IIT, IIM, IISc, AIIMS ನಲ್ಲಿನ ಸಾವುಗಳು!! ಮತ್ತು JNU ಮುಚ್ಚುವ ಸಂಚುಗಳು..!?

ಸಂವಿಧಾನದ ಆಶಯದಂತೆ ಕೇವಲ ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ನೀಡುವುದರೊಂದಿಗೆ ಉನ್ನತ ಶಿಕ್ಷಣವನ್ನೂ ಉಚಿತಗೊಳಿಸಬೇಕಾಗಿದೆ. ಎಲ್.ಕೆ.ಜಿ ಯಿಂದ‌ ಪಿ.ಎಚ್ ಡಿವರೆಗೂ ಎಲ್ಲಾ ಜಾತಿಯ ಬಡವರಿಗೂ ಉಚಿತ ಶಿಕ್ಷಣ ನೀಡಬೇಕಾದ ಅವಶ್ಯಕತೆ ಇದೆ.

IIT, IIM, IISc, AIIMS  ನಲ್ಲಿನ ಸಾವುಗಳು!! ಮತ್ತು JNU ಮುಚ್ಚುವ ಸಂಚುಗಳು..!?

ಇದೇ ತಿಂಗಳ 8 ರಂದು ಚೆನೈನ IIT  ವಿದ್ಯಾರ್ಥಿನಿ ಫಾತಿಮ ಲತೀಫ್ ಎಂಬ 18ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಳು! ಎಂ.ಎ. ಮೊದಲ ವರ್ಷದ ಮಾನವಿಕ ಶಾಸ್ತ್ರ ಹಾಗೂ ಸಮಾಜವಿಜ್ನಾನದಲ್ಲಿ ಕಲಿಯುತ್ತಿದ್ದ ಈ ಪುಟ್ಟ ಹೆಣ್ಣುಮಗಳು ತಾನು ಸಾಯುವ ಮುಂಚೆ ತನ್ನ 'ಡೆತ್ ನೋಟ್' ನಲ್ಲಿ ತನ್ನ ಸಾವಿಗೆ ತನ್ನ IIT  ಕೇಂದ್ರದ ಮೇಲ್ಜಾತಿಯ ಅಧ್ಯಾಪಕರು ನೀಡಿದ ಜಾತಿ ಕಿರುಕುಳವೇ ಕಾರಣ ಎಂದು ಸ್ಪಷ್ಟವಾಗಿ ಹೇಳಿದ್ದಳು!

ಈ ವಿಷಯದ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಡಿ.ಎಂ.ಕೆ.ಲೋಕಸಭಾ ಸದಸ್ಯೆ ಕನ್ನೀಮೌಳಿ "ಉನ್ನತ ಹಾಗೂ ಪ್ರತಿಷ್ಟಿತ ಶಿಕ್ಷಣ ಕೇಂದ್ರಗಳಾದ IIT, IIM, IISc, AIIMS  ಗಳಲ್ಲಿ ಮೊದಲಿನಿಂದಲೂ ಮೇಲು ಜಾತಿಗಳ ದಟ್ಟ ಪ್ರಭಾವವಿದೆ. ಈ ಸಂಸ್ಥೆಗಳಲ್ಲಿ ಕೇವಲ ದಲಿತರು, ಶೂದ್ರರು, ಅಲ್ಪಸಂಖ್ಯಾತರೇ ಯಾಕೆ ಆತ್ಮಹತ್ಯೆಗಳ ಮೊರೆ ಹೋಗುತಿದ್ದಾರೆ? ಕಳೆದ ಹತ್ತು ವರ್ಷಗಳಲ್ಲಿ 52 ಮಂದಿ ವಿದ್ಯಾರ್ಥಿಗಳು ಈ ಪ್ರತಿಷ್ಟಿತ ಕೇಂದ್ರಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರೆಲ್ಲರೂ ದಲಿತ, ಶೂದ್ರ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಮಕ್ಕಳೇ ಎನ್ನುವುದು ಆಶ್ಚರ್ಯಕರ! ಇಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮೇಲ್ಜಾತಿಗಳಲ್ಲಿ ಒಬ್ಬರೂ ಸತ್ತಿಲ್ಲದಿರುವುದು ಆಶ್ಚರ್ಯವಲ್ಲವೆ..!?" ಎಂದು ಕೇಳಿದ್ದಾರೆ.

NEET(national eligibility cum entrance test)  ಮೂಲಕ ಎಂ.ಬಿ.ಬಿ.ಎಸ್.ಗೆ ಆಯ್ಕೆ ಮಾಡುವಾಗ ಈ ಆಯ್ಕೆ ಹಿಂದಿನ ವಂಚನೆಯ ಬಗ್ಗೆ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್ "ಇದು ಬಡವರ ವಿರುದ್ದವಿದೆ" ಎಂದು ಸ್ಪಷ್ಟವಾಗಿ ಹೇಳಿದೆ! ಈ ತೀರ್ಪನ್ನು ನೀಡಿದವರಲ್ಲಿ ಒಬ್ಬರಾದ ನ್ಯಾಯಮೂರ್ತಿ ಕಿರುಬಾಕರನ್ "it only proves that the doors of medical colleges are not open for the poor..." ಎಂದಿದ್ದಾರೆ! ಈ ಮದ್ಯೆ AIIMS ನಲ್ಲಿ ಹಿಂದುಳಿದ ವರ್ಗಗಳಿಗೆ ಇದ್ದ ಮೀಸಲಾತಿಯನ್ನೇ ರದ್ದುಗೊಳಿಸಲು ಹೊರಟಿದ್ದಾರೆ!!  IIT-M ಪ್ರೊಫೆಸರ್ ಗಳ ಆಯ್ಕೆಯಲ್ಲಿಯೇ ಅಕ್ರಮ, ಜಾತೀಯತೆ, ತಾರತಮ್ಯಗಳು ತಾಂಡವವಾಡಿದ್ದರ ಬಗ್ಗೆಯೂ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಈ ಮದ್ಯೆ IIT ಹೈದರಾಬಾದಿನ ಸಿದ್ದಾರ್ಥ ಎಂಬ ಹುಡುಗ ಕಟ್ಟಡದಿಂದ ಬಿದ್ದು‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇವಲ ಹತ್ತು‌ ತಿಂಗಳಲ್ಲಿ ಇದೇ ಕ್ಯಾಂಪಸ್ಸಿನಲ್ಲಿ ಮೂರು ಮಂದಿ ವಿದ್ಯಾರ್ಥಿಗಳು ಜೀವ ತೆತ್ತಿದ್ದಾರೆ! ಇದಕ್ಕೆಲ್ಲ  ಕಾರಣ ಏನು?

ಒಂದು ಕಡೆ ಈ ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಾದ IIT, IIM, IISc, AIIMS  ಗಳು ಜಾತಿ, ಮತಗಳ ಕೆಸರಲ್ಲಿ ಮುಳುಗಿ ತಳಸಮುದಾಯಗಳ ಮಕ್ಕಳಿಗೆ ಮೃತ್ಯುಕೂಪಗಳಾಗಿ ಪರಿವರ್ತನೆಯಾಗುತ್ತಿರುವಾಗ ಇಡೀ ದೇಶದಾದ್ಯಂತ ಎಲ್ಲಾ ಜಾತಿಯ ಬಡವಿದ್ಯಾರ್ಥಿಗಳು ಅತ್ಯಂತ ಉನ್ನತ ಶಿಕ್ಷಣ ಪಡೆದು ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿರುವ, ಜಗತ್ತಿನಾದ್ಯಂತ ತಮ್ಮ ಅಪಾರ ಪ್ರತಿಭೆಯಿಂದ ಪ್ರಸಿದ್ದವಾದ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ದೇಶಕ್ಕೆ ನೀಡುವ JNU ನಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕವನ್ನು ಹತ್ತಾರು ಪಟ್ಟು ಏರಿಸುವುದರ ಮೂಲಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣದ ಬಾಗಿಲು ಮುಚ್ಚಲು ಹೊರಟಿರುವುದು ಅಘಾತಕರ!

ಭಾರತದಲ್ಲಿರುವ ತಳಸಮುದಾಯಗಳಾದ ಆದಿವಾಸಿಗಳು, ಅಸ್ಪೃಶ್ಯರು, ಹಿಂದುಳಿದವರೇ ಮುಂತಾದ ಬಡವರ ಮಕ್ಕಳು ದೆಹಲಿಗೆ ಬಂದು ಉನ್ನತ ಶಿಕ್ಷಣವನ್ನು ಪಡೆಯಲು ಇರುವ ಏಕೈಕ ವಿಶ್ವವಿದ್ಯಾಲಯ ಜವಹರಲಾಲ್ ನೆಹರು ಯೂನಿವರ್ಸಿಟಿ(JNU). 1969 ರಲ್ಲಿ ಇದೇ ಉದ್ದೇಶಕ್ಕೇ ಆರಂಭವಾದ ಈ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಶಿಕ್ಷಣಕ್ಕೆ ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸಲಾಗಿದೆ.‌ ಇಲ್ಲಿನ ಶುಲ್ಕ ವಿನಾಯಿತಿಯೊಂದಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನೇಕ ರೀತಿಯ ಪ್ರೀಶಿಪ್ ಮತ್ತು ಸ್ಕಾಲರ್ ಶಿಪ್ಗಳನ್ನು ನೀಡಲಾಗುತ್ತದೆ.  ಇಲ್ಲಿ ಶಿಕ್ಷಣ ಪಡೆದವರು ಇಂದು ಪ್ರಪಂಚದಾದ್ಯಂತ ಅತ್ಯುನ್ನತ ಹುದ್ದೆಗಳಲಿದ್ದಾರೆ. ಇವರಲ್ಲಿ ಕೆಲವರು ದಡ ದಾಟಿದವರಂತೆ ಸಮಾಜದಿಂದ ದೂರವಿದ್ದರೂ ಅನೇಕರು'pay back to the society'  ಎಂಬ ಮೌಲ್ಯವನ್ನು ನಂಬಿ ಅದೇ ರೀತಿ ಬದುಕುತಿದ್ದಾರೆ. JNU ನಲ್ಲಿ ಓದುವಾಗ ಅದು ಕೇವಲ ತರಗತಿಯ ನಾಲ್ಕು ಗೋಡೆಗಳ ಒಳಗೆ ಇವರ ಕಲಿಕೆ ಸೀಮಿತವಾಗಿರಲ್ಲ! ಈ ವಿದ್ಯಾರ್ಥಿಗಳು ಸದಾ ಸೆಮಿನಾರ್, ಸ್ಟಡಿ ಸರ್ಕಲ್ ಮತ್ತು ಲೈಬ್ರರಿಗಳಲ್ಲಿ ಸದಾ ಅಧ್ಯಯನಶೀಲರಾಗಿರುತ್ತಾರೆ, ಈ ಕಾರಣಕ್ಕೇ ಇವರು ಸೈದ್ದಾಂತಿಕವಾಗಿ ಎಡಪಂಥೀಯ, ಬಲಪಂಥೀಯ, ಮದ್ಯಪಂಥಿಯ ಮುಂತಾಗಿ  ಗುರುತಿಸಿಕೊಂಡು ಸದಾ ವಿವಾದಗಳ ಮುಂಚೂಣಿಯಲ್ಲಿರುತ್ತಾರೆ! ಆದರೆ ಪರಸ್ಪರ ಗೌರವಿಸುತ್ತಾ ತಮ್ಮ ಕಲಿಕೆಯಲ್ಲಿ ತೊಡಗಿರುತ್ತಾರೆ ಎನ್ನುವುದು ಗಮನಾರ್ಹ. ಈ ಕಾರಣಕ್ಕೆ ಬಲಪಂಥೀಯ ಸರ್ಕಾರ ಸದಾ ಈ ವಿಶ್ವವಿದ್ಯಾಲಯದ ಮೇಲೆ ಕೆಂಗಣ್ಣು ಬೀರುತ್ತಲೇ ಇರುತ್ತದೆ! ಈ ಕಾರಣಕ್ಕೆ ಇಲ್ಲಿನ ಪ್ರಗತಿಪರ ವಿದ್ಯಾರ್ಥಿಗಳನ್ನು ಬಗ್ಗುಬಡಿಯಲು ಬೇರೇನೂ ತೋಚದೆ ವಿದ್ಯಾರ್ಥಿ ಶುಲ್ಕವನ್ನು ಅಪಾರವಾಗಿ ಹೆಚ್ಚಿಸಿ ಗಲಭೆಯನ್ನು ಸೃಷ್ಟಿ ಮಾಡಿಸಿ ಅಂತಿಮವಾಗಿ ವಿಶ್ವವಿದ್ಯಾಲಯವನ್ನೇ ಮುಚ್ಚಿಸುವ ಚಿಂತನೆ ಮಾಡಿದಂತಿದೆ! ಒಟ್ಟಾರೆಯಾಗಿ 5860 ರೂ ಇದ್ದ ಶುಲ್ಕವನ್ನು 49096 ಕ್ಕೆ ಏರಿಸಲಾಗಿದೆ!? ಇಲ್ಲಿ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ, ಅಸಹಾಯಕರಾಗಿದ್ದಾರೆ ಆದ್ದರಿಂದಲೇ ಹೋರಾಟಕ್ಕಿಳಿದಿದ್ದಾರೆ.  ABVP  ಯನ್ನೂ ಸೇರಿಸಿದಂತೆ ಸರ್ಕಾರದ ವಿರುದ್ದ ಎಲ್ಲಾ ವಿದ್ಯಾರ್ಥಿಗಳು ಸೆಟೆದು ನಿಂತಿರುವುದು ಸ್ವಾಗತಾರ್ಹ.

ಒಟ್ಟಾರೆಯಾಗಿ IIT, IIM, IISc, AIIMS  ಗಳಂತಹ ಸಂಸ್ಥೆಗಳಲ್ಲಿ ಜಾತೀಯ, ಮತೀಯ ತಾರತಮ್ಯದಿಂದ ಅಲ್ಲಿನ‌ ತಳಸಮುದಾಯಗಳ ವಿದ್ಯಾರ್ಥಿಗಳನ್ನು ಒಂದುಕಡೆ ಮೃತ್ಯುಕೂಪಕ್ಕೆ ತಳ್ಳುತಿದ್ದರೆ ಮತ್ತೊಂದು ಕಡೆ JNU ಅಂತಹ ಬಡವರ ವಿಶ್ವವಿದ್ಯಾಲಯವನ್ನು ಕೊನೆಗೊಳಿಸಲು ಹೊರಟಿರುವುದು ಅಘಾತಕಾರಿ! 

ಸಂವಿಧಾನದ ಆಶಯದಂತೆ ಕೇವಲ ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ನೀಡುವುದರೊಂದಿಗೆ ಉನ್ನತ ಶಿಕ್ಷಣವನ್ನೂ ಉಚಿತಗೊಳಿಸಬೇಕಾಗಿದೆ. ಎಲ್.ಕೆ.ಜಿ ಯಿಂದ‌ ಪಿ.ಎಚ್ ಡಿವರೆಗೂ ಎಲ್ಲಾ ಜಾತಿಯ ಬಡವರಿಗೂ ಉಚಿತ ಶಿಕ್ಷಣ ನೀಡಬೇಕಾದ ಅವಶ್ಯಕತೆ ಇದೆ. ಈಗಾಗಲೇ ಪಂಜಾಬ್ ಈ ಕೆಲಸ ಮಾಡಿದೆ! ದೆಹಲಿ ಮತ್ತು ತೆಲಂಗಾಣ ಆ ಹಾದಿಯಲ್ಲಿವೆ. ಇದರೊಂದಿಗೆ ಶಿಕ್ಷಣ ರಾಷ್ಟ್ರೀಕರಣ ಆಗಬೇಕಾದ ತುರ್ತಿದೆ. ಈ ದಿಸೆಯಲ್ಲಿ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ತಮ್ಮ ಪ್ರತಿಷ್ಟೆ, ತಮ್ಮ ಸೈದ್ದಾಂತಿಕ ವ್ಯತ್ಯಾಸಗಳನ್ನು ಬದಿಗಿಟ್ಟು ಹೋರಾಟಕ್ಕೆ ಸಜ್ಜಾಗಬೇಕಿದೆ. 

JNU ಹೋರಾಟ ಇಡೀ ದೇಶಾದ್ಯಂತ ಉಚಿತ ಶಿಕ್ಷಣದ ಹೋರಾಟಕ್ಕೆ, ಶಿಕ್ಷಣದ ರಾಷ್ಟ್ರೀಕರಿಸಬೇಕಾದ ಆಂದೋಲನಕ್ಕೆ ನಾಂದಿಯಾಗಬೇಕಿದೆ.