ನಾಗರಿಕ ಸೇವಾ ವಲಯದ ಸುಧಾರಣೆಗೆ ಮಿಷನ್ ಕರ್ಮಯೋಗಿ ಯೋಜನೆ ಜಾರಿ

ನಾಗರಿಕ ಸೇವಾ ವಲಯದ ಸುಧಾರಣೆಗೆ ಮಿಷನ್ ಕರ್ಮಯೋಗಿ ಯೋಜನೆ ಜಾರಿ

ದೆಹಲಿ: ಸರ್ಕಾರಿ ಸೇವೆಗಳಲ್ಲಿ ನೇಮಕಾತಿ ನಂತರದ ಸುಧಾರಣೆಗಳನ್ನು ತರುವ ಸಲುವಾಗಿ ಮಿಷನ್ ಕರ್ಮಯೋಗಿ ಎಂಬ ರಾಷ್ಟ್ರೀಯ ಕಾರ್ಯಕ್ರಮವನ್ನು ಕೇಂದ್ರ ಸಂಪುಟ ಬುಧವಾರ ಪ್ರಕಟಿಸಿದೆ.

ದೇಶದಲ್ಲಿನ ನಾಗರಿಕ ಸೇವಾ ಅಧಿಕಾರಿಗಳಿಗೆ ಭದ್ರ ಬುನಾದಿ ಹಾಕಲು ನೆರವಾಗುವ ಉದ್ದೇಶದಿಂದ ಈ ವಿಶಿಷ್ಟ ಕಾರ್ಯಕ್ರಮ ಆರಂಭಿಸಲಾಗಿದೆ. ಈ ಯೋಜನೆಯು ನಾಗರಿಕ ಸೇವಕರು ಮತ್ತು ಸಾಂಸ್ಥಿಕ ಸಾಮರ್ಥ್ಯ ವೃದ್ಧಿಯ ಮೇಲೆ ಗಮನ ಹರಿಸುತ್ತದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ತಜ್ಞರನ್ನು ಒಳಗೊಂಡಿರುವ ಪ್ರಧಾನಿಯವರ ಎಚ್ ಆರ್ ಸಮಿತಿಯು ಪ್ರಧಾನಿಯ ಅಧ್ಯಕ್ಷತೆಯಲ್ಲಿ ಇದರ ಮೇಲೆ ಇರಲಿದೆ.

ನಾಗರಿಕ ಸೇವೆಯಲ್ಲಿರುವ ವ್ಯಕ್ತಿಯು ಸಮಾಜದ ಸವಾಲುಗಳನ್ನು ಎದುರಿಸಲು ಕಾಲ್ಪನಿಕ ಮತ್ತು ಹೊಸತನದ ತುಡಿತ, ಚುರಕಿನ ವ್ಯಕ್ತಿತ್ವ ಮತ್ತು ವಿಧೇಯತೆ, ವೃತ್ತಿಪರತೆ ಮತ್ತು ಪ್ರಗತಿಪರತೆ, ಉತ್ಸಾಹಿ ಮತ್ತು ಚಟುವಟಿಕೆಯ, ಪಾರದರ್ಶಕತೆ ಮತ್ತು ತಾಂತ್ರಿಕ ಜ್ಞಾನ, ರಚನಾತ್ಮಕ ಹಾಗೂ ಸೃಜನಶೀಲತೆಗಳನ್ನು ಹೊಂದಿರಬೇಕು ಎಂದು ಕಾರ್ಯದರ್ಶಿ ಸಿ. ಚಂದ್ರಮೌಳಿ ತಿಳಿಸಿದ್ದಾರೆ.

ಸಾಮರ್ಥ್ಯವೃದ್ಧಿಯ ಆಯೋಗವವನ್ನು ಸ್ಥಾಪಿಸಲಾಗುತ್ತಿದ್ದು, ಅದು ನಾಗರಿಕ ಸೇವೆಗಳ ತರಬೇತಿಯ ಗುಣಮಟ್ಟವನ್ನು ಸುಧಾರಿಸಲಿದೆ. ಭಾರತದ ಮಹತ್ವಾಕಾಂಕ್ಷೆಗಳು ಮತ್ತು ಅಭಿವೃದ್ಧಿ ಗುರಿಗಳ ಬಗ್ಗೆ ಒಂದೇ ರೀತಿಯ ಸಾಮಾನ್ಯ ತಿಳಿವಳಿಕೆಗಳನ್ನು ಮೂಡಿಸಲು ಅಗತ್ಯವಾದ ಎಲ್ಲ ತರಬೇತಿ ಸಂಸ್ಥೆಗಳನ್ನು ನಿರ್ವಹಿಸುವ ಹಾಗೂ ಸಂಪನ್ಮೂಲ ಮತ್ತು ಸಿಬ್ಬಂದಿಯನ್ನು ಒದಗಿಸುವ ಕೆಲಸವನ್ನು ಇದು ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಎಲ್ಲ ಇಲಾಖೆ ಮತ್ತು ಸೇವೆಗಳಿಗೆ ವಾರ್ಷಿಕ ಸಾಮರ್ಥ್ಯ ವೃದ್ಧಿ ಯೋಜನೆಯನ್ನು ಸೂಚಿಸಲಿದೆ. ಈ ಯೋಜನೆಯ ಜಾರಿಯ ಮೇಲೆ ನಿಗಾವಹಿಸಲಿದ್ದು, ಸೇವೆಯಲ್ಲಿನ ದಕ್ಷತೆ ಹೆಚ್ಚಿಸುವ ಬಗ್ಗೆ ಗಮನ ಹರಿಸಲಿದೆ. ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆಯ ಜತೆಗೆ ಸಾರ್ವಜನಿಕ ಸೇವೆಗಳ ಕಲಿಕೆಗೆ ಸೂಕ್ತ ತಳಹದಿ ನಿರ್ಮಿಸಲಿದೆ ಎಂದು ಹೇಳಲಾಗಿದೆ.