ದಿಗಂತದಲ್ಲೊಂದು ಬೆಳ್ಳಿ ಗೆರೆ ಇದೆಯಲ್ಲವೇ ?

ದುರಂತ ಎಂದರೆ “ನಮ್ಮವರಲ್ಲದವರು ನಮ್ಮೊಡನಿರಕೂಡದು” ಎನ್ನುವ ಮನಸ್ಥಿತಿಗೆ ರಾಷ್ಟ್ರೀಯತೆ ಅಥವಾ ಭೌಗೋಳಿಕ ದೇಶಭಕ್ತಿಯ ಭೂಮಿಕೆಯನ್ನು ಅಧಿಪತ್ಯ ರಾಜಕಾರಣದ ಚೌಕಟ್ಟಿನಲ್ಲೇ ಒದಗಿಸಲಾಗುತ್ತಿದೆ.

ದಿಗಂತದಲ್ಲೊಂದು ಬೆಳ್ಳಿ ಗೆರೆ ಇದೆಯಲ್ಲವೇ ?

ನಾವು ವಿಶಿಷ್ಟ ಕಾಲಘಟ್ಟದಲ್ಲಿದ್ದೇವೆ. ಭವಿಷ್ಯದ ಪ್ರತಿಯೊಂದು ಹೆಜ್ಜೆಯೂ ಆತಂಕ ಮೂಡಿಸುವಂತಹ ವಾತಾವರಣದಲ್ಲಿದ್ದರೂ , ನಮ್ಮ ಸುತ್ತಲೂ ದುರಂತಗಳೇ ಸಂಭವಿಸುತ್ತಿದ್ದರೂ, ಒಂದು ಶತಮಾನದ ಸತತ ಪರಿಶ್ರಮದಿಂದ ನಿರ್ಮಿಸಿದ ಸ್ಥಾವರವೊಂದು ಕುಸಿದು ಬೀಳುತ್ತಿದ್ದರೂ, ಮಿದುಳು ಸತ್ತವರಂತೆ ಕಿವಿಯನ್ನು ಮಾತ್ರ ಚಾಲ್ತಿಯಲ್ಲಿಟ್ಟುಕೊಂಡು ಬದುಕುತ್ತಿದ್ದೇವೆ. ನಾವು ಎಲ್ಲವನ್ನೂ ನೋಡುತ್ತಿದ್ದೇವೆ ಆದರೆ ನೋಡಿರುವುದನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ.  ಸಮಾಜದ ಒಂದು ವರ್ಗಕ್ಕೆ ಮಾತು ಅಧಿಕಾರದ ಮೆಟ್ಟಿಲುಗಳಾಗಿದ್ದರೆ ಮತ್ತೊಂದು ವರ್ಗಕ್ಕೆ ಸಾವಿನ ಮೆಟ್ಟಿಲುಗಳಾಗಿ ಗೋಚರಿಸುತ್ತಿದೆ. ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ತಮ್ಮದಲ್ಲದ ಕಣ್ಣುಗಳಿದ್ದವು, ಕಿವಿಗಳಿದ್ದವು. ಆ ಕಿವಿಗಳ ಮೂಲಕ ನಮ್ಮ ಮನ ಮುಟ್ಟುತ್ತಿದ್ದ ವಿಚಾರಗಳು ನಮ್ಮ ಮಿದುಳಿನ ಕಸರತ್ತಿಗೆ ನೆರವಾಗುತ್ತಿದ್ದವು. ನಮ್ಮ ಅಭಿವ್ಯಕ್ತಿಗೆ ಆ ಕಣ್ಣುಗಳು ಸಾಧನವಾಗಿದ್ದವು. ‘ ಮಾಧ್ಯಮ ’ ಎಂದು ಗೌರವಯುತವಾಗಿ ಕರೆಯಲ್ಪಡುವ ಈ ಕಣ್ಣುಗಳು, ಕಿವಿಗಳು ಇಂದು ನಮ್ಮ ಪಾಲಿಗೆ ನಿಷ್ಕ್ರಿಯವಾಗಿಬಿಟ್ಟಿವೆ. ಒಬ್ಬ ಭ್ರಷ್ಟ ರಾಜಕಾರಣಿಯ ದಂತಕಥೆ, ಒಬ್ಬ ನಟನ, ಕ್ಷಮಿಸಿ ಸಿನಿಮಾ ತಾರೆಯ, ಅಸಭ್ಯ ಮಾತುಗಳು ಮತ್ತು ಅಬ್ಬರದ ಸಮರ್ಥನೆ, ಸಾವಿರಾರು ಮೈಲು ದೂರದಲ್ಲಿ ನಡೆಯುವ ಅನಿವಾಸಿಗಳ ಒಂದು ಐಷಾರಾಮಿ ಕೂಟ ನಮ್ಮ ಬಾಹ್ಯ ಕಣ್ಣು ಕಿವಿಗಳನ್ನು ಕಸಿದುಕೊಂಡುಬಿಟ್ಟಿವೆ.

ಈ ದೇಶಕ್ಕೆ ಒಂದು ವಿಶಿಷ್ಟ ರಾಜಕೀಯ ಪರಂಪರೆ ಇದೆ. ಈ ಪರಂಪರೆಗೆ ಶತಮಾನಗಳ ಇತಿಹಾಸವೂ ಇದೆ. ಇಲ್ಲಿ ನಾವು ಒಪ್ಪಿಕೊಂಡ, ಅಪ್ಪಿಕೊಂಡ ರಾಜಕೀಯ ವ್ಯವಸ್ಥೆಯಲ್ಲಿ ಈ ಪರಂಪರೆ ತನ್ನ ಅಸ್ತಿತ್ವವನ್ನು ಕಳೆದುಕೊಂಡೇ ಇಲ್ಲ. “ ಖಾವಂದರು ಹೀಗೆ ಆಗಮಿಸಬೇಕು, ಆಸೀನರಾಗಿ ” ಎಂದು ನಮ್ಮ ಅಧಿಪತಿಗಳನ್ನು ಕೈಹಿಡಿದು, ಕೆಂಪುಹಾಸಿನ ಮೇಲೆ ನಡೆಸಿಕೊಂಡು ಬಂದು, ಸಿಂಹಾಸನದಲ್ಲಿ ಕುಳ್ಳಿರಿಸಿ, ಅವರೆದುರು ಕೈಕಟ್ಟಿ ತಲೆಬಾಗಿ ನಿಲ್ಲುವ ವಂದಿಮಾಗಧ ಪರಂಪರೆಯನ್ನು ನಾವು ಹೋಗಲಾಡಿಸಲು ಸಾಧ್ಯವೇ ಆಗಿಲ್ಲ. ಏಕೆ ಎಂದು ಯೋಚಿಸುವ ಗೊಡವೆಗೂ ನಾವು ಹೋಗಿಲ್ಲ. ಅಂದರೆ ಅಧಿಕಾರ ಪೀಠದಲ್ಲಿರುವವರನ್ನು ಹುಲುಮಾನವರಿಂದ ಬೇರ್ಪಡಿಸಿ ಉಪ್ಪರಿಗೆಯ ಮೇಲೆ ಕೂಡಿಸುವ ಊಳಿಗಮಾನ್ಯ ಸಂಸ್ಕೃತಿಯನ್ನೂ ನಾವು ಬಿಟ್ಟಿಲ್ಲ, ಪೀಠಾರೋಹಣ ಮಾಡಿದವರಿಗೆ ಉಘೇ ಉಘೇ ಹೇಳುವ ಗುಲಾಮಿ ಮನಸ್ಥಿತಿಯನ್ನೂ ನಾವು ಹೋಗಲಾಡಿಸಿಲ್ಲ. ಹಾಗಾಗಿಯೇ ನಮ್ಮ ಬಾಹ್ಯ ಕಣ್ಣುಗಳಿಗೆ, ಅಂದರೆ ಮಾಧ್ಯಮಗಳಿಗೆ, ಪ್ರಧಾನಿ ನೆಲದ ಮೇಲೆ ಬಿದ್ದ ಹೂವನ್ನು ಬಗ್ಗಿ ತೆಗೆಯುವುದು ಚಾರಿತ್ರಿಕ ಕ್ಷಣವಾಗಿಬಿಡುತ್ತದೆ. ಕಂಬಿ ಎಣಿಸುವ ಭ್ರಷ್ಟ ರಾಜಕಾರಣಿ ಬಂಡೆಯಂತೆ ಕಾಣುತ್ತಾರೆ. ಪರದೆಯ ಮೇಲಿನ ಹೀರೋ ಘರ್ಜಿಸುವ ಸಿಂಹದಂತೆ ಕಾಣುತ್ತಾನೆ. ಮಾಧ್ಯಮಗಳ ಈ ಧೋರಣೆ ಜನಸಾಮಾನ್ಯರಲ್ಲೂ ಇದ್ದರೆ ಅತಿಶಯವೇನಿಲ್ಲ. ಏಕೆಂದರೆ ಭಾರತದಲ್ಲಿ ಅತಿ ವೇಗವಾಗಿ, ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವುದೇ “ಅಭಿಪ್ರಾಯಗಳು” ಅಲ್ಲವೇ ?

ಎಲ್ಲ ಉತ್ಪಾದಿತ ವಸ್ತುಗಳೂ ನಮ್ಮ ಕಣ್ಣಿಗೆ ಸುಂದರವಾಗಿ ಗೋಚರಿಸುತ್ತವೆ. ಒಂದು ಹೊಸ ಲೋಕವನ್ನು ಸೃಷ್ಟಿಸುತ್ತವೆ. ಆದರೆ ತಂತಾನೇ ಉಗಮಿಸಿದ ವಸ್ತುಗಳು ಕೇವಲ ಸೋಜಿಗ ಮೂಡಿಸುತ್ತವೆ ಕೆಲವೊಮ್ಮೆ ಆತಂಕ ಸೃಷ್ಟಿಸುತ್ತವೆ. ಸಮಾಜದಲ್ಲಿನ ಅಭಿವ್ಯಕ್ತಿಯನ್ನೂ ಹೀಗೆಯೇ ನೋಡೋಣ. ಭಾರತದಲ್ಲಿ ಯಾವುದೇ ಕಾಲಘಟ್ಟದಲ್ಲೂ ಒಂದೇ ಅಭಿಪ್ರಾಯಕ್ಕೆ ಮನ್ನಣೆ ದೊರೆತಿಲ್ಲ. ಇಲ್ಲಿನ ಸಮಾಜದ ಸಂರಚನೆಯೇ ಹಾಗಿದೆ. ಜಾತಿ ವ್ಯವಸ್ಥೆ ಕುಡಿಯೊಡೆಯುತ್ತಿದ್ದ ಕಾಲದಲ್ಲೇ ಪ್ರತಿರೋಧವನ್ನೂ ಎದುರಿಸಿತ್ತಲ್ಲವೇ ? ಬೇರೂರಿದ ಮೇಲೂ ಎದುರಿಸುತ್ತಲೇ ಇದೆ. ಮೊಘಲರ ಆಳ್ವಿಕೆ ಇರಲಿ, ಬ್ರಿಟೀಷರ ವಸಾಹತು ಆಳ್ವಿಕೆ ಇರಲಿ ಇದನ್ನು ಪ್ರತಿರೋಧಿಸಿದ ದನಿಗಳೂ ಏಕರೂಪಿಯಾಗಿರಲಿಲ್ಲ. ಸಾಂಸ್ಕೃತಿಕ ವೈವಿಧ್ಯತೆಯನ್ನು ಬದಿಗಿಟ್ಟು ನೋಡಿದರೂ ಇಲ್ಲಿನ ಜನಾಂಗೀಯ ವೈವಿಧ್ಯತೆಗಳೇ ಭಿನ್ನ ಸ್ವರಗಳಿಗೆ ಭೂಮಿಕೆ ಒದಗಿಸಿತ್ತು. ಒಂದೇ ರಾಗ, ಒಂದೇ ತಾಳ ಕೇಳಿಬಂದ ಕ್ಷಣಗಳಲ್ಲೂ ಭಿನ್ನ ಸ್ವರಗಳ ಅಲೆಗಳು ಸೃಷ್ಟಿಯಾಗಿದ್ದನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ, ನಂತರದ ಕಾಲಘಟ್ಟದಲ್ಲಿ ಗುರುತಿಸಬಹುದು. ಇಷ್ಟರ ನಡುವೆಯೂ ಭೌಗೋಳಿಕ ಏಕತೆ, ಅಖಂಡತೆಯನ್ನು ಸಾಧಿಸಿದ್ದರೆ ಅದಕ್ಕೆ ಕಾರಣ ಸಾರ್ವಜನಿಕ ಅಭಿವ್ಯಕ್ತಿಗೆ ಇದ್ದ ಮಾನ್ಯತೆ ಮತ್ತು ಗೌರವ.

ಗಾಂಧಿಯನ್ನು ಕೊಂದ ಗೋಡ್ಸೆ ವ್ಯಕ್ತಿಯಲ್ಲ ಒಂದು ಮನಸ್ಥಿತಿ. ಈ ಮನಸ್ಥಿತಿ ಅಂದಿಗೂ ಇತ್ತು ಇಂದಿಗೂ ಇದೆ. ಗಾಂಧಿ ಅಂದು ಮಾತ್ರ ಇದ್ದರು ಇಂದು ಇಲ್ಲ. ಅಷ್ಟೇ ವ್ಯತ್ಯಾಸ. ಈ ಗೋಡ್ಸೆಯ ಮನಸ್ಥಿತಿಯನ್ನು ಬದಿಗೆ ತಳ್ಳಿ ಸಮಾಜ ನಿರ್ಮಾಣದತ್ತ ಸಾಗುವ ಮನಸುಗಳಿಗೆ ಭಾರತೀಯ ಸಮಾಜ ಅವಕಾಶ ನೀಡುತ್ತಲೇ ಬಂದಿದೆ. ಭಾರತ ಕೇವಲ ವೈವಿಧ್ಯತೆಯಲ್ಲಿ ಏಕತೆಯನ್ನು ಮಾತ್ರವೇ ಅಲ್ಲ, ವೈರುಧ್ಯಗಳ ನಡುವೆ ಏಕತೆಯನ್ನೂ ಸಾಧಿಸುತ್ತಾ ಬಂದಿದೆ. ಈ ವೈರುಧ್ಯಗಳನ್ನು ಪ್ರಶ್ನಿಸುವ ಮನಸುಗಳಿಗೆ ಮೂರು ದಶಕಗಳ ಹಿಂದೆ ಇದ್ದ ಮುಕ್ತ ಅವಕಾಶ ಮತ್ತು ವಾತಾವರಣ ಇಂದು ನಶಿಸುತ್ತಿರುವುದು ಗೋಡ್ಸೆ ಸಂತತಿಯನ್ನು ಮತ್ತೊಮ್ಮೆ ನೆನಪಿಸುತ್ತದೆ. ದುರಂತ ಎಂದರೆ “ನಮ್ಮವರಲ್ಲದವರು ನಮ್ಮೊಡನಿರಕೂಡದು” ಎನ್ನುವ ಮನಸ್ಥಿತಿಗೆ ರಾಷ್ಟ್ರೀಯತೆ ಅಥವಾ ಭೌಗೋಳಿಕ ದೇಶಭಕ್ತಿಯ ಭೂಮಿಕೆಯನ್ನು ಅಧಿಪತ್ಯ ರಾಜಕಾರಣದ ಚೌಕಟ್ಟಿನಲ್ಲೇ ಒದಗಿಸಲಾಗುತ್ತಿದೆ. ಈ ಸಂದರ್ಭದಲ್ಲೇ ವಿಶ್ವದ ಎಲ್ಲ ಯುದ್ಧಗಳಿಗೆ, ಭಯೋತ್ಪಾದಕತೆಗೆ, ಹಿಂಸಾಚಾರಗಳಿಗೆ ಕಾರಣವಾದ ಅಮೆರಿಕ ಭಾರತದ ಆತ್ಮೀಯ ಗೆಳೆಯನಂತೆ ಕಾಣುತ್ತಿದೆ. ಅಥವಾ ನಮ್ಮ ಬಾಹ್ಯ ಕಣ್ಣುಗಳು, ಮಾಧ್ಯಮಗಳು, ಈ ರೀತಿ ಬಿತ್ತರಿಸುತ್ತಿವೆ. ಅಮೆರಿಕದ ಆಲಿಂಗನದ ಹಿಂದೆ ಪೆಂಟಗನ್ನ ಶಸ್ತ್ರಾಸ್ತ್ರದ ಭಂಡಾರ ಇಣುಕಿ ನೋಡುತ್ತಿರುವುದನ್ನು ನಾವು ನೋಡಿಯೂ ನೋಡದವರಂತೆ ಇದ್ದುಬಿಡುತ್ತೇವೆ.

ನಮ್ಮ ಕಣ್ಣೆದುರಿನಲ್ಲೇ ನಡೆಯುವ ಹತ್ಯೆಯನ್ನೂ ಸಹಜ ಸಾವು ಎಂದು ನಂಬಿಸುವ ವ್ಯೂಹವೊಂದನ್ನು ನಮಗರಿವಿಲ್ಲದಂತೆಯೇ ಸೃಷ್ಟಿಸಿಕೊಂಡುಬಿಟ್ಟಿದ್ದೇವೆ. ಅಮೆರಿಕದ 50 ಸಾವಿರ ಅನಿವಾಸಿಗಳ ಜೈಕಾರ ನಮಗೆ ಎಷ್ಟು ಅಪ್ಯಾಯಮಾನವಾಗುತ್ತದೆ ಆದರೆ ನಮ್ಮ ನೆಲದಲ್ಲೇ 45 ದಿನಗಳಿಂದ ಹೊರಜಗತ್ತಿನೊಡನೆ ಸಂಪರ್ಕವನ್ನೇ ಕಡಿದುಕೊಂಡು ನಲುಗುತ್ತಿರುವವರ ಹಾಹಾಕಾರ ನಮಗೆ ಅನಿವಾರ್ಯ ಕರ್ಮದಂತೆ ಕಾಣುತ್ತದೆ. ಹೂಸ್ಟನ್ನಲ್ಲಿಯೋ, ಟೆಕ್ಸಾಸ್ನಲ್ಲಿಯೋ ತಮ್ಮ ಬೇರುಗಳನ್ನು ಕಂಡಿರುವ ಪಂಡಿತರಿಗೆ ಸಾಂತ್ವನ ಹೇಳುವ ಮನಸು ಇಲ್ಲಿ ಉಸಿರುಗಟ್ಟಿ ಬಾಳುತ್ತಿರುವ ಅಮಾಯಕರನ್ನು ಅಪ್ಪಿಕೊಳ್ಳಲು ಸಿದ್ಧವಾಗಿದೆ ಆದರೆ ಕೈಹಿಡಿಯಲು ಹಿಂಜರಿಯುತ್ತದೆ. ಶ್ರೀಮಂತಿಕೆ ನಮ್ಮ ಮನಸುಗಳನ್ನು ಹೇಗೆ ನಿಯಂತ್ರಿಸುತ್ತದೆ ಎನ್ನಲು ಇದಕ್ಕಿಂತಲೂ ಉತ್ತಮ ರಾಜತಾಂತ್ರಿಕ ನಿದರ್ಶನ ಬೇಕಿಲ್ಲ ಅಲ್ಲವೇ ? ಭಾರತದ ಆರ್ಥಿಕತೆ ಕುಸಿಯುತ್ತಿದೆ ಎಂಬ ಸೂಚನೆ ದೊರೆತಕೂಡಲೇ ತಮ್ಮ ಅನಿವಾಸಿ ಠೇವಣಿಗಳನ್ನು ಕ್ಷಣಮಾತ್ರದಲ್ಲಿ ಮತ್ತೊಂದು ದೇಶಕ್ಕೆ ಹಾರಿಸಿಬಿಡುವವರು ನಮ್ಮವರಾಗುತ್ತಾರೆ, ನಾಳಿನ ಕೂಳು ಇಲ್ಲದಿದ್ದರೂ ಇಲ್ಲಿಯೇ ತಳ ಊರಿರುವ ಅಸಹಾಯಕರು ಅನುಮಾನಾಸ್ಪದವಾಗಿ ಕಾಣುತ್ತಾರೆ. ದೋಷ ಇರುವುದು ಕಣ್ಣೋಟದಲ್ಲಿ ಅಲ್ಲ ಒಳನೋಟದಲ್ಲಿ.

ಈ ಒಳನೋಟಕ್ಕೆ ಒಂದು ಸಾರ್ವತ್ರಿಕ ಹಿನ್ನೆಲೆಯಿದೆ. ಸಾಮುದಾಯಿಕ ಅಸ್ಮಿತೆಯೂ ಇದೆ. ಸಾಮಾಜಿಕ ಚೌಕಟ್ಟೂ ಇದೆ. ಆದರೆ ಈ ಅಸ್ಮಿತೆಗಳನ್ನು, ಚೌಕಟ್ಟುಗಳನ್ನು ಕಣ್ಣೆತ್ತಿ ನೋಡುವ ವ್ಯವಧಾನವನ್ನು ಆಡಳಿತ ವ್ಯವಸ್ಥೆ ಕಳೆದುಕೊಂಡಿದೆ. ದುರಂತ ಎಂದರೆ ಆಡಳಿತ ವ್ಯವಸ್ಥೆಯ ಹೃದಯದ ಬಡಿತ ನಾಗರಿಕ ಸಮಾಜದ ಮನಸುಗಳನ್ನು ಬೇಗನೆ ತಲುಪುತ್ತದೆ. ಹೀಗೆ ತಲುಪಲು ನಮ್ಮ ದೇಶದ ಬಹುತೇಕ ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳು ನೆರವಾಗುತ್ತಿವೆ. ಹಾಗಾಗಿ ನಾಗರಿಕ ಸಮಾಜದ ನಾಡಿಮಿಡಿತವನ್ನು ಗ್ರಹಿಸುವ ಸಾಮರ್ಥ್ಯವನ್ನೇ ಕಳೆದುಕೊಂಡಿದ್ದೇವೆ ಎನಿಸುತ್ತದೆ. ನಿಸಾರ್ ಅಹಮದ್ ಅವರ ಕವಿತೆಯನ್ನು ಉಲ್ಲೇಖಿಸುವುದಾದರೆ, (ಅವರ ಕ್ಷಮೆ ಕೋರಿ) “ ಜೋಗದ ಸಿರಿ ಬೆಳಕಿನಲ್ಲಿ ” ನಮಗೆ ಕಾಣುವ ನಿತ್ಯೋತ್ಸವ ಕವಿಕಲ್ಪನೆಯ ಸುಂದರ ಬದುಕು. ಇದೇ ಬೆಳಕಿನ ಹಿಂದೆ ಒಂದು ಕತ್ತಲೆಯ ಜಗತ್ತೂ ಇದೆ ಎನ್ನುವುದನ್ನು ಅವರದೇ ಆದ “ ಕುರಿಗಳು ಸಾರ್ ಕುರಿಗಳು” ಎನ್ನುವ ಸಾಲುಗಳಲ್ಲಿ ಕಾಣುತ್ತೇವೆ. ಈ ದಾರ್ಶನಿಕತೆ ನಮ್ಮ ಪ್ರಜ್ಞಾವಂತ ಸಮಾಜಕ್ಕೆ ಇಲ್ಲದಾಗಿರುವುದೇ ಇಂದಿನ ಸಮಸ್ಯೆ. ನಾವು ದಸರಾ ವೈಭವದಲ್ಲಿ ಕೊಡಗಿನ ದುರಂತವನ್ನು ಮರೆಯುತ್ತೇವೆ, ಹೌಡಿ ಸಂಭ್ರಮದಲ್ಲಿ ಕಾಶ್ಮೀರವನ್ನು ಮರೆಯುತ್ತೇವೆ, ಬಂಡೆಗಳ ಸದ್ದಿನಲ್ಲಿ ನೊಂದವರ ಕೂಗನ್ನು ಅಲಕ್ಷಿಸುತ್ತೇವೆ.

ಕಂಗೊಳಿಸುವ ಬೆಳಕಿನಲ್ಲಿ ಎಲ್ಲವನ್ನೂ ನೋಡುವುದು ಸುಲಭ ಆದರೆ ಕಗ್ಗತ್ತಲಿನಲ್ಲಿ ಕಾಲ ಕೆಳಗಿನ ಮುಳ್ಳನ್ನು ಗುರುತಿಸುವುದು ಕಷ್ಟದ ಕೆಲಸ. ನಾವು ಇಂದು ಇದನ್ನು ಮಾಡಬೇಕಿದೆ. ಝಗಮಗಿಸುವ ಬೆಳಕಿನ ಅದ್ಭುತ ಮಾಯಾಲೋಕ ನಮ್ಮನ್ನು ನಿಷ್ಕ್ರಿಯರನ್ನಾಗಿಸುತ್ತದೆ. ಈ ಲೋಕದಿಂದಾಚೆಗಿನ ಒಂದು ಕತ್ತಲ ಜಗತ್ತು ನಮ್ಮ ಸುಪ್ತ ಸಂವೇದನೆಗಳನ್ನು ಬಡಿದೆಬ್ಬಿಸುತ್ತವೆ. ಈ ಕತ್ತಲ ಜಗತ್ತಿನಲ್ಲಿ ನಮಗೆ ಭೂಪಾಲ್ ಪೀಡಿತರು, ಗುಜರಾತ್ ನ ಹತಭಾಗ್ಯರು, ಅಯೋಧ್ಯೆಯ ನಿರ್ಭಾಗ್ಯರು, ಪುಲ್ವಾಮಾದ ಹುತಾತ್ಮರು, ಆತ್ಮಹತ್ಯೆಗೆ ಶರಣಾದ ಲಕ್ಷಾಂತರ ರೈತರು, ಬೀದಿಪಾಲಾಗುತ್ತಿರುವ ಕಾರ್ಮಿಕರು, ಸುಟ್ಟುಕರಕಲಾದ ಅಸಂಖ್ಯಾತ ದಲಿತರು, ಅಲ್ಪಸಂಖ್ಯಾತರು, ನಾಳಿನ ಹೆಜ್ಜೆ ಗುರುತಿಸಲಾಗದ ನಾಗರಿಕರು, ನಿರ್ವಸತಿಗರಾದ ಆದಿವಾಸಿಗಳು, ಕಾಶ್ಮೀರದ ಅಮಾಯಕರು, ಮತಾಂಧತೆಯ ಬಲಿಪಶುಗಳು, ಭಯೋತ್ಪಾದನೆಗೆ ಬಲಿಯಾದ ಸಾವಿರಾರು ಅಸಹಾಯಕರು ಕಾಣುತ್ತಾರೆ. ಇನ್ನೂ ಒಳಹೊಕ್ಕರೆ ನಿತ್ಯ ನಾರಕಿಗಳಂತೆ ಶೋಷಣೆ, ದಬ್ಬಾಳಿಕೆ, ಅಸ್ಪಶ್ಯತೆ, ಬಹಿಷ್ಕಾರ ಎದುರಿಸುತ್ತಿರುವ ಅಸಂಖ್ಯಾತ ದಲಿತ ಜೀವಗಳು ಕಾಣುತ್ತವೆ. “ ಇವರೆಲ್ಲರೂ ಒಂದೆಡೆ ಇರಲಿ ನಾಳೆ ಬೆಳಕು ತೋರಿಸುತ್ತೇವೆ ” ಎನ್ನುವ ಕಿಂದರಜೋಗಿಗಳ ಮಾತನ್ನು ಬದಿಗಿಟ್ಟು ನೋಡಿದಾಗ, ನಾವೇ ರೂಪಿಸಿಕೊಂಡ ಭೌಗೋಳಿಕ ಗಡಿರೇಖೆಗಳು ನಮ್ಮನ್ನು ಅಣಕಿಸುತ್ತವೆ.

ವಿಪರ್ಯಾಸವೆಂದರೆ ನಾವು ಏನನ್ನು ಕಳೆದುಕೊಂಡಿದ್ದೇವೆ ಎಂದು ನಮಗೇ ಅರಿವಾಗುತ್ತಿಲ್ಲ. ಪ್ರಜಾತಂತ್ರವನ್ನೋ, ಸಾಂವಿಧಾನಿಕ ಮೌಲ್ಯಗಳನ್ನೋ, ನೈತಿಕತೆಯನ್ನೋ, ಸಂವೇದನೆಯನ್ನೋ ? ಅಥವಾ ಶತಮಾನಗಳ ಕಾಲ ಕಾಪಿಟ್ಟುಕೊಂಡು ಬಂದಿದ್ದ ಸೂಕ್ಷ್ಮ ಸಂವೇದನೆಯ ಮನಸುಗಳನ್ನೋ ? ವಾಸ್ತವ ಎಂದರೆ ಏನನ್ನೂ ಕಳೆದುಕೊಂಡಿಲ್ಲ. ಎಲ್ಲವನ್ನೂ ಬದಿಗೊತ್ತಿಬಿಟ್ಟಿದ್ದೇವೆ. ಗ್ರಾಮೀಣ ಸಂಸ್ಕೃತಿಯ ಉನ್ನತ ಆದರ್ಶಗಳನ್ನು ನಗರ ಸಂಸ್ಕೃತಿಯ ಬಲಿಪೀಠದಲ್ಲಿ ಇಟ್ಟು ಕೈಕಟ್ಟಿ ಕುಳಿತಿದ್ದೇವೆ. ನೆಲದ ಮೇಲೆ ನಡೆಯುವುದನ್ನೇ ಮರೆತುಹೋಗಿರುವ ಒಂದು ವರ್ಗ ನಮ್ಮ ಪ್ರಜ್ಞೆಯ ಮೇಲೆ ಅಧಿಪತ್ಯ ಸಾಧಿಸಿಬಿಟ್ಟಿದೆ. ದುರಂತ ಎಂದರೆ ಸಾಹಿತ್ಯಕ ವಲಯವನ್ನೂ ಈ ಮಾಯೆಯ ಮುಸುಕು ಆವರಿಸಿದೆ. ಚಾಚುವ ಕೈಗಳು, ತೆರೆದ ಬಾಯಿ, ನಡೆವ ಪಾದಗಳು, ಚಲಿಸುವ ಮನಸುಗಳು ಎತ್ತಲಿಂದೆತ್ತ ಸಾಗಿದರೂ ತಡೆಗೋಡೆಗಳನ್ನು ಎದುರಿಸುತ್ತಿವೆ. ಈ ತಡೆಗೋಡೆಗಳನ್ನು ಕೆಡವಲು ಕೈಗಳು ಬೇಕಾಗಿವೆ. ನೆಲಹಾಸುಗಳನ್ನು ತೆರವುಗೊಳಿಸಿ ಮಣ್ಣಿನ ಸ್ಪರ್ಶವಾಗುವ ಸುಖಾನುಭವ ಬೇಕಿದೆ. ಬಣ್ಣದ ಜಗತ್ತನ್ನು ತೊರೆದು ಕತ್ತಲು ಬೆಳಕಿನ ಜಗತ್ತನ್ನು ಕಾಣಬೇಕಿದೆ. ನಮ್ಮ ನೆರಳಿನಲ್ಲೇ ಕತ್ತಲಿನ ಭಾವ ಇದೆ ಎನ್ನುವುದನ್ನು ನಾವು ಅರಿತೇ ಇಲ್ಲ. ಹಾಗೆಯೇ ನಮ್ಮ ಕಂಗಳಲ್ಲೇ ಬೆಳಕಿನ ಕಿಂಡಿ ಇದೆ ಎಂದೂ ಅರಿತಿಲ್ಲ. ಎಲ್ಲವನ್ನೂ ಯಾವುದೋ ಒಂದು ಅಮೂರ್ತ ಶಕ್ತಿ ಆವರಿಸಿಬಿಟ್ಟಿದೆ. ಅದು ಮತಾಂಧತೆಯೋ, ರಾಷ್ಟ್ರೀಯತೆಯೋ, ದೇಶಭಕ್ತಿಯೋ ಅಥವಾ ದ್ವೇಷ ಭಾವವೋ. ಈ ಅಮೂರ್ತತೆಯನ್ನು ದಾಟಿ ದಿಗಂತದಾಚೆಗಿನ ಹಣತೆಯ ಬೆಳಕಿನಲ್ಲಿ ಹೊಸ ಜಗತ್ತನ್ನು ಕಂಡುಕೊಳ್ಳುವತ್ತ ನಮ್ಮ ಗಮನಹರಿಸಬೇಕಿದೆ. ನಾಗರಿಕ ಪ್ರಜ್ಞೆ ಜೀವಂತವಾಗಿದ್ದರೆ ಮಾತ್ರ ಇದು ಸಾಧ್ಯ. ಅದನ್ನು ಸಂರಕ್ಷಿಸುವತ್ತ ಮೊದಲ ಹೆಜ್ಜೆ ಇಡೋಣ.