ಅಂತಾರ್ಜಾತಿ ವಿವಾಹ: ಮೀಸಲಾತಿ ಸೌಲಭ್ಯಕ್ಕಾಗಿ ಜಾತಿಯನ್ನು ಬದಲಾಯಿಸುವಂತಿಲ್ಲ

ನಿಗದಿತ ಜಾತಿಯ ವ್ಯಕ್ತಿಯನ್ನು ಮದುವೆಯಾದ ನಂತರ ಮೀಸಲಾತಿಯ ಸೌಲಭ್ಯದ ಉದ್ದೇಶಕ್ಕಾಗಿ ತನ್ನ ಜಾತಿಯನ್ನು ಬದಲಾಯಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ

ಅಂತಾರ್ಜಾತಿ ವಿವಾಹ: ಮೀಸಲಾತಿ ಸೌಲಭ್ಯಕ್ಕಾಗಿ ಜಾತಿಯನ್ನು ಬದಲಾಯಿಸುವಂತಿಲ್ಲ

ಕಳೆದ ತಿಂಗಳು ಅಂಗೀಕರಿಸಿದ ತೀರ್ಪಿನಲ್ಲಿ ಮದ್ರಾಸ್ ಹೈಕೋರ್ಟ್ ನಿಗದಿತ ಜಾತಿಯ ವ್ಯಕ್ತಿಯನ್ನು ಮದುವೆಯಾದ ನಂತರ ಮೀಸಲಾತಿಯ ಉದ್ದೇಶಕ್ಕಾಗಿ  ತನ್ನ ಜಾತಿಯನ್ನು ಬದಲಾಯಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಆರ್. ಸುಬ್ಬಯ್ಯ ಮತ್ತು ಸಿ. ಸರವಣನ್ ಅವರ ವಿಭಾಗೀಯ ಪೀಠವು ಈ ತೀರ್ಪನ್ನು ಜಾರಿಗೊಳಿಸಿತ್ತು.

ಒಬ್ಬರ ನಂಬಿಕೆಯನ್ನು ಬದಲಾಯಿಸುವ ಮೂಲಕ ಅಥವಾ ಇನ್ನೊಂದು ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಒಬ್ಬ ತನ್ನ ಸಮುದಾಯವನ್ನು ಬದಲಾಯಿಸುವಂತಿಲ್ಲ ಎಂದು ಈ ನ್ಯಾಯಪೀಠವು ಅದೇಶ ನೀಡಿದೆ. ಆದ್ದರಿಂದ ಪರಿಶಿಷ್ಟ ಜಾತಿಯ ಹಿಂದೂ ಆದಿ ದ್ರಾವಿಡ ಜಾತಿಯ ಸದಸ್ಯರೊಂದಿಗಿನ ತನ್ನ ಮದುವೆಯನ್ನು ಉಲ್ಲೇಖಿಸಿ ನೌಕರರು ನಿಗದಿತ ಜಾತಿ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ.

ಪರಿಶಿಷ್ಟ ಜಾತಿ ಅಭ್ಯರ್ತಿಗಳಿಗೆ ಕಾಯ್ದಿರಿಸಿದ್ದ ಹುದ್ದೆಯ ವಿರುದ್ದ ಸಂಸ್ಥೆಯಲ್ಲಿ ಸಹಾಯಕ ಟೈಪಿಸ್ಟ್ ಆಗಿ ನೇಮಕಗೊಂಡ ಮಹಿಳೆಯ ಪರವಾಗಿದ್ದ 2015ರ ಏಕ ನ್ಯಾಯಾಧೀಶ ಪೀಠದ ಆದೇಶವನ್ನು ಪ್ರಶ್ನಿಸಿ ಓರಿಯಂಟಲ್ ವಿಮಾ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮದ್ರಾಸ್ ನ್ಯಾಯಾಲಯ ಈ ತೀರ್ಪನ್ನು ನೀಡಿದೆ

ಮಹಿಳಾ ಉದ್ಯೋಗಿ ಮೂಲತಃ ತಮಿಳುನಾಡಿನ ಹಿಂದುಳಿದ ವರ್ಗವಾದ ವನ್ನಿಯಾ ಸಮುದಾಯಕ್ಕೆ ಸೇರಿದವರು. ಆದರೆ ಹಿಂದೂ ಆದಿ ದ್ರಾವಿಡ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಂದಿಗೆ ಮದುವೆಯಾದ ನಂತರ 1977 ರಲ್ಲಿ ಫೋರ್ಟ್ ಟೊಂಡಿಯಾರ್ ಪೆಟ್ ತಹಶಿಲ್ದಾರ್ ಅವರಿಂದ ತಾನೇ ಪರಿಶಿಷ್ಟ ಜಾತಿ ಸಮುದಾಯ ಪ್ರಮಾಣಪತ್ರವನ್ನು ಪಡೆದಿದ್ದರು.

ಇದೇ ಜಾತಿ ಪ್ರಮಾಣ ಪತ್ರದ ಆಧಾರದ ಓರಿಯಂಟಲ್ ವಿಮಾ ಸಂಸ್ಥೆಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಳು. ಮತ್ತು ತಾನು ಹಿಂದೂ ಆದಿ ದ್ರಾವಿಡ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವಳೆಂದು ಘೋಷಿಸಿದ್ದಳು. ಮತ್ತು 1979 ರಲ್ಲಿ ಈ ಹುದ್ದೆಗೆ ನೇಮಕ ಗೊಂಡಿದ್ದರು.

ಆದರೆ 1990 ರಲ್ಲಿ ಆಕೆಯ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಕಲೆಕ್ಟರ್ ಶೋಕಾಸ್ ನೋಟಿಸ್ ನೀಡಿದ್ದರು. ಇದರ ಪ್ರಕಾರ ಓರಿಯಂಟಲ್ ವಿಮಾ ಸಂಸ್ಥೆ ಆಕೆಯ ಮೇಲೆ ದುಷ್ಕೃತ್ಯದ ಆರೋಪ ಹೊರಿಸಿ ಮೊಕದ್ದಮೆಯನ್ನು ದಾಖಲಿಸಿತು. ನೇಮಕಾತಿ ಸಮಯದಲ್ಲಿ ಆಕೆ ತಪ್ಪು ಮಾಹಿತಿಗಳನ್ನು ನೀಡಿದ್ದಾಳೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿತ್ತು. ಆರಂಭದಲ್ಲಿ ಈ ಪ್ರಕರಣವನ್ನು ವಜಾಗೊಳಿಸಿತ್ತು ನಂತರ ಏಕ ಸದಸ್ಯ ಪೀಠ ಆಕೆಯ ಪರವಾಗಿ ತೀರ್ಪು ನೀಡಿತ್ತು.

ಆದರೆ ಓರಿಯಂಟಲ್ ವಿಮಾ ಸಂಸ್ಥೆ ಈ ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ನ ಮೆಟ್ಟಿಲೇರಿತ್ತು. ಈ ಮೇಲ್ಮನವಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಅಂತಿಮವಾಗಿ ಅಂತರ್ಜಾತಿಯ ನಂತರ ಮೀಸಲಾತಿಯ ಸೌಲಭ್ಯವನ್ನು ಪಡೆಯುವುದಕ್ಕಾಗಿ ಜಾತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ.