ಹಾಡಿನಿಂದ ಮನಸು ಕದ್ದ ಕಪಟನಾಟಕ ಪಾತ್ರಧಾರಿ!

ಹಾಡಿನಿಂದ ಮನಸು ಕದ್ದ ಕಪಟನಾಟಕ ಪಾತ್ರಧಾರಿ!

ಕಡ್ಡಿಪುಡಿ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ವಿಲನ್ ಪಾತ್ರಗಳನ್ನು ಮಾಡುತ್ತಲೇ ಹುಲಿರಾಯ ಚಿತ್ರದ ಮೂಲಕ ನಾಯಕನಾಗಿಯು ಬಡ್ತಿ ಪಡೆದುಕೊಂಡಿದ್ದವರು ಬಾಲು ನಾಗೇಂದ್ರ. ಅದಾದ ನಂತರ ಒಂದು ಸುದೀರ್ಘ ಅವಧಿಯಲ್ಲಿ ಅವರೆಲ್ಲಿ ಹೋಗಿದ್ದಾರೆಂಬುದೇ ಯಾರಿಗೂ ಗೊತ್ತಾಗಿರಲಿಲ್ಲ. ಆದರೆ ಅವರು ಆ ಅವಧಿಯಲ್ಲಿ ಹೊಸಾ ತಂಡದ ಹುರುಪಿನ ಕನಸಿಗೆ ಜೊತೆಯಾಗಿದ್ದುಕೊಂಡೇ ಕಪಟ ನಾಟಕ ಪಾತ್ರಧಾರಿ ಎಂಬ ಚಿತ್ರದ ಚಿತ್ರೀಕರಣ ಮುಗಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಲಿರಿಕಲ್ ವೀಡಿಯೋ ಸಾಂಗ್ ಮೂಲಕ ಸುದ್ದಿ ಮಾಡಿದ್ದ ಈ ಸಿನಿಮಾದ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಈಗ ಬಿಡುಗಡೆಯಾಗಿದೆ.

ಕಪಟನಾಟಕ ಪಾತ್ರಧಾರಿ ಕ್ರಿಶ್ ನಿದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ. ಶೀರ್ಷಿಕೆಯ ಮೂಲಕವೇ ಹೊಸತನದ ಸುಳಿವು ಕೊಡುತ್ತಿರೋ ಈ ಚಿತ್ರವೀಗ ಹಾಡುಗಳ ಮೂಲಕ ಸುದ್ದಿ ಕೇಂದ್ರದಲ್ಲಿದೆ. ಇತ್ತೀಚೆಗಷ್ಟೇ ಯಾಕೆ ಅಂತ ಗೊತ್ತಿಲ್ಲ ಕಂಡ್ರಿ, ನನ್ನನ್ನು ನೋಡಿ ನಕ್ಬಿಟ್ಳು ಸುಂದ್ರಿ ಎಂಬ ರೊಮ್ಯಾಂಟಿಕ್ ಲಿರಿಕಲ್ ವೀಡಿಯೋ ಸಾಂಗ್ ಹೊರ ಬಂದಿತ್ತು. ಅದು ಗೆಲುವು ಕಾಣುತ್ತಲೇ ಇದೀಗ ಮತ್ತೊಂದು ಹಾಡನ್ನು ಚಿತ್ರತಂಡ ಅನಾವರಣಗೊಳಿಸಿದೆ. "ಹಸಿದಾ ಶಿಕನು ಬೇಟೆಯಾಡಿದೆ ಒಡಲಾ ಕಸಿದು ಸೂರೆ ಮಾಡಿದೆ" ಎಂಬ ಈ ಲಿರಿಕಲ್ ವೀಡಿಯೋ ಹಾಡು ಕೂಡಾ ಕೇಳುಗರನ್ನು ಥ್ರಿಲ್ ಆಗಿಸಿದೆ.

ಚಾಣಕ್ಯ ಬರೆದಿರೋ ಈ ಹಾಡು ವಿಭಿನ್ನವಾದ, ಕಥೆಯ ನಿಗೂಢಾರ್ಥಗಳನ್ನು ಹೊಮ್ಮಿಸುವಂಥಾ ಸಾಲುಗಳಿಂದ ಜನರನ್ನು ಸೆಳೆದುಕೊಂಡಿದೆ. ಆದಿಲ್ ನದಾಫ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ಈ ಹಾಡನ್ನು ಇಶಾ ಸುಚಿ ಹಾಡಿದ್ದಾರೆ. ಕಥೆಯ ಹೊಳಹುಗಳನ್ನು ತೆಳುವಾಗಿ ಬಿಟ್ಟುಕೊಡುತ್ತಲೇ ಈ ಹಾಡು ತನ್ನ ವಿಶಿಷ್ಟವಾದ ಸೌಂಡಿಂಗ್ ಮತ್ತು ಮಾಧುರ್ಯದಿಂದ ಮೆಚ್ಚುಗೆ ಗಳಿಸಿಕೊಂಡಿದೆ. ಇನ್ನೇನು ಬಿಡುಗಡೆಯ ಹಾದಿಯಲ್ಲಿರೋ ಕಪಟನಾಟಕ ಪಾತ್ರಧಾರಿ ಈ ಹಾಡಿನ ಮೂಲಕವೇ ಇದೀಗ ಎಲ್ಲರ ಮನಸ್ಸನ್ನು ಕದ್ದಿದೆ.