ಶಿಶು ಮರಣಗಳಿಗೆ ವೈದ್ಯಕೀಯ ಅಂಶಗಳಷ್ಟೇ ಕಾರಣವಲ್ಲ

ಶಿಶು ಮರಣಗಳಿಗೆ ವೈದ್ಯಕೀಯ ಅಂಶಗಳಷ್ಟೇ ಕಾರಣವಲ್ಲ

ದೇಶದಲ್ಲಿ ಸಂಭವಿಸುತ್ತಿರುವ ಶಿಶುಗಳ ಸಾವು ಕೇವಲ ವೈದ್ಯಕೀಯ ಅಂಶಗಳಿಗೆ ಮಾತ್ರ ಸೀಮಿತವಾಗಿಲ್ಲ, ಅಪೌಷ್ಟಿಕತೆ, ನೈರ್ಮಲ್ಯ, ಆರೋಗ್ಯ ಕೇಂದ್ರಗಳ ನಿರ್ಲಕ್ಷ್ಯ, ಮೂಲಸೌಕರ್ಯ ಇಲ್ಲದಿರುವುದು, ಪ್ರಸವಪೂರ್ವ ಆರೈಕೆಯಲ್ಲಿನ ವ್ಯತ್ಯಯ, ತಾಯಿಯ ಆರೋಗ್ಯ ಮತ್ತು ಪ್ರಸವಪೂರ್ವದಲ್ಲಿ ಸರಿಯಾದ ಆರೈಕೆಯ ಇಲ್ಲದಿರುವುದು ಮಕ್ಕಳ ಜೀವಕ್ಕೆ ಅಪಾಯ ತರುತ್ತಿದೆ ಎಂದು ವಿಶ್ಲೇಷಣಾ ವರದಿಯೊಂದು ಹೊರಗೆಡವಿದೆ.

ರಾಜಸ್ಥಾನದ ಕೋಟಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನವಜಾತ ಶಿಶುಗಳ ಸಾವಿನ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ವಿಶ್ಲೇಷಣಾ ವರದಿ, ವೈದ್ಯಕೀಯ ಅಂಶಗಳಲ್ಲದೆ ಬೇರೆ ಅಂಶಗಳು ಹೇಗೆ ಶಿಶುಗಳ ಸಾವಿಗೆ ಕಾರಣವಾಗಿವೆ ಎಂಬುದನ್ನು ವಿಸ್ತೃತವಾಗಿ ಚರ್ಚಿಸಿದೆ.

"ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಸೌಲಭ್ಯದ ಕೊರತೆ, ರೋಗಿಗಳಿಗೆ ನೀಡುವ ಚಿಕಿತ್ಸೆ ನೀಡುವಲ್ಲಿ ತಜ್ಞರು ಅನುಸರಿಸಿರುವ ವಿಳಂಬ, ಸಾರಿಗೆ, ಸಂಪರ್ಕಗಳ ಕೊರತೆ ಹೀಗೆ ಹಲವು  ವಿಷಯಗಳು ಶಿಶು ಮರಣಕ್ಕೆ ಕಾರಣವಾಗಿವೆ,' ಎಂದು ತಾಯಿಯ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಇರುವ ಲಾಭರಹಿತ ಮಮ್ತಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಮಕ್ಕಳ ವೈದ್ಯ ಸುನಿಲ್ ಮೆಹ್ರಾ ಹೇಳುತ್ತಾರೆ.

'ಹೆಚ್ಚಿನ ಸಾವುಗಳು ನ್ಯುಮೋನಿಯಾದಂತಹ ಸೋಂಕಿನಿಂದ ಬರುತ್ತವೆ. ಇದಕ್ಕೆ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡಬಹುದು. ಆದರೆ ದೇಶದಲ್ಲಿ ಪ್ರಾಥಮಿಕ ಆರೋಗ್ಯ ವ್ಯವಸ್ಯೆ ಮತ್ತು ರೋಗ ತಡೆಗಟ್ಟುವ ವ್ಯವಸ್ಥೆಗಳು ಸರಿಯಾಗಿಲ್ಲ,' ಎನ್ನುತ್ತಾರೆ ದೆಹಲಿಯ ಬಿ ಆರ್ ಅಂಬೇಡ್ಕರ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ದೀಪಾ ಸಿನ್ಹಾ.

ಹಲವೆಡೆ ಮಕ್ಕಳು ಜನಿಸುವಾಗಲೇ ಸಾವನ್ನಪ್ಪಿವೆ. 2017 ರಲ್ಲಿ ಜನಿಸಿದ 1,000 ಮಕ್ಕಳಲ್ಲಿ 33 ಮಕ್ಕಳು ಹುಟ್ಟಿದ ಒಂದು ವರ್ಷದೊಳಗೆ ಸಾವನ್ನಪ್ಪಿದ್ದಾರೆ. ಸರ್ಕಾರದ ಮಾದರಿ ನೋಂದಣಿ ವ್ಯವಸ್ಥೆಯ ಅಂಕಿ ಅಂಶಗಳ ಪ್ರಕಾರ ಹಾಗೂ 2019ರ ಜೂನ್‍ನಲ್ಲಿ 11 ವರ್ಷಗಳಲ್ಲಿ ಶೇ. 42 ರಷ್ಟು ಶಿಶು ಮರಣ ಕಡಿಮೆಯಾಗಿದೆ. ಆದರೂ ರಾಜ್ಯಗಳಲ್ಲಿ ನವಜಾತ ಶಿಶು ಮರಣ ಪ್ರಮಾಣ(ಐಎಂಆರ್) ಮತ್ತು ಶಿಶು ಸಾವಿಗೆ ಕಾರಣಗಳಲ್ಲಿ ವ್ಯತ್ಯಾಸಗಳು ಕಂಡುಬರುತ್ತಿವೆ ಎಂದು ವಿಶ್ಲೇಷಣಾ ವರದಿ ಹೇಳಿದೆ.

ಪ್ರಾಥಮಿಕ ಆರೈಕೆಯಲ್ಲಿ ಕೊರತೆ

ಐದು ವರ್ಷದೊಳಗಿನ ಮಕ್ಕಳ ಸಾವುಗಳಲ್ಲಿ ಅರ್ಧದಷ್ಟು ನವಜಾತ ಶಿಶುಗಳು ಪ್ರಾಥಮಿಕ ಆರೈಕೆಯಲ್ಲದೇ ಸಾವನ್ನಪ್ಪಿವೆ. ಉತ್ತಮ ಗುಣಮಟ್ಟದ ಪ್ರಸವಪೂರ್ವ ಆರೈಕೆ, ಹುಟ್ಟಿನಿಂದಲೇ ಮಗುವಿಗೆ ನುರಿತ ಆರೈಕೆ, ತಾಯಿ ಮತ್ತು ಮಗುವಿಗೆ ಪ್ರಸವಪೂರ್ವ ಆರೈಕೆ ಮತ್ತು ಪುಟ್ಟ ಅನಾರೋಗ್ಯದ ನವಜಾತ ಶಿಶುಗಳ ಸರಿಯಾದ ಆರೈಕೆಯ ಮೂಲಕ ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದಿತ್ತು. ಈ ಕುರಿತು ವಿಶ್ವಸಂಸ್ಥೆ ಮಕ್ಕಳ ನಿಧಿ ಹಲವು ಬಾರಿ ಎಚ್ಚರಿಕೆ ನೀಡಿದರೂ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳದ ಕಾರಣ ನವಜಾತ ಶಿಶುಗಳ ಸಾವಿನ ಪ್ರಕರಣ ಹೆಚ್ಚುತ್ತಿದೆ ಎಂದು ವರದಿ ವಿವರಿಸಿದೆ.

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‍ನಡಿಯಲ್ಲಿ ಸೌಲಭ್ಯ ಆಧಾರಿತವಾಗಿ ನವಜಾತ ಶಿಶುಗಳ ಆರೈಕೆ ಯೋಜನೆ ಅನುಷ್ಠಾನಗೊಂಡಿದೆ. ಇದರಡಿಯಲ್ಲಿ ಹೆರಿಗೆಯ ಪ್ರತಿಯೊಂದು ಹಂತದಲ್ಲೂ ಆರೈಕೆ ಮತ್ತು ದೇಶಾದ್ಯಂತ ಜಿಲ್ಲಾ ಆಸ್ಪತ್ರೆಗಳಲ್ಲಿ ವಿಶೇಷ ನವಜಾತ ಆರೈಕೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಆದರೂ  ವೈದ್ಯರ ಕೊರತೆ ಮತ್ತು ಆಸ್ಪತ್ರೆಯಲ್ಲಿ  ಹಾಸಿಗೆಗಳ ಕೊರತೆ, ದುಸ್ಥಿತಿಯಲ್ಲಿರುವ ಸಲಕರಣೆಗಳನ್ನು ಬದಲಿಸಿಲ್ಲ.

ಸಮುದಾಯ ಆರೋಗ್ಯ ಕೇಂದ್ರಗಳು ಶೇ.83ರಷ್ಟು ನವಜಾತ ಆರೈಕೆ ಹೊಂದಿದ್ದರೆ, ಶೇ.59ರಷ್ಟು ನವಜಾತ ಶಿಶುಗಳಿಗೆ ಸ್ಥಿರೀಕರಣ ಘಟಕವಿಲ್ಲ ಎಂದು 2018 ರ ಗ್ರಾಮೀಣ ಆರೋಗ್ಯ ಅಂಕಿಅಂಶಗಳು ಹೊರಗೆಡವಿದೆ.

ಕೇರಳ ಮತ್ತು ಮಹಾರಾಷ್ಟ್ರ ಹೊರತುಪಡಿಸಿ ಎಲ್ಲಾ 13 ರಾಜ್ಯಗಳಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶೇ.95ರಷ್ಟು ತಜ್ಞರ ಕೊರತೆಯಿದೆ.   ಇದರರ್ಥ ಹೆಚ್ಚಿನ ಪೋಷಕರು ಜಿಲ್ಲಾ ಆಸ್ಪತ್ರೆಗಳಲ್ಲಿನ ತೃತೀಯ ಆರೈಕೆ ಘಟಕಗಳಲ್ಲಿ ಆರೈಕೆ ಮಾಡಿಕೊಳ್ಳಲು ಒತ್ತಾಯಿಸುತ್ತಾರೆ. ಹೀಗಾಗಿ ನವಜಾತ ಶಿಶುಗಳಿಗೆ ಮತ್ತು ಶಿಶುಗಳಿಗೆ ತೀವ್ರ ನಿಗಾ ಘಟಕಗಳಲ್ಲಿ ಜನದಟ್ಟಣೆ ಉಂಟಾಗುತ್ತದೆ. ಇದು ಸೋಂಕಿನ ಅಪಾಯದ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಮಾಮ್ತಾದ ಮೆಹ್ರಾ ಹೇಳುತ್ತಾರೆ.

ಜನನಕ್ಕೂ ಮೊದಲೇ ಸಮಸ್ಯೆಗಳು

ಶಿಶು ಮತ್ತು ಮಕ್ಕಳ ಮರಣದಲ್ಲಿ ಮನೆಯ ವಾತಾವರಣ ಮತ್ತು ತಾಯಿಯ ಶಿಕ್ಷಣವು ಮುಖ್ಯ ಪಾತ್ರ ವಹಿಸುತ್ತದೆ. ಹೆಚ್ಚು ವಿದ್ಯಾವಂತ ಮಹಿಳೆಯರನ್ನು ಹೊಂದಿರುವ ರಾಜ್ಯಗಳು ಮಕ್ಕಳಿಗೆ ಉತ್ತಮ ಆರೋಗ್ಯ ನೀಡುತ್ತಾರೆ. ಶ್ರೀಮಂತ ಮನೆಗಳಲ್ಲಿ ಜನಿಸಿದ ಮಗು, ಬಡ ಕುಟುಂಬದಲ್ಲಿ ಜನಿಸಿದ ಮಗುವಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ಬದುಕುಳಿಯುವ ಸಾಧ್ಯತೆ ಇದೆ ಎಂದು ಸುದ್ದಿಜಾಲತಾಣವೊಂದು ವರದಿ ಮಾಡಿದೆ.

ಮಧ್ಯಪ್ರದೇಶ, ಅಸ್ಸಾಂ, ಉತ್ತರ ಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ 10 ವರ್ಷಗಳಿಗಿಂತ ಹೆಚ್ಚು ಶಿಕ್ಷಣವು ಕಡಿಮೆ ಪ್ರಮಾಣವಿದೆ. ಬಾಲ್ಯ ವಿವಾಹಗಳ ಪ್ರಮಾಣ ಹೆಚ್ಚಿದೆ. ಇಷ್ಟೇ ಅಲ್ಲದೆ ರಕ್ತಹೀನತೆ, ಅಪೌಷ್ಟಿಕತೆ, ಅಧಿಕ ರಕ್ತದೊತ್ತಡ ಮತ್ತು ತಾಯಂದಿರಲ್ಲಿ ಗರ್ಭಾವಸ್ಥೆಯ ಮಧುಮೇಹದಂತಹ ಸಮಸ್ಯೆಗಳು ಕಂಡುಬರುತ್ತವೆ. ಇದರಿಂದ ಭ್ರೂಣದ ಮೇಲೂ ಪರಿಣಾಮ ಉಂಟಾಗುತ್ತದೆ ಎಂದು ಮತ್ತೊಂದು ವರದಿ ಹೇಳಿದೆ.

ಸಾಂಪ್ರದಾಯಿಕ ಹೆರಿಗೆ ಪ್ರಮಾಣದಲ್ಲಿನ ಇಳಿಕೆ ಶಿಶು ಸಾವುಗಳನ್ನು ನಿಯಂತ್ರಣದಲ್ಲಿರಿಸಿದೆ. ಆದರೆ ನವಜಾತ ಶಿಶುಗಳ ಆರೈಕೆಗೆ ಸಾಂಪ್ರದಾಯಿಕ ಮೂಲಸೌಕರ್ಯ ಇನ್ನೂ ಪೂರ್ಣಪ್ರಮಾಣದಲ್ಲಿ ಒದಗಿಸುತ್ತಿಲ್ಲ ಎನ್ನುತ್ತಾರೆ ಗುಜರಾತ್‍ನ ಆನಂದ್‍ನಲ್ಲಿರುವ ಪ್ರಮುಖ್ಸ್ವಾಮಿ ವೈದ್ಯಕೀಯ ಕಾಲೇಜಿನಲ್ಲಿ ಪೀಡಿಯಾಟ್ರಿಕ್ಸ್ ಪ್ರಾಧ್ಯಾಪಕ ಸೋಮಶೇಖರ್ ನಿಂಬಲ್ಕರ್.

ರಾಜಸ್ಥಾನದ ಕೋಟಾದಲ್ಲಿರುವ ಜೆಕೆ ಲೋನ್ ಆಸ್ಪತ್ರೆಯಲ್ಲಿ 101 ಕ್ಕೂ ಹೆಚ್ಚು ಶಿಶುಗಳು, ಜೋಧ್‍ಪುರದ ಉಮೈದ್ ಮತ್ತು ಎಂಡಿಎಂ ಆಸ್ಪತ್ರೆಗಳಲ್ಲಿ 102, ಬಿಕಾನೇರ್‍ನ ಸರ್ದಾರ್ ಪಟೇಲ್ ವೈದ್ಯಕೀಯ ಕಾಲೇಜಿನಲ್ಲಿ 124 ಶಿಶುಗಳು ಡಿಸೆಂಬರ್ ತಿಂಗಳಲ್ಲಿ ಸಾವನ್ನಪ್ಪಿವೆ. ಗುಜರಾತ ರಾಜ್ಯದ ರಾಜ್‍ಕೋಟ್‍ನ ಪಂಡಿತ್ ದೀಂದಯಾಲ್ ಉಪಾಧ್ಯಾಯ ಆಸ್ಪತ್ರೆಯಲ್ಲಿ 111 ಶಿಶುಗಳು ಮತ್ತು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ 85 ಶಿಶುಗಳು ಸಾವನಪ್ಪಿವೆ.

ವಿಶ್ವಸಂಸ್ಥೆಯ ಮಕ್ಕಳ ಮರಣದ ಅಂದಾಜಿನ ಪ್ರಕಾರ 2018 ರಲ್ಲಿ ಭಾರತದಾದ್ಯಂತ 721,000 ಶಿಶು ಸಾವುಗಳು ಸಂಭವಿಸಿವೆ. 2018 ರಲ್ಲಿ ಪ್ರತಿದಿನ 1,975 ಶಿಶು ಸಾವು ಸಂಭವಿಸಿವೆ.