ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಸೋತರೆ ಅದಕ್ಕೆ ಅವರೇ ಕಾರಣ ಹೊರತು, ಯಾವ ಪುಟಗೋಸಿಗೌಡನೂ ಕಾರಣ ಅಲ್ಲ!?

ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಸೋತರೆ ಅದಕ್ಕೆ ಅವರೇ ಕಾರಣ ಹೊರತು, ಯಾವ ಪುಟಗೋಸಿಗೌಡನೂ ಕಾರಣ ಅಲ್ಲ!?

ಸರ್ಕಾರಿ ಕ್ಯಾಲೆಂಡರ್ ಪ್ರಕಾರ ಇನ್ನೂ ಟೈಮಿದೆ. ಆದರೆ ಆಟ ಆಗಲೇ ಆರಂಭವಾಗಿದೆ. ಒಬ್ಬರಮೇಲೋಬ್ಬರು ಕೆಸರೆರಚಿಕೊಳ್ಳುವುದು, ಪ್ರತಿಯೊಬ್ಬರು ತಾವೇ ಗರತಿಯರು ಎಂದು ಬಿಂಬಿಸಿಕೊಳ್ಳುವ ರಂಗಿನಾಟ ಆರಂಭಿಸಿದ್ದಾರೆ. ಆದರೆ ವಾಸ್ತವವಾಗಿ ಜನರಿಗೆ ಇದ್ಯಾವುದರ ಅವಶ್ಯಕತೆಯೂ ಇಲ್ಲ, ಪರಿವೆಯೂ ಇಲ್ಲ. ಮಲಗಿದ್ದ ಅರ್ಥ ವ್ಯವಸ್ಥೆಯ ಮೇಲೆ ಕೊರೊನಾ ನಡೆಸಿದ ದಾಳಿ ಪ್ರತಿಯೊಬ್ಬರನ್ನೂ ಬೇರೆ ಬೇರೆ ರೂಪಗಳಲ್ಲಿ ಹಿಂಸಿಸುತ್ತಿದೆ. ಜನರನ್ನು ಈ ಅಗ್ನಿಕುಂಡದಿಂದ ಮೇಲೆತ್ತುವ ಕೆಲಸವನ್ನು ಜನಪ್ರತಿನಿಧಿಗಳು ಸೇರಿ ಎಲ್ಲಾ ರಾಜಕೀಯ ಶಕ್ತಿಗಳು, ವ್ಯಕ್ತಿಗಳು, ಸರ್ಕಾರದ ಸಂಸ್ಥೆಗಳು ಒಟ್ಟುಗೂಡಿ ಮಾಡಬೇಕಿದೆ. ಆದರೆ ಇವ್ಯಾವ ಕೆಲಸಗಳು ನಡೆಯುತ್ತಿಲ್ಲ. ಅದಕ್ಕೆ ಹಲವಾರು ಕಾರಣಗಳು ಇರಬಹುದು.

ಗೌರಿಬಿದನೂರು ಮಟ್ಟಿಗೆ ಜನರ ಸಮಸ್ಯೆಗಳು ಪ್ರಮುಖವಾಗಿ ಬಿಂಬಿಸುವ ಅವುಗಳನ್ನು ಪರಿಹರಿಸುವ ಕಾರ್ಯಗಳನ್ನು ಸಮರೋಪಾದಿಯಲ್ಲಿ ಮಾಡಬೇಕಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಅದಾಗುತ್ತಿಲ್ಲ. ಅದಕ್ಕೆ ಸರ್ಕಾರದ ಅಸಹಕಾರವು ಕಾರಣವೆನ್ನಬಹುದು. ಏನೇ ಆದರೂ ಇದರ ಒಟ್ಟಾರೆ ಬಿಸಿ ಮೇಲ್ನೋಟಕ್ಕೆ ಕಾಣಿಸಿದರೂ, ಆಂತರಿಕವಾಗಿ ಅದರ ಕ್ರೌರ್ಯ, ಜನತೆಯ ಮೇಲೆ ಅಷ್ಟಾಗಿ ಪರಿಣಾಮ ಬೀರದಿರುವುದು ಇದಕ್ಕೆ ಕಾರಣವಿರಬಹುದು. ಈಗ ಪ್ರಸ್ತುತ ಚರ್ಚೆ ಆಗಬೇಕಿರುವುದು ಜನರ ಸಮಸ್ಯೆಗಳೇ ಹೊರತು, ವೈಯಕ್ತಿಕವಾದ ಸಮಸ್ಯೆಗಳಲ್ಲ. ಆದರೆ ಗೌರಿಬಿದನೂರಿನಲ್ಲಿ ಆಗುತ್ತಿರುವುದೇನು? ಸತತ 5ನೇ ಬಾರಿ ಶಾಸಕರಾಗಿರುವ ಶಿವಶಂಕರರೆಡ್ಡಿ ರವರ ಮೇಲೆ ಅವರ ಒಡ್ಡೋಲಗದಲ್ಲೇ ಆಟವಾಡಿ ಬೆಳೆದ ಮಕ್ಕಳು ಅವರ ಮೇಲೆ ಕೆಸರೆರಚುತ್ತಿವೆ. ಹಲವಾರು ವಿಷಯಗಳನ್ನು ಚರ್ಚೆ ಮಾಡುತ್ತಿವೆ. ಆದರೆ ಜನರ ಸಮಸ್ಯೆಗಳನ್ನು ಶಾಸಕರ ಪಡೆಯಿಂದ ಹೊರನಡೆದ ಯಾವೊಬ್ಬ ಮುಖಂಡನೂ ಮಾತನಾಡುತ್ತಿಲ್ಲ. ಬಹುಶಃ ಜನರ ಸಮಸ್ಯೆಗಳ ಮಾಹಿತಿಯೂ ಅವರಿಗೆ ಇಲ್ಲದಿರುವುದು ಕಾರಣವಿರಬಹುದು. ಶಿವಶಂಕರರೆಡ್ಡಿರವರ ಮೇಲೆ ಅವರ ಜೊತೆಗಿರುವವರೇ ಎದುರು ನಿಲ್ಲುವುದು ಇದು ಮೊದಲಲ್ಲ, ಕೊನೆಯೂ ಅಲ್ಲ, ಇದು ನಿತ್ಯ ನಿರಂತರ. ಏಕೆಂದರೆ ಶಿವಶಂಕರರೆಡ್ಡಿ ರವರು ಕೂಡ ತಮ್ಮ ಗುರು ಅಶ್ವತ್ಥನಾರಾಯಣರೆಡ್ಡಿ ರವರನ್ನು ಓವರೆಟೆಕ್ ಮಾಡಿ ರಾಜಕೀಯ ಬದುಕನ್ನು ದಕ್ಕಿಸಿಕೊಂಡವರು. ಆದರೆ ಶಿವಶಂಕರರೆಡ್ಡಿರವರ ಸರಿಸಮನಾದ ನಾಯಕ ಇದುವರೆವಿಗೂ ಗೌರಿಬಿದನೂರುನಲ್ಲಿ ಮೂಡಿಬರದಿರುವುದು ಶಿವಶಂಕರರೆಡ್ಡಿ ರವರು ಈಗಲೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡು ಮುನ್ನುಗ್ಗುತ್ತಿದ್ದಾರೆ.

ಈಗ ಹಲವು ಮಂದಿ ಸೇರಿಕೊಂಡು ಪುಟ್ಟಸ್ವಾಮಿಗೌಡ ಎಂಬ ಹಾಸನದ ಉದ್ಯಮಿಯನ್ನು ಪತ್ತೆಮಾಡಿ ಕರೆದುಕೊಂಡು ಬಂದು, ಶಿವಶಂಕರರೆಡ್ಡಿ ರವರ ವಿರುದ್ದ ನಿಲ್ಲಿಸಲು ಸರ್ವ ರೀತಿಯಲ್ಲೂ ಸಜ್ಜಾಗಿದ್ದಾರೆ. ಆದರೆ ಒಂದು ಸಾಲಿನಲ್ಲಿ ಹೇಳುವುದಾದರೇ, ಪುಟ್ಟಸ್ವಾಮಿಗೌಡರು ಶಾಸಕ ಶಿವಶಂಕರರೆಡ್ಡಿಯ ವಿರುದ್ದ ಗೆಲುವು ಸಾಧಿಸುವುದು ಅಸಾಧ್ಯ. ಏಕೆಂದರೆ ಶಿವಶಂಕರರೆಡ್ಡಿ ರಾಜಕಾರಣಿ. ಪುಟ್ಟಸ್ವಾಮಿಗೌಡ ಉದ್ಯಮಿ. ಒಬ್ಬ ರಾಜಕಾರಣಿಯನ್ನು ಸೋಲಿಸಲು ಬೇಕಿರುವುದು ಇನ್ನೊಬ್ಬ ರಾಜಕಾರಣಿಯೇ ಹೊರತು, ವ್ಯಾಪಾರಿಯಲ್ಲ. ಗೌರಿಬಿದನೂರಿನ ರಾಜಕೀಯದ ಭೂಪಟವನ್ನೇ ಅರಿಯದ ಪುಟ್ಟಸ್ವಾಮಿಗೌಡರು ತಮ್ಮ ಅಪಾರವಾದ ಹಣವನ್ನು ತುಂಬಿಕೊಂಡುಬಂದಿರುವುದು ಅವರ ರಾಜಕೀಯ ಮುಗ್ದತೆಯೇ ಕಾರಣ. ಪುಟ್ಟಸ್ವಾಮಿಗೌಡರು ಒಬ್ಬ ಯಶಸ್ವಿ ಉದ್ಯಮಿ. ಇವರು ಕೇವಲ ಮಾರುತಿ ಓಮಿನಿಯಿಂದ ಆರಂಭವಾಗಿ ಇಂದು ಸಾವಿರಾರುಕೋಟಿ ಒಡೆಯರು ಹೇಗೆ ಆದರು, ಅಲಕಾಪುರದಲ್ಲಿ ಇರುವ ಸೋಲಾರ್ ಪ್ಲಾಂಟ್ ಎಷ್ಟರ ಮಟ್ಟಿಗೆ ಕಾನೂನು ಬದ್ದವಾಗಿದೆ, ಯಾವ ರೀತಿ ಇಲ್ಲಿ ಕಾನೂನುಗಳನ್ನು ಉಲ್ಲಂಘಿಸಲಾಗಿದೆ, ಹಣಬಲದಿಂದ ಹೇಗೆ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದನ್ನು ಮುಂದಿನ ಸಂದರ್ಭದಲ್ಲಿ ಸವಿವರವಾಗಿ ಚರ್ಚಿಸೋಣ. ಆ ಬಗ್ಗೆ ತಾವು ಎಷ್ಟರ ಮಟ್ಟಿಗೆ ನೆಮ್ಮದಿಯನ್ನು ಕಾಪಾಡಿಕೊಳ್ಳುವಿರಿ ಎಂಬುದು ಮುಂದಿನ ದಿನಗಳು ತೀರ್ಮಾನಿಸಲಿವೆ.

ಈಗ ತಮ್ಮ ತಂಡದಲ್ಲಿರುವ ಹೊಸೂರು ಮಂಜು, ರಾಘವೇಂದ್ರ ಹನುಮಾನ್ ಬಿಟ್ಟರೆ 50 ವೋಟು ತರಬಲ್ಲ ಒಬ್ಬ ವ್ಯಕ್ತಿಯನ್ನೂ ತಮ್ಮ ಗುಂಪಿನಲ್ಲಿ ಇಟ್ಟುಕೊಳ್ಳದ ಪುಟ್ಟಸ್ವಾಮಿಗೌಡ ಇದುವರೆವಿಗೂ ಗೌರಿಬಿದನೂರು ಸಮಸ್ಯೆಗಳ ಬಗ್ಗೆ ಚಕಾರವೆತ್ತಿಲ್ಲ. ಒಂದಿಷ್ಟು ಖಾಲಿ ಡಬ್ಬಗಳನ್ನು ಕುತ್ತಿಗೆಗೆ ನೇತಾಕಿಕೊಂಡು ಡಬಡಬ ಎಂದು ಶಬ್ದಮಾಡಿಕೊಂಡು ಓಡಾಡುವುದೇ ರಾಜಕಾರಣ ಎಂದುಕೊಂಡಂತಿರುವ ಪುಟ್ಟಸ್ವಾಮಿಗೌಡ ಒಬ್ಬ ವ್ಯಾಪಾರಿ ಅಷ್ಟೆ. ಮಂಜುನಾಥ ರವರು ಕೂಡ ಬ್ರಾಹ್ಮಣ ಸಮುದಾಯದ ಅಲ್ಪಸಂಖ್ಯಾತರು. ಇವರನ್ನು ಜಿಲ್ಲಾ ಪಂಚಾಯತ್ ಸದಸ್ಯರನ್ನಾಗಿಸಿ, ಅಧ್ಯಕ್ಷರನ್ನಾಗಿಯೂ ಮಾಡಿದ ಶಿವಶಂಕರರೆಡ್ಡಿ ವಿರುದ್ದ ಎತ್ತಿರುವ ಪ್ರಶ್ನೆಯಾದರೂ ಯಾವುದು?  ತಮ್ಮದೇ ಗ್ರಾಮದ ಬಲಜಿಗ ಸಮುದಾಯಕ್ಕೆ ಸೇರಿದ ತಾವೇ ಕರೆದುಕೊಂಡು ಬಂದು ಕಾಂಗ್ರೆಸ್‍ಗೆ ಸೇರಿಸಿಕೊಂಡು ಅವರನ್ನೂ ಬಳಸಿಕೊಂಡು, ತಮ್ಮ ಗೆಲುವನ್ನು ಸುಲಭಮಾಡಿಕೊಂಡಿದ್ದು, ಮಂಜು ರವರ ಅವಕಾಶವಾದಿ ರಾಜಕಾರಣಕ್ಕೆ ಕಣ್ಮುಂದಿರುವ ಸಾಕ್ಷಿ. ಇಂಥಹ ಮಂಜು ಶಿವಶಂಕರರೆಡ್ಡಿರವರನ್ನು ತೊರೆದು ಹೋಗಲು ಇದುವರೆವಿಗೂ ಒಂದು ರಚನಾತ್ಮಕ ಮಾತು ಆಡಲಿಲ್ಲ. ಇದು ಅವರ ದಿವಾಳಿತನಕ್ಕೆ ಸಾಕ್ಷಿ. ಧಾರ್ಮಿಕ ಅಲ್ಪಸಂಖ್ಯಾತರಾದ ಕಾಂತರಾಜು ರವರನ್ನು ಕೋಚಿಮುಲ್ ಅಧ್ಯಕ್ಷರನ್ನಾಗಿಸಿದ್ದು ಶಿವಶಂಕರರೆಡ್ಡಿರವರ ಹೆಗ್ಗಳಿಕೆ. ಇವರೂ ಕೂಡ ಪುಟ್ಟಸ್ವಾಮಿಗೌಡರ ಪಕ್ಕ ನಿಂತುಕೊಂಡು ಶಾಸಕರ ವಿರುದ್ದ ಮಾತನಾಡುತ್ತಾರೆ. ಈ ಹಾಸನ ಗೌಡ ಇವರನ್ನು ನಂಬಿಕೊಂಡು ಎಂ.ಎಲ್.ಎ.ಆಗೋಕೆ ಬಂದವ್ರೆ. ಅಲಕಾಪುರದ ಇನ್ನೊಬ್ಬ, ಇಲ್ಲಿ ಹೆಸರೂ ಬರೆಯೋಕು ನಾಲಾಯಕ್ ಆದ ಮನುಷ್ಯ, ಅವನಿವತ್ತು ಫಾರ್ಚುನರ್ ಕಾರಿನಲ್ಲಿ ಓಡಾಡುತ್ತಿದ್ದಾನೆ. ಅವನನ್ನು ಶಿವಶಂಕರರೆಡ್ಡಿ ರವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದರು. ಅದಕ್ಕೂ ಮುಂಚೆ ಐಸ್‍ಕ್ಯಾಂಡಿ ಡಬ್ಬ ಹಿಡಿದುಕೊಂಡು, ಐಸ್‍ಕ್ಯಾಂಡಿ ಮಾರಿಕೊಂಡು ಬದುಕುತ್ತಿದ್ದರು. ಇನ್ನೂ ಕೆಲವರಿದ್ದಾರೆ ಅವರುಗಳ ಹೆಸರುಗಳು ಇಲ್ಲಿ ಬರೆಯಲು ಯೋಗ್ಯತೆ ಇಲ್ಲದವರು. ಆದರೆ ಇವರೆಲ್ಲರೂ ಶಿವಶಂಕರರೆಡ್ಡಿರವರ ಒಡ್ಡೋಲಗದಲ್ಲಿ ಆಡಿ ಮೆರೆದವರು. ಮೃಷ್ಟಾನ್ನ ಭೋಜನ ಉಂಡವರು. ಇವರು ಶಿವಶಂಕರರೆಡ್ಡಿ ವಿರುದ್ದ ಬೆನ್ನಿಗೆ ಚೂರಿ ಹಾಕಿ, ಹೊರಹೋದವರು. ಇಂಥಹ ವಿಶ್ವಾಸಘಾತುಕರು, ಎದೆಗೆ ಚೂರಿ ಹಾಕಲ್ಲ ಎಂಬ ವಿಶ್ವಾಸ ಪುಟ್ಟಸ್ವಾಮಿಗೌಡರಿಗೆ ಇದೆಯೇ? ಎಂಬುದನ್ನು ಪುಟ್ಟಸ್ವಾಮಿಗೌಡರು ತಮ್ಮ ಮಗನೊಂದಿಗೆ ಸಮಾಲೋಚನೆ ಮಾಡಿದರೆ ಒಳ್ಳೆಯದು. ಇಲ್ಲದಿದ್ದಲ್ಲಿ ಪುಟ್ಟಸ್ವಾಮಿಗೌಡರು ಕಳೆದುಕೊಳ್ಳಬೇಕಾಗಿರುವುದು ಕೇವಲ ಹಣವಲ್ಲ, ಕುಟುಂಬದ ನೆಮ್ಮದಿ, ಆರೋಗ್ಯ, ಉದ್ಯಮದ ಆರೋಗ್ಯವನ್ನು ಕಾಪಾಡಿಕೊಂಡು ಮಗನ ಭವಿಷ್ಯವನ್ನು ವೃದ್ದಿಸಿಕೊಳ್ಳುವ ಕಡೆ ಗಮನಕೊಟ್ಟರೆ ಒಳ್ಳೆಯದು. ಬಹುಶಃ ಈ ಹಂತ ಪುಟ್ಟಸ್ವಾಮಿಗೌಡರು ಮೀರಿದ್ದಾರೆ. ಆದ್ದರಿಂದ ಅವರು ಕೆಲವೇ ದಿನಗಳಲ್ಲಿ ಬಹಳಷ್ಟನ್ನು ಕಳೆದುಕೊಳ್ಳಲಿದ್ದಾರೆ.

ಇಷ್ಟೆಲ್ಲಾ ಸಮಸ್ಯೆಗಳು ಶಾಸಕರ ಪಡೆಯಲ್ಲಿ ಸೃಷ್ಟಿಯಾಗಲು ಹೊರಹೋದವರು ಕಾರಣ ಎನ್ನುವುದಕ್ಕಿಂತ ಶಾಸಕರ ತಪ್ಪು ನಿರ್ಧಾರಗಳು ಕಾರಣ. ಶಿವಶಂಕರರೆಡ್ಡಿರವರು ಐದಾರು ವರ್ಷಗಳಿಂದ ಗೌರಿಬಿದನೂರಿಗೆ ತಂದುಕೊಂಡಿರುವ ವಿವಿಧ ಇಲಾಖೆಗಳ ಕೆಲವು ಅಧಿಕಾರಿಗಳು ಜನರನ್ನು ರಕ್ತ ಪಿಶಾಚಿಗಳಂತೆ ಕಾಡುತ್ತಿದ್ದಾರೆ. ಒಬ್ಬ ವೈದ್ಯ ಅಥವಾ ಒಬ್ಬ ಶಿಕ್ಷಕ ಒಂದೇ ಸ್ಥಳದಲ್ಲಿ ಹಲವಾರು ವರ್ಷಗಳು ಕಾರ್ಯನಿರ್ವಹಿಸುತ್ತಿದ್ದರೆ ಆತ ತನ್ನ ಕಾರ್ಯತತ್ಪರತೆಯಲ್ಲಿ ಜನಪರತೆ ರೂಢಿಸಿಕೊಂಡಿದ್ದಾನೆಂದು ಅರ್ಥ. ಆದರೆ ಒಬ್ಬ ಪೊಲೀಸ್ ಅಧಿಕಾರಿ ಒಂದೇ ತಾಲ್ಲೂಕಿನಲ್ಲಿ ಈ ಠಾಣೆಯಿಂದ ಆ ಠಾಣೆಗೆ ಕುರ್ಚಿ ಆಟ ಆಡುತ್ತಿದ್ದರೆ ಆತ ಅತ್ಯುತ್ತಮ ವ್ಯವಹಾರಿಕ ಡೀಲರ್ ಎಂದು ಅರ್ಥ. ಇಂಥಹ ಅಧಿಕಾರಿಗಳನ್ನು ಗೌರಿಬಿದನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿರುವುದು ಶಾಸಕರಾದ ತಾವು. ಇವತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ ಪಾವು-ಶಟಾಕುಗಳು ಚಾಕು ಚೂರಿ ಹಿಡಿದುಕೊಂಡು ತಾಲ್ಲೂಕು ಕಛೇರಿಗಳಲ್ಲಿ ಬಡಿದಾಡುವಂತಹ ಸನ್ನಿವೇಶಗಳು ಸೃಷ್ಟಿಯಾಗಿದೆ. ಈ ಹಿಂದೆ ಇದ್ದಂತಹ ಹಲವಾರು ಪೊಲೀಸ್ ಅಧಿಕಾರಿಗಳು ಕ್ರಿಮಿನಲ್ ಚಟುವಟಿಕೆಗಳನ್ನು ಮಟ್ಟಹಾಕುತ್ತಿದ್ದರು. ಆದರೆ ಈಗ ಹಲವಾರು ವರ್ಷಗಳಿಂದ ಇಲ್ಲೇ ಬೇರೂರಿಕೊಂಡಿರುವ ಪೊಲೀಸ್ ಅಧಿಕಾರಿ ತಾಲ್ಲೂಕಿನಾಧ್ಯಂತ ಕ್ರಿಮಿನಲ್‍ಗಳನ್ನು ಬೆಳೆಸುತ್ತಿದ್ದಾರೆ. ಅವರ ಜೊತೆ ವೇದಿಕೆಗಳನ್ನು ಹಂಚಿಕೊಳ್ಳುತ್ತಾರೆ, ಹುಟ್ಟಿದ ಹಬ್ಬಗಳನ್ನು ಆಚರಣೆ ಮಾಡುತ್ತಾರೆ, ಯಾರಾದರೂ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಾದ ತಮಗೆ ಈತನ ಬಗ್ಗೆ ದೂರಿದರೆ, ಅವರನ್ನು ಇನ್ನಿಲ್ಲದಂತೆ ಕಾಡುವ ಪೊಲೀಸ್ ಅಧಿಕಾರಿಯನ್ನು ತಾವು ಬಹಳ ಜೋಪಾನವಾಗಿ ಇರಿಸಿಕೊಂಡಿದ್ದೀರಿ. ಇವತ್ತು ಈ ಪೊಲೀಸ್ ಅಧಿಕಾರಿಯಿಂದ ಇಡೀ ತಾಲ್ಲೂಕಿನಾದ್ಯಂತ ಕ್ರೈಂ ರೇಟ್ ಬೆಳೆದುನಿಂತಿದೆ. ಕಳೆದ 3-4 ತಿಂಗಳಿಂದ ಕೊರೋನ ಗೌರಿಬಿದನೂರಿನಲ್ಲಿ ನಾಗರೀಕರನ್ನು ಬೆಚ್ಚಿಬೀಳಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ ಪಕ್ಕದ ಹಿಂದೂಪುರದಲ್ಲಿ ಧಾರಾವಿಯಂತೆ ಕೊರೋನ ತನ್ನ ರುದ್ರನರ್ತನ ಮಾಡುತ್ತಿದ್ದರೂ, ಹಿಂದೂಪುರದಿಂದ ಗೋಮಾಂಸ ಬರುವುದನ್ನು ತಡೆಯುವಲ್ಲಿ ಗೌರಿಬಿದನೂರು ಪೊಲೀಸ್‍ರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇಡೀ ತಾಲ್ಲೂಕಿನ ಪೊಲೀಸ್ ವ್ಯವಸ್ಥೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಖತರ್ನಾಕ್ ಪೊಲೀಸ್ ಅಧಿಕಾರಿ ಕಂ ರಾಜಕಾರಣಿ ಶಿವಶಂಕರರೆಡ್ಡಿಯವರ ರಾಜಕೀಯ ಬೇರುಗಳನ್ನು ಕತ್ತರಿಸುವಲ್ಲಿ ಬಹುತೇಕ ಯಶಸ್ವಿಯಾಗಿರುವುದು ಜನಜನಿತ. ಈ ಪೊಲೀಸ್ ಅಧಿಕಾರಿ ಬಂದಾಗಿನಿಂದ ಒಬ್ಬೇ ಒಬ್ಬ ಕಾಂಗ್ರೆಸ್ ಕಾರ್ಯಕರ್ತನಿಗೆ ಕಾನೂನು ಬದ್ದವಾಗಿ ಸಹಾಯ ಮಾಡಿರುವ ಒಂದು ಉದಾಹರಣೆ ಅಥವಾ ಒಂದು ಹೆಸರನ್ನು ನೀವು ಹೇಳಬಲ್ಲಿರಾ ಶಿವಶಂಕರರೆಡ್ಡಿಯವರೇ? ಕಾರ್ಯಕರ್ತರ ಆಕ್ರೋಶ ಕಾದ ಕಾವಲಿಯಂತಾಗಿದೆ. ಶಿವಶಂಕರರೆಡ್ಡಿಯವರಿಗೆ ನಿಜಕ್ಕೂ ಆಪತ್ತು ಬರುವುದು ಇಲ್ಲೇ. ಕಾಂಗ್ರೆಸ್ ಕಾರ್ಯಕರ್ತರ ಧ್ವನಿಯನ್ನು ಸಂಪೂರ್ಣ ಹೊಸಕಿಹಾಕಿರುವ ಈ ಪೊಲೀಸ್ ಅಧಿಕಾರಿಯನ್ನು, ಗೌರಿಬಿದನೂರಿನಲ್ಲಿಯೇ ಇರಿಸಿಕೊಳ್ಳಲು ನಿಮಗಿರುವ ಅಂಥಹ ಬಲವಾದ ಒತ್ತಡವಾದರೂ ಯಾವುದು ಶಿವಶಂಕರರೆಡ್ಡಿಯವರೇ? ಅದು ನಿಮ್ಮ ಪಾಲಿನ “ಶನಿ” ರೂಪದ ಬಲಗೈ ಬಂಟನೇ ಕಾರಣ ತಾನೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಗರಗೆರೆ ಹೋಬಳಿಯಲ್ಲಿ ಕೇಶವರೆಡ್ಡಿಯವರು ಅತ್ಯಧಿಕ ಮತಗಳು ಕೊಡಿಸದಿದ್ದಲ್ಲಿ ನೀವು ಅವತ್ತೇ ಸೋಲನುಭವಿಸುತ್ತಿದ್ದಿರಿ ಅಲ್ಲವೇ. ಇಂಥಹ ಸರಳ ಸತ್ಯವನ್ನು ಅರ್ಥಮಾಡಿಕೊಳ್ಳದ ಶಿವಶಂಕರರೆಡ್ಡಿ ರವರು ತಮ್ಮ ರಾಜಕೀಯ ವೈರಿಗಳನ್ನು ಹೇಗೆ ಮಣಿಸಲು ಸಾಧ್ಯ? ಇಂಥಹ ಅಧಿಕಾರಿಯನ್ನು ಇಲ್ಲೇ ಇರಿಸಿಕೊಳ್ಳಲು ಕಾರಣವಾಗಿರುವ ತಮ್ಮ ಬಂಧು, ಬಲಗೈ ಬಂಟ ಶಿವಶಂಕರರೆಡ್ಡಿ ರವರಿಗೆ ರಾಜಕೀಯ ಭವಿಷ್ಯವನ್ನು ಮುಗಿಸಿಬಿಡುವ ಹುನ್ನಾರವನ್ನು ಚಾಣಾಕ್ಷರೆಂದು ಕರೆಸಿಕೊಳ್ಳುವ ಶಾಸಕರಿಗೆ ಅರ್ಥವಾಗದಿರುವುದು ಶೋಚನೀಯ. ಇವತ್ತು ತಮ್ಮ ಪಡಸಾಲೆಯನ್ನು ಎದ್ದುಹೋಗುತ್ತಿರುವ ಪ್ರತಿಯೊಬ್ಬರೂ ದೂರುತ್ತಿರುವುದು ನಿಮ್ಮ ಬಂಧುವನ್ನೇ ಹೊರತು, ನಿಮ್ಮನ್ನಲ್ಲ. ಆದಾಗ್ಯೂ ನಿಮ್ಮ ಜಾತಿ ಪ್ರೇಮ ನಿಮ್ಮನ್ನು ನುಂಗುತ್ತಿರುವುದು ವಿಷಾದನೀಯ. ಶಿವಶಂಕರರೆಡ್ಡಿಯವರೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೀವು ಒಂದೊಮ್ಮೆ ಸೋತರೆ ಅದಕ್ಕೆ ನೀವು ಮತ್ತು ನಿಮ್ಮ ಸಜ್ಜನ ಪ್ರೇಮವೇ ಹೊರತು ಯಾವ ಪುಟಗೋಸಿಗೌಡನೂ, ಯಾವ ಪುಂಗಿದಾಸರೂ ಕಾರಣರಲ್ಲ. ನೇರವಾಗಿ ಖತರ್ನಾಕ್ ಪೊಲೀಸ್ ಅಧಿಕಾರಿ ಕಂ ರಾಜಕಾರಣಿ ಮತ್ತು ನಿಮ್ಮ ಬಲಗೈ ಬಂಟರಿಬ್ಬರು ಅರ್ಥಾತ್ ರಾಹು-ಶನಿಗಳು ಕಾರಣ. ಮುಂದಿನ ಚುನಾವಣೆಯಲ್ಲಿ ಗೆದ್ದು ಶಾಸಕರು, ಸಚಿವರಾಗಿ ರಾಜ್ಯದಲ್ಲಿ ತಮ್ಮ ಛಾಪನ್ನು ಮೂಡಿಸುವಿರೋ ಅಥವಾ ತಮ್ಮ ಮೊಮ್ಮಗನೊಂದಿಗೆ ಸಂದ್ಯಾಕಾಲವನ್ನು ಕಳೆಯುವಿರೋ ತೀರ್ಮಾನ ನಿಮ್ಮದೇ.