ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಅಡ್ಡಿ ಏನು? ಧನುರ್ಮಾಸವೇ, ಖಾತೆ ಹಂಚಿಕೆ ಸಮಸ್ಯೆಯೇ?

ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಖಾಸಗಿಯಾಗಿ ಹೇಳಿಕೊಳ್ಳುತ್ತಿರುವ ಕಾರಣಗಳಿಗೂ ವಾಸ್ತವಗಳಿಗೂ ಸಂಬಂಧವೇ ಇಲ್ಲ.

ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಅಡ್ಡಿ ಏನು? ಧನುರ್ಮಾಸವೇ, ಖಾತೆ ಹಂಚಿಕೆ ಸಮಸ್ಯೆಯೇ?

ಕರ್ನಾಟಕ ವಿಧಾನಸಭೆಯ  15 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಿ ಎರಡು ವಾರಗಳು ಕಳೆದರೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಇನ್ನೂ ಆಗುತ್ತಿಲ್ಲ. ಹೀಗೆ ಹೇಳುವುದಕ್ಕೆ ಕಾರಣವೂ ಇದೆ. ಫಲಿತಾಂಶ ಪ್ರಕಟವಾದ 24 ಗಂಟೆಗಳ ಒಳಗೆ ಗೆದ್ದ ಎಲ್ಲ ಅನರ್ಹ ಶಾಸಕರನ್ನು ಮಂತ್ರಿಗಳನ್ನಾಗಿ ಮಾಡುವುದಾಗಿ ಯಡಿಯೂರಪ್ಪ ಹೇಳಿಕೊಂಡಿದ್ದರು. ಆದರೆ ಹಾಗಾಗುತ್ತಿಲ್ಲ.ಯಾಕೆ ಈ ವಿಳಂಬ? ಅಧಿಕೃತವಾಗಿ ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿರುವುದು ಅಮಿತ್ ಶಾ ತುಂಬ ಬ್ಯುಸಿ ಇರುವುದರಿಂದ ನೂತನ ಸಚಿವರ ಪಟ್ಟಿಗೆ ಅಂಗೀಕಾರ ಪಡೆಯಲು ಅವರ ಭೇಟಿ ಸಾಧ್ಯವಾಗುತ್ತಿಲ್ಲ ಎಂದು. ಆದರೆ ಧನುರ್ಮಾಸ ಶುರುವಾಗಿರುವುದರಿಂದ ಸಂಪುಟ ವಿಸ್ತರಣೆ ಈಗಲೇ ಮಾಡುವುದಿಲ್ಲ. 2020 ರ ಜನವರಿ 14 ರ ನಂತರ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಯಡಿಯೂರಪ್ಪ ಖಾಸಗಿಯಾಗಿ ಹೇಳಿಕೊಳ್ಳುತ್ತಿದ್ದಾರೆ.

ವಾಸ್ತವದಲ್ಲಿ ಪರಿಸ್ಥಿತಿ ಹಾಗಿಲ್ಲ. ಯಡಿಯೂರಪ್ಪ ಮೊದಲ ಸಲ ಮುಖ್ಯಮಂತ್ರಿಯಾದಾಗ ಕಾಟ ಕೊಡುವುದಕ್ಕೆ ಅನಂತಕುಮಾರ್ ಇದ್ದರು, ಈಗ ಸಂತೋಷ್ ಇದ್ದಾರೆ. ಅನಂತಕುಮಾರ್ ಕೇಂದ್ರದಲ್ಲಿ ಪ್ರಭಾವಿ ನಾಯಕರಾಗಿದ್ದರಿಂದ ಅವರ ಮಾತಿಗೆ ಬೆಲೆ ಇತ್ತು. ಯಡಿಯೂರಪ್ಪ ಎಷ್ಟೇ ಬಲಿಷ್ಠ ನಾಯಕರಾಗಿದ್ದರೂ ಅವರನ್ನು ಬದಿಗೆ ತಳ್ಳುವ ಕಾರ್ಯ ಅನಂತಕುಮಾರ್ ಅವರಿಗೆ ಯಾವತ್ತೂ ಕಷ್ಟ ಎನಿಸಿರಲಿಲ್ಲ. ಮಾಧ್ಯಮಗಳ ಸಹಕಾರ, ಜೆಡಿಎಸ್ ನಾಯಕರ ಬೆಂಬಲ ಇವೆಲ್ಲವುಗಳಿಂದ ಯಡಿಯೂರಪ್ಪ ಅಧಿಕಾರವಿದ್ದೂ ಅತಂತ್ರರಾಗಿರುವಂತೆ ನೋಡಿಕೊಳ್ಳುವಲ್ಲಿ ಅನಂತಕುಮಾರ್ ಯಶಸ್ವಿಯಾಗಿದ್ದರು.

ಈಗಲೂ ಅಷ್ಟೇ. ಸಂತೋಷ್ ರಾಷ್ಟ್ರೀಯ ಬಿಜೆಪಿ ಪ್ರಧಾನಕಾರ್ಯದರ್ಶಿ. ಸಂಘಟನೆಯ ಜವಾಬ್ದಾರಿ ಹೊತ್ತವರು. ನಾಗಪುರ ಪ್ರಧಾನಕಾರ್ಯಾಲಯದ ಪ್ರಭಾವಲಯದಲ್ಲಿರುವವರು. ಪಕ್ಷದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ನಂತರದ ಪ್ರಮುಖರು. ಹೀಗಾಗಿ ಕರ್ನಾಟಕದಲ್ಲಿ ಎಲ್ಲವೂ ತನ್ನ ಮಾತಿನಂತೆಯೇ ನಡೆಯಬೇಕೆಂದು ಬಯಸುತ್ತಿರುವವರು. ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷರಾದಾಗ ಈಶ್ವರಪ್ಪನವರನ್ನು ಎತ್ತಿ ಕಟ್ಟಿದ ಹಿನ್ನೆಲೆ ಇರುವವರು. ತಮ್ಮ ಕೃಪೆಗಾಗಿ ಯಡಿಯೂರಪ್ಪ ನಡುಬಾಗಿಸಿ ನಿಲ್ಲಬೇಕು ಎಂದು ಬಯಸುವವರು. ಕಾಕತಾಳೀಯ ಎಂದರೆ ಅನಂತಕುಮಾರ್ ಆಗಲೀ, ಸಂತೋಷ್ ಆಗಲೀ ಸಮೂಹ ನಾಯಕರಲ್ಲ. ಇಬ್ಬರೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೇ.

2018 ರ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿದಾಗ ಸಂಪೂರ್ಣ ಬಹುಮತ ಗಳಿಸಿದ್ದರೆ ಇವತ್ತಿನ ಪರಿಸ್ಥಿತಿ ಇರುತ್ತಿರಲಿಲ್ಲ. ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿ ಮಾಡುವುದು ವರಿಷ್ಠರಿಗೆ ಅನಿವಾರ್ಯವಾಗುತ್ತಿತ್ತು ಅಥವಾ ಮುಖ್ಯಮಂತ್ರಿಯಾಗಿ ಇನ್ನೋರ್ವ ಹೊಸ ನಾಯಕನನ್ನು ಸ್ಥಾಪಿಸಿದ್ದರೆ ಲಿಂಗಾಯತರ ಕೋಪ ಎದುರಿಸಬೇಕಾಗುತ್ತಿತ್ತು.  ಹಾಗೊಂದು ವೇಳೆ ಯಡಿಯೂರಪ್ಪನವರೇ ಪಕ್ಷ ತ್ಯಜಿಸುವಂಥ ಪರಿಸ್ಥಿತಿ ಎದುರಾಗಿದ್ದರೆ ನರೇಂದ್ರ ಮೋದಿ ಅಲೆಯಲ್ಲಿ ಇತರ ಶಾಸಕರು ಯಡಿಯೂರಪ್ಪ ಹಿಂದೆ ಹೋಗುವುದು ಅಸಾಧ್ಯ ಎಂದು ಭಾವಿಸುವ ಸಾಧ್ಯತೆಯೂ ಇತ್ತು. ಈಗ ಹಾಗಿಲ್ಲ. ಯಡಿಯೂರಪ್ಪನವರು ಮೂಲೆಗುಂಪು ಮಾಡಬೇಕೆಂದರೂ ವರಿಷ್ಠರಿಗೆ ಸಾಧ್ಯವಾಗುತ್ತಿಲ್ಲ. ಒಂದೊಂದೇ ರಾಜ್ಯದ ಅಧಿಕಾರವನ್ನು ಕಳೆದುಕೊಳ್ಳುತ್ತಿದೆ. ಹಾಗೂ ಹೀಗೂ ಉಳಿದಿರುವ ಕರ್ನಾಟಕವನ್ನು ಬಲಿಕೊಡಲು ಅವರಿಗೆ ಮನಸ್ಸು ಒಪ್ಪುವಂಥ ಪರಿಸ್ಥಿತಿ ಇಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸದ್ಯ ಉಳಿದಿರುವುದು ನರೇಂದ್ರ ಮೋದಿ ಅಲೆಯಿಂದಲೂ ಅಲ್ಲ, ಅಮಿತ್ ಶಾ ತಂತ್ರಗಳಿಂದಲೂ ಅಲ್ಲ. ಅದು ಸ್ವತಃ ಯಡಿಯೂರಪ್ಪನವರಿಂದ ಮಾತ್ರ. ಬಹುಸಂಖ್ಯಾತ ಲಿಂಗಾಯತ ಸಮುದಾಯದ ಬೆಂಬಲ ಮತ್ತು ಲಿಂಗಾಯತ ಸಮುದಾಯದಿಂದ ಆಯ್ಕೆಯಾದ ಪ್ರಬಲ ನಾಯಕರ ಸಹಕಾರದಿಂದಲೇ ಯಡಿಯೂರಪ್ಪ ಸರ್ಕಾರ ಉಳಿದಿರುವುದು. ಹೀಗಾಗಿ ಸಂತೋಷ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಎಷ್ಟೇ ಕಿರಿಕಿರಿ ಮಾಡಿದರೂ ಮುನ್ನುಗ್ಗುವ ಶಕ್ತಿ ಮತ್ತು ಛಲ ಯಡಿಯೂರಪ್ಪನವರಿಗಿದೆ.

ಆದರೆ ಸಮಸ್ಯೆಯೇ ಬೇರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸೇರಿದಂತೆ 34 ಮಂದಿವರೆಗೆ ಮಾತ್ರ ಸಚಿವರಾಗಿಸಬಹುದಾಗಿದೆ. ಈಗ ಯಡಿಯೂರಪ್ಪ ಸೇರಿದಂತೆ ಸಚಿವ ಸಂಪುಟದ ಬಲ 18. ಅಂದರೆ ಇನ್ನು 16 ಮಂದಿಗೆ ಸಚಿವರಾಗುವ ಸೌಭಾಗ್ಯ ದೊರೆಯಬಹುದಾಗಿದೆ. ಗೆದ್ದಿರುವ ಎಲ್ಲರನ್ನೂ ಸಚಿವರಾಗಿಸುವುದಾಗಿ ಯಡಿಯೂರಪ್ಪನವರೇ ಹೇಳಿರುವುದರಿಂದ ಅದರಲ್ಲಿ ಯಾವುದೇ ಗೊಂದಲ ಇಲ್ಲ.

ಈಗಿರುವ ಸಮಸ್ಯೆ ಖಾತೆ ಹಂಚಿಕೆ ಸಂಬಂಧಿಸಿದ್ದೇ ಆಗಿದೆ. ಇದರಿಂದಾಗಿಯೇ ಯಾವಾಗ ವಿಸ್ತರಣೆ ಮಾಡಬೇಕೆಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. Blessing in disguise ಎನ್ನುವಂತೆ ಯಡಿಯೂರಪ್ಪನವರಿಗೆ ಧನುರ್ಮಾಸ ಕೃಪೆ ತೋರಿದೆ. ಇನ್ನಷ್ಟು ದಿನ ಸಂಪುಟ ವಿಸ್ತರಣೆ ವಿಳಂಬ ಮಾಡುವುದಕ್ಕೆ ನೆರವಾಗಿದೆ. ಫಲಿತಾಂಶ ಪ್ರಕಟವಾದ 24 ಗಂಟೆಗಳ ಒಳಗೆಯೇ ಗೆದ್ದ ಎಲ್ಲ ಅನರ್ಹ ಶಾಸಕರನ್ನು ಮಂತ್ರಿ ಮಾಡುವುದಾಗಿ ಹೇಳಿಕೊಂಡಿದ್ದ ಯಡಿಯೂರಪ್ಪ ಮಾತು ತಪ್ಪಿರುವುದೇಕೆ?

ಗೆದ್ದು ಬಂದ ಅನರ್ಹರಲ್ಲಿ ಒಬ್ಬೊಬ್ಬರೂ ಘಟಾನುಘಟಿಗಳೇ. ಪಕ್ಷ, ಸಿದ್ಧಾಂತಕ್ಕಿಂತ ಸ್ವಂತ ಬಲದಿಂದ ಗೆದ್ದು ಬರುತ್ತಿರುವ ಕ್ಷೇತ್ರಗಳ ಪಾಳೇಗಾರು. ರಮೇಶ್ ಜಾರಕೀಹೊಳಿ, ಬೈರತಿ ಬಸವರಾಜ್, ಕೆ.ಗೋಪಾಲಯ್ಯ. ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್ ಮೊದಲಾದವರು ಈ ಹಿಂದೆ ತಾವಿದ್ದ ಪಕ್ಷದಿಂದ ಮಂತ್ರಿಯಾಗಲಿಲ್ಲ ಎಂದು ಕೋಪಗೊಂಡು ಪಕ್ಷಾಂತರ ಮಾಡಿದವರು. ಇವರ್ಯಾರಿಗೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂಬ ನಿಯತ್ತಾಗಲೀ, ಜನಬದ್ಧತೆಯಾಗಲೀ ಇಲ್ಲ. ತಾವು ಹೇಳಿದಂತೆ ಆಗಬೇಕಷ್ಟೇ. ಇಂಥವರಿಂದಲೇ ಯಡಿಯೂರಪ್ಪ ಸರ್ಕಾರ ಉಳಿದಿರುವಾಗ ಅವರು ಕೇಳಿದ ಖಾತೆ ಕೊಡಲೇಬೇಕಾದ ಅನಿವಾರ್ಯತೆ ಯಡಿಯೂರಪ್ಪನವರಿಗಿದೆ. ಯಡಿಯೂರಪ್ಪನವರು ಯಾರ್ಯಾರಿಗೆ ಯಾವ್ಯಾವ ಭರವಸೆ ನೀಡಿದ್ದಾರೋ ಯಾರಿಗೂ ಗೊತ್ತಿಲ್ಲ.

ಈಗ ಸಚಿವರಾಗಿರುವವರನ್ನೇ ನೋಡಿ. ಪ್ರಮುಖ ಖಾತೆಗಳೆಲ್ಲ ಬಿಜೆಪಿ ಮೂಲದ ಪ್ರಮುಖರಲ್ಲೇ ಇದೆ. ಗೋವಿಂದ ಕಾರಜೋಳ ಲೋಕೋಪಯೋಗಿ, ಡಾ.ಅಶ್ವಥ್ ನಾರಾಯಣ ಉನ್ನತ ಶಿಕ್ಷಣ, ಲಕ್ಷ್ಮಣ ಸವದಿ ಸಾರಿಗೆ, ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆರ್.ಅಶೋಕ ಕಂದಾಯ, ಜಗದೀಶ್ ಶೆಟ್ಟರ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಬಿ.ಶ್ರೀರಾಮುಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಬಸವರಾಜ ಬೊಮ್ಮಾಯಿ ಗೃಹ, ಜೆ.ಸಿ.ಮಾಧುಸ್ವಾಮಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಜವಾಬ್ದಾರಿ ಹೊತ್ತಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಇವರಲ್ಲಿ ಕೆಲವರ ಬಳಿ ಹೆಚ್ಚುವರಿಯಾಗಿ ಸಣ್ಣಪುಟ್ಟ ಖಾತೆಗಳಿವೆ. ಇತರರಿಗೆ ಹಂಚಿಕೆಯಾಗದ ಕೆಲವು ಖಾತೆಗಳು ಮುಖ್ಯಮಂತ್ರಿಗಳ ಬಳಿಯೇ ಇದೆ. ಹೀಗಾಗಿ ಈ ಖಾತೆಗಳ ವಿಷಯದಲ್ಲಿ ಅಷ್ಟು ಸಮಸ್ಯೆಯಾಗುವುದಿಲ್ಲ.

ಆದರೆ ಪ್ರಮುಖ ಖಾತೆಗಳನ್ನು ಪಡೆದಿರುವ ಸಚಿವರಿಗೆ ಹೊಸ ಶಾಸಕರಿಗಾಗಿ ತಮ್ಮ ಖಾತೆಗಳನ್ನು ತ್ಯಾಗ ಮಾಡುವ ಮನಸ್ಸಿರುವುದು ಸಾಧ್ಯವಿದೆಯೇ? ವಿಶ್ವಾಸಮತ ಕೋರುವ ಸಂದರ್ಭದಲ್ಲಿ ಯಡಿಯೂರಪ್ಪ ಬೆನ್ನಿಗೇ ನಿಂತು ಮಾತಾಡಿದ್ದ ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿಯಂಥವರು ಈಗಲೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಉಳಿಯಲೇಬೇಕೆಂದು ತಮ್ಮ ಖಾತೆಗಳನ್ನು ಬಿ.ಸಿ.ಪಾಟೀಲ್, ಕೆ.ಸುಧಾಕರ್, ಗೋಪಾಲಯ್ಯ, ಬೈರತಿ ಬಸವರಾಜು ಅಥವಾ ಸೋಮಶೇಖರ್ ಗಾಗಿ ಬಿಟ್ಟುಕೊಡಲು ಸಿದ್ಧರಿರುತ್ತಾರೆಯೇ? ಸವದಿ ತಮ್ಮ ಬಳಿ ಇರುವ ಸಾರಿಗೆ ಖಾತೆಯನ್ನು ಹೊಸಬರಿಗೆ ಕಾಣಿಕೆ ನೀಡಲು ಸಮ್ಮತಿಸುತ್ತಾರೆಯೇ? ಹಾಗಂತ ಅಶ್ವಥ್ ನಾರಾಯಣ ಬಳಿ ಹೆಚ್ಚುವರಿಯಾಗಿರುವ ಐಟಿ, ಬಿ.ಟಿ.ಖಾತೆಯನ್ನು ಬೈರತಿ ಬಸವರಾಜು ಅವರಿಗೋ ಅಥವಾ ಗೋಪಾಲಯ್ಯ ಅವರಿಗೋ ಕೊಡಲಾಗುತ್ತದೆಯೇ? ಚಿಲ್ಲರೆ ಖಾತೆಗಳನ್ನು ಇವರು ಒಪ್ಪಿಕೊಳ್ಳುತ್ತಾರೆಯೇ?

ಸಮಸ್ಯೆ ಅಷ್ಟಕ್ಕೇ ಮುಗಿಯುವುದಿಲ್ಲ. 2016 ರಲ್ಲಿ ಯಡಿಯೂರಪ್ಪ ಮತ್ತೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಂತರ  ಅವರೊಂದಿಗೆ ಪಕ್ಷ ಕಟ್ಟಿದವರ ಕತೆ ಏನು? 1994 ರಿಂದಲೂ ಆಯ್ಕೆಯಾಗುತ್ತಿರುವ ರಂಜನ್ ಅಪ್ಪಚ್ಚು, ಅರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ ಅವರನ್ನೆಲ್ಲ ಹೇಗೆ ಸಮಾಧಾನಪಡಿಸುತ್ತಾರೆ? ಅವರೆಲ್ಲ ಒಂದಲ್ಲ ಒಂದು ದಿನ ಮಂತ್ರಿಯಾಗಬಹುದೆಂದು ಕಾಯುತ್ತಿರುವವರೇ. ಯಡಿಯೂರಪ್ಪನವರಿಗೆ ಈಗ ವಯಸ್ಸಾಗಿದೆ ಎಂದು ಬಿಜೆಪಿ ನಾಯಕರೇ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಬಿಟ್ಟರೆ ಇನ್ನೋರ್ವ ಸಮೂಹ ನಾಯಕ ರಾಜ್ಯ ಬಿಜೆಪಿಯಲ್ಲಿಲ್ಲ. ಬಿಜೆಪಿಯ ಬೇರೆ ಯಾವುದೇ ಕಾರ್ಯತಂತ್ರಗಳಿದ್ದರೂ ಮುಂದಿನ ಅವಧಿಗೂ ಬಹುಮತ ಗಳಿಸುವ ನಂಬಿಕೆ ಏನಿಲ್ಲ. ಹಾಗಾದರೆ ಸುಮಾರು 25 ವರ್ಷಗಳಿಂದ ಯಡಿಯೂರಪ್ಪ ಜತೆಯೇ ಗುರುತಿಸಿಕೊಂಡಿರುವ ಶಾಸಕರು ಸದ್ಯಕ್ಕಂತೂ ಮಂತ್ರಿಯಾಗುವ ಅವಕಾಶವೇ ಇಲ್ಲ ಎಂದರೆ ಬಾಯಿ ಬಡಿದುಕೊಳ್ಳುವುದು ಬಿಟ್ಟರೆ ಅನ್ಯ ಮಾರ್ಗವಿಲ್ಲ. ಇಂಥವರನ್ನೆಲ್ಲ ಸಮಾಧಾನಪಡಿಸುವ ಜರೂರು ಯಡಿಯೂರಪ್ಪನವರಿಗಿದೆ.      

ಹೀಗಾಗಿ ಯಡಿಯೂರಪ್ಪ ಹಿಂದೊಮ್ಮೆ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್, ಹಿರಿಯ ನಾಯಕರಾಗಿರುವ ಈಶ್ವರಪ್ಪ ಅವರಂಥವರನ್ನು ಕೈಬಿಡಲು ಮುಂದಾಗಬಹುದು. ಅಥವಾ ಬೆರಳೆಣಿಕೆಯಷ್ಟಿರುವ ಪಕ್ಷ ಮತ್ತು ತತ್ವನಿಷ್ಠ ಸುರೇಶ್ ಕುಮಾರ್ ತರಹದವರನ್ನು ಕೈಬಿಟ್ಟರೂ ಅವರ್ಯಾರೂ ಬಂಡಾಯ ಏಳುವುದಿಲ್ಲ ಎನ್ನುವ ನಂಬಿಕೆಯಿಂದ ಅಂಥ ಒಂದು ನಿರ್ಧಾರ ಕೈಗೊಳ್ಳಬಹುದು. ಪಕ್ಷ ನಿಷ್ಠೆಯ ಅನುಮಾನ ಹುಟ್ಟಿಸಿರುವ ಅಶೋಕಗೂ ಅರ್ಧಚಂದ್ರ ಪ್ರಯೋಗಿಸಬಹುದು. ಅಥವಾ ದಿನಕಳೆದಂತೆ ಸೋತಿದ್ದರೂ ವಿಶ್ವನಾಥ್ ಮತ್ತು ಎಂ.ಟಿ.ಬಿ.ನಾಗರಾಜ್ ಅವರಿಗೂ ಸಚಿವ ಸ್ಥಾನ ನೀಡಬೇಕೆಂಬ ಅನರ್ಹರ ಕೂಗು ಮೊದಲಿನ ಗಡಸುತನ ಕಳೆದುಕೊಂಡಿರುವಂತೆ ಈ 11 ಶಾಸಕರೂ ಯಾವುದೇ ಖಾತೆಯಾದರೂ ಸರಿ ಮಂತ್ರಿಯಾದರೆ ಸಾಕು ಎಂದು ಶರಣಾಗುವ ವಾತಾವರಣವೂ ನಿರ್ಮಾಣವಾಗಬಹುದು. ಸದ್ಯಕ್ಕಂತೂ ಸಚಿವ ಸಂಪುಟ ವಿಸ್ತರಣೆ ಯಡಿಯೂರಪ್ಪ ಪಾಲಿಗೆ ಕಗ್ಗಂಟಾಗಿಯೇ ಇದೆ.

ಬಿಜೆಪಿಯ ಪ್ರಮುಖರೊಬ್ಬರು ಹೇಳುವಂತೆ ಪಕ್ಷದ ವರಿಷ್ಠರ ಹಿಡಿತ ಕಳೆದುಕೊಂಡಿರುವ ಕರ್ನಾಟಕ ಸರ್ಕಾರ ಯಡಿಯೂರಪ್ಪನವರ, ಯಡಿಯೂರಪ್ಪನವರಿಗಾಗಿ, ಯಡಿಯೂರಪ್ಪನವರಿಂದಾಗಿ ಉಳಿದಿರುವ ಸರ್ಕಾರವಾಗಿರುವುದರಿಂದ ಮುಂದಿನ ದಿನಗಳು ಇನ್ನಷ್ಟು ಕುತೂಹಲ ಹುಟ್ಟಿಸಲಿರುವುದಂತೂ ಖಚಿತ.