ಮೋದಿ ಆಳ್ವಿಕೆಯ 5 ವರ್ಷಗಳಲ್ಲಿ, ಮೂರು ಪಟ್ಟು ಹೆಚ್ಚಾಯಿತು ಭಾರತೀಯ ಆಹಾರ ನಿಗಮದ  ಸಾಲ

ಮೋದಿ ಆಳ್ವಿಕೆಯ 5 ವರ್ಷಗಳಲ್ಲಿ, ಮೂರು ಪಟ್ಟು ಹೆಚ್ಚಾಯಿತು ಭಾರತೀಯ ಆಹಾರ ನಿಗಮದ  ಸಾಲ

ಮೋದಿ ಸರ್ಕಾರವು ಬಜೆಟ್ ನಲ್ಲಿ ಆಹಾರ ಸಬ್ಸಿಡಿಗೆ ಸಾಕಷ್ಟು ಹಣವನ್ನು ಬಿಡುಗಡೆ  ಮಾಡದೆ, ಇತರ ಮೂಲಗಳಿಂದ, ಮುಖ್ಯವಾಗಿ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯಿಂದ ಸಾಲ ಪಡೆಯಲು ಭಾರತೀಯ ಆಹಾರ ನಿಗಮ(ಎಫ್ ಸಿಐ) ವನ್ನು ಒತ್ತಾಯಿಸಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ನಿರ್ವಹಿಸುವ ಸಂಸ್ಥೆಯಾದ ಎಫ್.ಸಿ.ಐ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಐದು ವರ್ಷಗಳಲ್ಲಿ ತನ್ನ ಸಾಲವನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದೆ.

ಎಫ್ ಸಿಐ ತನ್ನದೇ ಆದ ಆದಾಯದ ಮೂಲವನ್ನು ಹೊಂದಿಲ್ಲ. ಅದು ತನ್ನ ಸಾಲ ಬಾಧ್ಯತೆಗಳನ್ನು ಪೂರೈಸಲು ಸಂಪೂರ್ಣವಾಗಿ ಕೇಂದ್ರ ಸರ್ಕಾರವನ್ನು ಅವಲಂಬಿಸಿದೆ. 2014 ರ ಮಾರ್ಚ್ ನಲ್ಲಿ 91,409 ಕೋಟಿ ರೂ.ಗಳಷ್ಟಿದ್ದ ಎಫ್.ಸಿ.ಐ.ನ  ಒಟ್ಟು ಸಾಲ ಕೇವಲ ಐದು ವರ್ಷದ ಅಂತರದಲ್ಲಿ ಶೇಕಡಾ 190 ರಷ್ಟು ಅಂದರೆ 2019 ರ ಮಾರ್ಚ್ ನಲ್ಲಿ  ಸುಮಾರು  2.65 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. 

ಬಜೆಟ್ ನಲ್ಲಿ ಆಹಾರ ಸಬ್ಸಿಡಿಗೆ ಒದಗಿಸಲೇಬೇಕಾದಷ್ಟು ಹಣವನ್ನೂ  ಮೀಸಲಿಡದ ಸರ್ಕಾರವು, ಆ ಅಂತರವನ್ನು ತುಂಬುವ ಸಲುವಾಗಿ ಎಫ್ ಸಿಐಗೆ ಸಾಲ ನೀಡುವಂತೆ  ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿ (ಎನ್ಎಸ್ಎಸ್ಎಫ್)ಯನ್ನು ಆಶ್ರಯಿಸಿದ ಪರಿಣಾಮವಾಗಿ  2016-17 ನೇ ಸಾಲಿನಲ್ಲಿಎಫ್ ಸಿಐನ  ಸಾಲದ ಮಟ್ಟ ತೀವ್ರವಾಗಿ ಹೆಚ್ಚಾಗತೊಡಗಿತು. 

ಆಹಾರ ನಿಗಮ ಕಾಯ್ದೆಯಡಿ 1965 ರಲ್ಲಿ ಸ್ಥಾಪನೆಯಾದ ಎಫ್.ಸಿ.ಐ., ಆಹಾರ ಧಾನ್ಯಗಳ ಸಂಗ್ರಹಣೆ ಮತ್ತು ವಿತರಣೆಯನ್ನು ನಿರ್ವಹಿಸುವ ಸರ್ಕಾರಿ ಸಂಸ್ಥೆ. ಇದು ಆಹಾರ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಸಂಗ್ರಹಿಸುವುದು, ಮತ್ತು ಅದರ ನಿರ್ವಹಣೆಯ ಜೊತೆಗೆ ವಿತರಣಾ ವ್ಯವಸ್ಥೆಯ ಮೂಲಕ ತಾನು ಸಂಗ್ರಹಿಸಿದ ಆಹಾರ ಧಾನ್ಯಗಳನ್ನು ಸಾರ್ವಜನಿಕರಿಗೆ ವಿತರಿಸುವ ಜವಾಬ್ದಾರಿಯನ್ನು ಹೊಂದಿರುವ ಸಂಸ್ಥೆ.

ಕೇಂದ್ರ ಸರ್ಕಾರವು ಆಹಾರ ಧಾನ್ಯಗಳ ಖರೀದಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುತ್ತದೆ ಮತ್ತು ಅವುಗಳನ್ನು ರಾಜ್ಯಗಳಿಗೆ ಸರಬರಾಜು ಮಾಡುವ ಬೆಲೆಯನ್ನೂ ನಿಗದಿಪಡಿಸುತ್ತದೆ. ಈ ಎರಡು ಬೆಲೆಗಳಲ್ಲಿನ ವ್ಯತ್ಯಾಸದ ಜೊತೆಗೆ ವಿತರಣಾ ಕಾರ್ಯಕ್ಕೆ ತಗಲುವ ವೆಚ್ಚವನ್ನು ಸರ್ಕಾರವು ಆಹಾರ ಸಬ್ಸಿಡಿ ರೂಪದಲ್ಲಿ ಎಫ್ ಸಿಐಗೆ ಮರುಪಾವತಿ ಮಾಡುತ್ತದೆ. ಹೀಗೆ ನಿಗಮವು ಕೇಂದ್ರ ಸರ್ಕಾರವನ್ನು ಸಂಪೂರ್ಣವಾಗಿ ಅವಲಂಬಿಸಿದೆ. ಹೀಗಿದ್ದರೂ, ಕಳೆದ ಕೆಲವು ವರ್ಷಗಳಿಂದ ಸರ್ಕಾರವು ಆಹಾರ ಸಬ್ಸಿಡಿಯಾಗಿ ಅಗತ್ಯಕ್ಕಿಂತ ಕಡಿಮೆಯಾದ ಹಣದ ಮೊತ್ತವನ್ನು ಬಜೆಟ್ ನಲ್ಲಿ ಮೀಸಲಿರಿಸುತ್ತಿದ್ದು, ಈ ಕೊರತೆಯನ್ನು ಸರಿದೂಗಿಸಲು, ಎಫ್ ಸಿಐ ಪ್ರತಿವರ್ಷ ಎನ್ಎಸ್ಎಸ್ಎಫ್ ನಿಂದ ಸಾಲ ಪಡೆಯುತ್ತಲೇ ಇದೆ. ಸರ್ಕಾರದ ಸ್ವಂತ ಮಾಹಿತಿಯ ಪ್ರಕಾರ 31 ಮಾರ್ಚ್ 2019 ರ ಹೊತ್ತಿಗೆ ಈ ಸಾಲವು 2.65 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದೆ.

ಎಫ್ ಸಿಐನ ಎರವಲು ಮಾದರಿಯು ಮುಖ್ಯವಾಗಿ ನಾಲ್ಕು ಮಾರ್ಗಗಳ ಮೂಲಕ ಸಾಲ ಪಡೆಯುತ್ತದೆ ಎಂದು ತೋರಿಸುತ್ತದೆ - ಬ್ಯಾಂಕುಗಳು ಮಂಜೂರು ಮಾಡಿದ ನಗದು ಸಾಲ ಮಿತಿ, ಭಾರತ ಸರ್ಕಾರ ಖಾತರಿಪಡಿಸಿದ ಮತ್ತೆ ಗಳಿಸಬಹುದಾದ  ಪರಿವರ್ತಿಸಲಾಗದ ಬಾಂಡ್ ಗಳು, ಅಸುರಕ್ಷಿತ ಅಲ್ಪಾವಧಿಯ ಸಾಲ ಮಿತಿ ಮತ್ತು ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿ ಸಾಲ.  ನಿಜವಾಗಿ ನೋಡುವುದಾದರೆ, ಒಂದು ವರ್ಷದಲ್ಲಿ ಉಂಟಾಗುವ ಸಂಪೂರ್ಣ ಆಹಾರ ಸಹಾಯಧನವನ್ನು ಕೇಂದ್ರ ಸರ್ಕಾರ ಬಜೆಟ್ ನಲ್ಲಿ  ಒದಗಿಸಬೇಕು. ಒಂದು ದಶಕಕ್ಕೂ ಹೆಚ್ಚು ಕಾಲ ಸರ್ಕಾರಗಳು ಅದನ್ನು ಸಂಪೂರ್ಣವಾಗಿ ಒದಗಿಸಿಲ್ಲ ಎಂದು ಮಾಜಿ ಕೃಷಿ ಕಾರ್ಯದರ್ಶಿ ಸಿರಾಜ್ ಹುಸೇನ್ ಹೇಳಿದ್ದಾರೆ.

ಆಹಾರ ಸಬ್ಸಿಡಿ ಮೊತ್ತ ಹೆಚ್ಚುತ್ತಿರುವುದು ಏಕೆ?

ಅನೇಕ ಕಾರಣಗಳಿಂದಾಗಿ ಆಹಾರ ಸಬ್ಸಿಡಿ ಮಸೂದೆ ಹೆಚ್ಚುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಅನುಷ್ಠಾನವು ಅಕ್ಕಿ ಮತ್ತು ಗೋಧಿಯ ಮಾರಾಟ ಬೆಲೆಯನ್ನು ಕಡಿಮೆ ಮಾಡುವಾಗ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಿತು. ಅದೇ ಸಮಯದಲ್ಲಿ, ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಗಳು ಮತ್ತು ಎಫ್ ಸಿಐನ ಹೆಚ್ಚುತ್ತಿರುವ ಸಂಗ್ರಹಣೆಯೊಂದಿಗೆ ಖರೀದಿ ಬೆಲೆಗಳು ಹೆಚ್ಚುತ್ತಿವೆ.

ಎಫ್.ಸಿ.ಐ. ಹೆಚ್ಚಿನ ದರ ನೀಡಿ ಖರೀದಿಸುತ್ತದೆ ಮತ್ತು ಕಡಿಮೆ ದರದಲ್ಲಿ ಮಾರಾಟ ಮಾಡುತ್ತದೆ, ಸರ್ಕಾರವು ಪಾವತಿಸುವ ಸಬ್ಸಿಡಿಗಳನ್ನು ನಿರ್ವಹಿಸುತ್ತದೆ. ಭಾರತದ ಆಹಾರ ಸಬ್ಸಿಡಿ ಮಸೂದೆ ವೇಗವಾಗಿ ಏರಿಕೆ ಕಂಡಿದ್ದು, ಆರು ವರ್ಷಗಳಲ್ಲಿ ಇದು ದ್ವಿಗುಣಗೊಂಡಿದೆ. ಸರ್ಕಾರವು ಇತ್ತೀಚೆಗೆ ಈ ಸಬ್ಸಿಡಿಗಳನ್ನು ಪಾವತಿಸಲು ಹೆಣಗಾಡುತ್ತಿದೆ ಮತ್ತು ಎಫ್.ಸಿ.ಐ.ನಲ್ಲಿನ ಹಣದ ಕೊರತೆಗಿಂತ ಕಡಿಮೆ ಮೊತ್ತವನ್ನು ಬಿಡುಗಡೆ ಮಾಡಿದ್ದು, ಭಾರತ ಸರ್ಕಾರವು ಎಫ್ ಸಿಐಗೆ 2 ಲಕ್ಷ ಕೋಟಿ ರೂಪಾಯಿಗಳಷ್ಟು ಪಾವತಿಸದ ಬಾಕಿ ಹಣವನ್ನು ಒದಗಿಸಬೇಕು ಎಂದು ಆಗಸ್ಟ್ ನಲ್ಲಿ ಬ್ಯಾಂಕ್ ಆಫ್ ಅಮೇರಿಕಾ ಮೆರಿಲ್ ಲಿಂಚ್ ಗ್ಲೋಬಲ್ ರಿಸರ್ಚ್ ತನ್ನ ಟಿಪ್ಪಣಿಯಲ್ಲಿ ಹೇಳಿದೆ.