ಆಂಧ್ರ ಪ್ರದೇಶದಲ್ಲೀಗ ಜಗನ್ ‘ಜಯಲಲಿತಾ’ ರೆಡ್ಡಿ ಪರಂಪರೆ : ಚಂದ್ರಬಾಬು ನಾಯ್ಡುವಿಗೆ ಹ್ಯಾಪು ಮೋರೆ

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ನಿರ್ಧಾರಗಳನ್ನು ನೋಡಿದರೆ ತಮಿಳುನಾಡಿನ ಜಯಲಲಿತಾ ಸೇಡಿನ ರಾಜಕಾರಣವೇ ನೆನಪಾಗುತ್ತದೆ.

ಆಂಧ್ರ  ಪ್ರದೇಶದಲ್ಲೀಗ ಜಗನ್ ‘ಜಯಲಲಿತಾ’ ರೆಡ್ಡಿ ಪರಂಪರೆ : ಚಂದ್ರಬಾಬು ನಾಯ್ಡುವಿಗೆ ಹ್ಯಾಪು ಮೋರೆ

ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕು ತಿಂಗಳ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ ಜಗನ್ ಮೋಹನ್ ರೆಡ್ಡಿಯವರು, ಮಾಜಿ ಮುಖ್ಯಮಂತ್ರಿ, ಟಿಡಿಪಿ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು  ನಡೆಸಿಕೊಳ್ಳುತ್ತಿರುವ ರೀತಿ  ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರನ್ನು ನೆನಪಿಸುವಂತಿದೆ. ತಮಿಳು ನಾಡಿನಲ್ಲಿ ಜಯಲಲಿತಾ ಅವರು ಸುಮಾರು ಹತ್ತು ವರ್ಷಗಳ ಕಾಲ ತನ್ನ ರಾಜಕೀಯ ಶತ್ರು ಎಂ. ಕರುಣಾನಿಧಿಯವರ ವಿರುದ್ದ ಇದೇ ರೀತಿಯಲ್ಲಿ ತನ್ನ ಪ್ರತಿಕಾರ ತೀರಿಸಿದ್ದರು.

ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದ ತಕ್ಷಣ ಚಂದ್ರಬಾಬುನಾಯ್ಡು ಅವರು ನಿರ್ಮಿಸಿದ್ದ ಪ್ರಜಾವೇದಿಕೆ ಎಂಬ ಕಟ್ಟಡವನ್ನು ನೆಲಸಮಗೊಳಿಸಲು ಆದೇಶಿಸಿದ್ದರು. 2001ನೇ ಸಾಲಿನಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕರುಣಾನಿಧಿಯವರನ್ನು ಮಧ್ಯರಾತ್ರಿಯೇ ಬಂಧಿಸಲು ಆದೇಶಿಸಿದ್ದರು. ಜೊತೆಗೆ ಕರುಣಾನಿಧಿಯವರು ನೂತನವಾಗಿ ನಿರ್ಮಿಸಿದ ಸಚಿವಾಲಯದ ಕಟ್ಟಡವೊಂದನ್ನು ಅತ್ಯಾಧುನಿಕಾ ತಂತ್ರಜ್ಞಾನ ಹೊಂದಿರುವ ಆಸ್ಪತ್ರೆಯನ್ನಾಗಿ ಬದಲಾಯಿಸಿದ್ದರು.

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಇತ್ತೀಚಿಗೆ ತೆಗೆದುಕೊಂಡ ನಿರ್ಧಾರದಲ್ಲಿ ಮದ್ಯಕ್ಕೆ  ಸಂಬಂಧಪಟ್ಟ  ವ್ಯಾಪಾರದ  ಎಲ್ಲಾ ರೀತಿಯ ಅಧಿಕಾರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಂತೆ , 2003 ರಲ್ಲಿ ಜಯಲಲಿತಾ ಕೂಡ ಹೀಗೇ ಮಾಡಿದ್ದರು.

ಮದ್ಯದ ಮೆಲಿನ ನಿಯಂತ್ರಣವು ಹಂತ ಹಂತವಾಗಿ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸುವಲ್ಲಿ ಸಹಾಯಮಾಡುತ್ತದೆ ಎಂದು ಜಯಲಲಿತಾ ಸರ್ಕಾರ ಅಂದು ವಾದಿಸಿದಂತೆಯೇ ಇಂದು ಆಂಧ್ರ ಸರ್ಕಾರ ವಾದಿಸುತ್ತಿದೆ.  ನಿಜಸಂಗತಿ ಎಂದರೆ ಮದ್ಯದ ಮೇಲಿನ ನಿಯಂತ್ರಣವು ಸಂಪೂರ್ಣ ಮದ್ಯ ನಿಷೇಧದ ಬದಲಾಗಿ ತಮಿಳುನಾಡಿನ ಸರ್ಕಾರಕ್ಕೆ  ಹಿಂದಿನ ಎರಡು ದಶಕದಲ್ಲಿಯೇ ಅಧಿಕವಾದ ಪ್ರಮಾಣದಲ್ಲಿ ಲಾಭವನ್ನು ತಂದು ಕೊಟ್ಟಿತು. ತಮಿಳು ರಾಜ್ಯದಲ್ಲಿ ಆಲ್ಕೋಹಾಲ್ ಯುಕ್ತ ಪಾನೀಯಗಳ ಸಂಪೂರ್ಣ ಮತ್ತು ಚಿಲ್ಲರೆ ಮಾರಾಟವನ್ನು ವಹಿಸಿಕೊಂಡ ತಮಿಳುನಾಡು ರಾಜ್ಯ ಮಾರಾಟ ಸಂಸ್ಥೆ (ಟಿ.ಎಸ್.ಎಮ್.ಸಿ), 2003-4ರಲ್ಲಿ 3,639 ಕೋಟಿ ಇದ್ದ ತನ್ನ ಆದಾಯವನ್ನು ಈಗ 27000ಕೋಟಿ ರೂ.ಗಳಿಗೆ ಏರಿಸಿಕೊಂಡಿದೆ.

ವಾಸ್ತವವಾಗಿ ಅಲ್ಕೋಹಾಲ್ ಯುಕ್ತ  ಪಾನೀಯಗಳ ಮೇಲಿನ ತಮಿಳುನಾಡು ಸರ್ಕಾರಗಳ ನಿಯಂತ್ರಣ ರಾಜ್ಯದಲ್ಲಿ ಹಲವು  ಭ್ರಷ್ಟಚಾರದ ಪ್ರಕರಣಗಳಿಗೆ ಕಾರಣವಾಗಿತ್ತು. ಅಲ್ಕೋಹಾಲ್ ಪಾನೀಯಗಳ ಘಟಕಗಳು ಕೆಲವು ರಾಜಕಾರಣಿಗಳ ಕೈಯಲ್ಲಿದ್ದು ಇದರಿಂದಾಗಿ ಭ್ರಷ್ಟಚಾರಗಳು ಎಗ್ಗಿಲ್ಲದೇ  ನಡೆಯುತ್ತಿರುವುದು ಈಗಲೂ ವರದಿಯಾಗುತ್ತಿದೆ. ಇದೆಲ್ಲವುದರ ಹೊರತಾಗಿಯೂ  ಮದ್ಯದ ಮೇಲಿನ ನಿಯಂತ್ರಣ ಸರ್ಕಾರಕ್ಕೆ ಹಣದ ಪ್ರಮುಖ ಮೂಲವಾಗಿರುವುದು ಸುಳ್ಳಲ್ಲ.

ಸಂಪೂರ್ಣ ಮದ್ಯ ನಿಷೇಧಕ್ಕೆ ಆಂಧ್ರಪ್ರದೇಶ ನಿಜವಾಗಿಯೂ ಮುಂದಾಗಿದೆಯೇ?

ಸಂಪೂರ್ಣ ಮಧ್ಯನಿಷೇಧವೇ ನಮ್ಮ ಗುರಿ ಎಂದು ಹೇಳಿ ಮದ್ಯದ ಮೇಲೇ ತನ್ನ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿದ ಜಯಲಲಿತಾ ಸರ್ಕಾರ ನಂತರದಲ್ಲಿ ಅದನ್ನೇ ತನ್ನ ಆದಾಯದ ಪ್ರಮುಖ ಮೂಲವನ್ನಾಗಿಸಿಕೊಂಡ ಹಾದಿಯಲ್ಲಿಯೇ ಜಗನ್ ಮೋಹನ್ ರೆಡ್ಡಿ ಸರ್ಕಾರವು ಸಾಗುತ್ತಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಬಿಹಾರ ಸರ್ಕಾರದ ವಿಷಯಕ್ಕೆ ಬಂದರೆ ಮುಖ್ಯ,ಮಂತ್ರಿ ನಿತೀಶ್ ಕುಮಾರ್ ಅವರು ಮದ್ಯದ ಮೇಲಿನ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆದ ನಂತರ ಸ್ವಲ್ಪ ಸಮಯದ ವರೆಗೆ ಸರ್ಕಾರದ ಮೂಲಕವೇ ಮದ್ಯ ಮಾರಾಟ ನಡೆಸಿ ನಂತರ ಸಂಪೂರ್ಣವಾಗಿ ಮದ್ಯ ನಿಷೇಧವನ್ನು ಜಾರಿಗೆ ತಂದರು. ಮದ್ಯ ನಿಷೇಧವನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಗುಜರಾತ್. ಮಿಜೋರಾಂ, ಬಿಹಾರ, ನಾಗಲ್ಯಾಂಡ್,  2016ರಲ್ಲಿ ಈ ಪಟ್ಟಿಗೆ ಸೇರಿಕೊಂಡವು.

ಮದ್ಯ ನಿಷೇಧವು ವಿಶೇಷವಾಗಿ ಕೆಳವರ್ಗದ ಸಾಮಾಜಿಕ-ಆರ್ಥಿಕ ಗುಂಪುಗಳಲ್ಲಿ ಬಲವಾದ ಸಕಾರಾತ್ಮಕ ಪರಿಣಾಮ ಬೀರುತ್ತದೆಯಾದರೂ, ಅದನ್ನು ಜಾರಿಗೊಳಿಸುವುದು ಒಂದು ದೊಡ್ಡ ಸವಾಲಾಗಿದೆ. ಇದರಿಂದಾಗಿ ಕಾಳಸಂತೆ ದೊಡ್ಡ ಪ್ರಮಾಣದಲ್ಲಿ ಚಾಲ್ತಿಗೆ ಬರಬಹುದಾದ ಸಾಧ್ಯತೆಗಳ ಜೊತೆಗೆ ನಕಲಿ ಮದ್ಯದ ಹಾವಳಿಯೂ ಹೆಚ್ಚಾಗಬಹುದು.

ಮದ್ಯ ಮಾರಾಟವನ್ನು ಸರ್ಕಾರ ತನ್ನ ನಿಯಂತ್ರಣಕ್ಕೆ ವಹಿಸಿಕೊಳ್ಳುವುದರ ಜೊತೆಗೆ ಅದರ ಮೇಲ್ವಿಚಾರಣೆ ಮಾಡಲು ಸರ್ಕಾರವು ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಗಳನ್ನು ತಳಮಟ್ಟದಲ್ಲಿ ನೇಮಿಸಲಿದೆ ಎಂದು ಘೋಷಿಸಿದೆ. ಜಗನ್ ಮೋಹನ್ ರೆಡ್ಡಿಯವರ ಪ್ರಕರಣದಲ್ಲಿ ಈ ನಿಷೇಧವು ಒಂದು ಪ್ರಮುಖ ಚುನಾವಣಾ ಭರವಸೆಯಾಗಿದೆ. ಬಡವರ ರಕ್ಷಕರಾಗಿ ತಮ್ಮ ಸರ್ಕಾರದ ಚಿತ್ರಣವನ್ನು ಖಚಿತಪಡಿಸಿಕೊಳ್ಳಲು ಅವರು ಉತ್ಸಕರಾಗಿದ್ದು, ಅದಕ್ಕಾಗಿ ಅಗತ್ಯವಾದ ಇಂತಹ ಭರವಸೆಗಳನ್ನು ಈಡೇರಿಸುವಂತೆ ಕಾಣುತ್ತಿದೆ.

ಮದ್ಯ ನಿಷೇಧದ ಹಾದಿಯಲ್ಲಿದೆ ಗಂಭೀರ ಅಡೆತಡೆಗಳು

ಮದ್ಯದ ಸಂಪೂರ್ಣ ನಿಷೇಧವನ್ನು ಜಾರಿಗೆ ತರುವ ಸಂದಂರ್ಭದಲ್ಲಿ ಗಂಭೀರವಾದ ಆರ್ಥಿಕ, ರಾಜಕೀಯ ಮತ್ತು ನಿರ್ವಹಣಾ ಸವಾಲುಗಳು ಸರ್ಕಾರಕ್ಕೆ ಎದುರಾಗಲಿದೆ. ಇದೆಲ್ಲವನ್ನು ಜಗನ್ ಮೋಹನ್ ರಡ್ಡಿ ಸರ್ಕಾರ ಯಾವ ರೀತಿ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ಜಗನ್ ಮೋಹನ್ ರೆಡ್ಡಿಯವರ ಪ್ರಮುಖ ಚುನಾವಣಾ ಘೋಷಣೆಯಲ್ಲಿ ಒಂದಾದ “ನಮ್ಮ ಸರ್ಕಾರವು ಆರೋಗ್ಯ ಮತ್ತು ಇತರ ಸಾಮಾಜಿಕ ಉಪಕ್ರಮಗಳಿಗಾಗಿ ಅಪಾರ ಪ್ರಮಾಣದ ಹಣವನ್ನು ಖರ್ಚುಮಾಡಲಿದೆ” ಎಂಬುದನ್ನು ಈ ಯೋಜನೆ ನಿಜವಾಗಿಸಲಿದೆ. ಒಟ್ಟು ಮದ್ಯ ನಿಷೇಧ ರಾಜ್ಯದ ಆರ್ಥಿಕತೆಯ ಮೇಲೆ ಇನ್ನೂ ಹೆಚ್ಚಿನ ಪರಿಣಾಮ ಬೀರಲಿದೆ.

ಆದರೂ ಮದ್ಯ ಪಾನೀಯಗಳ ಮೇಲಿನ ಸರ್ಕಾರದ ನಿಯಂತ್ರಣ, ಸಂಪೂರ್ಣ ಮದ್ಯ ನಿಷೇಧದ ಕಡೆಗಿನ ಹೆಜ್ಜೆ ಅಂತಲೇ ನಂಬಲಾಗದು. ಹಿಂದೆ ಆಂಧ್ರಪ್ರದೆಶದಲ್ಲಿ  ಎನ್ ಟಿ ರಾಮ್ ರಾವ್ ಅವರು  ಮದ್ಯ ನಿಷೇಧವನ್ನು ಜಾರಿಗೊಳಿಸಿದ್ದರು, ಆದರೆ ಅವರ ಅಳಿಯ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹಣಕಾಸಿನ ತೊಂದರೆಯ ನೆಪ ನೀಡಿ ಮದ್ಯದ ಮೇಲಿದ್ದ ನಿಷೇಧವನ್ನು ರದ್ದು ಗೊಳಿಸಿದ್ದರು.

ಜಗನ್ ಮೋಹನ್ ರೆಡ್ಡಿ ಸರ್ಕಾರ ಘೋಷಿಸಿದ, ಅನುಷ್ಠಾನಕ್ಕೆ ತರುವಲ್ಲಿ ಕಷ್ಟವಾಗಬಹುದಾದ ಯೋಜನೆಗಳಲ್ಲಿ ಇದೇ ಮೊದಲೇನಲ್ಲ. ರಾಜ್ಯಕ್ಕೆ ಸಂಬಂಧ ಪಟ್ಟವರಿಗೆ ಶೇಕಡಾ 75 ರಷ್ಟು ಉದ್ಯೋಗ ಮೀಸಲಾತಿಯನ್ನು ಜಾರಿಗೊಳಿಸುವ ಅವರ ನಿರ್ಧಾರವು ಉದ್ಯಮ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ ಎಂಬುದು ಕೆಲವರ ವಾದ. ಇದೆಲ್ಲವನ್ನು ಗಮನಿಸುತ್ತಿದ್ದರೆ ಜಗನ್ ಮೋಹನ್ ರೆಡ್ಡಿ ತಮ್ಮನ್ನು ತಾವು ಆಂಧ್ರದ ಅಭಿವೃದ್ದಿಯ ಹರಿಕಾರನನ್ನಾಗಿ ಬಿಂಬಿಸಿಕೊಳ್ಳಲು ಯಾವುದೇ ರೀತಿಯ ಆರ್ಥಿಕ ಮತ್ತು ಅನುಷ್ಠಾನದ ಕುರಿತಾಗಿ ಅಧ್ಯಯನ ಮಾಡದೆಯೇ ಯೋಜನೆಗಳನ್ನು ಘೋಷಿಸುತ್ತಿದ್ದಾರೆಯೇ ಎಂಬ ಅನುಮಾನ ಹಲವರದ್ದು.