ಮನರಂಜನೆ ದೃಷ್ಟಿಯಿಂದ ಓ.ಕೆ. ದೆವ್ವ ಇರೋದೇ ನಿಜ ಅನ್ನೋದ್ಯಾಕೆ?

ಹಾಸ್ಯ ಪ್ರಜ್ಞೆಯಿಂದ ಸಿನಿಮಾ ಒಪ್ಪಿಕೊಳ್ಳಬಹುದು ಆದರೆ ಸಮಾಜಕ್ಕೆ, ಸಮಾಜದಲ್ಲಿನ ಜನರಿಗೆ ದೆವ್ವ ಭೂತಗಳಿವೆ ಎಂಬುವುದನ್ನು ಮನದಟ್ಟು ಮಾಡುವಂತಹ ಚಿತ್ರವನ್ನು ಒಪ್ಪಿಕೊಳ್ಳುವುದು ಹೇಗೆ?

ಮನರಂಜನೆ ದೃಷ್ಟಿಯಿಂದ ಓ.ಕೆ. ದೆವ್ವ ಇರೋದೇ ನಿಜ ಅನ್ನೋದ್ಯಾಕೆ?

ಮನುಷ್ಯಗಿರೋದು ದೆವ್ವಗಳಿಗೆ ಇಲ್ಲದೆ ಇರೋದು ಒಂದೇ ಅದುವೆ ಭಯ ಎಂದು ಹೇಳುವ ದೆವ್ವಗಳಿಗೆ ತಾವು ಮನುಷ್ಯರೊ ಅಥವಾ ದೆವ್ವಗಳೊ ಎಂಬ ಅನುಮಾನ.  ದೆವ್ವಗಳೇ ಮನುಷ್ಯರೊ ಮನುಷ್ಯರೇ ದೆವ್ವಗಳೊ ಎಂಬ ಗೊಂದಲದ ಜೊತೆ ಹಾಸ್ಯ.ಇದು ಮನೆ ಮಾರಾಟಕ್ಕಿದೆ ಚಿತ್ರ.

ಈ ಚಿತ್ರದಲ್ಲಿ ರಘುಪತಿ ಪಾತ್ರದಲ್ಲಿ ಚಿಕ್ಕಣ್ಣ, ರಾಘವ್ ಪಾತ್ರದಲ್ಲಿ ಸಾಧು ಕೋಕಿಲಾ, ರಾಜ್  ಪಾತ್ರದಲ್ಲಿ ಕುರಿ ಪ್ರತಾಪ್, ರಾಮ್ ಪಾತ್ರದಲ್ಲಿ ರವಿಶಂಕರ್, ದೆವ್ವಗಳ  ಪಾತ್ರದಲ್ಲಿ  ಶೃತಿ ಹರಿಹರನ್, ಹಿರಿಯ ನಟ ಶಿವರಾಮ್, ಟಿಕ್ ಟಾಕ್ ಖ್ಯಾತಿಯ ಪುಟಾಣಿ ರಶ್ಮಿತಾ ಕಾಣಿಸಿಕೊಂಡಿದ್ದಾರೆ.  ಸಿನಿಮಾದಲ್ಲಿ ಹಾಸ್ಯ ನಟರ ದಂಡೇ ಇದೆ. ಹಣಕ್ಕಾಗಿ, ಆಸ್ತಿಗಾಗಿ  ಹೆತ್ತ ತಂದೆಯನ್ನು  ಸಾಕು ತಂಗಿಯರನ್ನು  ಗುಂಡಿಕ್ಕಿ ಕೊಲ್ಲುವ ಶ್ರವಣ ಕುಮಾರ್ ಪಾತ್ರದಲ್ಲಿ ರಾಜೇಶ್ ನಟಿಸಿದ್ದಾರೆ.

ದೆವ್ವಗಳು ವಾಸಿಸುವ ಮನೆಯನ್ನು ಮಾರಾಟ ಮಾಡುವುದರ ಸುತ್ತಲೂ ಕತೆಯನ್ನು ಹೆಣೆಯಲಾಗಿದೆ.  ಮನೆ ಮಾರಾಟ ಮಾಡಲು ದೆವ್ವಗಳಿಲ್ಲವೆಂಬುವುದನ್ನು ನಿರೂಪಿಸುವುದೇ ರಘುಪತಿಗೆ ದೊಡ್ಡ ಸವಾಲಾಗುತ್ತೆ. ಮೊದಲ ಪ್ರಯತ್ನದಲ್ಲಿ ಸೋತರೂ ಎರಡನೇ ಪ್ರಯತ್ನದಲ್ಲಿ ಗೆಲುವು ಸಾಧಿಸುವುದಕ್ಕೆ ಚಿಕ್ಕಣ್ಣನ ಜೊತೆ ರಾಘವ್, ರಾಜ,ರಾಮ್ ಜೊತೆಯಾಗುತ್ತಾರೆ. ದೆವ್ವಗಳೊಂದಿಗೆ ವಾಸಿಸಲು ಮುಂದಾಗುತ್ತಾರೆ.

ಇಂದೊಂದು ಪಕ್ಕಾ ಕಾಮಿಡಿ ಕಮ್ ಹಾರರ್ ಮತ್ತು ಫ್ಯಾಮಿಲಿ ಎಂಟರ್ಟೇನ್ಮೆಂಟ್ ಸಿನಿಮಾ. ಹಾಸ್ಯ ನಟರ ಪಾತ್ರಗಳಂತೂ  ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ಸಿನಿಮಾದ ದೃಶ್ಯಗಳು ಮತ್ತು ಕೆಲವು ಶಬ್ಧಗಳು ಮೈಜುಮ್ಮೆನ್ನುವಂತೆ ಮಾಡುತ್ತವೆ. 

ಹಾಸ್ಯ ಪ್ರಜ್ಞೆಯಿಂದ ಸಿನಿಮಾ ಒಪ್ಪಿಕೊಳ್ಳಬಹುದು ಆದರೆ ಸಮಾಜಕ್ಕೆ, ಸಮಾಜದಲ್ಲಿನ ಜನರಿಗೆ ದೆವ್ವ ಭೂತಗಳಿವೆ ಎಂಬುವುದನ್ನು ಮನದಟ್ಟು ಮಾಡುವಂತಹ  ಚಿತ್ರವನ್ನು  ಒಪ್ಪಿಕೊಳ್ಳುವುದು ಹೇಗೆ.?

ಇದರಿಂದ ಆಚೆಗೆ ನೋಡಿದರೆ ಒಳ್ಳೆಯ ಸಿನಿಮಾ. ಆತ್ಮ ಪ್ರೇತಾತ್ಮಗಳ ನಡುವೆ ಜೀವಾತ್ಮಗಳ ಹಾಸ್ಯ ಪ್ರೇಕ್ಷಕರ ಮನ ಗೆಲ್ಲುತ್ತೆ. ಸಿನಿಮಾದ ಕೊನೆಯ ದೃಶ್ಯದಲ್ಲಿ ಸೇಡಿಗೆ ಸೇಡೇ ಉತ್ತರ ಎನ್ನುವ ಹಾಗೆ ಶೃತಿ ಹರಿಹರನ್ ಶ್ರವಣ್ ಕುಮಾರನನ್ನು ಗುಂಡಿಕ್ಕಿ ಕೊಲ್ಲುತ್ತಾಳೆ. ಸೇಡಿಗೆ ಸೇಡು ಬಯಸುವುದು ವಿಕೃತ ಮನಸ್ಸುಗಳು ಆ ವಿಕೃತ ಮನಸ್ಸು ದೆವ್ವಗಳಿಗಿದೆ ಎಂಬುದನ್ನು ಈ ಚಿತ್ರದ ಮೂಲಕ ಮತ್ತೆ ನಿರೂಪಿಸಲಾಗಿದೆ.

ಮಂಜು ಸ್ವರಾಜ್ ನಿರ್ದೇಶನ ಮಾಡಿದ ಚಿತ್ರಕ್ಕೆ ಅಭಿಮಾನ್ ರಾಘವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಸ್ ಬಾಬು ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ.