ದಿಕ್ಕೆಟ್ಟ ಹಡಗಿನಂತಾಗಿದೆ ಭಾರತ

'ಉಜ್ಜ' ಪರಿವರ್ತನಾ ಕಾಲಘಟ್ಟದಲ್ಲಿ ಬೆಳೆಯುತ್ತಿರುವವನು. ಒಂದು ನಿರ್ದಿಷ್ಟ ಅಂತರದಲ್ಲಿ ನಿಂತು ಜನಸಾಮಾನ್ಯರ ದೃಷ್ಟಿಯಿಂದ ಸುತ್ತಣ ಬದಲಾವಣೆಗಳನ್ನು ಗಮನಿಸುತ್ತಾ, ಧ್ಯೇನಿಸುತ್ತಾ, ತನ್ನ ಮನಸ್ಸಿನ ಪ್ರತಿಫಲನಗಳನ್ನು ಇಲ್ಲಿ ಮೂಡಿಸುತ್ತಾ ಹೋಗುವನು.ಅವು ನಿಲವಿನ ರೂಪದಲ್ಲಿರಬಹುದು, ಪ್ರಶ್ನೆಯ ರೂಪದಲ್ಲಿರಬಹುದು ಇಲ್ಲವೇ ತಲ್ಲಣಗಳಾಗಿರಬಹುದು. ಅಥವಾ ತನ್ನ ತಿರುಗಾಟದಲ್ಲಿ ಎದುರಾದವರೊಡನೆ ಮೂಡಿದ ಮಾತಿನ ರೂಪದಲ್ಲಿರಬಹುದು.

ದಿಕ್ಕೆಟ್ಟ ಹಡಗಿನಂತಾಗಿದೆ ಭಾರತ

'ಉಜ್ಜ' ಪರಿವರ್ತನಾ ಕಾಲಘಟ್ಟದಲ್ಲಿ ಬೆಳೆಯುತ್ತಿರುವವನು. ಒಂದು ನಿರ್ದಿಷ್ಟ ಅಂತರದಲ್ಲಿ ನಿಂತು ಜನಸಾಮಾನ್ಯರ ದೃಷ್ಟಿಯಿಂದ ಸುತ್ತಣ ಬದಲಾವಣೆಗಳನ್ನು ಗಮನಿಸುತ್ತಾ, ಧ್ಯೇನಿಸುತ್ತಾ, ತನ್ನ ಮನಸ್ಸಿನ ಪ್ರತಿಫಲನಗಳನ್ನು ಇಲ್ಲಿ ಮೂಡಿಸುತ್ತಾ ಹೋಗುವನು.ಅವು ನಿಲವಿನ ರೂಪದಲ್ಲಿರಬಹುದು, ಪ್ರಶ್ನೆಯ ರೂಪದಲ್ಲಿರಬಹುದು ಇಲ್ಲವೇ ತಲ್ಲಣಗಳಾಗಿರಬಹುದು. ಅಥವಾ ತನ್ನ ತಿರುಗಾಟದಲ್ಲಿ ಎದುರಾದವರೊಡನೆ ಮೂಡಿದ ಮಾತಿನ ರೂಪದಲ್ಲಿರಬಹುದು.

 

ಭಾರತ ದಿಕ್ಕೆಟ್ಟ ಹಡಗಿನಂತಾಗಿದೆ. ಹಡಗು ನಡೆಸುವವನ ಅವಿವೇಕವೋ, ಸ್ವಾರ್ಥವೋ ಅಥವಾ ಹಡಗು ಚಲಿಸಲು ಪೂರಕ ವಾತಾವರಣವಿಲ್ಲದ ಪ್ರಕ್ಷುಬ್ಧತೆಯೋ!? 

     ಯಾವುದೇ ಚುನಾವಣೆ ಬರಲಿ ಪದೇಪದೇ ಹೀಗೇ ಅನ್ನಿಸುತ್ತಿದೆ. ಈ ಗೋಜಲು ತುಂಬಿ, ತಲೆಯನ್ನು ರದ್ದಿಯಂಗಡಿ ಮಾಡುವ ಮಾಧ್ಯಮಗಳಿಂದ ಕಳಚಿಕೊಂಡು ಕಾರಂತ, ಕುವೆಂಪು ಅವರ ಕಾದಂಬರಿ ಓದುತ್ತ ಕುಳಿತುಬಿಡುವುದೇ ಹಿತವೆನಿಸಿಬಿಟ್ಟಿದೆ.

    ಹೀಗಂದಾಕ್ಷಣ ಪಲಾಯನವಾದಿ ಎಂದು ಜರಿಯಬಹುದು. ಬದ್ಧತೆಯಿಲ್ಲದವನು ಎಂದು ಟೀಕಿಸಬಹುದು. ಇಂಥವುಗಳಿಗೆ ಉತ್ತರ ಹುಡುಕುತ್ತಲೇ ಅರ್ಧ ಆಯಸ್ಸು ಕಳೆದೇ ಹೋಗಿದೆ.

     ಭಾರತದಂತಹ ದೊಡ್ಡ ರಾಷ್ಟ್ರಕ್ಕೆ ಸ್ವಾತಂತ್ರ್ಯ ದೊರಕಿಸಿ, ಇಲ್ಲಿನ ಬಡತನ, ಹಸಿವು, ಜಾತೀಯತೆ, ಕೋಮುಭಾವನೆ, ಮೌಢ್ಯತೆ ಮುಂತಾದ ಸಾವಿರಾರು ಸಮಸ್ಯೆಗಳಿಂದ ಈ ದೇಶವನ್ನು ಮೇಲೆತ್ತಿ ನಿಲ್ಲಿಸಲು ಶ್ರಮಿಸಿದ ಗಾಂಧಿ, ಅಂಬೇಡ್ಕರ್ ಶ್ರಮದ ಅರಿವು ಈ ಹೊತ್ತಿದೆಯೇ? ಇಡೀ ಪ್ರಜಾಪ್ರಭುತ್ವದ ಶಕ್ತಿಯನ್ನೇ ಲಜ್ಜೆಗೆಟ್ಟು ಬಳಸಿಕೊಂಡ ರಾಜಕಾರಣಿಗಳು, ಕಾನೂನನ್ನು ಭ್ರಷ್ಟಾಚಾರಕ್ಕೆ ತಿರುಚಿಕೊಂಡ ಅಧಿಕಾರಿಗಳು, ದುಡ್ಡು ಸುರಿಯುವವರೆಗೆ ತಮ್ಮ ನೈತಿಕತೆ ಒತ್ತೆಯಿಟ್ಟು ಜನಮಾನಸವನ್ನು ಚರಂಡಿಯಾಗಿಸುತ್ತಿರುವ ಮಾಧ್ಯಮಗಳನ್ನು ನೋಡಿದರೆ: ಈ ದುಷ್ಟ ವಾತಾವರಣದಲ್ಲಿ ಮನುಷ್ಯನೊಬ್ಬ ತನ್ನೊಳಗಿನ ಮಾನವೀಯತೆಯನ್ನೇ ಕಾಪಿಟ್ಟುಕೊಳ್ಳುವುದು ದುಸ್ತರವಾಗಿದೆ.

     ಸರಿ, ಇದಕ್ಕೆಲ್ಲ ಜನ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಬೇಕು. ಮತದಾನವೆಂಬ ಪವಿತ್ರ ಮತ್ತು ಶಕ್ತಿಶಾಲಿ ಹಕ್ಕನ್ನು ಚಲಾಯಿಸಬೇಕು. ಈ ಬಗೆಯ ಮಾತುಗಳು ನಗೆಪಾಟಲಿನಂತೆ ಕಾಣಿಸುತ್ತಿವೆ. ಯಾಕೆಂದರೆ ಮತದಾರ ಸಮುದಾಯವನ್ನೇ ಈ ರಾಜಕೀಯ ಪಕ್ಷಗಳು ಏನು ಮಾಡಿವೆ? ಅಧಿಕಾರದಲ್ಲಿದ್ದ ಸರ್ಕಾರಗಳು ಹೇಗೆ ನಡೆಸಿಕೊಂಡು ಯಾವ ಪರಿಸ್ಥಿತಿಗೆ ತಂದು ನಿಲ್ಲಿಸಿವೆ? ಈ ಬಗೆಯ ಪ್ರಶ್ನೆಗಳಿಂದ ಆತ್ಮಾವಲೋಕನಕ್ಕಿಳಿದರೆ ಹತಾಶೆಯೇ ಉತ್ತರ.

ಜಾತಿಗಾರರ, ಶ್ರೀಮಂತರ ಹೆಗಲ ಮೇಲೆ ಕೈಹಾಕಿ ಆಧುನಿಕ ಅಭಿವೃದ್ಧಿಯ ರಾಕ್ಷಸನನ್ನು ತಂದು ಮೇಯಲು ಬಿಟ್ಟು, ಮರೆಗೆ ದೋಚಿಕೊಳ್ಳುವ ಸಂಚನ್ನಲ್ಲದೇ ಮತ್ತೇನು ಕಾಣಲು ಸಾಧ್ಯ?

     ಚುನಾವಣೆಯ ಕಾಲ ಹತ್ತಿರವಾಗುತ್ತಿದ್ದಂತೆಯೇ ಮಠಾಧಿಪತಿಗಳೂ ತೆರೆ ಮರೆಯಲ್ಲಿ ಜಾತಿ ಹಿಂಬಾಲಕರಿಗೆ ಬೆಂಬಲ ಕೊಟ್ಟು, ರಾಜಕೀಯ ಪಕ್ಷಗಳಿಗೆ ಅಭಯವಿತ್ತು ಜಾತ್ಯತೀತ ತತ್ವ ಸಾರುತ್ತಲೇ ಜಾತಿ ಗೋಡೆ ಬಲಿಷ್ಠಗೊಳಿಸಿದ್ದಾರೆ ಮತ್ತು ಅದು ಅಚಲವಾಗಿರುವಂತೆ ನೋಡಿಕೊಂಡೂ ಇದ್ದಾರೆ.

     ಈ ಕೋಮುವಾದದ ಜ್ವಾಲಾಮುಖಿ ನಿತ್ಯ ಜೀವಂತವಾಗಿರುವುದು, ಯುದ್ಧೋನ್ಮಾದವೆಂಬ ಹುಸಿ ರಾಷ್ಟ್ರಭಕ್ತಿಯ ಭಜನೆ ನಡೆಯುತ್ತಿರುವುದು ರಾಜಕೀಯ ಕಾರಣದಿಂದಲೇ.

     ಹೀಗೆ ಮತದಾರ ಸಮುದಾಯವನ್ನು ಜಾತಿ,ಕೋಮುಗಳಾಗಿ ಧ್ರುವೀಕರಿಸಿ; ಚುನಾವಣೆ ಕೆಲವೇ ದಿನ ಇದ್ದಾಗ ಅವರನ್ನು ಜಾತಿ,ಧರ್ಮ, ಹಣದ ಹಂಗಿನಲ್ಲಿ ಸಿಕ್ಕಿಸಿ ಮತ ಪಡೆದುಕೊಳ್ಳುತ್ತಿರುವ ಈ ಸನ್ನಿವೇಶದಲ್ಲಿ ಅಸಹಾಯಕರಿಗೆ ಯಾವ ಭವಿಷ್ಯವಿದೆ?

    ಎಲ್ಲೋ ಒಬ್ಬ ಸಜ್ಜನ, ಯಾರೋ ಒಬ್ಬ ಪ್ರಾಮಾಣಿಕ ವ್ಯಕ್ತಿ ಕಣದಲ್ಲಿ ನಿಂತು ಚುನಾವಣೆ ಗೆಲ್ಲಬಹುದೇ? 

     ಮತದಾರನ ಕ್ಷೇತ್ರವೇ ಒಂದು ಪುಟ್ಟ ದೇಶವಾಗಿರುವಾಗ, ಅಲ್ಲಿ ಸಜ್ಜನನೊಬ್ಬನನ್ನು ಆರಿಸಿ ಕಳಿಸಲು ಇಂಬೇ ಇಲ್ಲದಿರುವಾಗ,ಒಟ್ಟು ಸಮಾಜದ ಬಹುಪಾಲು ಜನರನ್ನು ತಾತ್ಕಾಲಿಕ ಸನ್ನಿಗೊಳಪಡಿಸಿ ಆಯ್ಕೆಯಾಗುತ್ತಿರುವ ಈ ಪ್ರತಿನಿಧಿಗಳಿಂದ ಸುಳ್ಳು ಭರವಸೆ ಮತ್ತು ಆತ್ಮ ವಂಚನೆ ಬಿಟ್ಟರೆ ಬೇರೇನೂ ಪಡೆಯಲು ಸಾಧ್ಯವಾಗಿಲ್ಲ.

   ಬಡವರ ಅಸಹಾಯಕರ ಮೂಲ ಆರ್ಥಿಕ ಸ್ತರವನ್ನೇ ಅಭದ್ರಗೊಳಿಸಿರುವ ಈ ಆಧುನಿಕ ರಾಜಕೀಯ ನಿತ್ಯ ಅಸಹಾಯಕತೆ ಸೃಷ್ಟಿಸುವ ಜನಪ್ರಿಯ ಯೋಜನೆಗಳ ಕಾರ್ಖಾನೆಯಾಗಿರುವುದು ಪ್ರಜಾಸತ್ತೆಗೊದಗಿರುವ ದೊಡ್ಡ ದುರಂತ.

    ಜನರ ಆತ್ಮಶಕ್ತಿ ಸ್ಫೋಟಿಸಬಲ್ಲ ಪ್ರತಿ ಸನ್ನಿವೇಶವನ್ನು ತಮ್ಮ ಧನದಾಹದಿಂದ ನಿಶ್ಯಕ್ತಗೊಳಿಸುತ್ತಿರುವ ಎಲ್ಲ ಬಗೆಯ ಕೋಲಾಹಲದ ಮುಂದೆ ನಾನು ಮೂಕ ಸಂಕಟ ಅನುಭವಿಸುತ್ತಲೇ ಇರುವುದು ಮಾತ್ರ ಸಾಧ್ಯ.