ಜಮ್ಮು-ಕಾಶ್ಮೀರ ಜನತೆಯ ನೋವು ಅರ್ಥೈಸಿಕೊಳ‍್ಳಬೇಕು: ಮನಮೋಹನ ಸಿಂಗ್

ಜಮ್ಮು-ಕಾಶ್ಮೀರ ಜನತೆಯ ನೋವು ಅರ್ಥೈಸಿಕೊಳ‍್ಳಬೇಕು: ಮನಮೋಹನ ಸಿಂಗ್

ಹೈದರಾಬಾದ್ : ಜಮ್ಮು-ಕಾಶ್ಮೀರದಲ್ಲಿಸ್ವಾಯತ್ತತೆ ಹಿಂಪಡೆದ ನಂತರ ಉಂಟಾದ ಬಿಕ್ಕಟ್ಟಿನ ಬಗ್ಗೆ ಮಾಜಿ ಪ್ರಧಾನ ಮಂತ್ರಿ ಮನಮೋಹನ್‍ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.

 ಜಮ್ಮು ಕಾಶ್ಮೀರ ನಿವಾಸಿಗಳ ನೋವು ಹಾಗೂ ಸಮಸ್ಯೆಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್ ನಲ್ಲಿ ಇತ್ತೀಚೆಗೆ ನಿಧನರಾದ ಕ್ಯಾಬಿನೆಟ್‍ ಸಹೋದ್ಯೋಗಿ ಹಾಗೂ ಕಾಂಗ್ರೆಸ್‍ ಮಾಜಿ ಸದಸ್ಯ ಎಸ್‍ ಜೈಪಾಲ್‍ ರೆಡ್ಡಿ ಅವರಿಗೆ ಗೌರವ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದುಕೊಳ್ಳುವಿಕೆ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಮನಮೋಹನ್‍ ಸಿಂಗ್‍, ‘ಭಾರತವು ಅತ್ಯಂತ ಬಿಕ್ಕಟ್ಟಿನ ಸ್ಥಿತಿ ಎದುರಿಸುತ್ತಿದೆ. ಈ ಸವಾಲನ್ನು ಎದುರಿಸಲು ಸಮಾನ ಮನಸ್ಕರ ಚಿಂತನೆ-ಸಹಕಾರ ಅಗತ್ಯವಿದೆ ಎಂದರು.

ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದತಿ ಹಾಗೂ 35(ಎ) ಕಲಂ ಹಿಂಪಡೆದಿದ್ದರರ ಬಗ್ಗೆ ಬಹುತೇಕ ಜನರ ವಿರೋಧವಿದೆ. ಕೇಂದ್ರ ಸರ್ಕಾರವು ಜನರ ನೋವುಗಳನ್ನು ಅರ್ಥಮಾಡಿಕೊಳ್ಳಬೇಕು. ಭಾರತವು ದೂರದೃಷ್ಟಿ ಇಟ್ಟುಕೊಂಡು ಆಡಳಿತ ನಡೆಸಬೇಕು. ಆಗಲೇ, ಭಾರತವಾಗಿ ಒಗ್ಗೂಡಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

‘ಭಾರತವು ಇಂತಹ ಸಂದಿಗ್ಧತೆ ಎದುರಿಸುತ್ತಿರುವ ಸಂದರ್ಭದಲ್ಲಿ ಮಿತ್ರ ಜೈಪಾಲ್ ರೆಡ್ಡಿ ಅವರು ಇಲ್ಲವಾಗಿದ್ದಾರೆ. ಇದು ನನಗೆ ಅತ್ಯಂತ ಬೇಸರದ ಸಂಗತಿ. ದೇಶವು ಬಿಕ್ಕಟ್ಟು ಎದುರಿಸುತ್ತಿದ್ದು, ಸೌಹಾರ್ದತೆ ಬಯಸುವ ಎಲ್ಲ ಸಮಾನ ಮನಸ್ಕರು ಒಗ್ಗೂಡುವ ಸಮಯ ಬಂದಿದೆ. ಭಾರತ ಎಂಬ ಐತಿಹಾಸಿಕ ಹಾಗೂ ಪಾರಂಪರಿಕ ಶ್ರೀಮಂತ ಪರಿಕಲ್ಪನೆ ತಿಳಿಯಬೇಕು. ಇಲ್ಲದಿದ್ದರೆ, ಇಂತಹ ಶ್ರೀಮಂತ ಪರಿಕಲ್ಪನೆ ಹಾಳಾಗುತ್ತದೆ ಎಂದು ವಿಷಾದಿಸಿದರು.