ಹಸಿವು ಹಿಂಗಿಸದ ಪದ್ಮ ಪ್ರಶಸ್ತಿ

ಹಸಿವು ಹಿಂಗಿಸದ ಪದ್ಮ ಪ್ರಶಸ್ತಿ

ಉಳಿ ಸುತ್ತಿಗೆಯಿಂದಲೇ ಬೆಟ್ಟವನ್ನು ಕೊರೆದು ನೂರಾಹತ್ತು ಮೀಟರ್ ಉದ್ದದ ದಾರಿಯನ್ನು ನಿರ್ಮಿಸಿದ ಬಿಹಾರದ ದಶರತ್ ಮಾಂಝಿಯ ಹೆಸರನ್ನು ನೀವೆಲ್ಲ ಕೇಳಿರಬಹುದು. 

ಎರಡು ಹಳ್ಳಿಗಳು ಸೇರದಂತೆ ನಡುವೆ ಒಂದು ದೊಡ್ದ ಬೆಟ್ಟ. ಆ ಹಳ್ಳಿಯವರು ಈ ಹಳ್ಳಿಗೆ , ಈ ಹಳ್ಳಿಯವರು ಆ ಹಳ್ಳಿಗೆ ಹೋಗಬೇಕೆಂದರೆ ಬೆಟ್ಟವನ್ನು ಸುತ್ತುಹಾಕಿಯೇ ಬರಬೇಕು.  ಒಂದು ಆಸ್ಪೆತ್ರೆಯೂ ಇರದ ಗೆಹಲೂರು ಎಂಬ ಆ ಹಳ್ಳಿಯಿಂದ ಗಯಾದ ವಜೀರಗಂಜ್ ಆಸ್ಪತ್ರೆಗೆ ಹೋಗಬೇಕೆಂದರೆ ಬೆಟ್ಟವನ್ನು ಸುತ್ತಿಕೊಂಡೇ ಹೋಗಬೇಕು. ಸಕಾಲದಲ್ಲಿ ವೈದ್ಯಕೀಯ ಉಪಚಾರ ದೊರೆಯದೇ  ಮಾಂಝಿಯ ಪ್ರೀತಿಯ ಪತ್ನಿ ತೀರಿಹೋಗುತ್ತಾಳೆ. ಈ ಬೆಟ್ಟವೊಂದು ಇರದಿದ್ದರೆ ತನ್ನ ಹೆಂಡತಿ ಉಳಿಯುತ್ತಿದ್ದಳೆಂದು ಯೋಚಿಸಿದ ಮಾಂಝಿ ಬೆಟ್ಟವನ್ನು ಕೊರೆದು ರಸ್ತೆ ನಿರ್ಮಿಸಲು ಉಳಿ ಸುತ್ತಿಗೆ ಕೈಗೆತ್ತಿಕೊಳ್ಳುತ್ತಾನೆ.  ಊರ ಜನ ಹುಚ್ಚನೆಂದು ನಕ್ಕರೂ ತನ್ನ ಇರಾದೆ ಬದಲಿಸುವುದಿಲ್ಲ.  ಅವನ ಛಲ, ಅಚಲವಾದ ಶ್ರದ್ಧೆ ಮತ್ತು ಶ್ರಮವನ್ನು ಅರ್ಥಮಾಡಿಕೊಂಡ ಇಡೀ ಗ್ರಾಮವೇ ಮಾಂಝಿಯ ಸಹಾಯಕ್ಕೆ ನಿಲ್ಲುತ್ತದೆ.  

ಮನಸ್ಸಿದ್ದರೆ ಮಾರ್ಗ, ಪುಟ್ಟ ಇಲಿಯೂ ಬೆಟ್ಟವನ್ನು ಕೊರೆಯಬಲ್ಲದು  ಎನ್ನುವಂತೆ ಬಿಸಿಲು ಮಳೆ ಚಳಿಯೆನ್ನದೇ ಸತತವಾಗಿ 22 ವರುಷಗಳ ಕಾಲ ( 1960 -1982) ಬೆಟ್ಟವನ್ನು ಕೊರೆದು ಊರವರ ಹಿತಕ್ಕಾಗಿ ರಸ್ತೆ ನಿರ್ಮಿಸಿದ ದಶರಥ  ಮಾಂಝಿಯನ್ನು ಭಾರತ ಸರ್ಕಾರ ಪದ್ಮ ಪ್ರಶಸ್ತಿ ನೀಡಿ ಗೌರವಿಸುತ್ತದೆ.  

ನವಾಜುದ್ದೀನ ಸಿದ್ದಿಕಿ ಅಭಿನಯದ ಮಾಂಝಿ- ದ ಮೌಂಟನ್  ಮ್ಯಾನ್‍ ಸಿನಿಮಾವನ್ನು ವರ್ಷದ ಹಿಂದಷ್ಟೇ  ನೋಡಿದ್ದೆ.  ಅದಕ್ಕೂ ಮೊದಲು ಫಿಲ್ಮ್ ಡಿವಿಶನ್ ದಶರಥ ಮಾಂಝಿ ಕುರಿತ ಸಾಕ್ಷಚಿತ್ರವನ್ನು ಮಾಡಿತ್ತು.ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದೆನ್ನುವಂಥ ದಶರಥ ಮಾಂಝಿಯ ಆದರ್ಶಮಯ ಬದುಕನ್ನು ಆಧರಿಸಿ ಅನೇಕರು ಚಲನಚಿತ್ರಗಳನ್ನು ಮಾಡಿದ್ದಾರೆ.  ಅದರಲ್ಲಿ ಕನ್ನಡದ ’ ಒಲವೇ ಮಂದಾರ ’ ಮತ್ತು  ’ಭೂಮಿ ತಾಯಿಯ ಚೊಚ್ಚಲ ಮಗ’ ಚಿತ್ರಗಳು ಮಾಂಜಿಯ ಬದುಕಿನಿಂದ ಪ್ರೇರಣೆ ಪಡೆದವುಗಳು.  

ಅತಿ ಹಿಂದುಳಿದ ಮುಸಹರ್ ಸಮುದಾಯದ  ಈ ’ಬೆಟ್ಟದ ಮನುಷ್ಯ’  ದಶರಥ್  ಮಾಂಝಿ ಇಂದು ಬದುಕಿಲ್ಲ ಆದರೆ ಅವನ ಹೆಸರು ಅಜರಾಮರವಾಗಿದೆ.  ಬೆಟ್ಟವನ್ನು ಕೊರೆದು ಕಾಲುವೆ ನಿರ್ಮಿಸಿದ ದೈತಾರಿ ನಾಯಕ್ –ಮತ್ತೆ ದಶರಥ್ ಮಾಂಝಿಯನ್ನು ನೆನೆಪಿಗೆ ತಂದಿದ್ದಾನೆ.

ಓಡಿಶಾದ ಗೊನಾಸಿಕ ಬೆಟ್ಟವನ್ನು ಒಂಟಿಯಾಗಿ ಹಾರೆ ಗುದ್ದಲ್ಲಿ ಸನಿಕೆಗಳಿಂದ ಅಗೆದು ಸುಮಾರು ಮೂರು ಕಿ.ಮೀ ಉದ್ದದ ಕಾಲುವೆಯನ್ನು ಪರ್ವತದ ತೊರೆಯಿಂದ ನಿರ್ಮಿಸಿ ಹಳ್ಳಿಯ ನೂರು ಎಕರೆ ಕೃಷಿಭೂಮಿಗೆ ನೀರುಣಿಸಿದ ಶ್ರೇಯ ದೈತಾರಿಯದು. ಅವನ ಸಾಹಸಕ್ಕೆ ಮೂವರು ಸಹೋದರರು ಮತ್ತು ಇಬ್ಬರು ಸೋದರಳಿಯರು ಕನಸನ್ನು ನನಸಾಗಿಸಲು ಕೈಜೋಡಿಸಿದ್ದಾರೆ.   ಭುಯಾನ್ ಬುಡಕಟ್ಟು ಸಮುದಾಯದ ನಾಯಕನ ನಿಸ್ವಾರ್ಥ ಶ್ರಮವನ್ನು ಗುರುತಿಸಿ ಭಾರತ ಸರಕಾರ ಇದೇ ವರ್ಷ ಅತ್ಯುನ್ನತ ಪದ್ಮಶ್ರಿ ಯಿಂದ ಗೌರವಿಸಿತ್ತು. ಇಂದು ದೈತಾರಿ ನಾಯಕ್  ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ಸು ಕೊಡಬಯಸಿದ್ದು ಮಾಧ್ಯಮಗಳಲ್ಲಿ ಸದ್ದು ಮಾಡುತ್ತ ಪ್ರಜ್ಞಾವಂತರೆಲ್ಲ ಯೋಚಿಸುವಂತೆ  ಚರ್ಚೆಯೊಂದನ್ನು ಹುಟ್ಟುಹಾಕಿದೆ. 

ವಾಸ್ತವದಲ್ಲಿ ಓಡಿಸ್ಸಾದ ಮಾಂಝಿ, ಕ್ಯಾನಲ್ ಮ್ಯಾನ್ ಎಂದು ಗೌರವಕ್ಕೆ ಪಾತ್ರನಾದ ಎಪ್ಪತ್ತು ವರುಷದ ದೈತಾರಿಗೆ ಪ್ರಶಸ್ತಿ ಉರುಳಾಗಿದೆ. ಗ್ರಾಮಸ್ಥರ ದೃಷ್ಟಿಯಲ್ಲಿ ಆತ ದೊಡ್ದ ಮನುಷ್ಯ. ಅವನ ಬಗ್ಗೆ ಹಳ್ಳಿಗರಿಗೆ ಅಪಾರವಾದ ಗೌರವ, ಮನೆಯಲ್ಲಿ ದಾರಿದ್ರ್ಯವೇ ಹಾಸಿಹೊದ್ದು ಬಿದ್ದಿರುವ ದೈತಾರಿಗೆ ಈ ಸನ್ಮಾನಗಳಿಂದ ಹೊಟ್ಟೆ ತುಂಬುವುದೇ?   ಅವನ ಬದುಕಿನಲ್ಲಿ ಯಾವ ಸುಧಾರಣೆಯನ್ನೂ ಈ ಪ್ರಶಸ್ತಿ ತರಲಿಲ್ಲ.  

ದುಡಿವ ಕೈಗೆ ದುಡಿಮೆ ಬೇಕು. ಕಾಲುವೆ ತೋಡುವ ಮೊದಲು ದೈತಾರಿಗೆ ಕೂಲಿಯಾದರೂ ಸಿಕ್ಕುತ್ತಿತ್ತು. ಈಗ  ಅವನನ್ನು “ದೊಡ್ದ ಮನುಷ್ಯ”ನನ್ನಾಗಿಸಿದ ಪ್ರಶಸ್ತಿಯ ಭಯ-ಭಕ್ತಿಯಿಂದಾಗಿ ಯಾರೂ ಅವನಿಗೆ ಕೆಲಸ ಕೊಡುತ್ತಿಲ್ಲ. ಜನ ಕೆಲಸಕ್ಕೆ ಕರೆಯುವುದನ್ನು ಬಿಟ್ಟರು.  ಇಷ್ಟು ದೊಡ್ದ ಭಾರದಲ್ಲಿ ಜಜ್ಜಿಹೋದ ಅವನ ಹೊಟ್ಟೆ ಹಸಿವಿಗೆ ಕೂಳು ಬೇಕು,  ’ದುಡಿಮೆ ಕೊಡಿರಿ” ಎನ್ನುವ ಅವನ ಅಳಲನ್ನು ಕೇಳುವವರೇ ಇಲ್ಲವಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ಜರ್ಜರಿತ ಕುಟುಂಬ ಬೇರೆ ದಾರಿಗಾಣದೆ ಇರುವೆ ಗೂಡಿನ ಮೊಟ್ಟೆಗಳನ್ನು ತಿನ್ನುವಂತಾಗಿದೆ. ಬದುಕುವ ಎಲ್ಲಾ ಮಾರ್ಗಗಳು ಮುಚ್ಚಿಹೋಗಿವೆಯೆಂದು ದೈತಾರನಿಗೆ ತೀವ್ರವಾಗಿ ಅನಿಸತೊಡಗಿದೆ. 

ಓಡಿಸ್ಸಾ ಟಿವಿಯೊಂದರ ವರದಿಯ ಪ್ರಕಾರ ಮೂರು ವರ್ಷಗಳ ಕಾಲ ಬೆವರು ಸುರಿಸಿ ತೋಡಿದ ಕಚ್ಛಾ ಕಾಲುವೆಯನ್ನು  ಗಚ್ಚು ಸಿಮೆಂಟಿನಿಂದ ಗಟ್ಟಿಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ, ಸಂಬಂಧಪಟ್ಟ ಆಡಳಿತ ಮಂಡಳಿಗಳಿಗೆ ಕಳೆದ ಒಂದು ವರ್ಷದಿಂದ ಮನವಿಗಳನ್ನು ಸಲ್ಲಿಸುತ್ತಿದ್ದರೂ ಈ ರೈತರ ಅಹವಾಲುಗಳನ್ನು ಕೇಳುವವರಿಲ್ಲವಾಗಿದೆ.  ಆರೋಗ್ಯ ಸರಿಯಿಲ್ಲದ ದೈತಾರಿ ವೈದ್ಯಕೀಯ  ತಪಾಸಣೆಗಾಗಿ ಏಳು ಕಿಲೋ ಮೀಟರ್ ನಡೆದು ಹೋಗಬೇಕಾದ ದುಸ್ತಿತಿಯಿದೆ. ಯಾಕೆಂದರೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಅಂದಿನ ಆ ಪಕ್ಷ ಏನು ಮಾಡಿತು ಈ ಪಕ್ಷ ಏನು ಮಾಡಿತು ಎಂದು ಒಬ್ಬರಿಗೊಬ್ಬರ ಮೇಲೆ ಗೂಬೆ ಕೂರಿಸಿ ನಾಗರಿಕರ ಬದುಕನ್ನು ಅಸಹನೀಯಗೊಳಿಸಿರುವ ಪಕ್ಷಗಳಿಗೆ ಜನಸಾಮಾನ್ಯ  ಒಂದು ’ವೋಟ್  ಅಷ್ಟೇ. ಎಲ್ಲಾ ಯೋಜನೆಗಳೂ ಕಾಗದದಲ್ಲಿ ಸುಭದ್ರವಾಗಿವೆ. 

ಚುನಾವಣೆಯವರೆಗೂ ದಿನಕ್ಕೆ ಮೂರು ಮೂರು ರ್ಯಾಲಿ ನಡೆಸುವ ಭಾಷಣಗಳನ್ನು ಬಿಗಿಯುವ, ಹಳ್ಳಿಯ ಸಂದುಗೊಂದು ಕೊಳಚೆಗಳಲ್ಲೂ, ನಗರದ್ ಸ್ಲಂ ಪ್ರದೇಶಗಳಿಗೆ ಹೋಗಿ ಮತ ಬೇಡುವ ರಾಜಕಾರಣಿಗಳು ಚುನಾವಣೆಯ ನಂತರ ಊರುಕೇರಿಗಳನ್ನಷ್ಟೇ ಅಲ್ಲ ಮನುಷ್ಯರನ್ನೂ ಮರೆತುಬಿಡುತ್ತಾರೆ. ದೈತಾರಿಯ ಪ್ರಶಸ್ತಿಯಿಂದ ಹಳ್ಳಿಗರ ಬದುಕಿಗೂ ಅವನ ಸ್ವಂತ ಬದುಕಿಗೂ ನಯಾ ಪೈಸೆಯ ಪ್ರಯೋಜನವೂ  ಆಗಿಲ್ಲ. ಸಿಗುವ 700 ರುಪಾಯಿಯ ಮಾಶಾಸನದಿಂದ ಕುಟುಂಬದ ನಿರ್ವಹಣೆಗೆ ಏನೇನೂ ಸಾಕಾಗುವುದಿಲ್ಲ. ಬಿಜು ಆವಾಸ ಯೋಜನೆ ಅಡಿಯಲ್ಲಿ, ಪ್ರಧಾನ ಮಂತ್ರಿ ಆವಾಸ ಯೋಜನೆಯಲ್ಲಿ  ಮನೆಯೂ ಹಂಚಿಕೆಯಾಗಿದೆ. ಆದರೆ ಅದು ಕಾಗದಪತ್ರದಲ್ಲಿ ಮಾತ್ರ.  ಇನ್ನೂ ದೈತಾರಿಯ ಕುಟುಂಬ ಗುಡಿಸಲಲ್ಲಿಯೇ ವಾಸಿಸುತ್ತಿದೆ.  ಗ್ರಾಮದಲ್ಲಿ ಒಳ್ಳೆಯ ಆಸ್ಪೆತ್ರೆಯಿಲ್ಲ. ಪಕ್ಕಾ ರೋಡುಗಳಿಲ್ಲ,. ಕುಡಿಯುವ ನೀರಿಲ್ಲ , ಕೆಲವೆಡೆ  ವಿದ್ಯುಚ್ಚಕ್ತಿಯೂ ಇಲ್ಲ.  ಸಬಕಾ ಸಾಥ ಸಬಕಾ ವಿಕಾಸ್ ಘೋಷಣಾ ಪತ್ರಕ್ಕೆ ಸೀಮಿತವಾದಂತಿದೆ. 

ಗ್ರಾಮ ನಿವಾಸಿಯೊಬ್ಬನ ಹೇಳಿಕೆಯಂತೆ ದೈತಾರಿಯ ಪ್ರಶಸ್ತಿಯ ನಂತರ ಗ್ರಾಮದ ವಿಕಾಸವಾಗಬಹುದು ಎಂದುಕೊಂಡಿದ್ದರಂತೆ. ವಾಸ್ತವದಲ್ಲಿ ದೈತಾರಿಯ ಏಳಿಗೆಯೂ ಅಗಲಿಲ್ಲ ಊರಿನ ಏಳಿಗೆಯೂ ಆಗಲಿಲ್ಲ. ವಿಕಾಸದ ಯಾವ ರೈಲೂ ಹಳಿ ತಪ್ಪಿ ಇತ್ತ ಬರಲಿಲ್ಲ.  ಹಳ್ಳಿ ಮೊದಲು ಹೇಗಿತ್ತು ಹಾಗೇಯೇ ಇದೆ ಎನ್ನುತ್ತಾರೆ ಆತ ವಿಷಾದದಲ್ಲಿ.          

ಹಿಂದೂಸ್ತಾನ್ ಟೈಮ್ಸ್ ನ ವರದಿಯಂತೆ ದೈತಾರಿ ನಾಯಕ್ ತೆಂದೂ ಎಂಬ ಹೊಗೆಸೊಪ್ಪಿನ ಎಲೆಗಳನ್ನು (ಅಬನೂಸ್, ತೆಂದೂ ಎನ್ನುವ ಈ ಮರ ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ ವಿಂದ್ಯಾಚಲ ಬೆಟ್ಟ ಪ್ರದೇಶದಲ್ಲಿ ಬೆಳೆಯುತ್ತದೆ) ಮತ್ತು  ಮಾವಿನ ಹಪ್ಪಳಗಳನ್ನು ಮಾರಿ ಜೀವನ ಸಾಗಿಸುತ್ತಿದೆ. ಕಾಡಿನ ಉತ್ಪತ್ತಿಯಾದ ತೆಂದೂ ಎಲೆಗಳ ಮಾರಾಟ ಆದಿವಾಸಿಗಳ ಬದುಕಿನ ಭಾಗವೂ ಆಗಿದೆ. 

ಬೇಸಿಗೆ ಆರಂಭವಾಗುತ್ತಲೂ ರಾಶಿ ರಾಶಿ ಚಿಗುರುವ ಈ ತೆಂದೂ ಎಲೆಗಳ ಬೇಡಿಕೆ ಹೆಚ್ಚುತ್ತದೆ. ಆದಿವಾಸಿಗಳಿಗೂ ದಿನಗೂಲಿ ಸಿಗುವ ಸುಗ್ಗಿಯ ಕಾಲ. ಮಧ್ಯಪ್ರದೇಶ ಛತ್ತೀಸಗಡದ ಕಾಡುಮೇಡುಗಳಲ್ಲಿ ಹೇರಳವಾಗಿ ಬೆಳೆಯುವ ತೆಂದೂ ಎಲೆಗಳಿಂದ ಬೀಡಿ ತಯಾರಿಸಲಾಗುತ್ತಿದ್ದು ಸಾವಿರಾರು ಕೋಟಿಗಳ ಘೋಟಾಲೆಗಳೂ ನಡೆಯುತ್ತವೆ. ಸಾವಿರಾರು ಸಂಖ್ಯೆಯ ದಲ್ಲಾಳಿಗಳು ಈ ಪ್ರದೇಶದಲ್ಲಿ ಬೀಡುಬಿಡುತ್ತಾರೆ. ರಾಜಕಾರಣ ಯಾವ ವಾಣಿಜ್ಯ ಬೆಳೆಯನ್ನೂ ಬಿಟ್ಟಿಲ್ಲ.ಎಲ್ಲದರಲ್ಲೂ ಪಾಲು ಬೇಡುವ ದಲ್ಲಾಳಿಗಳನ್ನು ಸಾಕಿಕೊಂಡಿರುವ ಭ್ರಷ್ಟ ರಾಜಕಾರಣಿಗಳ ದುರ್ವ್ಯವಹಾರಗಳಿಗೆ ನಮ್ಮ ದೇಶದಲ್ಲಿ  ಲೆಕ್ಕವಿಲ್ಲ. ಆದಿವಾಸಿಗಳನ್ನು ಕಾಡಿನಿಂದ ಓಡಿಸುವ, ಸ್ಥಳಾಂತರಿಸುವ, ಅಪರಾಧಗಳಿಗೆ ಅವರನ್ನು ಹೊಣೆಮಾಡುವ, ಕಿರುಕುಳ ಕೊಡುವ ಧನದಾಹಿ ರಾಜಕಾರಣಕ್ಕೆ ಆಕ್ಟೋಪಸ್ ನಂತಹ ಸಹಸ್ರಾರು  ರಕ್ತಹೀರುವ ಕೈಬಾಯಿಗಳಿವೆ, ಉಸಿರುಗಟ್ಟಿಸುವ ತೋಳುಗಳಿವೆ.  ಆದರೆ ದೈತಾರನಂಥ ಬಡ ಕೃಷಿಕನಿಗೆ , ಶ್ರಮಿಕರಿಗೆ  ಅವರ ಶ್ರಮದ ಕೂಲಿ ಹಣ ಕೈಗೆ ಸಿಕ್ಕರೆ ಅದೇ ದೊಡ್ದದು. 

ಇನ್ನಾದರೂ ರಾಜ್ಯ ಸರಕಾರ ಎಚ್ಚೆತ್ತುಕೊಂಡು ದೈತಾರಿ ನಾಯಕನ ಮನದ ಮಾತುಗಳನ್ನು ಕೇಳಿಸಿಕೊಳ್ಳುವಂತಾಗಲಿ. ಪ್ರಶಸ್ತಿಗಾಗಿ ಬಾಯಿ ಬಾಯಿ ಬಿಡುವ, ಪೈಪೋಟಿ ನಡೆಸುವವರ, ಹೊಟ್ಟೆ ತುಂಬಿದವರ ಲೋಕದಲ್ಲಿ ಹೊಟ್ಟೆ ಹಸಿವಿನ ದನಿಗೆ  ಬೆಲೆಯಿಲ್ಲ. ನಿಜವೆಂದರೆ ಶಿಷ್ಟ ಸಮಾಜದ ದೊಡ್ದಸ್ತಿಕೆಯ ಕಣ್ಣುಗಳು ಅಸ್ಪೃಶ್ಯರಂತೆ ನಿಕೃಷ್ಟವಾಗಿ ನಡೆಸಿಕೊಳ್ಳುವ, ದೂರವಿಡುವ ಸಮುದಾಯದ ಈ ಜೀವಗಳ ಸಾಧನೆಯನ್ನು  ಯಾವ ಪ್ರಶಸ್ತಿಯೂ ಸರಿದೂಗಿಸಲಾರದು. ಪ್ರಶಸ್ತಿಗಳನ್ನು ಮೀರಿದ ಸಹೃದಯತೆ, ಮಾನವೀಯತೆಯ ಸಮಾಜಸೇವೆ ಇವರದು. ಸಮಾಜದಿಂದ ಪಡೆದುದಕ್ಕಿಂತಲೂ ಕೊಟ್ಟದ್ದೇ ಹೆಚ್ಚು.  ಬೆಲೆಕಟ್ಟಲಾಗದ್ದು ! ನಿಜಕ್ಕೂ ದೈತಾರಿ ನಾಯಕರು ಅಭಿನಂದನೀಯರು.       

ಕಷ್ಟಪಟ್ಟು ಅಗೆದ ಕಾಲುವೆ ನೂರ್ಕಾಲ ಬಾಳುವಂತೆ ಗಟ್ಟಿಗೊಳಿಸುವತ್ತ, ದೈತಾರಿಯ ಕಗ್ಗಳ್ಳಿಗೆ  ನೀರು, ಪಕ್ಕಾ ರಸ್ತೆ, ವಿದ್ಯುಚ್ಚಕ್ತಿ, ಶಾಲೆ, ಆಸ್ಪತ್ರೆಗಳನ್ನು ಒದಗಿಸುವತ್ತ ಸರಕಾರದ ಚಿತ್ತ ಹರಿಯಲೆಂದು ಕಾಯೋಣ…