ಅಕ್ರಮ ಗಣಿಗಾರಿಕೆ ಆಸ್ತಿ : ಜಾರಿ ನಿರ್ದೇಶನಾಲಯದಿಂದ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ

ಅಕ್ರಮ ಗಣಿಗಾರಿಕೆ ಹಣದಿಂದ ಬಿಜೆಪಿ ಮುಖಂಡರು ಸೇರಿದಂತೆ ಹಲವು ಬಲಾಢ್ಯರು ಆದಾಯ ಮೀರಿದ ಆಸ್ತಿ ಹೊಂದಿರುವುದರ ವಿರುದ್ಧ ಕ್ರಮ ಕೈಗೊಳ್ಳಲು ಅಕ್ರಮ ಧನ ವರ್ಗಾವಣೆ ತಡೆ ಕಾಯ್ದೆಯಲ್ಲೇ ಅವಕಾಶಗಳಿದ್ದರೂ ಜಾರಿ ನಿರ್ದೇಶನಾಲಯ ವಹಿಸಿರುವ ಮೌನ ಅನುಮಾನಗಳನ್ನು ಹುಟ್ಟಿಸಿವೆ.

ಅಕ್ರಮ ಗಣಿಗಾರಿಕೆ ಆಸ್ತಿ : ಜಾರಿ ನಿರ್ದೇಶನಾಲಯದಿಂದ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ

ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರ ಬಂಧನ ಪ್ರಕರಣಕ್ಕೆ ಅಕ್ರಮ ಧನ ವರ್ಗಾವಣೆ ತಡೆ ಕಾಯ್ದೆಯನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿರುವ ಜಾರಿ ನಿರ್ದೇಶನಾಲಯ(ಇಡಿ), ಅಕ್ರಮ ಗಳಿಕೆ ಆರೋಪಕ್ಕೆ ಗುರಿಯಾಗಿರುವ ಚುನಾಯಿತ ಜನಪ್ರತಿನಿಧಿಗಳು, ರಾಜಕಾರಣ ಹಿನ್ನೆಲೆ ಹೊಂದಿರುವ ಬಲಾಢ್ಯರ ಎದೆಯಲ್ಲಿ ಕಂಪನ ಸೃಷ್ಟಿಸಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯನ್ನೂ ಗಳಿಸುತ್ತಿದೆ.

ಆದರೆ ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯ ವ್ಯವಹಾರದ ಹಣವನ್ನು ಅಥವಾ ಅಂತಹ ಹಣದಿಂದ ಅಕ್ರಮ ಆಸ್ತಿ ಹೊಂದಿರುವ ರಾಜಕಾರಣಿಗಳು ಮತ್ತು ರಾಜಕಾರಣ ಹಿನ್ನೆಲೆ ಹೊಂದಿರುವ ಗಣಿ ಗುತ್ತಿಗೆದಾರರು,  ಅಕ್ರಮ ನಡೆಸಿರುವ ಆರೋಪಕ್ಕೆ ಗುರಿಯಾಗಿರುವ ಗಣಿ ಕಂಪನಿಗಳ ಒಡೆತನ ಹೊಂದಿರುವ ರಾಜಕಾರಣಿಗಳ ವಿರುದ್ಧ ಅಕ್ರಮ ಧನ ವರ್ಗಾವಣೆ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತಿಲ್ಲ.

ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ನೀಡಿದ್ದ ವರದಿ ಆಧರಿಸಿ ಕ್ರಮ ಕೈಗೊಳ್ಳಲು ಹಿಂದಿನ ಕಾಂಗ್ರೆಸ್ ಸರ್ಕಾರ ಎಚ್ ಕೆ ಪಾಟೀಲ್ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಚಿವ ಸಂಪುಟ ಉಪ ಸಮಿತಿಯ ವರದಿಯಲ್ಲಿಯೂ ಅಕ್ರಮ ಧನ ವರ್ಗಾವಣೆ ತಡೆ ಕಾಯ್ದೆ ಉಲ್ಲೇಖವಾಗಿದೆ. ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ನಮೂದಿಸಿದ್ದ ಸಾವಿರಾರು ಕೋಟಿ ಮೊತ್ತವನ್ನು ಮೀರಿಸಿದ್ದ ಸಂಪುಟ ಉಪ ಸಮಿತಿ, ನಷ್ಟದ ಮೊತ್ತವನ್ನು ಲಕ್ಷ ಕೋಟಿ ರು.ಗಳಿಗೇರಿಸಿತ್ತು.

ಅಂದರೆ ಸುಂಕ ಇಲಾಖೆ ನೀಡಿದ್ದ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಅವಲಂಬಿತರಾಗಿದ್ದ ಸಂತೋಷ್ ಹೆಗ್ಡೆ ಅವರು 2.98 ಕೋಟಿ ಟನ್ ಅಕ್ರಮ ಅದಿರು ರಫ್ತಾಗಿದೆ ಎಂದು ಹೇಳಿದ್ದರು. ಪ್ರತಿ ಟನ್ ಗೆ 4,103 ರು.ಸರಾಸರಿ ದರದಲ್ಲಿ 12,228 ಕೋಟಿ ರು.ನಷ್ಟ ಕರ್ನಾಟಕಕ್ಕೆ ಆಗಿದೆ ಎಂದು ವರದಿಯಲ್ಲಿ ದಾಖಲಿಸಿದ್ದರು. ಕರ್ನಾಟಕದ ಹತ್ತು ಬಂದರುಗಳು ಹಾಗೂ ಗೋವಾ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ವಿವಿಧ ಬಂದರುಗಳಿಂದ ರಫ್ತಾದ ಒಟ್ಟು ಕಬ್ಬಿಣ ಅದಿರಿನ ಲೆಕ್ಕಾಚಾರಕ್ಕಷ್ಟೇ ಸೀಮಿತವಾಗಿತ್ತು.

ಆದರೆ ಸಚಿವ ಸಂಪುಟ ಉಪ ಸಮಿತಿ, ಸಂತೋಷ್ ಹೆಗ್ಡೆ ಅವರ ಅಂದಾಜನ್ನೂ ಮೀರಿಸಿತ್ತು. ಬಳ್ಳಾರಿಯಿಂದ ಹೊರಗಡೆ 6 ರೈಲ್ವೆ ನಿಲ್ದಾಣ ಮತ್ತು 14 ರೈಲ್ವೆ ಸೈಡಿಂಗ್ ಗಳಿಂದ 2006ರಿಂದ 2010ರ ಅವಧಿಯಲ್ಲಿ 20 ಕೋಟಿ ಟನ್ ಗಳಷ್ಟು ಅದಿರು ಅಕ್ರಮವಾಗಿ ರಫ್ತಾಗಿತ್ತು. ಅಲ್ಲದೆ, ಸೆಪ್ಟಂಬರ್ 2009ರಿಂದ 2010ರ ಜೂನ್ವರೆಗಿನ ಕೇವಲ 9 ತಿಂಗಳ ಅವಧಿಯಲ್ಲಿ 14 ಕೋಟಿ ಟನ್ ಸೇರಿ ಒಟ್ಟು 34 ಗಳಷ್ಟು ಕಬ್ಬಿಣ ಅದಿರು ಪ್ರತಿನಿತ್ಯ 20,000 ಟ್ರಕ್ಗಳ ಮೂಲಕ ಸಾಗಾಣಿಕೆಯಾಗಿತ್ತು ಎಂಬ ಅಂಶವನ್ನು ಉಪ ಸಮಿತಿ ಹೊರಗೆಡವಿತ್ತು. ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಸರಾಸರಿ ದರ ಟನ್ ಗೆ ಅಂದಾಜಿಸಿದ್ದ ಸರಾಸರಿ 4,103 ರು. ದರವನ್ನೇ 34 ಕೋಟಿ ಟನ್ ಗೆ ಲೆಕ್ಕ ಹಾಕಿದರೆ ನಷ್ಟದ ಮೊತ್ತ 1,39,502 ಕೋಟಿ ರು. ದಾಟುತ್ತದೆ.

ಸಚಿವ ಸಂಪುಟ ಉಪಸಮಿತಿ ನಡಾವಳಿಯ ಪ್ರತಿ 

ಸರ್ಕಾರಕ್ಕೆ ನಷ್ಟ ಆಗಿದೆ ಎಂದು ಉಪ ಸಮಿತಿ ಹೇಳಿರುವ ಒಂದು ಲಕ್ಷ ಕೋಟಿ ರು., ಗಳು, ಬಲಾಢ್ಯ ವ್ಯಕ್ತಿಗಳು ಅಕ್ರಮವಾಗಿ ಗಳಿಸಿರುವ ಆದಾಯವೂ ಹೌದು. ಸರ್ಕಾರವೇ ರಚಿಸಿದ್ದ ಸಂಪುಟ ಉಪ ಸಮಿತಿಯೇ ಇದನ್ನು 'ಅಕ್ರಮ ಆಸ್ತಿ' ಎಂದಿರುವಾಗ ಜಾರಿ ನಿರ್ದೇಶನಾಲಯ ಈವರೆಗೂ ಕ್ರಮಕ್ಕೆ ಮುಂದಾಗಿಲ್ಲ.

ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಭಾಗಿ ಆಗಿರುವ ರಾಜಕಾರಣಿ, ಕಂಪನಿ ಮಾಲೀಕರು ಮತ್ತು ರಾಜಕಾರಣದ ಹಿನ್ನಲೆ ಹೊಂದಿರುವ ಗಣಿ ಗುತ್ತಿಗೆದಾರರ ವಿರುದ್ಧ ಅಕ್ರಮ ಧನ ವರ್ಗಾವಣೆ ತಡೆ ಕಾಯ್ದೆಯನ್ನು ಬಳಸುವ ಅವಕಾಶಗಳಿದ್ದರೂ  ಜಾರಿ ನಿರ್ದೇಶನಾಲಯ ಈವರೆಗೂ ಅಂತಹ ಎದೆಗಾರಿಕೆಯನ್ನು  ಪ್ರದರ್ಶಿಸದಿರುವುದು ಸಹಜವಾಗಿಯೇ ಹಲವು ಅನುಮಾನಗಳನ್ನು ಹುಟ್ಟಿಸಿವೆ.

ಅಕ್ರಮ ಗಣಿಗಾರಿಕೆಯಿಂದಾದ ನಷ್ಟದ ಕುರಿತು ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ನೀಡಿದ್ದ ವರದಿಯನ್ನು ಸುಪ್ರೀಂ ಕೋರ್ಟ್ ಕೂಡ ಒಪ್ಪಿಕೊಂಡಿದೆ. ಅಲ್ಲದೆ, ಇದೇ ನ್ಯಾಯಾಲಯ ನೇಮಕ ಮಾಡಿದ ಕೇಂದ್ರೀಯ ಸ್ವಾಧಿಕಾರ ಸಮಿತಿ(ಸಿಇಸಿ) ವರದಿಯೂ ಅಕ್ರಮ ಧನ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಹೆಚ್ಚಿನ ಅವಕಾಶಗಳಿವೆ ಎಂದು ಹೇಳಿದೆಯಾದರೂ ಇದನ್ನಾಧರಿಸಿ ಜಾರಿ ನಿರ್ದೇಶನಾಲಯವೇಕೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿಲ್ಲ ಎಂಬ ಪ್ರಶ್ನೆಯೂ ಕೇಳಿ ಬಂದಿದೆ.

ಸರ್ವೋಚ್ಛ ನ್ಯಾಯಾಲಯವು ತನ್ನ ನೇರ ಉಸ್ತುವಾರಿಯಲ್ಲಿ ತನಿಖೆಯ  ಮೇಲ್ವಿಚಾರಣೆ ನಡೆಸುತ್ತಿದೆ. ಅಕ್ರಮ ಗಣಿಗಾರಿಕೆಯಿಂದ ಉಂಟಾಗಿರುವ ನಷ್ಟದಿಂದ ರಾಷ್ಟ್ರದ ಸಂಪತ್ತು ಕೆಲವೇ ಕೆಲವು ಬಲಾಢ್ಯ ವ್ಯಕ್ತಿಗಳ ಪಾಲಾಗಿದೆಯಲ್ಲದೆ, ಕೋಟ್ಯಂತರ ರು.ಗಳನ್ನು ಅಕ್ರಮವಾಗಿ ಗಳಿಸಿದ್ದಾರೆ ಎಂಬ ಪುರಾವೆಗಳನ್ನೂ ಒದಗಿಸಿದೆ. ಆದರೂ ಜಾರಿನಿರ್ದೇಶನಾಲಯ ಸ್ವಯಂ ಪ್ರೇರಿತವಾಗಿಯಾದರೂ ಮನಿ ಲ್ಯಾಂಡ್ರಿಂಗ್ ಕಾಯ್ದೆ ಅಸ್ತ್ರ ಪ್ರಯೋಗಿಸಿ ಅಕ್ರಮವಾಗಿ ಗಳಿಸಿರುವ ರಾಜಕಾರಣದ ಹಿನ್ನಲೆ ಹೊಂದಿರುವ ಗಣಿ ಗುತ್ತಿಗೆದಾರರು, ಕಂಪನಿಗಳ ಒಡೆತನ ಹೊಂದಿರುವ ರಾಜಕಾರಣಿಗಳು ಮತ್ತು ಅವರ ಕುಟುಂಬ ಸದಸ್ಯರು, ಕಂಪನಿಗಳ ಮಾಲೀಕರನ್ನು ಕನಿಷ್ಠ ಬಂಧಿಸಲು ಮುಂದಾಗುತ್ತಿಲ್ಲ.

ಸಚಿವ ಸಂಪುಟ ಉಪಸಮಿತಿ ನಡಾವಳಿಯ ಪ್ರತಿ 

ರೈಲ್ವೇ ವ್ಯಾಗನ್ ಗಳು ಮತ್ತು ಟ್ರಕ್ಗಳ ಮೂಲಕ ಅಧಿಕಾರಸ್ಥ ರಾಜಕಾರಣಿಗಳು ತಮ್ಮ ತೋಳ್ಬಲ ಬಳಸಿ ಕಬ್ಬಿಣ ಅದಿರು ರಫ್ತು ಮಾಡಿದ್ದರಲ್ಲದೆ, ತಮ್ಮ ಖಜಾನೆಯನ್ನೂ ಭರ್ತಿ ಮಾಡಿಕೊಂಡಿದ್ದರು. ಅಕ್ರಮ ಗಣಿಗಾರಿಕೆಯ ಪ್ರಕರಣಗಳಲ್ಲಿ ಬಿಜೆಪಿ, ಕಾಂಗ್ರೆಸ್ ನ ಪ್ರಮುಖ ರಾಜಕಾರಣಿಗಳು, ಹಾಲಿ ಮತ್ತು ಮಾಜಿ ಸಚಿವರು ಭಾಗಿ ಆಗಿರುವುದು ತನಿಖೆಯಿಂದ ದೃಢಪಟ್ಟಿತ್ತು. ಸಾರ್ವಜನಿಕ ಆಸ್ತಿಯನ್ನು ಕೊಳ್ಳೆ ಹೊಡೆದಿದ್ದವರತ್ತ ಜಾರಿ ನಿರ್ದೇಶನಾಲಯ ಕಣ್ಣೆತ್ತಿಯೂ ನೋಡಿಲ್ಲ.

ಅಲ್ಲದೆ, ವಾಣಿಜ್ಯ ತೆರಿಗೆ, ಅಬಕಾರಿ ಸುಂಕ ವಂಚನೆ ಸೇರಿದಂತೆ ಸರ್ಕಾರದ ವಿವಿಧ ತೆರಿಗೆಗಳಿಗೂ ವಂಚನೆಯಾಗಿವೆ. ನಾನಾ ಆಯಾಮಗಳನ್ನು ಹೊಂದಿರುವ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಬಲಾಢ್ಯರು ದೇಶ ಮತ್ತು ವಿದೇಶಗಳಲ್ಲಿಯೂ ಅಪಾರ ಪ್ರಮಾಣದ ಹೂಡಿಕೆ ಮತ್ತು ಆಸ್ತಿಪಾಸ್ತಿಯನ್ನು ಹೊಂದಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಘಟನೆಗಳು ಇಂತಹ ಅಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಇದೊಂದು ವ್ಯಾಪಕ ಸಂಘಟಿತ ಅಪರಾಧ ಎಂದು ಪರಿಗಣಿಸಿದ್ದರೂ ಜಾರಿ ನಿರ್ದೇಶನಾಲಯ ಮಾತ್ರ ಬಲಾಢ್ಯರನ್ನು  ಪ್ರಶ್ನಿಸುವ ಗೋಜಿಗೂ ಹೋಗುತ್ತಿಲ್ಲ.