ಜಲಜ್ ಸಕ್ಸೇನಾ : ವ್ಯವಸ್ಥೆಯ ಸಂಚಿನಿಂದ ನಿರ್ಲಕ್ಷ್ಯಕ್ಕೆ ಒಳಗಾದ ಪ್ರತಿಭಾವಂತ ಕ್ರಿಕೆಟ್ ಆಟಗಾರ

ಜಲಜ್ ಸಕ್ಸೇನಾ : ವ್ಯವಸ್ಥೆಯ ಸಂಚಿನಿಂದ ನಿರ್ಲಕ್ಷ್ಯಕ್ಕೆ ಒಳಗಾದ ಪ್ರತಿಭಾವಂತ ಕ್ರಿಕೆಟ್ ಆಟಗಾರ

ಇದು ಪ್ರತಿಭೆ, ಸಾಮರ್ಥ್ಯಗಳ ಜತೆ ದಾಖಲೆಗಳ ವೀರನಾಗಿದ್ದರೂ ವ್ಯವಸ್ಥೆಯ ವಂಚನೆಗೊಳಗಾದ ಕ್ರಿಕೆಟ್ ಆಟಗಾರನ ಕತೆ. 

ಭಾರತ ಕಂಡ ಮಹಾನ್ ಆಟಗಾರರಾದ ಕಪಿಲ್ ದೇವ್, ಪಾಲಿ ಉಮ್ರೀಗರ್, ವಿಜಯ್ ಹಝಾರೆ, ರವಿ ಶಾಸ್ತ್ರಿ, ಲಾಲಾ ಅಮರನಾಥ್, ಮನೋಜ್ ಪ್ರಭಾಕರ್ ಸ್ಟಷ್ಟಿಸಿದ ದಾಖಲೆಗಳ ಪಟ್ಟಿಗೆ ಈತ ಕೂಡ ಸೇರ್ಪಡೆಯಾದ ಗೌರವ ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 6000 ಅದಕ್ಕಿಂತ ಹೆಚ್ಚು ರನ್ ಮತ್ತು 300 ಅಥವಾ ಅದಕ್ಕಿಂತ ಹೆಚ್ವು ವಿಕೆಟ್ ಪಡೆದ ಆಲ್ ರೌಂಡರ್ ಈತ. 

ಈ ದಾಖಲೆಗಳ ಕ್ಲಬ್ ಸೇರಿದ ಆಟಗಾರ ಜಲಜ್ ಸಕ್ಸೇನಾ. ಆಗಸ್ಟ್ 29 ರಂದು ಇಂಡಿಯಾ ಬ್ಲೂ ಮತ್ತು ಇಂಡಿಯಾ ರೆಡ್ ತಂಡಗಳ ನಡುವೆ ನಡೆದ ದುಲೀಪ್ ಟ್ರೋಫಿ ಪಂದ್ಯದ ಸಂದರ್ಭದಲ್ಲಿ ಈ ದಾಖಲೆಗಳ ಕ್ಲಬ್ ಸೇರಿದ್ದಾರೆ. ಆದರೆ ಕಪಿಲ್ ದೇವ್ ಮೊದಲಾದವರು ಸೃಷ್ಟಿಸಿದ ದಾಖಲೆಯನ್ನು ಜಲಜ್ ಕೂಡ ಮಾಡಿದ್ದರೂ ಈ ಕ್ಲಬ್ ನ ಸದಸ್ಯರಿಗೂ ಜಲಜ್ ಗೂ ಒಂದೇ ಒಂದು ವ್ಯತ್ಯಾಸವಿದೆ. ಅವರೆಲ್ಲರೂ ಕ್ರಿಕೆಟ್ ವೃತ್ತಿ ಜೀವನದಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದವರು. ಆದರೆ ಜಲಜ್ 31 ವರ್ಷದವರಾದರೂ ಈವರೆಗೆ ಭಾರತ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗಿಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ. 

ಅವರೇಕೆ ಭಾರತ ಕ್ರಿಕೆಟ್ ತಂಡವನ್ನು ಈವರೆಗೆ ಸೇರ್ಪಡೆಯಾಗದಿರುವುದೇ ನಿಜಕ್ಕೂ ನಿಗೂಢವೇ.  ಟ್ವೆಂಟಿ-20 ಮತ್ತು ಏಕದಿನ ಪಂದ್ಯಗಳಿಗೆ ಆಯ್ಕೆ ಮಾಡದಿದ್ದರೆ ಅಂಥ ತಕರಾರಿರುತ್ತಿರಲಿಲ್ಲ. ಟೆಸ್ ತಂಡಕ್ಕಾದರೂ ಅವರನ್ನು ಆಯ್ಕೆ ಮಾಡಬಹುದಿತ್ತು. ಅಂಥ ದಾಖಲೆ ಅವರ ಹೆಸರಿನಲ್ಲಿದೆ. ಯಾಕೆಂದರೆ 113 ಪ್ರಥಮ ದರ್ಜೆ ಪಂದ್ಯಗಳಲ್ಲಿ ಜಲಜ್ ಬ್ಯಾಟಿಂಗ್ ನಲ್ಲಿ  14 ಶತಕಗಳೊಂದಿಗೆ ಸರಾಸರಿ 37.30 ರನ್ ಗಳಿಸಿದ್ದರೆ ಬೌಲಿಂಗ್ ನಲ್ಲಿ ಸರಾಸರಿ 28.19 ಮತ್ತು ಓವರ್ ಗೆ ಮೂರಕ್ಕಿಂತ ಕಡಿಮೆ ರನ್ ಅಂದರೆ 2.77 ರನ್ ಗಳನ್ನಷ್ಟೇ ಕೊಟ್ಟಿದ್ದಾರೆ. 

ಅಷ್ಟೇ ಅಲ್ಲ. ಪ್ರತಿಷ್ಠಿತ ಬಿಸಿಸಿಐನ ನಾಲ್ಕು ಪ್ರಶಸ್ತಿಗಳನ್ನೂ ಅವರು ಗಳಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಕಳೆದ ನಾಲ್ಕು ಋತುಗಳಲ್ಲಿ ಮೂರು ಸಲ ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿ ಮತ್ತು ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಕಾರಣ ಮಾಧವರಾವ್ ಸಿಂಧಿಯಾ ಪ್ರಶಸ್ತಿಯನ್ನು ಒಂದು ಸಲ ಪಡೆದಿದ್ದಾರೆ. ಇಂಥ ಸಾಧನೆ ಮಾಡಿದ್ದರೂ ಜಲಜ್ ಭಾರತ ತಂಡಕ್ಕೆ ಸೇರ್ಪಡೆಯಾಗಲಿಲ್ಲ. ಆದರೆ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಪ್ರತಿದಿನವೂ ಆಟದ ಗುಣಮಟ್ಟ ಸುಧಾರಣೆ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಜನಿಸಿದ ಜಲಜ್ ತಮ್ಮ ವೃತ್ತಿ ಜೀವನಕ್ಕೆ ತಿರುವು ತಂದುಕೊಳ್ಳುವ ಸಲುವಾಗಿ 2016 ರಲ್ಲಿ ಪ್ರಥಮ ದರ್ಜೆ ಪಂದ್ಯಗಳಲ್ಲಿ ಕೇರಳದ ಪರವಾಗಿ ಆಡುವ ನಿರ್ಧಾರ ಕೈಗೊಂಡರು. ಭಾರತೀಯ ಕ್ರಿಕೆಟ್ ಇತಿಹಾಸದ ಒಂದು ಶತಮಾನದಲ್ಲಿ ಕೇರಳ ಕೇವಲ ಇಬ್ಬರು ಕ್ರಿಕೆಟ್ ಟೆಸ್ಟ್ ಆಟಗಾರರನ್ನಷ್ಟೇ ಸೃಷ್ಟಿಸಿದೆ. ಮಧ್ಯಪ್ರದೇಶದಲ್ಲಿ ತಮ್ಮ ಸಾಧನೆಯನ್ನು ಗುರುತಿಸದ ಹಿನ್ನೆಲೆಯಲ್ಲಿ ಅವರು ಕೇರಳ ತಂಡಕ್ಕೆ ಸೇರ್ಪಡೆಯಾಗುವ ನಿರ್ಧಾರ ಕೈಗೊಂಡರು. 

2018-19 ನೇ ಸಾಲಿನಲ್ಲಿ ರಣಜಿ ಟ್ರೋಫಿ ಪಂದ್ಯಗಳಲ್ಲಿ ಒಟ್ಟು 551  ರನ್ ಪೇರಿಸಿ ಕೇರಳದ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. 9 ಪಂದ್ಯಗಳಲ್ಲಿ ಅವರು ಗಳಿಸಿದ ರನ್ ಸರಾಸರಿ 39.35. ತಮ್ಮ ತಂಡದ ಪರವಾಗಿ ಅತಿಹೆಚ್ಚು ವಿಕೆಟ್ ಕಬಳಿಸಿದ ಮೂರನೇ ಆಟಗಾರ ಕೂಡ ಆದರು. ಈ ಋತುವಿನಲ್ಲಿ ಅವರು 28 ವಿಕೆಟ್ ಗಳನ್ನು ಉರುಳಿಸಿದರು. 

ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಬಹುತೇಕ ಸರಿಸಮನಾದ ಸಾಮರ್ಥ್ಯ ಇದ್ದು ಅದಕ್ಕೆ ತಕ್ಕಂತೆ ಸಾಧನೆಗಳ ದಾಖಲೆ ಮಾಡಿದ್ದರೂ ಕ್ರಿಕೆಟ್ ಆಯ್ಕೆದಾರರು ಜಲಜ್ ವಿಷಯದಲ್ಲಿ ಅದೇಕೆ ತಾತ್ಸಾರ ತಾಳಿದ್ದಾರೋ ಗೊತ್ತಾಗುತ್ತಿಲ್ಲ.