರ್ ಸ್ವಲ್ಪ ತಬ್ಬಿಬ್ಬಾದರು, ರಾಗಿಯಲ್ಲಿ ಕಪ್ಪುತನ ತೆಗೆದುಬಿಟ್ಟಿರುವುದರಿಂದ ರಾಗಿಯಲ್ಲಿನ ಪೌಷ್ಟಿಕಾಂಶ ಏನಾದರೂ ಹೆಚ್ಚಾಗುವುದೇ ಎಂದೆ. ಇಲ್ಲ.. ಸಹಜವಾಗಿ ಕಪ್ಪು ರಾಗಿಯಲ್ಲಿ ಅತ್ಯದಿಕ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಇರುತ್ತದೆ. ಇದರಲ್ಲಿ ಕಪ್ಪು ಬಣ್ಣವನ್ನು ತೆಗೆದಾಕ್ಷಣ ಅದರಲ್ಲಿನ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಕೂಡ ಕಡಿಮೆಯಾಗುತ್ತದೆ ಎಂದರು. "ಹಾಗಾದರೆ ನಿಮ್ಮ ಬಿಳೀರಾಗಿಯಲ್ಲಿ ಪೌಷ್ಟಿಕಾಂಶ ಇಲ್ಲದಿದ್ದರೂ ನೀವು ಅದನ್ನು ಬಿಳೀ ಮಾಡಿ ನಿಮ್ಮಲ್ಲಿ ಅಗೋಚರವಾಗಿ ಇರುವ ವರ್ಣಬೇದವನ್ನು ಆಚರಿಸಿಕೊಂಡು, ವಿಜೃಂಬಿಸಿಕೊಂಡು ಆತ್ಮತೃಪ್ತಿ ಹೊಂದುತ್ತೀರಲ್ಲವೆ ಎಂದು ಪ್ರಶ್ನಿಸಿದೆ, ವಿಷಯ ಎಲ್ಲೆಲ್ಲಿಗೋ ಹೋಗುತ್ತಿರುವುದನ್ನು ಕಂಡು ಅವರು ಮೌನವಾದರು. ದುರಂತವೆಂದರೆ ಈಗ ನಡೆಯುತ್ತಿರುವ ಕೃಷಿ ಮೇಳದಲ್ಲು ಬಿಳಿರಾಗಿ ಇಟ್ಟಿದ್ದಾರೆ.

  ರಾಗಿ ಕಪ್ಪಗಿರುವ ಏಕೈಕ ಕಾರಣಕ್ಕೆ ರಾಗಿಯ ಬಗ್ಗೆ ಹಿಂದಿನಿಂದಲೂ ಒಂದು ರೀತಿಯ ಅಸಡ್ಡೆಯಿದೆ. ರಾಗಿಯನ್ನು 'ತೃಣದಾನ್ಯ' ಎಂದೂ ಕೇವಲವರು ಕರೆಯಲಾಗುತ್ತದೆ. ರಾಗಿ ತಿನ್ನುವವರನ್ನು ಕೂಡ ಅತ್ಯಂತ ನಿಕೃಷ್ಟವಾಗಿ ನೋಡುವ ಪರಿಪಾಟವಿದೆ. ರಾಗಿ ತಿನ್ನುವ ನಮ್ಮಂತವರಿಗೂ ಅನೇಕ ವರ್ಷ ರಾಗಿ ತಿನ್ನುತ್ತೇವೆಂಬ ಕೀಳರಿಮೆಯಿತ್ತು. ನಮ್ಮೂರು ಬರ, ಬಂಡೆಗಳ  ಕೋಲಾರ, ಇಲ್ಲಿ ನಮ್ಮ ಜೀವದಾತುವೇ ರಾಗಿ. ನಮ್ಮ ಪಾಲಿಗೆ ರಾಗಿ ಕೃಷ್ಣ ಪರಮಾತ್ಮ,  ನಮ್ಮಲ್ಲಿ ಯಾರನ್ನೂ ಊಟ ಮಾಡಿದೆಯಾ ಅಂತ ಕೇಳುವ ಪರಿಪಾಟವೇ ಇರಲಿಲ್ಲ, "ಹಿಟ್ಟು ತಿಂದ್ಯ" ( ತೆಲುಗಿನಲ್ಲಿ "ಸಂಗಿಟಿ ತಿಂಟಿವ್ಯಾ") ಅಂತಲೇ ಕೇಳುತಿದ್ದದ್ದು. ರಾಗಿಯನ್ನು ತಿನ್ನುತ್ತಿದ್ದವರು ಶೂದ್ರರು, ಅತಿಶೂದ್ರರು, ಅಸ್ಪೃಶ್ಯರು, ಬಡವರೇ ಮುಂತಾದ ಕೆಳವರ್ಗಗಳವರು, ದಿನನಿತ್ಯ ರಾಗಿಮುದ್ದೆ, ರಾಗಿರೊಟ್ಟಿ, ರಾಗಿ ಅಂಬಲಿಯೇ ನಮ್ಮಲ್ಲಿನ ಬಹುಜನರ ದೈನಂದಿನ ಆಹಾರ.  ಹಬ್ಬ, ಹರಿದಿನಗಳಿಗೆ ಮಾತ್ರ ಅನ್ನ. ನಾವು  ಶಾಲೆಗೆ ಹೋಗುವಾಗ ಯಾರಾದರೂ ಏನು ತಿಂದು ಬಂದೆ ಅಂದರೆ 'ಅನ್ನ ತಿಂದೆ' ಅಂತ ಹೇಳು ಎಂದು ಅಮ್ಮ, ಅಕ್ಕ, ಅತ್ತಿಗೆಯರು ಹೇಳಿಕಳಿಸುತಿದ್ದರು. "ಬಾಯಿ ತುಂಬ ಅನ್ನ.. ಹೊಟ್ಟೆ ತುಂಬಾ ಹಿಟ್ಟು" ಎಂಬುದು ನಮ್ಮಲ್ಲಿ ದಿನನಿತ್ಯ ಚಾಲ್ತಿಯಲ್ಲಿರುವ ಗಾದೆ ಮಾತಿನಿಂತಾಗಿತ್ತು.

  ಮೇಲುಕೀಳುಗಳನ್ನು, ತಾರತಮ್ಯಗಳನ್ನೇ ಉಸಿರಾಡುವ ಈ ದೇಶದಲ್ಲಿ  ಕೆಳವರ್ಗಗಳ ಆಹಾರ ಹಾಗೂ ಕಡು ಕಪ್ಪು ಬಣ್ಣವಿದ್ದ ಕಾರಣಕ್ಕೆ ಶತಶತಮಾನಗಳಿಂದಲೂ ರಾಗಿ ದಾನ್ಯಕ್ಕೆ ಅವಮಾನ, ಅನ್ಯಾಯ, ಅಸಡ್ಡೆಗಳನ್ನು  ಮಾಡಿದಂತಿದೆ, ಅಂತೆಯೇ ಆಯಾ ಕಾಲಘಟ್ಟಗಳಲ್ಲಿ ರಾಗಿಯ ಪರ ಧ್ವನಿಯೆತ್ತಿದ ದಾಸರು, ತತ್ವಪದಕಾರರು, ಜಾನಪದರೇ ಮುಂತಾದ ಜನಸಾಮಾನ್ಯರು ಕಾಲಕಾಲಕ್ಕೆ ಅಕ್ಕಿಯ ವಿರುದ್ದ ತಮ್ಮ ಪ್ರತಿರೋಧವನ್ನು ಕಾವ್ಯ, ಕೀರ್ತನೆ, ಹಾಡು, ಹರಿಕತೆಗಳಲ್ಲಿ ದಾಖಲಿಸುತ್ತಲೇ ಬಂದಿದ್ದಾರೆ.

 

ರಾಮಧಾನ್ಯ:

ಕೆಳಜಾತಿಯಲ್ಲಿ(ಕುರುಬ) ಹುಟ್ಟಿದ ಕನಕದಾಸರು ತಮ್ಮ ಸಾಧನೆಯ ಹಾದಿಯಲ್ಲಿ ಅನುಭವಿಸಿದ ನೋವು, ಅವಮಾನಗಳನ್ನು ತಮ್ಮ 'ರಾಮಧಾನ್ಯ ಚರಿತೆ'ಯಲ್ಲಿ ಅಭಿವ್ಯಕ್ತಿಸಿದ್ದಾರೆ. ಕನಕದಾಸರ ರಾಮಧಾನ್ಯ ಚರಿತೆ 156 ಪದ್ಯಗಳ ಒಂದು ಚಿಕ್ಕ ಚೊಕ್ಕ ಕೃತಿ. ಇಲ್ಲಿ ರಾಮಾಯಣದ ರಾಮನನ್ನು ಉದಾಹರಿಸುತ್ತಾರಾದರೂ ಇದು ರಾಮಾಯಣದ ಕತೆಯಾಗದೆ, ಕನಕರ ಸ್ವಂತ ಚಿಂತನೆಯ ಕೃತಿಯಾಗಿದೆ. ಉಪಕತೆಯೊಂದು ಕನಕದಾಸರ ದೃಷ್ಟಿಯಲ್ಲಿ ಬೆಳೆಯುತ್ತಾ ಪ್ರದಾನಕತೆಯೇ ಆಗಿ ಬಿಟ್ಟಿದೆ.

  ಇಲ್ಲಿ ಕಪ್ಪು ಬಣ್ಣದ ರಾಗಿಯನ್ನು ಮತ್ತು ಬಿಳೀ ಬಣ್ಣದ ಅಕ್ಕಿ ಅಥವಾ ಭತ್ತವನ್ನು ಸಾಂಸ್ಕೃತಿಕ ಸಂಘರ್ಷವನ್ನಾಗಿ ಮುಖಾಮುಖಿಯಾಗಿಸಲಾಗಿದೆ. ಅಕ್ಕಿ ಶ್ರೇಷ್ಠತೆಯ ವ್ಯಸನದಿಂದ ಮೆರೆಯುವಾಗ ಕೀಳರಿಮೆಯ ರಾಗಿಯ ಶಕ್ತಿ, ಸಾಮರ್ಥ್ಯ, ಅನುಭಾವ ಮತ್ತು ಜನಪರ ಮೌಲ್ಯಗಳನ್ನಾಗಿ ಕನಕದಾಸರು ತಮ್ಮ 'ರಾಮದಾನ್ಯ ಚರಿತೆ'ಯಲ್ಲಿ ಕಟ್ಟಿಕೊಟ್ಟಿದ್ದಾರೆ. ಭತ್ತ ಮತ್ತು ರಾಗಿಯ ನಡುವೆ ಶ್ರೇಷ್ಟತೆಯ ಪ್ರಶ್ನೆ ಬಂದಾಗ ಶ್ರೀರಾಮಚಂದ್ರ ಇವೆರಡನ್ನೂ ಆರು ತಿಂಗಳಕಾಲ ಬಂಧನದಲ್ಲಿಡುತ್ತಾರೆ. ಆರು ತಿಂಗಳ ನಂತರ ಭತ್ತ, ರಾಗಿಗಳನ್ನು ಹೊರತೆಗೆದಾಗ ಭತ್ತ ಮುಗ್ಗು ಹಿಡಿದು ಪುಡಿ ಪುಡಿಯಾಗಿರುತ್ತದೆ, ರಾಗಿ ತನ್ನ ಕಪ್ಪುಬಣ್ಣದಿಂದ ಕಂಗೊಳಿಸುತ್ತಾ ಇನ್ನಷ್ಟು ನಳನಳಿಸುತ್ತಿರುತ್ತದೆ.

  ಭತ್ತ ರಾಗಿಗಳ ಸಂವಾದವನ್ನು ಶ್ರೀ ರಾಮಚಂದ್ರನ ಸಮ್ಮುಖದಲ್ಲೇ ನಡೆದಂತೆ ಕನಕದಾಸರು ಕಟ್ಟಿಕೊಡುವುದು ಅತ್ಯಂತ ಸ್ವಾರಸ್ಯಕರವಾಗಿದೆ, ಆಗಿನ ಸಂಧರ್ಭಕ್ಕೆ ಸಕಾಲಿಕವೂ ಆಗಿತ್ತೇನೋ..?

ಭತ್ತ ತನ್ನ ಮೇಲರಿಮೆಯನ್ನು ತೋರಿಸಿಕೊಳ್ಳುತ್ತಾ ರಾಗಿಯನ್ನು ಕುರಿತು...

       ಏನೆಲವೋ ನರೆದಲೆಗ(ರಾಗಿ) ನೀನು

       ಮಾನನೆಯೆನಗಿಲ್ಲಿ ನಮ್ಮನು

       ದಾನವಾಂತಕ ಬಲ್ಲನಿಬ್ಬರ ಹೆಚ್ಚು ಕುಂದುಗಳ

       ಜಾನಕೀಪತಿ ಸನಿಹದಲಿ ಕುಲ

       ಹೀನ ನೀನು ಪ್ರತಿಷ್ಟ ಸುಡುಮತಿ

       ಹೀನ ನೀನೆಂದೆನುತ ಖತಿಯಲ್ಲಿ ಬೈದು ಭಂಗಿಸಿದ.

ಇದನ್ನು ಕೇಳಿ ಅಪಾರ ಅವಮಾನ ಸಿಟ್ಟುಗಳಿಂದ ರಾಗಿ ಸಹನೆ ಕಳೆದುಕೊಂಡು..

        ನುಡಿಯ ಕೇಳುತ ಕನಲಿ ಕಂಗಳು

        ಕಿಡಿಮಸಗಿ ಖತಿಗೊಂಡು ನುಡಿದನು

        ಸಿಡಿಲು ಘರ್ಜನೆಯಂತೆ

        ಸಭೆಯಲಿ ಜರೆದನಾ ವ್ರಿಹಿಯ(ಭತ್ತ)

        ನುಡಿಗೆ ಹೇಸದ ಭಂಡ ನಿನ್ನೊಳು

        ಕೊಡುವರೇ ಮಾರುತ್ತರವ ಕಡು

        ಜಡನಲಾ ನಿನ್ನೊಡನೆ ಮಾತೇಕಂದ ನರೆದಲಗ(ರಾಗಿ).

ಕನಕದಾಸರು ವ್ರಿಹಿಯ(ಭತ್ತ) ಮತ್ತು ನರೆದಲಗ(ರಾಗಿ)  ಎರಡು ದಾನ್ಯಗಳ ನಡುವಿನ ಜಗಳವನ್ನು ಅತ್ಯಂತ ಸ್ವಾರಸ್ಯಕರವಾಗಿ ಆಗಿನ ಸಾಮಾಜಿಕ ಸಂಧರ್ಭಕ್ಕೆ ತಕ್ಕಂತೆ ವರ್ಣಿಸುತ್ತಾರೆ. ಕಡೆಗೆ ವ್ರಿಹಿಯ(ಭತ್ತ) ಅತ್ಯಂತ ಅಹಮ್ಮಿನಿಂದ ರಾಗಿ(ನರೆದಲಗ)ಯನ್ನು ಕುರಿತು ತೀರ ಅವಮಾನಿಸುವ ಧ್ವನಿಯಲ್ಲಿ ಹೇಳುತ್ತದೆ.

          ಪರಿಮಳದ ಚಂದನದ ತರುವಿಗೆ

          ಸರಿಯೆವೊಣಗಿದ ಕಾಷ್ಟಗೋವದು

          ಕರೆದ ಹಾಲಿಗೆ ಕುರಿಯ ಹಾಲು ತರವೆ ಭಾವಿಸಲು

          ಪರಮ ಸಾಹಸಿ ವೀರಹನುಮಗೆ

          ಮರದ ಮೇಲಣ ಕಪಿಯು ತಾನಂ

          ತರವೆ ಫಡನೀನೆನಗೆ ಸರಿಯೆ ಭ್ರಷ್ಟ ತೊಲಗೆಂದ.

ಇದಕ್ಕೆ ಕೆಂಡಾಮಂಡಲವಾಗುವ ರಾಗಿ, ತೀರ ಕೋಪ ಮತ್ತು ವ್ಯಂಗ್ಯದ ದ್ವನಿಯಲ್ಲಿ...

            ಸತ್ತವರ ಪ್ರತಿಬಿಂಬರೂಪನು

            ಬಿತ್ತರಿಸಿ ಪಿತೃನಾಮಗಳ ನಿನಗಿತ್ತು

            ಮೂವರ ಪೆಸರಿನಲಿ ಕರೆಕರೆದು ಧರ್ಬೆಯಲಿ

            ನೆತ್ತಿಯನು ಬಡಿಬಡಿದು ಕಡೆಯಲಿ

            ತುತ್ತುನಿಡುವರು ಪಶುಗಳಿಗೆ

            ನೆತ್ತಿದೆಯೆಲಾ ತನುವ ಸುಡಬೇಕೆಂದ ನರೆದಲಗ.

ಈ ರೀತಿಯಲ್ಲಿ ಭತ್ತ ಮತ್ತು ರಾಗಿಯ ಸಂಘರ್ಷವನ್ನು ಆ ಕಾಲಘಟ್ಟದ ವರ್ಣಸಂಘರ್ಷವನ್ನಾಗಿ ರೂಪಿಸುವಲ್ಲಿ ಕನಕದಾಸರು ಯಶಸ್ವಿಯಾಗುತ್ತಾರೆ. ಈ ಸಂಘರ್ಷದ ನೆಪದಲ್ಲಿ ತಮ್ಮಲ್ಲಿದ್ದ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ಮತ್ತು ಪ್ರತಿರೋಧವನ್ನು  ಭಕ್ತಿಮಾರ್ಗದ ರೂಪದಲ್ಲಿ ದಾಖಲಿಸಿಡುವ ಕನಕದಾಸರ ಜಾಣ್ಮೆ ಮೆಚ್ಚುವಂತಹದ್ದು.

ಮಾನವ'ರಾಗಿ'

  ಕನಕದಾಸರು ರಾಗಿ ಭತ್ತಗಳ ಸಂಘರ್ಷವನ್ನು ನೇರವಾಗಿ ವರ್ಣಸಂಘರ್ಷವನ್ನಾಗಿ ನೋಡಿದರೆ ಪುರಂದರದಾಸರು ರಾಗಿಯನ್ನು ಒಂದು ಅನುಭಾವವನ್ನಾಗಿ ನೋಡುತ್ತಾರೆ. ಪುರಂದರರು ತಮ್ಮ "ರಾಗಿ ತಂದೀರ್ಯ ಬಿಕ್ಷಕೆ ರಾಗಿ ತಂದೀರ್ಯಾ" ( ಈ ಕೀರ್ತನೆಯನ್ನು ಡಾ.ರಾಜ್ ಕಂಠದಲ್ಲಿ ಕೇಳಬೇಕು) ಎಂಬ ಕೀರ್ತನೆಯಲ್ಲಿ 'ರಾಗಿ' ಅನ್ನುವುದನ್ನು 'ರಾಗಿ' ಒಂದು ದಾನ್ಯವಾಗಿಯೇ ಗ್ರಹಿಸಿದಂತಿರಬೇಕು, ಅದೇ ರೀತಿಯಲ್ಲೇ ಅದು 'ಆಗಿ' ಅಂತಲೂ ಆಗಿರಬೇಕು, 'ರಾಗಿ' ಮತ್ತು 'ಆಗಿ' ಏಕಕಾಲದಲ್ಲೇ ದ್ವಯಾರ್ಥಗಳಲ್ಲಿ ದ್ವನಿಸಬೇಕು.

ಉದಾಹರಣೆಗೆ ಯೋಗ್ಯ'ರಾಗಿ', ಭೋಗ್ಯ'ರಾಗಿ', ಭಾಗ್ಯವಂತ'ರಾಗಿ' ಎನ್ನುವುದು!

ರಾಗಿಯು ಯೋಗ್ಯವೂ, ಬೋಗ್ಯವೂ, ಬಾಗ್ಯವಂತವೂ ಆದ ದಾನ್ಯವಾಗಿರುವಂತೆಯೇ ಮನುಷ್ಯನು ಯೋಗ್ಯನೂ, ಭೋಗ್ಯನೂ, ಭಾಗ್ಯವಂತನೂ ಆಗಿರಬೇಕೆಂಬ ತತ್ವವೂ ಅಲ್ಲಿ ಅಡಗಿದೆ. ಪುರಂದರರು ಮುಂದುವರೆದು "ಅನ್ನದಾನವ ಮಾಡುವ'ರಾಗಿ', ಅನ್ನ ಛತ್ರವ ಇಟ್ಟವ'ರಾಗಿ' ಅನ್ಯವಾರ್ತೆಯ ಬಿಟ್ಟವ'ರಾಗಿ' ಎಂದು ಹೇಳುತ್ತಾ ಭಕ್ತಿಮಾರ್ಗದಲ್ಲಿ 'ರಾಗಿ'ಯನ್ನು ಕರೆತಂದು ಸಾಂಕೇತಿಕವಾಗಿ ಅದ್ಯಾತ್ಮಕ್ಕೆ ಜೋಡಿಸುತ್ತಾರೆ.

   ತೃಣಧಾನ್ಯ ಎನಿಸಿಕೊಂಡ ರಾಗಿ ಭಕ್ತಿಮಾರ್ಗ, ದ್ಯಾನಮಾರ್ಗಗಳನ್ನು ದಾಟಿ ಅನುಭಾವದಲ್ಲಿ ಲೀನವಾದದ್ದನ್ನು ನೋಡಿದರೆ ಯಾವ ದಾನ್ಯವನ್ನೂ ಇದರೊಂದಿಗೆ ಇಟ್ಟು ಹೋಲಿಸಲಸಾದ್ಯ ಎನಿಸುತ್ತದೆ.

            ಕೈವಾರ ತಾತಯ್ಯನವರಂತ ತತ್ವಪದಕಾರ ಕೂಡ ರಾಗಿಮುದ್ದೆಯ ಮಹತ್ವ ಹೇಳುತ್ತಾ...

            ಮುದ್ದೆಯೇ ದೊರೆ ಎಲ್ಲರಿಗೆ

            ಕಂಬಳಿಯೇ ದೊರೆಯು ಜವುಳಿಯಲ್ಲಿ

            ಅಸ್ತ್ರಗಳಲ್ಲಿ ದೊಣ್ಣೆಯೇ ದೊರೆಕಾರ್ಯಗಳಿಗೆ

            ಮಾತೇ ಮಾನವರ ತರತಮಕೆ ನಾರೇಯಣ. ಎಂದು ದಾಖಲಿಸಿದ್ದಾರೆ.

ರಾಗಿಬ್ರಹ್ಮ:

ಕೃಷಿ ವಿಜ್ಞಾನ ಎಲ್ಲಾ ದಾನ್ಯಗಳನ್ನು ತಳಿಸಂಕರಣ ಮಾಡಿ ಕ್ರಾಂತಿಕಾರಿಯಾಗಿ ಅಭಿವೃದ್ಧಿ ಪಡಿಸುತಿದ್ದಾಗ ಬಡವರ ರಾಗಿಯ ಕಡೆ ಯಾರೂ ಗಮನಹರಿಸಿರಲಿಲ್ಲ.

"ರಾಗಿ ಸ್ವಕೀಯ ಪರಾಗಸ್ಪರ್ಶ ಬೆಳೆ. ಅದರಲ್ಲಿ ತಳಿಸಂಕರಣ ಸಾಧ್ಯವಿಲ್ಲ ಎಂದು ಜಗತ್ತಿನ ಎಲ್ಲ ವಿಜ್ಞಾನಿಗಳೂ ಕೈಚೆಲ್ಲಿದ್ದ ಕಾಲವದು. ಆ ಸಂಧರ್ಭದಲ್ಲಿ ಕನ್ನಡ ನೆಲದ ದಲಿತ ಸಮುದಾಯದ ವಿಜ್ಞಾನಿಯೊಬ್ಬರು ರಾಗಿಯ ಬಗ್ಗೆ ದ್ಯಾನಿಸುತಿದ್ದರು. ಅವರೇ ಡಾ. ಸಿ. ಎಚ್. ಲಕ್ಷ್ಮಣಯ್ಯನೆಂಬ ರಾಗಿ ಮಾಂತ್ರಿಕ, ಅವರು ಪುಸ್ತಕ ಭಂಡಾರದಲ್ಲಿ ಓದಿ, ಪ್ರಯೋಗಾಲಯದಲ್ಲಿ ಸಂಶೋದಿಸಿ  ವಿಜ್ಞಾನಿಯಾದವರಲ್ಲ, ಅನುಭವದಿಂದ ಅವಶ್ಯಕತೆಯಿಂದ, ಬಡವರ ಆಹಾರದ ಕಾಳಜಿಯಿಂದಾಗಿ ವಿಜ್ಞಾನಿಯಾದವರು. ಈ ರಾಗಿ ವಿಜ್ಞಾನಿಯನ್ನು 'ರಾಗಿ ಲಕ್ಷಮಣಯ್ಯ' ಎಂದೇ ಕರೆಯುತ್ತಾರೆ.  ಇಂಡಾಫ್ ರಾಗಿ ಸೇರಿದಂತೆ ಸುಮಾರು 23 ಅಧಿಕ ಇಳುವರಿಯ ರಾಗಿ ತಳಿಗಳನ್ನು ಕಂಡುಹಿಡಿದ ಜನಪರ ವಿಜ್ಞಾನಿ ಇವರು.

  ನಾನು ದಕ್ಷಿಣ ಆಫ್ರಿಕಾಗೆ ಹೋದಾಗಷ್ಟೇ ನಮ್ಮ ದೇಶವನ್ನು ಹೊರತುಪಡಿಸಿ ಇನ್ನೊಂದು ದೇಶದಲ್ಲೂ ರಾಗಿಯನ್ನು ಆಹಾರವಾಗಿ ಸೇವಿಸುತ್ತಾರೆ  ಎಂದು ತಿಳಿದದ್ದು, ಅಲ್ಲೀವರೆಗೂ ನಮ್ಮ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು ಚಾಮರಾಜನಗರಗಳಲ್ಲಿ ಮಾತ್ರ ರಾಗಿ ಬೆಳೆಯುತ್ತಾರೆ ಮತ್ತು ತಿನ್ನುತ್ತಾರೆ ಎಂದು ಭಾವಿಸಿದ್ದೆ. ದಕ್ಷಿಣ ಆಫ್ರಿಕಾದಲ್ಲಿ ಅಲ್ಲಿನ ನಮ್ಮ 'ಬ್ಲಾಕ್ ಬ್ರದರ್ಸ್'  ರಾಗಿ ಅಂಬಲಿ ಕುಡಿಯುವುದನ್ನು ನೋಡಿ ಭಾವುಕನಾದೆ. ರಾಗಿ ತಿನ್ನುವ ಆ ಕಪ್ಪು ಜನರಿಗೂ ಅದೇ ಕಪ್ಪು ರಾಗಿ ತಿನ್ನುವ ನನ್ನ ಕಂದು ಜನರಿಗೂ ಯಾವುದೋ ಜನ್ಮದ ಅನುಭಂದವಿದೆಯೇನೋ,  ಈ ರಾಗಿಯೇ ನಮ್ಮ ನಡುವಿನ ಸೇತುವೇನೋ ಎನಿಸಿತು.

  ಇಂಡಿಯಾ ಮತ್ತು ಆಫ್ರಿಕಾ ದೇಶದ ರಾಗಿಗಳನ್ನು ಬೆಸೆದು 'ಇಂಡಾಫ್' ರಾಗಿ ಮಾಡಿದ ರಾಗಿ ಲಕ್ಷ್ಮಣಯ್ಯ ಅಭಿನಂದನಾರ್ಹರು. ರಾಗಿಯನ್ನು ತಳಿಸಂಸ್ಕರಣ ಮಾಡಲು ಸಾದ್ಯವೇ ಇಲ್ಲ ಎಂದು ಕೈಚೆಲ್ಲಿದ್ದ ಕೃಷಿ ವಿಜ್ಞಾನಿ.

ಲೆಸ್ಲಿ ಕೋಲ್ಮನ್ ಸೇರಿದಂತೆ ಬೇರಾರೂ ಸಾಧಿಸಲಾಗದ್ದನ್ನು ಲಕ್ಷ್ಮಣಯ್ಯನವರು ಸಾಧಿಸಿ ತೋರಿಸಿದರು!  ಮೊದಲು ದೇಸಿ ರಾಗಿ ತಳಿಗಳಲ್ಲಿ ಇದ್ದದ್ದು  ಕರಿಕಡ್ಡಿರಾಗಿ, ಬಿಳಿಕಡ್ಡಿರಾಗಿ, ಗಿಡ್ಡರಾಗಿ, ಹಸಿರುಕೊಂಬು ರಾಗಿ, ಮಾದಯ್ಯನಗಿರಿ -1, ಮಾದಯ್ಯನಗಿರಿ-2,

ದೊಡ್ಡ ರಾಗಿ, ಗೌಬಿಲ್ಲೆ ರಾಗಿ, ಮಜ್ಜಿಗೆ ರಾಗಿ, ಜೇನುಮುದ್ದೆ ರಾಗಿ, ಬೆಣ್ಣೆಮುದ್ದೆ ರಾಗಿ, ರುದ್ರಜಡೆ ರಾಗಿ, ಜಡೆಸಂಗ ರಾಗಿ ಇತ್ಯಾದಿ ಇದ್ದವು. ಇವೆಲ್ಲವೂ ಎಕರೆಗೆ ಹೆಚ್ಚೆಂದರೆ ಸರಾಸರಿ 5 ರಿಂದ 10 ಕ್ವಿಂಟಾಲಿನವರೆಗೆ  ಇಳುವರಿ ಕೊಡುತ್ತವೆಯೆಂದು  ಲೆಸ್ಲೀ ಕೋಲ್ಮನ್ 1920 ರಲ್ಲೇ ದಾಖಲಿಸಿದ್ದರು. ಆದರೆ ಲಕ್ಷ್ಮಣಯ್ಯನವರು 1951 ರಿಂದ 1964 ರವರೆಗೆ ಸ್ಥಳೀಯ ರಾಗಿ ತಳಿಗಳೊಂದಿಗೆ ಕೊಯಮತ್ತೂರಿನ ರಾಗಿ ತಳಿಗಳನ್ನು ಸಂಕರಣಗೊಳಿಸಿ ಹೊಸದಾಗಿ ಅನ್ನಪೂರ್ಣ, ಉದಯ, ಪೂರ್ಣ, ಅರುಣ, ಶಕ್ತಿ, ಸಂಪೂರ್ಣ, ಕಾವೇರಿ ಎಂಬ ವಿಶೇಷ ರಾಗಿ ತಳಿಗಳನ್ನು ಸೃಷ್ಟಿಸಿದರು. ಇದರಿಂದ ಏಕಾಏಕಿ  ಶೇ. 50 ರಷ್ಟು ಅಧಿಕ ಇಳುವರಿ ಬರಲು ಸಾಧ್ಯವಾಯಿತು,  ಈ ಕಾರಣಕ್ಕೆ ಸರ್ಕಾರ ಲಕ್ಷ್ಮಣಯ್ಯನವರನ್ನು 'ರಾಗಿ ಬ್ರೀಡರ್' ಎಂದರೆ ರೈತಾಪಿ ಜನ ಲಕ್ಷ್ಮಣಯ್ಯನವರನ್ನು 'ರಾಗಿ ಬ್ರಹ್ಮ' ಎಂದೇ ಪ್ರೀತಿಯಿಂದ ಕರೆದರು.

ವಿಖ್ಯಾತ'ರಾಗಿ'

ರಾಗಿ ಕೇವಲ ಒಂದು ಪ್ರದೇಶದ, ನೀರೇ ಇಲ್ಲದ ಬರ ಪ್ರದೇಶದಲ್ಲಿ ಬೆಳೆಯಬಹುದಾದ, ಬಡವರ, ನಿರ್ಗತಿಕರ ಹಸಿವು ನೀಗಿಸುವ  ಕರಿದಾನ್ಯವಾಗಿದದ್ದು ನಿಧಾನಕ್ಕೆ ತನ್ನ ಖನಿಜಾಂಶಗಳ ಶ್ರೀಮಂತಿಕೆಯಿಂದಾಗಿ ಇಡೀ ಕರ್ನಾಟಕದಲ್ಲಿಯೇ ನಿಧಾನಕ್ಕೆ ಖ್ಯಾತಿಪಡೆಯುತಿದ್ದ ಕಾಲಘಟ್ಟದಲ್ಲೇ ದೇವೇಗೌಡರು ದೇಶದ ಪ್ರಧಾನಮಂತ್ರಿ ಯಾಗಿಬಿಟ್ಟರು. ರಾಗಿಮುದ್ದೆಯನ್ನು ಹೊರತುಪಡಿಸಿ ಇನ್ನೇನನ್ನು ತಿಂದರಿಯದ ದೇವೇಗೌಡರು ರಾಗಿಮುದ್ದೆಯನ್ನು ಯಾವ ಕೀಳರಿಮೆಯೂ ಇಲ್ಲದೆ ತನ್ನ ಆಹಾರವೆಂದು ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದೇ ತಡ ರಾಗಿ ರಾತ್ರೋರಾತ್ರಿ ಜಗದ್ಪ್ರಸಿದ್ದವಾಗಿಬಿಟ್ಟಿತು, ಎಲ್ಲಾ ಸಕ್ಕರೆ ರೋಗಿಗಳು ಮತ್ತಿತರೆ ರೋಗಿಷ್ಟರು ರಾಗಿಯ ಕಡೆ ನೋಡತೊಡಗಿದರು. ಪಂಚತಾರ ಹೋಟೆಲ್ಲುಗಳ ಮೆನು ಪಟ್ಟಿಯಲ್ಲಿ "ಪ್ರೈಮ್ ಮಿನಿಸ್ಟರ್ಸ್ ಸ್ಪೆಷಲ್" ಎಂದು ರಾಗಿ ಮುದ್ದೆ ವಿಶೇಷ ಸ್ಥಾನ ಪಡೆಯಿತು. ದೇವೇಗೌಡರನ್ನು ಮುದ್ದೇಗೌಡ ಎಂದು ಛೇಡಿಸುತ್ತಿದ್ದವರು ರಾಗಿಮುದ್ದೆಯನ್ನು 'ಕೃಷ್ಣಾ' ಎಂದು ಭಕ್ತಿಯಿಂದ ತಿನ್ನತೊಡಗಿದರು.

  ದೇವೇಗೌಡರ ಸಂಪುಟದಲ್ಲಿ  ವಿಮಾನಯಾನ ಸಚಿವರಾಗಿದ್ದ ಸಿ.ಎಂ.ಇಬ್ರಾಹಿಂರವರು ಒಮ್ಮೆ ಮಾತನಾಡುತ್ತಾ ಒಂದು ಸಂಗತಿ ಹೇಳಿದರು. ಇದು ನಿಜವೋ ಸುಳ್ಳೋ ಗೊತ್ತಿಲ್ಲ, ಸಿನಿಮಾದಲ್ಲಿ ಹಾಸ್ಯಕಲಾವಿದರಿದ್ದಂತೆ ರಾಜಕಾರಣದಲ್ಲಿ ಸಿ.ಎಂ.ಇಬ್ರಾಹಿಂ ಹಾಸ್ಯ ರಾಜಕಾರಣಿ, ಇದು ಸ್ವಾರಸ್ಯವಾಗಿರುವುದರಿಂದ ಹಂಚಿಕೊಳ್ಳುತಿದ್ದೇನೆ.

 ಒಮ್ಮೆ ಜರ್ಮನಿಯಿಂದಲೋ, ಪ್ರಾನ್ಸಿನಿಂದಲೋ ಒಬ್ಬ ಅತಿಥಿ ಬಂದಿದ್ದರಂತೆ. ಅವರು ಪ್ರದಾನಿ ದೇವೇಗೌಡರೊಂದಿಗೆ ಊಟಕ್ಕೆ ಕುಂತರು. ಸಚಿವ ಇಬ್ರಾಹಿಂ ಕೂಡ ಇದ್ದರು. ವಿದೇಶಿ ಅತಿಥಿಗೆ ಮತ್ತು ಇಬ್ರಾಹಿಂ ಅವರಿಗೆ ಬೇಕಾದ ಊಟ ಕೊಟ್ಟರು. ದೇವೇಗೌಡರಿಗೆ ಒಂದು ತಟ್ಟೆಯಲ್ಲಿ ರಾಗಿಮುದ್ದೆ ಸೊಪ್ಪಿನ ಸಾರು ತಂದಿಟ್ಟರು. ಗೌಡರು ಮುದ್ದೆ ಮುರಿದು ಗುಳುಂ ಗುಳುಂ ಎಂದು ನುಂಗುತಿದ್ದರೆ ವಿದೇಶಿ ಅತಿಥಿಗಳು ದಂಗಾಗಿ ನೋಡುತ್ತಾ ಕುಂತುಬಿಟ್ಟರಂತೆ! ಆಗ ಇಬ್ರಾಹಿಂ ರವರು ರಾಗಿ ಮುದ್ದೆಯ ಗುಣಲಕ್ಷಣಗಳು ಮತ್ತು ಅದರ ಮಹತ್ವ, ಜಗತ್ತಿನಲ್ಲಿ ಅಗಿಯದೆ ನುಂಗಿದರು ರುಚಿಯಾಗಿರುವ ಈ ಏಕೈಕ ಆಹಾರದ ಆರೋಗ್ಯದ ಲಕ್ಷಣಗಳನ್ನು ತಿಳಿಹೇಳಿದರಂತೆ. ಇದನ್ನು ಕಂಡು ಕುತೂಹಲಗೊಂಡ ಅತಿಥಿ "ನಾನೂ ಪ್ರಯತ್ನಿಸಲೇ" ಎಂದರು. ಗೌಡರು ನಗುತ್ತಾ ಅವರಿಗೂ ಒಂದು ಮುದ್ದೆ ತರಿಸಿ ಕೊಟ್ಟರು. ಅತಿಥಿ ಮುದ್ದೆಯನ್ನು ಕಷ್ಟಪಟ್ಟು ಫೋರ್ಕ್ ನಲ್ಲಿ ಮುರಿದು ಬಾಯಿಗಿಟ್ಟುಕೊಂಡು ಕಂಗಾಲಾದರು, ನುಂಗಲಾರದೆ ಅಗಿದುಬಿಟ್ಟರು,  ಮುದ್ದೆ ಅವರ ದವಡೆಗಳ ಮದ್ಯೆ ಹಲ್ಲುಗಳಲ್ಲಿ ಸಿಕ್ಕಿಹಾಕಿಕೊಂಡು ಹೈರಾಣವಾಯಿತು, ಸಿಕ್ಕಿಕೊಂಡ ಹಿಟ್ಟನ್ನು ತೆಗೆಯಲು ಸಾದ್ಯವಾಗದೆ ಏನೆಲ್ಲಾ ಪಡಿಪಾಟಲು ಬಿದ್ದು ಕಡೆಗೆ ಟೂತ್ ಬ್ರಷ್ ತರಿಸಿ ಹಲ್ಲು, ಒಸಡುಗಳ ನಡುವೆ ಸಿಕ್ಕಿಹಾಕಿಕೊಂಡಿದ್ದನ್ನು ತೆಗೆಯಲು ಹರಸಾಹಸ ಪಡಬೇಕಾಯಿತಂತೆ! ಆಗ ಅತಿಥಿ ಹೇಳಿದರಂತೆ ಇಷ್ಟು ಗಟ್ಟಿಯಾದ, ಸಂಕೀರ್ಣವಾದ ಆಹಾರವನ್ನು ಕೊಂಚವೂ ಅಡಚಣೆಯಿಲ್ಲದಂತೆ ಗುಳುಂ ಗುಳುಂ ಎಂದು ನುಂಗುತ್ತಾರಲ್ಲ ಇವರೆಷ್ಟು ಬಲಶಾಲಿ ಎಂದರಂತೆ ಗೌಡರ ಮುದ್ದೆ ಭಕ್ಷಣೆಯನ್ನು ನೋಡಿ. ಆಗ ಇಬ್ರಾಹಿಂ "ಅದಕ್ಕೆ ಕಣ್ರೀ ಅವರು ಈ ದೇಶದಲ್ಲಿ ಇಷ್ಟು ಸ್ಟ್ರಾಂಗ್ ಲೀಡರ್ ಆದದ್ದು.. ಪ್ರಧಾನಮಂತ್ರಿ ಯಾಗಿರುವುದು" ಎಂದರಂತೆ.! ಇದು ತಮಾಷೆಯಾಗಿ ಕಂಡರೂ ಇಲ್ಲೆಲ್ಲೋ ಆಹಾರ ಕುರಿತಂತೆ ಒಂದು ಪಾಠವಿರುವಂತೆ ಕಾಣುತ್ತದೆ.

ಮತ್ತೇ ದೇಶದ ಇಂದಿನ ಸಾಮಾಜಿಕ ಮತ್ತು ರಾಜಕಾರಣದ ವಾಸ್ತವಕ್ಕೆ ಬರೋಣ. ಈ ಕಾಲಘಟ್ಟದಲ್ಲಿ ಮತ್ತೇ ಕನಕದಾಸರ ರಾಮದಾನ್ಯ ಚರಿತೆ ನೆನಪಾಗುತ್ತೆ. ಅಂದು ರಾಗಿಯನ್ನು ಶಕ್ತನೆಂದು ಹೇಳಿದ ರಾಮನಿಗೆ ಸಂತೋಷವಾಗಿ..

            ಕರೆದು ಕೊಟ್ಟನು ತನ್ನ ನಾಮವ

            ಧರೆಗೆ ರಾಘವನೆಂಬ ಪೆಸರಾ

            ಯ್ತಿರದೆ ವ್ರಿಹಿ ನಾಚಿದನು

            ಸಭೆಯಲ್ಲಿ ಶಿರವ ಭಾಗಿಸಿದ.

ಆದರೆ ಈಗಿನ ಸನ್ನಿವೇಶದಲ್ಲಿ ಭತ್ತವೇ ಗೆಲ್ಲುತ್ತಿದೆ. ರಾಗಿ ತನ್ನೆಲ್ಲಾ  ಶಕ್ತಿಯನ್ನು ಹೊಂದಿದ್ದರೂ ಸೋಲುತ್ತಿದೆ! ಕಾರಣಗಳು ಸ್ಪಷ್ಟವಾಗುತ್ತಿಲ್ಲ.

ಮತ್ತೆ ಪುರಂದರ ದಾಸರೂ ನೆನಪಾಗುತ್ತಾರೆ...

             ಜಾತಿಯಲ್ಲಿ ನೀ ಮಿಗಿಲಾದವ'ರಾಗಿ'

             ನೀತಿಮಾರ್ಗದಲ್ಲಿ ಖ್ಯಾತ'ರಾಗಿ' ಎಂದು ಹೇಳುತ್ತಾ ಸಾಗುವ ಪುರಂದರರು ಮುಂದುವರೆದು

              ಕ್ರೂರಿ ತತ್ವವ ಬಿಟ್ಟವ'ರಾಗಿ'

              ಕ್ರೂರರ ಸಂಘ ಬಿಟ್ಟವ'ರಾಗಿ’ ಎನ್ನುತ್ತಾರೆ. ಇದು ಈ ದೇಶದಲ್ಲಿ, ಈ ಕಾಲಘಟ್ಟದಲ್ಲಿ ಸಾದ್ಯವೆ..?  ಇಷ್ಟಾದರೂ ಆಶಾವಾದಿಗಳಾದ ನಾವು ಇದರೊಂದಿಗೆ ಹೊಸದಾಗಿ ಸೇರಿಸಬೇಕಾದುದು ಕನಿಷ್ಠ ಮಾನವ'ರಾಗಿ',  ಜೀವಪರ'ರಾಗಿ', ಒಟ್ಟಾರೆ  ಭಾರತೀಯ'ರಾಗಿ' ಎಂದಷ್ಟೇ ಅಲ್ಲವೆ..?