ವಿಶ್ವಾಸದಲ್ಲಿ ಶ್ವಾಸ ಕಳೆದುಕೊಂಡ ಮೈತ್ರಿ ಸರ್ಕಾರ

ವಿಶ್ವಾಸದಲ್ಲಿ ಶ್ವಾಸ ಕಳೆದುಕೊಂಡ ಮೈತ್ರಿ ಸರ್ಕಾರ

ಬೆಂಗಳೂರು: ರಾಜ್ಯದ ಕಾಂಗ್ರೆಸ್‍-ಜೆಡಿಎಸ್‍ ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆಗೆ ಶ್ವಾಸವೇ ಇಲ್ಲದ್ದರಿಂದ ಕಳೆದ 2 ವಾರದಿಂದ ನಡೆಯುತ್ತಿರುವ ನಾಟಕ ಬಹುತೇಕ ಕೊನೆಗೊಂಡಿದೆ.

ಮಂಗಳವಾರ ಸಂಜೆ 6 ಕ್ಕೆ ವಿಶ್ವಾಸಮತ ಯಾಚನೆ ಮುಹೂರ್ತವನ್ನು ಸ್ಪೀಕರ್‍ ಅವರು ಸೋಮವಾರವೇ ಘೋಷಿಸಿದ್ದರಿಂದ,  ಇಂದು ಕಲಾಪ ರಂಗೇರಿತ್ತು.

ರಾತ್ರಿ 7.30 ಸುಮಾರಿಗೆ ಸ್ಪೀಕರ್ ರಮೇಶ್‍ ಕುಮಾರ್‍ ಅವರು ಕುಮಾರಸ್ವಾಮಿ ಅವರು ಸಲ್ಲಿಸಿದ ವಿಶ್ವಾಸಮತ ಯಾಚನೆಯ ಪತ್ರವನ್ನು ಓದಿದರು. ಸದನದಲ್ಲಿ ಪ್ರಸ್ತಾವನೆ ಪರ 99 ಶಾಸಕರು ಹಾಗೂ ವಿರೋಧವಾಗಿ 105 ಶಾಸಕರು ಹಾಜರಿದ್ದರು.

ಮೊದಲು ಶಾಸಕರ ಧ್ವನಿ ಮತದ ಎಣಿಕೆ ನಂತರ ತಲೆ ಎಣಿಕೆ ಆರಂಭಿಸಿಲಾಯಿತು. ಈ ಮೊದಲೇ ಊಹಿಸಿದಂತೆ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚನೆಯಲ್ಲಿ ಸೋಲನ್ನು ಅನುಭವಿಸಿತು.  ಹೀಗಾಗಿ ಬಹುಮತ ಇರುವ ಬಿಜೆಪಿಯು ರಾಜ್ಯದಲ್ಲಿ ಸರ್ಕಾರ ರಚಿಸುವ ಸಾಧ್ಯತೆಗಳು ಹೆಚ್ಚಿವೆ.

ಅತೃಪ್ತ ಹಾಗೂ ಬಂಡಾಯ ಶಾಸಕರು ಮುಂಬೈಯಲ್ಲಿದ್ದಾರೆ. ಅವರನ್ನು ಬಿಜೆಪಿ ಅಘೋಷಿತ ಬಂಧನದಲ್ಲಿರಿಸಲಾಗಿದೆ ಎಂಬ ಕಾರಣವೊಡ್ಡಿ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಮೈತ್ರಿ ಸರ್ಕಾರ ಮುಂದೂಡತ್ತಲೇ ಬಂದಿತ್ತು. ಈ ಮಧ್ಯೆ, ವಿಶ್ವಾಸಮತ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸುವಂತೆ ಬಿಜೆಪಿ ಒತ್ತಾಯಿಸುತ್ತಲೇ ಇತ್ತು. ವಾದ-ವಿವಾದಗಳ ಮಧ್ಯೆಯೇ ಕೆಲವು ಶಾಸಕರು ವಿಶ್ವಾಸಮತ ಪ್ರಕ್ರಿಯೆ ಶೀಘ್ರವೇ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರು. ವಿಶೇಷವೆಂದರೆ, ಇಂತಹ ಸಂದರ್ಭದಲ್ಲಿ ತಮ್ಮ ನಿಲುವು ಹೇಗಿರಬೇಕು ಎಂದು ಸ್ವತಃ ಸ್ಪೀಕರ್ ರಮೇಶ್ ಕುಮಾರ್‍, ಸುಪ್ರೀಂ ಕೋರ್ಟ್‍ಗೆ ಸಲಹೆ ಕೇಳಿದ್ದರು.

ಶಾಸಕರ ರಾಜೀನಾಮೆ ಸ್ವೀಕಾರ ಇಲ್ಲವೇ ತಿರಸ್ಕಾರ ವಿಷಯಕ್ಕೆ ಸಂಬಂಧಿಸಿ ತಮಗೆ ಪೂರ್ಣ ಅಧಿಕಾರ ಇದೆಯೆಂದು ಸುಪ್ರೀಂ ಹೇಳಿದ ಮೇಲೆ, ಅತೃಪ್ತ ಶಾಸಕರು ಕಲಾಪಕ್ಕೆ ಹಾಜರಾಗಲು ತಾಕೀತು ಮಾಡಿದರು. ಈ ವೇಳೆ ಸ್ಪೀಕರ್‍ ಅವರು, ಮೈತ್ರಿ ಸರ್ಕಾರದ ಏಜೆಂಟ್ ಎಂಬ ಆರೋಪವನ್ನು ಹೊರಬೇಕಾಯಿತು. ಅಲ್ಲದೇ, ಒಟ್ಟಾರೆ ಪ್ರಕ್ರಿಯೆ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದ ಸ್ಪೀಕರ್‍,  ಅನಿರೀಕ್ಷಿತ ಸನ್ನಿವೇಶ ಎದುರಾದರೆ ತಾವು ‘ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದೇನೆ’ ಎಂದೂ ಹೇಳಿದ್ದರು.

ಈ ಮಧ್ಯೆ, ಪಕ್ಷೇತರ ಇಬ್ಬರು ಶಾಸಕರು ಮಂಗಳವಾರ ನಗರದ ರೇಸ್‍ಕೋರ್ಸ್ ರಸ್ತೆಯ ಅಪಾರ್ಟ್‍ಮೆಂಟ್‍ ಒಂದರಲ್ಲಿ ಇದ್ದು ವಿಶ್ವಾಸಮತ ಯಾಚನೆಗೆ ಗೈರು ಹಾಜರಾಗಿದ್ದರು.

 ಇದಕ್ಕೆ ಕಾಂಗ್ರೆಸ್‍ ಕಾರ್ಯಕರ್ತರು ಅಪಾರ್ಟ್‍ಮೆಂಟ್‍ ಮುಂದೆ ಪ್ರತಿಭಟನೆಯೂ ನಡೆಸಿ, ಈ ವಿದ್ಯಮಾನಗಳ ಹಿಂದೆ ಬಿಜೆಪಿ ಕುತಂತ್ರವಿದೆ ಎಂದು ಆರೋಪಿಸಿದ್ದರು.

ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‍ನಲ್ಲಿ ಇನ್ನೂ ಬಾಕಿ ಇರುವಾಗಲೇ, ಮಂಗಳವಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದಿದೆ.

ರಾಜ್ಯಕ್ಕೆ ಬಹುಮತವಿರುವ ಸರ್ಕಾರ ರಚನೆಗೆ ರಾಜಕೀಯ ಕಸರತ್ತುಗಳು ನಡೆಯಲಿದ್ದು, ಮುಂಚೂಣಿಯಲ್ಲಿ ಬಿಜೆಪಿ ನಾಯಕರಿದ್ದಾರೆ.

 

ಭಾವುಕರಾದ ಕುಮಾರಸ್ವಾಮಿ

ಮೈತ್ರಿ ಸರ್ಕಾರದ ಪ್ರಸ್ತಾವನೆಯನ್ನು ಮತಕ್ಕೆ ಹಾಕಿದ ನಂತರ ಮುಖ್ಯಮಂತ್ರಿ ಎಚ್‍ ಡಿ ಕುಮಾರಸ್ವಾಮಿ ಅವರು ಮೌನಕ್ಕೆ ಜಾರಿದರು. ಶಾಸಕರ ತಲೆ ಎಣಿಕೆ ಅಂತಿಮಗೊಳ್ಳುವ ಕ್ಷಣದಲ್ಲಿ ಕುಮಾರಸ್ವಾಮಿ ಅವರು ಭಾವುಕರಾಗಿದ್ದರು.

ಸದನದಲ್ಲಿ ಹಾಜರಿದ್ದ ಕುಮಾರಸ್ವಾಮಿ ಅವರ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ, ಕೂಡ ಪತಿ ಕುಮಾರಸ್ವಾಮಿ ಅವರತ್ತ ನೋಡುತ್ತಲೇ ಭಾವುಕರಾಗಿದ್ದರು.