ದಕ್ಷ ಪೊಲೀಸ್ ಅಧಿಕಾರಿ ಡಾ.ಮಧುಕರ್ ಶೆಟ್ಟಿ ಸಾವಿನ ತನಿಖೆ : ತೆರೆಯಲಾಗದ  ನಿಗೂಢ ಹೊದಿಕೆ

ರಾಜ್ಯದ ದಕ್ಷ ಐಪಿಎಸ್ ಅಧಿಕಾರಿ ಡಾ. ಮಧುಕರ್ ಶೆಟ್ಟಿ ಅವರ ಸಾವಿನ ಕುರಿತು ಹೈದರಾಬಾದ್ನ ಆಸ್ಪತ್ರೆಯೊಂದು ಡಾ.ದೇವಿಶೆಟ್ಟಿ ನೇತೃತ್ವದ ತನಿಖಾ ಸಮಿತಿಗೆ ಒದಗಿಸಿರುವ ದಾಖಲೆಗಳು, ಚಿಕಿತ್ಸೆ ನೀಡುವಲ್ಲಿ ವಿಳಂಬ ಅಥವಾ ನಿರ್ವಹಣೆಯಲ್ಲಿ ಲೋಪ ಆಗಿದೆ ಎಂದು ನಿರ್ಧರಿಸಲು ಪೂರಕವಾಗಿಲ್ಲ

ದಕ್ಷ ಪೊಲೀಸ್ ಅಧಿಕಾರಿ ಡಾ.ಮಧುಕರ್ ಶೆಟ್ಟಿ ಸಾವಿನ ತನಿಖೆ : ತೆರೆಯಲಾಗದ  ನಿಗೂಢ ಹೊದಿಕೆ

ದಕ್ಷ ಐಪಿಎಸ್ ಅಧಿಕಾರಿ ಡಾ. ಮಧುಕರ್ ಶೆಟ್ಟಿ ಅವರ ನಿಗೂಢ ಸಾವಿಗೆ ನಿಖರವಾದ ಕಾರಣಗಳನ್ನು ತಿಳಿಯುವಲ್ಲಿ ತಜ್ಞ ವೈದ್ಯರ ಸಮಿತಿ ವಿಫಲವಾಗಿದೆ. ನಾರಾಯಣ ಹೃದಯಾಲಯದ ಡಾ. ದೇವಿಶೆಟ್ಟಿ ನೇತೃತ್ವದ ತಜ್ಞ ವೈದ್ಯರ ಸಮಿತಿ, ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆ ಒದಗಿಸಿರುವ ವೈದ್ಯಕೀಯ ದಾಖಲೆಗಳನ್ನಾಧರಿಸಿ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆಯಾದರೂ ಸಾವಿನ ಕುರಿತು  ಅಂತಿಮ ತೀರ್ಮಾನಕ್ಕೆ ಬಂದಿಲ್ಲ.

ಇದೀಗ ಅಧಿಕಾರ ವ್ಯಾಪ್ತಿ ವಾದವನ್ನು ಮುಂದೊಡ್ಡಿರುವ ತಜ್ಞ ವೈದ್ಯರ ಸಮಿತಿ, ಮಧುಕರ ಶೆಟ್ಟಿ ಅವರ ಸಾವಿನ ಕುರಿತು ನೀಡಿರುವ ಪ್ರಾಥಮಿಕ ವರದಿಯನ್ನು ತೆಲಂಗಾಣ ರಾಜ್ಯ ಸರ್ಕಾರಕ್ಕೆ ಕಳಿಸಲು ಶಿಫಾರಸ್ಸು ಮಾಡಿದೆ. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರ ಪತ್ನಿ ನೇರವಾಗಿ ತೆಲಂಗಾಣ ವೈದ್ಯಕೀಯ ಮಂಡಳಿಗೆ ಪರಿಣಾಮಕಾರಿಯಾಗಿ ಪತ್ರ ಬರೆಯಬೇಕು ಎಂದು ಅಭಿಪ್ರಾಯಪಟ್ಟಿದೆ. ಹಾಗೆಯೇ ಪ್ರಾಥಮಿಕ ವರದಿ ಆಧರಿಸಿ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ತೆಲಂಗಾಣ ರಾಜ್ಯ ಸರ್ಕಾರವೇ ತೆಲಂಗಾಣ ವೈದ್ಯಕೀಯ ಮಂಡಳಿಗೆ ಸೂಚಿಸಲಿ ಎಂದು ಹೇಳಿದೆ.

ತಜ್ಞ ವೈದ್ಯರ ಸಮಿತಿ ಸಭೆ, ಈ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ 2019ರ ಸೆ.7ರಂದು ಸಭೆ ನಡೆಸಿದೆ. ಮಧುಕರ್ ಶೆಟ್ಟಿ ಅವರ ಸಾವಿನ ಹಿಂದಿನ ಸತ್ಯಾಂಶಗಳನ್ನು ತಿಳಿದುಕೊಳ್ಳುವಲ್ಲಿ ಆಗಿರುವ ಪ್ರಗತಿಯನ್ನು ತಜ್ಞ ವೈದ್ಯರ ಸಮಿತಿ ಸಭೆಯಲ್ಲಿ ವಿವರಿಸಿದೆ.

ಮಧುಕರ್ ಶೆಟ್ಟಿ ಅವರ ಸಾವಿನ ಕುರಿತು ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಯ ವೈದ್ಯರ ತಂಡ ನೀಡಿರುವ ದಾಖಲೆಗಳನ್ನಷ್ಟೇ ದೇವಿಶೆಟ್ಟಿ ನೇತೃತ್ವದ ತಜ್ಞ ವೈದ್ಯರ ಸಮಿತಿ ತನಿಖೆಗೊಳಪಡಿಸಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.  ಕಾಂಟಿನೆಂಟಲ್ ಆಸ್ಪತ್ರೆ, ಸಮಿತಿಗೆ ಒದಗಿಸಿರುವ ವೈದ್ಯಕೀಯ ದಾಖಲೆಗಳ ಪ್ರಕಾರ ಮಧುಕರ್ ಶೆಟ್ಟಿ ಅವರ ಚಿಕಿತ್ಸೆಯಲ್ಲಿ ಲೋಪ ಮತ್ತು ನಿರ್ಲಕ್ಷ್ಯಗಳಾಗಿವೆ ಎಂದು ತೀರ್ಮಾನಿಸಲು ಪೂರಕವಾದ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಸಮಿತಿ ಸಭೆಯ ಗಮನಕ್ಕೆ ತಂದಿದೆ.

ಹಾಗೆಯೇ ಮಧುಕರ್ ಶೆಟ್ಟಿ ಅವರು ಆಸ್ಪತ್ರೆಗೆ 2018ರ ಡಿಸೆಂಬರ್ 25ರಂದು ದಾಖಲಾಗಿದ್ದ ಸಂದರ್ಭದಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರಾದಿಯಾಗಿ ಇನ್ನಿತರೆ ಸಿಬ್ಬಂದಿ ಹೇಳಿಕೆ ಪಡೆಯಬೇಕಲ್ಲದೆ, 2018ರ ಡಿಸೆಂಬರ್ 26ರ ಸಂಜೆ ನೀಡಿದ ಚಿಕಿತ್ಸೆಗೆ ಸಂಬಂಧಿಸಿದ ಸಮಗ್ರ ದಾಖಲಾತಿಗಳು ದೊರೆತ ನಂತರ ವೈದ್ಯಕೀಯ ನಿರ್ಲಕ್ಷ್ಯ ಆಗಿದೆಯೇ ಅಥವಾ ರೋಗ ಪತ್ತೆಯ ವಿಧಾನದಲ್ಲಿ ಆಗಿರುವ ದೋಷಗಳು, ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಪರೀತ ವಿಳಂಬ ಆಗಿದೆಯೇ ಎಂಬ  ಕುರಿತಾಗಿ ನಿಖರವಾದ ಅಭಿಪ್ರಾಯ ನೀಡಬಹುದು ಎಂದು ದೇವಿಶೆಟ್ಟಿ ಅವರು ಅಭಿಪ್ರಾಯ ನೀಡಿದ್ದಾರೆ. ಈ ಅಭಿಪ್ರಾಯವನ್ನು ತಜ್ಞ ವೈದ್ಯರು ಮತ್ತು ಇಲಾಖೆ ಅಧಿಕಾರಿಗಳು ಒಮ್ಮತದಿಂದ ಅನುಮೋದಿಸಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.

ಇನ್ನು, ಮಧುಕರ ಶೆಟ್ಟಿ ಅವರು ತೀವ್ರ ಅಸ್ವಸ್ಥರಾಗಿದ್ದ ಸಂದರ್ಭದಲ್ಲಿ ಎಸ್ವಿಪಿಎನ್ಪಿಎ  ಆಸ್ಪತ್ರೆ ಯಾವ ಆಧಾರದ ಮೇಲೆ ನಿರ್ದಿಷ್ಟವಾಗಿ ಕಾಂಟಿನೆಂಟಲ್ ಆಸ್ಪತ್ರೆಗೆ ಕಳಿಸಲು ನಿರ್ಧರಿಸಿತು ಎಂದು ಮಧುಕರ ಶೆಟ್ಟಿ ಅವರ ಪತ್ನಿ ಪ್ರಶ್ನೆ ಎತ್ತಿದ್ದರು. ಈ  ಬಗ್ಗೆಯೂ ತೆಲಂಗಾಣ ವೈದ್ಯಕೀಯ ಮಂಡಳಿಯನ್ನು ಅವರ ಪತ್ನಿ ಸಂಪರ್ಕಿಸಬೇಕು ಎಂದು ತಜ್ಞ ವೈದ್ಯರ ಸಮಿತಿ ಅಭಿಪ್ರಾಯಿಸಿದೆ.

ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆ ಹೊಂದಿರುವ ಮಧುಕರ್ ಶೆಟ್ಟಿ ಅವರು ತಮ್ಮ ಸೇವಾವಧಿಯಲ್ಲಿ ಎಲ್ಲಿಯೂ ಒಂದೇ ಒಂದು ಕಳಂಕ, ಆರೋಪವನ್ನೂ ಹೊತ್ತಿರಲಿಲ್ಲ. 2018ರ ಡಿ.25ರಂದು ಮಧುಕರ್ ಶೆಟ್ಟಿ ಅವರನ್ನು ಹೈದ್ರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಡಿ.28ರಂದು ಮಧುಕರ್ ಶೆಟ್ಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಸಾವಿಗೆ ಎಚ್1ಎನ್1 ಸೋಂಕು ಕಾರಣ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದರು.

ಆದರೆ, ಮಧುಕರ್ ಶೆಟ್ಟಿ ಸಾವಿನ ಬಗ್ಗೆ ಪತ್ನಿ ಮತ್ತು ಸಹೋದರ ಅನುಮಾನ ವ್ಯಕ್ತಪಡಿಸಿದ್ದರು. ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ನೀಡದಿರುವ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿ, ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದನ್ನು ಸ್ಮರಿಸಬಹುದು.