ಕೆಲಸ ಮಾಡುತ್ತಿದ್ದ ಕಂಪನಿಗೆ ಕೈ ಕೊಟ್ಟರೆ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಿ ಬಿದ್ದೀರಿ ಜೋಕೆ !

ಕೆಲಸ ಮಾಡುತ್ತಿದ್ದ ಕಂಪನಿಗೆ ಕೈ ಕೊಟ್ಟರೆ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಿ ಬಿದ್ದೀರಿ ಜೋಕೆ !

ಏನಿದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕು ಬೀಳುವುದು. ಏನಿದರ ಅರ್ಥ?  ಸ್ಮಾರ್ಟ್ ಫೋನ್ ಬಂದಾಯ್ತು, ಆಪ್ ಗಳ ಕ್ರಾಂತಿಯಾಯ್ತು. ಎಲ್ಲಿ ನೋಡಿದರಲ್ಲಿ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ, ಲಿಂಕ್ಡ್ ಇನ್. ಎಲ್ಲದರಲ್ಲೂ ಜನರು ತಮ್ಮ ಛಾಪು ಮೂಡಿಸಲು ತಮ್ಮ ಬಗ್ಗೆ ಎಲ್ಲ ಮಾಹಿತಿ ನೀಡಿ ಆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿ ಬಿಡುತ್ತಾರೆ. ಆದರೆ ಅದೇ ಮಾಧ್ಯಮಗಳು ನಮ್ಮನ್ನು ಕಪ್ಪು ಪಟ್ಟಿಗೆ ಸೇರಿಸಲು ಇತರರಿಗೆ ಸಹಾಯಕವಾಗಿಬಿಟ್ಟರೆ?.  ಹೌದು ಇಂಥ ಒಂದು ವಿಧಾನವನ್ನು ಪ್ರೈವೇಟ್ ಕಂಪನಿಗಳು ಅನುಸರಿಸತೊಡಗಿವೆ. 

ಈ ಮೊದಲು ಬ್ಯಾಂಕುಗಳಲ್ಲಿ ಮಾತ್ರವೇ “ನೇಮಿಂಗ್ ಶೇಮಿಂಗ್” ವಿಧಾನವನ್ನು ಅನುಸರಿಸುತ್ತಿದ್ದರು. ಲೋನ್ ಕಟ್ಟದ, ಹಣ ಮರುಪಾವತಿ ಮಾಡದವರ ಫೋಟೋವನ್ನು ಬ್ಯಾಂಕಿನ ನೋಟೀಸ್ ಬೋರ್ಡಿನಲ್ಲಿ ಹಾಕಿ ಬ್ಯಾಂಕಿಗೆ ಬಂದ ಗ್ರಾಹಕರೆದುರು ಅವರ ಮಾನವನ್ನು ಹರಾಜು ಹಾಕಲಾಗುತ್ತಿತ್ತು. ಈಗ ಅದೇ ಅಸ್ತ್ರವನ್ನು ಪ್ರೈವೇಟ್ ಕಂಪನಿಗಳ ಮಾನವ ಸಂಪನ್ಮೂಲ ವಿಭಾಗದವರು ಅನುಸರಿಸುತ್ತಿದ್ದಾರೆ. 

ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕಿ ಆಯ್ಕೆ ಅದ ಮೇಲೆ, ಇನ್ನೊಂದು ಕಂಪನಿಯಿಂದ ಹೆಚ್ಚಿನ  ಸಂಬಳದ ಆಫರ್ ಸಿಕ್ಕಾಗ ಮೊದಲನೇ ಕಂಪನಿಗೆ ಯಾವುದೇ ಮಾಹಿತಿ ನೀಡದೆ ಜಾರಿಕೊಳ್ಳುವ ಕೆಲಸವನ್ನು ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಇದನ್ನು’ ಘೋಸ್ಟಿಂಗ್’ ಎನ್ನುತ್ತಾರೆ. ಇದು ಡೇಟಿಂಗ್ ಜಗತ್ತಿನ ಪದವಾಗಿದ್ದು ಅದರರ್ಥ,  ಬೇಡವಾದ ಸಂಗಾತಿಯೊಂದಿಗೆ ಎಲ್ಲ ರೀತಿಯ ಸಂವಹನದ ಹಾದಿಯನ್ನು ಮುಚ್ಚಿಬಿಡುವುದು ಎಂದು. ಹೀಗೆ ಕಂಪನಿಗಳ ಎಚ್ ಆರ್ ಗಳ ಕರೆಗೆ ಉತ್ತರ ನೀಡದೆ ಕೆಲಸಕ್ಕೆ ಬಾರದಿರುವೆನೆಂಬ ಮಾಹಿತಿಯನ್ನು ನೀಡದೆ ಜಾರಿಕೊಳ್ಳುವ ಅಭ್ಯರ್ಥಿಗಳನ್ನು, ನೇಮಿಂಗ್ ಶೇಮಿಂಗ್ ಅಸ್ತ್ರದ ಮೂಲಕ ಸೀನಿಯರ್ ಎಕ್ಸಿಕ್ಯೂಟಿವ್ ಗಳು, ಅಂತಹವರ ಸೋಶಿಯಲ್ ಮೀಡಿಯಾ ಪ್ರೊಫೈಲ್ ಅನ್ನು, ಸಾಮಾಜಿಕ ವೇದಿಕೆಗಳಾದ ಟ್ವಿಟ್ಟರ್ ಮತ್ತು ಲಿಂಕ್ಡ್ ಇನ್ ನಲ್ಲಿ ಕಾಣುವಂತೆ ಮಾಡುತ್ತಾರೆ. ಇಂತಹ ಒಬ್ಬ ವ್ಯಕ್ತಿ ಇಂತಹ ದಿನದಿಂದ ಕೆಲಸಕ್ಕೆ ಹಾಜರಾಗದಿರುವುದರಿಂದ ಕಂಪನಿಯ ಕೆಲಸಕ್ಕೆ ತೊಂದರೆಯಾಗಿರುತ್ತದೆ ಎಂಬ ಕಾರಣ ನೀಡಿ ಪಬ್ಲಿಕ್ ಮಾಡುತ್ತಾರೆ. 

ಇತ್ತೀಚಿನ ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಪ್ರತಿಷ್ಠಿತ ಕಂಪನಿಯೊಂದು ತನ್ನ ಉದ್ಯೋಗಿಯನ್ನು ಕೆಲಸಕ್ಕೆ ಬಾರದಿರುವುದರ ಕಾರಣದ ಬಗ್ಗೆ ಕೇಳಿತ್ತು. ನಿನ್ನ ಮುಂದಿನ ಹಾಗೂ ಈಗಿನ ಸಂಸ್ಥೆಗಳನ್ನು ಗೌರವ ಮತ್ತು ಆದರದಿಂದ ಕಾಣುತ್ತಿಯ ಎಂದು ಭಾವಿಸುತ್ತೇವೆ ಎಂದೂ ಹೇಳಲಾಗಿತ್ತು. ಆ ಪೋಸ್ಟ್ ನ ಪ್ರಕಾರ ಕಂಪನಿಯು ಆಯ್ಕೆಯಾದ ಮೇಲೆ ಕೆಲಸಕ್ಕೆ ಬರುವಂತೆ ಹೇಳಿದರೂ ಆ ವ್ಯಕ್ತಿ 2 ತಿಂಗಳು ಏನೂ ಹೇಳದೆ ಕೆಲಸಕ್ಕೂ ಹೋಗದೆ ಸತಾಯಿಸಿದ್ದ. ಎಲ್ಲರ ದೃಷ್ಟಿಗೆ ಬಿದ್ದ ಮೇಲೆ ಆತ ತನ್ನ ಲಿಂಕ್ಡ್ ಇನ್ ಪ್ರೊಫೈಲ್ ಅನ್ನು ಡಿಲೀಟ್ ಮಾಡಿ ಬಿಟ್ಟ. ಇಲ್ಲಿರುವ ಸಂದೇಶ ಬಹಳ ಸಿಂಪಲ್. ನಿಮಗೆ ಸಿಕ್ಕ ಕೆಲಸದ ಆಫರ್ ಇಷ್ಟವಾಗದಿದ್ದರೆ ಅದನ್ನು ಮೊದಲ ಭೇಟಿಯಲ್ಲೇ ‘ಇಲ್ಲ ‘ ಎಂದು ಬಿಡಿ. ಅದನ್ನು ಬಿಟ್ಟು ಕಂಪನಿಯನ್ನು ಸತಾಯಿಸಬೇಡಿ. ನಿಮ್ಮ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಪ್ರಚಾರ ಬಂದಾಗ,  ಒಂದು ಕಂಪನಿ ಹೀಗೆಲ್ಲ ಮಾಡಬಹುದೇ ಎಂದು ದೂರುವ ಮೊದಲು ಒಂದು ಹುದ್ದೆಗೆ ಸೇರುವಾಗ ಇರಲೇಬೇಕಾದ ಈ ಅಭ್ಯಾಸ, ನಯವಾಗಿ ತಿರಸ್ಕರಿಸಿ ಬಿಡುವುದು. ಕೆಲ ಅಭ್ಯರ್ಥಿಗಳು ಎರೆಡೆರೆಡು ಕಡೆ ಕೆಲಸದ ಆಫರ್ ಬಂದಾಗ ತಕ್ಷಣ ಸೇರದೆ ಸತಾಯಿಸಿದರೆ, ಹೆಚ್ಚಿನ ವೇತನ ದೊರೆಯುತ್ತದೆಯೆಂದು ಕಂಪನಿಗಳನ್ನು ತಾವು ಸೇರುವ ದಿನಾಂಕದ ಮಾಹಿತಿ ನೀಡದೆ ಕಾಯಿಸುತ್ತಾರೆ. ಅನುಭವವುಳ್ಳ ಅಭ್ಯರ್ಥಿಗಳ ವಿಷಯದಲ್ಲಿ ಇದು ತಕ್ಕ ಮಟ್ಟಿಗೆ ಫಲ ಕೊಡುತ್ತದೆ. ಆದರೆ ಈಗ ಬದಲಾದ ಇಂಟರ್ನೆಟ್ ಕಾಲದಲ್ಲಿ ಅಂತಹ ಅಭ್ಯರ್ಥಿಗಳನ್ನು ವರ್ಚುಯಲ್ ಕಪ್ಪು ಪಟ್ಟಿಗೆ ಸೇರ್ಪಡೆ ಮಾಡುವುದಕ್ಕೆ ದಾರಿ ಮಾಡಿಬಿಡುತ್ತದೆ. 

ಮಾನವ ಸಂಪನ್ಮೂಲ (HR) ಪರಿಣಿತರು ಹೇಳುವಂತೆ ’ಅಭ್ಯರ್ಥಿಯು' ಎಂಪ್ಲಾಯರ್ ರೊಂದಿಗೆ ಘೋಸ್ಟಿಂಗ್ ಮಾಡುವುದನ್ನು ತಪ್ಪೆಂದು ಪರಿಗಣಿಸಲಾಗುವುದು ಹಾಗೂ ಅವರನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಿ , ಮುಂದಿನ ದಿನಗಳಲ್ಲಿ ಅವರು ಮೋಸ ಮಾಡಿದ ಸದರಿ ಕಂಪನಿ ಮತ್ತು ಅದರ  ಮಿತ್ರ ಕಂಪನಿ ಗಳಲ್ಲಿ ಕೆಲಸ ಗಿಟ್ಟಿಸುವ ಅವಕಾಶವನ್ನು ತಪ್ಪಿಸಲಾಗುತ್ತದೆ. ಹಾಗಾಗಿ ಒಬ್ಬ ಅಭ್ಯರ್ಥಿಯು ಕೊಟ್ಟ ಕೆಲಸಕ್ಕೆ ಸೇರದಿರುವ ಬಗ್ಗೆ ಸಕಾರಣವನ್ನು ನೀಡಬೇಕು. ಅದು ಕುಟುಂಬ ಕಾರಣವೋ ಅಥವಾ ಎರೆಡೆರೆಡು ಅವಕಾಶಗಳಿಂದ ದ್ವಂದ್ವಕ್ಕೆ ಸಿಲುಕಿದ್ದಾನೋ ಎಂದು. ಅಂತಹ ಪರಿಸ್ಥಿತಿಯಲ್ಲಿ ಒಂದು ಔಪಚಾರಿಕ ಇಮೇಲ್ ಕಳಿಸಿ ಸ್ವಲ್ಪ ಸಮಯ ಕೋರುವುದು ಒಳಿತು. 

ಪ್ರಸ್ತುತ ಈ ವಿಧಾನವು ಪಾಶಿಮಾತ್ಯ ದೇಶಗಳಲ್ಲಿ ಬಳಕೆಗೆ ಬಂದಿದ್ದು ಭಾರತವನ್ನು ಪ್ರವೇಶಿಸುವ ಕಾಲ ಬಹಳ ದೂರವಿಲ್ಲ. ಹೀಗೆ ಕಂಪನಿಯ ಎಚ್ ಆರ್ ಗಳು ಸೋಶಿಯಲ್ ಮೀಡಿಯಾದಲ್ಲಿ ಸತಾಯಿಸಿದ ಅಭ್ಯರ್ಥಿಯನ್ನು ಟ್ಯಾಗ್ ಮಾಡುವುದನ್ನು ಕಂಪನಿಯ ಲಾಭ ನಷ್ಟದ ದೃಷ್ಟಿಯಿಂದ ಒಳ್ಳೆಯದೆಂದರೂ ಸಹ ಅಭ್ಯರ್ಥಿಯ ಭವಿಷ್ಯದ ದೃಷ್ಟಿಯಿಂದ ಇದು ಮಾರಕ. ಪ್ರತಿಭೆ ಇದ್ದರೂ ಎಲ್ಲರ ಬಾಯಿಗೆ ಬೀಳುವ ಬದಲು ಅಭ್ಯರ್ಥಿಗಳು ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು.