ಧರ್ಮಗುರುವಿನ ಪೋಷಾಕು ತೊಟ್ಟ ಮಾತ್ರಕ್ಕೆ ಲೈಂಗಿಕ ಚಟುವಟಿಕೆ ನಿಷಿದ್ಧ ಸರಿಯೇ?

ಧರ್ಮಗುರುವಿನ ಪೋಷಾಕು ತೊಟ್ಟ ಮಾತ್ರಕ್ಕೆ ಲೈಂಗಿಕ ಚಟುವಟಿಕೆ ನಿಷಿದ್ಧ ಸರಿಯೇ?

ಪ್ರಿಯ ಓದುಗರೇ

ಕಾವಿ ತೊಟ್ಟ ಓರ್ವ ವ್ಯಕ್ತಿ ಸಲಿಂಗಕಾಮದಲ್ಲಿ ತೊಡಗಿದ ಒಂದು ವಿಡಿಯೋ ವೈರಲ್ ಆಗಿದೆ. ಅದನ್ನು ನಾನೂ ನೋಡಿದ್ದೇನೆ. ಅದೊಂದು ಚಿರಪರಿಚಿತ ಮುಖ. ಟಿ.ವಿ. ಕಾರ್ಯಕ್ರಮಗಳಲ್ಲಿ ಆಯುರ್ವೇದದ ಬಗ್ಗೆ ಸಾಕಷ್ಟು ಮಾಹಿತಿ ನೀಡಿರುವ ವ್ಯಕ್ತಿ. ಈ ವ್ಯಕ್ತಿಯನ್ನು ಸ್ವಾಮಿ ಎಂದು ಉಲ್ಲೇಖಿಸಲು ನನಗೆ ಮನಸ್ಸಿಲ್ಲ. ಕಾವಿ ತೊಟ್ಟ ಯಾರಿಗೂ ಹಾಗೆ ಉಲ್ಲೇಖಿಸುವುದು ನನಗೆ ಕಷ್ಟ. ಸ್ವಾಮಿ, ಸ್ವಾಮೀಜಿ, ಶ್ರೀ ಶ್ರೀ ಶ್ರೀಿ ಇದೆಲ್ಲ ಹೆಸರಿನ ಹಿಂದೆ ಮುಂದೆ ಹಾಕಿಕೊಂಡ ಮಾತ್ರಕ್ಕೆ ಅವರಿಗೆ ಹೆಚ್ಚಿನ ಗೌರವ ಕೊಡಬೇಕೆಂದೇನೂ ಇಲ್ಲ. 

ಸಲಿಂಗಕಾಮದಲ್ಲಿ ತೊಡಗಿದ್ದ ಆ ವ್ಯಕ್ತಿಯಲ್ಲಿ ಸಂತೋಷಕ್ಕಿಂತ ಭಾವೋದ್ವೇಗವಿತ್ತು. ಇದೇ ವಿಡಿಯೋ ಮಿಥ್ಯಾನಂದನಿಗೆ ಸಂಬಂಧಿಸಿದ್ದರೆ ಎಲ್ಲ ಸುದ್ದಿ ವಾಹಿನಿಗಳು ಮೂರೂ ಹೊತ್ತು ಅದನ್ನೇ ತೋರಿಸಿ ಮಹಾಪರಾಧ ಮಾಡಿದ್ದಾನೆ ಎಂಬಂತೆ ವೀಕ್ಷಕರಿಗೆಲ್ಲ ತಲೆ ತಿಕ್ಕಿ ಅವನನ್ನು ಓಡಿಸುವ ಎಲ್ಲ ರೀತಿಯ ಪ್ರತಿಭಟನೆಗಳಿಗೂ ಕುಮ್ಮಕ್ಕು ನೀಡಿಬಿಡುತ್ತಿದ್ದವು. ಆದರೆ ಈತ ಮಿಥ್ಯಾನಂದನ ತರಹದ ವ್ಯಕ್ತಿಯಲ್ಲ. ಹುಟ್ಟಿನಿಂದಲೇ ಪ್ರಭಾವಿ ಜಾತಿಗೆ ಸೇರಿದ ವ್ಯಕ್ತಿ. ಸುದ್ದಿ ವಾಹಿನಿಗಳೆಲ್ಲ  ಆತನ ರಕ್ಷಣೆಗೆ ಸಹಜವಾಗಿಯೇ ಮುಂದಾಗುತ್ತವೆ. ಕಾನೂನು ಪ್ರಕಾರ ಇಂಥ ವಿಡಿಯೋವೊಂದು ಪ್ರಸಾರವಾಗದಂತೆ ಏನು ಮಾಡಬೇಕೆಂದು ಈ ವಾಹಿನಿಗಳಲ್ಲಿರುವ ಸ್ವಜಾತಿ ಪ್ರಭೃತಿಗಳೇ ಸಲಹೆ ನೀಡಿರುತ್ತಾರೆ. ಜಾತಿ ಮತ್ತು ವ್ಯಾವಹಾರಿಕ ಕಾರಣಕ್ಕೆ ಈ ವಿಡಿಯೋ ಸುದ್ದಿ ವಾಹಿನಿಗಳ ಸಮಯ ಕದಿಯಲಿಲ್ಲ. ಇಂಥ ವಿಡಿಯೋಗಳು ಮಹತ್ವ ಪಡೆಯಬಾರದು ಎನ್ನವುದು ನನ್ನ ನಿಲುವು. ಈ ವಿಡಿಯೋ ಕನ್ನಡ ಸುದ್ದಿ ವಾಹಿನಿಗಳಲ್ಲಿ ಮಹತ್ವ ಪಡೆಯದಿರುವುದಕ್ಕೆ ನಾನು ಇಲ್ಲಿ ಹೇಳಲಿರುವ ಕಾರಣಗಳಲ್ಲ ಎನ್ನುವುದು ನಿಮಗೆ ತಿಳಿದಿರಲಿ.  

ಹಿಂದೂ ಧರ್ಮದ ವ್ಯಾಪ್ತಿಯಲ್ಲಿರುವ ಮಠಾಧೀಶರು, ಪ್ರೊಟೆಸ್ಟೆಂಟ್ ಪಾದ್ರಿಗಳು ಮತ್ತು ಕೆಥೋಲಿಕ್ ಪಾದ್ರಿಗಳಲ್ಲಿ ಕೆಲವು ಸ್ವತಂತ್ರ ಚರ್ಚ್ ಗಳಲ್ಲಿ ಹೊರತುಪಡಿಸಿದರೆ ಇತರ ಪಾದ್ರಿಗಳಿಗೆ ಮದುವೆ ನಿಷಿದ್ಧ. ಪ್ರೊಟೆಸ್ಟೆಂಟ್ ಚರ್ಚ್ ಗಳಲ್ಲಿರುವ ಪಾದ್ರಿಗಳಿಗೆ ಮದುವೆಯ ಅವಕಾಶ ಇದೆ. ಹಿಂದೂ ಮಠಾಧೀಶರಲ್ಲಿ ಇಂದ್ರಿಯ ನಿಗ್ರಹ, ಇಂದ್ರಿಯಗಳನ್ನು ಗೆಲ್ಲಬೇಕು ಎಂಬ ಪ್ರಕೃತಿಗೆ ವಿರುದ್ಧವಾದ ನೀತಿ ಬೋಧನೆ ಮೂಲಕ ಮದುವೆ ನಿಷಿದ್ಧವಾಗಿದೆ. ಶಿವನನ್ನು ಬಿಟ್ಟರೆ ಕಾಮದಹನ ಮಾಡಿದ ಇನ್ನೊಂದು ಪ್ರಕರಣ ನಮ್ಮ ಪುರಾಣಗಳಲ್ಲಿಲ್ಲ.  ಕಾಮವನ್ನು ಗೆಲ್ಲುವುದು ಕಷ್ಟವಷ್ಟೇ ಅಲ್ಲ, ಅದು ಕೂಡ ಭ್ರಮೆಯೇ. ಕಾಮ ಎನ್ನುವುದು ಹಸಿವು, ಬಾಯಾರಿಕೆ, ನಿದ್ದೆಯಷ್ಟೇ  ಸಹಜವಾದದ್ದು, ಮುಖ್ಯವಾದದ್ದು. ಅದು ಕೇವಲ ಸಂತಾನೋತ್ಪತ್ತಿಗೆ ಮಾತ್ರವಲ್ಲ, ಸುಖ, ಸಂತಸಕ್ಕೂ, ದೈಹಿಕ ಒತ್ತಡ ತಣಿಸುವುದಕ್ಕೂ ಅತ್ಯಗತ್ಯ. ಗಂಡಿನಲ್ಲಿ ಕಾಮದ ಬಯಕೆ ಹೆಣ್ಣಿಗಿಂತ ಹೆಚ್ಚೇ ಇರುತ್ತದೆ. ಗಂಡಿನ ವೃಷಣದಲ್ಲಿ ಉತ್ಪತ್ತಿಯಾಗುವ ಟೆಸ್ಟೋಸ್ಟಿರೋನ್ ಎಂಬ ಹಾರ್ಮೋನ್ ಲೈಂಗಿಕ ಭಾವನೆ, ಕಾಮನೆಗೆ ಮುಖ್ಯ ಕಾರಣವಾಗಿದೆ. ಇದು ಪ್ರಕೃತಿಯ ನಿರ್ಧಾರ. 

ಹೀಗೆ ಪಾದ್ರಿಗಳು, ಮಠಾಧೀಶರಿಗೆ ಮದುವೆ ನಿಷಿದ್ಧವಾಗಿರುವ ಕಾರಣದಿಂದಲೇ ಜಗತ್ತಿನಾದ್ಯಂತ ನಿಷೇಧಿತ ವಲಯದಲ್ಲಿರುವ ವಿಶಿಷ್ಟ ವ್ಯಕ್ತಿಗಳು ಸಲಿಂಗಕಾಮದಲ್ಲಿ ತೊಡಗುವುದು, ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿಬೀಳುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ವೈಜ್ಞಾನಿಕವಾಗಿ ಕಾಮವನ್ನು ಗೆಲ್ಲುವುದು ಸಾಧ್ಯವೇ ಇಲ್ಲ. ಯಾಕಾದರೂ ಗೆಲ್ಲಬೇಕು?  

‘ಬ್ರಹ್ಮಚರ್ಯ ಅನುಸರಿಸುತ್ತಿರುವವರು ಆಂಜನೇಯನ ಚಿತ್ರ ಇರಿಸಿಕೊಂಡಿರುತ್ತಾರೆ. ನಿಮಗೊಂದು ವಿಚಿತ್ರ ಗೊತ್ತಾ? ಇದೇ ಆಂಜನೇಯ ಲಂಕಾದಹನ ಸಂದರ್ಭದಲ್ಲಿ ಹಾರುವಾಗ ಮತ್ಸ್ಯ ರೂಪದ ಹೆಣ್ಣನ್ನು ಕಂಡು ಆತನಲ್ಲಿ ವೀರ್ಯ ಸ್ಖಲನವಾಗುತ್ತದೆ. ಕೆಳಗೆ ಬಿದ್ದ ಆ ವೀರ್ಯವನ್ನು ಮೀನೊಂದು ನುಂಗಿ ಸಂತಾನೋತ್ಪತ್ತಿ ಆಗುತ್ತದೆ. 

“ಪುರುಷರಿಗೆ ಬದುಕಿನ ಕೊನೆ ಗಳಿಗೆವರೆಗೂ ಕಾಮದ ಬಯಕೆ ಇದ್ದೇ ಇರುತ್ತದೆ. ಕೆಲವು ಪುರುಷರು ತಮ್ಮ ಮನೋವಿಕಾರಗಳಿಂದಾಗಿ ಪ್ರಾಣಿಗಳು, ಮಕ್ಕಳು ಮತ್ತು ವೃದ್ಧೆಯರ ಮೇಲೂ ಅತ್ಯಾಚಾರ ಮಾಡಿ ವಿಕೃತ ಖುಷಿಯನ್ನು ಪಡೆಯುವಂಥ ಘಟನೆಗಳೂ ಸಂಭವಿಸಿವೆ. ಹೆಣ್ಣಿನ ಬಗ್ಗೆ ದ್ವೇಷ, ಕೀಳರಿಮೆ ಇರುವ ವ್ಯಕ್ತಿ ಪುರುಷ ಎಂದು ತೋರಿಸಿಕೊಳ್ಳುವ ಸಲುವಾಗಿಯೂ ಲೈಂಗಿಕ ಕಿರುಕುಳ ನೀಡುತ್ತಾರೆ “ ಎಂದು ಪ್ರಖ್ಯಾತ ಮಾನಸಿಕ ಆರೋಗ್ಯ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಹೇಳುತ್ತಾರೆ. 

ಶ್ರೀರಾಮಚಂದ್ರ ಏಕಪತ್ನಿ ವ್ರತಸ್ಥನೇ ಆಗಿದ್ದ ಎಂದು ಮಹಾಕಾವ್ಯದಲ್ಲಿ ಉಲ್ಲೇಖವಿದ್ದರೂ ಇತಿಹಾಸವನ್ನು ನೋಡಿದರೆ ರಾಜರು, ಶ್ರೀಮಂತರು ಬಹುಪತ್ನಿಯರನ್ನು ಹೊಂದಿದ್ದರು. ಈಗ ಒಬ್ಬ ಬಡವ ಈ ನಿಲುವು ಕೈಗೊಂಡರೆ ಆತ ಲಂಪಟ ಎನಿಸಿಕೊಳ್ಳುತ್ತಾನೆ. ಆದರೆ ಒಬ್ಬ ಶ್ರೀಮಂತ ಬಹುಪತ್ನಿಯರನ್ನು ಹೊಂದಿದರೆ ಆತ ರಸಿಕ ಎಂದು ಮೆಚ್ಚಿಕೊಳ್ಳುತ್ತಾರೆ. ಇದು ನಾಗರಿಕ ಸಮಾಜದ ಕಪಟತನವನ್ನೂ ತೆರೆದಿಡುತ್ತದೆ. 

ನಾಗರಿಕ ಸಮಾಜಕ್ಕೂ ಮುನ್ನ ಇದ್ದ ಮುಕ್ತ ಸಮಾಜದಲ್ಲಿ ಅನೇಕ ಬುಡಕಟ್ಟುಗಳಲ್ಲಿ ಮದುವೆ ಎನ್ನುವ ಕಲ್ಪನೆಯೇ ಇರಲಿಲ್ಲ. ಒಂದು ಹೆಣ್ಣನ್ನು ನಾಲ್ವರು ಪುರುಷರು  ಕೂಡಬಹುದಿತ್ತು. ಅವರಿಗೆ ಹುಟ್ಟಿದ ಮಕ್ಕಳು ಸಮುದಾಯದ ಮಕ್ಕಳು ಎನ್ನಿಸಿಕೊಳ್ಳುತ್ತಿದ್ದರು. ಮಹಾಕಾವ್ಯವನ್ನೇ ನೋಡಿ. ಐವರ ಪತ್ನಿಯಾಗಿದ್ದ ದ್ರೌಪದಿಗೆ ಕರ್ಣ ತನ್ನ ಪತಿಯಾಗಿದ್ದರೆ ಎಂಬ ಮೋಹದ ಬಯಕೆ ಕಾಡುತ್ತದೆ. ಇದೆಲ್ಲ ಮನುಷ್ಯ ಸಹಜವಾಗಿದ್ದರೂ ನಾಗರಿಕ ಸಮಾಜ ಇದಕ್ಕೆ ಅವಕಾಶ ನೀಡುವುದಿಲ್ಲ. ಈ ಚೌಕಟ್ಟಿನಿಂದಾಗಿಯೇ ಎಲ್ಲ ಸಮಸ್ಯೆಗಳೂ ಉದ್ಭವಿಸಿದವೇ? ವೇಶ್ಯಾತವಾಟಿಕೆಗೆ ಪರವಾನಗಿ ಸಿಕ್ಕರೆ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಬಹುದೇ?

ಈ ಪ್ರಶ್ನೆಗಳಿಗೆ ಡಾ.ಸಿ.ಆರ್.ಚಂದ್ರಶೇಖರ್ ಹೇಳುತ್ತಾರೆ, “ಇಚ್ಛಾಕಾಮ ಸಾಮಾಜಿಕ ವ್ಯವಸ್ಥೆಯನ್ನೇ ಹಾಳು ಮಾಡುತ್ತದೆ. ಒಂದು ಹೆಣ್ಣಿಗೆ ಒಂದು ಗಂಡು ಎಂಬುದೇ ಸರಿಯಾದ ಕ್ರಮ.ಜಗತ್ತಿನ ಪುರಾತನ ವೃತ್ತಿಯಾದ ವೇಶ್ಯಾವಾಟಿಕೆಗೂ ಅತ್ಯಾಚಾರ ಪ್ರಕರಣಗಳಿಗೂ ಯಾವುದೇ ಸಂಬಂಧ ಇಲ್ಲ. ವೇಶ್ಯಾವಾಟಿಕೆಗೆ ಅನುಮತಿ ನೀಡಿದರೆ ಕೆಲವು ಅತ್ಯಾಚಾರ ಪ್ರಕರಣಗಳು ಮಾತ್ರ ಕಡಿಮೆಯಾಗಬಹುದು ಎಂದು ಅವರು ಹೇಳುತ್ತಾರೆ. 

ಮೊದಲೆಲ್ಲ ಋಷಿಗಳಿಗೆ ಸಂಸಾರ ಇರುತ್ತಿತ್ತು. ಕೆಲವರು ಬ್ರಹ್ಮಚಾರಿಗಳೂ ಇದ್ದರು. ಮುಕ್ತಿಗೋಸ್ಕರ ಬ್ರಹ್ಮಚರ್ಯ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಈಗ ಮದುವೆ ನಿಷಿದ್ಧವಾಗಿರುವ ಗುರುಗಳು, ಸನ್ಯಾಸಿಗಳಲ್ಲಿ ನಾಲಗೆ ಚಪಲ, ಲೈಂಗಿಕ ಚಪಲ ಜಾಸ್ತಿಯೇ ಇದೆ ಎನ್ನುವಂತೆ ಅತ್ಯಾಚಾರ ಪ್ರಕರಣಗಳೂ ಬಯಲಾಗಿವೆ. ಇತರರಿಗೆ ಆಸೆ ಬಿಡಿ ಎನ್ನುವವರು ದುರಾಸೆಗೆ ಒಳಗಾಗುತ್ತಿದ್ದಾರೆ. ಕಾವಿ ಪೋಷಾಕು ಧರಿಸಿದವರಲ್ಲಿ ಅನೇಕರು ವೈಭವೋಪೇತ ಜೀವನವನ್ನೇ ನಡೆಸುತ್ತಿದ್ದಾರೆ. ಅವರು ಓಡಾಡಲು ಬಳಸುವ ಕಾರು, ವಾಸ್ತವ್ಯ ಹೂಡುವ ಬಂಗಲೆ ಅವರಲ್ಲಿ ಸರಳ ವ್ಯಕ್ತಿತ್ವ ಎಂಬುದನ್ನು ಬಿಂಬಿಸುತ್ತಿಲ್ಲ. ಐಷಾರಾಮಿ ಬದುಕಿನ ಭಾಗವಾಗಿ ಕಾಮವೂ ಸೇರಿಕೊಂಡಿದೆ. 

ಈ ಕಾವಿಧಾರಿಗಳಿಗೆ ನಿಜಕ್ಕೂ ಜನಕ ಮಹಾರಾಜ ಆದರ್ಶವಾಗಬೇಕಿತ್ತು. ಈತ ಭೌತಿಕ ಸಂಪತ್ತನ್ನು ತಿರಸ್ಕರಿಸಿ ಆಧ್ಯಾತ್ಮಿಕತೆಗೆ ಹೆಚ್ಚು ಒತ್ತು ನೀಡಿದ್ದ ಮಹಾಪುರುಷ. ಎಲ್ಲ ಪ್ರಾಪಂಚಿಕ ಭ್ರಮೆಗಳಿಂದ ಮುಕ್ತನಾಗಿದ್ದ ಅಪರೂಪದ ಚಕ್ರವರ್ತಿ. ಔರಂಗಜೇಬನೂ ಜನರ ತೆರಿಗೆ ಹಣ ದುರುಪಯೋಗವಾಗಬಾರದು ಎಂದು ತನ್ನ ವೈಯಕ್ತಿಕ ಖರ್ಚಿಗಾಗಿ ಕುರಾನ್ ಮಾರಾಟ ಮಾಡಿ ಸಂಪಾದನೆ ಮಾಡುತ್ತಿದ್ದ. ಬುದ್ಧ ತನ್ನ ಅನುಯಾಯಿಗಳಿಗೆ ಭಿಕ್ಷೆಗೆ ಹೋದಾಗ ಆ ಹೊತ್ತಿನದು ಸಿಕ್ಕರೆ ವಾಪಸು ಬನ್ನಿ ಎಂದು ಕಿವಿಮಾತು ಹೇಳುತ್ತಿದ್ದ. ಅವರೆಲ್ಲ ಹುಳಿ, ಉಪ್ಪು, ಖಾರ ನೋಡುವಂತಿರಲಿಲ್ಲ. ಒಂದು ಅಗುಳನ್ನೂ ಬಿಡುವಂತಿರಲಿಲ್ಲ.

ಮೊದಲೆಲ್ಲ ಜಂಗಮ ಮಠಗಳ ಮುಖ್ಯಸ್ಥರು ಬೆಳಿಗ್ಗೆ ಎದ್ದು ಜೋಳಿಗೆ ಹಿಡಿದು ಭಿಕ್ಷೆಗಾಗಿ ನಡೆಯುತ್ತಿದ್ದರು. ಜಂಗಮರು ಆಧ್ಯಾಿತ್ಮಿಕ ಬದುಕಿಗೆ ಶರಣಾಗಿ ಜನಸಾಮಾನ್ಯರ ಸಂಸಾರ ಸಮಸ್ಯೆ ಪರಿಹರಿಸುತ್ತಿದ್ದರು.  ಈಗ ಬಹುತೇಕ ಮಠಗಳು ಉದ್ದೇಶ ಮರೆತು ಮೌಢ್ಯ ಬಿತ್ತನೆಯಲ್ಲಿ   ನಿರತವಾಗಿವೆ. ಶಿಕ್ಷಣ ವ್ಯಾಪಾರದಲ್ಲೂ ತೊಡಗಿವೆ.

ಜಾತಿಗೊಂದು ಮಠವಾಗಿರುವುದರಿಂದ ತಮ್ಮ ಜಾತಿಯ ನಾಯಕನ ಪರವಾಗಿ ದನಿ ಎತ್ತುವ ಪರಿಪಾಠವೂ ಬೆಳೆಯುತ್ತಿದೆ. ಇವತ್ತು ಯಾವುದೇ ಸ್ವಾಮೀಜಿ ಜನಸಾಮಾನ್ಯರಿಗೆ ಮಾದರಿಯಾಗಿಲ್ಲ. ಅವರನ್ನು ಅನುಸರಿಸಲೇಬೇಕಾದ ಆದರ್ಶ ಗುಣಗಳು ಇಂಥವರಲ್ಲಿ ಕಾಣುತ್ತಿಲ್ಲ. ಇದ್ದುದರಲ್ಲಿಯೇ ಅತ್ಯಂತ ಮಾನವೀಯ ಗುಣಗಳನ್ನು ಹೊಂದಿದ್ದ ಶಿರೂರು ಸ್ವಾಮೀಜಿ ಅಪ್ಪಟ ಮನುಷ್ಯನಂತೆಯೇ ಬದುಕಿದ್ದರು. ಲಗೋರಿ ಆಡುತ್ತಿದ್ದರು, ಡ್ರಂ ನುಡಿಸುತ್ತಿದ್ದರು, ಈಜುತ್ತಿದ್ದರು. ಧೈರ್ಯವಾಗಿಯೇ ತಮಗನ್ನಿಸಿದಂತೆಯೇ ಬದುಕಿದ್ದರು. 

ಕೆಲವು ವರ್ಷಗಳ ಹಿಂದೆ ಪ್ರೇಮದ ಸುಳಿಗೆ ಬಿದ್ದ ವಿದ್ಯಾಭೂಷಣರು ಸನ್ಯಾಸ ತ್ಯಜಿಸಿ ಇಷ್ಟಪಟ್ಟ ಹೆಣ್ಣಿನೊಂದಿಗೆ ಮದುವೆಯಾಗಿ ಸಂಸಾರದ ಬಂಧನಕ್ಕೆ ಒಳಗಾಗಿದ್ದರು. ಆನಂತರ ಆ ಪ್ರಕರಣ ಬೇರೆಯೇ ತಿರುವು ಪಡೆದರೂ ವಿದ್ಯಾಭೂಷಣರು ಕಪಟತನ ತೋರಿರಲಿಲ್ಲ. 

ಪ್ರಾಣಿಗಳಿಗೆ ಮೇಟಿಂಗ್ ಸೀಸನ್ ಅಂತನಾದ್ರೂ ಇದೆ. ಮನುಷ್ಯನಿಗೆ ಅಂಥ ಸೀಸನ್ ಏನೂ ಇಲ್ಲ. ಮೂರೂ ಹೊತ್ತು ಕಾಮಧ್ಯಾನಿಯಾಗಿರಬಲ್ಲ. ಇನ್ನು ಈ ಎಲ್ಲ ಅವಕಾಶಗಳಿಂದ ವಂಚಿತನಾಗಿ ಮನುಷ್ಯ ಸಹಜ ಕ್ರಿಯೆಗಳಿಗೂ ನಿಷೇಧ ವಿಧಿಸಿಕೊಂಡಿರುವ ಪಾದ್ರಿಗಳು, ಸ್ವಾಮೀಜಿಗಳು ಏನು ತಾನೇ ಮಾಡಬೇಕು? ಮದುವೆಯನ್ನು ನಿಷೇಧಿಸಿದರೂ ಕಾಮವನ್ನು ನಿಷೇಧಿಸುವುದಕ್ಕೆ ಯಾವುದೇ ಕಾನೂನು, ನಿಯಮಕ್ಕೂ ಸಾಧ್ಯವಾಗುವುದಿಲ್ಲ.ಅದರ ಬದಲು ಮಠಗಳಲ್ಲಿರುವ ಬಾಲಸನ್ಯಾಸ ಪದ್ಧತಿಯನ್ನು ನಿಷೇಧಿಸುವ ಅಗತ್ಯ ಇದೆ. ಸನ್ಯಾಸ ಸ್ವೀಕರಿಸಿದರೂ ಅವರಿಗೆ ಮದುವೆಯಾಗುವ ಅವಕಾಶ ಕಲ್ಪಿಸಬೇಕು. ಗಂಡಿರಲಿ, ಹೆಣ್ಣಿರಲಿ ಸಂಗಾತಿಯಂತೂ ಬೇಕು. ಗಂಡಿಗೆ ಗಂಡೇ ಇರಬಹುದು, ಹೆಣ್ಣಿಗೆ ಹೆಣ್ಣೇ ಇರಬಹುದು. ಸಂಗಾತಿಯಂತೂ ಬೇಕು. ಸನ್ಯಾಸದ ಚೌಕಟ್ಟಿನಲ್ಲಿರುವವರು ಸಲಿಂಗ ಕಾಮದಲ್ಲೂ ತೊಡಗಬಹುದು, ಇನ್ನೊಂದು ಹೆಣ್ಣಿನ ಜತೆ ದೈಹಿಕ ಸಂಬಂಧವನ್ನೂ ಬೆಳೆಸಬಹುದು.   ಅದು ಮನುಷ್ಯ ಸಹಜ ನಿಯಮಗಳ ಪ್ರಕಾರ ಅಪರಾಧವೇನಲ್ಲ. ಆದರೆ ಅತ್ಯಾಚಾರ ಮಾಡುವುದು ಅಪರಾಧ. ಇಂಥ ವ್ಯಕ್ತಿಗಳು ದೈಹಿಕ ಬಯಕೆಯ ಒತ್ತಡಗಳಿಂದ ಬಿಡುಗಡೆ ಪಡೆಯುವುದಾದರೂ ಹೇಗೆ? ಅದರ ಬದಲು ಸನ್ಯಾಸಿಗಳಿಗೂ ಮದುವೆಗೆ ಅವಕಾಶ ನೀಡಿ ಅವರನ್ನೂ ಕಪಟ ಬದುಕಿನಿಂದ ಮುಕ್ತಗೊಳಿಸಬಹುದು.  ದೈಹಿಕವಾಗಿ ಅಸಾಧ್ಯವಾದುದನ್ನು ಸಾಧ್ಯಗೊಳಿಸುವಂತೆ ನಿರ್ಬಂಧ ವಿಧಿಸುವುದು ಯಾವ ನ್ಯಾಯ? ಈ ವಿಡಿಯೋ ನೋಡಿ ಅಯ್ಯೋ ಪಾಪ ಅನ್ನಿಸಿತು. ದೈಹಿಕ ಬಯಕೆಯನ್ನು  ಸಂತೋಷದಿಂದ ಅನುಭವಿಸುವುದೂ ಸಾಧ್ಯವಿಲ್ಲದೇ ಬಂಧನದಲ್ಲಿ ಇಂಥದ್ದೊಂದು ಕ್ರಿಯೆಯಲ್ಲಿ ತೊಡಗಿದಂತೆ ಅವರು ಕಾಣುತ್ತಿದ್ದರು. ಮದುವೆ ನಿಷಿದ್ಧ ಇರುವ ಸನ್ಯಾಸಿಗಳ ನಿಗೂಢ ಲೋಕದಲ್ಲಿ ಇನ್ನಾದರೂ ಸಂತಸ ಅರಳಲಿ ಎಂದಷ್ಟೇ ಹಾರೈಸಬಲ್ಲೆ.