ಬಂಜರು ಭೂಮಿಯನ್ನು ಬಳಕೆ ಯೋಗ್ಯವಾಗಿಸುವ ಭಾರತದ ದೃಢನಿಶ್ಚಯ ಭೂ ಸಂಘರ್ಷಗಳಿಗೆ ದಾರಿಯಾಗಬಹುದೆ? 

ಬಂಜರು ಭೂಮಿಯನ್ನು ಬಳಕೆ ಯೋಗ್ಯವಾಗಿಸುವ ಭಾರತದ ದೃಢನಿಶ್ಚಯ ಭೂ ಸಂಘರ್ಷಗಳಿಗೆ ದಾರಿಯಾಗಬಹುದೆ? 

ಭೂಮಿ ಮರಳುಗಾಡಾಗುವುದರ ವಿರುದ್ಧ ಇತ್ತೀಚಿನ ಜಾಗತಿಕ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು 2030 ರ ವೇಳೆಗೆ ಭಾರತವು 26 ದಶಲಕ್ಷ ಹೆಕ್ಟೇರ್ ಬಂಜರು ಭೂಮಿಯನ್ನು ಪುನಃ  ಉಪಯೋಗಯೋಗ್ಯ ಪ್ರದೇಶವನ್ನಾಗಿ ಮಾಡುತ್ತದೆ ಎಂದು ಎಂದು ಘೋಷಿಸಿದ್ದರು. ಭಾರತದಲ್ಲಿರುವ ಈ ಬಂಜರು ಭೂಮಿಯ ಒಟ್ಟು ವಿಸ್ತೀರ್ಣ ಚತ್ತೀಸ್ ಗಡ ಮತ್ತು ತಮಿಳುನಾಡಿನ ಭೌಗೋಳಿಕ ವಿಸ್ತೀರ್ಣಕ್ಕೆ ಸಮನಾಗಿದೆ. 

ಕೆಲವೇ ದಿನಗಳ ಮೊದಲು, ಭಾರತ ಸರ್ಕಾರವು ನಿರುಪಯುಕ್ತ ಭೂಮಿಯನ್ನು ಪಡೆದುಕೊಂಡು, ಆ ಮೂಲಕ ಹಣಗಳಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಖಾಸಗಿ ವಲಯವನ್ನು ಆಹ್ವಾನಿಸಿತ್ತು. ದೇಶದ 320 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ಶೇ.30ರಷ್ಟು ಅಂದರೆ ಸುಮಾರು 90 ದಶಲಕ್ಷ ಹೆಕ್ಟೇರ್ ಪ್ರದೇಶ ಬಂಜರು ಭೂಮಿಯಾಗಿದ್ದು, ಅದನ್ನು "ತಕ್ಷಣ" ಆರ್ಥಿಕ ಬಳಕೆಗೆ ತರಬೇಕು ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವಿಶೇಷ ಕಾರ್ಯದರ್ಶಿ ಅನಿಲ್ ಕುಮಾರ್ ಜೈನ್ ಹೇಳಿದ್ದಾರೆ. 

ಭಾರತದ ಭೂಪ್ರದೇಶದ ಅಂದರೆ  ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಪ್ರದೇಶಗಳಲ್ಲಿ ಒಟ್ಟಾಗಿ ಸುಮಾರು ಶೇ.30 ರಷ್ಟು ಭೂ ಪ್ರದೇಶವು ಅರಣ್ಯನಾಶ, ಅತಿಯಾದ ಕೃಷಿ, ಮಣ್ಣಿನ ಸವೆತ ಮತ್ತು ಗದ್ದೆಗಳ ಸವಕಳಿಯಿಂದಾಗಿ ಫಲವತ್ತತೆ ಕಳೆದುಕೊಳ್ಳುತಿದ್ದು, ಈ ಭೂ ನಷ್ಟವು ಪ್ರತಿವರ್ಷ ಭಾರತದ ಒಟ್ಟು ದೇಶೀಯ ಉತ್ಪನ್ನವನ್ನು ಶೇ.2.5ರಷ್ಟು ಕಡಿಮೆಗೊಳಿಸುವುದಲ್ಲದೆ, ಬೆಳೆ ಇಳುವರಿಯ ಮೇಲೆ ತನ್ನ ಪರಿಣಾಮ ಬೀರುತ್ತದೆ. ಇದು ದೇಶದಲ್ಲಿ ಹವಾಮಾನ ವೈಪರೀತ್ಯ ಪ್ರಕರಣಗಳು ಉಲ್ಬಣಗೊಳ್ಳುವುದಕ್ಕೂ ಕಾರಣವಾಗುತ್ತಿದೆ ಎಂದು ಇಂಡಿಯಾ ಸ್ಪೆಂಡ್ ಸೆಪ್ಟೆಂಬರ್ 2 ರಂದು ವರದಿ ಮಾಡಿತ್ತು.

ಆದಾಗ್ಯೂ, ಮೇಲಿನ ಎರಡು ಹೇಳಿಕೆಗಳು ಭಾರತದಲ್ಲಿ ಭೂ ಪುನರಾಭಿವೃದ್ದಿಯಲ್ಲಿ ಖಾಸಗಿ ವಲಯಗಳ ಪಾಲ್ಗೊಳ್ಳುವಿಕೆಯ ವಿವಾದವನ್ನು ಹುಟ್ಟುಹಾಕಿವೆ. ಸ್ಥಳೀಯ ಸಮುದಾಯಗಳನ್ನು ಒಳಗೊಳ್ಳದೆ ಮತ್ತು ಅರಣ್ಯ ಸಂಪನ್ಮೂಲಗಳ ಮೇಲಿನ ತಮ್ಮ ಅಧಿಕಾರಾವಧಿಯ ಹಕ್ಕುಗಳನ್ನು ಕಾನೂನುಬದ್ಧವಾಗಿ ಗುರುತಿಸದ ಖಾಸಗಿ ಭಾಗವಹಿಸುವಿಕೆಯು ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ. ಖಾಸಗಿ ಭಾಗವಹಿಸುವಿಕೆಯನ್ನು ಕಾಡುಗಳ ಹೊರಗೆ ಮತ್ತು ಕೃಷಿ ಅರಣ್ಯದಲ್ಲಿ ಮಾತ್ರ ಅನುಮತಿಸಬೇಕೆಂದು ಕೆಲವು ತಜ್ಞರು ಅಭಿಪ್ರಾಯ ಪಟ್ಟಿದ್ದು, ಇತರರು ಸ್ಥಳೀಯ ಸಮುದಾಯಗಳ ಒಳಗೊಳ್ಳುವಿಕೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ. 26 ದಶಲಕ್ಷ ಹೆಕ್ಟೇರ್ ಅವನತಿ ಹೊಂದಿದ ಭೂಮಿಯನ್ನು ಪುನಃ ಪಡೆದುಕೊಳ್ಳಲು ಸಮಗ್ರ ರಾಷ್ಟ್ರೀಯ ನೀತಿ ಮತ್ತು ಬೃಹತ್ ಸಂಪನ್ಮೂಲ ಹಂಚಿಕೆಯ ವ್ಯವಸ್ಥಿತ ಯೋಜನೆ ಅಗತ್ಯವಿರುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
 
ಸ್ಥಳೀಯ ಸಮುದಾಯಗಳ ಹಕ್ಕುಗಳನ್ನು ಕಾಪಾಡುವ ಅವಶ್ಯಕತೆಯಿದೆ 

ಖಾಸಗಿ ವಲಯಗಳು ಅರಣ್ಯ ಉತ್ಪನ್ನಗಳಲ್ಲಿ ಹೂಡಿಕೆ ಮತ್ತು ವ್ಯಾಪಾರ ಎರಡಕ್ಕೂ ಮುಂದಾಗುವುದರಿಂದ, ಅರಣ್ಯ ಸಮುದಾಯಗಳ ಜೀವನೋಪಾಯವನ್ನು ಹಾಳುಮಾಡುತ್ತದೆ ಎಂದು ಹವಾಮಾನ ಪ್ರಚಾರಕ ಮತ್ತು ಅರಣ್ಯ ಸಂಬಂಧಿತ ಲಾಭೋದ್ದೇಶವಿಲ್ಲದ ಜಾಗತಿಕ ಅರಣ್ಯ ಒಕ್ಕೂಟದ ಸಲಹೆಗಾರ ಸೌಪರ್ಣ ಲಾಹಿರಿ ಹೇಳಿದ್ದಾರಲ್ಲದೆ, ಸರ್ಕಾರಗಳು ಖಾಸಗಿ ವಲಯವನ್ನು ಅರಣ್ಯ ಪ್ರದೇಶದತ್ತ ಕರೆತರುವಾಗ ಸ್ಥಳೀಯ ಸಮುದಾಯಗಳನ್ನು ನಿರ್ಲಕ್ಷಿಸುವುದರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ, ರಾಜ್ಯ ಸರ್ಕಾರಗಳು  ಸಾಂಪ್ರದಾಯಿಕವಾಗಿ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿದ್ದ ಎರಡು ದಶಲಕ್ಷ ಅರಣ್ಯವಾಸಿ ಕುಟುಂಬಗಳ ಹಕ್ಕುಗಳನ್ನು ತಿರಸ್ಕರಿಸಿ ಆ ಕುಟುಂಬಗಳನ್ನು ಆ ಪ್ರದೇಶಗಳಿಂದ ಹೊರಹಾಕಲು ನಿರ್ಧರಿಸಿದ್ದು ಉಚ್ಚನ್ಯಾಯಲಯ ಈ ಆದೇಶವನ್ನು ತಡೆ ಹಿಡಿದಿದೆ. 

ಭಾರತವು ಈಗ ಖಾಸಗಿವಲಯವನ್ನು ಭಾಗಿಯಾಗುವಂತೆ ಅಹ್ವಾನ ನೀಡಿದ 26 ದಶಲಕ್ಷ ಹೆಕ್ಟೇರ್ ಉಪಯೋಗವಾಗದ ಭೂಮಿಯ ಪೈಕಿ  21 ದಶಲಕ್ಷ ಹೆಕ್ಟೇರ್ (ಸುಮಾರು ಶೇ.81) ಅರಣ್ಯ ಭೂಮಿ, ಮತ್ತು 5 ದಶಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶದ ಹೊರಗೆ ಇರುವ ಭೂಮಿಯಾಗಿದೆ.  ಖಾಸಗಿ ವಲಯಗಳ ಪಾಲ್ಗೊಳ್ಳುವಿಕೆ ಅರಣ್ಯ ಪ್ರದೇಶಗಳ ಹೊರಗೆ ಮತ್ತು ಕೃಷಿ ಅರಣ್ಯಕ್ಕೆ ಮಾತ್ರ ಸೂಕ್ತವಾಗಿದೆ ಎಂದು ದಿ ಎನರ್ಜಿ ಅಂಡ್ ರಿಸೋರ್ಸ್ ಇನ್ಸ್ಟಿಟ್ಯೂಟ್ (ಟೆರಿ)ಯ ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ಸೇವೆಗಳ ಕೇಂದ್ರದ ಹಿರಿಯ ಸಹವರ್ತಿ ಮತ್ತು ಪ್ರಾದೇಶಿಕ ಸಂಚಾಲಕ ಪಿಯಾ ಸೇಥಿ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ವಲಯಗಳು ಕೃಷಿ ಅರಣ್ಯ ಪ್ರದೇಶದ ಮೂಲಕ ಹೆಚ್ಚುವರಿ ಮರದ ಹೊದಿಕೆಯನ್ನು ಕೃಷಿಯ ಮೂಲಕ (ರೈತರು ಮರಗಳನ್ನು ಮಾರಾಟ ಮಾಡಲು ಇತರ ಬೆಳೆಗಳೊಂದಿಗೆ ಮರಗಳನ್ನು ನೆಡುವ ಅಭ್ಯಾಸ) ಸಹಾಯ ಮಾಡಬಹುದು. ಇದು ಭಾರತವು ತನ್ನ ಪುನಃಸ್ಥಾಪನೆ ಗುರಿ  ಮತ್ತು ಹವಾಮಾನ ಸುಧಾರಣೆಯ ಪ್ರತಿಜ್ಞೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚುವರಿ ಕಾರ್ಬನ್ ಸಿಂಕ್ (ಇಂಗಾಲವನ್ನು ಸಂಗ್ರಹಿಸುವ ನೈಸರ್ಗಿಕ ಜಲಾಶಯ)ಗಳ ರಚನೆಗೂ ಕಾರಣವಾಗುತ್ತೆ ಎಂದು ಸೇಥಿ ಹೇಳಿದ್ದಾರೆ. 

ಅರಣ್ಯ ಪ್ರದೇಶಗಳಲ್ಲಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯನ್ನು ಬಳಸಿಕೊಳ್ಳಬಹುದು ಆದರೆ ನಂತರ ಅದು ಜನರ ಹಕ್ಕುಗಳ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಸಾಕಷ್ಟು ಸುರಕ್ಷತಾ ಕ್ರಮಗಳ ಅಗತ್ಯವಿರುತ್ತದೆ ಮತ್ತು ಅರಣ್ಯ ಉತ್ಪನ್ನಗಳಂತಹ ಪ್ರಯೋಜನಗಳನ್ನು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವೆ ಸಮಾನವಾಗಿ ಹಂಚಿಕೊಳ್ಳಲಾಗಿದೆಯೆ? ಮತ್ತು ಹೆಚ್ಚಿನ ಜೀವವೈವಿಧ್ಯತೆಯನ್ನು ಹೊಂದಿರುವ ನೈಸರ್ಗಿಕ ಅರಣ್ಯ ಪ್ರದೇಶಗಳನ್ನು ಗುರಿಯಾಗಿಸಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮೂರನೇ ವ್ಯಕ್ತಿಯ ಮೇಲ್ವಿಚಾರಣೆ ಸಹ ಅಗತ್ಯವಿರುತ್ತದೆ. ಎಂದು ಸೇಥಿ ಅಭಿಪ್ರಾಯ ಪಟ್ಟಿದ್ದಾರೆ.  

ಅರಣ್ಯ ಪ್ರದೇಶಗಳನ್ನು ನಿರ್ವಹಿಸಲು ಖಾಸಗಿ ವಲಯವನ್ನು ಆಹ್ವಾನಿಸಿದಲ್ಲಿ, ಮೊದಲು ಆ ಅರಣ್ಯ ಪ್ರದೇಶಗಳಿಗೆ ಸಂಬಂದಪಟ್ಟ ಸಮುದಾಯಗಳು  2006 ರ ಅರಣ್ಯ ಹಕ್ಕುಗಳ ಕಾಯ್ದೆಯಡಿ ಹೊಂದಿರುವ ಅರಣ್ಯ ಸಂಪನ್ಮೂಲದ ಹಕ್ಕುಗಳನ್ನು ರಕ್ಷಿಸಬೇಕು ಎಂದು ದೆಹಲಿ ಮೂಲದ ಸಂಶೋಧನಾ ಗುಂಪು ಟೆರಿಯ ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ಸೇವೆಗಳ ಕೇಂದ್ರದ ಸಹ ಮತ್ತು ಪ್ರದೇಶ ಸಂಚಾಲಕ ಯೋಗೇಶ್ ಗೋಖ್ಲೆ ಹೇಳಿದ್ದಾರೆ. ಉದ್ಯೋಗ ಸೃಷ್ಟಿಸುವ ಹೆಸರಿನಲ್ಲಿ ಅರಣ್ಯವಾಸಿಗಳ ಸಂಪನ್ಮೂಲಗಳ ಮೇಲಿನ ಹಕ್ಕುಗಳನ್ನು ನಿರಾಕರಿಸಲು ಮುಂದಾಗುವ ಯೋಜನೆಯ ವಿರುದ್ಧ ಗೋಖ್ಲೆ  ಎಚ್ಚರಿಕೆ ನೀಡಿದ್ದಾರೆ.
 
ಒಂದು ಉತ್ತಮವಾದ ವಿಧಾನ 

ಅವನತಿ ಹೊಂದಿದ ಭೂಮಿ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತದೆ.  ಜಾಗತಿಕ ತಾಪಮಾನ ಏರಿಕೆಯ ಅತಿದೊಡ್ಡ ಅಂಶವಾಗಿರುವ ಹಸಿರುಮನೆ ಅನಿಲ  ಹೆಚ್ಚಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ.  26 ದಶಲಕ್ಷ ಹೆಕ್ಟೇರ್ ಬಳಕೆಯಲ್ಲಿಲ್ಲದ ಭೂಮಿಯನ್ನು ಬಳಕೆಗೆ ಯೋಗ್ಯವಾಗುವಂತೆ ಮಾಡುವ ಸರ್ಕಾರದ ಭರವಸೆ ಆರ್ಥಿಕವಾಗಿ ನಿರ್ಣಾಯಕವಾಗಿರುವುದು ಮಾತ್ರವಲ್ಲದೆ, ಹೆಚ್ಚುವರಿ ಇಂಗಾಲದ ಸಿಂಕ್ ಅನ್ನು ರಚಿಸುವ ಮೂಲಕ ಹವಾಮಾನ ಬದಲಾವಣೆಯ ವಿರುದ್ಧದ ಜಾಗತಿಕ ಹೋರಾಟವನ್ನು ಬೆಂಬಲಿಸಲು ದೇಶಕ್ಕೆ ಸಹಾಯ ಮಾಡುತ್ತದೆ. ಆದಾಗ್ಯೂ, ಭೂ ನಾಶವನ್ನು ತಡೆಯಲು ಅನುಸರಿಸಬೇಕಾದ ವಿಧಾನವು ವಿರಳವಾಗಿದ್ದು, ತಜ್ಞರು ಹೇಳುವಂತೆ ಅದು ಹೆಚ್ಚಿನ ನಿಧಿ ಹಂಚಿಕೆಯನ್ನು ಬೇಡುತ್ತದೆ.

ಭಾರತವು ಮೊದಲು ಮಾಡಬೇಕಾಗಿರುವುದು ಸಮಗ್ರ ಭೂ-ಬಳಕೆಯ ನೀತಿಯನ್ನು ರಚಿಸುವುದು.ಪ್ರಸ್ತುತ ಕೃಷಿ ಮತ್ತು ಕಾಡುಗಳಿಗೆ ಪ್ರತ್ಯೇಕ ನೀತಿಗಳು ಇದ್ದರೂ, ಬೇಕಾಗಿರುವುದು ಎಲ್ಲವನ್ನು ಒಳಗೊಳ್ಳುವ ಭೂಬಳಕೆಯ ನೀತಿಯಾಗಿದೆ. ಅವನತಿಗೊಳಗಾದ ಕೃಷಿ ಅಥವಾ ಅರಣ್ಯ ಭೂಮಿಯನ್ನು ಪುನಃ ಪಡೆದುಕೊಳ್ಳುವ ಎಲ್ಲಾ ಚಟುವಟಿಕೆಗಳನ್ನು ನೋಡಲ್ ಇಲಾಖೆಗೆ ಸಂಪರ್ಕಿಸಬೇಕು ಅದು ಈ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಪರಿಹರಿಸುತ್ತದೆ.

ಪ್ರಸ್ತುತ, ಭಾರತಕ್ಕೆ ಅಂತಹ ಯಾವುದೇ ನೀತಿ ಇಲ್ಲ. ಆದಾಗ್ಯೂ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು 2013 ರಲ್ಲಿ ಭೂ-ಬಳಕೆಯ ನೀತಿಯನ್ನು ತರಲು ಪ್ರಯತ್ನಿಸಿದರೂ ಅದನ್ನು ಕಾರ್ಯಗತಗೊಳಿಸಲು ವಿಫಲವಾಯಿತು. ಕರಡಿನ ಪ್ರಕಾರ, ಈ ನೀತಿಯು ದೇಶದ ಭೂಮಿಯನ್ನು ಪ್ರಧಾನ ಭೂ ಬಳಕೆಯ ಆಧಾರದ ಮೇಲೆ ವಲಯಗಳಾಗಿ ಗುರುತಿಸುವ ಗುರಿಯನ್ನು ಹೊಂದಿದೆ. ಉದಾಹರಣೆಗೆ, ಭೂ ವಲಯವನ್ನು ಕೃಷಿಗೆ ಬಳಸಿದ್ದರೆ, ನೀತಿಯು ಆ ಭೂಮಿಯನ್ನು ಬೇರೆ ಯಾವುದೇ ಬಳಕೆಗಾಗಿ ವಿಚಲಿತಗೊಳಿಸುವುದರ ವಿರುದ್ಧ ವಿಮೆ ಮಾಡುತ್ತದೆ. ಕೈಗಾರಿಕಾ ಅಥವಾ ಇತರ ಯಾವುದೇ ಚಟುವಟಿಕೆಗಳಿಗೆ ಸರ್ಕಾರವು ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯುತ್ತದೆ. ಕಾಡುಗಳಂತಹ ಪರಿಸರೀಯವಾಗಿ ಮಹತ್ವದ್ದಾಗಿರುವ ಭೂ ವಲಯಗಳ ವಿಷಯವೂ ಇದೇ ರೀತಿಯಾಗಿರುಬೇಕು.

ಭೂ ನಾಶ ಮತ್ತು ಬರಗಾಲದಿಂದ ಪ್ರದೇಶಗಳನ್ನು ರಕ್ಷಿಸಲು ನೀರು ಮತ್ತು ಮಣ್ಣಿನಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಭೂ ಸಂಪನ್ಮೂಲ ಇಲಾಖೆಯ ಸಮಗ್ರ ಜಲಾನಯನ ನಿರ್ವಹಣೆ ಕಾರ್ಯಕ್ರಮ(ಐಡಬ್ಲ್ಯೂಎಂಪಿ) ವಾರ್ಷಿಕ 5 ದಶಲಕ್ಷ ಹೆಕ್ಟೇರ್ ಗಳ  ಗುರಿಯನ್ನು ಹೊಂದಿದೆ. ಆದರೆ ಈ ಕಾರ್ಯಕ್ರಮಗಳಿಗೆ ಹಣ ಹಂಚಿಕೆ ನೀರಸವಾಗಿದೆ ಎಂದು ಟೆರಿಯ ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ಸೇವೆಗಳ ಕೇಂದ್ರದ ಸಹ ಮತ್ತು ಪ್ರದೇಶ ಸಂಚಾಲಕ ಯೋಗೇಶ್ ಗೋಖ್ಲೆ ಹೇಳಿದ್ದಾರೆ. ಈ ವಾರ್ಷಿಕ ಗುರಿಗಳನ್ನು ಎಷ್ಟು ಪ್ರಮಾಣದಲ್ಲಿ ಪೂರೈಸಲಾಗಿದೆ ಎಂಬುದರ ಕುರಿತು ಯಾವುದೇ ಅಂಕಿ ಅಂಶಗಳು ಲಭ್ಯವಿಲ್ಲ. 

2009 ರಲ್ಲಿ ಐಡಬ್ಲ್ಯೂಎಂಪಿ ಪ್ರಾರಂಭವಾಗಿದ್ದು 2015 ರಲ್ಲಿ ಮೋದಿ ಸರ್ಕಾರವು ತನ್ನ ನೀತಿ ಬದಲಾವಣೆಯಲ್ಲಿ ಅದನ್ನು ತನ್ನ ಪ್ರಧಾನ್ ಮಂತ್ರಿ ಕೃಷಿ ಸಿಂಚಾಯ್ ಯೋಜನೆ (ಪ್ರಧಾನ ಮಂತ್ರಿಯ ಕೃಷಿ ನೀರಾವರಿ ಯೋಜನೆ) ಯ ಭಾಗವನ್ನಾಗಿ ಮಾಡಿಕೊಂಡಿತು. ಅದರ ನಂತರ 2014-15ರಲ್ಲಿ 2,284 ಕೋಟಿ ಐಡಬ್ಲ್ಯೂಎಂಪಿಗೆ ಬಜೆಟ್ ಹಂಚಿಕೆ ಮಾಡಲಾಗಿತ್ತು. ಆದರೆ 2018-19ರಲ್ಲಿ ಬಜೆಟ್ ಹಂಚಿಕೆಯ ಪ್ರಮಾಣ 19% ರಷ್ಟು ಕುಸಿದು 1,841 ಕೋಟಿ ರೂ.ಗೆ ತಲುಪಿದೆ. ನೀರಾವರಿ ಕಾರ್ಯಕ್ರಮಗಳು 50 ವರ್ಷಗಳಿಗಿಂತ ಹೆಚ್ಚು ಕಾಲ ಜಾರಿಯಲ್ಲಿದ್ದರೂ, ಐಡಬ್ಲ್ಯೂಎಂಪಿ ಮೊದಲ ಸ್ಥಾನದಲ್ಲಿತ್ತು ಏಕೆಂದರೆ ಅದು ಬಂಜರು ಭೂಮಿಯನ್ನು ಅಭಿವೃದ್ಧಿ ಪಡಿಸಲು ಸರಿಯಾದ ಕಾರ್ಯವಿಧಾನವನ್ನು ಹೊಂದಿದ್ದು ಇದನ್ನು ಹೆಚ್ಚಿಸಲು ಸರ್ಕಾರವು ಸಾಕಷ್ಟು ಹಣವನ್ನು ಹಂಚಬೇಕು ಎಂದು ಗೋಖ್ಲೆ ಅಭಿಪ್ರಾಯ ಪಟ್ಟಿದ್ದಾರೆ. 

ಕೇವಲ ಹಣಕಾಸಿನ ನೆರವು ನೀಡುವುದರ ಹೊರತಾಗಿಯೂ ಬಳಕೆಯಲ್ಲಿದ ಭೂಮಿಯ ಪುನರಾಭಿವೃದ್ಧಿಯಲ್ಲಿ ಖಾಸಗಿ ವಲಯವು ನೇರ ಪಾತ್ರ ವಹಿಸಬಹುದು ಎಂದು ಎಫ್ಐಸಿಸಿಐನ ರಾಜನ್ ಕೆಲವು ಉದಾಹರಣೆಗಳನ್ನು ಉಲ್ಲೇಖಿಸಿ ಹೇಳಿದ್ದಾರೆ. ಸಾಂಪ್ರದಾಯಿಕ ಸಸ್ಯ ಮತ್ತು ಪ್ರಾಣಿಗಳನ್ನು ಪುನರುಜ್ಜೀವನಗೊಳಿಸಲು, ಖಾಲಿಯಾದ ಗಣಿ ತಾಣಗಳ ಪುನಃಸ್ಥಾಪನೆಗೆ ಖಾಸಗಿ ವಲಯವು ಕಾರಣವಾಗಿದೆ. ಜಾರ್ಖಂಡ್ನ ನೊಮುಂಡಿಯಲ್ಲಿರುವ ಟಾಟಾ ಸ್ಟೀಲ್ ಗಣಿಗಳು ಇದಕ್ಕೊಂದು ಒಂದು ಉದಾಹರಣೆ. ಅಂತೆಯೇ, ಬಂಜರು ಭೂಮಿಯನ್ನು  ಅಂತೆಯೇ, ಬಂಜರು ಭೂಮಿಯನ್ನು ಖಾಸಗಿ ವಲಯಗಳು ತೋಟಗಳು ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾರೆ. ಉದಾಹರಣೆಗೆ, ಜೆಕೆ ಪೇಪರ್ 1990 ರಲ್ಲಿ ತನ್ನ ಕಾಗದ ಗಿರಣಿ ನೀರಾವರಿ ಪ್ರದೇಶದಲ್ಲಿ ಬೃಹತ್ ಕೃಷಿ ಅರಣ್ಯ ತೋಟಗಳನ್ನು ಪ್ರಾರಂಭಿಸಿತು. ಇದು ರೋಗ-ನಿರೋಧಕ, ಹೆಚ್ಚು ಇಳುವರಿ ನೀಡುವ ನೀಲಗಿರಿ, ಸುಬಾಬುಲ್ ಮತ್ತು ಕ್ಯಾಸುಆರಿನಾಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಗಮನಾರ್ಹವಾಗಿ ಹೂಡಿಕೆ ಮಾಡಿತ್ತು ಮತ್ತು ರೈತರಿಗೆ ಸಬ್ಸಿಡಿಯಲ್ಲಿ ಬೀಜಗಳನ್ನು ನೀಡುವುದರ ಜೊತೆಗೆ ಕ್ಲೋನಲ್ ಸಸ್ಯಗಳು, ಹಾಗೆಯೇ ಬ್ಯಾಂಕುಗಳ ಮೂಲಕ ಆರ್ಥಿಕ ನೆರವು ನೀಡುವುದರ ಮೂಲಕ ತಿರುಳು ಮರದ ಕೃಷಿಗೆ ತಾಂತ್ರಿಕ ಮಾರ್ಗದರ್ಶನ, ಕೊಯ್ಲು ಬೆಂಬಲ ಮತ್ತು ಮರವನ್ನು ಖರೀದಿಸುವ ಭರವಸೆ, ಮುಂತಾದವವುಗಳಿಗೆ ಕಾರಣವಾಗಿದೆ. ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿಗಳ ಹತೋಟಿ ಸೇರಿದಂತೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವಗಳು ಜಲ ಸಂರಕ್ಷಣೆ, ಅರಣ್ಯ ಯೋಜನೆಗಳು, ಹಸಿರು ಸೃಷ್ಟಿ ಸೇರಿದಂತೆ ಭೂ ಸುಧಾರಣೆ ಮತ್ತು ಅರಣ್ಯನಾಶ ವಿರೋಧಿ ಚಟುವಟಿಕೆಗಳಿಗೆ ಮತ್ತಷ್ಟು ಸಹಾಯ ಮಾಡುತ್ತದೆ ಎಂದು ರಾಜನ್ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಧಾನಮಂತ್ರಿಗಳು ಜಾಗತಿಕ ವೇದಿಕೆಗಳಲ್ಲಿ ಪರಿಸರಕ್ಕೆ ಸಂಬಂದಿಸಿದ ಹಲವು ಘೋಷಣೆಗಳನ್ನು ಈಗಾಗಲೇ ಮೊಳಗಿಸಿದ್ದು ಇನ್ನೇನಿದ್ದಾರೂ ಆ ಘೋಷಣೆಗಳನ್ನು ಕಾರ್ಯಗತ ಗೊಳಿಸುವಲ್ಲಿ ದುಡಿಯಬೇಕಾಗಿದೆ. ಖಾಸಗಿ ವಲಯಗಳನ್ನೂ ಬಳಸಿಕೊಂಡು ಅರಣ್ಯಪ್ರದೇಶಗಳನ್ನೇ ಶತಮಾನಗಳಿಂದ ನಂಬಿಕೊಂಡಿದ್ದ ಸಮುದಾಯಗಳಿಗೆ ಮಾರಕವಾಗದಂತಹ ಯೋಜನೆಗಳ ಮೂಲಕ ತಮ್ಮ ಗುರಿಯನ್ನು ಸಾಧಿಸಬೇಕಾಗಿದೆ.