ಅಭಿನಂದನ್ ವಿಂಗ್ ಕಮಾಂಡರ್ ಆಗಿರುವ ವಾಯುಪಡೆ ಸಮವಸ್ತ್ರಕ್ಕೆ ಮಿಗ್-21 ನೆನಪಿನ ಬ್ಯಾಡ್ಜ್

ಅಭಿನಂದನ್ ವಿಂಗ್ ಕಮಾಂಡರ್ ಆಗಿರುವ ವಾಯುಪಡೆ ಸಮವಸ್ತ್ರಕ್ಕೆ ಮಿಗ್-21 ನೆನಪಿನ ಬ್ಯಾಡ್ಜ್

ಬೆಂಗಳೂರು: ಮಿಗ್‌-21 ಯುದ್ಧವಿಮಾನ ತಂಡದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ ನೆನಪಿಗೆ ಮಿಗ್‌-21 ಯುದ್ಧವಿಮಾನ ಚಿತ್ರವುಳ್ಳ ‘‍ಫಾಲ್ಕನ್‌ ಸ್ಲೈಯರ್‌’ (ಹದ್ದಿನ ಕಣ್ಣಿನ ಹಂತಕ) ಮತ್ತು ಅಮ್ರಾಮ್ ದಾಗರ್ಸ್ ಎನ್ನುವ ಹೆಸರಿರುವ ಬ್ಯಾಡ್ಜ್‌ ಅನ್ನು ವಾಯುಪಡೆ ತಯಾರಿಸಿದೆ.

ಕಳೆದ ಫೆಬ್ರವರಿ 27 ರಂದು ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರು ಭಾರತದ ವಾಯುಗಡಿ ಪ್ರವೇಶಿಸುತ್ತಿದ್ದ ಪಾಕಿಸ್ತಾನದ ಎಫ್‌-16  ಯುದ್ದ ವಿಮಾನವನ್ನು ತಮ್ಮ ಮಿಗ್‌-21 ವಿಮಾನದಿಂದ ಯಶಸ್ವಿಯಾಗಿ ಹೊಡೆದುರುಳಿಸಿದ್ದರು. ಈ ಹೋರಾಟದ ಸಂದರ್ಭದಲ್ಲಿ ಅಭಿನಂದನ್ ಪಾಕಿಸ್ತಾನದ ವಾಯುಗಡಿ ಪ್ರವೇಶಿಸಿದಾಗ ಪಾಕ್‌ ಸೇನೆ ಅಭಿನಂದನ್‌ ಯುದ್ದ ವಿಮಾನವನ್ನೂ ಹೊಡೆದುರುಳಿಸಿತ್ತು. ಯುದ್ದ ವಿಮಾನ ನಾಶವಾದಾಗ ಪಾಕ್‌ ನೆಲದಲ್ಲಿ ಬಿದ್ದಿದ್ದ ಅಭಿನಂದನ್‌ ಅವರನ್ನು ಪಾಕ್‌ ಸೇನೆ ಬಂಧಿಸಿ ಎರಡು ದಿನಗಳ ಬಳಿಕ ಬಿಡುಗಡೆಗೊಳಿಸಿತ್ತು. ಇದೀಗ ಅಭಿನಂದನ್‌ ಅವರ ಸಾಹಸ ಕಾರ್ಯ ಇತರ ಸಿಬ್ಬಂದಿಗಳಿಗೂ ಪ್ರೇರಣೆ ಆಗಲಿ ಎಂದು ಮಿಗ್‌-21 ನೆನಪಿನ ಬ್ಯಾಡ್ಜ್‌ ಅನ್ನು ಮಿಗ್‌-21 ವಿಮಾನದ 51 ನೇ ವಾಯುತಂಡದ ಸಮವಸ್ತ್ರಕ್ಕೆ ಅಳವಡಿಸಲಾಗಿದೆ.

ಬಟ್ಟೆಯಿಂದ ರಚಿಸಿರುವ ಬ್ಯಾಡ್ಜ್‌ನಲ್ಲಿ ಮಿಗ್‌-21 ವಿಮಾನ ಚಿತ್ರವನ್ನು ಮುನ್ನೆಲೆಯಲ್ಲಿ ಚಿ‍ತ್ರಿಸಲಾಗಿದೆ. ಇದೇ ಬ್ಯಾಡ್ಜ್‌ನಲ್ಲಿ ಪಾಕಿಸ್ತಾನದ ಅಮ್ರಾಮ್‌ ಡಾಡ್ಜ್‌ ಎನ್ನುವ ಕ್ಷಿಪಣಿಯ ಗುರಿ ತಪ್ಪಿಸಿ ಹಾರುವಲ್ಲಿ ಯಶಸ್ವಿಯಾದ ಸುಕೋಯ್‌-30 ಯುದ್ಧವಿಮಾನದ ಹೆಸರನ್ನೂ ಉಲ್ಲೇಖಿಸಿದ್ದಾರೆ. ಈ ಬ್ಯಾಡ್ಜ್ ನ್ನು ಸಮವಸ್ತ್ರದ ತೋಳಿನ ಭಾಗದಲ್ಲಿ ಹಾಕಲಾಗುತ್ತದೆ.

ಹೊಸ ಬ್ಯಾಡ್ಜ್‌ ಕುರಿತಂತೆ ಪ್ರತಿಕ್ರಿಯಿಸಿರುವ ಮಿಗ್‌-21 ತಂಡದ ಕ್ಯಾಪ್ಟನ್ ಹಾಗೂ ವಕ್ತಾರ ಅನುಪಮ್‌ ಬ್ಯಾನರ್ಜಿ ಅವರು ತಂಡ ಮಾಡಿರುವ ಸಾಧನೆಯನ್ನು ನೆನಪಿಸಲು ಇಂತಹ ಬ್ಯಾಡ್ಜ್ ಕೆಲವೊಮ್ಮೆ ಮಾಡಲಾಗುತ್ತದೆ ಎಂದಿದ್ದಾರೆ. ‘ಬ್ಯಾಡ್ಜ್‌ಗಳು ಹೊಸ ಪೈಲಟ್‌ಗಳಿಗೆ ಹೆಮ್ಮೆ ಉಂಟು ಮಾಡುತ್ತದೆ ಹಾಗೂ ಸಾಹಸಕ್ಕೆ ಪ್ರೇರಣೆಯಾಗುತ್ತದೆ ಎಂದು ಅನುಪಮ್‌ ಬ್ಯಾನರ್ಜಿ ಹೇಳಿದ್ದಾರೆ.

ಸೌರವ್‌ ಚೋರ್ಡಿಯಾ ಎನ್ನುವವರು ಹೊಸ ಬ್ಯಾಡ್ಜ್‌ನ ವಿನ್ಯಾಸಕರು. ಈ ಹಿಂದೆಯೂ ಭಾರತ ವಾಯುಪಡೆಯ ಇತರ ಯುದ್ಧವಿಮಾನ ತಂಡಗಳಿಗೂ ಸೌರವ್‌ ಬ್ಯಾಡ್ಜ್‌ ತಯಾರಿಸಿದ್ದರು.