ಚಿತ್ಕೋಟದ ಕನ್ನಡ ದಳಪತಿ!

ಚಿತ್ಕೋಟದ ಕನ್ನಡ ದಳಪತಿ!

ಬೆಂಗಳೂರಿನಿಂದ ಕರ್ನಾಟಕದ ಉತ್ತರೋತ್ತರಕ್ಕೆ ಇರುವ ಒಂದು ಹಳ್ಳಿ ಚಿತ್ಕೋಟಾ ಕೆ. ಬಸವಕಲ್ಯಾಣ ತಾಲೂಕಿಗೆ ಸೇರಿರುವ ಚಿತ್ಕೋಟಾ ಮಹಾರಾಷ್ಟ್ರ‌ಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಗ್ರಾಮ.  ಉತ್ತರಕ್ಕೆ ಉಮರ್ಗಾ ತಾಲೂಕು, ಪಶ್ಚಿಮಕ್ಕೆ ಆಳಂದ ತಾಲೂಕು, ಪೂರ್ವಕ್ಕೆ ಬಸವಕಲ್ಯಾಣ ಇದ್ದರೂ, ಎಲ್ಲ ಪಟ್ಟಣಗಳೂ 30 ಕಿಮೀ. ದೂರವೇ ಇರುವುದರಿಂದ ಚಿತ್ಕೋಟಾ ಒಂದು ರೀತಿ ಮೂಲಿಕಟ್ಟಿನ ಊರು. ರಾಜಧಾನಿಯಿಂದ 682 ಕಿಮೀ. ದೂರದಲ್ಲಿರುವ ಇಂಥಹ ಗ್ರಾಮದಲ್ಲೂ ಕನ್ನಡದ ಕಂಪು, ಇಂಪು, ಪೆಂಪು ಇವತ್ತಿಗೂ ಹಸಿರಾಗಿದೆ ಎಂದರೆ ಅದಕ್ಕೆ  ಕನ್ನಡವನ್ನೇ ಉಸಿರಾಡುತ್ತ ಕನ್ನಡವನ್ನೇ ಮಾತನಾಡುತ್ತ, ಕನ್ನಡಿಗರೆಂಬ ಹೆಮ್ಮೆಯಿಂದ ಬದುಕುತ್ತಿರುವ ಇಲ್ಲಿನ ಜನರ ಕನ್ನಡತನವೇ ಕಾರಣ! ಚಿತ್ಕೋಟಾದ ಜನರಲ್ಲಿ ಇಂಥ ಕನ್ನಡಾಭಿಮಾನ ಮೊಳೆತು ಬೆಳೆದಿದ್ದು ಹೇಗೆ ಎಂದರೆ ಅದಕ್ಕೆ ಉತ್ತರ ಮಲ್ಲಿನಾಥ ವಾಡೇಕರ್.

ಮಲ್ಲಿನಾಥ ವಾಡೇಕರ್ ಅವರ ಈ ಕನ್ನಡ ಕೈಂಕರ್ಯದ ಕುರಿತು ನನಗೆ ಹೇಳಿದ್ದು ಕಲಾವಿದ ಗೆಳೆಯ ರಾಮಚಂದ್ರ ಶೇರಿಕಾರ.

ಹೈದರಾಬಾದ್ ನಿಜಾಮರ ಕಾಲದಲ್ಲಿ ಇಲ್ಲಿ ಹಳ್ಳಿ ಹಳ್ಳಿಗೆ ಪೊಲೀಸ್ ಪಾಟೀಲರಿದ್ದರು. ಆಯಾ ಹಳ್ಳಿಯ ಆಗುಹೋಗುಗಳನ್ನು ವ್ಯಾಜ್ಯ ವಿವಾದಗಳನ್ನು ಬಗೆಹರಿಸುವ ಜವಾಬ್ದಾರಿ ಇವರದೇ ಆಗಿತ್ತು. ಕಾಲಾನಂತರ ಪೊಲೀಸ್ ಪಾಟೀಲರ ಹುದ್ದೆಗಳನ್ನು ದಳಪತಿ ಎಂದು ಕರೆದು ಊರೂರಿಗೆ ದಳಪತಿಗಳನ್ನು ನೇಮಿಸಲಾಗಿತ್ತು. ಕರ್ನಾಟಕದ ಬೀದರ್, ಕಲ್ಬುರ್ಗಿ, ಬಳ್ಳಾರಿ ಮತ್ತು ರಾಯಚೂರು

ಪ್ರದೇಶಗಳಲ್ಲಿ ಹೈದರಾಬಾದ್ ನಿಜಾಮರಿಂದ ವಿಮೋಚನೆಗೊಂಡ ನಂತರವೂ ಈ ಆಡಳಿತ ಪದ್ಧತಿ ಮುಂದುವರೆದಿತ್ತು. ಹೀಗಾಗಿ ಆ ಭಾಗದಲ್ಲಿ ಪೊಲೀಸ್ ಪಾಟೀಲ, ದಳಪತಿ ಎಂಬ ನಾಮಧೇಯರು ಈಗಲೂ ಸಿಗುತ್ತಾರೆ.

ಹೀಗೆ ಈ ಭಾಗದಲ್ಲಿ ದಳಪತಿ ಆಗಿ ಕಾರ್ಯನಿರ್ವಹಿಸಿದವರಲ್ಲಿ ನಮ್ಮ ಮಲ್ಲಿನಾಥ ವಾಡೇಕರರೂ ಒಬ್ಬರು. ಭಾಷಾವಾರು ಪ್ರಾಂತಗಳ ವಿಭಜನೆಯ ಬಳಿಕ ಭಾಷಾಭಿಮಾನದ ಕೆಚ್ಚು ಹೆಚ್ಚಾಗಿ ಗಡಿ ಪ್ರದೇಶದ ಇಂಥ ಊರುಗಳಲ್ಲೆ ತೀವ್ರವಾಗಿರುತ್ತದೆ. ಅದು ಒಂದು ರೀತಿ ಬೂದಿ ಮುಚ್ಚಿದ ಕೆಂಡದಂತೆ. ಅದನ್ನು ಆಯಾ ಕಾಲದಲ್ಲೇ ಊಬಿ ಉರಿಯಾಗಿಸದಿದ್ದಲ್ಲಿ ಅದು ನಂದಿ ಬೂದಿಯೆ ಆಗಿಬಿಡುತ್ತದೆ. ಚಿತ್ಕೋಟಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಾತಂತ್ರ್ಯಾನಂತರ ಕನ್ನಡದ ಕಿಚ್ಚನ್ನು ಊಬಿ ಅದನ್ನು ಬೆಳಕಾಗಿಸುವಲ್ಲಿ ಮಲ್ಲಿನಾಥ ವಾಡೇಕರರು ಪಟ್ಟ ಪಾಡು ನಿಜಕ್ಕೂ ಕುತೂಹಲಕಾರಿ. 

ಅದು 1960/70 ರ ದಶಕ. ಚಿತ್ಕೋಟಾ ಮೂಲಿಕಟ್ಟಿನ ಊರಾದರೂ ಆ ಕಾಲಕ್ಕೆ ಮರಾಠಿ, ತೆಲುಗು, ಉರ್ದು ಭಾಷೆಗಳ ಪ್ರಭಾವಲಯದಲ್ಲಿ ಕನ್ನಡ ಏದುಸಿರು ಬಿಡುತಿತ್ತು. ಕಲ್ಯಾಣ ಶರಣರ ಕನ್ನಡದ ಚಿತ್ತಜ್ಯೋತಿ ಆಂತರ್ಯದಲ್ಲಿ ಉರಿಯುತಿದ್ದರೂ ಬಹಿರಂಗದಲ್ಲಿ ನಿಸ್ತೇಜವಾಗಿತ್ತು. ಕನ್ನಡವನ್ನು ಮತ್ತೆ ಮನೆಮನಗಳಲ್ಲಿ ಬೆಳಗಿಸಬೇಕೆಂಬ ಧ್ಯೇಯದಿಂದ ಮಲ್ಲಿನಾಥರ ಹೃದಯ ತಹತಹಿಸುತಿತ್ತು. 

ತನ್ನ ಸಂಗಾತಿಗಳಾದ ಶಿವರುದ್ರಪ್ಪ ಗುರಪ್ಪಗೋಳ, ಗುರುಶಾಂತಪ್ಪ ಮಾನಿಂಗೋಳ, ಶಿವಲೋಚನ ಭೀಮಾಣೆ, ಕರಬಸಪ್ಪ ನವಣೆ, ಶರಣಪ್ಪ ಸಾತಪಗೋಳ, ನಾಗಣ್ಣ ಭೀಮಾಗೋಳ ಮತ್ತು ಶರಣಪ್ಪ ಮಾದಪಗೋಳ ಅವರ ಜೊತೆ ವಿಚಾರ ವಿಮರ್ಶೆ ಮಾಡ ಹತ್ತಿದರು. ಈ ಎಲ್ಲರೂ ಒಂದು ರೀತಿಯಲ್ಲಿ ಕಲಾವಿದರೆ ಆಗಿದ್ದರು. ಶಿವರುದ್ರಪ್ಪ ಗುರಪ್ಪಗೋಳ ಹಾರ್ಮೋನಿಯಂನ್ನು ಅಕ್ಷರಶಃ ನುಡಿಸಬಲ್ಲ ಖ್ಯಾತಿ ಹೊಂದಿದ್ದರು. ಹಾರ್ಮೋನಿಯಂ ನುಡಿಸುವಾಗ ಶಿವರುದ್ರಪ್ಪ ಎಷ್ಟೊಂದು   ತಾದ್ಯಾತ್ಮರಾಗಿರುತ್ತಿದ್ದರೆಂದರೆ, ಆಗ ಅವರನ್ನು ಯಾರಾದರೂ ಮಾತನಾಡಿಸಿದರೆ ಹಾರ್ಮೊನಿಯಂ ಮೂಲಕವೆ ಅವರೊಂದಿಗೆ ಸಂಭಾಷಿಸುತ್ತಾರೆ ಎಂಬುದು ಜನಜನಿತವಾಗಿತ್ತು.  ಉಳಿದ ಸ್ನೇಹಿತರಾದರೂ ಹೀಗೆ ಒಂದಲ್ಲ ಒಂದು ಕ್ಷೇತ್ರದಲ್ಲಿ ಸಿದ್ಧಹಸ್ತರಾಗಿದ್ದವರೇ ಆಗಿದ್ದರು. ಈ ಪ್ರತಿಭಾವಂತ ಯುವಕರ ತಂಡದ ಮೂಲಕ  ಮನೆಮನೆ,ಮನಮನಗಳಲ್ಲಿ ಕನ್ನಡದ ಧೀಶಕ್ತಿಯನ್ನು ಉದ್ಧೀಪಿಸಬೇಕೆಂಬುದು ಮಲ್ಲಿನಾಥರ ಕನಸಾಗಿತ್ತು.

ಚಿಕ್ಕಂದಿನಿಂದಲೂ ಒಳ್ಳೆಯ ಮಾತುಗಾರನಾಗಿದ್ದ ಮಲ್ಲಿನಾಥ, ಹಾರಕೂಡದ ಚನ್ನಬಸವ ಶಿವಯೋಗಿಗಳು ಹಾಗೂ ಹೊಳಕುಂದಿ ಮಠದ ಶ್ರೀಗಳ ಒಡನಾಟದಲ್ಲಿ 12ನೇ ಶತಮಾನದ ಶರಣ ಚಳುವಳಿಯ ಕುರಿತು ಕೇಳುತ್ತ, ತಿಳಿಯುತ್ತ ಸಮಕಾಲೀನ ಸಮಾಜದ ದುರ್ದೆಸೆಯ ಬಗ್ಗೆ ಪರಿತಾಪ ಪಡುತಿದ್ದ. ಸಮಸಮಾಜದ ಕನಸು ಆಗಲೇ ಅವನ ಕಂಗಳಲ್ಲಿ ಮಿಂಚು ಹುಟ್ಟಿಸಿತ್ತು. ಮಾತುಗಾರ ಮಲ್ಲಿನಾಥ ಶರಣರ ವಚನ, ದಾಸರ ಕೀರ್ತನೆ, ಶರೀಫಸಾಹೇಬರ ತತ್ವಪದಗಳನ್ನು ಓದಿ ಹಾಡುತ್ತ ವಾಗ್ಮಿಯೆ ಆಗಿಬಿಟ್ಟಿದ್ದ .  ಇದರ ಸುಳುಹನ್ನರಿತ ಚನ್ನಬಸವ ಶಿವಯೋಗಿಗಳು ಮಲ್ಲಿನಾಥನಿಗೆ ಪ್ರವಚನ ಕಲೆಯನ್ನು ಧಾರೆ ಎರೆದರು‌. ಆಗಲೇ ಸ್ವಚ್ಛತಾ ಅಭಿಯಾನ, ಜಲಸಂರಕ್ಷಣೆ ಕುರಿತಾಗಿ ಜನಜಾಗೃತಿಯ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಚನ್ನಬಸವ ಶಿವಯೋಗಿಗಳು ಮಲ್ಲಿನಾಥರ ಹಾದಿಗೂ ಕೈದೀಪವಾದರು. 

ಚಿತ್ಕೋಟೆಯಲ್ಲಿ ಇದೇ ಸಮಯಕ್ಕೆ ಭಜನಾ ಮಂಡಳಿ ಕಟ್ಟಿದ ಮಲ್ಲಿನಾಥರು, ಶರಣರ ವಚನಗಳನ್ನೂ, ದಾಸರ ಪದಗಳನ್ನೂ, ಸಂತ ಮಹಾಂತರ ತತ್ವಪದಗಳನ್ನೂ ಹಾಡುತ್ತ ಗ್ರಾಮದಲ್ಲಿ ಕನ್ನಡದ ಸೊಗಡನ್ನು ಜನಮನದಲ್ಲಿ ಬಿತ್ತಿ, ಕನ್ನಡದ ಪರಂಪರೆಯನ್ನು ಉನ್ಮೀಲನಗೊಳಿಸಿದರು.

ಭಜನೆಯ ಮೂಲಕ ಚಿತ್ಕೋಟದ ಜನತೆಯನ್ನು ಮಾತ್ರ ತಲುಪಬಹುದಾಗಿತ್ತು. ಅದರ ಕಾರ್ಯಸಾಧನೆ ಅಸಾಧಾರಣವಾದರೂ ಕಾರ್ಯಕ್ಷೇತ್ರ ಚಿಕ್ಕದೆ ಎಂಬ ಭಾವ ಮಲ್ಲಿನಾಥ ವಾಡೇಕರರಲ್ಲಿ ಮೂಡತೊಡಗಿತು. ಕನ್ನಡದ ಕಂಪನ್ನು ಸುತ್ತಮುತ್ತಲಿನ ಹಳ್ಳಿಗಳಲ್ಲೂ ಪಸರಿಸುವ ಬಗೆ ಯಾವುದೆಂದು ಅವರು ಚಿಂತಿಸತೊಡಗಿದರು. ಆಗ ಅವರಿಗೆ ಹೊಳೆದದ್ದೇ ಶಿವಲೀಲಾಮೃತ ಪ್ರವಚನ ಮಂಡಳಿ.

ತನ್ನ ಜೊತೆಗಿದ್ದ ಉತ್ಸಾಹಿ ತರುಣ ಗೆಳೆಯರೊಡಗೂಡಿ ಶಿವಲೀಲಾಮೃತ ಪ್ರವಚನ ಮಂಡಳಿ ಕಟ್ಟಿದ ಮಲ್ಲಿನಾಥ ವಾಡೇಕರರು, ಬಸವಜಯಂತಿ ಮತ್ತು ಶ್ರಾವಣದ ಸಂದರ್ಭದಲ್ಲಿ ಬೇರೆ ಬೇರೆ ಊರುಗಳಲ್ಲಿ ಪ್ರವಚನಗಳನ್ನು ಹಮ್ಮಿಕೊಳ್ಳುತ್ತ ಬಂದರು.  ತಾವೇ ಸ್ವತಃ ಪ್ರವಚನಕಾರರಾಗಿದ್ದ ವಾಡೇಕರರು ಕನ್ನಡದ ಅಂತಃಸತ್ವವನ್ನು ಗಡಿನಾಡಿನ ಕನ್ನಡಿಗರಿಗೆ ಉಣಬಡಿಸತೊಡಗಿದರು. ಹತ್ತಾರು ವರ್ಷಗಳ ಕಾಲ ನಿರಂತರ  ಪ್ರವಚನ ಏರ್ಪಡಿಸುವ ಮೂಲಕ ಗಡಿಯಲ್ಲಿ ಕನ್ನಡದ ತೇರು ಎಳೆದ  ವಾಡೇಕರರು, ಇವತ್ತು ಕನ್ನಡಿಗರೆಲ್ಲರ ಪಾಲಿಗೆ ಪ್ರಾತಃಸ್ಮರಣೀಯರು. ಅಷ್ಟೇ ಅಲ್ಲ, ಅವರು ದಿಟಕ್ಕೂ ಕನ್ನಡದ ದಳಪತಿ.