ಕರ್ನಾಟಕದ ಅರಣ್ಯಗಳಲ್ಲಿ ಲಂಟಾನ ಕಳೆಯಿಂದ ಹುಲ್ಲುಗಾವಲೇ ಮಾಯ: ಅಪರೂಪದ ಖಗಮೃಗಗಳ ಅಸ್ತಿತ್ವಕ್ಕೇ ಅಪಾಯ

ಕರ್ನಾಟಕದ ಅರಣ್ಯಗಳಲ್ಲಿ ಲಂಟಾನ ಕಳೆಯಿಂದ ಹುಲ್ಲುಗಾವಲೇ ಮಾಯ: ಅಪರೂಪದ ಖಗಮೃಗಗಳ ಅಸ್ತಿತ್ವಕ್ಕೇ ಅಪಾಯ

ಅರಣ್ಯ ಕಾಪಾಡುವುದೆಂದರೆ ಕೇವಲ ಮರ ಕಳ್ಳಸಾಗಣೆ ತಡೆಯುವುದಲ್ಲ.ವಿವಿಧ ಪ್ರಭೇದಗಳಿಗೆ ಸೇರಿದ ಪ್ರಾಣಿ, ಪಕ್ಷಿ, ಸರೀಸೃಪಗಳನ್ನೂ ಉಳಿಸಿ ಬೆಳೆಸುವ ಕಾರ್ಯಕ್ರಮ ರೂಪಿಸಬೇಕು. ಅರಣ್ಯದಲ್ಲಿ ಅದಕ್ಕೆ ತಕ್ಕಂಥ ವಾತಾವರಣ ಕಾಪಾಡಿಕೊಳ್ಳುವುದು ಅರಣ್ಯ ಸಚಿವರ ಜವಾಬ್ದಾರಿ. ರಾಜಕೀಯ ಅಧಿಕಾರಕ್ಕಾಗಿ ತಮ್ಮೆಲ್ಲ ಸಮಯವನ್ನು ಮೀಸಲಿಡುವ ಅರಣ್ಯ ಸಚಿವರು ಅರಣ್ಯದತ್ತಲೂ ಸ್ವಲ್ಪ ಸಮಯ ಕಣ್ಣು ಹಾಯಿಸಬೇಕು ಎನ್ನುತ್ತಾರೆ ಜಿ.ಮಹಂತೇಶ್.

ಒಂದೆಡೆ ಇಳಿಕೆಯಾಗುತ್ತಿರುವ ಅಂತರ್ಜಲ ಮಟ್ಟ, ಇನ್ನೊಂದೆಡೆ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಬರ, ಇದರ ಮಧ್ಯೆ ಅರಣ್ಯ ಪ್ರದೇಶಗಳಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿರುವ ಹುಲ್ಲಿನ ಲಭ್ಯತೆ, ಜನ ಜಾನುವಾರುಗಳ ಮೇಲಷ್ಟೇ ಮಾತ್ರವಲ್ಲ ವನ್ಯಜೀವಿ ಸಂಕುಲದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.

ಇತ್ತ ಇದಾವುದರ ಪರಿವೆಯೇ ಇಲ್ಲದೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು ರಾಜಕಾರಣದಲ್ಲಿ ನಿರತರಾಗಿದ್ದಾರೆ. ಅದರಲ್ಲೂ ತುಂಬಾ ಮುಖ್ಯವಾಗಿ ಸೋದರ ರಮೇಶ್ ಜಾರಕಿಹೊಳಿ ಅವರು ಎಬ್ಬಿಸಿರುವ  ಭಿನ್ನಮತದ ಧೂಳಿನಿಂದ ಹೇಗೆ ಪಾರಾಗಬೇಕು ಎಂಬುದರ ಕಡೆಗೆ ಹೆಚ್ಚಿನ ನಿಗಾ ವಹಿಸಿದಂತಿದೆ. 

ರಕ್ಷಿತಾರಣ್ಯಗಳಲ್ಲಿ ಹುಲ್ಲುಗಾವಲು ಮತ್ತು ಪರಿಸರವನ್ನು ವ್ಯವಸ್ಥೆಯನ್ನು ದೀರ್ಘಾವಧಿಗೆ ಉಳಿಸಿಕೊಳ್ಳಬೇಕಲ್ಲದೆ, ಇದಕ್ಕಾಗಿ ಸಸ್ಯ ಪ್ರಬೇಧಗಳ ಜತೆಗೆ ಭಕ್ಷಕ ಪ್ರಬೇಧಗಳು ಸಹ ಸಮತೋಲನದಲ್ಲಿರಬೇಕು. ಹಾಗೆಯೇ ಈ ಸಮತೋಲನ ಕಾಪಾಡುವ ಸಲುವಾಗಿ ರಾಜ್ಯದ ವಿವಿಧ ಕಡೆ ಹುಲ್ಲುಗಾವಲು ಇರುವ ಅರಣ್ಯ ಪ್ರದೇಶಗಳನ್ನು ಗುರುತಿಸುವ ಕೆಲಸವಾಗಿದೆಯಾದರೂ ಇದಕ್ಕೆ ಜಿಂಕೆ ವೇಗ ದೊರೆತಿಲ್ಲ.

ಸದ್ಯದ ಮಟ್ಟಿಗೆ ರಾಜ್ಯದ ಅರಣ್ಯ ಪರಿಸ್ಥಿತಿ ಹೇಗಿದೆಯಂದರೆ ಅರಣ್ಯ ಪ್ರದೇಶಗಳಲ್ಲಿ ಹುಲ್ಲಿನ ಲಭ್ಯತೆ ಗಣನೀಯವಾಗಿ ಕಡಿಮೆಯಾಗಿದೆ. 25 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಹುಲ್ಲಿನ ಲಭ್ಯತೆ ಹೆಚ್ಚಿಸುವ ಸಲುವಾಗಿ ಇಲಾಖೆ ಮುಂದಾಗಿದ್ದರೂ, ಯುಪಟೋರಿಯಂ ಮತ್ತು ಲಂಟಾನ ಕಳೆಗಳು ಯಥೇಚ್ಛವಾಗಿ ಬೆಳೆದು ನಿಂತಿದೆ.

ವಿಶೇಷವಾಗಿ ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಇದೆಲ್ಲದರ ಒಟ್ಟು ಪರಿಣಾಮ ಏನಾಗಿದೆ ಎಂದರೆ ಗ್ರೇಟ್ ಇಂಡಿಯನ್ ಬಸ್ಟರ್ಡ್, ಲೆಸ್ಸರ್ ಫ್ಲೋರಿಕನ್, ಹಳದಿ ಕುತ್ತಿಗೆಯ ಬುಲ್ ಬುಲ್ ಪಕ್ಷಿಗಳು ನಶಿಸಿ ಹೋಗುತ್ತಿವೆ. ಈ ಎಲ್ಲ ಪಕ್ಷಿಗಳು ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಅವಲಂಬಿಸಿರುವುದು ಹುಲ್ಲುಗಾವಲನ್ನೇ.

ಇನ್ನು, ರಾಜ್ಯದ ಬಹುತೇಕ ರಕ್ಷಿತ ಪ್ರದೇಶಗಳು ದೀರ್ಘಕಾಲೀನ ಕಳೆಯಾಗಿರುವ  ಲಂಟಾನಾದಿಂದ ಆವರಿಸಿವೆ. ಈ ಲಂಟಾನ, ಯಾವುದೇ ಜಾತಿಯ ಸಸ್ಯ ಪ್ರಬೇಧಗಳು ಬೆಳೆಯುವುದಕ್ಕೆ ಆಸ್ಪದ ಕೊಡುವುದಿಲ್ಲ. ಅಲ್ಲದೆ, ಅರಣ್ಯದಲ್ಲಿ ನೈಸರ್ಗಿಕ ಪುನರುತ್ಪತ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.  ಹಾಗೆಯೇ ವನ್ಯ ಜೀವಿಗಳ  ಚಲನವಲಕ್ಕೆ ತೀವ್ರ ಅಡಚಣೆಯಾಗಿರುವುದಕ್ಕೆ ಲಂಟಾನ ಮತ್ತು ಯುಪಟೋರಿಯಂ ಹೆಸರಿನ ಕಳೆಯೇ ಮೂಲ ಕಾರಣ.

ವನ್ಯಜೀವಿಗಳ ಆವಾಸಸ್ಥಾನವಾಗಿರುವ ರಕ್ಷಿತಾರಣ್ಯಗಳಲ್ಲಿ ಹೊಸ ಆಸ್ತಿ ಸೃಜಿಸುವುದರತ್ತ ಅರಣ್ಯ, ವನ್ಯಜೀವಿ ಇಲಾಖೆ ಅಧಿಕಾರಿಗಳ್ಯಾರು ಕಾರ್ಯೋನ್ಮುಖರಾಗಿಲ್ಲ. ನೈಸರ್ಗಿಕ ವಿಶಾಲವಾದ ಹುಲ್ಲುಗಾವಲಿನ ಆವಾಸ ಸ್ಥಾನಗಳಲ್ಲಿ ಕೃಷ್ಣಮೃಗ, ಚಿಂಕಾರ, ಕೊಂಡುಕುರಿ, ವನ್ಯ ಮೃಗಗಳ ಜತೆಗೆ ನರಿ, ತೋಳ, ಇತರೆ ಭಕ್ಷಕ ಪ್ರಾಣಿಗಳ ಸಂತತಿ ಉತ್ತೇಜಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಅದರಲ್ಲೂ ತುಂಬಾ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಂತೂ ತೋಳಗಳ ಸಂತತಿ ನಶಿಸಿ ಹೋಗಿದೆಯಲ್ಲದೆ ಅವುಗಳು ಕಣ್ಮರೆಯಾಗುವ ಸ್ಥಿತಿಯನ್ನೂ ತಲುಪಿದೆ.

ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಅಧ್ಯಕ್ಷತೆಯಲ್ಲಿ ಸಮಿತಿ ಕೂಡ ರಚನೆಯಾಗಿದೆ. ಆದರೆ ಈ ನಿಟ್ಟಿನಲ್ಲಿ ಸಮಿತಿ ಹೆಚ್ಚಿನ ಪ್ರಗತಿ ತೋರಿಸಿಲ್ಲ ಎಂದು  ಅಧಿಕಾರಿಯೊಬ್ಬರು 'ಡೆಕ್ಕನ್'ನ್ಯೂಸ್‌ಗೆ ತಿಳಿಸಿದ್ದಾರೆ.

ಅರಣ್ಯ ಕಾಪಾಡುವುದೆಂದರೆ ಕೇವಲ ಮರ ಕಳ್ಳಸಾಗಣೆ ತಡೆಯುವುದಲ್ಲ. ವಿವಿಧ ಪ್ರಬೇಧಗಳಿಗೆ ಸೇರಿದ ಪ್ರಾಣಿ, ಪಕ್ಷಿ, ಸರೀಸೃಪಗಳನ್ನೂ ಉಳಿಸಿ ಬೆಳೆಸುವ ಕಾರ್ಯಕ್ರಮವಾಗಬೇಕು. ಅದಕ್ಕೆ ತಕ್ಕಂಥ ವಾತಾವರಣ ಕಾಪಾಡಿಕೊಳ್ಳುವುದು ಅರಣ್ಯ ಸಚಿವರ ಜವಾಬ್ದಾರಿ. ರಾಜಕೀಯ ಅಧಿಕಾರಕ್ಕಾಗಿ ತಮ್ಮೆಲ್ಲ ಸಮಯವನ್ನು ಮೀಸಲಿಡುವ ಅರಣ್ಯ ಸಚಿವರು ಅರಣ್ಯದತ್ತಲೂ ಸ್ವಲ್ಪ ಸಮಯ ಕಣ್ಣು ಹಾಯಿಸಬೇಕು.