ಕೇಳುಗರನ್ನು ಕಮಾಲ್ ಮಾಡಿತು `ಕಪಟನಾಟಕ ಪಾತ್ರಧಾರಿ’ಯ ಹಾಡು!

ಕೇಳುಗರನ್ನು ಕಮಾಲ್ ಮಾಡಿತು `ಕಪಟನಾಟಕ ಪಾತ್ರಧಾರಿ’ಯ ಹಾಡು!

ಪ್ರತಿಭಾವಂತರೆಲ್ಲಾ ಒಂದೆಡೆ ಸೇರಿದರೆ ಅಲ್ಲಿ ಗುಣಮಟ್ಟದ ಪ್ರಾಡಕ್ಟು ಹೊರಬರುತ್ತದೆ ಅನ್ನೋದು ಚಿತ್ರರಂಗದಲ್ಲಿ ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಸದ್ಯ `ಕಪಟನಾಟಕ ಪಾತ್ರಧಾರಿ’ ಚಿತ್ರತಂಡ ರಿಲೀಸು ಮಾಡಿರುವ ಮೊದಲ ಹಾಡು ಕೇಳಿದ ಯಾರಿಗೇ ಆದರೂ ಅದು ನಿಜ ಅನ್ನಿಸದೇ ಇರಲಾರದು. ಯುವ ನಿರ್ದೇಶಕ ಕ್ರಿಶ್ ಕನಸಿಟ್ಟು ನಿರ್ದೇಶಿಸಿರುವ ಚಿತ್ರ `ಕಪಟನಾಟಕ ಪಾತ್ರಧಾರಿ’. ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ಮತ್ತು ಹುಲಿರಾಯ ಎನ್ನುವ ಅಪರೂಪದ ಸಿನಿಮಾದ ಮುಖಾಂತರ ನಾಯಕನಟನಾಗಿಯೂ ಪರಿಚಯಗೊಂಡಿದ್ದ ನಟ ಬಾಲು ನಾಗೇಂದ್ರ ಈ ಚಿತ್ರಕ್ಕೂ ಹೀರೋ. ನಟಿ ಸಂಗೀತಾ ಭಟ್ ಬಾಲುಗೆ ಜೋಡಿಯಾಗಿ ನಟಿಸಿದ್ದಾರೆ. ಆಟೋ ಡ್ರೈವರ್ ಒಬ್ಬನ ಬದುಕಿನ ಹಾದಿಯನ್ನು ತೆರೆದಿಡುವ ಅಪರೂಪದ ಕಥಾಹಂದರ ಹೊಂದಿರುವ ಚಿತ್ರ `ಕಪಟನಾಟಕ ಪಾತ್ರಧಾರಿ’. ``ಯಾಕೆ ಅಂತಾ ಗೊತ್ತಿಲ್ಲ ಕಣ್ರೀ... ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ..’’ ಎನ್ನುವ ಒಂದು ಹಾಡನ್ನಷ್ಟೇ `ಕಪಟನಾಟಕ ಪಾತ್ರಧಾರಿ’ ತಂಡ ಹೊರಬಿಟ್ಟಿದ್ದು, ಇದನ್ನು ನಟ ರಿಷಿ ರಿಲೀಸ್ ಮಾಡಿದ್ದಾರೆ.

`ಕಪಟನಾಟಕ ಪಾತ್ರಧಾರಿ’ ಬೆಂಗಳೂರಿನ ಸುತ್ತಮುತ್ತ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ಕ್ರಿಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಆದಿಲ್ ನದಾ ಅವರು ಚಿತ್ರಕ್ಕೆ ಸಂಗೀತ ನೀಡಿದ್ದು, ಕ್ರಿಶ್, ವೇಣು ಹಸ್ರಾಳಿ, ಚಾಣಕ್ಯ, ಅನಿರುದ್ಧ್ ಶಾಸ್ತ್ರಿ ಹಾಡುಗಳನ್ನು ರಚಿಸಿದ್ದಾರೆ. ಹರಿಚರಣ್, ಸಿದ್ಧಾರ್ಥ್, ಮಾಧುರಿ ಶೇಷಾದ್ರಿ, ಇಶಾ ಸುಚಿ, ಪವನ್ ಪಾರ್ಥ ಹಾಗೂ ಅನಿರುದ್ದ್ ಶಾಸ್ತ್ರಿ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.

ಕಿರಣ್ ಚಂದ್ರ ಹಾಗೂ ವೇಣು ಹಸ್ರಾಳಿ ಸಂಭಾಷಣೆ ಬರೆದಿದ್ದಾರೆ. ಪರಮೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಅವರ ಸಂಕಲನವಿದೆ. ಸಂಗೀತ ಭಟ್, ಬಾಲು ನಾಗೇಂದ್ರ, ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮಿನಾಡು, ಉಗ್ರಂ ಮಂಜು, ಜಯದೇವ್, ನವೀನ್ ವಾಸುದೇವ್, ಸುನೀಲ್ ಕುಲಕರ್ಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.