ಜಗನ್ ಮೋಹನ್ ರೆಡ್ಡಿಯವರ ಮನೆಗೆ ರೂ. 73 ಲಕ್ಷದ ಕಿಟಕಿ ಬಾಗಿಲುಗಳು!

ಜಗನ್ ಮೋಹನ್ ರೆಡ್ಡಿಯವರ ಮನೆಗೆ ರೂ. 73 ಲಕ್ಷದ ಕಿಟಕಿ ಬಾಗಿಲುಗಳು!

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರ ಮನೆಯ ಕಿಟಕಿ – ಬಾಗಿಲುಗಳು ರೂ.73 ಲಕ್ಷದಷ್ಟು ದುಬಾರಿ.

ಜಗನ್ ಮೋಹನ್ ರೆಡ್ಡಿಯವರ ಕಡು ವಿರೋಧಿಯಾದ  ತೆಲುಗು ದೇಶಂ ಪಕ್ಷದ ನಾಯಕ  ಎನ್.ಚಂದ್ರಬಾಬು ನಾಯ್ಡು ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಮನೆ ಮತ್ತು ಕಚೇರಿಗೆ ಖರ್ಚುಮಾಡಿದ ಹಣಕಾಸಿನ ವಿವರವನ್ನು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

ಜಗನ್ ಸರ್ಕಾರವು ಅವರ ಮನೆಗೆ ಕಿಟಕಿಗಳನ್ನು ಸರಿಪಡಿಸಲು 73 ಲಕ್ಷ ರೂ. ಗಳನ್ನು ನಿಗದಿಪಡಿಸಿದೆ. ಅದೀಗ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಲಿದೆ. ಇದರ ಮೂಲಕ ಸರ್ಕಾರವು ಹಣದ ದುರುಪಯೋಗವನ್ನು ಮಾಡುತ್ತಿದೆ ಎಂದು ಚಂದ್ರ ಬಾಬು ನಾಯ್ಡು ಟ್ವೀಟ್ ಮಾಡಿದ್ದಾರೆ.

ಮೇ ತಿಂಗಳಲ್ಲಿ ಜಗನ್ ರೆಡ್ಡಿ ರಾಜ್ಯ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಕೂಡಲೇ ಗುಂಟೂರಿನಲ್ಲಿರುವ ಅವರ ಮನೆಗೆ ಸರ್ಕಾರದ ಆದೇಶದ ಮೂಲಕ ರಸ್ತೆಯನ್ನು ನಿರ್ಮಿಸಲಾಯಿತು. ಈ ರಸ್ತೆಗೆ ಸರ್ಕಾರ ಖರ್ಚುಮಾಡಿದ್ದು  5 ಕೋಟಿ ರುಪಾಯಿ. ಈ ಬಂಗಲೆಯ ವಿದ್ಯತ್ ಕಾಮಗಾರಿಗಳಿಗೆ ಸುಮಾರು 3.6 ಕೋಟಿ ರುಪಾಯಿಗಳನ್ನು ಸರ್ಕಾರದ ವತಿಯಿಂದಲೇ ಖರ್ಚುಮಾಡಲಾಯಿತು.

ಇಷ್ಟು ಮಾತ್ರವಲ್ಲ ಈ ಮನೆಯಲ್ಲಿನ ಹೆಲಿಪ್ಯಾಡ್ ಗಾಗಿ 1.89 ಕೋಟಿ ರುಪಾಯಿ, ಮನೆಯ ಆವರಣ ಪ್ರಕೃತಿಯನ್ನು ವೀಕ್ಷಿಸುವ ಸ್ಥಳವನ್ನು ನಿರ್ಮಿಸಲು 3.25 ಕೋಟಿ ರುಪಾಯಿ  ಇದೆಲ್ಲವೂ ಸರ್ಕಾರದ ಹಣವೇ ಆಗಿದೆ.

ಇದೇ ಮನೆಯ ಪಕ್ಕದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಪ್ರಜೆಗಳನ್ನು ಭೇಟಿ ಆಗಲು 82 ಲಕ್ಷ ರುಪಾಯಿ ವೆಚ್ಚದಲ್ಲಿ ‘ಪ್ರಜಾ ದರ್ಬಾರ್’ ಹೆಸರಿನ ಕಟ್ಟಡವನ್ನು ನಿರ್ಮಿಸುವಂತೆ ಆದೇಶಿಸಿದ ಸರ್ಕಾರ ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇದೇ ರೀತಿಯ ಉದ್ದೇಶಕ್ಕಾಗಿ ನಿರ್ಮಿಸಿದ್ದ 5 ಕೋಟಿಯ ಕಟ್ಟಡವನ್ನು ಕಾನೂನು ಬಾಹಿರ ಎಂದು ಹೇಳಿ ನೆಲಸಮ ಗೊಳಿಸಿತ್ತು.

ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಧಿಕಾರದಲ್ಲಿದ್ದಾಗ ಅವರು ಪೆಬ್ರವರಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ನಡೆಸಿದ್ದ ಒಂದು ದಿನದ  ಪ್ರತಿಭಟನೆಗಾಗಿ 10 ಕೋಟಿ ರುಪಾಯಿಗಳನ್ನು ವೆಚ್ಚಮಾಡಿದ್ದರು.

ಆಂಧ್ರದ ನೆರೆಯ ರಾಜ್ಯ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು 2016 ರಲ್ಲಿ ತಮ್ಮ ನೂತನ ನಿವಾಸ ಮತ್ತು ಕಚೇರಿಯನ್ನು ಒಳಗೊಂಡ ನೂತನ ಬಂಗಲೆಯನ್ನು ರೂ. 38 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದರು.

ಆಂಧ್ರಪ್ರದೇಶ ಸರ್ಕಾರದ ಬೊಕ್ಕಸ ಖಾಲಿ ಆಗುತ್ತಿರುವ ಸಮಯದಲ್ಲಿಯೇ ಸರ್ಕಾರ ದುಂದು ವೆಚ್ಚದಲ್ಲಿ ನಿರತವಾಗಿರುವುದು ರಾಜ್ಯದ ಆರ್ಥಿಕತೆಗೆ ದೊಡ್ಡ ಪೆಟ್ಟಾಗಲಿದೆ.

46 ವರ್ಷದ ಜಗನ್ ರೆಡ್ಡಿ ಅವರು ಕಳೆದ ಮೇ  30 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮೇ ತಿಂಗಳಲ್ಲಿ ನಡೆದ ಆಂಧ್ರಪ್ರದೇಶದ ಚುನಾವಣೆಯಲ್ಲಿ ಜಗನ್ ಭರ್ಜರಿ ಜಯಗಳಿಸಿದ್ದರು. ಈ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಅವರ ಪಕ್ಷ ಸೋತು ತೀವ್ರ ಮುಖಭಂಗ ಅನುಭವಿಸಿದ್ದರು.