ಮಾನವೀಯತೆಯ ಮಾಡೆಲ್-ರಂಗೂನಿನ ರಂಗೀನ್ ಗಂಗಜ್ಜಿ!

ಮಾನವೀಯತೆಯ ಮಾಡೆಲ್-ರಂಗೂನಿನ ರಂಗೀನ್ ಗಂಗಜ್ಜಿ!

ಆ ಅಜ್ಜಿ ನನ್ನ ಮುತ್ತಜ್ಜಿಯಂತಿದ್ದಳು. ಆ ಮುತ್ತಜ್ಜಿ ನನಗೆ ಕಥೆ ಹೇಳುತ್ತಿದ್ದಳು. ಆ ಕಥೆಗಳು ಈಗ ನನ್ನ ಸಂಪತ್ತು. ಆ ಸಂಪತ್ತು ಗುಪ್ತನಿಧಿಯಂತೆ ನನ್ನೊಳಗೇ ಇದೆ. ಯಾರಿಗೆ ಬೇಕೋ...ಯಾವಾಗ ಬೇಕೋ ಅದನ್ನ ಅವಾಗವಾಗ ಹೆಕ್ಕಿಕೊಂಡು ಬೇಕಾದವರಿಗೆ ಕೊಡುತ್ತಿರುತ್ತೇನೆ. ನನಗೂ ಆ ಕಥೆಗಳು ಬೇಕಾಗಿ, ಆ ಕಥೆಗಳೇ ಕೆಲವೊಮ್ಮೆ ನಾನಾಗಿ ಬದುಕುತ್ತಿರುವುದು ಕೂಡ ಸುಳ್ಳಲ್ಲ...

ಇತ್ತೀಚೆಗೆ ಭೀಕರ ಮಳೆ ಬಂತು. ಮಲೆನಾಡಿನ ಹಳೆ ವರ್ಷಗಳ ಮಳೆಗೆ ಹೋಲಿಸಿದರೆ ಅದೇನು ಅಂಥ ಮಳೆಯಲ್ಲ. ತಿಂಗಳಾನುಗಟ್ಟಲೆ ಸುರಿದರೂ ಮುಳುಗದಿದ್ದ ಮಲೆನಾಡು ನಾಲ್ಕುದಿನಗಳ ‘ಕೇವಲ ಮಳೆ’ಗೆ ತತ್ತರಿಸಿ ಹೋಗುತ್ತದೆಂದರೆ ಮಲೆನಾಡಿನ ವಾಸ್ತವ ಸ್ಥಿತಿ ಗೊತ್ತುಮಾಡಿಕೊಳ್ಳಬಹುದು. ಇಂಥ ಪ್ರವಾಹದ ಮಳೆಯಲ್ಲಿ ಈಜುಬಾರದ ಅಜ್ಜಿ, ಸ್ವಲ್ಪ ಬೆನ್ನು ಬಾಗಿಸಿಕೊಂಡು, ಬಹಳವೇ ಆತಂಕದಲ್ಲಿ ಅತ್ತ ಹೋಗುತ್ತಿದ್ದಳು- ಮತ್ತೆ ಅಚಾನಕ್ಕಾಗಿ ತಿರುಗಿ ಬಂದುಬಿಡುತ್ತಿದ್ದಳು. ಆ ಅಜ್ಜಿಯ ದೃಶ್ಯ ಹಾಗೇ ಹಲವೊಮ್ಮೆ ಕಂಡುಬಂತು. ಟಿವಿ ಕ್ಯಾಮರಾಗಳು ಅಂಗಡಿಗಳಿಗೆ ನೀರು ನುಗ್ಗುತ್ತಿರುವುದನ್ನು, ಚಿತ್ರಮಂದಿರ ಮುಳುಗುತ್ತಿರುವುದನ್ನು ಸೆರೆ ಹಿಡಿಯುತ್ತಿದ್ದವೇ ಹೊರತು ಆ ಅಜ್ಜಿಯ ಆತಂಕವನ್ನು ಸೆರೆಹಿಡಿಯುವ ಉಮ್ಮೀದಿನಲ್ಲಿ ಇರಲೇ ಇಲ್ಲ!

ಗಾಜನೂರು ಡ್ಯಾಮಿನ ನೀರು ತುಂಗೆಗೆ ಬಿಟ್ಟ ನಂತರ ತುಂಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವೇ? ಗುಂಡಿಗಳು, ಕೆಳಭಾಗದಲ್ಲಿರುವ ಬಡಾವಣೆಗಳಲ್ಲೆಲ್ಲ ಹೊಳೆ ನುಗ್ಗಿದ್ದಷ್ಟೇ...ಅಲ್ಲೇನಿರಲು ಸಾಧ್ಯ? ಮಣ್ಣಿನಿಂದ ನಿರ್ಮಿಸಿದ್ದೆಲ್ಲ ಮಣ್ಣಾಯಿತು.ಸಿಕ್ಕಿದ್ದೆಲ್ಲ ಕೊಚ್ಚಿ ಹೋಯಿತು. ಹೀಗೆ, ಎಲ್ಲದೂ ಕೊಚ್ಚಿ ಹೋಗುವ ಸಂದರ್ಭದಲ್ಲಿಯೇ ಕಣ್ಣಿಗೆ ಬಿದ್ದವಳು ಆ ಅಜ್ಜಿ..

ಮಾಧ್ಯಮಕ್ಕೆ ಮಮಕಾರ ಇರಬೇಕು. ಮಾಧ್ಯಮದ ಕಣ್ಣಲ್ಲಿ ಮನುಷ್ಯತ್ವ ಇರಲೇಬೇಕು.ಎಲ್ಲರೂ ಅದನ್ನು ಕಳೆದುಕೊಂಡಿರುವುದಿಲ್ಲ- ಅದೇ ನೆಮ್ಮದಿ. ಆ ಅಜ್ಜಿ ಮೊಣಕಾಲವರೆಗೆ ಮುಳುಗಿಕೊಂಡೇ ಓಡಾಡುತ್ತಾ, ಆತಂಕಪಡುತ್ತಾ ಇದ್ದಾಗಲೇ ಖಾಸಗಿ ವಾಹಿನಿಯ ವರದಿಗಾರನ ಕಣ್ಣಿಗೆ ಬಿದ್ದಳು. ಆ ವರದಿಗಾರ ಮಾತಾಡಿಸಿದ;

ಯಾಕಜ್ಜೀ ಏನಾಯ್ತು? ಯಾಕೆ ಈ ನೀರಲ್ಲಿ ಅತ್ಲಾಗಿತ್ಲಾಗ್ ಓಡಾಡ್ತಿದೀಯಾ?ಏನಾದ್ರೂ ಸಮಸ್ಯೇನಾ?’

ಪಾಪ, ಅಜ್ಜಿಗೆ ಏನು ಹೇಳಬೇಕೆಂದು ಗೊತ್ತಾಗದೇ ಆ ವರದಿಗಾರನ ಕೈಯನ್ನು ಹಿಡಿದುಕೊಂಡು ದರದರನೇ ತನ್ನ ಗೂಡಿದ್ದ ಜಾಗಕ್ಕೆ ಎಳೆದೊಯ್ದಿದ್ದಳು...ಥೇಟು ಗಾಂಧೀಜಿ ಮೊಮ್ಮಗುವಿನ ಕೈ ಹಿಡಿದು ಎಳೆದೊಯ್ದಂತೆ!

‘ದೇಖೋ ಬೇಟಾ ಇಧರ್...ಮೇರೆ ಬೇಟೇಕೋ ಬಚಾಲೋ...’- ಅಜ್ಜಿ ಕಣ್ಣೀರಿನ ಮಳೆ ಸುರಿಸುತ್ತಲೇ ಅಂಗಲಾಚತೊಡಗಿದ್ದಳು. ಆ ಅಜ್ಜಿಯ ಮಗ ಸಣ್ಣ ಆಳೇನಾಗಿರಲಿಲ್ಲ..ಕ್ವಿಂಟಾಲು ದಾಟುವಂತಿತ್ತು ಅವನ ತೂಕ. ಆ ವರದಿಗಾರನೋ ಸಪೂರ! ವರದಿಗಾರನಿಗೆ ತಕ್ಷಣಕ್ಕೆ ಹೊಳೆಯದಿದ್ದ ವಾಸ್ತವವೊಂದಿತ್ತಲ್ಲಿ... ಆ ಅಜ್ಜಿಯ ಮಗ ಲಕ್ವಾಪೀಡಿತನಾಗಿದ್ದ..ನಡೆಯುವುದಿರಲಿ ಕೂರುವುದೂ ಆ ವ್ಯಕ್ತಿಯಿಂದ ಕಷ್ಟವಿತ್ತು. ಹೇಗೋ ಹರಸಾಹಸ ಮಾಡಿ ಆತ ಚೇರೊಂದರಲ್ಲಿ ಕೂರಿಸಲ್ಪಟ್ಟಿದ್ದ. ನೀರು ಬುಳಕ್ ಬುಳಕ್ ಏರುತ್ತಲೇ ಇತ್ತು; ಜೊತೆಗೆ ಆ ಅಜ್ಜಿ ಮತ್ತು ಮಗನ ಜೀವಭಯ ಕೂಡ! ಹೇಗೋ ತನ್ನ ಬಳಗವನ್ನು ಕೂಗಿ ಕರೆಸಿಕೊಂಡ ವರದಿಗಾರ ಅಜ್ಜಿಯ ಲಕ್ವಾಪೀಡಿತ ಮಗನನ್ನು ಅಲ್ಲಿಂದ ಸ್ಥಳಾಂತರಿಸುವ ಕೆಲಸ ಮಾಡಿದ್ದ. ಜೊತೆಗೊಂದು ವರದಿಯನ್ನೂ ಮಾಡಿ ಜನರ, ಆಡಳಿತಗಾರರ ಗಮನ ಇತ್ತ ಸೆಳೆಯುವಂತೆ ನೋಡಿಕೊಂಡಿದ್ದ.

ಆ ಅಜ್ಜಿಗೆ ವೃದ್ಧಾಪ್ಯ ವೇತನ ಅಂತ ಬರುತ್ತಿದ್ತೆ; ಅದೇ ಆಕೆಯ ಜೀವನಾಧಾರ. ಆ ಅಜ್ಜಿಗೆ ಕಡಿಮೆ ವಯಸ್ಸಾಗಿರಲಿಲ್ಲ- ಬರೋಬ್ಬರಿ 95 ವರ್ಷದ ಅಜ್ಜಿ ಅದು. ಸ್ವಲ್ಪ ನಡುಬಾಗಿದರೂ ಗಟ್ಟಿಯಾಗಿ ಓಡಾಡಿಕೊಂಡಿತ್ತು. ಕಣ್ಣು ಸ್ಪಷ್ಟವಾಗಿತ್ತು. ಪಾದರಸದಂತಿತ್ತು. ಆಕೆಯ ಶರೀರದಲ್ಲಿ ಜಡತ್ವ ಕಾಣಲಿಲ್ಲ. ಆಕೆಗೆ ಇದ್ದಿದ್ದೇ ಒಂದು ದುಃಖ- ತನ್ನ ಸಾವಿನ ನಂತರ ನಿಷ್ಪ್ರಯೋಜಕ ದೇಹದ ಮಗನನ್ನು ಯಾರು ತಾನೇ ನೋಡಿಕೊಳ್ತಾರೆ? ಅನ್ನೋದು. ಉಣ್ಣಿಸುವುದರಿಂದ ಹಿಡಿದು ಮಲಮೂತ್ರ ತೊಳೆಯುವವರೆಗೂ ಈ ಅಜ್ಜಿಯದೇ ಕೆಲಸ. ಆ ಅಜ್ಜಿಯ ಹೆಸರೋ ಎ.ಎಸ್.ಗಂಗಮ್ಮ. ಮಗ ಕುಮಾರ; ದುಡಿಯಬೇಕಾದ ವಯಸ್ಸಲ್ಲಿ ಹೀಗೆ ಮೂಲೆ ಸೇರಿಕೊಂಡು ತೊಂಭತ್ತೈದರ ಅಜ್ಜಿಗೆ ಮತ್ತಷ್ಟು ಹೊರೆಯಾದವನು. ನಾನು ಯೋಚಿಸಿದೆ- ಮಗನ ಈ ಸ್ಥಿತಿ ನೋಡಿ ತಾಯಿ ಕರುಳು ಚಿರಂಜೀವಿಯಾಗುತ್ತಿದೆಯಾ?ಹಠಕ್ಕೆ ಬಿದ್ದು ಗಂಗಜ್ಜಿ ಬದುಕುತ್ತಿದ್ದಾಳಾ?!

ತನ್ನ ವಯೋವೃದ್ಧ ಬದುಕನ್ನು ಸಂಭಾಳಿಸಿಕೊಂಡು ಹೊರಟಿರುವ ಗಂಗಮ್ಮಳದು ಬಾಡಿಗೆ ಮನೆ. ತಿಂಗಳಿಗೆ ಸಾವಿರ ರೂ ಬಾಡಿಗೆ ಕಟ್ಟಿಕೊಂಡು, ಜೊತೆಗೆ ಕರೆಂಟ್ ಬಿಲ್ ಭರಿಸಿಕೊಂಡು, ಮಗನ ಅನಾರೋಗ್ಯ ಸರಿಪಡಿಸಲು ಹಗಲು ರಾತ್ರಿ ತೇಯುತ್ತಿದ್ದಾಳೆ ತನ್ನ ಬದುಕನ್ನು ಗಂಧದಂತೆ; ಗಂಧಕ್ಕೋ ಜೀವವಿರೋಲ್ಲ, ಈ ಅಜ್ಜಿಗಿದೆ. ಹೀಗೇ ಕಷ್ಟ- ಸುಖ ಮಾತಾಡುವಾಗ ಆ ಅಜ್ಜಿಯ ಭೂತಕಾಲ ಕೆದಕುವ ಅಸೆಯಾಗಿ ಕೇಳಿದೆ; ‘ಯಾವೂರು ನಿಂದಜ್ಜಿ?’
ಆ ಅಜ್ಜಿ ಗಂಗಮ್ಮಳಿಗೆ ಅದೇನನಿಸಿತೋ, ಮೊದಲಬಾರಿಗೆಂಬಂತೆ ತನ್ನ ಆತ್ಮಕಥೆಯನ್ನು ತೆರೆದಿಟ್ಟುಬಿಟ್ಟಳು ಆ ಅದೇ ಥಂಡಿ ನೆಲದ ಮೇಲೆ ನಿಂತು. ಅವಳ ಕಣ್ಣಲ್ಲಿದ್ದ ಮನೆಮುಳುಗಿದ ನೋವು, ಮಗನ ಅನಾರೋಗ್ಯದ ನೋವು, ತನ್ನ ವಯೋಸಹಜ ನೋವು ಮರೆತು ಗಂಗಜ್ಜಿ ಶುರುಮಾಡಿದಳು ತನ್ನ ಬದುಕಿನ ಕಥಾನಕ-

ಮೈ ರಂಗೂನ್ ಕೀ ಹೂಂ...’ ಎಂದಾಗ ಕುತೂಹಲದ ಅಧ್ಯಾಯವೊಂದು ಇಲ್ಲಿ ತೆರೆದುಕೊಳ್ಳಲಿದೆ ಎಂಬುದು ನನಗೆ ಖಾತರಿಯಾಯ್ತು; ಬರ್ಮಾದ ರಂಗೂನಿನ ಹುಡುಗಿಯಾಗಿದ್ದ ಗಂಗಮ್ಮಳಿಗೆ ಮದುವೆಯಾಗಿದ್ದು ಆಂಧ್ರಪ್ರದೇಶದ ಎ.ಸುಬ್ಬನಾಯ್ಡು. ಈ ಸುಬ್ಬನಾಯ್ಡು ಬ್ರಿಟೀಷ್ ಸೈನಿಕರಿಗೆ ಕೋಟ್‍ಗಳನ್ನು ಹೊಲಿದುಕೊಡುವುದರಲ್ಲಿ ಸಿದ್ಧಹಸ್ತನಾಗಿದ್ದ. ಈ ನಾಯ್ಡುಗೆ ಒಬ್ಬ ದೋಸ್ತ್ ಇದ್ದ.ಅವನು ಖಾಸಿಂಖಾನ್.ಇಬ್ಬರೂ ಬ್ರಿಟೀಷ್ ಸೈನಿಕರಾಗುವ ಕನಸು ಕಾಣುತ್ತಾ ಸೈನ್ಯ ಸೇರಿಕೊಳ್ಳುತ್ತಾರೆ. ಒಟ್ಟಿಗೇ ಆಡಿ,ಬೆಳೆದಿದ್ದ ಸ್ನೇಹಿತರು ಸೈನಿಕರಾಗುತ್ತಲೇ ಒಂದೊಂದು ದಿಕ್ಕಿಗೆ ಸೇವೆಗೆಂದು ನಿಯುಕ್ತರಾಗಿಬಿಡುತ್ತಾರೆ. ಬರ್ಮಾದ ಬಳಿ ಸೇವೆಯಲ್ಲಿದ್ದಾಗ ಅಲ್ಲೊಬ್ಬರ ಸ್ನೇಹ ನಾಯ್ಡುಗೆ ಆಗುತ್ತೆ. ಆತ ಇದೇ ಗಂಗಮ್ಮರ ಮಾವನ ಮಗ. ಅಲ್ಲಿ ಗಂಗಮ್ಮ ಜೊತೆ ನಾಯ್ಡು ಮದುವೆಯಾಗಿ, ರಂಗೀನ್ ಕನಸು ಕಾಣುತ್ತಲೇ ದೇಶ ಸುತ್ತುವ ನಿರ್ಧಾರಕ್ಕೆ ನವಜೋಡಿ ಬರುತ್ತೆ. ದೇಶ ಸುತ್ತಿಕೊಂಡು ಬರುವಾಗ ಶಿವಮೊಗ್ಗದಲ್ಲಿ ಈ ಜೋಡಿ ಉಳಿದುಕೊಳ್ಳುತ್ತೆ. ಅದೇ ಫೈನಲ್; ಶಿವಮೊಗ್ಗವೇ ನೆಲೆಬೀಡಾಗಿಬಿಡುತ್ತೆ.

ಗಂಗಮ್ಮ ಗಾಂಧೀಜಿಯನ್ನು ನೋಡಿದ್ದಾರೆ, ಮಾತನಾಡಿಸಿದ್ದಾರೆ.ಬಹಳ ಪ್ರೀತಿಯಿಂದಲೇ ಹೇಳಿಕೊಳ್ಳುತ್ತಾರೆ ಅದನ್ನ. ಸುಭಾಷ್ ಚಂದ್ರ ಬೋಸ್ ಬಗ್ಗೆ ನಿಖರವಾಗಿ ಹೇಳುವ ಅಜ್ಜಿ ಗಂಗಮ್ಮಳಿಗೆ ಸುಭಾಷ್ ರವರ ಮೇಲಿದ್ದ ಅಭಿಮಾನ ಎಂಥದ್ದು ಎಂಬುದು ಅರ್ಥ ಮಾಡಿಕೊಳ್ಳಬಹುದು. ಬಹಳವೇ ಪ್ರೀತಿಸುತ್ತಿದ್ದ ನಾಯ್ಡು ತೀರಿಕೊಂಡು ಇಪ್ಪತ್ತು ವರ್ಷಗಳೇ ಕಳೆದಿವೆ. ಇದ್ದ ಮಕ್ಕಳೆಲ್ಲ ಇಲ್ಲವಾಗಿದ್ದಾರೆ. ಇರುವ ಒಬ್ಬ ಮಗನಿಗೆ ತನ್ನದೇ ದೇಹ ಭಾರ...ಭಾರ...

ತನಗೆ ಮಾತನಾಡಿಸುವವರನ್ನೆಲ್ಲ ಮೊಮ್ಮಕ್ಕಳಂತೆಯೇ ಕಂಡು ಪ್ರೀತಿಯಿಂದ ಮಾತನಾಡುವ ಗಂಗಜ್ಜಿ ಈ ದೇಶದ ಮಾನವೀಯತೆಯ ಮಾಡೆಲ್!