‘ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗಲಿ’ ನಾಳೆಯಿಂದ ಧರಣಿ

‘ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗಲಿ’ ನಾಳೆಯಿಂದ ಧರಣಿ

ಬೆಂಗಳೂರು: “ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗಲಿ" ಎಂದು ಒತ್ತಾಯಿಸಿ ಅ.14 ಮತ್ತು 15 ರಂದು ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಮತ್ತು ಅಹೋರಾತ್ರಿ ಧರಣಿ ನಡೆಸಲಾಗುತ್ತದೆ.

ಕರ್ನಾಟಕದ ಯುವಜನತೆ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ನಿರುದ್ಯೋಗ ಸಮಸ್ಯೆ ಪ್ರಮುಖವಾಗಿದ್ದು, ಸಾಕಷ್ಟು ಉದ್ಯೋಗ ಸೃಷ್ಟಿಯಾಗದೇ ಇರುವುದು ಒಂದೆಡೆಯಾದರೆ ಇನ್ನೊಂದೆಡೆ, ಇಲ್ಲಿ ಸೃಷ್ಟಿಯಾದ ಉದ್ಯೋಗಗಳನ್ನು ಪರಭಾಷಿಕರು ಬಂದು ಕಬಳಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ನಮ್ಮ ನೆಲದಲ್ಲಿನ ಉದ್ಯೋಗ ನಮ್ಮವರಿಗೆ ಸಿಗದಂತಾಗಿದೆ. ಇಲ್ಲಿಯ ಬಹುರಾಷ್ತ್ರೀಯ ಕಂಪನಿಗಳು, ಬ್ಯಾಂಕ್ ಗಳು ಮತ್ತು ಇತರೆ ಉದ್ಯಮಗಳು ಕನ್ನಡಿಗರಿಗೆ ಕೆಲಸ ಕೊಡಲು ಮೀನಮೇಷ ಎಣಿಸುತ್ತಿವೆ. ಆದ್ದರಿಂದ, ರಾಜ್ಯದಲ್ಲಿ ಜನಜಾಗೃತಿ ಮೂಡಿಸುವ ಜತೆಗೆ ನಮ್ಮನ್ನಾಳುವ ಸರ್ಕಾರಗಳ ಗಮನ ಸೆಳೆಯುವ ನಿಟ್ಟಿನಲ್ಲಿ #KarnatakaJobsForKannadigas ಎಂಬ ಅಡಿಬರಹದ ಟ್ವಿಟರ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಮೀಸಲಿಡುವಂತೆ  ಸ್ಪಷ್ಟವಾದ ಕಾನೂನು ರೂಪಿತವಾಗಬೇಕಾಗಿದೆ. ಇದಾಗಬೇಕೆಂದರೆ, ಈ ಮಹತ್ವದ ಹೋರಾಟ ದೊಡ್ಡ ಪ್ರಮಾಣದಲ್ಲಿಯೇ ನಡೆಯಬೇಕಾಗಿದೆ. ಹೋರಾಟದ ಮುಂದಿನ ಭಾಗವಾಗಿ, ಅ.14  ಮತ್ತು 15ರಂದು ಉಪವಾಸ ಸತ್ಯಾಗ್ರಹ ಮತ್ತು ಅಹೋರಾತ್ರಿ ಧರಣಿಯನ್ನು ಹಮ್ಮಿಕೊಂಡಿದೆ. ಮುಖ್ಯಮಂತ್ರಿಗಳು ನಮಗೆ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಒತ್ತಾಯಿಸಲಿದ್ದೇವೆ ಎಂದು ಸಂಘಟನೆ ತಿಳಿಸಿದೆ.

ಹೋರಾಟಗಾರ ವಾಟಾಳ್ ನಾಗರಾಜ್, ಕರವೇ ನಾರಾಯಣ ಗೌಡ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ,  ಚಿತ್ರಟ ಉಪೇಂದ್ರ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಅಭಿವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಹಿರಿಯ ಸಾಹಿತಿಗಳು,ಬರಹಗಾರರು, ನಟರು, ಹೋರಾಟಗಾರರು, ರಾಜಕಾರಣಿಗಳು ಯುವಜನತೆ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.