ಹಸಿದ ಹೊಟ್ಟೆಗಳು ಜಪಿಸಲಾರವು ಹೆಚ್ಚುದಿನ ರಾಮನಾಮ

ಹಸಿದ ಹೊಟ್ಟೆಗಳು ಜಪಿಸಲಾರವು ಹೆಚ್ಚುದಿನ ರಾಮನಾಮ

  "ಸೂಳ್ಳೇ ಸುಳ್ಳು ಈಭೂಮಿ ಮ್ಯಾಲೇ ಎಲ್ಲಾ ಸುಳ್ಳು

  ನಾನು ಸುಳ್ಳು...ನೀನು ಸುಳ್ಳು.... ಅವನು ಸುಳ್ಳು....

  ಸೃಷ್ಟಿಕರ್ತ ಬ್ರಹ್ನನು ಬರೆದ  ಹಣೆಬರ ಸುಳ್ಳು

  ಈಭೂಮಿ ಮ್ಯಾಲೆ ಎಲ್ಲಾ ಸುಳ್ಳು

  ಸುಳ್ಳೇ ಸುಳ್ಳೆ ಸುಳ್ಳು.... ಈಭೂಮಿ ಮ್ಯಾಲೇ ಎಲ್ಲಾ ಸುಳ್ಳು......."?

  ಏನಪಾ ಬಸಣ್ಣ  ಇನ್ನು ಹೊತ್ತ ಮುಳಗಿಲ್ಲ..., "ಯಾಕೋ ಮೂರ ಸಂಜಿಮುಂದ ಶಂಕ್ರಿ ಒಳಗಹೋದರಂಗ ಆಡಾಕಹತ್ತಿಯಲ್ಲ."...? "ಸುಳ್ಳೇ ಸುಳ್ಳು... ಈಭೂಮಿಮ್ಯಾಲೇ  ಎಲ್ಲಾ ಸುಳ್ಳು ಅಂದ್ರ ಹಂಗಾರ ಈಭೂಮಿ ಮ್ಯಾಗ ಸತ್ಯಾನ ಇಲ್ಲಾ ಅಂತಿಯೇನು"..?

"ಬೆಳಿಗ್ಗೆ  ರೇಡಿಯೋದಾಗ ಪ್ರೇಮ ಬರ್ದಿರೋ ಸೂಳ್ಳೇ ಸುಳ್ಳು ಈಭೂಮಿ ಮ್ಯಾಲೇ ಎಲ್ಲಾ ಸುಳ್ಳು ಅನ್ನೋ ಹಾಡು ಪ್ರಸಾರ ಆಗಾಕ ಹತ್ತಿತ್ತು"..! ಬೆಳಿಗ್ಗೆ ಪೇಪರನ್ಯಾಗ ಸುಳ್ಳಿನ ಸರಮಾಲಿನ ಹಾಕಿದ್ರು... ಅದಕ ಈಹಾಡನ್ನು ಹಂಗ.... ಅನ್ನಾಕ ಹತ್ತಿದ್ದೆ, ಅಷ್ಟರಾಗ ನೀವು ಒಕ್ಕರ್ಸಿದ್ರಿ…. ರೊಕ್ಕ ಎಲ್ಲಾಖಾಲಿ ಆಗ್ಯಾವು, ಇನ್ನ ಶಂಕ್ರಿ ಎಲ್ಲಿ ಹಿಗ್ಗೋದು.  "ಅಜ್ಜಿಗೆ ಅರವಿ ಚಿಂತ್ಯಾದ್ರ ಮೊಮ್ಮಗಳಿಗೆ ಅದೇನೋ ಚಿಂತಿ ಅಂತ ಅನ್ನಂಗಾತು ನೋಡ್ರಿ ಕಾಕಾ"... 

ಲೇ...ಲೇ ಕಬರಗೇಡಿ, ಈ "ಸುಳ್ಳೇ ಸುಳ್ಳು ಹಾಡು ಪ್ರೇಮಾ ಬರಿದಿಲ್ಲೋ"..? "ಈಹಾಡು ನಮ್ಮ ಶರೀಫಸಾಹೇಬ್ರ ತತ್ವಪದಾನೋ.ತತ್ವಪದಾ.....! ಈ ಸೀನ್ಮಾ ಮಂದಿ ಶರೀಫರ ತತ್ವಪದಾನೂ ಬಿಟ್ಟಿಲ್ಲಲ್ಲೋ"...? "ಶರೀಫರ ತತ್ವಪದಾನು ಕದ್ದು ಅದಕ್ಕ ಅವರ ಹೆಸರುಹಾಕ್ಕೊಂಡು ಬಳಸಕ್ಕೊಂಡಾರ ಅಂದ್ರ ಇವ್ರು ಎದಕೂ ಹೇಸೋದಿಲ್ಲ ನೋಡು."....!

 

"ಅಯ್ಯಯ್ಯೋ..... ಎಂತಾ ದ್ರೋಹಾ ಮಾಡ್ಯಾರ್ರೀ ಈ ಸೀನ್ಮಾ ಮಂದಿ"....! ನನ್ಗ ಗೊತ್ತಿರಲಿಲ್ಲ ನೋಡ್ರೀ ಕಾಕಾ..... "ಈ ಹಾಡು ಬಾಳಚಲೋ ಐತಿ, ಇಂತಾ ಹಾಡು ಪ್ರೇಮ ಕಾರಿಕೊಂಡಿರಬಹುದು..!  ಆದ್ರ ಬರ್ಯಾಕಂತು ಸಾಧ್ಯ ಇಲ್ಲ ಅಂತ ನನಗ ಅನುಮಾನ ಬಂದಿತ್ತು...!  ಅಷ್ಟರಾಗ ನೀವು ಬಂದು ನನ್ನ ತಲ್ಯಾಗ ಕೊರ್ಯಾಕ ಹತ್ತಿದ್ದ ಹೂಳಾನ ಕಿತ್ತಾಹಾಕಿದ್ರಿ".

  ಅಲ್ಲೋ ಅದೇನೋ ಪೇಪರನ್ಯಾಗ ಏನ ಬರ್ದಾರ ಅಂದೇಲ್ಲ, ಏನೋ ಅದು  ಸುದ್ದಿ......?

ಅಂತೇದ್ದೇನು ಇಲ್ಲ ಬಿಡ್ರಿ... ಅದ "ನಮ್ಮ ಮೋದಿ ಸಾಹೇಬ್ರು ಯಾವ್ದೋ ಟಿವಿಗೆ ಕೊಟ್ಟ ಸಂದರ್ಶನದ್ದೊಳ್ಗ  ನಾನು 1998 ರಾಗ ಇ-ಮೇಲ್ ಬಳಸಿದ್ದೆ, ಡಿಜಿಟಲ್ ಕ್ಯಾಮರಾದಾಗ ಅಡ್ವಾಣಿ ಪೋಟೋ ತಗದಿದ್ದೆ ಅಂತ ಹೇಳ್ಯಾರ ಅಂತ ಸುದ್ದಿ ಬಂದಿತ್ತು."...? ಅ  ಸುದ್ದಿನ ತಲಿ ಕೊರ್ಯಾಕ ಹತ್ತೇತಿ ನೋಡ್ರಿ.... ನೀವ..... ಒಂದಸಲಾ  ಈ "ಇ-ಮೇಲ್-ಆ-ಮೇಲ್" ಬಗ್ಗೆ ಏನೇನೋ ಹೇಳಿದಂಗ ಇತ್ತೂ...! ಅದಕ ನಿಮ್ಮ ದಾರಿ ಕಾಯಾಕ ಹತ್ತಿದ್ದೆ.....!

  "ಅಲ್ಲೋ ಇದ್ರಾಗ ಅವರಿವ್ರ್ನ ಕೇಳುವಂತಾದ್ದು ಏನ ಐತಿ.....? ಗೂಗಲ್‍ಗೆ ಹೋಗಿ ಹುಡಕಿದ್ರ ಉತ್ತರಾ ಸಿಗತಿತ್ತು."..!

ಹೋಗ್ರಿ ... ಹೋಗ್ರಿ... ಇಂತಾ "ಬಿಸಲಾಗ ಗೂಗÀಲ್‍ಗೆ ಹೋಗಿ ಬರಾಕ ಆಕೈತೇನು"..? ಹೇಳಿ ಕೇಳಿ... ಗೂಗಲ್ ಬಿಸಿಲೂರು, ಅಲ್ಲೆ ಈಹೊತ್ತಿನ್ಯಾಗ ಹೋಗಾಗ ಸಾಧ್ಯಾನ ಇಲ್ಲ ಬಿಡಿ"್ರ.....!

  ಲೇ... ಲೇ... ಕಬರಗೇಡಿ ಯಾವ ಗೂಗಲ್ ಅಂತ ತಿಳಕಂಡಿ...?

ಅದರಿ.... "ರಾಯಚೂರ ಜಿಲ್ಲಾದಾಗ ಐತೇಲ್ಲ ಗೂಗಲ್‍ಗ್ರಾಮ ಮತ್ತ ಅದರ ಮರಿ ಗೂಗಲಮರಿ ಊರಿಗೆ ಹೌದಲ್ಲ"...?

ಹೋಗೋ ಇವನವ್ನ...".ನಾ ಹೇಳಿದ್ದ ಒಂದು....ನೀ ತಿಳಕಳ್ಳದ ಒಂದು...." "ಲೇ ಎಪ್ಪಾ ನಾ ಹೇಳಿದ್ದು ರಾಯಚೂರ ಜಿಲ್ಲಾದನ ಗೂಗಲ್ ಗ್ರಾಮ ಅಲ್ಲೋ ತಂದೆ….! ಮೊಬೈಲ್ ಪೋನಿನೊಳಗ ಇರೋ ಗೂಗಲ್ಲೂ....."

ಹಂಗ್ ಹೇಳ್ರೀ ಮತ್ತ.... "ನೀವು ಗೂಗಲ್‍ಗೆ ಹೋಗಿ ಚೆಕ್ ಮಾಡು ಅಂದ್ರೆಲ್ಲ... ನಾನು ಗೂಗಲ್ ಊರಿಗೆ ಹೋಗೆ ಚೆಕ್ ಮಾಡಿಕೊಂಡು ಬರಬೇಕೇನೋ ಅಂತ ತಿಳಕಂಡಿದ್ದೆ..".!

" ತಿಳಕಂತಿಪಾ ಮಗನ ನೀ ಹಂಗ್ ತಿಳಕಂತಿ.....! ಎಲ್ಲಾ ಗೊತ್ತಿದ್ದೂ ಏನು ಗೊತ್ತಿಲ್ಲ್ದ ಮಳ್ಳನಂಹಂಗ್ ಇರ್ತೀದಿ"..... "ಅಲ್ಲಲೇ ಜಗತ್ತಿಗೆ ಈ ಇ-ಮೇಲ್ 1995-1996ನೇ ಇಸ್ವಿಗೆ ಪರಿಚಯಾ ಆಗೇತಿ....! ಇನ್ನ  ಡಿಜಟಲ್ ಕ್ಯಾಮೆರಾಗಳನ್ನ 1995ಕ್ಕ ಕ್ಯಾಮರಾ ಕಂಪನಿಯವ್ರು ಮಾರಾಟಕ್ಕ ಬಿಟ್ಟಿದ್ರು..." ಈವಿಷಯಾ ನನಗ ಹೆಂಗ್ ಗೊತ್ತಾತು ಅಂತೀಯೇನು..? ಅದನ್ನು  ಹೇಳೆ ಬಿಡ್ತನಿ ಕೇಳಿಸ್ಕೋ.. ನನಗ ಮೊದಲಿಂದಾನೂ ಕ್ಯಾಮರಾ ಹುಚ್ಚು ಇತ್ತು...! ಯಾವ್ದೋ ಪೇಪರ್ನಾಗ ಡಿಜಿಟಲ್ ಕ್ಯಾಮೆರಾ ಬಗ್ಗೆ ಲೇಖನ ಬಂದಿತ್ತು,  ಅದನ್ನ ಓದಿ 2000ನೇ ಇಸ್ವಾಗ  ನಾನು ಒಂದ ಡಿಜಿಟಲ್ ಕ್ಯಾಮರಾ ಕೊಂಡಕಂಡಿದ್ದೆ ನೋಡು.

ಹೌದ್ರೀ... ನನಗ ಗೊತ್ತಿರಲಿಲ್ಲ.! ಆದ್ರ "ಬೆಳಿಗ್ಗೆ ಬೆಳಿಗ್ಗೆ ನೀವು ಕ್ಯಾಮೇರಾ ಬ್ಯಾಗ್ ಕೊಳ್ಳಾಗ ಹಕ್ಕೊಂಡು ಕೆರೆ-ಕಟ್ಟಿ, ಹಳ್ಳ-ಕೊಳ್ಳ, ಗುಡ್ಡ-ಗವಾರಕ್ಕ ಹೋಗಿ ಪ್ರಾಣಿ-ಪಕ್ಷಿ ಪೋಟೋ ತಗೇದು ನೋಡಿದ್ದೆ".

 ಅದ ನೋಡೂ.. ಅದ "ಆ ಕ್ಯಾಮೆರಾ,...ಇನ್ನು ನನ್ನ ಹತ್ರಾ ಐತಿ. ಆದ್ರ ಅದು ಕೆಲಸಾ ಮಾಡಂಗಿಲ್ಲ...."

ಅಂದ್ರ... ಅದು ನಿಮ್ಮಹಂಗ್ ಆಗೇತಿ ಅನ್ರಿ... !

 ಸಿಟ್ಟಿನಿಂದ ಪಾಟೀಲ್ರು "ನಾ ಏನ್ ಆಗೇನ್ಲೇ ಮಗ್ನ.."? ಎನ್ನುತ್ತಾರೆ.

ಹಂಗಲ್ರೀ "ಕಾಕಾ ಒಮ್ಮೇಕ ಸಿಟ್ಟಿಗ್ಯಾಕ ಬರ್ತೀರಿ..." ಮಾತಿಗೆ ಹಂಗ್ ಅಂದೆ..... ನಿಮಗೂ ವಯಸ್ಸಾತಲ್ಲ.....! "ಹಂಗ್ ನಿಮ್ಮ ಕ್ಯಾಮರಾಕ್ಕು ವಯಸ್ಸಾಗಿರಬಹುದು ಅಂತ ಹೇಳ್ದೆ ಅಷ್ಟ..."!

  ಅನ್ನಪಾ...ಅನ್ನು  .... "ಹಣ್ಣೆಲೇ  ಉದ್ರ ಹೊತ್ತಿನ್ಯಾಗ ಚಿಗರೆಲಿ ನಗತಿತ್ತಂತ" ಹಂಗ ನನ್ನ ನೋಡಿ ನೀ ನಗಾಕ ಹತ್ತಿ.... ನಗಪಾ... ಮಗನ ನಗು... "ನಾಳೇ ನಿನಗೂ ವಯಸ್ಸಾಕ್ಕತಲ್ಲ ಅವಾಗ ಗೊತ್ತಾಕ್ಕೇತಿ ನಿನಗ."

 ಹಂಗಲ್ರೀ ಪಾಟೀಲ ಕಾಕಾ.... ಮಾತಿಗೆ ಹಂಗ ಅಂದೆ....ಅದೇನ್ರೀ. ಈ "ಇ-ಮೇಲು- ಆ-ಮೇಲಿನ ಕತಿ ಏನ್ರೀ..."?

 ನೋಡಪಾ ಈ "ಇ-ಮೇಲು ನನಗ ಗೊತ್ತಿದ್ದಂಗ1995-96ನೇ ಇಸ್ವಿ ಇಂದಾ ಚಾಲ್ತಿಗೆ ಬಂತೇನಪಾ...,!  ಇನ್ನ ಡಿಜಿಟಲ್ ಕ್ಯಾಮೇರಾ 1995ಕ್ಕ ಮಾರಾಟಕ್ಕಬಂದ್ ಸಂಗತಿ ನನಗ ಗೊತ್ತಿತ್ತು".!

 ಹಂಗಾರ "ನಮ್ಮ ಪ್ರಧಾನ ಮಂತ್ರಿ ಮೋದಿಯವರು ಗ್ರೇಟ್ ಬಿಡ್ರೀ....ಗ್ರೇಟ್.. ಅಲ್ರೀ ಅವರನ್ನ ಸುಕಾಸುಮ್ನ ಈ ಕೈಪಾರ್ಟಿಯವ್ರು, ಕಾಲು ಪಾರ್ಟಿಯವ್ರು  ಟೀಕಾ ಮಡ್ತಾರ ನೋಡ್ರಿ"..." ಕರೆ ಅಂದ್ರ ಮೋದಿ ಸಾಹೇಬ್ರು  ಪವಾಡ ಮಾಡ್ಯಾರ ನೋಡ್ರೀ.... ಕರೇವಗೂ ಅಂದ್ರೂ ಮೋದಿ ಸಾಹೇಬ್ರ ಪವಾಡ ಅಂದ್ರ ಪವಾಡ..!"

 ಹೌದೋ...ಹೌದು... ನಿಮ್ಮ ಮೋದಿ ಸಾಹೇಬ್ರು "ಕತ್ತಿ ನ ತೋರ್ಸಿ ಇದು ಕತ್ತೆ ಅಲ್ಲ ಕಾಡು ಕೋಣ ಅಂದ್ರೂ ನಾವು ಹೌದು ಅಂತ ಗೋಣ ಅಲ್ಲಾಡ್ಸಬೇಕು..."?, "ಇಲ್ಲಾಂದ್ರ ನಿಮ್ಮ ಮೋದಿಯವರ ಕಣ್ಣಾಗ ಮತ್ತ  ಮೋದಿ ಭಕ್ತರಕಣ್ಣಾಗ ನಾವು ದೇಶದ್ರೋಹಿಗಳು".  ಅಂತಾ ಪರಿಸ್ಥಿತಿನ ದೇಶದೊಳಗ ನಿರ್ಮಾಣಮಾಡಾಕ ಹತ್ತಾರ ನಿಮ್ಮಂತಾ ಮಂದಿ....? "ಅಲ್ಲೋ ನಿಮ್ಮ ಮೋದಿ ಸಾಹೇಬ್ರನ ಬಿಟ್ಟು ಬ್ಯಾರೇಯವ್ರು ದೇಶ ಆಳಹೊತ್ತಿನ್ಯಾಗ ಅದು ಜಗತ್ತಿಗೆ ಇನ್ನು ಪರಿಚಯಾನ ಆಗದ ಈ ಇ--ಮೇಲು-ಡಿಜಟಲ್ ಕ್ಯಾಮರಾನ ಒಂದ ವರ್ಷ ಮೊದಲ ನಿಮ್ಮ ಮೋದಿ ಸಾಹೇಬ್ರು ಬಳಿಸಿದ್ದ್ರು ಅಂದ್ರ ವಾವಾ.... ಗ್ರೇಟ್. ಅಲ್ಲೋ ಈಮಾತುಹೇಳ ಹೊತ್ತಿನ್ಯಾಗ ಅವ್ರಿಗೆ ಗೊತ್ತಿರಲಿಲ್ಲ ಇಮೇಲು-ಡಿಜಿಟಲ್ ಕ್ಯಾಮರಾ ಯಾವಾಗ ಬಿಡುಗಡೆ ಆದ್ವು ಅನ್ನೋದು". ಜನ ಏನು ಹೇಳಿದ್ರು ನಂಬತಾರ ಅನ್ನೋಕಾಲ ಹೋರಟಹೋಗೇತಿ."...!  "ಸುಳ್ಳನ್ನ ಸುಳ್ಳಿನ ತಲಿಮ್ಯಾಗ ಹೊಡದೋರಹಂಗ ಹೇಳೋ ನಿಮ್ಮ ಮೋದಿ ಸಾಹೇಬ್ರಿಗೆ ಈ ಇ-ಮೇಲು-ಡಿಜಿಟಲ್ ಕ್ಯಾಮೇರಾ ಯಾವಾಗ ಹುಟ್ಟಿದವು ಅನ್ನೋ ಇಸ್ವಿ ಗೊತ್ತಿರಲಿಲ್ಲಾ ಅಂದ್ರ ಹೆಂಗ್ಯ....?.

 ಇಂತಾ ಸುಳ್ಳ ಹೇಳಿಕೊಂಡ ಅವರು ಸುಳ್ಳಿನ ಸೌಧಾಕಟ್ಟತಾ ಬಂದಾರ..... ! ಇನ್ನ ನಿಮ್ಮಂತಾ ಭಕ್ತರು ಅವರು ಹೇಳೋಮಾತಿನ್ಯಾಗ ಕರೆ ಎಷ್ಟು-ಸುಳ್ಳು ಎಷ್ಟು ಅನ್ನೋದನ್ನ ಸರಾಸಗಟಾಗಿ ವಿಚಾರಾಮಾಡ್ದ "ಹಸಿ ಸುಳ್ಳಗಳನ್ನ ನಂಬಿ ಒಂದ ಸುಳ್ಳನ್ನು ಸಾವಿರ ಸರತಿ ಹೇಳ್ತಾ ಆ ಸುಳ್ಳನ್ನ ಸತ್ಯಾ ಮಾಡಾಕ ಹೊಂಟೀರಿ" ಎನ ಹೇಳಬೇಕು ನಿಮ್ಮಂತವರಿಗೆ....! "ನಮ್ಮ ಸೈನಿಕರು ಜೀವದ ಹಂಗ್ ತೊರ್ದು ಗಡಿಯೋಳ್ಗ ಭಯೋತ್ಪಾದಕರಮ್ಯಾಲ  ದಾಳಿ ಮಾಡಿದ್ರ ....ಆ ದಾಳಿನ ನಮ್ಮ ಮೋದಿ ಸಾಹೇಬ್ರ ದಾಳಿ ಮಾಡಿದ್ರು ಅಂತ ವಿಜಯೋತ್ಸವ ಆಚರಸ್ತೀರಿ"....ನಿಮ್ಮ "ಮೋದಿ ಸಾಹೇಬ್ರನ ಯಾರರ ಟೀಕಾ ಮಾಡಿದ್ರ ಅವರನ್ನ ದೇಶ ದ್ರೋಹಿಗಳನ್ನ ಕಂಡಂಗ್ ಕಾಣ್ತೀರಿ...". ".ಇಲ್ಲೆ ಯಾರೇನು ಮೇಲಿಂದ ಇಳ್ದ ಬಂದಿಲ"್ಲ..... "ಎಲ್ಲಾರೂ ತಾಯಿ ಹೊಟ್ಟಿಯಿಂದಾನ ಬರಬೇಕು.....  ಹಂಗ ದೊಡ್ಡೋರು ಇರಲಿ, ಸಣ್ಣೋರ ಇರಲಿ ತಾಯಿ ಹೊಟ್ಟಿಯಿಂದನ ಬಂದೇವಿ ಅನ್ನೋದನ್ನ ಯಾರು ಮರಿಬಾರ್ದು". "ದೇಶ  ಭಕ್ತಿ ಯಾರಪ್ಪನ ಸೊತ್ತು ಅಲ್ಲ" "ದೇಶ  ಭಕ್ತಿನ ಯಾರಾದ್ರು ಗುತ್ತಿಗೆ ಪಡಕೊಳ್ಳಾಕ ಆಕೈತೇನು"..? ಎಂದು ಸಾಧ್ಯಾನ ಇಲ್ಲ.   "ದೇಶ ಭಕ್ತಿ ಅನ್ನೋದು ಪ್ರತಿಯೊಬ್ಬ ಭಾರತೀಯನ ರಕ್ತದಾಗ ಐತಿ".  ಈರೀತಿ "ಸುಳ್ಳು ಹೇಳೋದು ಬಿಟ್ಟು ಕಷ್ಟದಾಗಿರೋ ಜನ್ರಿಗೆ ನೆರವಾಗೋ ಮೂಲಕ ಜನ್ರು ಕೊಟ್ಟಿರೋ ಅಧಿಕಾರನ ಜನ್ರ ಸಲವಾಗಿ ಬಳಸಬೇಕು".   "ಹಿಂಗ್ ವ್ಯಕ್ತಿ ಪೂಜೆ ಮಾಡೋದು ಬಿಟ್ಟು ಸಮಷ್ಟಿ ಪೂಜೆ ಮಾಡಬೇಕು...! ಇದಕ್ ಏನಂತೀ ಬಸಣ್ಣ ನೀ....".

 ಏ...ಹೌದು ಬಿಡ್ರಿ...., ನೀವು ಹೇಳೋ ಮಾತು ಕರೆ ಐತ್ರಿ.... ಆದ್ರ ಏನ ಮಾಡೋದು..! ನಾನು ಏನರ ಹೇಳಾಕ ಹೋದ್ರ ನನ್ನನ್ನು ಮೂಲಿಗುಂಪು ಮಾಡಿಬಿಡ್ತಾರ ಅನ್ನೋ ಭಯಾ ನನಗ ಕಾಡಾಕ ಹತ್ತೇತಿ...?

 ಏನಮಾಡೋದ್ಪಾ.... "ಶರೀಫರು ಹೇಳಿದಂಗ ಸೂಳ್ಳೇ ಸುಳ್ಳು ಈಭೂಮಿ ಮ್ಯಾಲೇ ಎಲ್ಲಾ ಸುಳ್ಳು ನಾನು ಸುಳ್ಳು...ನೀನು ಸುಳ್ಳು.... ಅವನು ಸುಳ್ಳು....

  ಸೃಷ್ಟಿಕರ್ತ ಬ್ರಹ್ನನು ಬರೆದ  ಹಣೆಬರ ಸುಳ್ಳು ಅನ್ನೊಹಂಗ ದೇಶದ ಹಣೆ ಬರಹ ನಾವು ಬರೆಯೋರು ನಮ್ಮನ್ನ ಬಿಟ್ಟರ ಯಾರು ಇಲ್ಲ...! ನಾವು ಹುಟ್ಟಿದ ಮ್ಯಾಲ ದೇಶಕ್ಕ  ಸೂರ್ಯ ಬೆಳಕ ನೀಡಾಕ  ಹತ್ಯಾನ, ನಾವು ಬರಲಿಲ್ಲಾಂದ್ರ ಸೂರ್ಯಾ ದೇಶಾನ ಬಿಟ್ಟು ಹೊಕ್ಕಿದ್ದ ಅನ್ನೊಹಂಗ್ ಜನರನ್ನು ಸುಳ್ಳಿನ ಮ್ಯಾಲ ಸುಳ್ಳಗಳನ್ನು ಹೇಳುತ್ತಾ ಜನರನ್ನ ನಂಬಿಸೋ ಪ್ರಯತ್ನ ನಡಸ್ಯಾರ " " ಹಸಿದ ಹೊಟ್ಟೆಗಳು ಹೆಚ್ಚುದಿನ ಜಪಿಸಂಗಿಲ್ಲ ರಾಮನಾಮ" "ದೇವರ ನಾಮದ ಜಪ ಹಸಿದ ಹೊಟ್ಟೆನ ತುಂಬಿಸೋದಿಲ್ಲ..!  "ದುಡಿಯವ ಕೈಗಳಿಗೆ ಕೆಲಸಬೇಕು, ಹಸಿದ ಹೊಟ್ಟೆಗೆ ಅನ್ನಬೇಕು."  ಆದ್ರ ದುರ್ದೆವ ಅಂದ್ರ  "ಹಸಕಂಡ ಹೊಟ್ಟಿಗೆ ಅನ್ನ ನೀಡೋ ಬದ್ಲು ದೇವ್ರ ನಾಮ ಜಪಮಾಡ್ರಿ ,.." "ದೇವ್ರಗುಡಿ ಕಟ್ಟಸತ್ತೇವಿ... ನಮ್ಮ ಪಕ್ಷಕ್ಕ ಮತಾಕೋಡ್ರಿ.. ಅನ್ನೋ ಮಂದಿ ಮುಂದ ದೇವ್ರು ಪ್ರತ್ಯಕ್ಷವಾಗಿ ನನಗ ಹೊಟ್ಟಿ ಹಸಿದೈತಿ ಅನ್ನ ಕೊಡ್ರಿಲೇ... ಅಂದ್ರು, ನಿನಗ ಗುಡಿ ಕಟ್ಟಸಾಕ ಹತ್ಯೇವಿ ದೇವ್ರ... ನೀ ಆರಾಮಾಗಿ ಐದವರ್ಷ ಬಿಟ್ಟು ಬಾ ಅಷ್ಟರಾಗ ನಿನಗ ಗುಡಿ ಕಟ್ಟಸಿ ಅನ್ನ ಬೇಸಿ ಹಾಕತೇವಿ ಅಲ್ಲಿಮನೀ ಇಲ್ಲಿಗೆ ಬರಬ್ಯಾಡ ನಡಿ ಅನ್ನಾಕು ಹೇಸದ ಮಂದಿ ಅದಾರ... "

ಈಗ ನೋಡ್ತಿಯಿಲ್ಲ ಮಹಾತ್ಮಾಗಾಂಧಿನ ಕೊಂದ ಗೋಡ್ಸೆನ್ ನಿಜವಾದ ದೇಶಭಕ್ತ ಅಂತಂತ ಹೇಳೋ ಮಂದಿ ಒಂದ ಕಡೆ ಆದ್ರ, ಈಗೋಡ್ಸೆಗ ಗುಡಿ ಕಟ್ಟಸತೇವಿ ಅಂತ ಕೆಲವು ಮಂದಿ ಹೇಳ್ಯಾಕ ಹತ್ಯಾರ. ಪ್ರಜ್ಞಾಸಿಂಗ್‍ಗ ಪ್ರಜ್ಞೆ ಐತೋ ಇಲ್ಲ….! ಗೋಡ್ಸೆನ ಹೊಗಳಾಳ. ಈಕಿನ ಬೆಂಬಲಿಸಿ ಎಂಪಿ ಕಟಿಲು, ಸಂವಿಧಾನ ಬದಲಾಯಿಸೋ ಈ ಮಂತ್ರಿ ಹೆಗ್ಡೆ ಹೇಳ್ಕಿ ನೀಡಾರಂತ… ಇವ್ರೀಗೆ ಮೈಮ್ಯಾಲ ಪ್ರಜ್ಞಾ ಇದ್ದಂಗ ಕಾಣೋದಿಲ್ಲ….?

ತಡೀರಿ.. ಪ್ರಜ್ಞಾಸಿಂಗ್‍ಗ ಪ್ರಜ್ಞೆ ಬಂದು ಅವರು ತಾವು ಮಹಾತ್ಮಗಾಂಧಿ ಬಗ್ಗೆ ನೀಡಿರೋ ಹೇಳ್ಕಿಗೆ ಕ್ಷಮೇ ಕೇಳ್ಯಾರ ಗೊತ್ತನ ನಿಮಗ.   ನಮ್ಮ ಪ್ರಧಾನಮಂತ್ರಿ ಮೋದಿ ಸಾಹೇಬ್ರು ಕ್ಷಮೇ ಕೋರಿದ್ರು ನಾನು ಮಾತ್ರ ಪ್ರಜ್ಞಾಸಿಂಗ್‍ನ್ನ ಕ್ಷಮಿಸೋದಿಲ್ಲ ಅಂತ ಹೇಳಿ ಗಾಂಧೀಜಿಯವರ ಬಗ್ಗೆ ಅವರಿಗಿರೋ ಪ್ರೀತಿನ ತೋರಿಸಿಕೊಂಡಾರ..!

 

ಆತು ಬಿಡೋ ಮಾರಾಯ.. ಮಹಾತ್ಮನ ಬಗ್ಗೆ ಅಷ್ಟರ ಗೌರವಾ ಇಟಗೊಂಡಾರಲ್ಲ ನಮ್ಮ ಪ್ರಧಾನ ಮಂತ್ರಿಗಳು ಸಾಕು . ಮಾತಾಡ್ತಾ ..ಮಾತಾಡ್ತಾ ಹೊತ್ತು ಹೋದದ್ದ ಗೊತ್ತಾಗಲಿಲ್ಲ... ಮನ್ಯಾಗ ಹಂಡ್ತಿ ತೆಂಗಿನ ಕಾಯಿ ತರಾಕ ಹೇಳಿದ್ಲು   ಆಗಲೇ ಟಾಯಿಮ್ 11 ಆತು ನಡಿ ಎನ್ನುತ್ತಾ ಇಬ್ಬರು ತಮ್ಮ ತಮ್ಮ ಮನೆಯಕಡೆಗೆ ಮುಖಮಾಡಿದರು.