ನ್ಯಾಯವಂಚಿತ ಚಾಂಪಿಯನ್ ಶಾಂತಿ 

ನ್ಯಾಯವಂಚಿತ ಚಾಂಪಿಯನ್ ಶಾಂತಿ 

ಹದಿಮೂರು ವರ್ಷಗಳ ಹಿಂದೆ ದೋಹಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನ 800 ಮೀಟರ್ ಓಟದಲ್ಲಿ ರಜತ ಪದಕ ಗೆದ್ದ ಶಾಂತಿಯ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಆಕೆಯನ್ನು ಲಿಂಗ ಧೃಡೀಕರಣ ಪರೀಕ್ಷೆಗೆ ಒಳಪಡಿಸಲಾಯಿತು. ಸಂದರ್ಭದಲ್ಲಿ ಆಕೆಯ ಘನತೆಗೌರವಗಳಿಗಾದ ಧಕ್ಕೆಯನ್ನು ಆಕೆಯ ಬಾಯಲ್ಲೇ ಕೇಳೋಣ: "ಅರ್ಧ ದಿನಕ್ಕಿಂತಲೂ ಹೆಚ್ಚು ಕಾಲ ನನ್ನನ್ನು ಬೆತ್ತಲೆಯಾಗಿ ಕೂಡಿಸಲಾಯಿತು. ಅದು ಏಕೆಂಬುದರ ಬಗ್ಗೆ ನನಗೆ ಯಾವುದೇ ಅರಿವಿಲ್ಲ. ಅದು ಲಿಂಗ ಧೃಡೀಕರಣ ಪರೀಕ್ಷೆ ಎಂದು ನನಗೆ ತಿಳಿದಿರಲಿಲ್ಲ. ನಮ್ಮ (ಭಾರತೀಯ) ಅಥ್ಲೆಟಿಕ್ಸ್ ತಂಡದ ಜತೆ ಬಂದಿದ್ದ ವೈದ್ಯನಿಗಾಗಿ ತಲಾಶೆ ನಡೆಸಿದೆ, ಆತ ಕಾಣಲಿಲ್ಲ. ನನ್ನ ರಾಷ್ಟ್ರದವರಲ್ಲದ, ನನ್ನ ಭಾಷೆಯವರಲ್ಲದ, ನನ್ನ ಲಿಂಗದವರಲ್ಲದ ಪುರುಷ ವೈದ್ಯರ ತಂಡವೊಂದರ ಮುಂದೆ ನಾನು ವಿವಸ್ತ್ರಳಾಗಿ ನಿಂತೇ ಇದ್ದೆ. ಅವರ ಪ್ರಶ್ನೆಗಳಾವುವೂ ನನಗೆ ಅರ್ಥವಾಗಲಿಲ್ಲ. ಕೊನೆಗೆ ಅವರ ಕಣ್ಣೆದುರಿಗೇ ಮೂತ್ರ ವಿಸರ್ಜಿಸಲು ನನಗೆ ಸನ್ನೆ ಮಾಡಿ ತಿಳಿಸಿದರು."  

ಪರಿಯ ಮಾನಭಂಗದ ನಂತರ ಶಾಂತಿಯ ಪದಕವನ್ನು ವಾಪಸ್ ಪಡೆಯಲಾಯ್ತು. ಆಕೆಗಾದ ಭೀಕರ ಅಪಮಾನದ ವಿರುದ್ಧ ಭಾರತೀಯ ತಂಡದ ಒಬ್ಬ ಸದಸ್ಯರೂ ದನಿಯೆತ್ತಲಿಲ್ಲ, ಹುಯಿಲೆಬ್ಬಿಸಲಿಲ್ಲ, ಪ್ರತಿಭಟಿಸಿ ಸಾಮೂಹಿಕವಾಗಿ ಸ್ಪರ್ಧೆಯಿಂದ ಹೊರಬೀಳಲಿಲ್ಲ. ಘಟನೆಯ ಹೊತ್ತಿಗೆ ಶಾಂತಿ ದೇಶಕ್ಕೆ ಒಟ್ಟು 12 ಪದಕಗಳನ್ನು ಗಳಿಸಿಕೊಟ್ಟಿದ್ದರು

ಆರ್ಥಿಕ ಮುಗ್ಗಟ್ಟು, ಉಭಯ ಲಿಂಗಿಗಳ ವಿರುದ್ಧ ಸಮಾಜ ತಳೆದಿರುವ ತಿರಸ್ಕಾರ ಮನೋಭಾವ, ಮತ್ತಿತರ ಒತ್ತಡಗಳನ್ನು ಅನುಭವಿಸಿದ ಶಾಂತಿ 2007 ರಲ್ಲಿ  ಪಶು ಔಷಧವನ್ನು ಸೇವಿಸಿ ಆತ್ಮಹತ್ಯೆಗೆ ಮುಂದಾಗುತ್ತಾರೆ. ಅದೃಷ್ಟವಶಾತ್ ಬದುಕುಳಿದು ತಮ್ಮ ಬದುಕಿನ ಹೋರಾಟವನ್ನೂ, ದೋಹಾದಲ್ಲಿ ತಮ್ಮಿಂದ ರಜತ ಪದಕವನ್ನು ವಾಪಸ್ ಪಡೆದ ಅನ್ಯಾಯದ ವಿರುದ್ಧದ ಹೋರಾಟವನ್ನೂ ಮುಂದುವರಿಸುತ್ತಾರೆ

ಶಾಂತಿ ಜನಿಸಿದ್ದು ಕಡುಬಡವ ದಲಿತ ಕುಟುಂಬದಲ್ಲಿ.  ತಮಿಳುನಾಡಿನ ಪುದುಕೊಟ್ಟೈನ ಹಳ್ಳಿಯೊಂದರ ಇಟ್ಟಿಗೆ ಕುಲುಮೆಯಲ್ಲಿ ಕೂಲಿಕಾರ ತಂದೆತಾಯಿಯರ ಐವರು ಮಕ್ಕಳಲ್ಲಿ ಒಬ್ಬಳಾಗಿ. ಶೌಚಾಲಯವಿಲ್ಲದ, ನೀರುವಿದ್ಯುತ್ ಸೌಲಭ್ಯವಿಲ್ಲದ ಮನೆಯಲ್ಲಿ. ಓಡುವುದರಲ್ಲಿ ಆಸಕ್ತಿ ಹುಟ್ಟಿದ್ದು ತಾತನಿಂದ. ತಾತನೇ ಶೂಸ್ ಕೊಡಿಸುತ್ತಾನೆ. ಶಾಲೆಯೊಂದರ ಕ್ರೀಡಾ ಕೋಚ್ ಕಣ್ಣಿಗೆ ಬಿದ್ದ ಶಾಂತಿಗೆ ಅದೇ ಶಾಲೆಯಲ್ಲಿ ಉಚಿತವಾಗಿ ವಿದ್ಯಾಭ್ಯಾಸದ ಅವಕಾಶ ನೀಡಲಾಗುತ್ತದೆ. ಸಮವಸ್ತ್ರದ ಜತೆಗೆ ಮೊದಲ ಬಾರಿಗೆ ಮೂರು ಹೊತ್ತು ಊಟಮಾಡುವ ಅದೃಷ್ಟ ಎದುರಾಗುತ್ತದೆ. ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬಾಲಕಿ ಶಾಂತಿ 800 ಮೀ, 1500 ಮೀ, ಮತ್ತು 3000 ಮೀ ಸ್ಪರ್ಧೆಗಳಲ್ಲಿ ಪದಕ ಪಡೆಯುತ್ತಲೇ. ನಂತರ ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ರಜತಪದಕ ತನ್ನದಾಗಿಸಿಕೊಳ್ಳುತ್ತಾರೆ

2004 ರಲ್ಲಿ ಅಂದಿನ ಮುಖ್ಯಮಂತ್ರಿ ಜಯಲಲಿತಾ ಒಂದು ಲಕ್ಷ ರೂಗಳ ಪ್ರೋತ್ಸಾಹಧನವನ್ನು  ಆಕೆಗೆ ನೀಡುತ್ತಾರೆ. ಆಕೆಯ ಬೃಹತ್ ಸಾಧನೆಯನ್ನು ಪರಿಗಣಿಸಿ  ಮುಂದಿನ ಮುಖ್ಯಮಂತ್ರಿ ಕರುಣಾನಿಧಿ 15 ಲಕ್ಷ ನೀಡುತ್ತಾರೆ. ಶಾಂತಿ ಹಣವನ್ನು ಕಿರಿಯ ಅಥ್ಲೆಟ್ಗಳನ್ನು ತಯಾರುಮಾಡುವುದಕ್ಕಾಗಿ ವಿನಿಯೋಗಿಸುತ್ತಾರೆ

ಏತನ್ಮಧ್ಯೆ ಆಕೆ ತನ್ನ ಅಪ್ರತಿಮ ಸಾಧನೆಯ ಆಧಾರದ ಮೇರೆಗೆ ಉದ್ಯೋಗ ಗಿಟ್ಟಿಸಿಕೊಳ್ಳುವ ಪ್ರಯತ್ನ ಫಲನೀಡುವುದಿಲ್ಲ. ಭಾರತೀಯ ರೈಲ್ವೆಯಾದಿಯಾಗಿ ಯಾರೂ ಆಕೆಯ ಮನವಿಯನ್ನು ಪರಿಗಣಿಸುವುದಿಲ್ಲ. ಗೆದ್ದ ಪದಕವನ್ನು ಆಕೆ ಕಳೆದುಕೊಂಡಿದ್ದರಿಂದ ಉದ್ಯೋಗ ಕೊಡಲಾಗದೆಂಬ ಅಮಾನವೀಯ  ದೊರಕುತ್ತದೆ

2009 ರಲ್ಲಿ ಬರ್ಲಿನ್ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ದಕ್ಷಿಣ ಆಫ್ರಿಕಾದ ಸೆಮೆನ್ಯಾ 800 ಮೀ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುತ್ತಾರೆ. ಆದರೆ ಆಕೆಯೂ ಲಿಂಗ ಧೃಡಪರೀಕ್ಷೆಗೆ ಗುರಿಯಾಗಿ ಅದರಲ್ಲಿ ವಿಫಲರಾದ ಕಾರಣಕ್ಕೆ ಪದಕವನ್ನು ವಾಪಸ್ ಪಡೆಯಲಾಗುತ್ತೆ. ಕ್ರಮವನ್ನು ಪ್ರಶ್ನಿಸಿ ನಡೆದ ಉಗ್ರ ಪ್ರತಿಭಟನೆಗೆ ಮಣಿದು ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ ಫೆಡರೇಷನ್ಸ್ ಪ್ರಶಸ್ತಿ, ಪ್ರಶಸ್ತಿ ಹಣ, ಪದಕ ಮೂರನ್ನೂ ಆಕೆಗೆ ಮತ್ತೆ ನೀಡುತ್ತದೆ. ಲಂಡನ್ನಲ್ಲಿ ನಡೆದ 2012 ಒಲಿಂಪಿಕ್ಸ್ನಲ್ಲಿ ದಕ್ಷಿಣ ಆಫ್ರಿಕಾ ಧ್ವಜವನ್ನು ಹಿಡಿದು ತಂಡವನ್ನು ಮುನ್ನಡೆಸುವ ಗೌರವವನ್ನು ಸೆಮೆನ್ಯಾಗೆ ಸಲ್ಲಿಸಲಾಗುತ್ತದೆ

1976 ಒಲಿಂಪಿಕ್ಸ್ ಕ್ರೀಡಾಕೂಟದ ಡೆಕೆಥ್ಲಾನ್ ಸ್ಪರ್ಧೆಯಲ್ಲಿ ಅಮೆರಿಕೆಯ ಕೇಟ್ಲಿನ್ ಜೆನ್ನರ್ ಸ್ವರ್ಣಪದಕ ಗೆಲ್ಲುತ್ತಾರೆ. 39 ಸುದೀರ್ಘ ವರ್ಷಗಳ ನಂತರ ಆಕೆ ತಾನು ಉಭಯಲಿಂಗಿ ಎಂದು ಘೋಷಿಸಿಕೊಳ್ಳುತ್ತಾರೆ. ಎಲ್ಲೆಡೆಯಿಂದ ಆಕೆಗೆ ಪ್ರಶಂಸೆಯ ಸುರಿಮಳೆ ಬೀಳುತ್ತದೆ. ಆಕೆ ತನ್ನ ಲಿಂಗ ಕುರಿತು ಧೈರ್ಯವಾಗಿ, ಮುಕ್ತವಾಗಿ ಘೋಷಿಸಿದ್ದಕ್ಕಾಗಿ ಆರ್ಥರ್ ಆಶ್ ಶೌರ್ಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತದೆ. ಸಂದರ್ಭದಲ್ಲಿ ಗದ್ಗದಿತರಾಗಿ ಮಾತನಾಡುವ ಕೇಟ್ಲಿನ್ ಉಭಯಲಿಂಗಿಗಳನ್ನು ಸಮಾಜ ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು ವಿವರಿಸುತ್ತಾರೆ. ಅವರನ್ನು ಕೊಲೆಮಾಡಲಿಕ್ಕೂ ಹೇಸದ ವ್ಯವಸ್ಥೆ ನಿತ್ಯ ಅವರನ್ನು ಅಪಹಾಸ್ಯ ಮಾಡುತ್ತದೆ, ಎನ್ನುತ್ತಾರೆ

ದೋಹಾದಲ್ಲಿ ತನಗಾದ ಅನ್ಯಾಯದ ವಿರುದ್ಧ ದನಿ ಎತ್ತದಿದುಕ್ಕಾಗಿ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಮತ್ತು ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ವಿರುದ್ಧ ಶಾಂತಿ ನ್ಯಾಯ ಬೇಡುತ್ತಾರೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗ ತಡವಾಗಿ ದೂರು ನೀಡುತ್ತಿದ್ದಾರೆಂದು ಹೇಳಿ ಶಾಂತಿಯ ಅರ್ಜಿಯನ್ನು ತಳ್ಳಿಹಾಕುತ್ತದೆ.