ಕರ್ನಾಟಕ ವಿ.ವಿ. ಕುಲಪತಿ ಆಯ್ಕೆಗೆ ರಂಪಾಟದ ಸಮಿತಿ : ಮತಿ ಇಲ್ಲದವರೇ ಗತಿ! ಬಂತು ಎಂಥಾ ಸ್ಥಿತಿ 

ಕರ್ನಾಟಕ ವಿ.ವಿ. ಕುಲಪತಿ ಆಯ್ಕೆಗೆ ರಂಪಾಟದ ಸಮಿತಿ : ಮತಿ ಇಲ್ಲದವರೇ ಗತಿ! ಬಂತು ಎಂಥಾ ಸ್ಥಿತಿ 

ವಿಶ್ವವಿದ್ಯಾಲಯಗಳ ಕುಲಪತಿ ಆಯ್ಕೆ ಪ್ರಕ್ರಿಯೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿ ಪಾರದರ್ಶಕತೆ ಮೆರೆಯಬೇಕಿದ್ದ ಶೋಧನಾ ಸಮಿತಿಗಳು ಲಾಬಿಗೆ ಮಣಿಯುತ್ತಿವೆ. ಕುಲಪತಿ ಆಕಾಂಕ್ಷಿ ಪ್ರಾಧ್ಯಾಪಕರುಗಳು ತಮ್ಮ ಪರ ಲಾಬಿ ಮಾಡುವಂತರನ್ನೇ ಶೋಧನಾ ಸಮಿತಿಗಳಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಸಿಂಡಿಕೇಟ್ ಸದಸ್ಯರನ್ನು ಮುಂದಿಟ್ಟುಕೊಂಡು ಕುಲಪತಿ ಗಾದಿಗೇರಲು ಹವಣಿಸುತ್ತಿರುವ ಆಕಾಂಕ್ಷಿ ಪ್ರಾಧ್ಯಾಪಕರುಗಳು ರಂಪಾಟ ನಡೆಸಲು ಹಿಂಜರಿಯುವುದಿಲ್ಲ. ಇದಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ನಡೆದ ಸಭೆಯೇ ತಾಜಾ ನಿದರ್ಶನ.ಈ ಕುರಿತು ಜಿ.ಮಹಂತೇಶ್ ವರದಿ.

ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಗಳ ನೇಮಕಾತಿ ಸಂಬಂಧ ರಚನೆಯಾಗಿರುವ ಶೋಧನಾ ಸಮಿತಿಗೆ ನಾಮನಿರ್ದೇಶನ ವಿಚಾರದಲ್ಲಿ ಸಿಂಡಿಕೇಟ್ ಸಭೆ ನಡೆದ ನಂತರ ಘರ್ಷಣೆಗಳು ನಡೆದಿವೆ. ಅಲ್ಲದೆ ಕುಲಪತಿ ನೇಮಕ ಸಂಬಂಧ ಸಿಂಡಿಕೇಟ್ ನಡೆಸಿದ್ದ ಸಭೆಯ ಮೇಲೆ ಬಾಹ್ಯ ಸಂಘಟನೆಗಳೂ ಪ್ರಭಾವ ಬೀರಿರುವುದು ಶಿಕ್ಷಣ ತಜ್ಞರನ್ನು ಆತಂಕಕ್ಕೆ ದೂಡಿದೆ. 

ವಿಶ್ವವಿದ್ಯಾಲಯಗಳ ಕುಲಪತಿ ಆಯ್ಕೆ ಸಂಬಂಧ ರಚನೆಗೊಳ್ಳುವ ಶೋಧನಾ ಸಮಿತಿಗಳು ಪದೇ ಪದೇ ವಿವಾದಕ್ಕೀಡಾಗುತ್ತಿರುವ ಬೆನ್ನಲ್ಲೇ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ನೇಮಕ ಸಂಬಂಧದ ಶೋಧನಾ ಸಮಿತಿಗೆ ಸದಸ್ಯರ ನಾಮನಿರ್ದೇಶನದಲ್ಲಿ ನಡೆದಿರುವ ರಂಪಾಟ, ಕುಲಪತಿಗಳ ಆಯ್ಕೆ ಪ್ರಕ್ರಿಯೆ ಹಿಂದೆ ಏನೆಲ್ಲಾ ನಡೆಯುತ್ತಿವೆ ಎಂಬುದನ್ನು  ಮತ್ತೊಮ್ಮೆ ಬಹಿರಂಗಗೊಳಿಸಿದೆ.

ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಉನ್ನತ ಶಿಕ್ಷಣ ಇಲಾಖೆ ಸರ್ಕಾರಕ್ಕೆ ತಕ್ಷಣವೇ ವರದಿ ಸಲ್ಲಿಸಬೇಕು ಎಂದು ವಿಶ್ವವಿದ್ಯಾಲಯಕ್ಕೆ ಸೂಚಿಸಿದೆ. ಈ ಸಂಬಂಧ 2019ರ ಆಗಸ್ಟ್ 8ರಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಹಂಗಾಮಿ ಕುಲಪತಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ 'ಡೆಕ್ಕನ್'ನ್ಯೂಸ್ ಗೆ ಲಭ್ಯವಾಗಿದೆ. 

ಪ್ರಕರಣದ ವಿವರ

ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಗಳ ಆಯ್ಕೆಯ ಶೋಧನಾ ಸಮಿತಿಗೆ ಚಿಂತಕ ಡಾ ಗುರುರಾಜ ಕರ್ಜಗಿ ಅವರನ್ನು ಸಿಂಡಿಕೇಟ್ ನಾಮನಿರ್ದೇಶನ ಮಾಡಿತ್ತು. ಆದರಿದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಪ್ರಕರಣ 14(3)ರ ಉದ್ದೇಶಗಳಿಗೆ ವ್ಯತಿರಿಕ್ತವಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಗುರುರಾಜ ಕರ್ಜಗಿ ಅವರ ಬದಲಿಗೆ ಮತ್ತೊಬ್ಬ ಶಿಕ್ಷಣ ತಜ್ಞರನ್ನು ವಿಶ್ವವಿದ್ಯಾಲಯದ ಅಧಿನಿಯಮದ ಪ್ರಕಾರ ನೇಮಿಸಿ ಎಂದು ಸರ್ಕಾರ 2019ರ ಜೂನ್ 20ರಂದು ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿತ್ತು. 

ಸರ್ಕಾರದ ನಿರ್ದೇಶನದಂತೆ ಕರ್ನಾಟಕ ವಿಶ್ವವಿದ್ಯಾಲಯದ ವಿಶೇಷ ಸಿಂಡಿಕೇಟ್ ಸಭೆ ಸೇರಿತ್ತು. ಈ ಸಭೆಯಲ್ಲಿ ಕೆಲ ಬಾಹ್ಯ ಸಂಘಟನೆಗಳು ಶೋಧನಾ ಸಮಿತಿಗೆ ನಿರ್ದಿಷ್ಟ ಪ್ರಾಧ್ಯಾಪಕರುಗಳನ್ನು ನಾಮನಿರ್ದೇಶನ ಮಾಡಬೇಕು ಎಂದು ಒತ್ತಡ ತಂದಿದ್ದವು. ಒತ್ತಡಕ್ಕೆ ಮಣಿದಿದ್ದ ಸಿಂಡಿಕೇಟ್ ಸಭೆ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಪ್ರಕರಣ 14(3)ರ ಉದ್ದೇಶಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿತ್ತಲ್ಲದೆ ಸರ್ಕಾರಕ್ಕೆ ಇಬ್ಬರು ವ್ಯಕ್ತಿಗಳನ್ನ ನಾಮನಿರ್ದೇಶನಗೊಳಿಸಿ ಸರ್ಕಾರಕ್ಕೆ ಪಟ್ಟಿ ಕಳಿಸಿತ್ತು. ಈ ಪ್ರಕ್ರಿಯೆ ನಂತರ ಘರ್ಷಣೆಗಳು ನಡೆದಿದ್ದವು ಎಂಬ ಅಂಶ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಪತ್ರದಿಂದ ತಿಳಿದು ಬಂದಿದೆ.

ಡಾ.ಗುರುರಾಜ ಕರ್ಜಗಿ ಬದಲಿಗೆ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಎಸ್.ಎಸ್ ಹೂಗಾರ ಹಾಗೂ ಕುವೆಂಪು ವಿವಿ ವಿಶ್ರಾಂತ ಕುಲಪತಿ ಜೋಗನ್ ಶಂಕರ ಅವರ ಹೆಸರನ್ನು ಕರ್ನಾಟಕ ವಿ ವಿ ಸಿಂಡಿಕೇಟ್ ಅಂತಿಮಗೊಳಿಸಿತ್ತು. ಆದರೆ ಸರ್ಕಾರ ಇಬ್ಬರ ಹೆಸರಿನ ಬದಲಿಗೆ ಒಬ್ಬರನ್ನು ಮಾತ್ರ ಆಯ್ಕೆ ಮಾಡಿ ಎಂದು ಸೂಚಿಸಿತ್ತು.

ಈ ಸಂಬಂಧ ನಡೆದಿದ್ದ ವಿಶೇಷ ಸಭೆಯಲ್ಲಿ ಸಿಂಡಿಕೇಟ್ ಸದಸ್ಯರ ಪೈಕಿ ಕೆಲವರು ಪ್ರೊ ಹೂಗಾರ ಮತ್ತು ಇನ್ನು ಕೆಲವರು ಪ್ರೊ ಜೋಗನ್ ಶಂಕರ್ ಅವರ ಪರ ವಕಾಲತ್ತು ವಹಿಸಿದ್ದರು. ಪ್ರೊ.ಹೂಗಾರ ಅವರು ಇದೇ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಡೀನ್ ಹಾಗೂ ಪ್ರಭಾರ ಕುಲಪತಿಯಾಗಿಯೂ ಕಾರ್ಯನಿರ್ವಹಿಸಿದ್ದರಿಂದ ಅವರನ್ನು ಶೋಧನಾ ಸಮಿತಿಗೆ ನಾಮನಿರ್ದೇಶನ ಮಾಡಿದಲ್ಲಿ ಕಾಯ್ದೆಯ ಉಲ್ಲಂಘನೆ ಆಗಲಿದೆ ಎಂದು ಸಭೆಯಲ್ಲಿದ್ದವರು ಮನವರಿಕೆ ಮಾಡಿಕೊಟ್ಟರೂ ಇವರನ್ನೇ ನಾಮನಿರ್ದೇಶನಗೊಳಿಸಬೇಕು ಎಂದು ಸಿಂಡಿಕೇಟ್ ನ ಕೆಲ ಸದಸ್ಯರು ಬಿಗಿಪಟ್ಟು ಹಿಡಿದಿದ್ದರು. 

10 ಸದಸ್ಯರ ಪೈಕಿ ಜೋಗನ್ ಶಂಕರ್ ಪರ 6 ಮಂದಿ ಮತ್ತು ಹೂಗಾರ್ ಅವರ ಪರ 4 ಮಂದಿ ಬೆಂಬಲಿಸಿದ್ದರು. ಹೀಗಾಗಿ ಬಹುಮತದ ಆಧಾರದ ಮೇಲೆ ಜೋಗನ್ ಶಂಕರ್ ಅವರನ್ನು ನಾಮನಿರ್ದೇಶನಗೊಳಿಸಲಾಗಿತ್ತು. ಸಭೆ ನಡೆಯುತ್ತಿದ್ದಾಗಲೇ ನಡೆದಿದ್ದ ರಂಪಾಟ,  ಸಭೆ ಪೂರ್ಣಗೊಂಡ ನಂತರ ಕಡೆಗೆ ಘರ್ಷಣೆಯಲ್ಲಿ ಪರ್ಯಾವಸನಗೊಂಡಿತ್ತು.  

ಈ ವಿದ್ಯಮಾನ ಕೇವಲ ಕರ್ನಾಟಕ ವಿಶ್ವವಿದ್ಯಾಲಯಕ್ಕಷ್ಟೇ ಸೀಮಿತವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಈ ಹಿಂದೆ ಕುಲಪತಿಗಳನ್ನು ಆಯ್ಕೆ ಮಾಡುವಾಗ ಶಿಕ್ಷಣ ತಜ್ಞರು, ವಿಶ್ರಾಂತ ಕುಲಪತಿಗಳು ಹಾಗೂ ಅನುಭವಿ ಆಡಳಿತಗಾರರನ್ನೊಳಗೊಂಡ ಶೋಧನಾ ಸಮಿತಿ ರಚನೆಯಾಗುತ್ತಿತ್ತು. ಆದರೆ ವರ್ಷಗಳು ಉರುಳಿದಂತೆ ಶೋಧನಾ ಸಮಿತಿಗೆ ಕುಲಪತಿ ಆಕಾಂಕ್ಷಿ ಪ್ರಾಧ್ಯಾಪಕರುಗಳೇ ತಮಗೆ ಬೇಕಾದವರನ್ನು ನೇಮಿಸಲು ಪ್ರಭಾವ ಬೀರಲಾರಂಭಿಸಿದರಲ್ಲದೆ ಶೋಧನಾ ಸಮಿತಿಯನ್ನು ಭ್ರಷ್ಟಗೊಳಿಸಿದರು. 

ಒತ್ತಡ, ಪ್ರಭಾವ, ಆಮಿಷಗಳಿಗೆ ಮಣಿಯದೇ ಕುಲಪತಿಗಳ ಆಯ್ಕೆಯಲ್ಲಿ ಬಹುಮುಖ್ಯ ಪಾತ್ರ ವಹಿಸಬೇಕಿದ್ದ ಶೋಧನಾ ಸಮಿತಿಯೂ ಪ್ರಭಾವಿಗಳ ಮುಂದೆ ಮಂಡಿಯೂರಿದೆ. ಇದು ಕುಲಪತಿಗಳ ಶ್ರೇಣಿಗಿಂತ ಕಡಿಮೆ ಶ್ರೇಣಿಯವರನ್ನು ಶೋಧನಾ ಸಮಿತಿ ಸದಸ್ಯರನ್ನಾಗಿ ನೇಮಿಸಲು ಕಾರಣವಾದಂತಾಗಿದೆ. 

ಅಲ್ಲದೆ 'ಈಗಿನ ಶೋಧನಾ ಸಮಿತಿಗಳಿಗೆ ಬಹುತೇಕ ಸಂದರ್ಭಗಳಲ್ಲಿ ಈಗಷ್ಟೇ ಕುಲಪತಿ ಹುದ್ದೆಯಿಂದ ನಿವೃತ್ತರಾದವರು, ವಿಶ್ವವಿದ್ಯಾಲಯದ ಕೆಲ ಘಟಕಗಳಲ್ಲಿ ನಿರ್ದೇಶಕರಾಗಿ ಮುಂದುವರಿಯುತ್ತಿರುವವರು ನೇಮಕವಾಗುತ್ತಿದ್ದಾರೆ. ಇವರಿಂದ ಪಾರದರ್ಶಕ ಆಯ್ಕೆ ನಿರೀಕ್ಷಿಸುವುದಾದರೂ ಹೇಗೆ ಎನ್ನುತ್ತಾರೆ,' ಪ್ರಾಧ್ಯಾಪಕರೊಬ್ಬರು.