ಬೇಟೆ 

  ಅಂಜನಾದ್ರಿ ಹಿಕ್ಕಿಮಗೆರೆ  

ಬೇಟೆ 

ಅಂದು ಸೋಮವಾರ. ರತ್ನಳ ಮನೆಯ ಮುಂದೆ ಜನರು ನೆರೆದಿದ್ದರು. ರತ್ನ ಬೋರಾಡಿ ಅಳುತ್ತಿದ್ದಳು.  ಅವಳ ಕೈಯಲ್ಲಿರುವ  ಆರು ತಿಂಗಳ ಮಗು ಕೂಡ ಕಿರುಚಿ ಅಳುತ್ತಿತ್ತು. “ಅಯ್ಯೋ ಎಂತಹ ಕೆಲಸ ಆಗೋಯಿತು” ಎಂದು ಜನರ ಮನ ಮರುಗುತ್ತಿದ್ದವು. ಅವನ ಜೊತೆಗಿದ್ದವರ ಮುಖಗಳು ಕಪ್ಪಾಗಿದ್ದವು.

ಬೆಳಗಟ್ಟಿಯಿಂದ ಬಂದಿದ್ದ ಮೈಲವ್ವ ರತ್ನಳ ಕೈಯನ್ನು ಹಿಡಿದುಕೊಂಡು; "ಏನಾಯಿತವ್ವ ಒಬ್ಬಬ್ಬರು ಒಂದೊಂದು ಮಾತನಾಡುತ್ತಾರೆ ಏನೂ ತಿಳಿವಲ್ದು, ಸೊಲ್ಪ ಬಿಡಿಸಿ ಹೇಳು" ಎಂದಳು. ರತ್ನ ತನ್ನ ಕಣ್ಣೀರ  ಹೊಳೆಯಲ್ಲೆ ದಡ ಹತ್ತುವ ಹಿಂದಿನ ನೆನಪುಗಳಿಗೆ ಜಾರಿದಳು. 

ನಿಂಗಪ್ಪನಿಗೆ  ಒಬ್ಬಳೇ ಮಗಳು. ಅವಳೇ  ರತ್ನ. ಈತನಿಗೆ ಎರಡು ಎಕರೆ ಭೂಮಿ . ಮಳೆ ಚೆನ್ನಾಗಿ ಬಂದಿತ್ತು. ಅದರಿಂದ ಬಂಪರ್ ಬೆಳೆ ಬೆಳೆದಿತ್ತು. ಕೈತುಂಬಾ ದುಡ್ಡು ಓಡಾಡುತ್ತಿತ್ತು. ಮಗಳಿಗೆ ನಾಲ್ಕಾರು ಒಳ್ಳೆಯ ಬಟ್ಟೆಗಳನ್ನು ಕೊಡಿಸಿದ್ದನು. ಓದಿಸುವ ಯಾವ ಯೋಚನೆ ಇಲ್ಲದಿದ್ದರೂ, ಒಳ್ಳೆಯ ಗಂಡು ನೋಡಿ ಮದುವೆ ಮಾಡಬೇಕು ಎನ್ನುವ ಹಂಬಲವಿತ್ತು. ಆದ್ದರಿಂದ ಹಲವಾರು ಕಡೆ ಗೆಳೆಯರೊಡನೆ 'ನನ್ನ ಮಗಳಿಗೆ ಒಳ್ಳೆಯ ಮನೆತನದ ಗಂಡು ಇದ್ದರೆ ಹೇಳಿ' ಎಂದು ವಿನಂತಿಸಿಕೊಳ್ಳುತ್ತಿದ್ದನು. ಮಗಳನ್ನು ತುಂಬಾ ಮುದ್ದು ಮುದ್ದಾಗಿ ಬೆಳೆಸಿದ್ದನು. 

ಅಂಥವಳು 'ಬಸವ ಜಯಂತಿ' ದಿವಸ 'ಕಡೇಮನೆ’ ಹರಿಯ ಜೊತೆ ಓಡಿ ಹೋಗಿ ತಾಳಿಕಟ್ಟಿಸಿಕೊಂಡು ಮನೆಗೆ ಬಂದಿದ್ದಳು. ಮಗಳು ಬಂದ ರೀತಿಯನ್ನು ಗಮನಿಸಿದ ಅಪ್ಪ ಗಾಬರಿಬಿದ್ದನು. 

ಈ ರೀತಿ ಮಗಳು ಗಂಡನನ್ನು ಕರೆದುಕೊಂಡು ಬಂದಿದ್ದ ಆ ಕ್ಷಣ ಯಾವ ತಂದೆ ತಾಯಿಗಳಿಗೂ ಸಂತೊಷವಾಗುವುದಿಲ್ಲ. ಅವಳು ಮಾಡಿರುವ ಕೆಲಸಕ್ಕೆ ಸಿಟ್ಟು  ಬಂದಿತು. ಇವರನ್ನು ಕೊಂದುಬಿಡಬೇಕು ಎಂದೆನಿಸಿತು. ಮೂಲೆಯಲ್ಲಿರುವ ಕೊಡಲಿ, ಕುಡುಗೋಲಿಗೆ ಬಾರಾಡಿದನು. ಆದರೆ ಸಾಧ್ಯವಾಗಲಿಲ್ಲ.... ಆ ಕ್ಷಣದ ಕೋಪವನ್ನು ನುಂಗಿಕೊಂಡನು. ಬಾಗಿಲಿಗೆ ಬಂದ ನವ ವಧು ವರರನ್ನು ಬಾಗಿಲಲ್ಲೆ ನಿಲ್ಲಿಸಿ...  'ಇನ್ನು ಮುಂದೆ ಈ ಮನೆಯಲ್ಲಿ ಜಾಗವಿಲ್ಲ ನಡೆ' ಎಂದು ಅವಳ ಬಟ್ಟೆ ಬರೆಯನ್ನು ಮನೆಯಿಂದ ಆಚೆಗೆ ಎಸೆದನು. 'ಇಂದಿಗೆ ನನ್ನ ನಿನ್ನ  ಸಂಬಂಧ ಮುಗಿದು ಹೋಯಿತು. ನನ್ನ ಮಗಳು ಸತ್ತ್ಹೋದಳು' ಎಂದು ತನ್ನ ಸಿಟ್ಟು ಹೊರ ಹಾಕಿದನು. ಮಗಳೆಂಬ ಮಮಕಾರವಿಲ್ಲದೆ ಬಯ್ಯುತ್ತ ತನ್ನ ತಲೆಯ ಮೇಲೆ ನೀರು ಸುರಿದುಕೊಂಡನು. ದೇವರ ಫೋಟೋದ ಮುಂದೆ ಹೋಗಿ ದೀಪ ಹಚ್ಚಿದನು. ಹರಿಯ ಕಡೆ ನೋಡಿ 'ಅಯ್ಯೋ ಪಾಪ ಅನಾಥ... ಎಂದು ಕರೆದು ಕೆಲಸ ಕೊಟ್ರೆ ಬೆನ್ನ್ ಗೆ  ಚೂರಿ ಹಾಕಿದೆಯಾ, ಪರ್ದೇಶಿ" ಎಂದು ಕೂಗಾಡಿ ರಂಪಾಟ ಮಾಡಿದನು.

ಅಪ್ಪ  ಕ್ಷಮಿಸಬಹುದು, ಹರಿಯನ್ನು ಒಪ್ಪಿಕೊಳ್ಳಬಹುದು ಎಂಬ ರತ್ನಳ ನಿರೀಕ್ಷೆ ಹುಸಿಯಾಯಿತು. ಅಳುತ್ತ ಗಂಡನನ್ನು ಕರೆದುಕೊಂಡು 'ಕಡೇಮನೆ'ಯ ಕಡೆ ಹೆಜ್ಜೆ ಹಾಕಿದಳು.

ಹರಿಗೆ ತಂದೆ ತಾಯಿ, ಬಂಧು, ಬಳಗ, ಕುಲ, ಗೋತ್ರ  ಏನೂ  ಗೊತ್ತಿರಲಿಲ್ಲ.  ಎಲ್ಲಿಂದಲೋ ಬಂದವನು.  ಇಲ್ಲಿಗೆ ಬಂದ ಮೇಲೆ ಅವರಿವರ ಹೊಲಗಳಲ್ಲಿ ಮೈಮುರಿದು ಕೂಲಿಕೆಲಸ ಮಾಡುತ್ತಿದ್ದನು. ಕೂಲಿಯಿಂದ ಬಂದ  ದುಡ್ಡಿನಲ್ಲಿ ಊರ ಕೊನೆ ಭಾಗದಲ್ಲಿ ಸಣ್ಣದಾಗಿ ಜಾಗ ತೆಗೆದುಕೊಂಡನು. ಅಲ್ಲಿ ವಾಸಿಸಲು ಗುಡಿಸಲೊಂದನ್ನು ಕಟ್ಟಿಕೊಂಡಿದ್ದನು. ಹಾಗಾಗಿ 'ಕಡೇಮನೆ ಹರಿ’ ಎಂದೇ ಹೆಸರಾಗಿದ್ದನು. ನೋಡಲು ಗಿಡ್ಡಾಳು, ಸುಂದರ ಮೈಕಟ್ಟು, ಗುಂಗರಗೂದಲು.  ಸುಂದರವಾಗಿದ್ದನು. ಊರ ಹುಡುಗರೊಂದಿಗೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದನು. ಊರಿನ ಗೆಳೆಯರೊಂದಿಗೆ ಪ್ರತಿ ಭಾನುವಾರ ನಲವತ್ತು,  ಐವತ್ತು ಕಿಲೋಮೀಟರ್ ದೂರಕ್ಕೆ ಬೇಟೆಗೆ ಹೋಗುತ್ತಿದ್ದನು. ಮಾಚಾಪುರ, ಕಲ್ಲಾಪುರ, ಕಂಚಿಕಟ್ಟೆ, ದರಿಕಟ್ಟೆಗೆ, ಹೋಗಿ ಹಂದಿ, ಮೋಲ,ಪುರುಡಿ, ಉಡ, ಕವುಜ;  ಏನಾದರೊಂದು ತರಹದ ಬೇಟೆಯಾಡಿ ತಂದೇ ತರುತ್ತಿದ್ದರು. ಹೀಗೆ ಹರಿ ಒಂದಲ್ಲಾ ಒಂದು ಕೆಲಸವನ್ನು ಮಾಡುತ್ತಲೇ ಇರುತ್ತಿದ್ದನು. ಯಾವುದೇ ಚಟಗಳಿರಲಿಲ್ಲ. ಇಂಥವನ ಮೇಲೆ ರತ್ನಳ ಕಣ್ಣು ಬಿತ್ತು. ಒಳಗೊಳಗೇ ಪ್ರೀತಿಸಲು ಶುರುಮಾಡಿದಳು.

ಒಮ್ಮೆ ಅವರ ಹೊಲದಲ್ಲಿ ಕೆಲಸ ಮಾಡುವಾಗ, ಅವನ ಹಿಂದಿದೆಯೇ ಓಡಾಡುತ್ತಿರುವುದನ್ನು ಹರಿ ಗಮನಿಸಿದ್ದನು. 'ನೀನು ಈ ರೀತಿ ಮಾಡುವುದು ಸರಿಯಲ್ಲ' ಎಂದು  ಎರಡು ಮೂರು ಬಾರಿ ಹೇಳಿದ್ದನು.  ಇದ್ಯಾವುದನ್ನೂ   ಲೆಕ್ಕಿಸದೇ 'ನಾನು ಮದುವೆ ಎನ್ನುವುದು ಆದ್ರೆ ನಿನ್ನನ್ನೇ , ನೀನು ಮದುವೆ ಆಗದಿದ್ದರೆ ವಿಷ ಕುಡಿದು ಸಾಯುತ್ತೇನೆ' ಎಂದು  ಭಯಪಡಿಸುತ್ತಿದ್ದಳು. ಹೀಗೆ ಭಯ ಬೀಳಿಸಿ,  ಹರಿಯನ್ನು ಒಪ್ಪುವಂತೆ ಮಾಡಿದ್ದಳು. ಆಮೇಲೆ ಆಗಾಗ ಹೊಲದಲ್ಲೇ ಸೇರಿದ್ದರು. ಮುಂದಿನ ಭವಿಷ್ಯದ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು. ಅಪ್ಪ ನನಗೆ ಗಂಡು ನೋಡಲು ಗುಡಿಕೇರಿಗೆ ಹೋಗಿದ್ದಾನೆ ಎನ್ನುವುದನ್ನು ತಿಳಿದು ರತ್ನ ಆತಂಕಗೊಂಡಿದ್ದಳು. ಈ ವಿಚಾರವನ್ನು ಹರಿ ಹತ್ರಾನೂ ಹೇಳಿದಳು. 'ನೋಡೋಣ ಏನಾಗುತ್ತದೆ' ಎಂದು ಹರಿ ರತ್ನಳನ್ನು ಸಮಾಧಾನ ಮಾಡಿ ಮನೆಗೆ ಕಳಿಸಿದನು. ಮನೆಗೆ ಬಂದಾಗ ನಿಂಗಪ್ಪ ಗುಡಿಕೇರಿ ಹುಡುಗನ ಬಗ್ಗೆ ತನ್ನ ಸ್ನೇಹಿತರ ಹತ್ತಿರ ಹೇಳುತ್ತಿದ್ದನು. 'ಹುಡುಗ ಚೆನ್ನಾಗಿದ್ದಾನೆ. ಪಿ ಯು ಸಿ ಓದಿದ್ದಾನೆ. ಮನೆ ಕಡೆ ಚೆನ್ನಾಗಿದ್ದಾರೆ.ನಾಳೆ ಅಥವಾ ನಾಡಿದ್ದು ಮನಿಗೆ ಬಂದು, ಹುಡುಗಿಯನ್ನು ನೋಡಿ ಒಪ್ಪಿಗೆಯಾದರೆ ಮುಂದಿನ ಮಾತುಕತೆ ಮಾತಾಡೋಣ ಎಂದು ಹೇಳಿದ್ದೇನೆ' ಎಂಬ ಅಪ್ಪನ ಮಾತುಗಳ ಕೇಳಿದ ಮೇಲೆ ರತ್ನಳ ಮನಸಿನ ಉದ್ವೇಗಕ್ಕೆ ಮತ್ತಷ್ಟು ಕಾರಣವಾಯಿತು. ಇನ್ನು ಸುಮ್ಮನಿದ್ದರೆ ಅಪ್ಪ ಮದುವೆ ಮಾಡಿಬಿಡ್ತಾನೆ  ಎಂದು ಮನಸಿನಲ್ಲೇ ಅಂದುಕೊಂಡಳು. ಮುಂದಿನ ನಿರ್ಧಾರಗಳನ್ನು ಸಿದ್ದಪಡಿಸಿದಳು. ಅವಳ ನಿರ್ಧಾರದಂತೆಯೇ ಮದುವೆ ಆಗಿ ಹೋಯಿತು.

ಈಗ ರತ್ನ ಹರಿಯ ಮನೆಯಲ್ಲಿ ತನ್ನ ಹೊಸ ಜೀವನವನ್ನು ಆರಂಭಿಸಿದಳು. ಇರುವುದು ಹುಲ್ಲು ಗುಡಿಸಲಲ್ಲಾದರೂ  ಮನಸ್ಸು ನೆಮ್ಮದಿಯಿಂದಿತ್ತು.
ಯಾರ ಸಹಾಯವೂ ಇಲ್ಲದೆ ಜೀವನವನ್ನು ಎದುರಿಸಲು ಸಿದ್ಧಳಾದಳು. ಮನೆಗೆ ಟಿವಿ ತಂದನು. ಗಾಡ್ರೇಜ್ ತಂದನು. ಹಣ ಕೂಡಿಸಿ ಬಂಗಾರದ ಸರಮಾಡಿಸಿದ್ದನು. ಬಟ್ಟೆ ಬರೆ ಯಾವುದಕ್ಕೂ ಕಡಿಮೆ ಆಗದಂತೆ ನೋಡಿಕೊಂಡನು. ದಿನಗಳು ಉರುಳಿದವು. ಎರಡು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. 

ಈ ಎರಡು ವರ್ಷಗಳಲ್ಲಿ ನಿಂಗಪ್ಪ ಮಗಳ ಚಿಂತೆಯಲ್ಲೇ ಕಾಲ ಕಳೆದನು. ಹೆಂಡತಿ ಸತ್ತಾಗಲೂ ಇಷ್ಟು ಚಿಂತಿಸಿರಲಿಲ್ಲ, ದುಃಖಿಸಿರಲಿಲ್ಲ. ಮಗಳ ಚಿಂತೆಯಲ್ಲೇ ಹಾಸಿಗೆ ಹಿಡಿದನು. ಆಕೆ ಮಾಡಿದ ತಪ್ಪನ್ನು ಮನ್ನಿಸಲಾಗಲಿಲ್ಲ. "ಹೀಗೀಗೆ ಅಂತ ನನ್ನ ಹತ್ರ ಹೇಳಿದ್ದಿದ್ರೆ ನಾನೇನಾದರೂ ಮಾಡುತ್ತಿದ್ದೆ. ಅಷ್ಟು ಪ್ರೀತಿಯಿಂದ ಸಾಕಿದ್ದು ಇದುಕ್ಕೇನ? ನಾನು ಅವಳನ್ನು ಯಾವತ್ತಿಗೂ ಕ್ಷಮಿಸುವುದಿಲ್ಲ" ಎಂದು ಗಟ್ಟಿ ಮನಸ್ಸು ಮಾಡಿಕೊಂಡನು. 

ಎರಡು  ವರ್ಷ ಸರಿಯಾಗಿ  ಮಳೆ ಬಾರದೆ, ಬೆಳೆ ಇಲ್ಲದೆ, ಬೀಜ ಗೊಬ್ಬರಕ್ಕಾಗಿ ಮಾಡಿದ ಸಾಲ ಬೆನ್ನು ಹತ್ತಿತ್ತು.  ಸಾಲ ತೀರಿಸಲಾಗದೆ ಸಾಹುಕಾರ ಸಂಗಪ್ಪನಿಗೆ ಹೂಲ ಬರೆದು ಕೊಟ್ಟು ಹೊಲದ ಒಡ್ಡಿನಲ್ಲಿರುವ ಜಾಲಿ ಮರಕ್ಕೆ ಹಗ್ಗ ಹಾಕಿ ತನ್ನ ಕೊರಳ ಕೊಟ್ಟನು. ಸುದ್ದಿ ಕೇಳಿ ಮಗಳು 'ಅಪ್ಪ ಬದುಕಿದ್ದಾಗ ನಮ್ಮನ್ನು ಕ್ಷಮಿಸಲಿಲ್ಲ. ಆದರೂ ಪರವಾಗಿಲ್ಲ' ಎಂದುಕೊಂಡು ಗಂಡನ ಜೊತೆಗೆ ಹೋಗಿ ಅಂತಿಮ ವಿಧಿ ವಿಧಾನವನ್ನು ಮಾಡಿ ಮನೆಗೆ ಬಂದಳು. ನನ್ನ ಸಲುವಾಗಿ ಅಪ್ಪ ಚಿಂತೆಗೀಡಾಗಿ ಸತ್ತುಹೋದ ಎನ್ನುವ ನೋವು ರತ್ನಳನ್ನು ಕಾಡದಿರಲಿಲ್ಲ. ಸತ್ತು ಹೋದ ಅಪ್ಪ ಅವ್ವ  ಮಕ್ಕಳ ರೂಪದಲ್ಲಿ ಬರುತ್ತಾರೆ ಎಂಬ ನಿರೀಕ್ಷೆಯಂತೆ ಅವಳ ಗರ್ಭದಲ್ಲಿ ಭ್ರೂಣವೊಂದು ಗಟ್ಟಿಯಾಗತೊಡಗಿತು. ನವಮಾಸ ತುಂಬಿ ಗಂಡು ಮಗುವಿಗೆ ಜನುಮ ನೀಡಿದಳು. 

ಮಗುವಿಗೆ ಆರು ತಿಂಗಳಾಗಿದ್ದ ಸಮಯದಲ್ಲಿ, ಪ್ರತಿ ವಾರದಂತೆ ಈ ಭಾನುವಾರವೂ ದುರುಗಪ್ಪ, ರಾಜಣ್ಣ. ಹನುಮಂತ, ಅಂಜಣ್ಣ, ಮಾರಪ್ಪ, ಅಪ್ಪಣ್ಣ, ಶಂಭ, ನಾಗ. ವೆಂಕಟ ಹೀಗೆ ಹತ್ತಾರು ಹುಡುಗರು  ಗುಡಿ ಕಟ್ಟೆ ಹತ್ತಿರ ಸೇರಿದರು.  ದುರುಗಪ್ಪ  ‘ಕಂಚಿಕಟ್ಟೆ ಯಂಕಪ್ಪ ರಾತ್ರಿ ಫೋನ್ ಮಾಡಿದ್ದಂತೆ, ಹಂದಿಗಳ ಹಿಂಡು ಬಂದಿದ್ದಾವಂತೆ, ನಾಳೆ ಬನ್ನಿ ಅಂತ ಹೇಳ್ಯಾನಂತೆ. ಅದಕ್ಕೆ ಎಲ್ಲಾರು ನಾಳೆ ಬ್ಯಾಟ್ಗ್ಹೋಗಾಕ  ರಡಿಯಾಗಿ’ ಎಂದನು. ಎಲ್ಲರೂ ಒಪ್ಪಿ ತಮ್ಮ ತಮ್ಮ ಮನೆಗಳಿಗೆ ಹೋದ್ರು. ಬೇಟೆಗೆ ಹೊರಟರೆಂದರೆ ದೊಡ್ಡ ದೊಡ್ಡ ಎರಡು ಮೂರು ಬಲೆಗಳು, ನಾಕಾರು ಭರ್ಚಿಗಳು, ಐದಾರು ದೊಣ್ಣೆಗಳನ್ನು ಒಯ್ಯುತ್ತಿದ್ದರು. ಕಬ್ಬಿನ ಗದ್ದೆಗಳಲ್ಲಿ ಕಾಡು ಹಂದಿಗಳು ಹೊಕ್ಕಾಗ  ಗದ್ದೆಯ ಸುತ್ತ ಬಲೆಬಿಟ್ಟು, ಒಂದುಕಡೆಯಿಂದ ಮತ್ತೊಂದು ಕಡೆಗೆ ನಿಧಾನವಾಗಿ ಸದ್ದು ಮಾಡುತ ಹೋಗುತ್ತಿದ್ದರು. 

ಆ ಸದ್ದಿಗೆ ಮಲಗಿರುವ ಹಂದಿಗಳು ಎದ್ದು ಭಯದಿಂದ ಗದ್ದೆಯಿಂದ ಹೊರ ಬರಲು ಓಡಿದಾಗ ಬಲೆಗೆ ಬೀಳುತ್ತಿದ್ದವು. ಆಗ ಬಲೆಯಲ್ಲಿ ಬಿದ್ದ ಹಂದಿಗಳಿಗೆ ಚೂಪಾದ ಭರ್ಚಿಯನ್ನು ಹಾಕಿ ಸಾಯಿಸುವುದು; ಇಲ್ಲವೆ ಗಟ್ಟಿಯಾಗಿ ಹಿಡಿದು ಕಾಲುಗಳನ್ನು ಕಟ್ಟಿ ಹಾಕಿ ತರುವುದು; ಹೀಗೆ ಒಮ್ಮೊಮ್ಮೆ ಮೂರು ನಾಲ್ಕು ಹಂದಿಗಳನ್ನ ತಂದಿರುವ ಉದಾಹರಣೆಗಳಿವೆ. ಹೆಚ್ಚು ಹಂದಿಗಳನ್ನು ತಂದ ದಿವಸ ಹಲಗೆ ಬಡಿದು ಕೇರಿ ತುಂಬಾ ಮೆರವಣಿಗೆ ಮಾಡುತ್ತಿದ್ದರು.  ನಂತರ ಕೆರೆ ಕೋಡಿ ಹತ್ತಿರ ಹೋಗಿ ಚೆನ್ನಾಗಿ ಸುಡುತ್ತಿದ್ದರು. ಸುಟ್ಟ ಚರ್ಮವನ್ನು ಕೆರೆಯುತಿದ್ದರು.  ಆಮೇಲೆ ಕೊಯ್ದುತ್ತಿದ್ದರು. ಸುಟ್ಟ ಹಂದಿಯ ಚರ್ಮ ತಿನ್ನಲು  ಸಣ್ಣ ಸಣ್ಣ ಹುಡುಗರ ಗುಂಪು ಸೇರುತ್ತಿತ್ತು.  ತಿನ್ನುವಾಗ 'ಕೊಬ್ಬರಿ ಇದ್ದಂಗೈತೆ...'ಎಂದು ಖುಷಿ ಪಡುತ್ತಿದ್ದರು. ಕೊಯ್ದ ಮಾಂಸವನ್ನು  ಪಾಲು ಹಾಕಿ ಹಂಚಿಕೊಳ್ಳುತ್ತಿದ್ದರು. ಮನೆಗೆ ತೆಗೆದುಕೊಂಡು ಹೋದಾಗ ಕೆಲವರ ಮನೆಯಲ್ಲಿ ಹಬ್ಬವೇ ಹಬ್ಬ.

ರತ್ನ ತಿನ್ನುತ್ತಿದ್ದಿಲ್ಲ. ಆದರೆ ಹರಿ ಹೇಳಿದಂತೆ ಮಾಂಸ ಬೇಯಿಸುತ್ತಿದ್ದಳು. ಖಾರ ಮಸಾಲೆ ಹಾಕಿ ಸಾರು ಮಾಡಿ ಕೊಡುತ್ತಿದ್ದಳು. ಬೇಟೆ ಆದ ಮರು ದಿನ ಕೇರಿ ತುಂಬ ಹಂದಿ ಮಟನ್ ಸಾಂಬಾರ್ ವಾಸನೆಯೇ. ಬೆಳದಿಂಗಳ ರಾತ್ರಿ, ತಣ್ಣನೆ ಗಾಳಿಯಲ್ಲಿ ಅಂಗಳದಲ್ಲಿ ಕುಳಿತು, ರಾಗಿ ಮುದ್ದೆಗೆ ಸಾರು ಹಚ್ಚಿ, ನುಂಗುತಿದ್ದರೆ ಮುದ್ದೆಯ ಮೇಲೆ ಮುದ್ದೆ ಹೊಟ್ಟೆಗೆ ಇಳಿಯುತ್ತಿದ್ದವು. ಮಧ್ಯೆ ಮಧ್ಯೆ ತುಂಡು ಕಡಿಯುತ್ತಿದ್ದರೆ ಉಂಡಿದ್ದೇ ಗೊತ್ತಾಗುತ್ತಿರಲಿಲ್ಲ. ಉಂಡು ಮನೆಯೊಳಗೆ ಹೋಗಿ ದೀಪ ಆರಿಸಿದರು ಅಂದರೆ ಸ್ವರ್ಗವೇ ಅಲ್ಲಿರುತ್ತಿತ್ತು. ಒಮ್ಮೊಮ್ಮೆ ಬೇಟೆಗೆ ಹೋದಾಗ ಬರಿಗೈಲೇ ವಾಪಸ್ ಬಂದಿದ್ದ ದಿನಗಳೂ ಇವೆ.  
ಈ ಸಲ ಕಂಚಿಕಟ್ಟೆಯಲ್ಲಿ ಹಂದಿಗಳ ಹಿಂಡೇ ಇದೆಯಂತೆ. ಕನಿಷ್ಟ ಐದಾರೂ  ಹಂದಿಯನ್ನಾದರು ಹಿಡಿಯಬೇಕು ಎಂದು ಹುಡುಗರು ಚಡಪಡಿಸುತ್ತಿದ್ದರು. ಪ್ರತೀ ಬಾರಿಯಂತೆ  ಈ ಬಾರಿ ಗುರುವಾರ ಸಂಜೆ ಹೊರಟರು. ಬಲೆ, ಭರ್ಚಿ ಮತ್ತು ದೊಣ್ಣೆಗಳನ್ನು ಹಾಕಿಕೊಂಡು, ಮೊದಲ ಬಾರಿಗೆ ಒಂದು ಬಂದೂಕು ತೆಗೆದುಕೊಂಡರು. ಎರಡು ದಿನಕ್ಕೆ ಬೇಕಾಗುವಷ್ಟು ರೊಟ್ಟಿ ಚಟ್ನಿ ಬುತ್ತಿ ಕಟ್ಟಿಕೊಂಡು ಕೇಕೆ, ಸಿಳ್ಳು ಹಾಕುತ ಬೇಟೆಯ ಸಾಮಾನುಗಳನ್ನೆಲ್ಲ ಕರಿಯನ ಆಟೋದೊಳಗೆ ಹಾಕಿಕೊಂಡು ಹೊರಟರು. ಹರಿ ಮನೆಯಿಂದ ಹೊರಡುವಾಗ ರತ್ನ 'ಹುಷಾರು ಹುಷಾರು ' ಎಂದು ಎಚ್ಚರಿಕೆ ಮಾತು ಹೇಳಿ ಖುಷಿಯಿಂದಲೇ ಕಳಿಸಿಕೊಟ್ಟಳು. ಹರಿ ಮತ್ತು ಗೆಳೆಯರು ಆಟೋ ಏರಿ ಕಂಚಿಕಟ್ಟೆ ತಲುಪಿದರು. ಸೋಮಣ್ಣನ ಖಾಲಿ ಮನೆಯಲ್ಲಿ ರಾತ್ರಿ ಕಳೆದರು. ಯಂಕಪ್ಪನ ಮಾಹಿತಿಯಂತೆ ಕಂಚಿಕಟ್ಟೆಯ ಪೂರ್ವ ಭಾಗದ ಶಾಮಪ್ಪನ ಹೊಲ ಅಡವಿಯ ಹತ್ತಿರವೇ ಇದೆ. ಮೆಕ್ಕೆಜೋಳ ಹಾಲ್ದೆನೆಗೆ ಬಂದಿದೆ. ಆರೇಳು ಹಂದಿಗಳು ಕಲೆಬಿದ್ದಿವೆ. ಇವುಗಳ ಕಾಟ ನೋಡಿ ಶಾಮಪ್ಪನೇ ಯಂಕಪ್ಪನಿಗೆ ಬೇಟೆಗೆ ಬರಲು ಹೇಳಿದ್ದನು.

ಹಂದಿ ಹಿಡಿಯುವವರು ಬೆಳಗ್ಗೆ ಬೇಗ ಎದ್ದು ಶಾಮಪ್ಪನ ಹೊಲದ ಕಡೆ ಹೊರಟರು. ಹೊಲವನ್ನು ಸೂಕ್ಷ್ಮವಾಗಿ ನೋಡಿದರು. ಪೂರ್ವದ ಕಡೆ ತಗ್ಗು ತೆಂಬದ ಅರಣ್ಯ. ಪಶ್ಚಿಮಕ್ಕೆ ಬೇರೆಯವರ ಹೊಲ. ಉತ್ತರಕ್ಕೆ ಹಳ್ಳ. ಹಳ್ಳದ ದಂಡೆಯಲ್ಲಿ ಮುಳ್ಳಿನ ಪೊದೆಗಳು. ದಕ್ಷಿಣಕ್ಕೂ ದೊಡ್ಡ ಒಡ್ಡು, ಅದರ ಪಕ್ಕ ಹೊಲ.  ಇದನ್ನು ನೋಡಿ ಪೂರ್ವದ ಕಡೆ ಬಿಟ್ಟು ಉಳಿದ ಕಡೆ ಬಲೆ ಬಿಟ್ಟರು. ಹೀಗೆ ಶುಕ್ರವಾರ ಪೂರಾ ಕಾದರೂ ಹಂದಿಗಳು ಹೊರ ಬರಲಿಲ್ಲ.   ಹುಷಾರಿನಿಂದ ಹೊಲಕ್ಕೆ ಇಳಿದರೆ ಅಲ್ಲಿ ಯಾವ ಪ್ರಾಣಿಯೂ ಇರಲಿಲ್ಲ. ಗುರುವಾರ ರಾತ್ರಿಯೇ ತಮ್ಮ ಮೆಟ್ಟನ್ನು ಬದಲಾಯಿಸಿದ್ದವು. ಬಲೆ, ಭರ್ಚಿಗಳನ್ನು ತೆಗೆದುಕೊಂಡು ಪಕ್ಕದ ಸೋಮಣ್ಣನ ಹೊಲದಲ್ಲಿ ಇರಬಹುದು ಎಂದು ಹುಡುಕಾಡಿದರು. ಅಲ್ಲೂ ಇರಲಿಲ್ಲ. ಬುತ್ತಿ ಶನಿವಾರ ಮಧ್ಯಾಹ್ನವೇ ಖಾಲಿಯಾಗಿತ್ತು. ಕಾಡು ಹಂದಿಗಳು ಸಿಗಲಿಲ್ಲವೆಂಬ ಬೇಸರ. ಬುತ್ತಿಯಿಲ್ಲದ ರಾತ್ರಿಯ ಉಪವಾಸ. ಊರಿಗೆ ಹೋಗೋಣ ಎಂದರೆ ಆಟೋ ಇಲ್ಲ. ಅನಿವಾರ್ಯ ಅದೊಂದು ರಾತ್ರಿ ಅಲ್ಲೇ ಉಳಿಯಬೇಕಾಯಿತು. ಹರಿಗೆ ಹಸಿವಿನ ಸಂಕಟಕ್ಕೆ ನಿದ್ದೆ ಬರುತ್ತಿರಲಿಲ್ಲ.  ಹಾಸಿಗೆಯಲ್ಲೇ ಒದ್ದಾಡಿ ಒದ್ದಾಡಿ ಸುಸ್ತಾಗಿ, ಬೆಳಗಿನ ಜಾವ ನಿದ್ದೆಗೆ ಜಾರಿದ್ದನು. ಉಳಿದವರ ಸ್ಥಿತಿ ಬೇರೇನೂ ಆಗಿರಲಿಲ್ಲ. ಆ ದಿನ ರಾತ್ರಿ ರತ್ನಳಿಗೂ ಸರಿಯಾಗಿ ನಿದ್ದೆ ಬಂದಿರಲಿಲ್ಲ. ಹೊಟ್ಟೆಯೊಳಗೆ ಏನೋ ಸಂಕಟ, ದುಗುಡ. ಕೆಟ್ಟ ಕೆಟ್ಟ ಕನಸು. ಹಾಸಿಗೆಯಲ್ಲಿ ಎದ್ದೆದ್ದು ಕುಳಿತುಕೊಳ್ಳುತ್ತಿದ್ದಳು. ಮಗು ಬೇರೆ ಅಳುತ್ತಿತ್ತು. ಬೆಳಗ್ಗೆ ಎದ್ದವಳೇ ಮರಿಯಜ್ಜನ ಹತ್ತಿರ ತನ್ನ  ವೇದನೆಯನ್ನು ಹೇಳಿಕೊಂಡಳು. ಹೋದವರ ಸುದ್ದಿ ಏನು ಎತ್ತ ಎಂದು ವಿಚಾರಿಸಿದಳು. ಅಜ್ಜ 'ಇನ್ನೂ ಏನೂ ಗೊತ್ತಾಗಿಲ್ಲವ್ವ, ಇವತ್ತು ಸಂಜೆ ಬಂದೇ ಬರುತ್ತಾರೆ, ಏನು ಬಯಪಡುಬೇಡ  ಮನೆಗೋಗವ್ವ' ಸಮಾಧಾನ ತುಂಬಿ ಕಳಿಸಿದನು.

ಶಾಮಪ್ಪನ ಹೊಲದಲ್ಲಿ ಮತ್ತೆ ಹಂದಿಗಳು ಇವೆ ಎಂಬ ನಿಖರ ಮಾಹಿತಿಯೊಂದು ತಿಳಿಯಿತು. ಬೇಗ್ಬೇಗ ಹೋಗಿ ಬಲೆ ಬಿಟ್ಟರು. ಮೂರ್ನಾಲ್ಕು ಹಂದಿಗಳು ಇರುವುದು ಗೊತ್ತಾಯ್ತು. ಬಲೆಗೆ ನಾಲ್ಕು ಜನರಂತೆ ನಿಂತರು. ಒಂದಿಬ್ಬರು ಕಣಗಗಳನ್ನು ಹಿಡಿದು ಜೋರಾಗಿ ಗಲಾಟೆ ಮಾಡುತ್ತ ಹಂದಿಗಳನ್ನು ಎಬ್ಬಿಸಲು ಮುಂದಾದರು. ಎರಡು ಬಲವಾದ   ಮತ್ತು ಎರಡು ಚಿಕ್ಕ ಮಿಕಗಳು ಕಾಣಿಸಿಕೊಂಡವು.  ಕೋರೆ ಹಲ್ಲು ಇರುವ ಗಂಡು ಮಿಕ ಹಿಂದೆ ಬೀಜಗಳನ್ನು ಬಿಟ್ಟುಕೊಂಡು ಕುಂಡಿ ತಿರುವುತ್ತಾ  ಓಡುತ್ತಿತ್ತು. ಅದನ್ನು ನೋಡಿದ ಹರಿಯ ಮನಸ್ಸಿನಲ್ಲಿ ಒಂದು ಆಸೆ ಚಿಗುರಿತು. "ಬದುಕಿದ ಗಂಡು ಮಿಕದ ಕೋರೆಯನ್ನು ನೆಲಕ್ಕೆ ಬೀಳದ ಹಾಗೆ ಕತ್ತರಿಸಿ ಕೊರಳಿಗೆ ಹಾಕಿಕೊಂಡರೆ ಯಾವ ಮಾಟ, ಮಂತ್ರ ಹತ್ರ ಸುಳಿಯಲ್ಲ" ಎಂದು ಯಾರೋ ಹೇಳಿದ್ದ ಮಾತನ್ನು  ಜ್ಞಾಪಿಸಿಕೊಂಡನು. ಈಗ ಅವನ ಕಣ್ಣೆದುರೇ ಗಂಡು ಮಿಕವಿದೆ. ಕೋರೆಯೂ ಇದೆ. ಹೇಗಾದರೂ ಸರಿಯೇ ಕೋರೆಯನ್ನು ಕತ್ತರಿಸಿಕೊಳ್ಳಬೇಕು. ಮನೆಗೆ ಹೋಗಿ ತನ್ನ ಆರು ತಿಂಗಳ ಮಗುವಿಗೆ ಕಟ್ಟಬೇಕೆಂದು ಆಸೆ ಪಟ್ಟನು. ಮಿಕವನ್ನು ಜೀವಂತ ಹಿಡಿಯಲು ಅದರ ಹಿಂದಿಂದೆಯೇ ಓಡಿದನು. 

ಆಗ ಅದು ಸಿಟ್ಟಿನಿಂದ ತಿರುಗಿ ಬಂದು ಹರಿಯ ಕಾಲಿಗೆ ತಿವಿಯಿತು. ಅದರಿಂದ  ಸಣ್ಣ ಗಾಯವಾಯಿತು ಅಷ್ಟೇ. ಬೇರೇನೂ ಅನಾಹುತ ಆಗಲಿಲ್ಲ. ಮತ್ತೆ ಅದರ ಹಿಂದೆ ಓಡಲು ಆರಂಭಿಸಿದನು. ಮಿಕ 'ಇವರು ನನ್ನ ಬಿಡುವಂತೆ ಕಾಣುತ್ತಿಲ್ಲವೆಂದುಕೊಂಡು' ಬಿರುಸಿನಿಂದ ಓಡಿತು. ಹಳ್ಳದ ಕಡೆ ನುಗ್ಗಿ ಬಿಟ್ಟಿರುವ ಬಲೆಯನ್ನು ಕೋರೆಯಿಂದ ಹರಿಯಿತು. ತಾನು ಮತ್ತು  ತನ್ನವರೊಂದಿಗೆ ಹಳ್ಳದೊಳಗೆ ಇಳಿಯಿತು. ಇಳಿದು ಅಡವಿಯ ಕಡೆ ಓಡಲಾರಂಭಿಸಿದವು.  ಅವುಗಳ ಓಟ ನೋಡಿದರೆ 'ನಮ್ಮ ಕೈಗೆ ಸಿಗುವುದಿಲ್ಲ' ಎಂಬುದು ಗೊತ್ತಾಯಿತು. ಅವು ಬಲೆ, ಭರ್ಚಿಗೆ ಸಿಗುವುದಿಲ್ಲ. ಇರುವ ಬಂದೂಕನ್ನು ಹೊರ ತೆಗೆಯಬೇಕೆಂದರು. 

ನಿನ್ನೆ ಮಧ್ಯಾಹ್ನದಿಂದ ಏನೂ ತಿಂದಿರಲಿಲ್ಲ. ಸಿಕ್ಕಾಬಟ್ಟೆ ಹಸಿವಾಗಿತ್ತು. ಹಂದಿಗಳು ಕಣ್ಣ ಮುಂದೆಯೇ ಹೋಗುತ್ತಿದ್ದವು. ಹೊಡೆಯಬೇಕು ಹಿಡಿಯಬೇಕು ಎಂಬ ಕಾತರ. ಸ್ವಲ್ಪ ದೂರ ಓಡಿದರು. 

ಹಂದಿಗಳು ತಗ್ಗಿಗೆ ಇಳಿದವು. ಈ ತಗ್ಗಿನಲ್ಲೇ ಹಂದಿಗಳು ಇವೆ ಎಂಬುದನ್ನು ಗೊತ್ತು ಮಾಡಿಕೊಂಡರು. ಸುತ್ತಲು ಭರ್ಚಿ, ಕಣಗ, ಹಿಡಿದು ನಿಂತರು. ಅಪ್ಪಣ್ಣನ ಕೈಲಿ ಬಂದೂಕು ಇತ್ತು. ಇತ್ತೀಚಿಗೆ ಬಂದೂಕಿಗೆ ಲೈಸೆನ್ಸ್ ಮಾಡಿಸಿರಲಿಲ್ಲ. ಪ್ರತೀ ವರ್ಷದ ಬನ್ನಿ ಹಬ್ಬದಲ್ಲಿ ಮಾತ್ರ, ಬನ್ನಿ ಮರದ ಹತ್ತಿರ ಅದು ಶಬ್ದ ಮಾಡುತ್ತಿತ್ತು. ಉಳಿದ ದಿನ ಕೋಣೆಯ ಮೂಲೆಯಲ್ಲಿ ಇರುತ್ತಿತ್ತು. ಯಾರ ಒತ್ತಾಯಕ್ಕೆ ಅಪ್ಪಣ್ಣ ಅದನ್ನು ಮನೆಯಿಂದ ಹೊರತಂದಿದ್ದನೋ.....ಗೊತ್ತಿಲ್ಲ. ಅವನೇ ಆ ಬಂದೂಕ ಹಿಡಿದಿದ್ದನು. ಇವನಿಗೆ ಸ್ವಲ್ಪ ಬಂದೂಕು ಹಿಡಿದು ಗುಂಡು ಹಾರಿಸಬೇಕೆಂಬ ಹಂಬಲವಿತ್ತು. ಅಪ್ಪಣ್ಣ ಇವರಿಗಿಂತ ಮೇಲ್ಜಾತಿಯವನಾದ್ದರಿಂದ ಯಾರೂ ಬೇಡ ಅನ್ನಲಿಲ್ಲ. ಹರಿ ದಕ್ಷಿಣ ಭಾಗಕ್ಕೆ ನಿಂತನು. ಅಪ್ಪಣ್ಣ ಉತ್ತರಕ್ಕೆ ನಿಂತನು. ಮಟಮಟ ಮಧ್ಯಾಹ್ನ ಹಸಿವಾಗಿತ್ತು. ಬಿಸಿಲು ಜಾಸ್ತಿ ಇತ್ತು. ಕಣ್ಣುಗಳು ಮಂಜಾಗುತ್ತಿದ್ದವು. ಹರಿಯ ಕಡೆ ಉಣ್ಣೆಪೆಳೆ ದಪ್ಪ ಬೆಳೆದಿತ್ತು. ಹಂದಿಗಳು ಮೇಲೆ ಹತ್ತುವುದನ್ನೇ ತದೇಕಚಿತ್ತದಿಂದ ನೋಡುತ್ತಿದ್ದನು. ಹಂದಿಗಳು ಬರಲಿಲ್ಲ. ಈ ಕಡೆಯಿಂದ ಹರಿಯೂ ಕೂಡ ಹಂದಿಗಳು ಎಲ್ಲಿವೆ ನೋಡೋಣ ಎಂದು ಪೆಳೆಯನ್ನು ಬಲವಾಗಿ ಸರಿಸಿದನು. ಹೊಟ್ಟೆ ಹಸಿವಾಗಿತ್ತು.  ಕಣ್ಣು ಮಂಜಾಗ ತೊಡಗಿದವು. 'ಹಂದಿ ಅಲ್ಲೇ ಆ ಪೆಳೆಯಲ್ಲೇ ಇದೆ, ಅದೇ ಅಲುಗಾಡಿಸಿರುವುದು. ಬಿಟ್ಟರೆ ಸಿಗುವುದಿಲ್ಲ, ಇದೇ ಸಮಯ’ ಎಂದು ಅಪ್ಪಣ್ಣ  ಭ್ರಮೆಯಲ್ಲಿ ಗುಂಡು ಹಾರಿಸಿಬಿಟ್ಟನು. ಗುಂಡು ನೇರವಾಗಿ ಹರಿಯ ಹೃದಯದ ಜಾಗಕ್ಕೆ ತಗುಲಿತು. ಆ ಕಡೆಯಿಂದ ಹರಿ 'ಅಣ್ಣಾ....ನನಗೆ ಹೊಡ್ದೇಬಿಟ್ಟೆಲ್ಲಾ' ಎಂದವನೇ ಗುಂಡು ತಗುಲಿದ ಭಾಗಕ್ಕೆ ಕೈ ಹಿಡಿದು ಕೆಳಗಡೆ ಬಿದ್ದನು. 

ಅವನು ಕೂಗಿದ ಧ್ವನಿಗೆ ಅಯ್ಯೋ ಎಂದು ಎಲ್ಲರೂ ಅವನೆಡೆ ಓಡೋಡಿ ಬಂದರು. ಬರುವುದರೊಳಗೆ ಹರಿಯ ಪ್ರಾಣದುಸಿರು ದೇಹ ಬಿಟ್ಟು ತಿರುಗಿ ಬಾರದ ಲೋಕಕ್ಕೆ ಹೋಗಿತ್ತು. ಎಲ್ಲರೂ ಅತ್ತರು, 'ಏನೋ ಮಾಡಲು ಹೋಗಿ ಏನೋ...ಮಾಡಿಬಿಟ್ಟೆವಲ್ಲ'  ಎಂದು ಕೈಕೈ ಹಿಸುಕಿಕೊಂಡರು.  ಕೆಲವರು ಬೋರಾಡಿ ಅತ್ತರು.  'ಬರುವಾಗ ನಮ್ಮ ಜೊತೆಗಿದ್ದೆ; ಈಗಿಲ್ಲ, ನೀನಿಲ್ಲದೆ ಮುಂದೆ ಹೇಗೆ?’ ಎಂದೆಲ್ಲ ಅಳುತ್ತಿದ್ದರು. "ಊರಿಗೆ ಸುದ್ದಿ ಮುಟ್ಟಿಸುವುದಾದರೂ ಹೇಗೆ?  ರತ್ನಳಿಗೆ ತಿಳಿಸುವುದ್ಹೇಗೆ' ಎಂದೆಲ್ಲ ಯೋಚಿಸಿದರು. ಆಟೋ ಬರಲಿಲ್ಲ.ಹೊಟ್ಟೆ ಹಸಿದು ತಲೆಸುತ್ತು ಬರುತ್ತಿದೆ. ಶಂಭ 'ನಾನು ಮುಂದೆ ಹೋಗುತ್ತೇನೆ, ನಿಧಾನವಾಗಿ ವಿಷಯ ತಿಳಿಸುತ್ತೇನೆ' ಎಂದು ಹೊರಟನು.

ದರಿಕಟ್ಟೆಯ ಮೇಲೆ ಶಂಭ ಅಗಸಿಟ್ಟೆಯ ತಲುಪಿದನು. ಕೇರಿಯ ಯಜಮಾನ ಅಜ್ಜಪ್ಪನಿಗೆ ಸೂಕ್ಷ್ಮವಾಗಿ ತಿಳಿಸಿದನು.  ಅಜ್ಜ 'ಎಂತಹ ಕೆಲಸ ಮಾಡಿಬಿಟ್ಟಿರಿ, ಈ ವಿಷಯ ಪೊಲೀಸ್ನೋರಿಗೆ ತಿಳಿದ್ರೆ ಕೇಸು, ಕೋರ್ಟ್ ಎಂದು ತುಂಬಾ ವಜ್ಜಿ ಐತೆ' ಎಂದು ಹಲುಬಿತು. 'ಈ ವಿಷಯವನ್ನು ರತ್ನಳಿಗೆ ಮುಟ್ಟಿಸುವುದಾದರೂ ಹೇಗೆ? ಅವಳಿಗೆ ಯಾರು ಗತಿ ?' ಎಂದು ದುಃಖಿಸಿತು. 

ಹೊಟ್ಟೆ ತುಂಬಾ ಹಸಿದಿದೆ. ಹರಿಯ ಹೆಣ ಉದ್ದ ಬಂಡೆಯ ಹಾಗೆ ಮಲಗಿದೆ. ದಿನದ ಒಡೆಯ ಮರೆಯಾಗಲು ಅಣಿಯಾಗುತ್ತಿದ್ದಾನೆ. ಹರಿಯನ್ನು ಒಯ್ಯಲು ಅಲ್ಲಿರುವವರ ಹೆಗಲುಗಳೇ ಆಧಾರವಾಗಬೇಕು. ಅಂಥದ್ದರಲ್ಲೇ ಹರಿಯನ್ನು ಹೊತ್ತರು. ಕಾಲುಗಳು ಮೇಲೇಳುತ್ತಿಲ್ಲ. ದಾರಿ ಸಾಗುತ್ತಿಲ್ಲ. ಬಿಡುವಂತೆಯೂ ಇಲ್ಲ. ಐದಾರು ಕಿಲೋಮೀಟರ್ ಬರುವ ಹೊತ್ತಿಗೆ ಸೂರ್ಯ ತನ್ನ ಪಾಳೆ ಮುಗಿಸಿ ಪಶ್ಚಿಮ ಗುಡ್ಡಗಳ ಹಿಂದೆ ಇಳಿದನು. ದರಿಕಟ್ಟೆ ಇನ್ನು ಇಪ್ಪತ್ತು ಕಿಲೋಮೀಟರ್. ರಾತ್ರಿ ಪೂರಾ ಹೊತ್ತು ನಡೆಯಬೇಕು. ದಾರಿ ಕಾಣುತ್ತಿಲ್ಲ.ಸರಿಯಾದ ದಾರಿಯೂ ಇಲ್ಲ. ಕಾಲಿಗೆ ಮುಳ್ಳು, ಕಲ್ಲುಗಳು ಚುಚ್ಚುತ್ತಿವೆ. ಒಳ್ಳೆಯ ರಸ್ತೆ ಸಿಗಬೇಕೆಂದರೆ ಹತ್ತು ಕಿ ಮೀ ಸಾಗಬೇಕು. ಅಲ್ಲಿಂದ ಐದು ಕಿ ಮೀ ಗುಡಿಕೇರಿ. ಅಲ್ಲಿಂದ ಐದು ಕಿ ಮೀ ಅಗಸಿಕಟ್ಟೆ. ಹಸಿವು, ನೀರಡಿಕೆ, ಕೈ ಕಾಲುಗಳ ನೋವು, ಹರಿ ಸತ್ತ ಸಂಕಟ ಒಂದೇ ಎರಡೇ! ಆದರೆ ಪರಿಸ್ಥಿತಿ ತುಂಬಾ ಕೆಟ್ಟದ್ದಿದೆ.  

ಅಗಸಿಕಟ್ಟೆಗೆ ಗುಡಿಕೇರಿ ಮೇಲೆ ಹೋಗಬೇಕು. ಅಲ್ಲಿ ಪೊಲೀಸ್ ಸ್ಟೇಷನ್ ರಸ್ತೆಯಲ್ಲೇ ಇದೆ. ಪೊಲೀಸರು ಯಾವಾಗಲೂ ಎಚ್ಚರವಾಗಿಯೇ ಇರುತ್ತಾರೆ. ಗಸ್ತು ಹೊಡೆಯುತ್ತಿರುತ್ತಾರೆ. ಅವರ ಕಣ್ಣು ತಪ್ಪಿಸಿ ಹೋಗುವುದು ಸುಲಭದ ಮಾತಲ್ಲ. ಸಿಕ್ಕರೆ ಕಂಬಿ, ಏರೋಪ್ಲೇನ್ ಗ್ಯಾರಂಟಿ; ಎಂಬ ಭಯ ಹೆಜ್ಜೆ ಹೆಜ್ಜೆಗೂ ಕಾಡುತ್ತಿತ್ತು.

ರಾತ್ರಿ ಹನ್ನೆರಡರ ಸುಮಾರಿಗೆ  ಗುಡಿಕೇರಿ ಹತ್ತಿರ ಬಂದರು. ಮುಂದೆ ಹೋಗಲು ಭಯ. ಹನುಮಂತ 'ನಾನು ಪೊಲೀಸ್ ಸ್ಟೇಷನ್ ನೋಡಿ ಬರುವೆ' ಎಂದು ಬಂದವನು ಅದೇ ವೇಗದಲ್ಲಿ ಹಿಂದಿರುಗಿದನು. ಏನಾಯಿತೆಂದು ಕೇಳಿದರು. ಹನುಮಂತ 'ಎಲ್ಲಾ ಪೊಲೀಸ್ರು ರಸ್ತೆ ಮಧ್ಯೆಯೇ ಇದ್ದಾರೆ' ಎಂದನು. ಹಸಿವು ನೀರಡಿಕೆ ಜಾಸ್ತಿ ಆಗಿತ್ತು, ರಾತ್ರಿ ಊರ ಹೊರ ವಲಯದ ಮೂಲಕ ಊರ ದಾಟಿ ದೊಡ್ಡ ಆಲದ ಮರದ ಹತ್ತಿರ ಬಂದರು. ಇನ್ನೂ ನಾಲ್ಕು ಕಿ. ಮೀ ದೂರ  ನಡೆಯಬೇಕು; ಎಲ್ಲರೂ ಸುಸ್ತಾಗಿದ್ದಾರೆ. ಜೀವನದಲ್ಲಿ ಇನ್ನು ಮುಂದೆ ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ; ಎಂದು ಅನೇಕರು ಶಪಥ ಮಾಡಿದರು. ಚಿವುಟಿದರೆ ಹನಿ ರಕ್ತವೂ ಬರುವಂತಿರಲಿಲ್ಲ.

ಸಮಯ ನಾಕಾಗಿದೆ ಕೋಳಿಗಳು ಕೂಗುತ್ತಿವೆ. ಬೆಳಕು ಹರಿಯುವ ಮುನ್ನವೇ ಊರ ಮುಟ್ಟಬೇಕು. ಭಾರವಾದ ಹೆಜ್ಜೆಗಳನ್ನು ಕೀಳುತ್ತ ಊರ ಹತ್ತಿರ ಬಂದರು. ಕೆಲವರು ಎರಡಕ್ಕೆ ಹೋಗಲು ಚೆಂಬನ್ನು ತಮ್ಮ ಕೈ ಬೆರಳುಗಳ ಸಹಾಯದಿಂದ ಹಿಡಿದುಕೊಂಡು ಊರ ಹೊರಕ್ಕೆ ಹೋಗುವವರು, ಬರುವವರು ಕಾಣಿಸತೊಡಗಿದರು. ಅಂತೂ ಊರ ಹತ್ತಿರ ಇರುವ ಬೇವಿನಕಟ್ಟೆಗೆ ತಂದು ಇಳಿಸಿದರು.

ಚಂದ್ರಜ್ಜ ಆಗ ತಾನೇ ಚೆಂಬು ತೆಗೆದುಕೊಂಡು ಆ ಕಡೆಯೇ ಬಂದಿದ್ದನು. ಇದನ್ನು  ನೋಡಿ ಬೆಪ್ಪಾಗಿ ನಿಂತನು. ಬರುವಾಗ ಕಡೆಮನೆಯಲ್ಲಿರುವ ರತ್ನಳಿಗೂ ಈ ವಿಷಯ ತಿಳಿಸಿಯೇ ಬಿಟ್ಟನು. ರತ್ನಳ ಧ್ವನಿ  ಅಕ್ಕಪಕ್ಕದ ಮನೆಯವರಿಗೆ ಮುಟ್ಟಿ, ಒಬ್ಬೊಬ್ಬರೇ ರತ್ನಳ ಮನೆಯ ಕಡೆ ಬಂದು, ಏನೇನೆಂದು ಕೇಳತೊಡಗಿದರು. 'ಅಪ್ಪಣ್ಣಂತೆ.....' ಬಂದೂಕು ಹಿಡಿದುಕೊಂಡಿದ್ದನಂತೆ. ಹರಿ ಮುಂದಿದ್ದನಂತೆ......" ಗುಂಡು ತಗುಲಿತಂತೆ....' ಎಂಬ ಮಾತುಗಳು ಒಬ್ಬರ ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಹರಿದಾಡ ತೊಡಗಿದವು. ಕ್ಷಣಾರ್ಧದಲ್ಲಿ ಇಡೀ ಊರಿಗೆ ತಲುಪಿ 'ಅಯ್ಯೋ ಎಂಥಾ ಕೆಲಸ ಆಗಿದೆ' ಎಂದು ಹಲುಬಿ, ಎದ್ದವರೇ ಕಣ್ಣುಗಳ ತಿಕ್ಕುತ್ತ ರತ್ನಳ ಮನೆಯ ಕಡೆ ಬಂದು ದೊಡ್ಡ ಗುಂಪಾಯಿತು. ಹಿರಿಯರಾದ ಮರಿಯಜ್ಜ, ಹಿರಿಯಜ್ಜ, ಅಜ್ಜಪ್ಪಜ್ಜ, ಚಂದ್ರಜ್ಜ, ಶಿವಜ್ಜ, ಅಪ್ಪಣ್ಣನ ತಮ್ಮ ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ರಾಮಪ್ಪ, ಹಾಲಿ ಸದಸ್ಯ ಪರಸಪ್ಪ ಎಲ್ಲರೂ ಸೇರಿದರು. ಹೆಣವನ್ನು ಮನೆ ಹತ್ತಿರ ತರಲು ವ್ಯವಸ್ಥೆ ಮಾಡಿದರು. ಹೆಣ ಹತ್ತಿರ ಬರುತ್ತಿದ್ದರಂತೆ ರತ್ನಳ ಗೋಳಾಟ ಜೋರಾಯಿತು. ಗಲಾಟೆ ಜೋರಾದಂತೆ ಮಡಿಲಲ್ಲಿ ಮಲಗಿದ ಮಗು ಎಚ್ಚರಾಗಿ ಅದೂ ಜೋರಾಗಿ ಅಳತೊಡಿಗಿತು. ಪಕ್ಕದ ಮನೆಯ ಮಲ್ಲಜ್ಜಿ' ಅಯ್ಯೋ ಪಾಪ ಮಗುವಿಗೆ ಈ ಸೂಕ್ಷ್ಮತೆ ಗೊತ್ತಾಗಿದೆ; ಅದಕ್ಕೇ ಮಗು ರಾತ್ರಿಯಲ್ಲಾ ಅತ್ತಿರೋದು ' ಎಂದು  ಅದಕ್ಕೊಂದು ಅರ್ಥ ಕಲ್ಪಿಸಿದಳು. ಮಗು ಮತ್ತೆ ಅಳಲಾರಂಭಿಸಿತು. ಆಗಾಗ ನೆಟ್ಟಿಗ್ಗಣ್ಣಿಗೆ ಬೀಳುತ್ತಿತ್ತು. ಉಸಿರು ಹಿಡಿಯುತ್ತಿತ್ತು. 

ತಾಯಿಯ ಗೋಳಾಟ, ಮಗುವಿನ ಅಳು ಅಲ್ಲಿದ್ದವರ ಮನ ಕಲಕುವಂತಿತ್ತು. ಕೆಲವರು ಸಂತೈಸುತ್ತಿದ್ದರು.ಜೊತೆಗಿದ್ದವರ ಮುಖಗಳು ಊಟ, ನಿದ್ದೆ ಇಲ್ಲದೇ ಕಪ್ಪಿಟ್ಟಿದ್ದವು,  ಮಗು ಏನೇ ಮಾಡಿದರೂ ಸುಮ್ಮನಾಗುತ್ತಿಲ್ಲ. ಅತ್ತು ಉಸಿರು ಹಿಡಿದು  ಮತ್ತೆ ನೆಟ್ಟಿಗ್ಗಣ್ಣಿಗೆ ಬಿದ್ದವು. ಅದು ಉಸಿರು ತಿರುವಿಸಿಕೊಳ್ಳಲಾಗದೆ ಹಾಗೆಯೇ ಸುಮ್ಮನಾಗಿಬಿಟ್ಟಿತು. ಗಲಾಟೆಯಲ್ಲಿ ಮಗು ಸುಮ್ಮನಾಗಿದ್ದು ಗೊತ್ತಾಗಲೇ ಇಲ್ಲ. ಎಲ್ಲರೂ ಹರಿ ಅಸುನೀಗಿದ ಸುದ್ದಿ ತಿಳಿದುಕೊಳ್ಳುವುದರಲ್ಲಿಯೇ ಮಗ್ನರಾಗಿದ್ದರು. ಬಸಜ್ಜಿ  'ರತ್ನ ಆಗಿದ್ದು ಆಗಿಹೋಯಿತು. ಮಗುವಿನ ಮುಖ  ನೋಡವ್ವ, ಹೋದವನು ಮರಳಿ ಬರಲಾರ. ಎದ್ದು ಬಂದು ಮಗೂನ ಸಮಾಧಾನ ಮಾಡು' ಎಂದಿತು. ಅಜ್ಜಿ ಮಾತಿಗೆ ರತ್ನ ಅಳುತ್ತ ಎದ್ದು ಬಂದು ಮಲ್ಲಜ್ಜಿ ಕಡೆಯಿಂದ ಮಗುವನ್ನು ತೆಗೆದುಕೊಂಡಳು. ಮಗುವಿನ ಗಲ್ಲವನ್ನು ಮುಟ್ಟಿದಳು...ಮಗುವನ್ನು ಅಲುಗಾಡಿಸಿದಳು.. ಮಿಸುಕಾಡಲಿಲ್ಲ. ಕೈ ಕಾಲುಗಳನ್ನು ಮುಟ್ಟಿದಳು...... ತಣ್ಣಾಗಾಗಿದ್ದವು. 'ಅಯ್ಯೋ ಯಪ್ಪಾ...... ನನ್ನ ಮಗು ಮಿಸುಗಾಡುವಲ್ದು' ಜೋರಾಗಿ ಅತ್ತಳು. 'ಅಯ್ಯೋ ಶಿವನೇ ಇಷ್ಟತನಕ ಮಗು ತನ್ತಾಗ ಇತ್ತು... 'ಎಂದು ಮಲ್ಲಜ್ಜಿ ಮಗುವನ್ನು ಮುಟ್ಟಿ ನೋಡಿತು. ಅಗಲೇ ಮಗು ಅಪ್ಪನ ಹಿಂದೆಯೇ ಹೋಗಿತ್ತು. ಬರೆ ಮೇಲೆ ಬರೆ ಎನ್ನುವಂತೆ ಅತ್ತು ಸುಸ್ತಾಗಿದಳು. ಮೂರ್ಛೆ ಬೀಳತೊಡಗಿದಳು. ಹಿರಿಯರು ಏನು ಹೀಗಾಯಿತು ? ಎನ್ನುತ್ತ ರತ್ನಳ ಸಂಬಂಧಿಗಳಿಗೆ ತಿಳಿಸಿದರು. 'ಅವಳಿಗೆ  ಆಗಬೇಕಾದುದ್ದೇ....? ಎಂದು ಯಾರು ಬರಲಿಲ್ಲ. ಅಪ್ಪಣ್ಣನಿಂದ ಏನಾದರೂ ಜೀವನಾಧಾರ ಕೊಡಿಸಬೇಕೆಂದು ಮಾತನಾಡಿದರು. ಕೇಸು, ಕೋರ್ಟ್ ಅಂತ ಬಿಡಬಾರದು ಎಂದೆಲ್ಲಾ ತೀರ್ಮಾನಿಸಿದರು.

ಹೆಣ ಬಾವು ಬರಹತ್ತಿದೆ, ಇನ್ನೂ ತಡಮಾಡಿದರೆ ತೊಂದರೆ ನಮಗೆಯೇ ಎಂದು ಒಯ್ಯಲು ತಯಾರಿ ನಡೆಸಿದರು. ಇಪ್ಪತ್ತ್ಮೂರರ ಯುವತಿ.... ಜೀವನದ ಹಾದಿ ಇನ್ನೂ ಸಾಕಷ್ಟಿದೆ. ಆದರೀಗ ಗಂಡ ಮಗುವನ್ನು ಕಳೆದು ಕೊಂಡು ಪರಿತಪಿಸುವ ಕಾಲ ಎದುರಾಗಿದೆ.

‘ಬರ್ತೀನಂತ ಹೋಗಿದ್ದೆಲ್ಲೋ...ಜೀವನ ಪೂರ ಸುಖವಾಗಿ ಸಾಕ್ತೀನಿ ... ಮಗನನ್ನು ಚೆನ್ನಾಗಿ ಓದಿಸಬೇಕು. ದೊಡ್ಡ ಆಫೀಸರ್ ಮಾಡಬೇಕು .....ಎಂದೆಲ್ಲಾ ಅಂದುಕೊಂಡಿದ್ದೆಲ್ಲೋ...ಇನ್ನು ನನಗೆ ಯಾರೋ ಗತಿ..?ಮಗನ ಮುಖ ನೋಡ್ಯಾದ್ರು ಬದುಕ್ತಾ ಇದ್ದೆ ಈಗ ಅದೂ ಇಲ್ಲ' ಹೀಗೆ ರತ್ನ ಆಡಿಂಗ ಮಾಡುತ್ತ ಅಳತೊಡಗಿದಳು. ಚಟ್ಟ ಕಟ್ಟುವವರು ಕಟ್ಟಿದರು. ಹೆಣವನ್ನು ಮೇಲಿಟ್ಟರು.ಮಗುವನ್ನು ಅರಿವೆಯಲ್ಲಿ ಸುತ್ತಿದರು. ಎರಡನ್ನೂ ಹೊತ್ತು ಸ್ಮಶಾನದ ಕಡೆ ಹೋಗತೊಡಗಿದರು. ಸ್ಮಶಾನದ ಹತ್ತಿರ ಕುಂಕುಮ ಅಳಿಸುವ, ತಾಳಿ ಕೀಳುವ ಸಮಯ. ರತ್ನಳಿಗೆ ನಿಲ್ಲಲು ಕುಳಿತುಕೊಳ್ಳಲು ಶಕ್ತಿಯಿಲ್ಲ. ಎಚ್ಚರ ತಪ್ಪುತ್ತಾಳೆ.  ನೀರೋಡೆಯುತ್ತಾರೆ.  ಹಾ...ಎಂದು ಹಿಂದಕ್ಕೆ ಬೀಳುತ್ತಾಳೆ. ಕ್ಷಣಾರ್ಧದಲ್ಲೇ  ರತ್ನಳ ಎದೆ ಒಡೆದಂತಾಗಿ ಹಿಡಿದವರ ಮೇಲೆ ಬಿದ್ದು ಉಸಿರು ಕಳೆದುಕೊಳ್ಳುತ್ತಾಳೆ.  ಹಿಡಿದವರು ಸುಸ್ತೋ ಸುಸ್ತಾಗಿ 'ನಮಗಾದ್ರೂ ಸಾವು ಬರಬಾರದೇ' ಎಂದುಕೊಳ್ಳುವರು. ಈ ಸುದ್ದಿ ಕೇಳಿ ಇಡೀ ಊರಿಗೆ ಊರೇ ಸ್ಮಶಾನದ ಹತ್ತಿರ ಬಂದಿತ್ತು. 'ಅಯ್ಯೋ ದೇವರೆ ಇವರಿಗೆ ಎಂಥಾ ಸಾವು ಕೊಟ್ಯಪ್ಪ' ಎಂದು ಮರುಗಿತು. ಬೇಗ ಬೇಗ ಕಟ್ಟಿಗೆ ತಂದು ಮತ್ತೊಂದು ಚಿತೆ ಮಾಡಿ; ಅಪ್ಪ, ಮಗು, ಅಮ್ಮನಿಗೆ  ಊರ ಹಿರಿಯ ಅಜ್ಜಪ್ಪ ಕೊಳ್ಳಿ ಇಟ್ಟನು.  ಚಿತೆ ಹೊತ್ತಿಕೊಂಡು  ಚಿಟಪಟ ಸದ್ದುಮಾಡಿ, ಅದರ ಹೊಗೆ ಆಕಾಶದ ತುಂಬೆಲ್ಲ ಆವರಿಸಿಕೊಂಡಿತು. ಇದನ್ನು ನೋಡುತ್ತಿರುವ ಊರ ಜನರ ಕಣ್ಣುಗಳೆಲ್ಲಾ ಒದ್ದೆಯಾದವು. ಚಿತೆಯ ಕೆಂಡಕ್ಕೆ ದಿನದ ಸೂರ್ಯ ಕೆಂಪಾಗಿ ಗುಡ್ಡದ ಸಂದಿಯಲ್ಲಿ ಇಳಿದನು. ಊರಿನ ತುಂಬೆಲ್ಲಾ ಕತ್ತಲಾವರಿಸಿ ಊರಿಗೆ ಊರೇ  ಮೌನದಲ್ಲಿ ಮಲಗಿತು.                
            (ಗ್ರಾಮವೊಂದರ ಜನಪದ ಕಥನ ಗೀತೆಯ ಸ್ಫೂರ್ತಿಯಿಂದ ಬರೆದ ಕತೆ)