ಜಿಂದಾಲ್ ಉಕ್ಕು ಕಂಪನಿಗೆ ಒಡಿಶಾ ಅಂದರೆ ಅಷ್ಟಕ್ಕಷ್ಟೇ: ಕರ್ನಾಟಕದ ಗಣಿ ಪ್ರದೇಶ ಅಂದರೆ ಎಲ್ಲಿಲ್ಲದ ಪ್ರೇಮ!   ಯಾಕೆ ಹೀಗೆ?

ಜಿಂದಾಲ್ ಉಕ್ಕು ಕಂಪನಿಗೆ ಒಡಿಶಾ ಅಂದರೆ ಅಷ್ಟಕ್ಕಷ್ಟೇ: ಕರ್ನಾಟಕದ ಗಣಿ ಪ್ರದೇಶ ಅಂದರೆ ಎಲ್ಲಿಲ್ಲದ ಪ್ರೇಮ!   ಯಾಕೆ ಹೀಗೆ?

ಉಕ್ಕು ತಯಾರಿಕೆಯ ದೈತ್ಯ ಕಂಪನಿ ಜಿಂದಾಲ್(ಜೆಎಸ್ ಡಬ್ಲ್ಯು)ಗೆ ದೇಶದ ಇತರ ರಾಜ್ಯಗಳಿಗಿಂತ ಕರ್ನಾಟಕವೇ ಪ್ರೀತಿಪಾತ್ರ. ಹೀಗಾಗಿ ಬಳ್ಳಾರಿಯೊಂದರಲ್ಲೇ ಗಣಿ ಪ್ರದೇಶಗಳನ್ನು ಹೊಂದುವುದರಲ್ಲಿ ಇತರ ಉದ್ಯಮಿ, ಕಂಪನಿಗಳನ್ನು ಹಿಂದಿಕ್ಕಿ ಸಿಂಹಪಾಲು ಹೊಂದಿದೆ. ದೂರದ ಒಡಿಶಾದಲ್ಲಿ ಗಣಿ ಪ್ರದೇಶಗಳಿದ್ದರೂ ಅತ್ತ ತಲೆ ಹಾಕಿಯೂ ಮಲಗದ ಜಿಂದಾಲ್ ಕರ್ನಾಟಕದಲ್ಲಿ ಹೆಚ್ಚಿನ ದರವನ್ನು ನಮೂದಿಸಿ ಶರವೇಗದಲ್ಲೇಕೆ ಧಾವಿಸುತ್ತಿದೆ ಎಂಬ ಪ್ರಶ್ನೆಗೂ ಉತ್ತರಗಳು ದೊರೆಯಲಾರಂಭಿಸಿವೆ.ಈ ಗುಟ್ಟನ್ನು ಜಿ.ಮಹಂತೇಶ್ ಬಯಲು ಮಾಡಿದ್ದಾರೆ. 

ಕಬ್ಬಿಣ ಅದಿರು ಗಣಿಗಳನ್ನು ಹರಾಜಿನ ಮೂಲಕ ಸ್ವಾಧೀನಪಡಿಸಿಕೊಳ್ಳುತ್ತಿರುವ ಜಿಂದಾಲ್ ಸ್ಟೀಲ್ ಕಂಪನಿ ಕರ್ನಾಟಕದ ಗಣಿ ಪ್ರದೇಶಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದೆ. ಆದರೆ ಒಡಿಶಾದಲ್ಲಿ ಗಣಿಗಾರಿಕೆ ಗುತ್ತಿಗೆಗಳು ಹರಾಜಿಗೆ ಬಂದಾಗ ಜಿಂದಾಲ್ ಸ್ಟೀಲ್ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ. ಕರ್ನಾಟಕದಲ್ಲಿನ ಗಣಿ ಪ್ರದೇಶಗಳಿಗೆ ಹೆಚ್ಚಿನ ದರದಲ್ಲಿ ಬಿಡ್ ಮಾಡಿರುವ ಜಿಂದಾಲ್ ಸ್ಟೀಲ್ ಕಂಪನಿ,  ಒಡಿಶಾದಲ್ಲಿನ ಗಣಿ ಪ್ರದೇಶಗಳಿಗೆ ಕಡಿಮೆ ದರದಲ್ಲಿ ಬಿಡ್ ಮಾಡುತ್ತಿವೆ. 

ಕರ್ನಾಟಕ ಸರ್ಕಾರ ನಡೆಸಿದ್ದ ಸಿ-ವರ್ಗದ ಗಣಿ ಗುತ್ತಿಗೆಗಳ ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಜಿಂದಾಲ್ ಸ್ಟೀಲ್ಸ್ ಲಿಮಿಟೆಡ್ ಮೇಲುಗೈ ಸಾಧಿಸಿದೆ ಎಂಬ ಖ್ಯಾತಿ ಹೊಂದಿದ್ದರ ಬೆನ್ನಲ್ಲೇ ಕರ್ನಾಟಕಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದರ ಹಿಂದಿನ ಗುಟ್ಟು ಕೂಡ ಇದೀಗ ಬಹಿರಂಗಗೊಂಡಿದೆ. 

ಕರ್ನಾಟಕದಲ್ಲಿನ ಗಣಿ ಪ್ರದೇಶಗಳ ಮೂಲ ಬೆಲೆಯ ಶೇ. 125 ರಷ್ಟು ಬಿಡ್ ಮಾಡಿರುವ ಜಿಂದಾಲ್, ಒಡಿಶಾದಲ್ಲಿ ಶೇ. 30ಕ್ಕಿಂತ ಹೆಚ್ಚಿನ ದರವನ್ನೂ ನಮೂದಿಸುತ್ತಿಲ್ಲ. ಒಡಿಶಾದಲ್ಲಿ ಗಣಿ ಪ್ರದೇಶಗಳ ಬಗ್ಗೆ ಜಿಂದಾಲ್ ಗೆ ಆಸಕ್ತಿ ಇದೆಯಾದರೂ ಹರಾಜು ಸಂದರ್ಭದಲ್ಲಿ ಹೆಚ್ಚಿನ ದರವನ್ನೇನೂ ನಮೂದಿಸುತ್ತಿಲ್ಲ. 

ಕಂಪನಿ ಮೂಲಗಳ ಪ್ರಕಾರ ಉಕ್ಕು ಸ್ಥಾವರಕ್ಕೆ ಬಳ್ಳಾರಿಯ ಗಣಿ ಪ್ರದೇಶಗಳು ಹತ್ತಿರ ಇರುವ ಕಾರಣದಿಂದಲೇ ಹೆಚ್ಚಿನ ದರದಲ್ಲಿ ಬಿಡ್ ಮಾಡಲಾಗುತ್ತಿದೆ. ಕಚ್ಚಾ ವಸ್ತುಗಳನ್ನು ಉಕ್ಕು ಸ್ಥಾವರಕ್ಕೆ ಸಾಗಿಸಲು ಸಾರಿಗೆ ವೆಚ್ಚ ಕಡಿಮೆ ಇರುವುದೇ ಇದಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆಯಾದರೂ ಆದರೆ ಅದೇ ನಿಜವಾದ ಕಾರಣವಲ್ಲ.  

ಬಳ್ಳಾರಿ ಸುತ್ತಮುತ್ತ ಗಣಿ ಪ್ರದೇಶಗಳನ್ನು ಹೊಂದಲು ಹೆಚ್ಚು ದರವನ್ನು ನಮೂದಿಸುವ ಮೂಲಕ ಇತರ ಉದ್ಯಮಿ ಮತ್ತು ಪ್ರತಿಷ್ಠಿತ ಉಕ್ಕು ಕಂಪನಿಗಳನ್ನು ಬಳ್ಳಾರಿಯಿಂದ ಕಾಲ್ತೆಗೆಸುವ ತಂತ್ರವೂ ಇದರಲ್ಲಿ ಅಡಗಿದೆ ಎನ್ನಲಾಗಿದೆ. 

ಮಹಾರಾಷ್ಟ್ರದ ಡಾಲ್ವಿಯಲ್ಲಿರುವ ತನ್ನ ಘಟಕದ ಸಾಮರ್ಥ್ಯವನ್ನು ವರ್ಷಕ್ಕೆ 10 ದಶಲಕ್ಷ ಟನ್ ಗಳಿಗೆ ದ್ವಿಗುಣಗೊಳಿಸಲು ಮುಂದಾಗಿರುವ ಜಿಂದಾಲ್ ಗೀಗ ಕಚ್ಛಾವಸ್ತುಗಳ ಅಗತ್ಯ ಹೆಚ್ಚಿದೆ. ಹೀಗಾಗಿ ಉತ್ಪಾದನೆ ಮತ್ತು ಸಾರಿಗೆ ವೆಚ್ಚ ಕಡಿಮೆಗೊಳಿಸುವ ಭಾಗವಾಗಿ ಕರ್ನಾಟಕದ ಗಣಿ ಪ್ರದೇಶಗಳಲ್ಲೆ ಹೆಚ್ಚಿನ ಆಸಕ್ತಿ ವಹಿಸುತ್ತಿದೆ. 

ಬಳ್ಳಾರಿ ಜಿಲ್ಲೆಯೊಂದರಲ್ಲೇ 667.185 ಎಕರೆ ವಿಸ್ತೀರ್ಣ ಪ್ರದೇಶಕ್ಕೆ ಅರಣ್ಯ ಬಿಡುಗಡೆ ಅನುಮತಿ ಪಡೆದಿರುವ ಜಿಂದಾಲ್, ಗಣಿ ಪ್ರದೇಶಗಳಲ್ಲಿ ಸಿಂಹಪಾಲು ಹೊಂದಿದೆ. ಇಷ್ಟೇ ಆಸಕ್ತಿ ಒಡಿಶಾದ ಗಣಿ ಪ್ರದೇಶಗಳ ಮೇಲಿಲ್ಲ.

ಒಡಿಶಾದ ಗಣಿ ಪ್ರದೇಶಗಳತ್ತ ಹೆಚ್ಚು ಆಸಕ್ತಿ ವಹಿಸದಿರಲು ಬೇರೆ ಕಾರಣಗಳೇ ಇವೆ. ಅಲ್ಲಿನ ರಾಜ್ಯದ ಗಣಿಗಳು ಹೆಚ್ಚು ವಿಸ್ತೀರ್ಣದಿಂದ ಕೂಡಿದೆಯಲ್ಲದೆ, ಈ ಗಣಿ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ಹೆಚ್ಚಿನ ಹಣದ ಅವಶ್ಯಕತೆ ಇದೆ. ಹಾಗೆಯೇ  ಸಾರಿಗೆ ವೆಚ್ಚವು ಹೆಚ್ಚಿರುವ ಕಾರಣ ಒಡಿಶಾದತ್ತ ಹೆಚ್ಚಿನ ಅಸಕ್ತಿ ವಹಿಸದ ಜಿಂದಾಲ್ ಗೆ ಕರ್ನಾಟಕದ ಗಣಿ ಪ್ರದೇಶಗಳೇ ಹೆಚ್ಚು ಅನುಕೂಲಕರವಾಗಿದೆ ಎನ್ನುತ್ತಾರೆ ಗಣಿ ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಯೊಬ್ಬರು.

ಅದೇ ರೀತಿ ಒಡಿಶಾ ಸರ್ಕಾರವು ಸುಮಾರು 45 ಕಬ್ಬಿಣದ ಅದಿರು ಗಣಿಗಳನ್ನು ನಿರ್ಬಂಧಿಸಲು ಮುಂದಾಗುವ ಸುಳಿವು ನೀಡಿದೆ. ಇಲ್ಲಿನ ಗುತ್ತಿಗೆಗಳಲ್ಲಿ 570 ದಶಲಕ್ಷ ಟನ್ ಗಳಷ್ಟು ಅದಿರು ಮೀಸಲಿದೆ. ಆದರೆ ಇದರ ಅವಧಿ  2020ರಲ್ಲಿ ಕೊನೆಗೊಳ್ಳುವುದರಿಂದ ಕರ್ನಾಟಕದ ಗಣಿ ಪ್ರದೇಶಗಳ ಬಾಗಿಲು ತಟ್ಟುತ್ತಿದೆ. 

ಇದಷ್ಟೇ ಅಲ್ಲ, ಮಾರುಕಟ್ಟೆಯಲ್ಲಿ ಬೇಡಿಕೆ ಇರದಿದ್ದರೂ ಗಣಿ ಸಾಮರ್ಥ್ಯದ ಕನಿಷ್ಠ ಶೇ. 80ರಷ್ಟು ಉತ್ಪಾದನೆಯನ್ನು ಒಡಿಶಾ ಸರ್ಕಾರ ಬಯಸುತ್ತಿದೆ. ಇದು ಉತ್ಪಾದನೆಯಲ್ಲಿನ ವೆಚ್ಚ ಹೆಚ್ಚಳಗೊಳ್ಳುವ ಕಾರಣ ಒಡಿಶಾ ಗಣಿ ಪ್ರದೇಶಗಳತ್ತ ಅಷ್ಟಾಗಿ ಗಮನ ಹರಿಸುತ್ತಿಲ್ಲ ಎನ್ನಲಾಗಿದೆ. 

ಪ್ರಸಕ್ತ ಸಾಲಿನಲ್ಲಿ(2019) ಕರ್ನಾಟಕದಲ್ಲಿ 4ನೇ ಕಬ್ಬಿಣದ ಅದಿರು ತೆರೆದಿರುವ ಜಿಂದಾಲ್, 1.2 ಮಿಲಿಯನ್ ಟನ್ ಪ್ರಮಾಣದ ಕಬ್ಬಿಣದ ಅದಿರು ಉತ್ಪಾದಿಸುವ ಗುರಿ ಹೊಂದಿದೆ. ಇದಲ್ಲದೆ ಇನ್ನೂ 3 ಕಬ್ಬಿಣ ಅದಿರು ಪ್ರದೇಶಗಳನ್ನು ಹೊಂದಲಿರುವ ಜಿಂದಾಲ್ ಗೆ 93 ಮಿಲಿಯನ್ ಟನ್ ಪ್ರಮಾಣದಷ್ಟು ಸಂಗ್ರಹವಿರುವ ಗಣಿ ಪ್ರದೇಶಗಳು ದೊರೆಯಲಿವೆ. ಒಟ್ಟು 4 ಗಣಿಗಳಿಂದ 5 ಮಿಲಿಯನ್ ಟನ್ ಕಬ್ಬಿಣ ಅದಿರು ಸಿಗಲಿದೆ. ಈ ಎಲ್ಲಾ ಗಣಿಗಳಿಂದ ವಾರ್ಷಿಕ ಶೇ.35ರಷ್ಟು  ಕಬ್ಬಿಣ ಅದಿರು ಉಕ್ಕು ಸ್ಥಾವರಕ್ಕೆ ಪೂರೈಕೆಯಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಜಿಂದಾಲ್ ಲಿಮಿಟೆಡ್ ಪರವಾಗಿ  ಅರಣ್ಯ ಬಿಡುಗಡೆಗೆ ಅನುಮತಿ ದೊರೆತಿರುವ 133.05 ಹೆಕ್ಟೇರ್ ವಿಸ್ತೀರ್ಣದಲ್ಲಿ ಅಂದಾಜು 33,890 ಮಿಲಿಯನ್ ಮೆಟ್ರಿಕ್ ಟನ್ ಪ್ರಮಾಣದಲ್ಲಿ ಕಬ್ಬಿಣದ ಅದಿರು ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಅದೇ ರೀತಿ ಜಿಂದಾಲ್ ಲಿಮಿಟೆಡ್ ಇ-ಹರಾಜಿನಲ್ಲಿ ಪಡೆದಿರುವ 5 ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಅಂದಾಜು 111 ಮಿಲಿಯನ್ ಟನ್ ಪ್ರಮಾಣದಲ್ಲಿ ಅದಿರು ಇದೆ. 

ಈ ಎಲ್ಲ ಬೆಳವಣಿಗೆಗಳ ನಡುವೆ ಗಣಿಗಾರಿಕೆ ಲಾಬಿ ಹೆಚ್ಚುತ್ತಿದೆ. ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ 3 ವರ್ಷದಿಂದ 10 ವರ್ಷಗಳವರೆಗೆ ವಿಸ್ತರಿಸಬೇಕು ಎಂದು ಪಟ್ಟು ಹಿಡಿದು ಲಾಬಿ ಮುಂದುವರೆಸಿರುವ ಗಣಿ ಕಂಪನಿಗಳು, ಇದನ್ನೇ ಪ್ರಮುಖ ಬೇಡಿಕೆಯಾಗಿ ಸರ್ಕಾರಗಳ ಮುಂದೊಡ್ಡಿವೆ. 2020ರ ಮಾರ್ಚ್ ನಲ್ಲಿ ಗಣಿ ಗುತ್ತಿಗೆ ಅವಧಿ ಪೂರ್ಣಗೊಳ್ಳುತ್ತಿರುವುದರಿಂದ ವಿಸ್ತರಣೆಗೆ ಗಣಿ ಲಾಬಿ ಹೆಚ್ಚಿದೆ ಎನ್ನಲಾಗಿದೆ.