ಅಯೋಧ್ಯೆ ವಿವಾದ: ಮಧ್ಯಸ್ಥಿಕೆ ಸಮಿತಿ ಮಾತುಕತೆ ವಿಫಲಗೊಂಡಲ್ಲಿ ಸುಪ್ರೀಂ ಕೋರ್ಟ್‌ನಲ್ಲೇ ವಿಚಾರಣೆ

ಅಯೋಧ್ಯೆ ವಿವಾದ: ಮಧ್ಯಸ್ಥಿಕೆ ಸಮಿತಿ ಮಾತುಕತೆ ವಿಫಲಗೊಂಡಲ್ಲಿ ಸುಪ್ರೀಂ ಕೋರ್ಟ್‌ನಲ್ಲೇ ವಿಚಾರಣೆ

ದೆಹಲಿ: ಅಯೋಧ್ಯೆಯ ಬಾಬರಿ ಮಸೀದಿ-ರಾಮಜನ್ಮಭೂಮಿ ಭೂವಿವಾದ ಇತ್ಯರ್ಥಪಡಿಸಲು ನೇಮಿಸಿರುವ ಮಧ್ಯಸ್ಥಿಕೆ ಸಮಿತಿ ಮಾತುಕತೆ ವಿಫಲಗೊಂಡಲ್ಲಿ ಜುಲೈ 25 ರ ಬಳಿಕ ಸುಪ್ರೀಂ ಕೋರ್ಟ್‌ನಲ್ಲೇ ಪ್ರಕರಣದ ವಿಚಾರಣೆ ನಡೆಸಲು ರಂಜನ್‌ ಗೋಗೊಯ್‌ ನೇತೃತ್ವದ ನ್ಯಾಯಪೀಠ ತೀರ್ಮಾನಿಸಿದೆ.

ಅಯೋಧ್ಯೆ ಭೂವಿವಾದ ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸಲು ಒತ್ತಾಯಿಸಿದ್ದ ಮನವಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಜುಲೈ 11 ರಂದು ಕೈಗೆತ್ತಿಕೊಂಡಿತ್ತು. ವಿಚಾರಣೆಯಲ್ಲಿ ಮುಖ್ಯ ನ್ಯಾಯಾಧೀಶರಾದ ರಂಜನ್‌ ಗೋಗೊಯ್‌ ನೇತೃತ್ವದ ನ್ಯಾಯಪೀಠ ಮಧ್ಯಸ್ಥಿಕೆ ಸಮಿತಿಗೆ ಆದಷ್ಟು ಬೇಗ ಪ್ರಕರಣವನ್ನು ಇತ್ಯರ್ಥಗೊಳಿಸಲು ಸೂಚಿಸಿದೆ.

ಅಯೋಧ್ಯೆ ವಿವಾದ ಬಗೆಹರಿಸಲೆಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ಮಧ್ಯಸ್ಥಿಕೆ ಸಮಿತಿಯ ಮುಖ್ಯಸ್ಥ ನಿವೃತ್ತ ನ್ಯಾಯಾಧೀಶ ಎಫ್ಎಮ್‌ಐ ಖಲೀಫುಲ್ಲಾ ಅವರಿಗೆ ಜುಲೈ 18 ರೊಳಗೆ ಸಂಧಾನ ಮಾತುಕತೆಯಲ್ಲಿ ಉಂಟಾಗಿರುವ ಪ್ರಗತಿಯ ಕುರಿತು ವರದಿ ಸಲ್ಲಿಸಲು ತಿಳಿಸಿದೆ.

ಮಧ್ಯಸ್ಥಿಕೆ ಸಮಿತಿ ತನ್ನ ವರದಿಯಲ್ಲಿ ಮಾತುಕತೆ ಮುಂದುವರಿಸುವುದು ನಿಷ್ಪ್ರಯೋಜಕ ಎಂದು ತಿಳಿಸಿದಲ್ಲಿ ನೇರವಾಗಿ ಸುಪ್ರೀಂ ಕೋರ್ಟ್‌ ವಿಚಾರಣೆ ಕೈಗೆತ್ತಿಕೊಳ್ಳಲು ತೀರ್ಮಾನಿಸಿದೆ.

ಮಧ್ಯಸ್ಥಿಕೆ ಸಮಿತಿ ಮೇ 7 ರಂದು ಮೊದಲ ಸುತ್ತಿನ ಮಾತುಕತೆ ಮುಗಿಸಿ ಸುಪ್ರೀಂ ಕೋರ್ಟ್‌ಗೆ ಮದ್ಯಂತರ ವರದಿ ಸಲ್ಲಿಸಿತ್ತು. ಆ ಬಳಿಕ ಮುಂದಿನ ಮಾತುಕತೆಗೆ ಇನ್ನಷ್ಟು ಕಾಲಾವಕಾಶ ಕೇಳಿತ್ತು.

ಮಧ್ಯಸ್ಥಿಕೆ ಸಮಿತಿ ಮಾತುಕತೆಯಿಂದಾಗಿ ಅಯೋಧ್ಯೆ ವಿವಾದ ಶಾಂತಿಯುತವಾಗಿ ಬಗೆಹರಿಯಲಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ರಂಜನ್‌ ಗೋಗೊಯ್‌ ಭರವಸೆ ವ್ಯಕ್ತಪಡಿಸಿದರು.