ಬದುಕು ಕಳೆದು ಕೊಂಡವರ ನಡುವೆ ಮೆರೆಯುತ್ತಿರುವವರ ಒಳ ಆಕ್ರಂದನಗಳು

ಬದುಕು ಕಳೆದು ಕೊಂಡವರ ನಡುವೆ  ಮೆರೆಯುತ್ತಿರುವವರ ಒಳ ಆಕ್ರಂದನಗಳು

ನೆರೆ-ಬರದಿಂದ ಕಂಗೆಟ್ಟ ಜನ ಕಣ್ಣೀರು ಸುರಿಸುತ್ತಿರುವುದನ್ನ ಬದಿಗಿಟ್ಟು, ಬಣ್ಣ ಬಣ್ಣದ ದಸರಾ ರಂಗು ತುಂಬಿಕೊಳ್ಳಲು ಮಂತ್ರಿಮಂಡಲ ಮೈಸೂರಿಗೆ ವಿಜಯಂ ಗೈದು ಒಡ್ಡೋಲಗ ನಡೆಸುತ್ತಿದೆ.

ಪ್ರವಾಹದಿಂದ ಪ್ರಾಣ ಕಳೆದುಕೊಂಡವರು 84 ಮಂದಿ,  ಮನೆ ಹಾಳಾಗಿರುವ ಸಂಖ್ಯೆ 1.5  ಲಕ್ಷ.  ಬೆಳೆ ಹಾಳಾಗಿರುವುದು  5.5  ಲಕ್ಷ ಹೆಕ್ಟೇರ್ ನಷ್ಟು.. ರಾಜ್ಯ ಕೇಳಿರುವುದು   38 ಸಾವಿರಕೋಟಿರು.ಗಳ ಪರಿಹಾರ.   ಹಾಗೂ ಹೀಗೂ ಕೇಂದ್ರ ಕೊಟ್ಟಿರುವುದು  1200   ಕೋಟಿರು.ಗಳು ಮಾತ್ರ.   ಇದು ಆನೆ ಹೊಟ್ಟೆಗೆ ಅರೆಕಾಲಿನ ಮಜ್ಜಿಗೆ ಎಂದು ವಿಪಕ್ಷದವರು ಟೀಕಿಸುವುದಿರಲಿ ಖುದ್ದಾಗಿ ಮುಖ್ಯಮಂತ್ರಿಯೇ ಇದರಿಂದ ಏನೇನೂ ಮಾಡಲಾಗಲ್ಲ ಎಂದು ಗೋಳು ತೋಡಿ ಕೊಳ್ಳುತ್ತಿದ್ದರೆ,  ತಲೆ ಕೆಟ್ಟ ಮಂತ್ರಿ ಮಾಧುಸ್ವಾಮಿ ಪರಿಹಾರ ಕೇಳಲು ಯಾರೂ ಬರುತ್ತಿಲ್ಲ ಎಂಬ ಪುಂಗಿಯೂದುತ್ತಿದ್ದಾರೆ.  ಮತ ಕೇಳಲು ಮನೆ ಮನೆ ಬಾಗಿಲಿಗೆ ಅಲೆಯುವ ಇವರೀಗ,  ಬೀದಿಗೆ ಬಿದ್ದಿರುವ ಜನ ನಮ್ಮ ಬಳಿ ಬಂದು ಪರಿಹಾರ ಕೇಳಬೇಕು,  ದಾಖಲಾತಿ ಒದಗಿಸಬೇಕು ಎಂಬಿತ್ಯಾದಿ ಮಾತುಗಳನ್ನ ಉದುರಿಸುತ್ತಿದ್ದಾರೆ.

ಇದರ ನಡುವೆಯೇ ಕೇಂದ್ರ ಕೊಟ್ಟಿರುವ  1200 ಕೋಟಿರುಗಳು, ಈಗಿನ ವಿಕೋಪದ ಲೆಕ್ಕದ್ದ ಅಥವಾ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಸಂಭವಿಸಿದ್ದ ದುರಂತದ ಲೆಕ್ಕದ್ದ ಎಂಬುದಿನ್ನೂ ಖಚಿತವಾಗಿಲ್ಲ.

ರಾಜ್ಯ ಕೊಟ್ಟಿರುವ ಅಂದಾಜು ಲೆಕ್ಕ ಸರಿ ಇಲ್ಲ ಎಂದು ಪುನರವಲೋಕನಕ್ಕೆ ಸೂಚಿಸಿರುವ ಕೇಂದ್ರ, ಇಲ್ಲೂ ಕೂಡ ಸರ್ಕಾರ ನೆಟ್ಟಗೆ ಲೆಕ್ಕ ಕೊಟ್ಟಿಲ್ಲ, ಹೀಗಾಗಿ ಕೇಂದ್ರ ಪರಿಹಾರ ಕೊಟ್ಟಿಲ್ಲ ಇದರಲ್ಲಿ ಮೋದಿ ತಪ್ಪಿಲ್ಲ.

ತಪ್ಪೆಲ್ಲ ಮುಖ್ಯಮಂತ್ರಿಯದು ಎಂಬುದಾಗಿ ಬಿಂಬಿಸುವ ಮುಖೇನ ಬಿಎಸ್ ವೈ ಮುಖಕ್ಕೆ ಮಂಗಳಾರತಿ ಎತ್ತಲು ಇದನ್ನೂ ಬಳಸಿಕೊಂಡಿದೆ. ಮಾಜಿ ಪ್ರಧಾನಿ ದೇವೇಗೌಡರು ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಅಧಿವೇಶನ ಆರಂಭವಾಗುವ  10 ನೇ ತಾರೀಕಿನಂದೇ ಹೋರಾಟ ನಡೆಸಲು ಸಜ್ಜಾಗಿದ್ದಾರೆ.

ಕಾವೇರಿಗೆ ಸಂಬಂಧಿಸಿದಂತೆ ಇವರು ಉಪವಾಸ ಕೂತಾಗ ಎದ್ದೆನೋ ಬಿದ್ದೆನೋ ಎಂದು ಪ್ರಧಾನಿ ಮೋದಿ ಎಚ್ಚೆತ್ತುಕೊಂಡು ದೂರವಾಣಿ ಮೂಲಕ ಮಾತಾಡಿ ಸಮಸ್ಯೆಗೆ ತೆರೆ ಎಳೆದಿದ್ದರು.  ಇದೇ ಲೆಕ್ಕದಿಂದ ಇವಾಗಲೂ ಕೇಂದ್ರ ಸರ್ಕಾರ ಕಣ್ಣು ಬಿಡಬಹುದು,  ದಳಕ್ಕೆ ಅದರಿಂದ ಕ್ರೆಡಿಟ್ ಸಿಗಬಹುದು ಎಂಬ ರಾಜಕೀಯ ಲೆಕ್ಕಗಳೂ ಇದರ ಹಿಂದಿವೆ ಎಂಬುದನ್ನ ತಳ್ಳಿ ಹಾಕಲಾಗಲ್ಲ. ದೇವೇಗೌಡರ ಹೋರಾಟದ ಫಲಾ ಫಲಗಳೇನಾದರೂ ಆಗಲಿ, ನೆರೆಸಂತ್ರಸ್ತರ ಪರವಾಗಿ ಕೂಗೆಬ್ಬಿಸಿದರು ಎಂಬ ಸಕಾರಾತ್ಮಕ ನಿಲುವು ಕೊಂಚ ಮಟ್ಟಿಗಾದರು ಸೃಷ್ಟಿಸಿಕೊಳ್ಳಲು ಸಾಧ್ಯವಾಗುವುದಂತು ಖರೆ.

ಕಾಂಗ್ರೆಸ್ ನಲ್ಲಿ ವಿಪಕ್ಷನಾಯಕ ಯಾರು ಎಂಬುದೇ ದೊಡ್ಡ ವಿಚಾರವಾಗಿರುವುದರಿಂದ ಪರಿಹಾರದ ಬಗ್ಗೆ ಸಿದ್ದರಾಮಯ್ಯ ಹೊರತಾಗಿಸಿ ಇನ್ಯಾವ ನಾಯಕ ಶಿಖಾಮಣಿಯೂ ಸೊಲ್ಲೆತ್ತಿಲ್ಲ. ಪರಿಣಾಮವಾಗಿ ತನ್ನದೇ ಆಂತರಿಕ ಸಮಸ್ಯೆಯಿಂದ ಬಳಲುತ್ತಿರುವ ಹಸ್ತ ಪಕ್ಷದ ಸ್ಥಿತಿ ಅಪವ್ಯಸವಾಗಿಯೇ ಇದೆ.

ಇವೆರಡೂ ಪಕ್ಷಗಳ ವೈರುದ್ಯಮಯ ಸ್ಥಿತಿ ನಡುವೆಯೇ ಯಡಿಯೂರಪ್ಪ ಅಸಹಾಯಕ ಸ್ಥಿತಿಯಲ್ಲೇ ಕಲಾಪ ನಡೆಸಲು ಸಜ್ಜಾಗುತ್ತಿದ್ದಾರೆ.  ಕೇವಲ ಮೂರು ದಿನಕ್ಕೆ ಸೀಮಿತವಾಗಿರುವ ಕಲಾಪದಲ್ಲಿ ಲೇಖಾನುದಾನ ಪಡೆದುಕೊಳ್ಳುವುದೇ ಮುಖ್ಯವಾಗಿದೆ.  ಬರ , ಬಳ್ಳಾರಿ ಜಿಲ್ಲೆ ವಿಭಜನೆ , ವರ್ಗಾವಣೆ ವಿಚಾರವನ್ನೂ ಚರ್ಚೆಗೆಳೆದು ಬಿಜೆಪಿಯ ಒಳ ಬೇಗುಧಿಗಳಿಗೆ ಮತ್ತಷ್ಟು ತುಪ್ಪ ಸುರಿಯುವ ಸಾಧ್ಯತೆಗಳನ್ನ ವಿಪಕ್ಷಗಳು ಇಟ್ಟುಕೊಂಡಿವೆ.  ಆದರೆ ಇಂಥವೆಲ್ಲ ವಿಚಾರ ಮಂಡನೆಗೆ ಅವಕಾಶ ಕೊಡದೆ ಮುಜುಗರದಿಂದ ಪಾರಾಗುವ ಲೆಕ್ಕ ಆಳುವ ಪಕ್ಷದ್ದಾಗಿದೆ.

ಇನ್ನೆರಡೇ ದಿನದಲ್ಲಿ ಅಧಿವೇಶನ ಆರಂಭವಾಗುತ್ತಿರುವ ಬೆನ್ನಲ್ಲೇ ಅತಂತ್ರರ ಕಾಟವೂ ಸರ್ಕಾರವನ್ನ ಕಾಡುತ್ತಿದ್ದು, ಡಿಸೆಂಬರ್ ವರೆಗೆ ನಾವೇನು ಮಣ್ಣು ತಿನ್ನಬೇಕಾ, ಚುನಾವಣೆಗೆ ಮಾಡಿರುವ ಸಾಲ ತೀರಿಸಿಲ್ಲ ಹಣ ತರುವ ಮಾರ್ಗ ಕಲ್ಪಿಸಿಕೊಡಿ ಎಂದು ಹಲವರು ದುಂಬಾಲು ಬಿದ್ದು, ರಾಜೀನಾಮೆ ಕೊಟ್ಟು ಬನ್ನಿ ಎಂದು ಮಾತಾನಾಡಿದಾಗ ಏನೇನು ಭರವಸೆ ಕೊಟ್ಟಿದ್ದಿರಿ, ಇವಾಗ ಅದನ್ನೆಲ್ಲ ಮರೆತಂತೆ ಆಡುತ್ತಿದ್ದೀರಿ ,ನಿಮಗೆ ಒಳಿತಾಗಲ್ಲವೆಂಬ ಶಾಪವನ್ನಿಡುತ್ತಿರುವುದು ಬಿಎಸ್ ವೈ ಗೆ ಸಹಿಸಲಾಗಿದೆ. ಎತ್ತಲಿಂದ ನೋಡಿದರೂ ಮುಖ್ಯಮಂತ್ರಿ ಕುರ್ಚಿಗೆ ಕುಣಿಕೆ ಕಟ್ಟಿ ಎಳೆಯುವವರೇ ಕಾಣ ಸಿಗುತ್ತಿದ್ದಾರೆ.