ಟಿಪ್ಪು ಸುಲ್ತಾನ್ ಕುರಿತ ಮಾಹಿತಿಯನ್ನು ಪಠ್ಯಗಳಿಂದ ತೆಗೆದರೆ ಕನ್ನಡ ನೆಲದ ಆತ್ಮದಿಂದ ಕಳಚುವುದು ಸಾಧ್ಯವೇ?

ಇತಿಹಾಸ ನೆಲದ ಮಣ್ಣಿನಲ್ಲಿರುತ್ತದೆ. ನಾಗರಿಕ ಪ್ರಜ್ಞೆಯಲ್ಲಿರುತ್ತದೆ. ಸಾಮಾಜಿಕ ಚಿಂತನಾ ವಾಹಿನಿಯಲ್ಲಿರುತ್ತದೆ. ಸಂಸ್ಕೃತಿಯ ತೊರೆಗಳಲ್ಲಿರುತ್ತದೆ. ಮನುಕುಲದ ಅಭ್ಯುದಯದ ಹಾದಿಯಲ್ಲಿನ ಹೆಜ್ಜೆ ಗುರುತುಗಳಲ್ಲಿರುತ್ತದೆ. ಪಠ್ಯ ಪುಸ್ತಕಗಳಲ್ಲಿರುವುದು ಅಕ್ಷರಗಳು ಮಾತ್ರ. ಎಂದಾದರೂ ಅಳಿಸಿಹೋಗುತ್ತವೆ. ಭಾರತದ  ಇತಿಹಾಸದ ಹೆಜ್ಜೆ ಗುರುತುಗಳನ್ನುಅಳಿಸಿಹಾಕಲು ಮುಂದಾಗಿರುವ ಮತೀಯವಾದಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. 

ಟಿಪ್ಪು ಸುಲ್ತಾನ್ ಕುರಿತ ಮಾಹಿತಿಯನ್ನು ಪಠ್ಯಗಳಿಂದ ತೆಗೆದರೆ ಕನ್ನಡ ನೆಲದ ಆತ್ಮದಿಂದ ಕಳಚುವುದು ಸಾಧ್ಯವೇ?

ಒಂದೆರಡು ಪುಟಗಳಿಂದ ಮರೆಯಾಗುವ ಟಿಪ್ಪು ಶ್ರೀರಂಗಪಟ್ಟಣದಲ್ಲಿ, ಶೃಂಗೇರಿಯ ಶಾರದಾಂಬೆ ದೇವಾಲಯದಲ್ಲಿ, ಮೈಸೂರು ಪ್ರಾಂತ್ಯದ ಮಣ್ಣಿನಲ್ಲಿ, ಕ್ಷಿಪಣಿಗಳಲ್ಲಿ ಸದಾ ಜೀವಂತವಾಗಿಯೇ ಇರುತ್ತಾನೆ. ಇತಿಹಾಸದ ಹೆಜ್ಜೆಗಳಲ್ಲಿ ಸಾಮ್ರಾಟರೂ ಇರುತ್ತಾರೆ ವಿದೂಷಕರೂ ಇರುತ್ತಾರೆ. ವಿನಾಶಕರೂ ಇರುತ್ತಾರೆ. ಮೈಸೂರು ಅಥವಾ ಕರ್ನಾಟಕದ ಇತಿಹಾಸವನ್ನು ಬೋಧಿಸುವವರು ಟಿಪ್ಪುವಿನ ಚರಿತ್ರೆಯನ್ನು ಮರೆಮಾಚಿದರೆ ಅದು ಅಜ್ಞಾನದ ಪ್ರದರ್ಶನವಾಗುತ್ತದೆಯೇ ಹೊರತು ವಿದ್ವತ್ತಿನ ಪ್ರದರ್ಶನವಲ್ಲ. ಭಾರತದ ಶೈಕ್ಷಣಿಕ ಪಠ್ಯ ಕ್ರಮದಲ್ಲಿ ಎಷ್ಟೋ ಸಾಮ್ರಾಟರ, ಹೋರಾಟಗಾರರ ಉಲ್ಲೇಖವೇ ಇಲ್ಲ ಅಲ್ಲವೇ ? ಜ್ಯೋತಿ ಬಾ ಫುಲೆ ಕುರಿತು ಎಷ್ಟು ಪಠ್ಯಗಳಿವೆ. ಪೆರಿಯಾರ್, ಕದ್ಮುಲ್ ರಂಗರಾವ್ ಅವರಂತಹ ಸುಧಾರಕರ ಬಗ್ಗೆ ಎಷ್ಟು ಉಲ್ಲೇಖವಿದೆ.

ಈಶ್ವರಚಂದ್ರ ವಿದ್ಯಾಸಾಗರ್ ಕುರಿತು ಎಷ್ಟು ಪಾಠಗಳಿವೆ? ತಮಿಳುನಾಡು, ಕೇರಳ, ಪೂನಾ ಮುಂತಾದ ಪ್ರಾಂತ್ಯದಲ್ಲಿ ಜಾರಿಯಲ್ಲಿದ್ದ ಜಾತಿ ವ್ಯವಸ್ಥೆಯ ಕ್ರೌರ್ಯ, ಅಸ್ಪೃಶ್ಯತೆಯ ಕ್ರೂರ ಅಧ್ಯಾಯಗಳು ಎಷ್ಟು ಪಠ್ಯಗಳಲ್ಲಿವೆ ? ಇವೆಲ್ಲವೂ ಅಳಿಸಿಹಾಕಿರುವ ಇತಿಹಾಸವೇ. ಆದರೆ ಇಂದಿಗೂ ಈ ಇತಿಹಾಸ ಈ ದೇಶದ ಶೋಷಿತರ ಮನದಾಳದಲ್ಲಿ ದಾಖಲಾಗಿದೆ ಅಲ್ಲವೇ ? ಹೋಗಲಿ ಟಿಪ್ಪುವಿನ ಪಾಠಗಳನ್ನು ಅಳಿಸಿಹಾಕಿ ಈ ಶೋಷಿತರ ಇತಿಹಾಸವನ್ನು ಬೋಧಿಸಲು ಸಾಧ್ಯವೇ ?  ಲ್ಯಾಟಿನ್ ಅಮೆರಿಕದ ಕ್ರಾಂತಿಕಾರಿ ಹೋರಾಟಗಳು ಎಷ್ಟು ಪಠ್ಯಗಳಲ್ಲಿವೆ ? ಆದರೂ ಭಾರತದ ಅನೇಕ ರಾಜಕೀಯ ಚಳವಳಿಗಳಿಗೆ ಲ್ಯಾಟಿನ್ ಅಮೆರಿಕದ ಹೋರಾಟಗಳು, ಕ್ಯೂಬಾ, ಚೆ ಗುವಾರ, ವಿಯೆಟ್ನಾಂ ಸ್ಫೂರ್ತಿಯಾಗಿದೆ ಅಲ್ಲವೇ. ಇದು ಇತಿಹಾಸದ ಲಕ್ಷಣ. ಇತಿಹಾಸ ಅಕ್ಷರಗಳಲ್ಲಿ ದಾಖಲಾಗುತ್ತದೆ ಜನಮಾನಸದಲ್ಲಿ ಬದುಕಿರುತ್ತದೆ. ಮೌಖಿಕ ಪರಂಪರೆಯ ಇತಿಹಾಸವನ್ನು, ಲಾವಣಿಗಳಲ್ಲಿರುವ ಇತಿಹಾಸವನ್ನು ಹೇಗೆ ಅಳಿಸಿಹಾಕುತ್ತೀರಿ ?

ಪಠ್ಯಗಳಲ್ಲಿನ ಕೆಲವು ಸಾಲುಗಳನ್ನು ಅಳಿಸಿಹಾಕಿದ ಮಾತ್ರಕ್ಕೆ ಇತಿಹಾಸ ಮಣ್ಣುಪಾಲಾಗುವುದಿಲ್ಲ. ಒಂದು ಪ್ರಾಂತ್ಯದ ಸಾಮ್ರಾಟನಾದರೂ ಬ್ರಿಟೀಷರ ವಿರುದ್ಧ ಹೋರಾಡಬಹುದು ಎಂದು ನಿರೂಪಿಸಿದ ಮಹಾನ್ ಹೋರಾಟಗಾರ ದೊರೆಯನ್ನು ಮತೀಯ ಮಸೂರಗಳನ್ನು ತೊಟ್ಟು ನೋಡಿದರೆ ಅದು ಟಿಪ್ಪುವಿನ ದೋಷವಲ್ಲ. ನಾವು ತೊಟ್ಟ ಮಸೂರದ ದೋಷ.  ಬ್ರಿಟೀಷರಿಗೆ ಶರಣು ಶರಣು ಎಂದೇ ತಮ್ಮ ಅಧಿಕಾರ ಪೀಠವನ್ನು, ಸಾಮ್ರಾಜ್ಯವನ್ನು ಉಳಿಸಿಕೊಂಡು ಇಂದಿಗೂ ಗತಕಾಲದ ವೈಭವವನ್ನು ಸವಿಯುತ್ತಿರುವ ರಾಜ ಕುಟುಂಬಗಳ ನಡುವೆ ಟಿಪ್ಪು ನಕ್ಷತ್ರದಂತೆ ಹೊಳೆಯುತ್ತಾನೆ. ಅವನ ಹೆಜ್ಜೆ ಗುರುತುಗಳನ್ನು ಪಠ್ಯಕ್ರಮದಲ್ಲಿ ಅಳಿಸಿಹಾಕಿದ ಮಾತ್ರಕ್ಕೆ ಇತಿಹಾಸ ಮರೆಯಾಗುವುದಿಲ್ಲ.

ಟಿಪ್ಪುವಿನ ಪ್ರತಿ ಹೆಜ್ಜೆಗೂ ಸಾಕ್ಷಿ ಕೇಳುವ ಹೊಸ ವಾಟ್ಸ್ ಆಪ್ ಪರಂಪರೆಯೊಂದು ಹುಟ್ಟಿಕೊಂಡಿರುವುದೇ ಸರ್ಕಾರದ ಉದ್ಧಟ ಕ್ರಮಕ್ಕೆ ಪ್ರೇರಣೆಯಾಗಿದೆ. ಸ್ವತಂತ್ರ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಡೆದ ಹತ್ಯಾಕಾಂಡಗಳಿಗೇ ಸಾಕ್ಷ್ಯ ಒದಗಿಸಲು ವಿಫಲವಾಗಿರುವ ಒಂದು ನಾಗರಿಕ ಸಮಾಜ 300 ವರ್ಷಗಳಿಗೂ ಹಿಂದೆ ನಡೆದ ಸಮರಗಳ  ಸಾಕ್ಷ್ಯ ಕೇಳುವುದಾದರೂ ಹೇಗೆ ಸಾಧ್ಯ ? ಟಿಪ್ಪು ಸಂತನಲ್ಲ ಒಬ್ಬ ಸಾಮ್ರಾಟ. ಅವನಲ್ಲಿ ದರ್ಪ, ದಬ್ಬಾಳಿಕೆ, ಅಹಂಕಾರ, ಪ್ರೀತಿ ವಾತ್ಸಲ್ಯ, ರಾಜಠೀವಿ ಮತ್ತು ಪರಾಕ್ರಮ ಎಲ್ಲವನ್ನೂ ಕಾಣಬಹುದು. ತಪ್ಪುಗಳನ್ನೂ ಗುರುತಿಸಬಹುದು ಹಾಗೆಯೇ ಪ್ರಜಾತಂತ್ರ ವ್ಯವಸ್ಥೆಯಲ್ಲೂ ಊಹಿಸಲಾಗದ ಸುಧಾರಕನನ್ನೂ ಕಾಣಬಹುದು. ಇದು ಇತಿಹಾಸವನ್ನು ನೋಡುವ ಬಗೆ. ಪಠ್ಯದಲ್ಲಿ ಅಳಿಸಿಹಾಕಿದರೂ ಈ ಇತಿಹಾಸದ ಹೆಜ್ಜೆಗಳನ್ನು ನೆಲದ ಮಣ್ಣಿಂದ ತೆಗೆದುಹಾಕಲಾಗುವುದಿಲ್ಲ. ಅರಬ್ಬೀ ಸಮುದ್ರಕ್ಕೆ ಅರಬ್ ಹೆಸರಿದೆ ಎಂದ ಮಾತ್ರಕ್ಕೆ ಅದನ್ನು ಖಾಲಿ ಮಾಡಲಾಗುತ್ತದೆಯೇ ? ಹಾಗೆಯೇ ಟಿಪ್ಪು ಸಹ. ಮಾನ್ಯ ಜನಪ್ರತಿನಿಧಿಗಳೇ ನೀವು ಟಿಪ್ಪು ಇತಿಹಾಸವನ್ನು ಪಠ್ಯಗಳಿಂದ ತೆಗೆದುಹಾಕಿದರೆ ಖಾಲಿಯಾಗಿ ಕಾಣುವುದು ನಿಮ್ಮ ಮಿದುಳು ಮತ್ತು ಪಠ್ಯದ ಹಾಳೆಗಳಷ್ಟೆ. ಇತಿಹಾಸ ಜೀವಂತವಾಗಿಯೇ ಇರುತ್ತದೆ.