ಜನ್ನನ ಯಶೋಧರ ಚರಿತೆಯಲ್ಲಿ ಮಾರಿ ಕಲ್ಪನೆ

ದೇವತೆಯ ಮುಂದೆ ದೇವರನ್ನು ಮತ್ತು ಭಕ್ತರನ್ನು ಉದ್ದೇಶಿಸಿ ಮಂಡಿತವಾಗುತ್ತಿದ್ದ ಅಶ್ಲೀಲ ಶಬ್ದಗಳು ಸಾಮಾಜಿಕ ಅನ್ಯಾಯದ ನೆಲೆಗಳ ವಿಶ್ಲೇಷಣೆಯೂ ಆಗಿರುತ್ತದೆ. ದೇವರನ್ನು ಮತ್ತು ಭಕ್ತರನ್ನು ಅವಾಚ್ಯವಾಗಿ ನಿಂದಿಸುವುದು ಪುರೋಹಿತರ ಮಂತ್ರ ನೈವೇದ್ಯಗಳ ಪೂಜಾಕ್ರಮದ ವಿರುದ್ಧ ಆದಿಮ ಸಮುದಾಯಗಳ ದಂಗೆಕೋರ ಪೂಜಾವಿಧಿಯ ಪ್ರತಿಷ್ಠಾಪನೆಯೂ ಆಗಿರುತ್ತದೆ

ಜನ್ನನ ಯಶೋಧರ ಚರಿತೆಯಲ್ಲಿ ಮಾರಿ ಕಲ್ಪನೆ

ಮಾರಿಗೆ ಪ್ರಾಣಿಬಲಿ ಕೊಡುತ್ತಿದ್ದ ಆಚರಣೆಯನ್ನು ಕುರಿತು ಜನ್ನನ ‘ಯಶೋಧರ ಚರಿತೆ’ಯ ಪದ್ಯಗಳಲ್ಲಿ ಉಲ್ಲೇಖಗೊಂಡಿದೆ. 
ಆ ದೇವಿಯ ಜಾತ್ರೆಗೆ ಮೊಳೆ|
ವೋದೆಳವೆರೆ ಸಿರದ ಗಾಳಮುರಿಯುಯ್ಯಲೆ ಕೈ||
ವೋದಸುಕೆ ಕೋಕಿಲಧ್ವನಿ|
ಮೂದಲೆಯುಲಿಯಾಗೆ ಬಂದನಂದು ವಸಂತಂ||

ವಸಂತಮಾಸದಲ್ಲಿ ಬರುವ ಮಾರಿಜಾತ್ರೆಯ ಸಂದರ್ಭದಲ್ಲಿ ಚಂಡಮಾರಿ ದೇವತೆಗೆ ಅದೇ ದೇವಮಂದಿರದ ಆವರಣದಲ್ಲಿ ಬಲಿಪಶುವನ್ನು ಅರ್ಪಿಸುವ ಕ್ರೂರ ಆಚರಣೆಯನ್ನು ಜನ್ನ ಕವಿ ವಿವರಿಸುತ್ತಾನೆ. ಬಾಲಚಂದ್ರನು ಸಿರದ ಗಾಳ (ಸಿಡಿ ಆಚರಣೆಯಲ್ಲಿ ಬಳಸುವ ಕಬ್ಬಿಣದ ಕೊಕ್ಕೆ)ದಂತೆ, ಚಿಗುರಿದ ಅಶೋಕ ವೃಕ್ಷವು ಉರಿಯ ಉಯ್ಯಾಲೆಯಂತೆ, ಕೋಕಿಲಧ್ವನಿಯು ಮೂದಲೆಯ ಉಲಿಯಂತೆ ತೋರುತ್ತಿರಲು ವಸಂತಮಾಸ ಆಗಮಿಸುತ್ತದೆ. ವಸಂತಮಾಸದ ಪ್ರಕೃತಿ ವ್ಯಾಪಾರದೊಂದಿಗೆ ಮಾರಿ ಜಾತ್ರೆಯ ಆಚರಣಾ ವಿಧಿಗಳಾದ ‘ಸಿರದ ಗಾಳ’, ‘ಉರಿಯ ಉಯ್ಯಲೆ’, ಮೂದಲೆಯ ಉಲಿ’ ಮುಂತಾದ ಜನಪದ ಚಟುವಟಿಕೆಗನ್ನು ಜನ್ನ ನಮೀಕರಿಸುತ್ತಾನೆ. ಮಾರಿ ಜಾತ್ರೆಯಲ್ಲಿ ಸಿರದಗಾಳ, ಉರಿಯ ಉಯ್ಯಲೆ ಆಚರಣೆಗಳಷ್ಟೇ ಅಲ್ಲದೆ ‘ಮೂದಲೆಯ ಉಲಿ’ ಅಂದರೆ ಬಯ್ಗುಳಗಳ ಆಚರಣೆಯೂ ಚಾಲ್ತಿಯಲ್ಲಿದ್ದ ಅಂಶವನ್ನು ಈ ಪದ್ಯ ಸೂಚಿಸುತ್ತದೆ. ಇದು ಒಂದರ್ಥದಲ್ಲಿ ಮಾರಿ ಜಾತ್ರೆಯಲ್ಲಿ ಆಸಾದಿಗಳು ದೇವತೆಯನ್ನೂ, ದೇವರ ಭಕ್ತರನ್ನೂ, ಮೇಲ್ಜಾತಿಗಳವರನ್ನೂ ಬಯ್ಯುವ ಆಚರಣೆಯನ್ನು ಸೂಚಿಸುತ್ತದೆ.

ನಮ್ಮ ಗ್ರಾಮೀಣ ಭಾಗದ ಜನ ‘ಸಿರ’ ಅಂದರೆ ತಲೆಯ ಹಿಂಬದಿಯಲ್ಲಿರುವ ಕುತ್ತಿಗೆ ಭಾಗವನ್ನು ‘ಸಿರಪಟ್ಟಿ’ ಎನ್ನುತ್ತಾರೆ. ಮಾರಿಜಾತ್ರೆಯಲ್ಲಿ ಆಚರಿಸಲಾಗುವ ‘ಸಿಡಿ’ ಆಟಕ್ಕೆ ತೊಡುಗುವ ವ್ಯಕ್ತಿಯ ಕುತ್ತಿಯ ಹಿಂಬದಿಯಲ್ಲಿರುವ ಸ್ನಾಯುಗಳ ಮೇಲೆ ಮುಷ್ಟಿಯಿಂದ ಗುದ್ದಿ ನರಗಳನ್ನು ಸಡಿಲಿಸಲಾಗುತ್ತದೆ. ಸಡಿಲಿಸಿದ ಮುಖ್ಯ ನರದ ಹುರಿಗಳಿಗೆ ಕಬ್ಬಿಣದ ಗಾಳವನ್ನು ಸಿಕ್ಕಿಸಿ, ಅವನನ್ನು ಸಿಡಿಗಂಬವನ್ನೇರಿಸಿ ಆಕಾಶದಲ್ಲಿ ತೂಗಾಡಿಸಲಾಗುತ್ತದೆ. ಸಿಡಿ ಆಟ ಆಡುವ ವ್ಯಕ್ತಿಯ ಕತ್ತಿನ ಸಿರದ ನರದ ಹುರಿಗಳಿಗೆ ಸಿಕ್ಕಿಸುವ ಕೊಕ್ಕೆಯನ್ನು ‘ಸಿರಗಾಳ’ವೆಂದೂ, ಸಿಡಿ ಆಟದ ಕಂಬವನ್ನು ‘ಸಿಡಿಗಂಬ’ವೆಂದೂ ಕರೆಯುತ್ತಾರೆ. ದ್ರಾವಿಡ ಭಾಷಿಕ ಜನವರ್ಗದಲ್ಲಿ ಎಕ್ಕತ್ತು (ತಲೆಯ ಹಿಂಬದಿಯ ಕತ್ತು), ಎಕ್ಸಿರ (ತಲೆಯ ಹಿಂಬದಿಯ ಕತ್ತಿನ ಭಾಗ), ಎಕ್ಕೆಚ್ಚು (ಅಹಂಕಾರ) ಇಂತಹ ಶಬ್ದಗಳಿವೆ. ಜನ್ನ ಕವಿ ಹೇಳುವ ‘ಸಿರದ ಗಾಳ’ವು ಸಿಡಿ ಆಟದಲ್ಲಿ ವ್ಯಕ್ತಿಯ ತಲೆಯ ಹಿಂಬದಿಯ ಕುತ್ತಿಗೆಯ ಸ್ನಾಯುಗಳಲ್ಲಿರುವ ನರಗಳಿಗೆ ಸಿಕ್ಕಿಸುವ ಕಬ್ಬಿಣದ ಕೊಕ್ಕೆಯೇ ಆಗಿದೆ.

ಬೆನ್ನಸ್ನಾಯುಗಳ ಮುಖ್ಯನರಗಳನ್ನು ವ್ಯಕ್ತಿಯ ಸಿರಭಾಗದಲ್ಲಿ ಹುಡುಕಿ ಕಬ್ಬಿಣದ ‘ಸಿರಗಾಳ’ ಸಿಕ್ಕಿಸಿ, ಅವನನ್ನು ಸಿಡಿಗಂಬದ ಮೇಲೆ ತೂಗಾಡಿಸುತ್ತಿದ್ದ ‘ಸಿಡಿ’ ಆಚರಣೆಯನ್ನು ಜನ್ನ ಕವಿ ಈ ಪದ್ಯದಲ್ಲಿ ಚಿತ್ರಿಸಿದ್ದಾನೆ. ಜನ್ನನಿಗೆ ಮಾರಿಜಾತ್ರೆಯ ಜನಪದ ಆಚರಣೆಗಳು ತುಂಬಾ ಚೆನ್ನಾಗಿ ಪರಿಚಯವಿದ್ದಂತೆ ಕಾಣಿಸುತ್ತದೆ. ಜನ್ನನ ಇದೇ ಕೃತಿಯಲ್ಲಿ ಬರುವ ಮತ್ತೊಂದು ಪದ್ಯದಲ್ಲಿ

ತಾಳುಗೆಯ ನುರ್ಚಿ ನೆತ್ತಿಯ    
ಗಾಳಂ ಗಗನದೊವಿಲ್ವ ವಾರಿಯ ಬೀರರ್|
ಪಾಳಿಯೊಳೆಸೆದರ್ ಪಾಪದ
ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆರೆದಿಂ||

ಎಂದು ಹೇಳುತ್ತಾನೆ. ‘ನೆತ್ತಿಯ ಗಾಳ’ವನ್ನು ನರದ ಹುರಿಗಳಿಗೆ ಸಿಕ್ಕಿಸಿಕೊಂಡು ಗಗನದಲ್ಲಿ ತೂಗಾಡುವ ವೀರರ ಚಿತ್ರವನ್ನು ಗಮನಿಸಿದಾಗ ‘ಸಿರದಗಾಳ’ದಂತೆಯೇ ‘ನೆತ್ತಿಯ ಗಾಳ’ ಎಂಬ ಮತ್ತೊಂದು ರೀತಿಯ ಕಬ್ಬಿಣದ ಕೊಂಡಿ ಇರುವುದೋ, ಅಥವಾ ಸಿರದ ಗಾಳವನ್ನೇ ನೆತ್ತಿಯ ಗಾಳ ಎಂಬ ಮತ್ತೊಂದು ಹೆಸರಿನಿಂದಲೋ ಜನ್ನನ ಕಾಲದಲ್ಲಿ ಕರೆಯುತ್ತಿದ್ದಿರಬಹುದೆಂದು ತಿಳಿದುಬರುತ್ತದೆ. ನೆತ್ತಿಯ ಗಾಳ ಅಥವಾ ಸಿರಗಾಳವನ್ನು ಬಳಸಿ ಮಾರಿದೇವತೆಯ ಮುಂದೆ ಸಿಡಿ ಆಡುವಂತೆಯೇ ‘ಉರಿಯ ಉಯ್ಯಲೆ’ ಎಂಬ ಮತ್ತೊಂದು ಜನ ಪದ ಆಚರಣೆಯನ್ನು ಆಚರಿಸುತ್ತಿದ್ದ ಕಡೆಗೆ ಜನ್ನಕವಿ ಓದುಗರ ಗಮನ ಸೆಳೆಯುತ್ತಾನೆ. ನಮ್ಮ ಗ್ರಾಮೀಣ ಪ್ರದೇಶದ ನೆಲದೇವತೆಗಳ ಜಾತ್ರೆಗಳಲ್ಲಿ ಕೊಂಡ ಹಾಯುವ ಮತ್ತು ಕೆಂಡಕೊಂಡವಾಗುವ ಆಚರಣೆಗಳು ನಡೆಯುತ್ತಿದ್ದವು. ಕೊಂಡ ಹಾಯುವ ಆಚರಣೆಯಲ್ಲಿ ಭಕ್ತರು ಕೆಂಡವನ್ನು ತುಳಿಯುತ್ತಾ ಕೆಂಡದ ರಾಶಿಯಿಂದ ಪಾರಾಗುವುದು ಅಥವಾ ಕೆಂಡವನ್ನು ನಂದಿಸುವುದು ಒಂದು ಬಗೆಯಾದರೆ, ಅಗ್ನಿಕೊಂಡಕ್ಕೆ ಬಿದ್ದು ದೇಹವನ್ನು ದೇವರ ಹೆಸರಿನಲ್ಲಿ ಸಮರ್ಪಿಸಿಕೊಂಡು ಭಕ್ತರೇ ‘ಕೆಂಡಕೊಂಡ’ವಾಗುವುದು ಇನ್ನೊಂದು ಬಗೆ. ಸತಿ ಪದ್ಧತಿ ಚಾಲ್ತಿಯಲ್ಲಿದ್ದ ಪ್ರಾಚೀನ ಕಾಲದಲ್ಲಿ ಗಂಡ ಸತ್ತು ವಿಧವೆಯಾದ ಹೆಣ್ಣುಮಗಳು ಚಿತೆಯೇರಿ ಸತ್ತ ಗಂಡನೊಂದಿಗೇ ಉರಿದು ‘ಕೆಂಡಕೊಂಡ’ವಾಗುತ್ತಿದ್ದಳು. ದೇವರ ಹೆಸರಿನಲ್ಲಿ ಅಗ್ನಿಗೆ ದೇಹವನ್ನು ಸಮರ್ಪಿಸಿಕೊಳ್ಳುತ್ತಿದ್ದ ಸಂಪ್ರದಾಯ ಜನ್ನನ ಕಾಲದಲ್ಲಿ ರೂಢಿಯಲ್ಲಿತ್ತೆಂದು, ‘ಯಶೋಧರ ಚರಿತೆ’ಯಲ್ಲಿ ಜನ್ನನು ಉಲ್ಲೇಖಿಸಿರುವ ‘ಉರಿಯ ಉಯ್ಯಲೆ’ ಶಬ್ದವು ಮಾರಿದೇವತೆಗಾಗಿ ಭಕ್ತರು ಅಗ್ನಿಪ್ರವೇಶ ಮಾಡುವುದನ್ನು ಸೂಚಿಸುತ್ತದೆಂದು ಸಂಶೋಧಕರಾದ ಡಾ|| ಎಂ.ಎಂ. ಕಲಬುರ್ಗಿ ಅಭಿಪ್ರಾಯಪಟ್ಟಿದ್ದಾರೆ. ಮೊದಲಿಗೆ ಕಲಬುರ್ಗಿಯವರು ಉರಿಯ ಉಯ್ಯಾಲೆ ಆಚರಣೆಯನ್ನು ಕುರಿತು ಈ ಆಚರಣೆ ಇಂದು ಜರುಗುತ್ತಿರುವ ಸ್ಥಳವಾಗಲೀ, ಇದರ ಸ್ವರೂಪವಾಗಲೀ ನಮಗೆ ತಿಳಿದುಬಂದಿಲ್ಲ. ಬಹುಶಃ ನೆಲದ ಮೇಲೆ ಉರಿಯನ್ನುಂಟು ಮಾಡಿ, ಮರಕ್ಕೆ ಕಟ್ಟಿದ ಜೋಕಾಲಿಯಿಂದ ಆ ಉರಿಯಲ್ಲಿ ಜೀಕಿ ಹೋಗುವ ಸಂಪ್ರದಾಯವಿರಬೇಕೆಂದು ಊಹಿಸುವ ಜೊತೆಗೆ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ತೊಣಚೆ ಗ್ರಾಮದ ಶಾಸನದಲ್ಲಿ ‘ಉರಿಯ ಉಯ್ಯಲೆ’ ಎಂಬ ಉಲ್ಲೇಖವಿರುವುದನ್ನು ತೋರಿಸಿಕೊಟ್ಟರು. ಆ ಬಳಿಕ ‘ಉರಿಯ ಉಯ್ಯಲೆ’ ಆಚರಣೆಗೆ ಸಂಬಂಧಿಸಿ ಹೆಚ್ಚಿನ ಶಾಸನಾಭ್ಯಾಸ ಮತ್ತು ಕ್ಷೇತ್ರಕಾರ್ಯ ನಡೆಸಿದ ಕಲಬುರ್ಗಿಯವರು, ಸೂರ್ಯಗ್ರಹಣ ಸಂದರ್ಭದಲ್ಲಿ ಸೂರ್ಯನ ಭಕ್ತರು ಸೂರ್ಯನಿಗಾಗಿ ಅಗ್ನಿಪ್ರವೇಶ ಮಾಡಿದ ವಿಷಯಗಳನ್ನೊಳಗೊಂಡ ಹಾನಗಲ್ಲ ತಾಲ್ಲೂಕಿನ ಶಿವಳ್ಳಿ ಶಾಸನ (ಕ್ರಿ.ಶ. 1141) ಬಾಳೂರು ಶಾಸನ (1130) ಹಾಗೂ ರೋಣ ತಾಲ್ಲೂಕಿನ ಕೌಜಗೇರಿಯ ಶಾಸನ ಚಿತ್ರ ಮುಂತಾದ ಆಕರಗಳ  ಮಾಹಿತಿಗಳನ್ನು ಆಧರಿಸಿ ‘ಉರಿಯ ಉಯ್ಯಲೆ’ ಆಚರಣೆ ಕುರಿತು ಒಂದು ಖಚಿತ ತೀರ್ಮಾನಕ್ಕೆ ಬರುತ್ತಾರೆ. ಧಾರ್ಮಿಕ ಆತ್ಮಬಲಿ ಪ್ರಸಂಗದಲ್ಲಿ ಬೆಂಕಿಗೆ ಬೀಳಬೇಕಾದವರು ಉಯ್ಯಾಲೆಯ ಮೂಲಕ ಜೀಕುತ್ತಿದ್ದರೆಂದು ತಿಳಿದುಬರುತ್ತದೆ. ಹೀಗಾಗಿ ಜನ್ನ ಹೇಳುವ ‘ಉರಿಯ ಉಯ್ಯಲೆ’ ಎನ್ನುವುದು ಉಯ್ಯಲೆಯ ಮೂಲಕ ಉರಿಯಲ್ಲಿ ಜೀಕಿ ಪಾರಾಗುವುದನ್ನಲ್ಲ, ಉರಿಯ ಮೂಲಕ ಜೀಕಿ ಬೆಂಕಿಯಲ್ಲಿ ಬೀಳುವುದನ್ನು ಸೂಚಿಸುವುದೆಂದು ಈಗ ಹೇಳಬಹುದಾಗಿದೆ. ಕೌಜಗೇರಿ ಶಾಸನ ಸೂರ್ಯನಿಗಾಗಿ ಅಗ್ನಿ ಪ್ರವೇಶ ಮಾಡುವುದನ್ನು ಸೂಚಿಸಿದರೆ, ಯಶೋಧರ ಚರಿತೆ ಮಾರಿ ದೇವತೆಗಾಗಿ ಅಗ್ನಿ ಪ್ರವೇಶ ಮಾಡುವುದು ಸೂಚಿಸುತ್ತದೆ. ಆದರೆ ಎರಡೂ ಸಂದರ್ಭಗಳಲ್ಲಿ ಅಗ್ನಿಪ್ರವೇಶಕ್ಕಾಗಿ ‘ಉಯ್ಯಲೆ’ಯನ್ನೆ ಬಳಸುತ್ತಿದ್ದರೆಂದು ಇದರಿಂದ ವ್ಯಕ್ತವಾಗುತ್ತದೆ. ಹೀಗೆ ಸಾಯುವ ಆಚರಣೆಗೆ ‘ಉರಿಯ ಉಯ್ಯಲೆ’ ಎಂಬ ಪದವನ್ನು ಪಾರಿಭಾಷಿಕವೆಂಬಂತೆ ಬಳಸುತ್ತಿದ್ದರೆಂದು ಸ್ಪಷ್ಟವಾಗುತ್ತದೆ.” (ಡಾ.ಎಂ.ಎಂ. ಕಲಬುರ್ಗಿ, ಸಂಸ್ಕೃತಿ-ವಿಕೃತಿ’ ಪುಟ:86, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, 2006)

ಇನ್ನು ಜನ್ನ ಹೇಳುವ ‘ಮೂದಲೆಯುಲಿ’ಯನ್ನು ಕುರಿತು ಹೇಳುವುದಾದರೆ ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ನಡೆಯುವ ಮಾರಿ ಜಾತ್ರೆ, ದ್ಯಾಮವ್ವನ ಜಾತ್ರೆ. ಮರಿಗೆಮ್ಮ, ಮಲೆಯಮ್ಮ, ಎಲ್ಲಮ್ಮ ಮುಂತಾದ ದೇವರ ಮಹಿಮೆ ಸಾರಲು ಬಂದ ಆಸಾದಿಗಳು, ಪೋತರಾಜರು, ಚೌಡಿಕೆಯವರು ಮುಂತಾದವರು ದೇವರ ಮುಂದೆ ಚೌಡಿಕೆ ನುಡಿಸುತ್ತಾ ಅಥವಾ ಹಲಗೆ ಬಾರಿಸುತ್ತಾ ಚಿಂದುಲು ಕುಣಿದುಕೊಂಡು ದೇವರನ್ನು ನೆರೆದ ಭಕ್ತರನ್ನೂ ಮೇಲ್ ಜಾತಿವಂದಿಗರನ್ನು ಅಶ್ಲೀಲ ಶಬ್ದಗಳಿಂದ ಹೀನಾಯವಾಗಿ ಬೈಯುತ್ತಾರೆ. ಅಶ್ಲೀಲ ಬೈಗುಳಗಳನ್ನು ಹಾಡುಗಳ ರೂಪದಲ್ಲಿ ಸಾಭಿನಯವಾಗಿ ಹಾಡುತ್ತಾರೆ. ಇದರಿಂದ ದೇವತೆಗಳು ಸಂಪ್ರೀತವಾಗಿ ಭಕ್ತರಿಗೆ ಸುಖ-ಸಮೃದ್ಧಿಗಳನ್ನು ಕರುಣಿಸುತ್ತಾರೆಂದು ನಂಬುತ್ತಾರೆ. ಆಸಾದಿ ವೃತ್ತಿಗಾಯಕರು, ಕಂಸಾಳೆ ಗಾಯಕರು ಬೈಯುವ ಬೈಗುಳಗಳನ್ನು ಸಾವಿರಾರು ಭಕ್ತರು ಕುತೂಹಲದಿಂದ ಕೇಳಿಸಿಕೊಂಡು ಗಾಯಕರಿಗೆ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಬೈಯುವುದಕ್ಕಿಂತಲೂ ತೀರಾ ಅನಾಗರೀಕವೆನ್ನಿಸುವ ಚಪ್ಪಲಿಸೇವೆ ವಿಧಾನದಿಂದಲೂ ದೇವತೆಗಳನ್ನು ಆರಾಧಿಸುವುದನ್ನು ಕಾಣುತ್ತೇವೆ. ಇಂತಹ ಪೂಜಾ ವಿಧಾನದಿಂದಲೇ ‘ಸಮಗಾರದೇವರಿಗೆ ಮಚ್ಚಿಪೆಟ್ಟು’ ಎಂಬ ಗಾದೆ ಮಾತು ಹುಟ್ಟಿಕೊಂಡಿದೆ. ಡಾ. ಎಂ.ಎಂ. ಕಲಬುರ್ಗಿಯವರು ‘‘ಚಪ್ಪಲಿಯಿಂದ ಹೊಡೆಸಿಕೊಳ್ಳುವ ದೇವತೆಗಳು ಮೂಲತಃ ವ್ಯಕ್ತಿಗಳಾಗಿದ್ದು, ತಮ್ಮ ತಮ್ಮ ಸಮಾಜಬಾಹಿರ ದುಷ್ಟವರ್ತನೆಯಿಂದಾಗಿ ಜನರ ಕ್ರೋಧಕ್ಕೆ ಗುರಿಯಾಗಿರಬೇಕು. ಜನತೆ ಅವರನ್ನು ಕೊಂದು ‘ದುಷ್ಟರಿಗೆ ಶಿಕ್ಷೆ’ ಎಂಬ ಸಂದೇಶವನ್ನು ಲೋಕಕ್ಕೆ ಸಾರುವ ರೀತಿಯಲ್ಲಿ ಅವರ ಹೆಸರಿನಲ್ಲಿ ಕಲ್ಲನ್ನೋ, ವಿಗ್ರಹವನ್ನೋ ನೆಟ್ಟು ಬೈಯುವ, ಒದೆಯುವ, ಚಪ್ಪಲಿಯಿಂದ ಹೊಡೆಯುವ ಕ್ರಿಯೆಗಳನ್ನು ರೂಢಿಸಿರಬೇಕು. ಬರಬರುತ್ತ ಅವರ ದುಷ್ಟಘಟನೆಗಳು ಜನರ ನೆನಪಿನಿಂದ ಜಾರಿಹೋಗಿ ಬಯ್ಯುವ, ಒದೆಯುವ, ಚಪ್ಪಲಿಯಿಂದ ಹೊಡೆಯುವ ಕ್ರಿಯೆಗಳನ್ನು ಮಾತ್ರ ಪೂಜೆಯ ಒಂದು ಭಾಗವೆಂದು ಅವರು ಭ್ರಮಿಸಿಕೊಂಡು, ನಿಂದೆಯ ಸ್ಥಾನದಲ್ಲಿ ಭಕ್ತಿಯನ್ನು ಬೆಳೆಸಿಕೊಂಡಂತಿದೆ’’. (ಡಾ.ಎಂ.ಎಂ. ಕಲಬುರ್ಗಿ, ಸಂಸ್ಕೃತಿ-ವಿಕೃತಿ’ ಪುಟ:97, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, 2006) 

ದೇವರಿಗೆ ಚಪ್ಪಲಿಗಳನ್ನು ಅರ್ಪಿಸಿ ಆರಾಧಿಸುವ ಪೂಜಾ ವಿಧಾನವನ್ನು ಮೈಲಾರಲಿಂಗನ ಪರಂಪರೆಯಲ್ಲಿಯೂ ಸಹ ನೋಡುತ್ತೇವೆ. ಚರ್ಮವನ್ನು ಹದಗೊಳಿಸಿ ಚಮ್ಮಾಳಿಗೆ ಹೊಲಿದು ಕೊಡುವ ಕುಶಲಕರ್ಮಿಗಳಾದ ಮಾದಿಗರು ಪರಂಪರಾನುಗತವಾಗಿ ಕುಳವಾಡಿಕೆಯ ಪ್ರಕಾರ ಮೈಲಾರಲಿಂಗನಿಗೆ ಪ್ರತಿವರ್ಷ ಕಾರಣಿಕದ ಸಂದರ್ಭದಲ್ಲಿ ಒಂದು ಜೊತೆ ಚರ್ಮದ ಮೆಟ್ಟುಗಳನ್ನು ಅರ್ಪಿಸುತ್ತಿದ್ದಾರೆ. ವಿಶ್ವಬ್ರಹ್ಮನ ತಾಯಿಯಾದ ಕಾಳಿಕಾ ಮಾತೆಯ ಮಾದಿಗರು ಚರ್ಮ ಹದಗೊಳಿಸಲು ಬಳಸುವ ಗಲ್ಲೆಬಾನಿ(ಕಾಳಿಮಂತು)ಯ ಪವಿತ್ರ ಕರಿಜಲದಲ್ಲಿ ಹುಟ್ಟಿದವಳು. 12 ನೇ ಶತಮಾನದಲ್ಲಿ ಹರಳಯ್ಯನ ಗಲ್ಲೆಬಾನಿಯ ಜಲ ಸೋಕಿ ಬ್ರಾಹ್ಮಣರ ಮಧುವರಸನ ಮೈನವೆ ನಿವಾರಣೆಯಾಗುತ್ತದೆ. ಹರಳಯ್ಯ ಮತ್ತು ಕಲ್ಯಾನಮ್ಮನವರು ತಮ್ಮ ತೊಡೆ ತೊಗಲು ಸುಲಿದು ಹೊಲೆದುಕೊಟ್ಟ ಉರಿಚಮ್ಮಾಳಿಗೆ(ಕೆರ)ಗಳನ್ನು ಬಸವಣ್ಣನು ತಲೆ ಮೇಲೆ ಹೊತ್ತು ಪೂಜಿಸುತ್ತಾನೆ. ಮೆಟ್ಟು ಹೊಲೆಯುವ ಸೃಜನಶೀಲ ಕೌಶಲ್ಯದ ಮಾದಿಗರು ಒಂದು ಜೊತೆ ಚಿತ್ತಾರದ ಚಪ್ಪಲಿಗಳನ್ನು ಹೊಲಿದು ಮೈಲಾರಲಿಂಗನಿಗೆ ಅರ್ಪಿಸಿ ತಮ್ಮ ಸೇವೆಯನ್ನು ನೆರವೇರಿಸುತ್ತಾರೆ. ಅವುಗಳನ್ನು ಮೈಲಾರ ಲಿಂಗನು ಮೆಟ್ಟಿ ನಡೆದಾಡುತ್ತಾನೆಂದು ಅವರು ನಂಬುತ್ತಾರೆ. ಕಷ್ಟ ಕಾರ್ಪಣ್ಯಗಳಲ್ಲಿ ಸಿಲುಕಿ ನೊಂದ ಜನ, ಶುಭ ಫಲಗಳನ್ನು ಬೇಡಿ ಹರಕೆ ಹೊತ್ತ ಭಕ್ತರು ಕಾರಣಿಕದ ದಿವಸ ಈ ಮೆಟ್ಟುಗಳನ್ನು ಭಕ್ತಿ ಭಾವಗಳಿಂದ ನಮಸ್ಕರಿಸಿ ಎರಡೂ ಕೈಗಳಿಂದ ಮೇಲೆತ್ತಿ ಕಣ್ಣುಗಳಿಗೆ ಸ್ಪರ್ಶಿಸಿಕೊಳ್ಳುತ್ತಾರೆ. ಮೆಟ್ಟುಗಳನ್ನು ಎತ್ತಿ ನೋಡಿದಾಗ ಹಗುರವಾಗಿದ್ದರೆ ಅವರ ಕೆಲಸಗಳು ಹೂವಿನ ಸರ ಎತ್ತಿದಷ್ಟು ಹಗುರವಾಗಿ ನಡೆಯುತ್ತವೆಂದೂ, ಇಲ್ಲದಿದ್ದರೆ ಕಷ್ಟ ನಷ್ಟ ಅನುಭವಿಸಬೇಕಾಗುತ್ತದೆಂದೂ ನಂಬುತ್ತಾರೆ. 

ರಾಯಚೂರು ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಹುಲಿಗಿಯಲ್ಲಿ ರೇಣುಕಾದೇವಿ (ಹುಲಿಗೆಮ್ಮ) ದೇವತೆಯ ಗುಡಿಯ ಎದುರಿಗೆ ಮಾತಂಗಿ ದೇವತೆಯ ಗುಡಿಯಿದೆ. ಮಾತಂಗಿಯನ್ನು ಮಾದಿಗರ ಪೂಜಾರಿಯು ಪೂಜಿಸುತ್ತಿದ್ದು ಕುಲೆಂಟು ಹದಿನಾರು ಜಾತಿಗಳು ಹರಕೆ ಸಲ್ಲಿಸುತ್ತಿರುವುದನ್ನು ನೋಡಬಹುದು. ಹುಲಿಗಿಯ ಹುಲಿಗೆಮ್ಮ ದೇವತೆಗೆ ‘ಚಮ್ಮಾಳಿಗೆ ಹರಕೆ’ ತೀರಿಸುವ ವಿಶಿಷ್ಟ ಪದ್ಧತಿಯೊಂದು ರೂಢಿಯಲ್ಲಿದ್ದು ಹರಕೆ ಹೊತ್ತ ಭಕ್ತರು ಚರ್ಮದ ಚಮ್ಮಾಳಿಗೆ ಮಾಡಿಸಿ ದೇವತೆಗೆ ಅರ್ಪಿಸಲು ಪೂಜಾರಿಗೆ ಒಪ್ಪಿಸುತ್ತಾರೆ. ಪೂಜಾರಿಯು ಅದೇ ಚಮ್ಮಾಳಿಗೆಯಿಂದ ಚಮ್ಮಾಳಿಗೆಯನ್ನು ಒಪ್ಪಿಸಿದ ಭಕ್ತರ ಬೆನ್ನಿನ ಮೇಲೆ ‘ಚಮ್ಮಾಳಿಗೆ ಏಟು’ ನೀಡುತ್ತಾರೆ. ಆ ನಂತರ ಪೂಜಾರಿಯು ಚಮ್ಮಾಳಿಗೆಗಳನ್ನು ದೇವತೆಗೆ ಒಪ್ಪಿಸುತ್ತಾನೆ.

ದೇವರನ್ನು ಮತ್ತು ಭಕ್ತರನ್ನೂ ಅಶ್ಲೀಲ ಬೈಗುಳಗಳಿಂದ ಬೈಯುವುದಾಗಲಿ, ಉಗುಳುವುದಾಗಲಿ, ಅಥವಾ ಮೂದಲಿಸುವುದಾಗಲಿ ಮಾರಿ ಜಾತ್ರೆಯ ಆಚರಣಾ ವಿಧಿಯಾಗಿ ಇಂದಿಗೂ ಜಾರಿಯಲ್ಲಿದೆ. ಜನ್ನ ಕವಿಯ ಕಾಲದಲ್ಲಿಯೂ ಸಹ ಮಾರಿ ಜಾತ್ರೆಯ ಅಂಗವಾಗಿ ‘ಮೂದಲಿಕೆಯ ಉಲಿ’ ಎಂಬ ಆಚರಣೆ ಇತ್ತೆಂದು ಯಶೋಧರ ಚರಿತೆಯ ಪದ್ಯದಿಂದ ತಿಳಿದುಬರುತ್ತದೆ. ಈ ಹೀಗಳಿಯುವಿಕೆಯು ಕೇವಲ ಭಾಷೆಗೆ ಸಂಬಂಧಪಟ್ಟ ಕ್ರಿಯೆಯಾಗಿರದೆ ದೇವತೆಯ ಮುಂದೆ ದೇವರನ್ನು ಮತ್ತು ಭಕ್ತರನ್ನು ಉದ್ದೇಶಿಸಿ ಮಂಡಿತವಾಗುತ್ತಿದ್ದ ಅಶ್ಲೀಲ ಶಬ್ದಗಳು ಸಾಮಾಜಿಕ ಅನ್ಯಾಯದ ನೆಲೆಗಳ ವಿಶ್ಲೇಷಣೆಯೂ ಆಗಿರುತ್ತದೆ. ದೇವರನ್ನು ಮತ್ತು ಭಕ್ತರನ್ನು ಅವಾಚ್ಯವಾಗಿ ನಿಂದಿಸುವುದು ಪುರೋಹಿತರ ಮಂತ್ರ ನೈವೇದ್ಯಗಳ ಪೂಜಾಕ್ರಮದ ವಿರುದ್ಧ ಆದಿಮ ಸಮುದಾಯಗಳ ದಂಗೆಕೋರ ಪೂಜಾವಿಧಿಯ ಪ್ರತಿಷ್ಠಾಪನೆಯೂ ಆಗಿರುತ್ತದೆ. ಜನ್ನನ ಕಾವ್ಯದಲ್ಲಿ ಬರುವ ಮಾರಿ ದೇವತೆಗೆ ನರಬಲಿಯ ಜೊತೆಗೆ ಪಶುಬಲಿಯನ್ನು ನೀಡಲಾಗುತ್ತದೆ. ಇಂದಿಗೂ ನರಬಲಿಯನ್ನೇ ಸಂಕೇತಿಸುವ ಮಾರಿ ಕೋಣದ ಬಲಿಯನ್ನು ಮಾರಿ ಜಾತ್ರೆಗಳಲ್ಲಿ ಆಚರಣೆಯಲ್ಲಿರುವುದನ್ನು ನೋಡುತ್ತೇವೆ. ಆದರಿಂದ ಜನ್ನನು ಹೇಳುವ ‘ಸಿರದ ಗಾಳ’, ‘ಉರಿಯ ಉಯ್ಯಲೆ’ ಮತ್ತು ‘ಮೂದಲೆಯ ಉಲಿ’ ಈ ಮೂರು ವಿಧದ ಜನಪದ ಆಚರಣಾವಿಧಿಗಳು ಆದಿಜಾಂಬವರು ಇಂದಿಗೂ ಚಾಲ್ತಿಯಲ್ಲಿಟ್ಟಿರುವ ಜಾನಪದ ಕ್ರಿಯೆಗಳೇ ಆಗಿವೆ.