ಭಾರತದ ನಗರಗಳಲ್ಲಿರುವ ಒಟ್ಟು ನಿರ್ವಸಿತರಲ್ಲಿ ದಲಿತರೇ ಹೆಚ್ಚು

ಭಾರತದ ನಗರಗಳಲ್ಲಿರುವ ಒಟ್ಟು ನಿರ್ವಸಿತರಲ್ಲಿ ದಲಿತರೇ ಹೆಚ್ಚು

ಭಾರತದ ನಗರಗಳಲ್ಲಿ ನಿರ್ವಸಿತರಾಗಿರುವ ಪ್ರತಿ ಐದು ಜನರಲ್ಲಿ ಮೂರು ಜನ ದಲಿತರಿರುತ್ತಾರೆ ಎಂದು, ಇಂಡೋಗ್ಲೋಬಲ್ ಸೋಷಿಯಲ್ ಸರ್ವಿಸ್ ಸೊಸೈಟಿ ಮತ್ತು ಆರ್ಗನೈಸೇಶನ್ ಫಂಕ್ಷನಿಂಗ್ ಫಾರ್ ಐಥಾಮ್ಸ್ ರೆಸ್ಪೆಕ್ಟ್ (ಆಫರ್) ಎಂಬ ಯುರೋಪಿಯನ್ ಒಕ್ಕೂಟದ ಅನುದಾನಿತ ಅಧ್ಯಯನ ಸಂಸ್ಥೆ  ವರದಿ ತಿಳಿಸಿದೆ.  

ಭಾರತದಾದ್ಯಂತ 5 ರಾಜ್ಯಗಳ 15 ನಗರಗಳಲ್ಲಿ ಮನೆಯಿಲ್ಲದ ಸುಮಾರು 4,382 ಜನರನ್ನು ಸಮೀಕ್ಷೆಯಲ್ಲಿ ಒಳಗೊಳಿಸಲಾಗಿತ್ತು. ವಿಶ್ವ ನಿರ್ಗತಿಕರ ದಿನದ ಪ್ರಯುಕ್ತ ಈ ಅಧ್ಯಯನ ಕೈಗೊಳ್ಳಲಾಗಿತ್ತು. ಭಾರತದ ಪಾಟ್ನಾ, ಗಯಾ, ಮುಜಾಫರ್ಪುರ, ರಾಂಚಿ, ಧನ್ಬಾದ್, ಜಮ್ಮೆಡ್ಪುರ, ಚೆನ್ನೈ, ಮಧುರೈ, ಕೊಯಮತ್ತೂರು, ವಿಶಾಖಪಟ್ಟಣಂ, ಗುಂಟೂರು, ವಿಜಯವಾಡ, ಮುಂಬೈ, ಪುಣೆ ಮತ್ತು ನಾಸಿಕ್ ನಗರಗಳಲ್ಲಿ ಸಮೀಕ್ಷೆ ನಡೆಯಿತು. 

ಅಧ್ಯಯನದ ಒಟ್ಟು ವರದಿ ಏನು ಹೇಳುತ್ತದೆ?

ನಿರ್ಗತಿಕರೆಂದು ಗುರುತಿಸಿಕೊಂಡವರು  ಹುಟ್ಟಿರುವುದೂ ಕೂಡ ಈಗ ಅವರು ವಾಸಿಸುತ್ತಿರುವ ನಗರದಲ್ಲಿಯೇ. ಈ ಪರಿಸ್ಥಿತಿಯು ಕುಟುಂಬಗಳು ತಲೆಮಾರುಗಳ ಕೆಳಗೆಯೇ ನಿರ್ಗತಿಕರಾಗಿರುವುದನ್ನು ಸೂಚಿಸುತ್ತೆದೆ. ಮತ್ತು ಮನೆಯಿಲ್ಲದವರಲ್ಲಿ ಮೂರನೇ ಒಂದು ಭಾಗದಷ್ಟು ದಲಿತರೇ ಇದ್ದಾರೆ ನಗರದಲ್ಲಿರುವ ಒಟ್ಟು ನಿರ್ಗತಿಕರಲ್ಲಿ ಶೇಕಡಾ 40 ರಷ್ಟು ಜನ ವಲಸೆಬಂದವರು.  ಈ 40 ಶೇಕಡಾ ವಲಸೆ ಬಂದವರಲ್ಲಿ ಶೇಕಡಾ 78.9 ರಷ್ಟು ಜನ ಜೀವನೋಪಾಯಕ್ಕಾಗಿ ವಲಸೆ ಬಂದವರು ಹಾಗೂ ಉಳಿದ ಶೇಕಡಾ 13.7 ರಷ್ಟು ಜನ ಕುಟುಂಬ ಕಲಹಗಳಿಂದಾಗಿ ವಲಸೆ ಬಂದವರು. ನಿರ್ಗತಿಕರಾಗಿರುವ 60 ಪ್ರತಿಶತದಷ್ಟು ಜನರು ನಗರದ ಮೂಲನಿವಾಸಿಗಳೇ ಆಗಿದ್ದು, ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ನಿರಂತರವಾಗಿ ಹೋರಾಟವನ್ನು ಮಾಡುತ್ತಲೇ ಬಂದಿದ್ದಾರೆ.

ನಿರಾಶ್ರಿತರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಶೇಕಡಾ 36 ಪ್ರತಿಶತ ಜನರಿದ್ದು, ನಂತರದ ಸ್ಥಾನದಲ್ಲಿ 23 ಪ್ರತಿಶತದಷ್ಟು ಬುಡಕಟ್ಟು ಸಮುದಾಯಗಳಿವೆ. ಶೇಕಡಾ 21 ರಷ್ಟು ಹಿಂದುಳಿದ ವರ್ಗಗಳಿದ್ದು, ಉಳಿದವರು 20 ಪ್ರತಿಶತದಷ್ಟಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿದಾಗ ಭಾರತದಲ್ಲಿರುವ ಜಾತಿ ವ್ಯವಸ್ಥೆಯು ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ವಂಚಿತರನ್ನಾಗಿಸುತ್ತಿದೆ ಮತ್ತು ಅವರ ಜೀವನವನ್ನು ಅಂಚಿಗೆ ತಳ್ಳುವುದರ ಮೂಲಕ ಅವರನ್ನು ಅಮಾನವೀಯ ಸ್ಥಿತಿಗೆ ತಳ್ಳುತ್ತದೆ ಎಂದು ಸ್ಪಷ್ಟವಾಗಿ ತೋರುತ್ತದೆ.

ಸಮೀಕ್ಷೆಯಲ್ಲಿ ಭಾಗಿಯಾದ ಶೇಕಡಾ 70.5 ರಷ್ಟು ಜನ ಭಾರತೀಯ ಸರ್ಕಾರದ ಕೆಲವು ಗುರುತುಚೀಟಿಗಳನ್ನು ಹೊಂದಿದ್ದಾರೆ. ಇಲ್ಲಿ 66.4 ರಷ್ಟು ಜನ ಆಧಾರ್ ಹೊಂದಿದ್ದಾರೆ. ಮತ್ತು 39.5 ರಷ್ಟುಜನ ಮತದಾರರ ಗುರುತು ಚೀಟಿ ಹೊಂದಿರುವವರಲ್ಲಿ  ಶೇಕಡಾ 94ರಷ್ಟು ಜನ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಆದರೂ ಅವರೆಲ್ಲರೂ ಸರ್ಕಾರದಿಂದ ತಾವು ಪಡೆಯಲೇ ಬೇಕಿದ್ದ ಯಾವ ಹಕ್ಕುಗಳನ್ನೂ ಈವರೆಗೂ ಪಡೆದುಕೊಂಡಿಲ್ಲ. ಕೇವಲ 18.1 ರಷ್ಟು ಜನರು ಮಾತ್ರ ಆಹಾರದ ಸಬ್ಸಿಡಿಯನ್ನು ಪಡೆಯುತ್ತಿದ್ದು, 12 ಪ್ರತಿಶತದಷ್ಟು ಜನ ಮಾತ್ರ ನಿರ್ಗತಿಕರು ಪಡೆಯುವ ಆಶ್ರಯ ಯೋಜನೆಯ ಸೌಲಭ್ಯ ಪಡೆದಿದ್ದಾರೆ.

ಯೋಜನೆಯ ಲಾಭ ಪಡೆಯದ ಇತರರಿಗೆ ಯಾಕೆ ಈ ಯೋಜನೆಗಳನ್ನು ಪಡೆದುಕೊಂಡಿಲ್ಲ ಎಂಬ ಪ್ರಶ್ನೆ ಮುಂದಿಟ್ಟಾಗ (ಶೇ.19.5) ಕಳಪೆ ಜೀವನ ಪರಿಸ್ಥಿತಿಗಳು, ಸ್ಥಳಾವಕಾಶದ ಕೊರತೆ (11.8), ಮೂಲ ಸೌಕಾರ್ಯಗಳ ಕೊರತೆ(ಶೇ.7), ಕಳ್ಳತನದ ಭಯ (8.4), ಕಿರುಕುಳ(2.4), ಲಿಂಗ ಅಥವಾ ಕುಟುಂಬದ ಅಗತ್ಯತೆಗಳಿಗೆ ನಿರ್ದಿಷ್ಟವಾದ ಆಶ್ರಯಕ್ಕೆ ಪ್ರವೇಶದ ಕೊರತೆ(3.1) ಹೀಗೆ ನಾನಾ ಉತ್ತರಗಳನ್ನು ವಸತಿ ರಹಿತರು ನೀಡಿದ್ದಾರೆ.

ಶೇಕಡಾ 58.4ರಷ್ಟು ಜನರು ಮಾತ್ರ ಆರೋಗ್ಯ ಸೇವೆಗಳನ್ನು ಪಡೆಯುತ್ತಿದ್ದು, 17.5 ಪ್ರತಿಶತದಷ್ಟು ಜನರು ಆರೋಗ್ಯ ಕೇಂದ್ರಗಳಿರುವಲ್ಲಿಂದ 4 ಕಿಲೋಮೀಟರ್ ನಷ್ಟು ದೂರದಲ್ಲಿದ್ದಾರೆ. ಮನೆಯಿಲ್ಲದವರಲ್ಲಿ ಶೇಕಡಾ 17.5ರಷ್ಟು ಜನರು ಭಿಕ್ಷಾಟನೆಯಿಂದ ಬದುಕುತಿದ್ದು, ಶೇ.82.1 ರಷ್ಟು ಜನರು ದಿನಗೂಲಿಗಳಾಗಿ ದುಡಿಯುತ್ತಿದ್ದಾರೆ. ಕಟ್ಟಡ ಕಾರ್ಮಿಕರಲ್ಲಿ ಶೇಕಡ 23.6 ರಷ್ಟು ಜನರು ನಿರ್ವಸಿತರು.

ಈ ಒಟ್ಟು ವರದಿಯು ‘ಭಾರತ ಸರಕಾರವು ವಸತಿರಹಿತರನ್ನು ಗಮನದಲ್ಲಿರಿಸಿಕೊಂಡು ತನ್ನ ನೀತಿಗಳನ್ನು ರೂಪಿಸುವ ಮೂಲಕ ಅವರಿಗೆ ಆಶ್ರಯಗಳನ್ನು ನೀಡುವಲ್ಲಿ ಪರಿಣಾಮಕಾರಿಯಾಗಿ ಕೆಲಸಮಾಡಬೇಕು' ಎಂದು ಒತ್ತಾಯಿಸಿದೆ. ಮತ್ತು ಅವರಿಗೆ ಮೂಲಭೂತ ಸೇವೆಗಳನ್ನು ಕಲ್ಪಿಸಲು ಮುಂದಾಗುವ ಜೊತೆಗೆ, ಅವರಿಗೆ ವೃತ್ತಿಪರ ತರಬೇತಿ ಮತ್ತು ಕೌಶಲ್ಯಗಳನ್ನು ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ಅಗತ್ಯವನ್ನು ಒತ್ತಿ ಹೇಳಿದೆ.