ಪ್ರಧಾನಿ ಪಟ್ಟ ಸಿಗದಿದ್ದರೂ, ಉಪ ಪ್ರಧಾನಿ ಪಟ್ಟಕ್ಕೆ ಪಟ್ಟು : ದಕ್ಷಿಣ ಭಾರತದ ನಾಯಕರ ಒಕ್ಕೊರಲ ನಿರ್ಧಾರ?

ಪ್ರಧಾನಿ ಪಟ್ಟ ಸಿಗದಿದ್ದರೂ, ಉಪ ಪ್ರಧಾನಿ ಪಟ್ಟಕ್ಕೆ ಪಟ್ಟು : ದಕ್ಷಿಣ ಭಾರತದ ನಾಯಕರ ಒಕ್ಕೊರಲ ನಿರ್ಧಾರ?

ಒಂದು ವೇಳೆ ಅತಂತ್ರ ಲೋಕಸಭೆ ಸೃಷ್ಟಿಯಾಗಿ ದಕ್ಷಿಣದವರು ಪ್ರಧಾನಿ ಎಂಬುದು ಮುನ್ನೆಲೆಗೆ ಬಂದು ಕೊನೇ ಕ್ಷಣದಲ್ಲಿ ಅದು ಸಾಧ್ಯವಾಗದಿದ್ದರೂ ಉಪಪ್ರಧಾನಿ ಪಟ್ಟವನ್ನಂತೂ ಬಿಡಲೇಬಾರದೆಂಬ ಹಠ ತೊಟ್ಟು ಅದಕ್ಕೆ ತಕ್ಕಂತೆ ಚುರುಕಿನ ಚಟುವಟಿಕೆಗಳಲ್ಲಿ ದಕ್ಷಿಣ ಭಾರತದ ನಾಯಕರು ಭಾಗಿಯಾಗಿದ್ದಾರೆ.

 ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, ಫೆಡರಲ್ ಫ್ರಂಟ್ ಹೆಸರಲ್ಲಿ ದಕ್ಷಿಣ ಭಾರತ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ನಾಯಕರನ್ನೆಲ್ಲ ಒಗ್ಗೂಡಿಸುವ ಯತ್ನ ಮಾಡುತ್ತಿದ್ದಾರೆ. ಇದಕ್ಕೆ ಸಕಾರಾತ್ಮಕತೆ ಇದ್ದಷ್ಟೇ ನಕಾರಾತ್ಮಕತೆಯೂ ಇದೆ.

 ಆಂಧ್ರದಲ್ಲಿಯೇ ಟಿಎಸ್ಆರ್ ಪಕ್ಷದ ಜಗನ್ ಬರುವರೊ, ಬಿಜೆಪಿಗೆ ಹೋಗುವರೋ ಗೊತ್ತಿಲ್ಲ. ತಮಿಳುನಾಡಿನ ಸ್ಟಾಲಿನ್ ಮಾತ್ರ ರಾಹುಲ್ ಜತೆಯೇ ಇರುವುದಾಗಿ ಸದ್ಯಕ್ಕೆ ಹೇಳಿಯಾಗಿದೆ. ಕರ್ನಾಟಕದ ಜನತಾದಳದ ದೇವೇಗೌಡರೂ ಕೂಡ ರಾಹುಲ್ ಪರವಾಗಿದ್ದಾರೆ. ಹೀಗಾಗಿ ಕೊನೇ ಕ್ಷಣದಲ್ಲಿ ದಕ್ಷಿಣದವರೇ ಪ್ರಧಾನಿ ಎಂಬ ಜಾಕ್ಪಾಟ್ ಹೊಡೆಯದಿರಬಹುದು. ಆದರೂ ಪಟ್ಟು ಬಿಡದೆ ಉಪ ಪ್ರಧಾನಿ ಹುದ್ದೆಯನ್ನಾದರೂ ಪಡೆದೇ ತೀರಬೇಕು ಎಂಬ ನಿರ್ಣಯಕ್ಕೆ ಬರಲಾಗಿದೆ.

 ತಾನು ಮತ್ತು ತನ್ನ  ಜತೆ ನಿಲ್ಲುವ ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳ ಬೆಂಬಲವನ್ನ ರಾಷ್ಟ್ರ ಮಟ್ಟದಲ್ಲಿ ಯಾವ ದೋಸ್ತಿ ಕೂಟಕ್ಕೆ ಕೊಟ್ಟರೂ, ಉಪ ಪ್ರಧಾನಿ ಸ್ಥಾನಕ್ಕೆ ಚಂದ್ರಶೇಖರರಾವ್ ಪಟ್ಟು ಹಿಡಿಯುವ ಸಾಧ್ಯತೆಗಳಿದ್ದು, ನಿಟ್ಟಿನಲ್ಲಿ ಅವರು ಮತ್ತಷ್ಟು ಕಾರ್ಯೋನ್ಮುಖರಾಗಿದ್ದಾರೆ. ಎನ್ಡಿಎ ಅಥವಾ ಯುಪಿಎ ಅಥವ ಮಹಾಘಟಬಂಧನ್ ಯಾರೇ ಪ್ರಧಾನಿಯಾದರೂ, ಉಪ ಪ್ರಧಾನಿ ಪಟ್ಟ ದಕ್ಷಿಣ ಭಾಗದವರಿಗೆ ದಕ್ಕುವಂಥ ಸಾಧ್ಯತೆ ಗರಿಗೆದರುತ್ತಿವೆ.