ಅಕ್ರಮ ಗಣಿಗಾರಿಕೆಗಿಲ್ಲ ಅಂಕುಶ : ಕನ್ನಂಬಾಡಿ ಸೇರಲಿದೆ ಇತಿಹಾಸ? 

ಅಣೆಕಟ್ಟುಗಳ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗಳು ಬೇಡ ಎಂಬ ತೀರ್ಪು, ಆದೇಶಗಳಿದ್ದರೂ ಕೆ.ಆರ್.ಎಸ್. ಸುತ್ತಮುತ್ತ ಇದು ಅನ್ವಯವಾಗುತ್ತಿಲ್ಲ!

ಅಕ್ರಮ ಗಣಿಗಾರಿಕೆಗಿಲ್ಲ ಅಂಕುಶ : ಕನ್ನಂಬಾಡಿ ಸೇರಲಿದೆ ಇತಿಹಾಸ? 

ಒಂಬತ್ತು ದಶಕಗಳಿಂದ ಕಾವೇರಿ ಹೇಮಾವತಿ ಲಕ್ಷಣತೀರ್ಥ ಇತ್ಯಾದಿ ನದಿಗಳಲ್ಲಿ ಅದೆಷ್ಟು ನೀರು ಹರಿದಿದೆಯೋ ಅದನ್ನೆಲ್ಲ ಚಿಂತಿಸದೇ, ನೆರೆ ರಾಜ್ಯಗಳ ತಕರಾರು ಕಥಾನಕಗಳನ್ನೆಲ್ಲ ಒಡಲಾಳದಲ್ಲಿಟ್ಟುಕೊಂಡೇ ಇರುವ ಕೃಷ್ಣರಾಜ ಅಣೆಕಟ್ಟೆಗೆ ಮಾರಕವಾಗುವಂಥ ಅಕ್ರಮ ಕಲ್ಲುಗಣಿಗಾರಿಕೆ ಅಂಕುಶವಿಲ್ಲದೆ ನಡೆಯುತ್ತಿರುವುದು ಆತಂಕವನ್ನೆಚ್ಚಿಸಿದೆ.

ಅಣೆಕಟ್ಟುಗಳ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗಳು ಬೇಡ ಎಂಬ ತೀರ್ಪು, ಆದೇಶಗಳಿದ್ದರೂ ಕೆ.ಆರ್.ಎಸ್. ಸುತ್ತಮುತ್ತಕ್ಕೆ ಇದು ಅನ್ವಯವಾಗುತ್ತಿಲ್ಲ. ಅಷ್ಟರಮಟ್ಟಿಗೆ ರಾಜಕಾರಣಿಗಳ ಪ್ರಭಾವ ಇಲ್ಲಿ ಹರಡಿಕೊಂಡಿದೆ, ಪರಿಣಾಮವಾಗಿ ಮಲ್ಲಿಗೆ ಪುರ, ಅಲ್ಲಹಳ್ಳಿ, ಬಿದರಳ್ಳಿ, ಬೇಬಿ ಬೆಟ್ಟ, ಕಣಿವೆ ಕೊಪ್ಪಲು, ರಾಗಿಮುದ್ದನ ಹಳ್ಳಿ, ಕಣಿವೆ ಕೊಪ್ಪಲು, ಕನಗನಮರಡಿ, ಪಾಂಡವಪುರ, ಮಲ್ಲೇನಹಳ್ಳಿ, ಕಟ್ಟೇರಿ, ಹೊಸ ಬನ್ನಂಗಾಡಿ, ಚಿನಕುರಳಿ, ಚಂದ್ರೆ, ನುಗ್ಗಹಳ್ಳಿ, ಕನಗನಹಳ್ಳಿ, ಡಿಂಕಾ, ಮಾಕೋನಹಳ್ಳಿ, ಕಾಮನಾಯಕನಹಳ್ಳಿ ಹೀಗೇ 80 ಕ್ಕೂ ಹೆಚ್ಚು ಕಡೆ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತ್ತಲೇ ಇದೆ.

ಆಗಿಂದಾಗ್ಗೆ ಕೆಆರ್ಎಸ್ ಸುತ್ತಮುತ್ತ ದೊಡ್ಡ ಸದ್ದು ಕೇಳಿಬರುವಂಥದ್ದು, ಭೂಮಿ ಅದುರಿದಂತಾಗುವ ಅನುಭವಗಳನ್ನ ಸ್ಥಳೀಯರು ಹೇಳಿಕೊಳ್ಳುತ್ತಿದ್ದರೂ, ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಲೇ ಇಲ್ಲ. ಪ್ರಕೃತಿ ವಿಕೋಪ ತಡೆ ಮತ್ತು ನಿಯಂತ್ರಣ ಸಂಸ್ಥೆ, ಇಂಜಿನಿಯರ್ ಗಳ ತಂಡ, ಸಂಶೋಧನಾ ತಂಡಗಳೆಲ್ಲ  ಕಲ್ಲು ಗಣಿಗಾರಿಕೆ ನಿಷೇಧಿಸಲೇಬೇಕು, ಕೆಆರ್ಎಸ್ ತಡೆಗೋಡೆಗಳು ಇನ್ನೆಷ್ಟು ವರ್ಷ ಸುಭದ್ರವಾಗಿರುತ್ತವೆ ಎಂಬುದರ ಬಗ್ಗೆ ಅಂತರರಾಷ್ಟ್ರೀಯ ತಜ್ಞರ ತಂಡದಿಂದ ಖಚಿತಗೊಳಿಸಿಕೊಳ್ಳಬೇಕು ಎಂಬ ಶಿಫಾರಸು ಮಾಡುತ್ತಲೇ ಇವೆ. ಆದರಿದನ್ನ ಯಾವ ಸರ್ಕಾರವೂ ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ಅಕ್ರಮ ಕಲ್ಲು ಗಣಿಗಾರಿಕೆ ನಡೆದೇ ಇದೆ.

ಮಂಡ್ಯ ಜಿಲ್ಲೆಯ ಆರಕ್ಷಕ ವರಿಷ್ಠಾಧಿಕಾರಿ ಕೂಡ, ಭಾರೀ ವಾಹನಗಳು ಗಣಿಗಾರಿಕೆ ನಿಮಿತ್ತ ಓಡಾಡುತ್ತಿರುವುದರಿಂದ, ರಸ್ತೆ ಹಾಳಾಗುತ್ತಿವೆ, ಸಂಚಾರ ಹೆದಗೆಡುತ್ತಿದೆ ಎಂಬ ವರದಿ ಕೂಡ ಕೊಟ್ಟಿದ್ದಾರೆ. ಕಲ್ಲು ಧೂಳು ಹರಡಿ ಪರಿಸರಕ್ಕೂ ದಕ್ಕೆಯಾಗುತ್ತಿದೆ, ಆರೋಗ್ಯಕ್ಕೂ ಹಾನಿಯಾಗುತ್ತಿದೆ ಎಂಬಂಥ ಕೂಗುಗಳೆಲ್ಲ ಅರ್ಥ ಪಡೆದುಕೊಂಡೇ ಇಲ್ಲ

ದೊಡ್ಡ ದೊಡ್ಡ ರಾಜಕಾರಣಿಗಳ ಕುಟುಂಬವೇ ಕಲ್ಲು ತೆಗೆಯುವ ಉದ್ಯಮ ನಡೆಸುತ್ತಿದ್ದು, ಇದಕ್ಕಾಗಿ ಸಿಡಿಸುವ ಡೈನಾಮೇಟ್‍ಗಳು ಕೆಆರ್ಎಸ್ ಗೆ ಧಕ್ಕೆ ತರುತ್ತೆ ಎಂಬ ಆತಂಕಗಳಿಗೂ ಬಿಡಿಗಾಸಿನ ಬೆಲೆಯನ್ನೂ ಕೊಡುತ್ತಿಲ್ಲ. ದೊಡ್ಡ ಮಟ್ಟದ ಸದ್ದುಗಳು ಕೇಳಿಬಂದಾಗ ಮಾತ್ರ, ಜಿಲ್ಲಾಡಳಿತ ಒಂದಷ್ಟು ನಿಷೇಧ ಹೇರಿದರೂ ಹೆಚ್ಚು ದಿನ ಅದು ಜಾರಿಯಲ್ಲಿರಲು ಬಿಡದಷ್ಟು ದೊಡ್ಡದಾಗಿ ರಾಜಕೀಯ ಪ್ರಭಾವ ದಟ್ಟೈಸಿಕೊಂಡಿದೆ.

ಕನ್ನಂಬಾಡಿಯಲ್ಲಿ ತುಂಬಿಕೊಂಡಿರುವ ಹೂಳು ತೆಗೆಸುವುದೂ ಆಗಿಲ್ಲ. ತಮಿಳುನಾಡಿನ ಜತೆಗಿನ  ನೀರು ವಿವಾದವೂ ಖಚಿತವಾಗಿ ಅಂತ್ಯ ಕಂಡಿಲ್ಲ. ಮೇಕೆದಾಟು ಯೋಜನೆ ತಕರಾರಿಗೆ ಸಿಕ್ಕಿಕೊಂಡಿದೆ. ಕಾವೇರಿ ನದಿಗುಂಟ ಕಲ್ಮಷಗಳನ್ನ ಸೇರಿಸುತ್ತಿರುವುದರಿಂದಾಗಿ ಈ ನೀರೇ ಕುಡಿಯುವುದಕ್ಕೂ ಯೋಗ್ಯವಲ್ಲದಷ್ಟು ಕಲುಷಿತಗೊಂಡಿದೆ ಎಂದು ಪ್ರಯೋಗಗಳೂ ಸಾರಿ ಸಾರಿ ಹೇಳಿವೆ. ಜೀವನದಿ ಉಳಿಸುವ ಒಂದು ಭಾಗವಾಗಿ ಕೋಟ್ಯಂತರ ಗಿಡ ನೆಡುವ ಆಂದೋಲನ ಆರಂಭಿಸಿರುವುದಾಗಿ ಇಶಾ ಫೌಂಡೇಷನ್‍ನ ಜಗ್ಗಿ ವಾಸುದೇವ ಹೇಳಿಕೊಂಡಿದ್ದಾರೆ. ಮೈತ್ರಿ ಸರ್ಕಾರವಿದ್ದಾಗ ಕಟ್ಟೆ ಸುತ್ತಮುತ್ತಲ ನೀರಾವರಿ ಭೂಮಿ ವಶಪಡಿಸಿಕೊಂಡು ಬಹುದೊಡ್ಡ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಮನರಂಜನಾ ಕೇಂದ್ರವನ್ನಾಗಿಸುವ ನೀಲಿನಕ್ಷೆ ರೂಪಿಸಿಕೊಂಡಿತ್ತು, ವಿವಾದಕ್ಕೀಡಾಗಿತ್ತು. 

ಇಂಥವುಗಳ ನಡುವೆಯೇ ಕಟ್ಟೆಗೆ ಧಕ್ಕೆ ತರುತ್ತೆ ಎಂಬ ಅಕ್ರಮ ಗಣಿಗಾರಿಕೆಯಂಥ ತೀವ್ರತೆ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲದಿರುವುದು ಹೀಗೇ ಮುಂದುವರಿದರೆ, ಕನ್ನಂಬಾಡಿ ಕಟ್ಟೆ ಅಪಾಯಕ್ಕೀಡಾಗುವ ಸಾಧ್ಯತೆಗಳು ಹೆಚ್ಚಿವೆ.