ಲೋಕಸಭಾ ಚುನಾವಣೆ ಮುಗಿಯುವ ತನಕ ಭಾರತದ ವಿಮಾನಗಳಿಗೆ ಪಾಕ್ ನಿರ್ಬಂಧ

ಲೋಕಸಭಾ ಚುನಾವಣೆ ಮುಗಿಯುವ ತನಕ ಭಾರತದ ವಿಮಾನಗಳಿಗೆ ಪಾಕ್ ನಿರ್ಬಂಧ

ಬೆಂಗಳೂರು : ಪಾಕಿಸ್ತಾನ ವಾಯುಗಡಿಗೆ ಭಾರತದ ವಿಮಾನಗಳಿಗೆ ಹೇರಿರುವ ನಿರ್ಬಂಧವನ್ನು ಲೋಕಸಭೆ ಮುಗಿಯುವವರೆಗೆ ಮುಂದುವರಿಸಲು ನಿರ್ಧರಿಸಿದೆ ಎಂದು ಪಾಕ್‍ನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್‍ ಚೌಧರಿ ಹೇಳಿದ್ದಾರೆ.

ಭಾರತೀಯ ವಾಯುಸೇನೆ ಫೆಬ್ರವರಿ 26 ರಂದು ಪಾಕಿಸ್ತಾನದ ಬಾಲಕೋಟ್ ಪ್ರದೇಶದ ಮೇಲೆ ದಾಳಿ ಮಾಡಿದ ನಂತರ ಭಾರತ ಗಡಿಯಲ್ಲಿ ಪ್ರವೇಶಿಸುವ ಎಲ್ಲಾ ವಿಮಾನಗಳಿಗೂ ನಿರ್ಬಂಧ ಹೇರಿತ್ತು. ಮಾರ್ಚ್‌ 27 ರ ಬಳಿಕ ದೆಹಲಿ ಹೊರತು ಪಡಿಸಿ ಬ್ಯಾಂಕಾಕ್‍ ಮತ್ತು ಕೌಲಾಲಂಪುರ್ ವಿಮಾನಗಳಿಗೆ ವಾಯುಗಡಿ ಪ್ರವೇಶಿಸಲು ಪಾಕ್‍ ಒಪ್ಪಿಗೆ ಸೂಚಿಸಿತ್ತು. ಆದರೆ ಭಾರತದ ವಿಮಾನಗಳಿಗೆ ವಿಧಿಸಿರುವ ನಿರ್ಬಂಧ ಮೇ 30 ರ ವರೆಗೆ ಮುಂದುವರಿಯಲಿದೆ ಎಂದು ಪಾಕ್ ಹೇಳಿದೆ.

ಭಾರತದ ವಿಮಾನಗಳಿಗೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸುವ ಕುರಿತು ಪಾಕಿಸ್ತಾನದ ಉನ್ನತ ರಕ್ಷಣಾ ಅಧಿಕಾರಿಗಳು ಮತ್ತು ಸರಕಾರದ ನಡುವೆ ಬುಧವಾರ ಮಾತುಕತೆ ನಡೆದಿದೆ. ಆ ಬಳಿಕ ಭಾರತದಲ್ಲಿ ಚುನಾವಣೆ ಸಂಪೂರ್ಣ ಅಂತ್ಯಗೊಳ್ಳುವವರೆಗೆ ಮುಂದುವರಿಸಲು ತೀರ್ಮಾನವಾಗಿದೆ ಎಂದು ಪಾಕ್‍ ಮಾಧ್ಯಮಗಳು ತಿಳಿಸಿದೆ. ಭಾರತದಲ್ಲೂ ಪಾಕ್‍ ವಿಮಾನಗಳಿಗೆ ನಿರ್ಬಂಧ ಹೇರಿರುವುದರಿಂದ ಪಾಕಿಸ್ತಾನದ ವಿಮಾನಗಳಿಗೆ ಕೌಲಾಲಂಪುರ್‍ ಮತ್ತು ಬ್ಯಾಂಕಾಕ್‍ಗೆ ತೆರಳಲು ಸಾಧ್ಯವಾಗುತ್ತಿಲ್ಲ. ವಾಯುಗಡಿ ನಿರ್ಬಂಧದಿಂದಾಗಿ ಎರಡೂ ದೇಶಗಳು ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದೆ ಎಂದು ಅಂದಾಜಿಸಲಾಗಿದೆ.