ಕಾರ್ನಾಡ್ರು ಇಲ್ಲ್ದ್ ಸಾಹಿತ್ಯಕ್ಷೇತ್ರಾನ ಶೂನ್ಯ ಆವರ್ಸೇತಿ

 ಕಾರ್ನಾಡ್ರು  ಇಲ್ಲ್ದ್ ಸಾಹಿತ್ಯಕ್ಷೇತ್ರಾನ ಶೂನ್ಯ ಆವರ್ಸೇತಿ

ಯಾಕ್ರೀ, ಕಾಕಾರ  "ಹಿಂಗ್ಯಾಕ್ ಸಪ್ಪ್ಗ ಮಾರಿಮೊಡಿಕೊಂಡು ಕುಂತಿರೀ...... ಅಂತಾದ್ದೇನಾಗೇತಿ"?. ನೀವು ನೋಡಿದ್ರ ಯಾವಾಗ್ಲೂ ನಗಿ ಮಾರಿಯವ್ರೂ, ಈಗ ನೋಡಿದ್ರ "ಎಂಟದಿನಾ ಉಪವಾಸ ಇದ್ದರಂಗ್ ಮುಖಮಾಡಿಕೊಂಡು ಕುಂತೀರಲ್ಲ..... ಯಾಕ".?  "ದೇವೇಗೌಡ್ರು, ಖರ್ಗೆ ಸಾಹೇಬ್ರು ಸೋತಿದ್ದು ನಿಮ್ಗ ಇನ್ನು ಅರಿಗಿಲ್ಲನೂ"....? "ಸೋತವ್ರು ಮೈಚಳಿಬಿಟ್ಟು ಚೈನಿ ಹೊಡ್ಯಾಕ ಹತ್ತಾರ"..! ನೀವೇನ್ರೀ....?

ಬಸಣ್ಣ ನಿನ್ಗ ಸೂಕ್ಷ್ಮ ಅನ್ನೋದು ಗೊತ್ತಿಲ್ಲ ನೋಡು....? ಅಲ್ಲೋ,  ನಾ… ಯಾಕ್ ಎಂಟದಿವ್ಸದಿಂದ ಊಟಾ ಬಿಡ್ಲಿ.!  "ಗೌಡ್ರು, ಖರ್ಗೆ ಅವ್ರಿಗೆ ಗೆದ್ದ್ರು ಆಟ್... ಸೋತ್ರೂ ಆಟ್"....! "ಗೌಡ್ರು ಸೋತ್ರೇನಾತ್ ರಾಜ್ಯದಾಗ ಅವ್ರ ಮಗಾ ಕುಮಾರಣ್ಣ ಮುಖ್ಯಮಂತ್ರಿ ಅದಾನ", ಇನ್ನ "ಖರ್ಗೆ ಸಾಹೇಬ್ರು ಸೋತ್ರ ಏನೂ? ಅವ್ರ ಮಗಾನು ರಾಜ್ಯದಾಗ ಮಂತ್ರಿ ಅದಾನ". ಒಂದಿಲ್ಲ ಒಂದು  ಹುದ್ದೆ ಅವ್ರಿಗೆ ಅದಾವು, ಅವ್ರು ಬಗ್ಗೆ ನಾ ಯಾಕ ಚಿಂತಿ ಮಾಡ್ಲಿ...! "ಊರು ಸುದ್ದಿ ತಗೊಂಡು ಮುಲ್ಲಾ ಸೋರಗಿದ್ನಂತ" ಹಂಗಾತು ನಿನ್ನ ಮಾತು. 

“ಪ್ಯಾಟಾಗ್ ಎಲಿ ಮಾರ್ತಾನಲ್ಲ ಆ ಮುಲ್ಲಾ ಅನ್ರೀ..? ಅವ್ಗೇನ್ರೀ ದಾಡಿ, ಅವಾ ಯಾಕ್ ಸೋರ್ಗತಾನ.... ನಿನ್ನೆರ ಪ್ಯಾಟಾಗಿಂದ ಮನಿಗೆ ಬರಹೊತ್ತಿನ್ಯಾಗ್ ನನ್ನ ಮಾತಾಡಿಶ್ಯಾನ”

ಲೇ..ಲೇ ... ಹಂಗೆಲ್ಲಾ ಹುಚ್ಚಪ್ಯಾಲಿ ಮಾತಾಡಿದಂಗ್ ಮಾತಾಡಬ್ಯಾಡ, ನಾನು ಗಾದಿಮಾತ ಹೇಳ್ದೇ, ನೀ ಮತ್ತ "ಗಾದಿಮಾತ್ಯಾಕ ಕಂಬ್ಯಾಗೂ ಮಾತು ಇತ್ರಾವೇನ್ರೀ" ಅಂತ ಪ್ರಶ್ನೆ ಮಾಡಬ್ಯಾಡ?.  

ತಪ್ಪಾತಬಿಡ್ರಿ  ಕಾಕಾ,  ನೀವು ಸಪ್ಪಗ್ ಕುತಗಳ್ಳಾಕ ಕಾರ್ಣಾ ಏನು ಹೇಳ್ರೀ..!

ಏನ್ ಕಾರ್ಣ ಅಂತ ಕೇಳ್ತೀಯಲ್ಲೋ, ನಿನ್ಗ ಗೊತ್ತಿಲ್ಲ...? "ನಮ್ಮ ಗಿರೀಶ ಕಾರ್ನಾಡ್ರು ಹೋಗಿ ಬಿಟು"್ರ...... 

ಹೌದ್ರೀ ನಾನು ಪೇಪರ್ನಾಗ್ ಓದಿದ್ದೆ. ಅಂತಾದ್ದೇನೂ ಆಗಿತ್ರೀ ಈಕಾರ್ನಾಡ್ರಿಗೆ..?

ವಯಸ್ಸಾಗಿತ್ತೋ ತಮ್ಮ ಅವ್ರಿಗೆ ವಯಸ್ಸಾಗಿತ್ತೂ. 81ವರ್ಷ ವಯಸ್ನಾಗೂ ಅವ್ರು ಎಷ್ಟ ಚುರಾಕಿದ್ರೂ ಅಂದ್ರ, "ಪೈಪ್ ಹಾಕ್ಕೊಂಡು ಉಸರಾಡತಿದ್ರು ಸಹ ಅವ್ರು ಎಷ್ಟ್ ಚುರಕಾಗಿದ್ರೂ ಅಂದ್ರ ವಯಸ್ಸಿನ ಹುಡ್ರು ಅವರ್ನ ನೋಡಿ ನಾಚಿಗ್ಯಾಬೇಕು" ಹಂಗ್ ಇದ್ರು ನೋಡು ಅವ್ರು. 

ಅಲ್ಲಾ, ಕಾಕಾರ ನಿಮ್ಗ ಕಾರ್ನಾಡ್ರ ಪರಿಚಯ ಇತ್ತೇನ್ರೀ...!

ಪರಿಚಯಾ ಇತ್ತೂ ಅಂತಿಯಲ್ಲೋ!, ಆ ಮಹಾನುಭಾವ ಬಾಳಾ ದೊಡ್ಡ ವ್ಯಕ್ತಿತ್ವದಾವ ಇದ್ದ. ನಾನು ಕಾರ್ನಾಡ್ರು ಧಾರವಾಡಕ್ಕ ಬರ್ತಾರ ಅಂದ್ರ ಅವ್ರ್ನ ಧಾರವಾಡಕ್ಕ ಹೋಗಿ ಬೆಟ್ಟ್ಯಾಗಿ ಬರ್ತಿದ್ದೆ. ಕಾರ್ನಾಡ್ ಅವರದ್ದು ಎಂತಾ ಸಾವು ಅಂತೀ, ಆ ಪುಣ್ಯಾತ್ಮ "ತಾ ಇರೋಮಟಾನು ತಾ ನಂಬಿದ ಸಿದ್ದಾಂತಗಳ್ನ ಕೈಬಿಡ್ಲಿಲ್ಲ". "ವ್ಯವಸ್ಥೆ ಜೊತಿಗೆ ರಾಜೀಮಾಡಿಕೊಳ್ಳಲಿಲ್ಲ". "ಬದುಕಿದ್ರ ಅವ್ರಹಂಗ್ ಬದ್ಕಬೇಕು ನೋಡು".

ಅಲ್ಲ್ರೀ ಕಾಕಾ ಗಿರೀಶ್ ಕಾರ್ನಾಡ್ರಿಗೆ  ಜ್ಞಾನಪೀಠ ಪ್ರಶಸ್ತಿ ಬಂದಿದ್ರೂ ಒಂಚೂರು ಗರ್ವ ಇದ್ದಿರಲಿಲ್ಲ. ಆದ್ರ ಟಿವಿಒಳ್ಗ "ಅವ್ರು ಮ್ಯಾಲಿನ ಮನಿಗೆ ಹೋದ ಸುದ್ದಿನ ಅಷ್ಟಾಗಿ ತೋರ್ಸಲಿಲ್ಲ.' ಅಲ್ರೀ, ಏನಾಗಿತ್ತು ಈಟಿವಿ ಮಂದಿಗಿ..?

ಟಿವಿ ಮಂದಿಗೆ ಏನಾಗಂತೀ...? ಅವ್ರು ಕರೆಕ್ಷಟಾಗಿದ್ರು,..! ನಮ್ಮ ಕಾರ್ನಾಡ ಸಾಹೇಬ್ರು ಸಾಯೇದಗಿಂತ್ ಮೊದ್ಲ "ಅವ್ರ ಮನಿಯವರನ್ ಕರ್ದು ನಾನು ಸತ್ತಮ್ಯಾಕ ನನ್ನ ಸಾವಿನ  ಸುದ್ದಿನ ಭಂಯಕರ ಪ್ರಸಾರಮಾಡಬ್ಯಾಡಿ"್ರ,  "ಅಂತ್ಯಕ್ರಿಯೆ ಸರಳವಾಗಿರ್ಲಿ ಅಂತ ಹೇಳಿದ್ರಂತ್"  ಅದ್ಕ "ಕಾರ್ನಾಡ ಅವರ ಮನಿಯವ್ರು ಇದನ್ನ ದೊಡ್ಡ ಸುದ್ದಿ ಮಾಡ್ದಂಗ್ ಕಾರ್ನಾಡ್ರ ಇಚ್ಚೆಹಂಗ್ ಅವ್ರ ಅಂತ್ಯಕ್ರಿಯಾ ಮಾಡ್ಯಾರ".

 ಟಿವಿಯವ್ರಿಗೆ ಇದ್ರಿಂದ್ ಬಾಳಾ ಲಾಸ್ ಆಗಿರಬೇಕು ಅಲ್ರೀ..?

"ಅವ್ರ್ಯಾಕ ಲಾಸ್ ಮಾಡಿಕೊಳ್ತಾರ"? "ದೊಡ್ಡಸಾಹಿತಿಗಳು, ರಾಜಾಕಾರ್ಣಿಗಳು, ಸಿನ್ಮಾ ಮಂದಿ ಯಾರರ್ ಸತ್ರು ಅಂದ್ರ ಸತ್ತವ್ರ   ಮನಿಮುಂದ ಹೋಗಿ ನಿತಗೊಂಡು ಹೆಣಾ ಎತ್ತೋದ್ರಿಂದ ಹಿಡ್ದು, ಹೆಣಾ ಕುಣಿಗೆಹಾಕಿ ಮಣ್ಣಮಾಡಿ ಮನಯವ್ರು ಮನಿಗೆ ಬಂದ್ ಮೈತೊಕ್ಕೊಂಡು ಊಂಡ್ ಮನಿಕ್ಕೊಂಡ್ರು ಸಹ ಈಟವಿವಿ ಮಂದಿ ಮಣ್ಣಿನ ಗೋರಿಮುಂದ ಕ್ಯಾಮರಾ ಹಿಡಕಂಡ್ ಇಲ್ಲೆ ಮಕ್ಕಂಡಾರ ಅಂತ್ ಸತ್ತವರ್ನ ಮಣ್ಣಮಾಡಿದ ಗೋರಿ ತೋರ್ಸಿ ತಮ್ಮ ಮಾರ್ಕೆಟ್ ಮಾಡಿಕ್ಕೊಳ್ಳೋ ದಂಧೆಕ ಇಳದಬಿಟ್ಟಾರ."! 

"ಸತ್ತವ್ರ ಮನಿಗೆ ಬರೋರ್ನ, ಹೋಗರ್ನ ಒಂದ ಸಮನ ತೋರ್ಸಿ, ತೋರ್ಸಿ ಜನ್ರ ತಲಿಗೆ ಏನೇನರ ಹೂಳಾ ಬಿಡ ಕೆಲ್ಸಾ ಮಾಡ್ತಿದ್ರು ಆದ್ರ " ಇದನ್ನೆಲ್ಲಾ ಕಣ್ಣಾರೆ ಕಂಡಿದ್ದ ಕಾರ್ನಾಡ್ರು ಇದಕ್ಕ ಅವಕಾಶ ಕೊಡ್ದ ಸದ್ದು-ಗದ್ಲಾ ಇಲ್ಲದಂಗ್ ನನ್ನ ಮಣ್ಣಮಾಡ್ರಿ" ಅಂತ ಹೇಳಿದ್ಕ ಅವ್ರ ಮನಿಯವ್ರ್ರು ಅವ್ರ ಇಚ್ಚಾದಂಗ ನಡಕೊಂಡಾರ.

ಕಾಕಾ ಈಮಾಧ್ಯಮದವ್ರು ರಾಜಕೀಯದ ಮಂದಿ  ಪ್ರಚಾರದ ಹುಚ್ಚು ನೋಡಿ  ಅವ್ರಹಂಗ್ ಎಲ್ಲಾರನ್ನು  ಹಗುರಾಗಿ ನೋಡ್ತಾರ,  "ಪ್ರಚಾರಕ್ಕ ಎಂತಾ ದೊಡ್ಡ ವ್ಯಕ್ತಿ ಆದ್ರೂ  ನಮ್ಮ ಬಳಿ ಬರಬೇಕು"  ಅನ್ನೋ ದುರಹಂಕಾರ  ಬೆಳ್ಸಿಕೊಂಡಾರ ಅಂತ ನನಗ ಅನಸಾಕ ಹತ್ತೇತಿ ನೋಡ್ರೀ.

ನಿನ್ನ ಮಾತು ಕರೆ ಐತಿ ಬಸಣ್ಣಾ, "ಬೆರಳೆಣಿಕೆಯಷ್ಟು ಸ್ವಾಭಿಮಾನಿ ಜನ್ರಿಂದ ಈ ಸಮಾಜ ಇನ್ನೂ ಅಸ್ತಿತ್ವದಾಗ ಐತಿ ಅನ್ನೋದನ್ನು ಇವ್ರು ಮರ್ತಾರ". "ಒಂದ್ ನೆಲದ ಸಂಸ್ಕೃತಿನ ಮುಂದಿನ ತಲೆಮಾರಿಗೆ ಸಾಗಿಸೋ  ಮಾರ್ಗ ಮತ್ತ ಸಾಧ್ನಾಗಿ  ಮಾಧ್ಯಮಗಳು ಮುಖ್ಯ ಆಕ್ಕಾವು".  ಆದ್ರ ಈಗಿನ  "ತಳ-ಬುಡಾ ಇಲ್ಲದ ಮಾಧ್ಯಮಗಳು ಅದಕ್ ವಿರುದ್ಧಾಗಿ ಸಂಸ್ಕೃತಿಯ ಧ್ವಂಸ ಮಾಡ್ತಾವು".  

"ಗಿರೀಶ್ ಕಾರ್ನಾಡ್ ಅವ್ರು ಈ ಸಮಾಜದ ಒಬ್ಬ ಪ್ರಮುಖ ವ್ಯಕ್ತಿಯಾದ್ರು ಸತಗಿ ಅದ್ನ ತಲಿಗೆ ಹಚ್ಚಿಕೊಳ್ದ  ನಲದಮ್ಯಾಲೆ ಬದ್ಕಿದ ವ್ಯಕ್ತಿ ಅವ್ರು. ಆದ್ರ "ಈ ಮಾಧ್ಯಮಗಳ ಮಂದಿ ಗಿರೀಶ್ ಕಾರ್ನಾಡ್ರ ವಿಷಯದ್ಯಾಗ ನಡಕೊಂಡ ರೀತಿ  ತೀರಾ ಕೆಳಮಟ್ಟದಾಗ ಇತ್ತು"!.  "ವ್ಯವಸ್ಥೆ ಬಗ್ಗೆ ಏನೇನೂ ಗೊತ್ತಿಲ್ಲದ ನಿರೂಪಕರು -ವರದಿಗಾರರು ಅವರನ್ನು  ಅವಹೇಳ್ನಾ ಮಾಡಿದ್ರು.  ಪೇಪರ್ ಟೈಗರ್ ಪ್ರತಿಭಟನಾಕಾರರ ಮಾತಿಗೆ ಮನ್ನಣೆ ಕೊಟ್ರು".

"ಕಾರ್ನಾಡ್ರು ಸ್ವಾತಂತ್ರ್ಯ ಪೂರ್ವದಾಗ  ಹುಟ್ಟಿದವ್ರು. ದೇಶ-ವಿಶೇಶದ  ಸಂಸ್ಕೃತಿಗಳ ಬಗ್ಗೆ  ಅಧ್ಯಯನ ಮಾಡಿದವ್ರು  ಆದ್ರ "ಈ ಮಾಧ್ಯಮದ ಮಂದಿ ಅವರನ್ನ ಅವರ ಭಾವನೆಗಳಿಗೆ ವಿರುದ್ಧಾಗಿ ಬಿತ್ತರಿಸಿದ್ರು. ಅವರನ್ನು "ಹಿಂದೂ ಧರ್ಮ ವಿರೋಧಿ  ಅಂತಾ ಹೇಳೋ ಧ್ವನಿಗಳಿಗೆ ಹೆಚ್ಚು  ಮೈಕ್ ನೀಡಿದ್ರೂ.  ನಗರ ನಕ್ಸಲ್ ಅಂತ್ ಹೇಳಿಕೊಂಡ ವಿಷಯದ ಆಳಕ್ಕೆ ಇಳಿದ್ ಅದ್ರ ಅರ್ಥಾ ಮರೆಮಾಚಿದ್ರು".

ಕಾಕಾರ ನೀವು ಏನ್ ವಿಷ್ಯಾ ಹೇಳಾಕ ಹತ್ತೀರೋ ನನಗೆ ತಲಿಗೆ ಹತ್ತವಲ್ದು. ಸಾಹಿತ್ಯದ ಭಾಷೆ ಬಿಟ್ಟು ಆಡ್ ಭಾಷೆ ಒಳ್ಗ ಮಾತಾಡ್ರೀ..!

ಲೇ ಹಡ್ಗಾ ಈ "ಕಾರ್ನಾಡರ ಬಗ್ಗೆ ಹಂಗ್ ಒಂದ್ ಭಾಷಾದಾಗ ಹೇಳಾಕ ಬರೋದಿಲ್ಲೋ". "ಅವ್ರು ಒಂದ ನಮೂನಿ ಅಲ್ಲಮ ಇದ್ದಂಗ್", "ಅರ್ಥಆಗೋರಿಗೆ ಅರ್ಥ ಆಕ್ಕಾರ, ಆಗದಿದ್ದರೋಗೆ ಅರ್ಥನಾ ಆಗಂಗಿಲ್ಲ"! "ಜ್ಞಾನಪೀಠ, ಪದ್ಮಭೂಷಣ ಪ್ರಶಸ್ತಿ,    ನಾಟಕ, ಸಿನಿಮಾ ನಟನೆ, ಸಾಹಿತ್ಯ ಕ್ಷೇತ್ರದಾಗ್  ಮಹತ್ವದ ಸಾಧನೆ ಮಾಡಿದ್ದ ಗಿರೀಶರ ವ್ಯಕ್ತಿತ್ವ ಅಗ್ಗಿಕೊಳ್ಳಕಾ ಈಮಾಧ್ಯಮದ ಮಂದಿಗೆ ಸಾಧ್ಯಾನ ಆಗಲಿಲ್ಲ ನೋಡೂ"

ಹಂಗಂತ್ "ಕಾರ್ನಾಡರೇನು ಪ್ರಶ್ನಾತೀತರೇನಲ್ಲ,  ತಮ್ಗ ಅರಿವಾದ ಸತ್ಯಾನ ಇನ್ನಷ್ಟು  ಸರಳಾಗಿ  ಪ್ರೀತಿಯಿಂದ ಹೇಳಬಹುದಿತ್ತು"? "ನಮ್ಮ ದೇಶದ ಹೊಸಮಂದಿ ಮೆದಳು  ಗ್ರಹಿಸಿ  ಅವ್ರು ಮಾತಾಡಬಹುದಿತ್ತು"...? "ಅವ್ರೇನೂ ಸಿಕ್ಕಾಪಟ್ಟೆ ಬುದ್ದಿವಂತ್ರು ಇದ್ದ್ರು", "ನಮ್ಮಜನ ಅವ್ರ ಬುದ್ದಿಮಟ್ಟಕ್ಕ ಇರಬೇಕಲ್ಲ"..?  "ಒಂದು ಕುರಿ ಬ್ಯಾ ಅಂದ್ರ ಎಲ್ಲಾ ಕುರಿನ ಬ್ಯಾಂತಾವು" ಅನ್ನೋ ಮಾತಿನಹಂಗ್ "ಮುಂದ ಹುಲಿ ಐತಿ, ದೊಡ್ಡಬಾವಿ ಐತಿ" "ಅದ್ರಾಕ ಬಿದ್ರ ನಾವು ಮತ್ತ ಎದ್ದ ಬರಕಾ ಆಗೋದಿಲ್ಲ ಅನ್ನೋ ಸತ್ಯಾ ಗೊತ್ತಿರ್ದ ನಮ್ಮ ಹೊಸಮಂದಿ ಬ್ಯಾ ಅನಕೊಂತ್ ಹೋಗಿ ದೊಡ್ಡ ಹಳ್ಳಕ ಬಿದ್ದಾರ ನೋಡು ಬಸಣ್ಣ".  

ಕಾಕಾರ ಕಾರ್ನಾಡ್ರು ಹೋಗಿ ಬಿಟ್ಟಾರ್, ಆದ್ರ ಹೋದ ಹೊತ್ತಿನ್ಯಾಗ ಅವ್ರು ಈಸಮಾಜಕ್ಕ ದೊಡ್ಡ ಪಾಠನ ಹೇಳಿಹೋಗ್ಯಾರ ಅಂತಿರೇನು?
ಮತ್ತ,  ಅಲ್ಲೋ "ಸತ್ತಾಗ ಪಟಾಕಿ ಹಚ್ಚಿ, ಊರಮಂದಿ ಸೇರ್ಸಿ ರಸ್ತೆ ಬಂದ್ ಮಾಡ್ಸಿ ಬಸ್ಸಿಗೆ ಕಲ್ಲ ಹೊಡ್ಸಿ, ಟೈರ್ ಸುಟ್ಟು ಊರ್ಗೆ ಬೆಂಕಿ ಹಚ್ಚಿದ ಮಂದಿನ ನಾ ಎಷ್ಟ ನೋಡಿಲ್ಲ"? "ಇದ್ಯಾವ್ದು ಬ್ಯಾಡ ಅಂತ್ ಹೇಳಿ ಗಿರೀಶ ಕಾರ್ನಾಡ್ರು ಯಾರ್ಗೂ ಹೇಳ್ದ ಹೋಗ್ಯಾರ. ಒಂದರೀತಿ ಸಾಹಿತ್ಯ ಕ್ಷೇತ್ರಾನ ಶೂನ್ಯ ಆವರಸಿ ಬಿಟ್ಟೇತಿ ನೋಡ ಬಸಣ್ಣ." 

ಕಾಕಾರ ಈ ಶಂಕರ್ ಮತ್ತ ಮಂತ್ರಿ ಆಗ್ಯಾನಲ್ರೀ……

ಆಗ್ಲಿ ಬಿಡೋ, “ಶಂಕರ್ ಆಗ್ಲಿ, ರಾಮಪ್ಪ ಆಗ್ಲಿ ಒಟ್ಟಿನ್ಯಾಗ ಶಂಕರ್ಗ್ ಓಡ್ಯಾಡಾಕ್ ಗೂಟದ ಕಾರ್ ಸಿಕ್ಕತೇಲ್ಲ ಅದು ಮುಖ್ಯ..”

ಹಂಗಾರ ನಮ್ಮ ಮೀಸಿ ಪಾಟೀಲ್ರ ಗತಿ ಏನ್ರೀ…?

ಮೀಸಿ ಪಾಟೀಲ್ ಯಾರೋ ಮಾರಾಯಾಹೊಸ ಆಸಾಮಿ…!

ಏ ಅದರೀ ಹಿರೇಕೆರೂರು ಎಮ್ಮೆಎಲ್‍ ಎ

ಅವ್ರ ಹಂಗಹೇಳೋ , ನಾ ಎಲ್ಲೆ ಬ್ಯಾರೆ ಅಂತ ತಿಳಕಂಡಿದ್ದೆ, ಅದ ನಮ್ಮ ಬಿ.ಸಿ.ಪಾಟೀಲ್ರು ಹೌದಲ್ಲ..!

ಹೌದ್ರೀ… ಕೌರವ ಬಿ.ಸಿ.ಪಾಟೀಲ್ರ ಬಗ್ಗೆ ನಾ ಹೇಳಿದ್ದು..ಆದ್ರೂ “ನೀವು ಏನ ಅನ್ರೀ ಸಿದ್ದ್ರಾಮಣ್ಣ ಪಾಟೀಲ್ರ್ನ ಹಿಂಗ್ ನಡ ನೀರಾಗ ಕೈಬಿಡಬಾರದಿತ್ತು. ಇವತ್ತ ಕೊಡ್ತನಿ, ನಾಳೆ ಕೊಡ್ತನಿ ಅಂತ್ ಪಾಟೀಲರ್ರಿಗೆ ಆಸೆ ತೋರ್ಸಿ ಈಗ ಒಮ್ಮೆಕ್ ಮಂತ್ರಿ ಪಟ್ಟ ಇಲ್ಲ ಆಂತ್ ಪಾಟೀಲರ್ರಿಗೆ ಹೇಳಿದ್ದು ಸರಿಯಲ್ಲ" ನೀವೇನಂತಿರೀ..

“ಸರಿ-ತಪ್ಪು ಅಂತ ಹೇಳೋರು ಯಾರು?, ಎಲ್ಲಾ ಸಿದ್ದ್ರಾಮಣ್ಣನ ಆಟ ಯಾರಿಗೂ ತಿಳಿಯಂಗಿಲ್ಲ" ಹೊತ್ತಾತು ನಾ ಬರ್ತನಿ, ಶಾಲಿಗೆ ಹೋಗಬೇಕು, ಮಕ್ಕಳ ಫಿಕಟ್ಟಬೇಕು ಎನ್ನುತ್ತಾ ಕಾಕಾ ಶಾಲೆಕಡೆಗೆ ಹೋದ್ರು.