ಅಕ್ರಮ ವಲಸಿಗರೂ, ವಲಸಿಗರ ಅಕ್ರಮವೂ

ಅಕ್ರಮಗಳ ಹಿಂದೆ ಇಂದು ನಾವೇ ಆದರಿಸಿ, ಅನುಸರಿಸುತ್ತಿರುವ ಬಂಡವಾಳಶಾಹಿ ಅಭಿವೃದ್ಧಿ ಮಾರ್ಗದ ಇತಿಹಾಸ ಇರುವುದನ್ನು ಗಮನಿಸದೆ ಹೋದರೆ ಬಹುಶಃ ಇಂದು ಸಕ್ರಮ  ನೆಲೆ ಹೊಂದಿರುವವರು ನಾಳೆ ಅಕ್ರಮ ವಲಸಿಗರಾಗಿಬಿಡುತ್ತಾರೆ.

ಅಕ್ರಮ ವಲಸಿಗರೂ, ವಲಸಿಗರ ಅಕ್ರಮವೂ

ಶಿಲಾಯುಗದಿಂದ ಡಿಜಿಟಲ್ ಯುಗದವರೆಗೂ ಮನುಕುಲದ ಹೆಜ್ಜೆಗಳನ್ನು ಅನುಸರಿಸುತ್ತಾ ಬಂದರೆ ಪ್ರತಿಯೊಂದು ಹೆಜ್ಜೆ ಗುರುತಿನ ಬದಿಯಲ್ಲೂ ಕಾಣಬಹುದಾದ ಒಂದು ವಿದ್ಯಮಾನ ಎಂದರೆ ವಲಸೆ ಮತ್ತು ವಲಸೆಗಾರರ ಬವಣೆ. 1991ರಿಂದ ಭಾರತ ನೋಡುತ್ತಿರುವ ಬಂಡವಾಳದ ಜಾಗತೀಕರಣ ಮತ್ತು 1970ರಿಂದಲೇ ವಿಶ್ವದ ಶ್ರೀಮಂತ ರಾಷ್ಟ್ರಗಳು ಅನುಸರಿಸುತ್ತಿರುವ ನವ ಉದಾರವಾದಿ ಆರ್ಥಿಕ ನೀತಿಗಳು ಇಡೀ ಜಗತ್ತನ್ನೇ ಒಂದು ಪುಟ್ಟ ಗ್ರಾಮವನ್ನಾಗಿ ಮಾಡುವ ಕನಸು ಹೊತ್ತಿದ್ದವು. ಆದರೆ ನವ ಉದಾರವಾದ ವಿಶ್ವದ ಪ್ರತಿಯೊಂದು ಗ್ರಾಮದಲ್ಲೂ ಹಲವು ಜಗತ್ತುಗಳನ್ನು ಸೃಷ್ಟಿಸುತ್ತಾ ಭೂ ಖಂಡವನ್ನು ಇನ್ನೂ ಛಿದ್ರಗೊಳಿಸುತ್ತಿದೆ.  ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಕೂಡು ಕುಟುಂಬಗಳನ್ನು ಭಂಗಗೊಳಿಸಿದಂತೆಯೇ ನವ ಉದಾರವಾದದ ಅಭಿವೃದ್ಧಿ ಮಾರ್ಗ ಗ್ರಾಮಗಳಲ್ಲಿ ಶತಮಾನಗಳಿಂದ ನಡೆದುಬಂದಿದ್ದ ಕೂಡಿ ಬಾಳುವ ಪರಂಪರೆಯನ್ನೇ ನಾಶಪಡಿಸುತ್ತಿದೆ. ಒಂದು ಮೇಲ್ಸೇತುವೆ, ಒಂದು ರಾಷ್ಟ್ರೀಯ ಹೆದ್ದಾರಿ, ಒಂದು ಸುಸಜ್ಜಿತ ಕಾರಿಡಾರ್ ನೂರಾರು ಗ್ರಾಮಗಳನ್ನು ಅಡ್ಡಡ್ಡಲಾಗಿ ಸೀಳುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ಬದುಕು ಕಟ್ಟಿಕೊಳ್ಳಲು ತಮ್ಮದೇ ಆದ ಕಾಯಕದಲ್ಲಿ ತೊಡಗಿಸಿಕೊಳ್ಳುವ ಶ್ರಮಿಕರಿಗೆ , ಕೃಷಿಕರಿಗೆ ಈ ಇಬ್ಬಾಗವಾಗುವ ಪ್ರಕ್ರಿಯೆ ಆಘಾತಕಾರಿಯಾಗಿ ಕಾಣುತ್ತಿಲ್ಲ, ಏಕೆಂದರೆ ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಭೌಗೋಳಿಕವಾದ ರಾಷ್ಟ್ರ ನಿರ್ಮಾಣವಾಗುತ್ತಿದೆ.

ಅಂದರೆ, ನಾವು ಕಾಣದ ನೆಲದ ಹಂಬಲಕೆ ಬಲಿಯಾಗಿ ನಿಂತ ನೆಲವೇ ಕುಸಿಯುತ್ತಿದ್ದರೂ ಲೆಕ್ಕಿಸದಷ್ಟು ಉನ್ಮತ್ತರಾಗಿದ್ದೇವೆ ಅಲ್ಲವೇ? ಇದು ನಮ್ಮನ್ನು ವಿಚಲಿತಗೊಳಿಸುತ್ತಲೂ ಇಲ್ಲ. ಕಾರಣ ಮುನ್ನಡೆಯ ಹಾದಿಯಲಿ ಹಿಂಬದಿಯ ಶವಗಳು ಅನಾಥವಾಗುವುದು ಸಹಜ. ಯಾವುದೋ ಒಂದು ಅಮೂರ್ತ ಲೋಕದ ಬೆನ್ನಟ್ಟಿ ಹೋಗುತ್ತಿರುವ ಭಾವುಕ ಸಮಾಜ ತನ್ನ ಕಾಲಡಿಯಲ್ಲೇ ಛಿದ್ರವಾಗುತ್ತಿರುವ ಜೀವಚರಗಳನ್ನು ಗಮನಿಸುತ್ತಲೇ ಇಲ್ಲ ಎನ್ನುವುದು ಈ ಕಾಲಘಟ್ಟದ ದುರಂತ. ಭಾರತ ಸುರಕ್ಷಿತವಾಗಿದೆ ಎಂದು ಹೇಳುವಾಗ ನಮ್ಮ ದೃಷ್ಟಿ ಹಾಳೆಯ ಮೇಲಿನ ವಕ್ರರೇಖೆಗಳತ್ತ ನೆಟ್ಟಿರುತ್ತದೆ. ಇದನ್ನು ಗಡಿ ಎಂದು ನಾವೇ ಗುರುತಿಸಿಕೊಂಡಿರುವುದರಿಂದ ಈ ವಕ್ರ ರೇಖೆಗಳಿಂದಾಚೆಗಿನ ಪ್ರಪಂಚ ನಮ್ಮದಲ್ಲ ಎಂಬ ಅಹಮಿಕೆಯಲ್ಲಿ ಬದುಕುತ್ತೇವೆ. ಅಥವಾ ಅದರಾಚೆಗಿನ ಭೂಮಿಯೂ ನಮ್ಮದಾಗಬಹುದು ಎಂಬ ಭ್ರಮೆಯಲ್ಲಿ ಮುನ್ನಡೆಯುತ್ತೇವೆ. ಸಮುದ್ರದ ಸಮೀಪದಲ್ಲಿ ಕೋಡುಗಲ್ಲಿನ ಮೇಲೆ ಕುಳಿತು ಚಂಡಮಾರುತವನ್ನು ವೀಕ್ಷಿಸುವಾಗ, ಅಪ್ಪಳಿಸುವ ಬೃಹತ್ ಅಲೆಗಳು ಎಲ್ಲವನ್ನೂ ನುಂಗಿಹಾಕುತ್ತಿದ್ದರೂ ಅಚ್ಚರಿ, ವಿಸ್ಮಯ ಮತ್ತು ನಿಸರ್ಗಸವಿಯ ಆನಂದದಿಂದ ನೋಡುತ್ತಲೇ ಕುಳಿತಿರುವವರಿಗೆ ತಾವು ಕುಳಿತ ಕೋಡುಗಲ್ಲಿನ ತಳದಲ್ಲೂ ಒಂದು ಅಲೆ ಅಡಗಿದೆ ಎನ್ನುವ ವಾಸ್ತವ ಅರಿವಾಗುವುದೇ ಇಲ್ಲ. ಒಮ್ಮೆ ಕುಸಿದಾಗ ನಿಸರ್ಗವೇ ಶಾಪಗ್ರಸ್ಥವಾಗಿಬಿಡುತ್ತದೆ. ಬಹುಶಃ ದೇಶ ಮತ್ತು ದೇಶಭಕ್ತಿಯ ಭ್ರಮೆ ಮತ್ತು ವಾಸ್ತವಗಳ ನಡುವೆ ಸಿಲುಕಿರುವ ಸಮಾಜ ಇಂತಹುದೇ ಪರಿಸ್ಥಿತಿಯನ್ನು ಎದುರಿಸುತ್ತಿರುತ್ತದೆ.

ನವ ಉದಾರವಾದದ ನೆರಳಲ್ಲಿ ಜಗತ್ತು ಸುಂದರವಾಗಿದೆ ಎಂದು ಹೇಳುವ ಮುನ್ನ ಈ ಮಾಯಾ ನಗರಿಯ ಗಲ್ಲಿ ಗಲ್ಲಿಗಳಲ್ಲಿ ಹುದುಗಿರುವ ಬೆವರಿನ ಹೊಂಡಗಳತ್ತ ಒಮ್ಮೆ ಗಮನಹರಿಸುವುದು ಒಳಿತಲ್ಲವೇ ? ಹೌದು  ಮಹಾಭಾರತದ ಮಯಸಭೆಯನ್ನು ಸಾಂದರ್ಭಿಕವಾಗಿ ನೆನೆಯುವುದಾದರೆ, ಆಧುನಿಕ ಜಗತ್ತಿನ ಮಧ್ಯಮ ವರ್ಗ ಸುಯೋಧನನಂತೆ ಎಡವಿ ಬೀಳುತ್ತಲೇ ಇದೆ. ಮತ್ತೊಂದೆಡೆ ಜಾಗತಿಕ ಬಂಡವಾಳದ ಪಾಂಚಾಲಿಯರು ಗಹಗಹಿಸುತ್ತಲೇ ಇದ್ದಾರೆ.  ಅಲ್ಲಿ ಸುಯೋಧನ ತನಗಾದ ಅಪಮಾನದಿಂದ  ಕುದಿಯುತ್ತಾನೆ. ಆಧುನಿಕ ಸುಯೋಧನರು ಈ ಅಪಮಾನಗಳನ್ನೇ ನಾಳಿನ ಹಸ್ತಿನಾವತಿಗಾಗಿ ಮಾಡುವ ತ್ಯಾಗ ಎಂದು ಭಾವಿಸಿ ಮೌನಕ್ಕೆ ಶರಣಾಗುತ್ತಿದ್ದಾರೆ. ಆದರೆ ಆಧುನಿಕ ಮಾಯಾನಗರಿಯ ನಿರ್ಮಾಣ ಮಾತ್ರ ನಡೆಯುತ್ತಲೇ ಇರುತ್ತದೆ. ನಮಗೆ ಸಹಮಾನವರು ಅನ್ಯರಾಗಿ ಕಾಣುತ್ತಾರೆ ಏಕೆಂದರೆ ಇದು ನಮ್ಮದು ಎನ್ನುವ ಭಾವುಕ ಸರಹದ್ದಿನಲ್ಲಿ ನಮ್ಮನ್ನು ಬಂಧಿಸಲಾಗಿದೆ. ಈ ಸರಹದ್ದಿನೊಳಗೆ ಹದ್ದುಗಳು ಹೇರಳವಾಗಿದ್ದರೂ ಸಹಿಸಿಕೊಳ್ಳುತ್ತೇವೆ ಒಂದು ಅಳಿಲು ನಮ್ಮನ್ನು ವಿಚಲಿತಗೊಳಿಸಿಬಿಡುತ್ತದೆ. ಏಕೆಂದರೆ ಅದು ಸರಹದ್ದಿನ ಆಚೆಯಿಂದ ಬಂದಿರುತ್ತದೆ. ಇದನ್ನು ಸಮಾಜೋ ಆರ್ಥಿಕ ಪರಿಭಾಷೆಯಲ್ಲಿ ವಲಸೆ ಎಂದು ಕರೆಯುತ್ತೇವೆ.

ಈಗ ವಲಸಿಗರ ಭಾರತ ಭವ್ಯ ಭಾರತದೊಡನೆ ಸಂಘರ್ಷಕ್ಕಿಳಿದಿದೆ. ಈಶಾನ್ಯ ರಾಜ್ಯಗಳಲ್ಲಿ ಹಲವು ದಶಕಗಳಿಂದ ಕಾಡುತ್ತಿದ್ದ ವಲಸಿಗರ ಸಮಸ್ಯೆಗೆ ತನ್ನದೇ ಆದ ಸಮಾಜೋ ರಾಜಕೀಯ ಆಯಾಮ ಇರುವುದನ್ನು ಗಮನಿಸಬೇಕು. ನಿಜ, ಈಶಾನ್ಯದಲ್ಲಿ ನೆರೆ ರಾಷ್ಟ್ರಗಳಿಂದ ಅಕ್ರಮವಾಗಿ ವಲಸೆ ಬಂದು ನೆಲೆಸಿರುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಇದು ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ ಅಕ್ರಮ ವಲಸೆ ಎಂದೇ ಕಂಡುಬರುತ್ತದೆ. ಆದರೆ ಈ ಅಕ್ರಮಗಳ ಹಿಂದೆ ಇಂದು ನಾವೇ ಆದರಿಸಿ, ಅನುಸರಿಸುತ್ತಿರುವ ಬಂಡವಾಳಶಾಹಿ ಅಭಿವೃದ್ಧಿ ಮಾರ್ಗದ ಇತಿಹಾಸ ಇರುವುದನ್ನು ಗಮನಿಸದೆ ಹೋದರೆ ಬಹುಶಃ ಇಂದು ಸಕ್ರಮ  ನೆಲೆ ಹೊಂದಿರುವವರು ನಾಳೆ ಅಕ್ರಮ ವಲಸಿಗರಾಗಿಬಿಡುತ್ತಾರೆ.  ಬಂಡವಾಳಶಾಹಿ ವ್ಯವಸ್ಥೆಯ ಧನದಾಹ ಬೆವರಿನ ಗೂಡುಗಳನ್ನು ಸೃಷ್ಟಿಸುವಂತೆಯೇ ಅಸ್ಥಿ ಪಂಜರಗಳನ್ನೂ ರೂಪಿಸುತ್ತವೆ ಎನ್ನುವುದನ್ನು ದಕ್ಷಿಣ ಆಫ್ರಿಕಾದ ಇತಿಹಾಸ ಕಂಡವರಿಗೆ ತಿಳಿಸಿ ಹೇಳಬೇಕಿಲ್ಲ. 16-17ನೆಯ ಶತಮಾನದ ಆಫ್ರಿಕಾದ ವಲಸೆಗಾರರು ಇಂದು ಅಮೆರಿಕದ ಪ್ರಜೆಗಳಾಗಿದ್ದರೆ ಅದಕ್ಕೆ ಕಾರಣ ಅಲ್ಲಿನ ಆಳುವವರ ಔದಾರ್ಯವಲ್ಲ, ಬಂಡವಾಳ ವ್ಯವಸ್ಥೆಯ ಅನಿವಾರ್ಯತೆ. ಅಗ್ಗದ ಶ್ರಮ, ಶೋಷಣೆಗೆ ಒಗ್ಗುವ ಮನಸು, ದಂಡನೆಗೆ ಒಗ್ಗುವ ದೇಹ ಮತ್ತು ಬದುಕಲು ಹವಣಿಸುವ ಜೀವ ಇವೆಲ್ಲವೂ ಶೋಷಕ ವ್ಯವಸ್ಥೆಯ ಮೂಲ ಬಂಡವಾಳವಾಗಿರುವುದನ್ನು ಇತಿಹಾಸದ ಪುಟಪುಟದಲ್ಲೂ ಗಮನಿಸಬಹುದು.

ಭಾರತವೂ ಔದ್ಯಮಿಕ ಬಂಡವಾಳದ ಆಕ್ರಮಣಕ್ಕೆ ಬಲಿಯಾದ ಒಂದು ದೇಶ. ತನ್ನ ಮಾರುಕಟ್ಟೆಯ ವಿಸ್ತರಣೆಗಾಗಿ 550 ರಾಜ ಸಂಸ್ಥಾನಗಳನ್ನು ಒಂದು ಭೌಗೋಳಿಕ ದೇಶವನ್ನಾಗಿ ರೂಪಿಸಿದ ಬ್ರಿಟೀಷ್ ಸಾಮ್ರಾಜ್ಯದ ಮೂಲ ಉದ್ದೇಶ ಇಲ್ಲಿನ ಸಂಪನ್ಮೂಲಗಳ ಲೂಟಿ ಮತ್ತು ಅಗ್ಗದ ಶ್ರಮದ ಬಳಕೆ ಮಾತ್ರವೇ ಆಗಿತ್ತು. ಹೊರಗಿನಿಂದಲೇ ಬಂದರೂ ಇಲ್ಲಿಯೇ ನೆಲೆಸಿ, ಮಣ್ಣೊಡನೆ ಸಂಬಂಧಗಳನ್ನು ಕಟ್ಟಿಕೊಂಡು, ತಾವು ಸೃಷ್ಟಿಸಿದ ಸಂಪತ್ತನ್ನು ಇಲ್ಲಿನ ಭವಿಷ್ಯದ ಪೀಳಿಗೆಗೇ  ನೀಡಿದವರನ್ನು “ಅನ್ಯರ” ಚೌಕಟ್ಟಿನಲ್ಲಿ ಬಂಧಿಸಿದ ಬ್ರಿಟೀಷ್ ಸಾಮ್ರಾಜ್ಯ ಸಂಪತ್ತಿನ ಸ್ಥಳೀಯ ಒಡೆಯರಿಗೆ “ನಮ್ಮವರಂತೆ ” ಕಂಡಿದ್ದು ಈಗ ಇತಿಹಾಸ. ಈ ಔದ್ಯಮಿಕ ಬಂಡವಾಳದ ಶೋಷಣೆಗೊಳಗಾದ ಕೋಟ್ಯಂತರ ಶ್ರಮಜೀವಿಗಳು ಇಂದು ನಾವೇ ನಿರ್ಮಿಸಿಕೊಂಡ ಗಡಿರೇಖೆಗಳಿಂದ ಪರಸ್ಪರ ಶತ್ರುಗಳಂತೆ ಬಿಂಬಿಸಲ್ಪಡುತ್ತಿದ್ದಾರೆ. ಆದರೆ ಈ ಶ್ರಮಜೀವಿಗಳ ಸಮಾಧಿಗಳ ಮೇಲೆ ಮಾಯಾನಗರಿಗಳನ್ನು ನಿರ್ಮಿಸಿಕೊಂಡ ಶೋಷಕ ವರ್ಗಗಳು ಪರಸ್ಪರ ಆಲಿಂಗನದಲ್ಲಿ ಸಂಭ್ರಮಿಸುತ್ತಿವೆ. ನಮಗೆ ರಾಮನಗರದಲ್ಲೋ, ಕೋಲಾರದಲ್ಲೋ ರೇಷ್ಮೆ ನೂಲು ತೆಗೆಯುವ ಗೂಡಂಗಡಿಯಲ್ಲಿ ಕುದಿವ ನೀರಿನಲ್ಲಿ ಬೆರಳುಗಳನ್ನದ್ದಿ ರೇಷ್ಮೆ ಗೂಡಿನ ನೂಲನ್ನು ಚರಕಕ್ಕೆ ಬೆಸೆಯುವ ಕೃಷಕಾಯದ ವ್ಯಕ್ತಿ ಅಕ್ರಮ ಜೀವಿಯಾಗಿ ಕಾಣುತ್ತಾನೆ ಆದರೆ ಇಡೀ ಜಿಲ್ಲೆಯ ಕಲ್ಲು ಬಂಡೆಗಳನ್ನೇ ಕರಗಿಸಿ ಸೌಧಗಳನ್ನು ನಿರ್ಮಿಸುವ ಅನಿವಾಸಿ ಭಾರತೀಯ ಆಪ್ತಮಿತ್ರನಾಗಿಬಿಡುತ್ತಾನೆ. ಹಾಗಾಗಿಯೇ ಕರ್ನಾಟಕದ ಸಚಿವರೊಬ್ಬರಿಗೆ ರಾಜ್ಯದಲ್ಲಿನ ಅಕ್ರಮ ವಲಸೆಗಾರರು ಬೃಹತ್ ಸಮಸ್ಯೆಯಾಗಿ ಕಾಣುತ್ತಾರೆ. ಕಾಫಿತೋಟದ ಕಾರ್ಮಿಕರು, ಚಹಾ ತೋಟದ ಮಾಲಿಗಳು, ಮೆಟ್ರೋ ಕಾಮಗಾರಿಯ ಎಲುಬಿನ ಗೂಡುಗಳು, ಕಲ್ಲು ಗಣಿಗಳ ಕೃಷ ದೇಹಗಳು, ಬೃಹತ್ ಕಟ್ಟಡಗಳ ಕೂಲಿಗಳು ಈ ನೆಲೆಯಿಲ್ಲದ ಜೀವಗಳು ಬಂಡವಾಳ ವ್ಯವಸ್ಥೆಗೆ ಹೊರೆಯಾಗಿ ಕಾಡುತ್ತವೆ. ಏಕೆಂದರೆ ಇವರಿಗೂ ಬದುಕುವ ಅನಿವಾರ್ಯತೆ, ಅರ್ಹತೆ ಇದೆ ಎಂದು ಈ ವ್ಯವಸ್ಥೆಯ ಪ್ರತಿಪಾದಕರು ಭಾವಿಸುವುದೇ ಇಲ್ಲ.

ಜಗತ್ತಿನ ಯಾವುದೇ ಮೂಲೆಯನ್ನು ಶೋಧಿಸಿದರೂ, ಇತಿಹಾಸದ ಯಾವುದೇ ಪುಟಗಳನ್ನು ತಿರುವಿ ಹಾಕಿದರೂ ಶ್ರಮಜೀವಿ ವರ್ಗಗಳು ಯುದ್ಧ ಬಯಸುವುದನ್ನು ಕಾಣಲಾಗುವುದಿಲ್ಲ. ಆದರೆ ಆಳುವ ವರ್ಗಗಳು ಬಂಡವಾಳಕ್ಕಾಗಿ, ಸಂಪನ್ಮೂಲಗಳಿಗಾಗಿ, ತುಂಡು ಭೂಮಿಗಾಗಿ ಮತ್ತು ತಮ್ಮ ಪ್ರತಿಷ್ಠೆಗಾಗಿ ನಡೆಸುವ ಎಲ್ಲ ಯುದ್ಧಗಳಲ್ಲೂ ಶ್ರಮಜೀವಿಗಳು ಬಲಿಯಾಗುತ್ತಾರೆ. ಯುದ್ಧದ ಕಾಲಾಳುಗಳಾಗುತ್ತಾರೆ, ಶತ್ರು ಪಡೆಗಳಿಗೆ ಆಹಾರವಾಗುತ್ತಾರೆ, ಅತ್ಯಾಚಾರ, ದೌರ್ಜನ್ಯಕ್ಕೊಳಗಾಗುತ್ತಾರೆ, ಸೂರು ಕಳೆದುಕೊಳ್ಳುತ್ತಾರೆ, ನೆಲೆ ಕಳೆದುಕೊಳ್ಳುತ್ತಾರೆ. ಇಷ್ಟೆಲ್ಲಾ ಕಳೆದುಕೊಳ್ಳುವುದರ ನಡುವೆ ಯಾರೋ ನಿರ್ಧರಿಸುವ ಗಡಿರೇಖೆಗಳಿಗೆ ಬಲಿಯಾಗಿ ಅಕ್ರಮ ವಲಸೆಗಾರರಾಗಿಬಿಡುತ್ತಾರೆ. ಸಮಕಾಲೀನ ಇತಿಹಾಸವನ್ನೇ ಕೆದಕಿ ನೋಡಿದರೆ ಶ್ರೀಲಂಕಾದ ತಮಿಳರು, ಮ್ಯಾನ್ಮಾರ್ನ ರೋಹಿಂಗ್ಯಾಗಳು, ಭಾರತದ ಈಶಾನ್ಯ ರಾಜ್ಯಗಳ ಪ್ರಜೆಗಳು, ಸೂಡಾನ್, ಸೊಮಾಲಿಯ ದೇಶದ ಅಮಾಯಕರು ನಮ್ಮ ಕಣ್ಣೆದುರು ನಿಲ್ಲುತ್ತಾರೆ.  ಗಡಿಯ ಯಾವ ಬದಿಯಲ್ಲಿದ್ದರೂ ಬಂಡವಾಳದ ಒಡೆಯರ ಕಾಲಾಳುಗಳಾಗಿಯೇ ಬದುಕುವ ಈ ಶ್ರಮಜೀವಿಗಳು ಮತ್ತಾವುದೋ ಸಂದರ್ಭದಲ್ಲಿ ರಾಜಕೀಯ ಪಗಡೆಯ ಕಾಯಿಗಳಾಗಿಬಿಡುತ್ತಾರೆ. ಇವರ ಬದುಕುವ ಹಕ್ಕು ಪ್ರಶ್ನಾರ್ಹವಾಗಿಬಿಡುತ್ತದೆ. ಭೌಗೋಳಿಕ ಅಸ್ಮಿತೆ ಪ್ರಧಾನವಾಗಿಬಿಡುತ್ತದೆ.

ಈಶಾನ್ಯ ರಾಜ್ಯಗಳಲ್ಲಿ ಅಕ್ರಮ ವಲಸಿಗರ ವಿರುದ್ಧ ದನಿ ಮೂಡಿದ ಕಾರಣವೇ ಈ ಶೋಷಣೆ ಮತ್ತು ಬಂಡವಾಳದ ಪಲಾಯನ. ತಮ್ಮದೇ ಆದ ಉತ್ಪಾದನೆಯ ಮೂಲಗಳನ್ನು ಎಲ್ಲಿಂದಲೋ ಬಂದವರು ಆಕ್ರಮಿಸಿ, ಇಲ್ಲಿನ ಉತ್ಪಾದನಾ ಸಾಧನಗಳ ಮೇಲೆ ತಮ್ಮ ಅಧಿಪತ್ಯ ಸಾಧಿಸಿ, ಮತ್ತೆಲ್ಲಿಂದಲೂ ಉತ್ಪಾದಕೀಯ ಶಕ್ತಿಯನ್ನು ಕರೆತಂದು, ಈ ನೆಲದ ಉತ್ಪನ್ನವನ್ನು ಮತ್ತೊಂದು ನೆಲಕ್ಕೆ ವರ್ಗಾಯಿಸುವ ಮೂಲಕ ಮತ್ತಾವುದೋ ದೇಶ ಅಥವಾ ರಾಜ್ಯದಲ್ಲಿ ಸ್ವರ್ಗ ಸೃಷ್ಟಿಸುವ ಚಹಾ ತೋಟಗಳ ಕಥೆ ವರ್ಣರಂಜಿತ. ಇಲ್ಲಿನ ಶ್ರಮಿಕರ ಶ್ರಮದ ಬೆಲೆಯನ್ನು ತಗ್ಗಿಸಲು ಗಡಿಯಾಚೆಗಿನ ಶ್ರಮಿಕರನ್ನು ಕರೆತಂದು ಶ್ರಮದ ಮೌಲ್ಯವನ್ನು ನಿರ್ಧರಿಸುವ ಬಂಡವಳಿಗರು, ಈ ಪ್ರದೇಶದ ಮೂಲ ನಿವಾಸಿಗಳಲ್ಲದಿದ್ದರೂ ಒಡೆಯರಾಗಿಬಿಡುತ್ತಾರೆ. ಆದರೆ ಈ ಒಡೆಯರ ಸಾಮ್ರಾಜ್ಯ ವಿಸ್ತರಣೆಯ ಕಾಲಾಳುಗಳಾಗಿ ಬೆವರಿಳಿಸುವ ಶ್ರಮಜೀವಿಗಳು ಅಕ್ರಮ ವಲಸಿಗರಾಗಿಬಿಡುತ್ತಾರೆ. ಏಕೆಂದರೆ ಈ ನೆಲದ ಶ್ರಮಿಕರು ಕಡೆಗಣಿಸಲ್ಪಡುತ್ತಾರೆ. ಶ್ರಮಜೀವಿಗಳ ವರ್ಗ ನೆಲೆಗಳನ್ನು ವ್ಯವಸ್ಥಿತವಾಗಿ ಛಿದ್ರಗೊಳಿಸುತ್ತಲೇ ವರ್ಗ ಸಂಘರ್ಷಕ್ಕೆ ಹೊಸ ಆಯಾಮ ನೀಡುವ ಈ ತಂತ್ರಗಾರಿಕೆಯನ್ನು ಬ್ರಿಟೀಷ್ ಸಾಮ್ರಾಜ್ಯದಲ್ಲಿ ಕಂಡಂತೆಯೇ ಇಂದಿನ ಭಾರತದಲ್ಲೂ ಕಾಣಬಹುದಲ್ಲವೇ ?

ಬಂಡವಾಳದ ಶೋಷಣೆಗೊಳಗಾಗುವ ಶ್ರಮಜೀವಿ ವರ್ಗ ತಾನು ಸೃಷ್ಟಿಸುವ ಸಂಪತ್ತಿನ ಒಡೆತನವನ್ನು ಸವಿಯುವುದೇ ಇಲ್ಲ. ಆದರೂ ಈ ಸಂಪತ್ತಿನ ರಕ್ಷಣೆಗಾಗಿ ಪ್ರಾಣ ತೆತ್ತಾದರೂ ಹೋರಾಡಲು ಸಿದ್ಧರಾಗಿರುತ್ತಾರೆ. ಏಕೆಂದರೆ ಸಂಪತ್ತಿನ ಮರುಸೃಷ್ಟಿಯಲ್ಲೇ ಅವರ ಬದುಕು ಅಡಗಿರುತ್ತದೆ. ಈ ಮರುಸೃಷ್ಟಿಯ ಪ್ರಕ್ರಿಯೆಯಲ್ಲಿ ದುಡಿತದಲ್ಲಿ ತೊಡಗುವ ಹೊರಗಿನ ಯಾವುದೇ ಜನಸಮುದಾದ ಜನರು “ಎಲ್ಲಿಂದಲೋ ಬಂದವರಂತೆ ” ಕಾಣುತ್ತಾರೆ. ಈ ಕಂದಕ ನಿರ್ಮಾಣವಾಗದಂತೆ ಎಚ್ಚರ ವಹಿಸುವ ವರ್ಗ ಪ್ರಜ್ಞೆ ಜಾಗೃತವಾಗಿಲ್ಲದಿದ್ದರೆ ಶೋಷಕ ವರ್ಗಗಳಿಗೆ, ಬಂಡವಾಳಶಾಹಿ ವ್ಯವಸ್ಥೆಗೆ ಮತ್ತು ಸಂಪತ್ತಿನ ಮಾಲಿಕರಿಗೆ ಎರಡು ಬಣಗಳನ್ನು ಸೃಷ್ಟಿಸುವುದು ಸುಲಭವಾಗುತ್ತದೆ. ಇಲ್ಲಿ ವಲಸೆ ಮತ್ತು ಅಕ್ರಮ ವಲಸೆ ಮುನ್ನೆಲೆಗೆ ಬರುತ್ತದೆ. ಶ್ರಮಜೀವಿಗಳನ್ನು ಮಾತ್ರವೇ “ಅನ್ಯರಂತೆ” ಕಾಣುವ ಧೋರಣೆಗೆ ದೇಶ ಭಾಷೆಗಳ ಗಡಿ ಇರುವುದಿಲ್ಲ. ಆದರೆ ಅಸ್ಮಿತೆಗಳು ಇರುತ್ತವೆ. ನಾವು ಭಾರತೀಯರು ಅಥವಾ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎನ್ನುವ ಘೋಷಣೆಗಳ ನಡುವೆಯೂ ಆಂತರಿಕವಾಗಿ “ಅವರು ಹೊರಗಿನವರು” ಎನ್ನುವ ಮನೋಭಾವ ಗಟ್ಟಿಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಭಾಷಾ ಅಸ್ಮಿತೆ, ಪ್ರಾದೇಶಿಕ ಅಸ್ಮಿತೆ ಮತ್ತು ಮತೀಯ ಅಸ್ಮಿತೆಯೂ ಮುನ್ನೆಲೆಗೆ ಬರುತ್ತದೆ. ಸಮಾಜೋ ಆರ್ಥಿಕ ನೆಲೆಯಲ್ಲಿ ನಮ್ಮವರಾದರೂ ಸಾಂಸ್ಕೃತಿಕ ನೆಲೆಯಲ್ಲಿ ಅನ್ಯರಾಗಿಬಿಡುವ ಅಪಾಯಗಳು ಹೆಚ್ಚಾಗಿರುತ್ತವೆ. ಕರ್ನಾಟಕದ ಚಿನ್ನದ ಗಣಿ ಪ್ರದೇಶದಲ್ಲಿ ಇದು ದಶಕಗಳಿಂದಲೇ ಗುರುತಿಸಬಹುದಾದ ವಿದ್ಯಮಾನ, ಈಗ ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಕಾಣಬಹುದು.

ಇವರ ನಡುವೆಯೇ ಮತ್ತೊಂದು ವಲಸೆಯ ಆಯಾಮವನ್ನು ಗುರುತಿಸಲು ಸರ್ಕಾರಗಳು ಮುಂದಾಗುತ್ತಿವೆ. ಆರೂವರೆ ಕೋಟಿ ಜನಸಂಖ್ಯೆ ಇರುವ ಕರ್ನಾಟಕದಲ್ಲಿ ಅಧಿಕೃತವಾಗಿ ಗುರುತಿಸಲಾಗಿರುವ 800 ಅಕ್ರಮ ವಲಸಿಗರು ರಾಜ್ಯ ಸರ್ಕಾರಕ್ಕೆ ಬೃಹತ್ ಸಮಸ್ಯೆಯಾಗಿ ಕಾಣುತ್ತಿದ್ದಾರೆ. ಅತ್ತ ಈಶಾನ್ಯ ರಾಜ್ಯಗಳಲ್ಲಿ 19 ಲಕ್ಷ ಅಕ್ರಮ ವಲಸಿಗರಿದ್ದಾರೆ. ಇವರು ಅಕ್ಷರಶಃ ವಲಸಿಗರೇ, ಏಕೆಂದರೆ ಸೂರಿಲ್ಲದವರು, ನೆಲೆ ಇಲ್ಲದವರು ತಮ್ಮದೇ ಆದ ಖಾಸಗಿ ಸಂಪತ್ತು ಇಲ್ಲದವರು ಮತ್ತು ಎಲ್ಲಿಂದಲೋ ಬಂದವರು. ಹಲವು ದಶಕಗಳ ಕಾಲ ಈ ನಾಡ ಮಣ್ಣಲ್ಲಿ ಬೆರೆತು ಸಂಪತ್ತಿನ ಸೃಷ್ಟಿ ಮತ್ತು ಮರುಸೃಷ್ಟಿಯ  ಪ್ರಕ್ರಿಯೆಯಲ್ಲಿ ತಮ್ಮ ಬೆವರ ಹನಿಗಳನ್ನು ಬೆರೆಸಿರುವ ಈ ಶ್ರಮಜೀವಿಗಳು ಹಠಾತ್ತನೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವುದೆಂದರೆ, ಇವರು ಸೃಷ್ಟಿಸಿದ ಸಂಪತ್ತು ಎಂತಹುದು? ಈ ಸಂಪತ್ತಿನ ಫಲಾನುಭವಿಗಳು ಯಾರು? ಸಂಪತ್ತಿನ ಸೃಷ್ಟಿ ಮತ್ತು ಮರುಸೃಷ್ಟಿಯಿಂದ ರೂಪುಗೊಂಡ ಆಧುನಿಕ ಜಗತ್ತಿನಲ್ಲಿ ಈ ದುಡಿಯುವ ಕೈಗಳ ಸ್ಥಾನಮಾನಗಳೇನು? ಈ ಎಲ್ಲ ಪ್ರಶ್ನೆಗಳ ನಡುವೆ, ಈಶಾನ್ಯದ ಲಕ್ಷಾಂತರ ಅಕ್ರಮ ವಲಸಿಗರೂ ಭಯೋತ್ಪಾದಕರು ಎನ್ನುವ ಭೀಕರ ಮಿಥ್ಯೆಯನ್ನು ಬದಿಗಿಟ್ಟು ನೋಡಿದಾಗ ಈ ದುಡಿಯುವ ಕೈಗಳ ಅಂಗೈ ಮೇಲಿನ ರೇಖೆಗಳೂ ಭೂಪಟದ ವಕ್ರ ರೇಖೆಗಳಂತೆಯೇ ಕಾಣಬಹುದು.

ಮತ್ತೊಂದು ಕುತೂಹಲಕಾರಿ ಸಂಗತಿ ಎಂದರೆ ಇತಿಹಾಸ ಗುರುತಿಸದ, ಸಮಾಜ ಗಮನಿಸದ, ನಾಗರಿಕ ಪ್ರಜ್ಞೆ ಗ್ರಹಿಸಲಾಗದ “ವಲಸಿಗರ ಅಕ್ರಮಗಳನ್ನು” ಈ ವಲಸಿಗರು ಮಾತ್ರವೇ ಗುರುತಿಸಬಲ್ಲರು. ಎಲ್ಲಿಂದಲೋ ಬಂದವರು ಎಂಬ ಹೀಗಳಿಕೆಗೆ ಗುರಿಯಾಗದ ಈ ಅಕ್ರಮಗಳ ಸರದಾರರು ವಲಸಿಗರಾಗಿಯೇ ಬಂದರೂ ಇಲ್ಲಿನ ನೆಲ, ಜಲ, ಅರಣ್ಯ, ಭೂಮಿ ಮತ್ತು ಸಂಪನ್ಮೂಲಗಳ ಮೇಲೆ ತಮ್ಮ ಅಧಿಪತ್ಯ ಸಾಧಿಸಿ ಮತ್ತೆಲ್ಲೋ ತಮ್ಮ ಸಾಮ್ರಾಜ್ಯ ನಿರ್ಮಿಸುತ್ತಿರುತ್ತಾರೆ. ನವ ಉದಾರವಾದದ ಪರಿಭಾಷೆಯಲ್ಲಿ ಇವರನ್ನು ಕಾರ್ಪೋರೇಟ್ಗಳು ಎಂದು ಗುರುತಿಸಬಹುದು, ಔದ್ಯಮಿಕ ಬಂಡವಾಳದ ಯುಗದಲ್ಲಿ ಕೈಗಾರಿಕೋದ್ಯಮಿಗಳಾಗಿದ್ದರು, ವರ್ತಕರಾಗಿದ್ದರು, ವಾಣಿಜ್ಯೋದ್ಯಮಿಗಳಾಗಿದ್ದರು. ಇತಿಹಾಸದಲ್ಲಿ ಕೊಂಚ ಹಿಂದಕ್ಕೆ ನಡೆದರೆ ಸಾಮ್ರಾಟರೋ, ಸಾಮಂತರೋ, ಪಾಳೆಯಗಾರರೋ ಆಗಿದ್ದರು. ಇವರ ಸಂತತಿ ಮತ್ತು ಪರಂಪರೆ ಇಂದಿಗೂ ಜೀವಂತವಾಗಿಯೇ ಇದೆ. ಆದರೆ ಆಧುನಿಕ ಸಮಾಜ ಮತ್ತಾವುದೋ ನೆಲದಿಂದ ಬಂದು ಸಂಪತ್ತಿನ ಸೃಷ್ಟಿ-ಮರುಸೃಷ್ಟಿಗೆ ಬೆವರು ಸುರಿಸುವವರನ್ನು ವಲಸಿಗರೆಂದು ಗುರುತಿಸುತ್ತದೆ, ಅಲ್ಲಿಂದಲೇ ಬಂದು ಸಂಪನ್ಮೂಲಗಳನ್ನು ದೋಚಿ ಮತ್ತೆಲ್ಲಿಗೋ ಸಾಗಿಸುವವರನ್ನು ಉದ್ಯಮಿ ಎಂದು ಗುರುತಿಸುತ್ತದೆ.

ಆಧುನಿಕ ನವ ಉದಾರವಾದಿ ಭಾರತ ಇಂದು ಉದ್ಯಮಿಗಳ ನಾಡು. ಶ್ರಮಜೀವಿಗಳ ಕರ್ಮಭೂಮಿಯಲ್ಲ. ಹಾಗಾಗಿಯೇ ತೆಲಂಗಾಣದ ಮುಖ್ಯಮಂತ್ರಿಯವರು ಒಂದೇ ಏಟಿಗೆ  48 ಸಾವಿರ ಸಾರಿಗೆ ಕಾರ್ಮಿಕರನ್ನು ಬೀದಿಗೆಸೆಯುತ್ತಾರೆ. ನಮ್ಮ ದೇಶದ ನಾಗರಿಕ ಪ್ರಜ್ಞೆ ಜೀವಂತವಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸಲೆಂದೇ ಈ ಕ್ರಮ ಜರುಗಿಸಿದ್ದಲ್ಲಿ, ಅವರಿಗೆ ಉತ್ತರ ದೊರೆತಿದೆ. 48 ಸಾವಿರ ಕಾರ್ಮಿಕರು ಅನಾಥರಾಗಿದ್ದಾರೆ. ಬಹುಶಃ ಇವರಲ್ಲೂ ವಲಸಿಗರನ್ನು ಹುಡುಕುವ ಪ್ರಕ್ರಿಯೆಗೆ ಚಾಲನೆ ದೊರೆತರೆ ಅಚ್ಚರಿಯೇನಿಲ್ಲ. ಗುರುತಿನ ಚೀಟಿಯ ಮೂಲಕ ತಮ್ಮ ಅಸ್ತಿತ್ವ, ಅಸ್ಮಿತೆ ಮತ್ತು ಭೌಗೋಳಿಕ ಪೌರತ್ವವನ್ನು ನಿರೂಪಿಸಬೇಕಾದ ಅನಿವಾರ್ಯ ಸನ್ನಿವೇಶವನ್ನು ಎದುರಿಸುತ್ತಿರುವ “ ಅಕ್ರಮ ವಲಸಿಗರು ” ತಮ್ಮ ದಣಿದ ದೇಹದಿಂದ ನೆಲಕ್ಕುದುರಿದ ಬೆವರ ಹನಿಗಳನ್ನು ಹೆಕ್ಕಿ ತೆಗೆಯಲಾಗುವುದಿಲ್ಲ. ಆದರೆ ಇವರ ದೇಹದೊಳಗಿನ ರಕ್ತಕಣಗಳನ್ನು ಹೆಕ್ಕಿ ತೆಗೆಯಲು ಒಂದು ವ್ಯವಸ್ಥೆ ಸಿದ್ಧವಾಗಿದೆ. ಈ ವ್ಯವಸ್ಥೆಯನ್ನು ನಾವು “ ಮನುಕುಲ ” ಎಂದು ಕರೆಯೋಣವೇ ?