ಕಪಾಲಬೆಟ್ಟದಲ್ಲಿ ಕ್ರಿಸ್ತನ ಪ್ರತಿಮೆ: ಬಿಜೆಪಿಯ ರಾಜಕೀಯ ಅವಕಾಶಕ್ಕೆ ದಾಳವಾಯಿತೇ?

ಕನಕಪುರ ವಿಧಾನಸಭೆಯನ್ನು ಆರು ಬಾರಿ ಪ್ರತಿನಿಧಿಸಿರುವ ಕಾಂಗ್ರೆಸ್ ಪ್ರಬಲ ನಾಯಕ ಡಿ.ಕೆ. ಶಿವಕುಮಾರ್‍ ಅವರು 2019ರ ಡಿಸೆಂಬರ್ 25 ರಂದು ವಿಶ್ವದ ಅತಿ ಎತ್ತರದ ಯೇಸುಕ್ರಿಸ್ತನ ಪ್ರತಿಮೆಗೆ ಅಡಿಪಾಯ ಹಾಕುವ ಮೂಲಕ ರಾಜಕೀಯ ಸಮರಕ್ಕೆ ನಾಂದಿ ಹಾಡಿದ್ದಾರೆ.

ಕಪಾಲಬೆಟ್ಟದಲ್ಲಿ ಕ್ರಿಸ್ತನ ಪ್ರತಿಮೆ: ಬಿಜೆಪಿಯ ರಾಜಕೀಯ ಅವಕಾಶಕ್ಕೆ ದಾಳವಾಯಿತೇ?

ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಹಾರೋಬೆಲೆ ಅಣೆಕಟ್ಟಿನ ಮೇಲಿರುವ ಪ್ರಶಾಂತ ಬೆಟ್ಟವಾದ ಕಪಲಾಬೆಟ್ಟ ಇದ್ದಕ್ಕಿದ್ದಂತೆ ರಾಜಕೀಯ ಯುದ್ಧ ಭೂಮಿಯಾಗಿ ಮಾರ್ಪಟ್ಟಿದೆ. ಕಪಾಲ ಬೆಟ್ಟದ ಮೇಲಿರುವ 114 ಅಡಿ ಎತ್ತರದ ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣದಿಂದ ಸ್ಥಳೀಯ ನಿವಾಸಿಗಳನ್ನು ಮತಾಂತರಗೊಳಿಸಲು ಕ್ರಿಶ್ಚಿಯನ್ ಮಿಷನರಿಗಳ ಪಿತೂರಿ ಎಂದು ಆರೋಪಿಸಿ ಕೇಸರಿ ಪಡೆ ವಿರೋಧ ವ್ಯಕ್ತಪಡಿಸಿದೆ.  

ಕನಕಪುರ ವಿಧಾನಸಭೆಯನ್ನು ಆರು ಬಾರಿ ಪ್ರತಿನಿಧಿಸಿರುವ ಕಾಂಗ್ರೆಸ್ ಪ್ರಬಲ ನಾಯಕ ಡಿ.ಕೆ. ಶಿವಕುಮಾರ್‍ ಅವರು 2019ರ ಡಿಸೆಂಬರ್ 25 ರಂದು ವಿಶ್ವದ ಅತಿ ಎತ್ತರದ ಯೇಸುಕ್ರಿಸ್ತನ ಪ್ರತಿಮೆಗೆ ಅಡಿಪಾಯ ಹಾಕುವ ಮೂಲಕ ರಾಜಕೀಯ ಸಮರಕ್ಕೆ ನಾಂದಿ ಹಾಡಿದ್ದಾರೆ.

ಜನವರಿ 13, 2020 ರಂದು, ಹಿಂದೂ ಜಾಗೃತಿ ವೇದಿಕೆ (ಎಚ್‌ಜೆವಿ) ನೇತೃತ್ವದ ಸಂಘ ಪರಿವಾರದ ಗುಂಪುಗಳು “ಕನಕಪುರ ಚಲೋ ಪ್ರತಿಭಟನಾ ರ್ಯಾಲಿ ನಡೆಸಿದವು. ಈ ಯೋಜನೆಯನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು. ಪ್ರತಿಮೆ ನಿರ್ಮಾಣ ಯೋಜನೆಯನ್ನು ರದ್ದುಗೊಳಿಸಲು ಜನವರಿ 25ರವರೆಗೆ ಹಿಂದೂ ಜಾಗೃತಿ ವೇದಿಕೆ ಗಡುವು ನೀಡಿದೆ. ದೇಶದಲ್ಲಿ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದೆ.

ಉದ್ದೇಶಿತ 114 ಅಡಿ ಎತ್ತರದ ಕ್ರಿಸ್ತನ ಪ್ರತಿಮೆಯನ್ನು ಕ್ರಿಶ್ಚಿಯನ್ನರನ್ನು ಸಮಾಧಾನಪಡಿಸಲು ಮತ್ತು ಕಾಂಗ್ರೆಸ್ ಹೈಕಮಾಂಡ್ (ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯನ್ನು ಉಲ್ಲೇಖಿಸಿ)ನ್ನು ಮೆಚ್ಚಿಸಲು ಒಂದು “ಗಿಮಿಕ್ ಆಗಿದೆ ಎಂದು ಆಡಳಿತಾರೂಢ ಬಿಜೆಪಿ ಆರೋಪಿಸಿದೆ.

ಆರ್‌ಎಸ್‌ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಅವರ ನೇತೃತ್ವ ವಹಿಸಿದ್ದರಿಂದಾಗಿಯೇ ಪ್ರತಿಭಟನಾ ರ್ಯಾಲಿ ಮಹತ್ವ ಪಡೆದುಕೊಂಡಿದೆ. ಈ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್‌ ಮತ್ತು ಅವರ ಸಹೋದರ ಮತ್ತು ಬೆಂಗಳೂರು ಗ್ರಾಮೀಣ ಸಂಸದ ಡಿ.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನಕಪುರದಲ್ಲಿ  ಯಾವುದೇ ಮತಾಂತರವಾಗುತ್ತಿಲ್ಲ. ಸಚಿವರು ಅಲ್ಲಿಗೆ ಬೇಕಾದರೆ ಹೋಗಿ ಕಣ್ಣು ಬಾಯಿ ತೆರೆದು  ನೋಡಲಿ. ರಾಮನಗರವನ್ನು ಬಿಜೆಪಿ ನವ ಬೆಂಗಳೂರಾದರೂ ಮಾಡಿಕೊಳ್ಳಲಿ ನವ ಭಾರತವನ್ನಾದರೂ  ಮಾಡಿಕೊಳ್ಳಲಿ ಎಂದು ಡಿ ಕೆ ಶಿವಕುಮಾರ್‌ ಕುಟುಕಿದ್ದಾರೆ.  ಇನ್ನೂ 114 ಅಡಿ ಎತ್ತರದ ಯೇಸುವಿನ ಪ್ರತಿಮೆ ನಿರ್ಮಾಣ ಮಾಡುವುದೋ ಬೇಡವೋ ಎಂಬುದನ್ನು ಜನ ನಿರ್ಧರಿಸುತ್ತಾರೆ, ನಾನಲ್ಲ ಎಂದು ಹೇಳಿರುವ ಶಿವಕುಮಾರ್,  ಕಳೆದ 30 ವರ್ಷದಿಂದ ಶಾಸಕನಾಗಿದ್ದೇನೆ.  ಹೀಗಾಗಿ ಜನರ ನಿರ್ಧಾರವನ್ನು ಬೆಂಬಲಿಸುತ್ತೇನೆ ಎಂದು ಡಿ ಕೆ ಶಿವಕುಮಾರ್‍ ಹೇಳಿದ್ದಾರೆ.

ನಾನು ಈ ಭೂಮಿಯನ್ನು ಖರೀದಿಸಿ ಅದನ್ನು ಪ್ರತಿಮೆ ನಿರ್ಮಿಸಲು ಹಾರೋಬೆಲೆ ಕಪಲಾಬೆಟ್ಟ ಡೆವಲಪ್‌ಮೆಂಟ್ ಟ್ರಸ್ಟ್‌ಗೆ ನೀಡಿದ್ದೇನೆ. ಈ ಹಿಂದೆ ಕೂಡ ನನ್ನ ಕ್ಷೇತ್ರದ ಅನೇಕ ದೇವಾಲಯಗಳ ನವೀಕರಣಕ್ಕಾಗಿ ಹಣವನ್ನು ದಾನ ಮಾಡಿದ್ದೇನೆ. ಇಲ್ಲಿನ ಕ್ರಿಶ್ಚಿಯನ್ ಸಮುದಾಯವು ನನ್ನನ್ನು ಭೇಟಿ ಮಾಡಿ ಬೇಡಿಕೆ ಇಟ್ಟಿತ್ತು. ಈ ಪ್ರಕರಣದ ವಿವಾದ ಶೀಘ್ರದಲ್ಲೇ ಕೊನೆಗೊಳ್ಳಬೇಕು  ಆಶಿಸುತ್ತೇನೆ ಎಂದು ಶಿವಕುಮಾರ್ ಹೇಳಿದ್ದಾರೆ.

ಸೋಮವಾರ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ್‌ ಭಟ್ ಅವರು, ಕ್ರಿಶ್ಚಿಯನ್ ಮಿಷನರಿಗಳು “ಮುಗ್ಧ ಹಿಂದೂಗಳನ್ನು” ಮತಾಂತರಗೊಳಿಸಲು ಯತ್ನಿಸುತ್ತಿದ್ದಾರೆ. “ಮತ ಬ್ಯಾಂಕ್ ರಾಜಕೀಯ ಮಾಡುವುದನ್ನು ನಿಲ್ಲಿಸಿ. ನೀವು ಮತಗಳ ಮೇಲೆ ಕಣ್ಣಿಟ್ಟಿದ್ದೀರಿ. ನೀವು ಪ್ರತಿಮೆಗಳನ್ನು ನಿರ್ಮಿಸಲು ಬಯಸಿದರೆ, ಬಾಲಗಂಗಾಧರ ಸ್ವಾಮೀಜಿ ಅಥವಾ ಪೇಜಾವರ ಸ್ವಾಮೀಜಿಯ ಪ್ರತಿಮೆಯನ್ನು ನಿರ್ಮಿಸಬಹುದು. ಆದರೆ ನೀವು ಸೋನಿಯಾ ಗಾಂಧಿಗೆ ಪ್ರತಿಮೆ ನಿರ್ಮಿಸಲು ಆಯ್ಕೆ ಮಾಡಿದ್ದೀರಿ. ಕಪಲಾಬೆಟ್ಟದಲ್ಲಿ ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ನಾವು ಅನುಮತಿಸುವುದಿಲ್ಲ. ನಾವು ಯಾವುದೇ ತ್ಯಾಗಕ್ಕೆ ಸಿದ್ಧರಿದ್ದೇವೆ ಎಂದು 'ಡಿ ಕೆ’ ಸಹೋದರರಿಗೆ ಎಚ್ಚರಿಕೆ ನೀಡಿದರು.

ದಕ್ಷಿಣ ಕನ್ನಡದಲ್ಲಿ ಅವರು ನಡೆಸುತ್ತಿದ್ದ ಶಾಲೆಯ ಉದಾಹರಣೆಯನ್ನು ಉಲ್ಲೇಖಿಸಿ ಮಾತನಾಡಿ ಭಟ್, “ನಾನು ಕಲ್ಲಡ್ಕದಲ್ಲಿರುವ ನನ್ನ ಶಾಲೆಯಲ್ಲಿ ಈಶಾನ್ಯದಿಂದ ಬಂದ ಮಕ್ಕಳು ಕಲಿಯುತ್ತಿದ್ದಾರೆ. ನಾವು ಅವರನ್ನು ಮತಾಂತರಗೊಳಿಸಲು ಪ್ರಯತ್ನಿಸುವುದಿಲ್ಲ. ಆದರೆ ಬಡವರಿಗೆ ಸೇವೆ ಸಲ್ಲಿಸುವುದಾಗಿ ಹೇಳಿಕೊಳ್ಳುವ ಮಿಷನರಿಗಳು ತಮ್ಮ ಅನಾಥಾಶ್ರಮಗಳಲ್ಲಿನ ಮಕ್ಕಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿವೆ ”ಎಂದು ಭಟ್ ಆರೋಪಿಸಿದರು.

ನಾನು ಭಯಬೀತಗೊಂಡಿದ್ದೇನೆ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುತ್ತಿದ್ದಾರೆ ಎಂದು ಸುರೇಶ್ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಈಗ ಹಿಂದೂಗಳು ಕುಂಭಕರ್ಣ ನಿದ್ರೆಯಿಂದ ಎಚ್ಚರಗೊಂಡಿದ್ದಾರೆ. ಈ ಮತಾಂತರ ಪಿತೂರಿಯ ವಿರುದ್ಧ ಹೋರಾಡಲು ಭಗವಾನ್ ಹನುಮಂತರಂತೆ ಒಗ್ಗೂಡಿ ಶಕ್ತಿಯಾಗಿದ್ದಾರೆ, ಎಂದು ಹೇಳಿದರು.

ಯಾವುದೇ ಬೆಟ್ಟದ ಮೇಲೆ ಯಾರೂ ಶಿಲುಬೆಯನ್ನು ನಿರ್ಮಿಸದಂತೆ ನೋಡಿಕೊಳ್ಳಲು ತಮ್ಮದೇ ಗ್ರಾಮಗಳಲ್ಲಿ ಜಾಗ್ರತೆ ವಹಿಸಬೇಕು ಎಂದು ಕರೆ ನೀಡಿದ್ದರು. ಪ್ರತಿಮೆ ಯೋಜನೆಗಾಗಿ ಮಂಜೂರು ಮಾಡಿದ ಭೂಮಿಯನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕು ಮತ್ತು ಮುನೇಶ್ವರ ಬೆಟ್ಟದ ಮೇಲೆ ಸಂಗ್ರಹಿಸಿದ ಗ್ರಾನೈಟ್ ಚಪ್ಪಡಿಗಳನ್ನು ಸ್ಥಳಾಂತರಿಸಲು ಸ್ಥಳೀಯರು ಒತ್ತಾಯಿಸಬೇಕು ಎಂದು ಕರೆ ನೀಡಿದ್ದರು.

ಯೇಸುವಿನ 14 ಕೇಂದ್ರಗಳನ್ನು ಬೆಟ್ಟದ ಉದ್ದಕ್ಕೂ ಇರುವ ಸಣ್ಣ ದೇವಾಲಯಗಳಲ್ಲಿ ಚಿತ್ರಿಸಲಾಗಿದೆ. 15 ನೇ ನಿಲ್ದಾಣವು ವಿಶಿಷ್ಟವಾಗಿದೆ ಮತ್ತು ಇದು ಅಂತಿಮ ಹಂತವಾಗಿದೆ. ಅಲ್ಲಿ 114 ಅಡಿ ಎತ್ತರದ ಪ್ರತಿಮೆಯನ್ನು ಯೋಜಿಸಲಾಗಿದೆ. ಇಲ್ಲಿ, ಯೇಸು ತನ್ನ ಮರಣದ ಮೂರು ದಿನಗಳಲ್ಲಿ ತನ್ನ ಪುನರುತ್ಥಾನವನ್ನು ಸೂಚಿಸಲು 'ವಿಜಯ' ಚಿಹ್ನೆಯನ್ನು ತೋರುತ್ತಿದ್ದಾನೆ. ಯೇಸುವಿನ ಈ ಪ್ರತಿಮೆ ಅಪರೂಪಗಳಲ್ಲೊಂದಾಗಲಿದೆ. ಪ್ರತಿಮೆಯನ್ನು ಪೂರ್ಣಗೊಳಿಸಲು 25 ಕೋಟಿ ರೂ.ಗಳನ್ನು ಸಜ್ಜುಗೊಳಿಸಲು ನಾವು ಆಶಿಸುತ್ತೇವೆ ”ಎಂದು ಕಪಲಾಬೆಟ್ಟ ಡೆವಲಪ್‌ಮೆಂಟ್ ಟ್ರಸ್ಟ್‌ನ ಅಧ್ಯಕ್ಷ ಹೇಳುತ್ತಾರೆ.

ಬೆಟ್ಟದ ತುದಿಯಲ್ಲಿ ನಿರ್ಮಿಸಲಾದ ಶಿಲುಬೆಯು ಕನಿಷ್ಠ 400 ವರ್ಷಗಳಷ್ಟು ಹಳೆಯದು ಎಂದು ಸ್ಥಳೀಯರು ಹೇಳುತ್ತಾರೆ. ಹಾರೋಬೆಲೆ ಗ್ರಾಮದಲ್ಲಿ ವಾಸಿಸುವವರಲ್ಲಿ ಹೆಚ್ಚಿನವರು ಕ್ರಿಶ್ಚಿಯನ್ನರು. ಹೀಗಾಗಿ ಈ ವಿಚಾರದಲ್ಲಿ ವಿವಾದವನ್ನು ಸೃಷ್ಟಿಸುವ ಮೂಲಕ ಬಿಜೆಪಿ ಸರ್ಕಾರ ಶಿವಕುಮಾರ್ ಅವರನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮೊದಲನೆಯದಾಗಿ,ಈ ಬೆಟ್ಟವನ್ನು ಮುನೇಶ್ವರ ಬೆಟ್ಟ ಎಂದು ಕರೆಯುವುದಿಲ್ಲ. ಇದು ನಲ್ಲಳ್ಳಿ ಪಂಚಾಯತ್‌ನಲ್ಲಿರುವ ಕಪಲಾಬೆಟ್ಟ. ಕಪಾಲಿ ಬೆಟ್ಟ ಅಲ್ಲ, ಮುನೇಶ್ವರ ಸ್ವಾಮಿಯ ದೇವಾಲಯ ಇಲ್ಲಿ ಇರಲಿಲ್ಲ. ಮುನೇಶ್ವರ ಬೆಟ್ಟ ಮರಳೆಕುಪ್ಪೆ ಪಂಚಾಯತ್‌ನಲ್ಲಿದೆ. ಕಪಲಾಬೆಟ್ಟದ ಮೇಲಿರುವ ಶಿಲುಬೆ 1906 ರಿಂದಲೂ ಇದೆ. ಹಿಂದೂ ಮತ್ತು ಕ್ರಿಶ್ಚಿಯನ್ನರ ಹಳ್ಳಿಗರು ಕ್ರಿಸ್ತನು ಕಾಯಿಲೆಗಳನ್ನು ಗುಣಪಡಿಸುತ್ತಾರೆ. ಅವರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂಬ ನಂಬಿಕೆಯನ್ನು ಹೊಂದಿದ್ದಾರೆ ಎಂದು ಟ್ರಸ್ಟ್‌ನ ಅಧ್ಯಕ್ಷ ಚಿನ್ನಪ್ಪ ಹೇಳುತ್ತಾರೆ.

ಬೆಟ್ಟದಲ್ಲಿ ಪ್ರತಿಮೆ ಬರುತ್ತಿರುವುದಕ್ಕೆ ಸುತ್ತಮುತ್ತಲಿನ ಯಾವುದೇ ಹಿಂದೂಗಳಿಗೆ ಯಾವುದೇ ಆಕ್ಷೇಪವಿಲ್ಲ ಎಂದು ಹಿಂದೂ ಆಟೋ ಚಾಲಕ ರಮೇಶ್ ಹೇಳುತ್ತಾರೆ. ಹಾರೋಬೆಲೆ ಗ್ರಾಮವು ಸುಮಾರು 200 ಕ್ರಿಶ್ಚಿಯನ್ ಕುಟುಂಬಗಳನ್ನು ಹೊಂದಿದೆ ಮತ್ತು ಕೆಲವೇ ಕೆಲವು ಹಿಂದೂ ಕುಟುಂಬಗಳನ್ನು ಹೊಂದಿದೆ. ಆದರೆ ಹತ್ತಿರದ ಹಳ್ಳಿಗಳಲ್ಲಿ ಕ್ರೈಸ್ತರ ಸಂಖ್ಯೆ ತೀರಾ ಕಡಿಮೆ. ಕ್ರಿಶ್ಚಿಯನ್ ಕುಟುಂಬಗಳು 450 ವರ್ಷಗಳ ಹಿಂದೆಯೇ ಇಲ್ಲಿ ನೆಲೆಸಿವೆ. ರಾಮನಗರ ಜಿಲ್ಲೆಯಲ್ಲಿ ಯಾವುದೇ ಬಲವಂತದ ಮತಾಂತರ ನಡೆದಿಲ್ಲ. ಹತ್ತಿರದ ಹಳ್ಳಿಗಳಲ್ಲಿ ಕ್ರಿಶ್ಚಿಯನ್ ಕುಟುಂಬಗಳು ಇಲ್ಲದಿರುವುದು ಹೇಗೆ? ಇದರಲ್ಲಿ ಬಿಜೆಪಿಯ ರಾಜಕೀಯ ಮಾಡುತ್ತಿದೆ ಎನ್ನುತ್ತಾರೆ ಶಿವಕುಮಾರ್ ಬೆಂಬಲಿಗರೊಬ್ಬರು.

ಒಟ್ಟಿನಲ್ಲಿ ಕಪಲಾ ಬೆಟ್ಟದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣವು ರಾಜಕೀಯ ತಿರುವು ಪಡೆದುಕೊಂಡಿದೆ. ಮತಾಂತರ ಎಂಬ ಹೆಸರಿನಲ್ಲಿ ಪರ-ವಿರೋಧಗಳು ಹುಟ್ಟಿಕೊಂಡಿವೆ.