ಅಕ್ರಮ ಗಣಿಗಾರಿಕೆಯ ಸಂಭಾವನೆಯೂ,  ಸಂಭಾವಿತರ ಮುಖವಾಡ ತೊಟ್ಟ ಪೊಲೀಸರೂ!

ಅಕ್ರಮ ಗಣಿಗಾರಿಕೆಯ ಸಂಭಾವನೆಯೂ,  ಸಂಭಾವಿತರ ಮುಖವಾಡ ತೊಟ್ಟ ಪೊಲೀಸರೂ!

ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಖಾರದಪುಡಿ ಮಹೇಶ್‌ ನ ಪೆನ್‌ ಡ್ರೈವ್ ಮತ್ತು ಡೈರಿ ಮತ್ತೆ ದಿಢೀರ್‌ ಎಂದು ಸುದ್ದಿಯಾಗಿದೆ. ಅತ್ತ ಲೋಕಾಯುಕ್ತರ ವರದಿ ಆಧರಿಸಿ ಕ್ರಮ ಕೈಗೊಳ್ಳಬೇಕಿದ್ದ ರಾಜ್ಯ ಸರ್ಕಾರ ಕಳ್ಳ ನಿದ್ದೆಗೆ ಜಾರಿದ್ದರೆ, ಇತ್ತ ಮಹೇಶ್‌ನಿಂದ ಅಕ್ರಮ ಸಂಭಾವನೆ ಪಡೆದ ಆರೋಪಕ್ಕೆ ಗುರಿಯಾಗಿರುವ ಪೊಲೀಸ್‌ ಅಧಿಕಾರಿಗಳು 'ಪ್ರಾಮಾಣಿಕತೆ' ಸೋಗು ಹಾಕಿ ವಿಧಾನಸೌಧದ ಕಾರಿಡಾರ್‌ ಸುತ್ತುತ್ತಿದ್ದಾರೆ. ಗುಟ್ಟಾಗಿ ನಡೆಯುತ್ತಿದ್ದ ಪೊಲೀಸ್‌ ಅಧಿಕಾರಿಗಳ 'ಕಳ್ಳಾಟ' ಕುರಿತು ಜಿ.ಮಹಂತೇಶ್ ವಿಶೇಷ ವರದಿ.  

 

ಅಕ್ರಮ ಗಣಿಗಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಾರದಪುಡಿ ಮಹೇಶ್‌ ಎಂಬಾತನಿಂದ ಅಕ್ರಮ ಸಂಭಾವನೆ ಪಡೆದಿರುವ ಆರೋಪದಡಿಯಲ್ಲಿ ವಿಚಾರಣೆಗೆ ಗುರಿಯಾಗಿರುವ ಪೊಲೀಸ್‌ ಅಧಿಕಾರಿಗಳು ಆರೋಪದಿಂದ ಮುಕ್ತಗೊಳ್ಳಲು ತೆರೆಮರೆಯಲ್ಲಿ ಶುರು ಮಾಡಿರುವ ಕಸರತ್ತಿಗೆ ಬಿರುಸಿನ ವೇಗ ದೊರೆತಿದೆ. 

ಆರೋಪಪಟ್ಟಿ ಪ್ರಕಾರ ಇಲಾಖೆ ವಿಚಾರಣೆಗೆ ಗುರಿಯಾಗಿರುವ ಬಹುತೇಕ ಪೊಲೀಸ್‌ ಅಧಿಕಾರಿಗಳು, ಆರೋಪದಲ್ಲಿ ಭಾಗಿ ಆಗಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರಲ್ಲದೆ ಪ್ರಾಮಾಣಿಕವಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ತಮ್ಮದಲ್ಲದ ತಪ್ಪಿಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ ಎಂದು ಗೋಳಾಡುತ್ತಿರುವ ಪೊಲೀಸ್‌ ಅಧಿಕಾರಿಗಳು ಲೋಕಾಯುಕ್ತ ವರದಿಯನ್ನೇ ಬಲಹೀನಗೊಳಿಸುತ್ತಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತು ಈ ಹಿಂದೆ ಲೋಕಾಯುಕ್ತರಾಗಿದ್ದ ಸಂತೋಷ್‌ ಹೆಗ್ಡೆ ಅವರು ಸರ್ಕಾರಕ್ಕೆ 2 ವರದಿಗಳನ್ನು ಸಲ್ಲಿಸಿದ್ದರು. ಇದರಲ್ಲಿ ಸಾರ್ವಜನಿಕ ಆಡಳಿತ ಕುಸಿತಕ್ಕೆ ಕಾರಣರಾಗಿದ್ದ ಪೊಲೀಸ್‌ ಅಧಿಕಾರಿಗಳೂ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳ ಹೆಸರುಗಳನ್ನೂ ಉಲ್ಲೇಖಿಸಲಾಗಿತ್ತು. ಈ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ 9 ವರ್ಷಗಳಾದರೂ ಯಾವೊಬ್ಬ ಪೊಲೀಸ್‌ ಅಧಿಕಾರಿಯ ಮೇಲೂ ಈವರೆವಿಗೂ ಕ್ರಮ ಕೈಗೊಂಡ ನಿದರ್ಶನಗಳಿಲ್ಲ. 

ರಾಜ್ಯ ಸರ್ಕಾರ ಭಂಡ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನದ ಪರಮಾವಧಿ ಘಟ್ಟ ತಲುಪಿರುವ ಬೆನ್ನಲ್ಲೇ ಪೊಲೀಸ್‌ ಇಲಾಖೆಯ ಅಧಿಕಾರಿಗಳು, ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಿರುವಂತೆ ಆರೋಪಗಳನ್ನೆಸಗಿಲ್ಲ ಎಂದು ನೀಡುತ್ತಿರುವ ಸಮಜಾಯಿಷಿ ಹೇಳಿಕೆಗಳನ್ನೇ ಪುರಸ್ಕರಿಸಲಾಗುತ್ತಿದೆ. ಇದಕ್ಕೆ ಪಿಎಸ್‌ಐ ಹರೀಶ್‌ ಕುಮಾರ್‌ ಪ್ರಕರಣವೇ ತಾಜಾ ನಿದರ್ಶನ.

ರಾಯಚೂರು ಜಿಲ್ಲೆಯ ದೇವಸೂರು ತಾಲೂಕಿನ ಶಕ್ತಿ ನಗರದಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ (14-1-2010) ಅವಧಿಯಲ್ಲಿ ಖಾರದಪುಡಿ ಮಹೇಶ್‌  ಹಾಗೂ ಆತನ ಸಂಗಡಿಗರಿಂದ 5,300 ರು.ಗಳನ್ನು ಅಕ್ರಮವಾಗಿ ಸಂಭಾವನೆ ಪಡೆದಿದ್ದಾನೆ ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. 2011ರ ಜುಲೈ 22ರಂದು ಸಲ್ಲಿಕೆಯಾಗಿದ್ದ ವರದಿಯ ಅಧ್ಯಾಯ 28ರ ಕ್ರಮ ಸಂಖ್ಯೆ 495ರಲ್ಲಿ ಈತನ ವಿರುದ್ಧ ಆರೋಪ  ಮಾಡಲಾಗಿತ್ತು.

ಆದರೆ "ಆರೋಪ ಪಟ್ಟಿಯಲ್ಲಿ ನಮೂದಿಸಿರುವಂತೆ 2010 ಜನವರಿ 14ರಂದು  ರಾಯಚೂರು ಜಿಲ್ಲೆ ದೇವಸೂರು ತಾಲೂಕಿನ ಶಕ್ತಿ ನಗರದಲ್ಲಿ ಕಾರ್ಯನಿರ್ವಹಿಸಿರುವುದಿಲ್ಲ. ಬದಲಿಗೆ ಸಂಡೂರು ತಾಲೂಕಿನಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸಿದ್ದರು. ಹಾಗೆಯೇ 2015 ಜುಲೈ 8 ರಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಪಿಎಸ್‌ಐ ಆಗಿ ಹರೀಶ್‌ ಕುಮಾರ್‌ ಕರ್ತವ್ಯ ನಿರ್ವಹಿಸಿರುವುದಿಲ್ಲ.  ಈ ಅವಧಿಯಲ್ಲಿ ದಕ್ಷಿಣ ವಲಯ ಕಚೇರಿಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು 2016 ರ ಮಾರ್ಚ್ 29ರಂದು ಸೇವಾ ದೃಢೀಕರಣ ಪತ್ರ ಸಲ್ಲಿಸಿದ್ದರು," ಎಂದು ರಾಯಚೂರು ಗ್ರಾಮಾಂತರ ವೃತ್ತ ನಿರೀಕ್ಷಕರು ಮತ್ತು ಸಂಡೂರು ಪೊಲೀಸ್‌ ಠಾಣಾಧಿಕಾರಿ ಇಲಾಖೆಗೆ 2019ರ ಮೇ  3ರಂದು ಮಾಹಿತಿ ನೀಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಹೀಗಾಗಿ ಖಾರದಪುಡಿ ಮಹೇಶ್‌ ಹಾಗೂ ಆತನ ಸಂಗಡಿಗರಿಂದ ಹರೀಶ್‌ಕುಮಾರ್‌ 5,300 ರು.ಹಣ ಪಡೆದಿರುವುದು ಸತ್ಯಕ್ಕೆ ದೂರವಾದ ಸಂಗತಿ. ಆರೋಪಪಟ್ಟಿಯಲ್ಲಿನ ಆರೋಪದಲ್ಲಿ ಭಾಗಿ ಆಗದೇ ಇರುವುದು ಸ್ಪಷ್ಟವಾಗುತ್ತದೆ ಎಂದೂ ಮಾಹಿತಿ ನೀಡಿದ್ದಾರೆ.

ಅಲ್ಲದೆ, ಖುದ್ದು ಹರೀಶ್‌ಕುಮಾರ್‌ ಅವರು " ಕಳೆದ 16 ವರ್ಷಗಳಿಂದ ಇಲಾಖೆಯಲ್ಲಿ ಮೇಲಾಧಿಕಾರಿಗಳು ನೀಡುವ ನಿರ್ದೇಶನಗಳಂತೆ ಪ್ರಾಮಾಣಿಕವಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದೇನೆ. ತನ್ನದಲ್ಲದ ತಪ್ಪಿಗೆ ತನ್ನ ಮೇಲೆ ಹೊರೆಸಿರುವ ಇಲಾಖೆ ವಿಚಾರಣೆಯಿಂದ ಕಳೆದ 4 ವರ್ಷಗಳಿಂದ ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ, ಖಿನ್ನತೆಗೆ ಒಳಗಾಗಿದ್ದೇನೆ. ಹೀಗಾಗಿ ಇಲಾಖೆ ವಿಚಾರಣೆಯಿಂದ ಮುಕ್ತಗೊಳಿಸಿ," ಎಂದು ಇಲಾಖೆಗೆ ಕೋರಿರುವುದು ಲಭ್ಯ ಇರುವ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಅರೋಪಕ್ಕೆ ಗುರಿಯಾಗಿ ಇಲಾಖೆ ವಿಚಾರಣೆ ಎದುರಿಸಬೇಕಿದ್ದ ಪೊಲೀಸ್‌ ಅಧಿಕಾರಿಗಳೀಗ ನಾನಾ ರೀತಿಯ ಒಳ ಮಾರ್ಗಗಳನ್ನು ಬಳಸುವ ಮೂಲಕ ಪ್ರಾಮಾಣಿಕತೆಯ ಸೋಗು ಹಾಕುತ್ತಿದ್ದಾರೆ. ಅಲ್ಲದೆ,  ಇಲಾಖೆ ವಿಚಾರಣೆಯಿಂದಲೇ ತಪ್ಪಿಸಿಕೊಂಡು ಆರೋಪ ಮುಕ್ತರಾಗಲು ಅನುಕಂಪ ಗಿಟ್ಟಿಸಿಕೊಳ್ಳುವ ಸಮಜಾಯಿಷಿ ಹೇಳಿಕೆಗಳನ್ನೊಳಗೊಂಡ ಕಡತಗಳ ರಾಶಿಗೆ  ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ ಮನ್ನಣೆ ನೀಡುವ ಮೂಲಕ ಆರೋಪ ಮುಕ್ತಿ ಭಾಗ್ಯವನ್ನು ಕರುಣಿಸಲಾಗುತ್ತಿದೆ!

ಖಾರದಪುಡಿ ಮಹೇಶ್‌ ಎಂಬಾತನಿಂದ ಬಳ್ಳಾರಿ, ಚಿತ್ರದುರ್ಗ, ತುಮಕೂರು, ಬೆಂಗಳೂರು, ಕೋಲಾರ, ದಾವಣಗೆರೆ, ಹಾವೇರಿ, ಕೊಪ್ಪಳ, ಗದಗ್‌, ರಾಯಚೂರು, ಗುಲ್ಬರ್ಗ, ಬಿಜಾಪುರ, ಬಾಗಲಕೋಟೆ, ಬೆಳಗಾಂ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಲಂಚವನ್ನು ಪಡೆದಿದ್ದರು. ಈತನಿಂದ ಸರ್ಕಾರಿ ಅಧಿಕಾರಿಗಳಿಗೆ ಒಟ್ಟು 2,46,62,377 ರು.ಲಂಚದ ರೂಪದಲ್ಲಿ ಸಂದಾಯವಾಗಿತ್ತು ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿತ್ತು.

ಅರಣ್ಯ, ಪೊಲೀಸ್‌, ವಾಣಿಜ್ಯ ತೆರಿಗೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಿಂದ ಒಟ್ಟು 617 ಅಧಿಕಾರಿಗಳು ಖಾರದಪುಡಿ ಮಹೇಶ್‌ ನಿಂದ ಲಂಚ ಪಡೆದಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿತ್ತು.  ಪೊಲೀಸ್‌ ಅಧಿಕಾರಿಗಳ ಪೈಕಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳೂ ಲಂಚ ಪಡೆದವರ ಪಟ್ಟಿಯಲ್ಲಿದ್ದರು. ಬಳ್ಳಾರಿಯಿಂದ ಕೃಷ್ಣಪಟ್ಟಣಂ ಬಂದರು ಮಧ್ಯೆ ಅಕ್ರಮವಾಗಿ ಅದಿರು ಸಾಗಣೆ ಸಂದರ್ಭದಲ್ಲಿ ಅಧಿಕಾರಿಗಳು ಖಾರದಪುಡಿ ಮಹೇಶ್‌ ಪರವಾಗಿ ಕಾರ್ಯನಿರ್ವಹಿಸಿದ್ದರು ಎಂಬ ಆರೋಪವನ್ನು ಲೋಕಾಯುಕ್ತರು ಹೊರಿಸಿದ್ದರು.