ಅಂತರ್ಜಾತಿ ವಿವಾಹ: 1 ಮೇಕೆ, 3 ಕೋಳಿ ದಂಡ ನೀಡದ್ದಕ್ಕೆ 3 ದಿನವಾದರೂ ಪತ್ನಿಯ ಶವಸಂಸ್ಕಾರಕ್ಕೆ ಸಹಕರಿಸದ ಸೆಂಥಾಲ್ ಬುಡಕಟ್ಟು ಸಮೂಹ

ಅಂತರ್ಜಾತಿ ವಿವಾಹ: 1 ಮೇಕೆ, 3 ಕೋಳಿ ದಂಡ ನೀಡದ್ದಕ್ಕೆ 3 ದಿನವಾದರೂ ಪತ್ನಿಯ ಶವಸಂಸ್ಕಾರಕ್ಕೆ ಸಹಕರಿಸದ ಸೆಂಥಾಲ್ ಬುಡಕಟ್ಟು ಸಮೂಹ

ಭುವನೇಶ‍್ವರ: ಸಮುದಾಯದವರು ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಮೂರು ದಿನಗಳಾದರೂ ತನ್ನ ಪತ್ನಿಯ ಶವಸಂಸ್ಕಾರ ನಡೆಸದೇ ಇರುವ ಘಟನೆ ಓಡಿಸ್ಸಾ ರಾಜ್ಯದ ಮಯೂರರ್ಬಂಜ್ ಜಿಲ್ಲೆಯ ಕುಲೈನಾ ಠಾಣೆ ವ್ಯಾಪ್ತಿಯ ಕುಚೇರಿ ಗ್ರಾಮದಲ್ಲಿ ನಡೆದಿದೆ.

ಪತಿ ಕಂದ್ರ ಸೊರೆನ್ ಅವರ ತಂದೆ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದರು. ಇದನ್ನು ಅಲ್ಲಿಯ ಸಂಥಾಲ್ ಬುಡಕಟ್ಟು ಸಮಾಜ ತೀವ್ರವಾಗಿ ವಿರೋಧಿಸಿ, ಒಂದು ಮೇಕೆ, ಮೂರು ಕೋಳಿ, 15 ಕೆ.ಜಿ. ಅಕ್ಕಿ ಹಾಗೂ ಎರಡು ಮಡಕೆ ಸಾರಾಯಿ ನೀಡುವ ದಂಡ ವಿಧಿಸಿತ್ತು.  ಈ ದಂಡವನ್ನು ಭರಿಸದೇ ಇದ್ದರಿಂದ ಸಮಾಜವು ಕಂದ್ರ ಸೊರೆನ್ ಕುಟುಂಬಕ್ಕೆ ಯಾವುದೇ ಸಹಾಯ ಮಾಡುತ್ತಿರಲಿಲ್ಲ. ಅಲ್ಲದೇ ಸೊರೆನ್ ಅವರು ಪತ್ನಿ ಪರ್ಬತಿ (ಪಾರ್ವತಿ) ಅವರನ್ನು ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದರು. ಇದರ ತಪ್ಪಿಗೆ,  ಮದುವೆ ಸಂದರ್ಭದಲ್ಲಿ ವಧುವಿನ ಕಡೆಯವರಿಗೆ ಒಂದು ಆಕಳು ಇಲ್ಲವೇ ಎತ್ತು ಕೊಡುಗೆಯಾಗಿ ನೀಡಬೇಕಿತ್ತು. ಆದರೆ, ಇವರದ್ದು ಪ್ರೇಮ  ವಿವಾಹವಾದ್ದರಿಂದ ಇದನ್ನೂ ಸಹ ಸೊರೆನ್ ಕೊಟ್ಟಿರಲಿಲ್ಲ. ಪತ್ನಿ ಕಡೆಯಿಂದಲೂ ಈತನಿಗೆ ಸಹಾಯವಾಗಿರಲಿಲ್ಲ.

ವೃತ್ತಿಯಿಂದ ದಿನಗೂಲಿಯಾಗಿದ್ದ ಸೊರೆನ್, ಆ.. 14 ರಂದು ತನ್ನ ಪತ್ನಿ ತೀರಿಕೊಂಡಾಗಿನಿಂದ ಮುಂದಿನ ದಿನಗಳಲ್ಲಿ ದಂಡ ಭರಿಸುವುದಾಗಿ ವಾಗ್ದಾನ ಮಾಡುತ್ತಲೇ ಇದ್ದ. ಆದರೆ, ಸಮಾಜದ ಹಿರಿಯರು ಒಪ್ಪುತ್ತಿರಲಿಲ್ಲ. ಆದ್ದರಿಂದ, ಮೂರು ದಿನಗಲಾದರೂ ಶವ ಮನೆಯಲ್ಲೇ ಇತ್ತು.

ಪೊಲೀಸ್ ಭೇಟಿ: ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿದ ಕುಲೈನಾ ಠಾಣೆ ಅಧಿಕಾರಿ ಕಮಲಕಾಂತ ದಾಸ್, ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಿ, ಸೊರೆನ್ ಅವರನ್ನು ಸಮಾಜದಿಂದ ಬಹಿಷ್ಕರಿಸಲಾಗಿತ್ತೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಕುತೂಹಲಕಾರಿ ಸಂಗತಿ ಎಂದರೆ, ರಾಜ್ಯ ಕಂದಾಯ ಹಾಗೂ ವಿಪತ್ತು ನಿರ್ವಹಣೆ ಇಲಾಖೆ ಸಚಿವ ಸುಧಾಮ ಮರ್ನಾಡಿ ಅವರೂ ಸಹ ಸಂಥಾಲ್ ಬುಡಕಟ್ಟು ಜನಾಂಗಕ್ಕೆ ಸೇರಿದ್ದು, 2016ರಲ್ಲಿ ತಮ್ಮ ಪುತ್ರಿಯ ವಿವಾಹವು ಅಂತರ್ಜಾತಿಯವಾಗಿತ್ತು.  ಅದಕ್ಕಾಗಿ, ಅವರೂ ಸಹ ಸಾಮಾಜಿಕ ಬಹಿಷ್ಕಾರ ಎದುರಿಸಬೇಕಾಗಿತ್ತು ಎಂದು ಹೇಳಲಾಗುತ್ತಿದೆ.