ಮನುಷ್ಯತ್ವ ಮತ್ತೆ ಮತ್ತೂ

ಮನುಷ್ಯತ್ವ ಮತ್ತೆ ಮತ್ತೂ

ಕೋಪ ತರಿಸಿದ್ದ ಮಗ."ಮಗನೇ ಸ್ವಲ್ಪ ಮನುಷ್ಯತ್ವ ಇರ್ಲಿ" ಅಂದೆ.ಕೇವಲ ಹತ್ತು ವರ್ಷದ ಮಗನಿಗೆ ಇದು ಭಾರವಾದ ಹೇಳಿಕೆಯಾಯಿತೇನೋ! ಅವನು ಮತ್ತೆ ಅದೇ ಕಿಲಾಡಿತನದಿಂದ "ಮನುಷ್ಯತ್ವ ಅಂದ್ರೆ ಏನರ್ಥ ಪಪ್ಪಾ" ಅಂದ."ಅಂದ್ರೆ ಬೇರೆಯವರಿಗೆ ತೊಂದರೆ ಕೊಡದೇ ಇರೋದು.ಪ್ರೀತಿ ಅಂತಃಕರಣದಿಂದ ನೋಡೋದು" ಅಂದೆ. ಮತ್ತೂ "ಅಂದ್ರೆ?" ಅಂದ. "ದೊಡ್ಡವನಾಗು ಎಲ್ಲಾ ತಿಳಿಯುತ್ತೆ" ಅನ್ನೋ ಹೊತ್ತಿಗೆ ಮೊಬೈಲ್ ರಿಂಗಾಯ್ತು. ಅನೇಕ ತಿಂಗಳ ನಂತರ ವಿನಯ್ ಕರೆ ಮಾಡಿದ್ದ್ರು."ಯಾಕ್ಸಾರ್ ತುಂಬಾ ತಿಂಗಳ ನಂತರ ನೆನಪು ಮಾಡ್ಕೊಂಡಿದ್ದೀರಿ" ಅಂದದ್ದಕ್ಕೆ "ಬಿಡುವಿದ್ದ್ರೆ ಇವತ್ತೇ ತೋಟಕ್ಕೆ ಬನ್ನಿ" ಅಂದರು.

ವಿನಯ್ ಮೆಲು ಮಾತಿನವರು. ಗೋದಿ ಬಣ್ಣದ ತೆಳು ಮೈಕಟ್ಟು. ನಲವತ್ತು ದಾಟಿದ ವಯಸ್ಸು. ಅರೆಬರೆ ಕಪ್ಪು ಬಿಳಿ ಬೆರೆತ ಕುರುಚಲು ಗಡ್ಡದ ಮುಖದಲ್ಲಿ ಎಳೆ ಬೆಳದಿಂಗಳ ನಗು.ಬೆಣ್ಣಿಗೇರಿ ಎಂಬ ಮಹಾನಗರದಿಂದ ನಲವತ್ತೋ ನಲವತ್ತೈದೋ ಕಿಲೋಮೀಟರ್ ದೂರ ಹೋದರೆ ರಂಗಯ್ಯನ ಗುಡ್ಡದ ತಪ್ಪಲಿನಲ್ಲಿ ಅವರ ತೋಟ.

ಬೆಂಡಿಗೇರಿಯ ಟ್ರಾಫಿಕ್ಕು ದಾಟಿಕೊಂಡು ಜಂತುಕುಂಟೆ ಎಂಬ ಹಳ್ಳಿ ಮುಗಿದ ಕೂಡಲೇ ಭತ್ತದ ಗದ್ದೆಗಳು ಎತ್ತ ನೋಡಿದರೂ ಹಾಸಿದ್ದವು.ಜೋರಾಗಿ ಬೀಸುತ್ತಿದ್ದ ಗಾಳಿಗೆ ಪೆಸ್ಟಿಸೈಡ್ ಘಾಟು ನೆತ್ತಿಗೇರಿದಂತಾಗಿ ಕೆಮ್ಮು ಬಂತು. ಸುತ್ತಲೂ ಕಣ್ಣಾಡಿಸಿದಾಗ ವೃತ್ತಾಕಾರದಲ್ಲಿದ್ದ ಗದ್ದೆಗಳಾಚೆ ದೂರದಲ್ಲಿ ಅಡಕೆ ತೋಟಗಳು ಪಹರೆ ಕಾಯುವವರಂತೆ ನಿಂತಿದ್ದವು. ನೀರಾವರಿ ಪ್ರದೇಶ ಮುಗಿಯುತ್ತಿದ್ದಂತೆ ಬಿತ್ತಲು ಅಣಿ ಮಾಡಿದ್ದ ಖಾಲಿ ಹೊಲಗಳು. ಜೂನ್ ಕಳೆದರೂ ಬಾರದ ಮಳೆ. ಆನೆ ಹಿಂಡಿನಂತೆ ಓಡುವ ಮೋಡಗಳು ಶಾಸ್ತ್ರಕ್ಕೆ ನೀರು ಚಿಮುಕಿಸುವಂತೆ ತುಂತುರು ಹನಿದು ಮರೆಯಾಗುತ್ತಿದ್ದವು. 

ರಂಗಯ್ಯನ ಗುಡ್ಡವನ್ನು ಎಡಕ್ಕೆ ಬಿಟ್ಟುಕೊಂಡು, ಬಲಕ್ಕೆ ಬಳಸಿದ ಮಣ್ಣಿನ ದಾರಿಯಲ್ಲಿ ಐದಾರು ಕಿಲೋಮೀಟರ್ ಸರಿದು ವಿನಯ್ ಅವರ ತೋಟ ತಲುಪಿದಾಗ ಬೆಳಗ್ಗೆ ಹನ್ನೊಂದು ಗಂಟೆ. ತೋಟದ ಬಾಗಿಲಿನಿಂದ ಒಳಗೆ ಒಂದು ಕಣದಷ್ಟಗಲದ ಜಾಗ ಬಿಟ್ಟುಕೊಂಡು ಕಟ್ಟಿದ್ದ ಮಣ್ಣಿನ ಗೋಡೆಯ,ಕೆಂಪು ಹೆಂಚು ಹೊದಿಸಿದ್ದ ತೊಟ್ಟಿ ಮನೆ. ಹಕ್ಕಿಗಳ ಉಲಿ ಮಾತ್ರ ಕೇಳುತ್ತಿದ್ದ ಆ ಜಾಗದಲ್ಲಿ ಆಷಾಢ ಗಾಳಿಯದೊಂದಿಷ್ಟು ಸದ್ದು ಸೇರಿ ಮೌನವೇ ಒಂದು ಸುದೀರ್ಘ ಲಹರಿಯಾಗಿ ಹಾಡುತ್ತಿರುವಂತಿತ್ತು. ನನ್ನ ನೋಡಿದವರೇ ತೂಗು ಮಂಚದಿಂದಿಳಿದು ಎದುರುಗೊಂಡ ವಿನಯ್ ನಕ್ಕು ಭುಜ ತಟ್ಟಿದರಷ್ಟೇ.ಆತ್ಮೀಯತೆಯ ಸಂಚಾರವಾಗಿ ನಾನು ಸಣ್ಣಗೆ ನಕ್ಕು, ಹೊರಗಟ್ಟೆಗೆ ಹಾಸಿದ್ದ ಕಂಬಳಿ ಮೇಲೆ ಕುಳಿತೆ. ಎಪ್ಪತ್ತು ವರ್ಷವಿರಬಹುದಾದ ವಿನಯ್ ತಾಯಿ ಪಾನಕ ಕೊಟ್ಟರು. ಅವರ ಮನೆಯ ಬಲಭಾಗದಿಂದ ಹಿಂಭಾಗದವರೆಗೂ ಬೆಳೆದು ನಿಂತಿದ್ದ ವಿವಿಧ ಗಿಡ ಮರಗಳ ತೋಟ ಗಂಭೀರವಾಗಿದ್ದಂತಿತ್ತು. ಅದನ್ನು ನೋಡುತ್ತಲೇ ಅಂತರ್ಮುಖಿಯಾಗಿದ್ದ ನನ್ನ "ಹೊರಗಡೆ ಈ ಗಾಳಿ ಶಬ್ದ ಜಾಸ್ತಿ. ಬನ್ನಿ ಒಳಗೆ ನಿಮಗೇನೋ ಓದೋದಿದೆ" ಎಂದು ಒಳ ಕರೆದುಕೊಂಡು ಹೋದರು ವಿನಯ್. ಸ್ವಚ್ಛ ಬೆಳಕಿನ ಅವರ ಪುಟ್ಟ ಕೋಣೆಯಲ್ಲಿ ಇಬ್ಬರೂ ಕೂತೆವು ಅಡಿಯೆತ್ತರದ ತೆಂಗಿನ ಕಾಂಡಗಳಿಗೆ ಅಡಕೆ ದಬ್ಬೆ ಹಾಸಿ ಅವರೇ ಮಾಡಿಟ್ಟುಕೊಂಡ ಬೆಂಚಿನ ಮೇಲೆ.

"ನನಗೆ ಮೊದಲಿನಿಂದಲೂ ರಾತ್ರಿ ಬೇಗ ನಿದ್ದೆ ಬರಲ್ಲ. ಹಂಗೂ ಹಿಂಗೂ ನೀವು ಕೊಟ್ಟು ಹೋದ ಕತೆ ಪುಸ್ತಕಗಳನ್ನು ಓದಿದೆ. ನಿನ್ನೆ ರಾತ್ರಿ ನನಗೂ ಏನೋ ಬರೀಬೇಕು ಅನ್ನಿಸ್ತು.ಮುಗಿಸ್ದಾಗ ಹೆಚ್ಚು ಕಡಿಮೆ ನಾಲಕ್ಕು ಗಂಟೆ ದಾಟಿತ್ತು.ಆಮೇಲೆ ಏನೋ ಒಂಥರಾ ನಿರಾಳ. ಬರೆದದ್ದೇ ಮತ್ತೆ ಮತ್ತೆ ಕಾಡ್ತಿತ್ತು. ನಿಮಗಾದ್ರೂ ಓದಿ ಇದರಿಂದ ಬಿಡುಗಡೆ ಪಡೆಯೋಣೂಂತ ಕರೆದಿದ್ದು" ಅಂದವರೇ ಓದಲಿಕ್ಕೆ ಶುರು ಮಾಡಿದರು.

ಅದಾಗಲೇ ಚಳಿ ಅಡರುತ್ತಾ ಸೂರ್ಯ ಬಾಡಿ ಹೋಗಿದ್ದ. ಹಾಸ್ಟೆಲ್ ರೂಮುಗಳು, ಕಾರಿಡಾರ್ ಗಳು ಗದ್ದಲದಿಂದ ತುಂಬಿದ್ದವು. ಗುಡ್ ಬೈ ಟು 99 ಎಂದು ಕಿರುಚುತ್ತಿರುವ ಹುಡುಗರು.ಹೊರಗೆ ರಸ್ತೆಯ ಬದಿ ಬೈಕ್ ಸ್ಟ್ಯಾಂಡ್ ನಲ್ಲೇ ನಿಲ್ಲಿಸಿದ ಬೈಕುಗಳ ಒದರಿಸುತ್ತ  ಕೇಕೆ ಹಾಕುತ್ತಿದ್ದ ಮತ್ತೆ ಕೆಲವರು.ಬಾತ್ ರೂಂ ನಿಂದ ಆಗತಾನೆ ಸ್ನಾನಿಸಿ ಹೊರಬಂದ ಕರಣ್ ಪಾಪ್ ಸಾಂಗ್ ಗುನುಗುತ್ತಿದ್ದ. ಕನ್ನಡಿ ಮುಂದೆ ನಿಂತು ತಲೆಗೂದಲಲ್ಲಿ ಬೆರಳಾಡಿಸಿಕೊಂಡು, ಮಂಚದ ಮೇಲೆ ಅಡ್ಡಾಗಿದ್ದ ವಿನಯ್ ಕಡೆ ತಿರುಗಿ "ವಿನ್ನ್ಯಾ ಶೋಲ್ಡರ್ ಮಸಲ್ಸ್ ನೋಡು,ಈ ಒಂದು  ತಿಂಗಳು ಜಿಮ್ ಮಾಡಿದ್ಕೆ" ಎಂದು ಪೈಲ್ವಾನನಂತೆ ರಟ್ಟೆ ಬಡಿದು ಕುಣಿಸಿದ.ವಿನಯ್ ಹ್ಞಾ ಎಂದು ನಕ್ಕ ಅಷ್ಟೇ. ಯಾರ್ಡ್ಲೀ ಪೌಡರ್ ಕಂಕುಳಿಗೆ ಹಾಕಿಕೊಳ್ಳುತ್ತಾ ರೂಮನ್ನು ಪರಿಮಳದ ಧೂಳಿನಲ್ಲಿ ತೇಲಿಸಿದ ವಿನಯ್ "ಡಿಸೆಂಬರ್ ಥರ್ಟಿಫಸ್ಟ್ ಕಣೋ ವಿನ್ನ್ಯಾ, ಪಬ್ಬಿಗೆ ಬರಲ್ವಾ ಇವತ್ತು?" ಎಂದ. 
"
Not interested"-ವಿನಯ್.

" ದುಡ್ಡಿಲ್ಲ ಅಂತ ಹೇಳೋ ಮಗ,ಫಿಲಾಸಫರ್ ತರ ಬ್ಯುಲ್ಡಪ್ ಕೊಡ್ಬ್ಯಾಡ"-ಕರಣ್

"ದುಡ್ಡೂ ಇಲ್ಲ, ಇಂಟರೆಸ್ಟೂ ಇಲ್ಲ"-ವಿನಯ್

"ಎಂ.ಡಿ. ಸೀಟ್ನೂ ಕೋಟಾದಲ್ಲಿ ಫ್ರೀ ತಗೊಂಡ್ಬಂದೀ ದೇವ್ರ ಮಗನೇ.ಎಂಜಾಯ್ ಮಾಡೋದ್ಕೂ ಕಂಜೂಸ್ ಬುದ್ದಿ ತೋರಿಸ್ತೀಯಲ್ಲಲೋ. ನಾನು ಇಪ್ಪತ್ತು ಲಕ್ಷ ಬಡ್ದೀನಿ ಮಗಾ"-ಕರಣ್.

ಈ ಮಾತಿನಿಂದ ವಿನಯ್ ಗೆ ಸಿಟ್ಟು ಬಂತು. ಕರಣ್ ಬುದ್ಧೀನೇ ಅಷ್ಟು ಅಂದುಕೊಂಡು"ಏನಾದ್ರೂ ಅನ್ಕೋಪ" ಅಂದು ಬೋರಲಾದ."ಮಗ ನನ್ನ ಎನ್ ಫೀಲ್ಡ್ ಕೀ ಎಲ್ಲೋ? ಅದಾಗಲೇ ಆ ತಲೆತಿರುಕಿ ಹೊರಗಡೆ ಕಾಯ್ತಿದ್ದಾಳೆ.ಕರಣ್ ನಿನ್ ಬ್ಯಾಕ್ ಸೈಡ್ನಿಂದ ಹಗ್ ಮಾಡ್ಕೊಂಡ್ ಹೈವೇಲಿ ರೈಡಿಂಗ್ ಹೋಗೋದು ಸಕತ್ ಇಷ್ಟ ಕಣೋ....ಪಾರ್ಟಿಲಿಂದ ರಿಟರ್ನ್ ಆಗೋವಾಗ ನೀನು ತಲೆ ಗಿಮ್ಮನ್ನಂಗೆ ಬೈಕ್ ಓಡಿಸ್ತಿರ್ಬೇಕು. ನಾನು ಎರಡೂ ಕೈಗಳ್ನ ಗಾಳೀಲಾಡಿಸ್ತಾ ತೇಲ್ತಿರ್ಬೇಕು"  ಹೀಗೆ ಕರಣ್ ಒಬ್ನೇ Mono acting   ಮಾಡ್ತಾ ಡ್ರೆಸ್ನಲ್ಲಿ ಮೈತುರುಕಿಕೊಂಡು ಓಡಿದ. ಮತ್ತೆ ಏನೋ ನೆನಪಿಸಿಕೊಂಡು ರೂಮಿಗೆ ಹಿಂತಿರುಗಿ "ಲೋ ವಿನ್ನ್ಯಾ ಸಾರಿ ಕಣೋ....ಲೇ ಲೇ ಒಂದು ಹೆಲ್ಪ್ ಕಣೋ" ಅಂದ ಕರಣ್. 

"ಏನ್ ಹೇಳಪ"-ವಿನಯ್

"ಇವತ್ ನೈಟ್ ಶಿಫ್ಟ್ ಕಣೋ ನಂಗೆ.ಅದೂ ಕ್ಯಾಶುವಾಲ್ಟೀಲಿ,ಮರ್ತೇ ಬಿಟ್ಟಿದ್ದೆ. ಸಹನಾಗೆ ಬೇರೆ ಪಾರ್ಟೀಗ್ಹೋಗೋಣ ಅಂತ ಕಮಿಟ್ಟಾಗ್ಬಿಟ್ಟೀನಿ.ಇವತ್ತೊಂದಿನ ನೀ exchange  ಮಾಡ್ಕೊಳ್ಳೋ ಮಗಾ" ಗೋಗರೆದ ಕರಣ್.

ವಿನಯ್ ನೈಟ್ ಶಿಫ್ಟ್ ಗೆ ಹೊರಟ. ಬೆಂಡಿಗೇರಿಯ ಹುರುಕಡ್ಲಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಂತಿಮ ವರ್ಷದ ಎಂ.ಡಿ. ಓದುತ್ತಿದ್ದ ಅವನು ಬೆಂಡಿಗೇರಿ ಪಕ್ಕದ ಮಳಿಗೇನಹಳ್ಳಿಯವನು.ಅವನ ಅಪ್ಪ ಇನ್ನೂರು ಕುರಿ ಸಾಕಿರುವ ಕುರಿಗಾಹಿ ಮಾಲತಪ್ಪ.ಜನ ಮಾ ಎಂದು ಕರೆಯುವ ಬದಲು ಮಲತಪ್ಪ ಮಲ್ತಪ್ಪ ಅನ್ನುವರು.ಮಾಲತಪ್ಪ ಮೂಲತಃ ರಂಗಯ್ಯನ ಗುಡ್ಡದ ಪಕ್ಕದ ಸಿದ್ದಾಪುರದವನು. ಎರಡು ಎಕರೆ ಹೊಲ ನೂರು ಕುರಿ ಇದ್ದ ಅವನು ಗಂಡು ದಿಕ್ಕಿಲ್ಲದ ಹೊನ್ನಮ್ಮನನ್ನು ಮದುವೆಯಾದ ಮೇಲೆ ಮಳಿಗೇನಹಳ್ಳಿಯ ನಾಲ್ಕೆಕರೆ ಹೊಲವನ್ನು ಅವನೇ ಉಳುಮೆ ಮಾಡಬೇಕಾಯಿತು. ಮೊದ ಮೊದಲು ಎರಡು ಊರಿಗೂ ಓಡಾಡಿ ಸೋತ ಮೇಲೆ ಸಿದ್ದಾಪುರದ ಬಳಿಯ ಹೊಲ ಕೋರಿಗೆ ಕೊಟ್ಟು ಮಳಿಗೇನಹಳ್ಳಿಯಲ್ಲೇ ಇದ್ದುಬಿಟ್ಟ. ಹೆಣ್ಣೊಂದು ಗಂಡೊಂದು ಮಕ್ಕಳು. ಮಗಳನ್ನು ರಾಣೆಬೆನ್ನೂರಿನ ಸಮೀಪದ ಮೆಡ್ಲೇರಿಗೆ ಕೊಟ್ಟು ಮದುವೆ ಮಾಡಿದ್ದ. ಜಾಣನಿದ್ದ ವಿನಯ್ ಅಪ್ಪನ ಮಿತ ಹಣದಲ್ಲೇ ಚೆನ್ನಾಗಿ ಓದಿ ಈಗ  ಜನರಲ್ ಮೆಡಿಸಿನ್ ನಲ್ಲಿ ಎಂಡಿ ಮಾಡುತ್ತಿರುವನು.

ಆಸ್ಪತ್ರೆಗೆ ಬಂದವನೇ ಕರಣ್ ಡ್ಯೂಟಿ ತಾನು ಮಾಡುತ್ತಿರುವುದಾಗಿ ತಿಳಿಸಿ,ಮುಖ್ಯ ವೈದ್ಯರ ಜೊತೆಗೆ ಕ್ಯಾಶುವಾಲ್ಟಿ ವಾರ್ಡ್ ಸುತ್ತಾಟ ಮುಗಿಸಿ, ಕಿರಿಯ ವೈದ್ಯರ ಜಾಗದಲ್ಲಿ ವಿನಯ್ ಕುಳಿತ. ಮುಖ್ಯ ವೈದ್ಯರು ಹೆಡ್ ನರ್ಸ್ ಗೆ ಏನೋ ಹೇಳಿ ಹೊರಟರು. ಹೀಗೇ ಆ ಈ ರೋಗಿಗಳ ರಾತ್ರಿ ಕೊಡಬೇಕಾದ ಚುಚ್ಚುಮದ್ದುಗಳನ್ನು ನರ್ಸ್ ಮೂಲಕ ಕೊಡಿಸಿ ತುಸು ಹೊತ್ತು ಕಳೆಯುವುದರಲ್ಲಿಯೇ ಮಹಿಳೆಯೊಬ್ಬರ ಜೋರು ಆಕ್ರಂದನ ಆಟೋ ರಿಕ್ಷಾದಿಂದ ಸೀದಾ ಒಳಗೇ ಧಾವಿಸಿತು. 

"ಯಪ್ಪಾ ಈಗಿನ್ನೂ ಉಂಡು ಕಾಲ್ಮಡಿಯಾಕಂತ ವೋಗಿದ್ದ್ರು ರೀ..ಅಲ್ಲೇ ಎಚ್ಚರಿಲ್ದಂಗ ಬಿದ್ದ್ರು ರೀ..ನನ್ ಗಂಡನ್ನ ಉಳಿಸ್ಕೊಡ್ರೀ ಸ್ವಾಮೀ"
ಜೋರು ಧಾವಿಸಿ ಬಂದ ವಿನಯ್ ಸ್ಟ್ರೆಚರ್ ನಿಂದ ಟೇಬಲ್ ಮೇಲೆ ಆ ವ್ಯಕ್ತಿಯನ್ನು ಮಲಗಿಸಿದ ಕೂಡಲೇ ಹೃದಯ ಬಡಿತ ಪರೀಕ್ಷಿಸಿದ. ಕ್ಷೀಣವಾಗಿತ್ತು. ರಕ್ತದೊತ್ತಡ ತೀರ ಕೆಳಮಟ್ಟದಲ್ಲಿತ್ತು. ನಾಡಿ ಮಿಡಿತ ಕೂಡ. ಅಂಗಿ ಗುಂಡಿ ಬಿಚ್ಚಿ ರೋಗಿಯ ಎದೆಭಾಗ ತೆರೆದ. ತಣ್ಣನೆಯ ಬೆವರಿನ ಕತ್ತು ಮುಖ ಒರೆಸಿದ. ಎದೆಯೆಲುಬುಗಳ ಮೇಲೆ ಒಂದರ ಮೇಲೊಂದು ಅಂಗೈಯಿಟ್ಟು ಅಮುಕಿದ. ಬಾಯಿಗೆ ಬಾಯಿಟ್ಟು ಉಸಿರು ಕೊಟ್ಟ. ಆದರೂ ಹೃದಯದ ಬಡಿತ ಏರಲಿಲ್ಲ. ನರ್ಸ್ ಕಡೆ ತಿರುಗಿ "ಅರ್ಜೆಂಟ್ ವೆಂಟಿಲೇಟರ್ ಕೊಡಬೇಕು. ಸರ್ ಗೆ ಫೋನ್ ಮಾಡ್ತೀರ?" ಅಂದ. ಅಲ್ಲಿದ್ದ ಹುಡುಗನಿಗೆ ಕರೆದು "ಇವರೇನಾಗ್ಬೇಕಪ ನಿಂಗೆ" ನರ್ಸ್ ಕೇಳಿದರು. ಹುಡುಗ ಅಳುತ್ತ "ಅಪ್ಪ" ಅಂದ. "ತಕ್ಷಣ 25,000 ಅಡ್ವಾನ್ಸ್ ಕಟ್ಟಬೇಕಾಗುತ್ತೆ, ವೆಂಟಿಲೇಟರ್ ಹಾಕ್ಬೇಕು.ನೀವು ಕಟ್ಟೋದಾದರೆ ನಾವು ಸೀನಿಯರ್ ಡಾಕ್ಟ್ರಿಗೆ ಕರೆಸ್ತೀವಿ" ಅಂದರು ನರ್ಸ್..ಆ ಹೆಣ್ಣು ಮಗಳು ಇನ್ನೂ ಜೋರು ಅಳಲು ಶುರು ಮಾಡಿತು. ಹುಡುಗ ಯಾರನ್ನೋ ಕರೆಯುವವನಂತೆ ಗಾಬರಿಯಿಂದ ಹೊರಗೋಡಿದ. ವಿನಯ್ ಮತ್ತೆ ಹೃದಯ ಬಡಿತ ಕೇಳಲು ಸ್ಟೆತ್ತಿಟ್ಟ.ವ್ಯಕ್ತಿ ಇಹಲೋಕ ತ್ಯಜಿಸಿದ್ದ. ಆ ಹೆಣ್ಣು ಮಗಳನ್ನು ವಿನಯ್ ಎಷ್ಟೇ ಸಂತೈಸಿದರೂ ಉಟ್ಟ ಬಟ್ಟೆಯ ಪರಿವಿಲ್ಲದೆ ಸಮುದ್ರವಾಗಿದ್ದಳು.ಅದೇ ಆಟೋದಲ್ಲಿ ಅವರೆಲ್ಲ ಹಿಂತಿರುಗಿದರು. ವಿನಯ್ ಮನಸ್ಸೂ ಸ್ಮಶಾನವಾಗಿತ್ತು. ಯಾರೋ ಒಬ್ಬ ತರುಣ ನರ್ಸ್ "ವಿಶ್ ಯು ಹ್ಯಾಪಿ ನ್ಯೂ...." ಅಂತಿದ್ದವಳು ಅವನ ಮುಖ ನೋಡಿ ತಲೆ ತಗ್ಗಿಸಿ ಹೊರಟಳು.

ಸ್ವಲ್ಪ ಹೊತ್ತು ಕಳೆದಿರಬೇಕು. ಮತ್ತೆ ಜೋರು ಗದ್ದಲ. ಅಪಘಾತಕ್ಕೀಡಾದ ಇಬ್ಬರು ಹುಡುಗರು. ಒಬ್ಬನ ಬುರುಡೆ ಹೋಳಾಗಿ,ಕೆನ್ನೆ ತರಚಿ, ಮುಖವೆಂಬ ಮುಖವೇ ರಕ್ತದ ಉಂಡೆಯಾಗಿತ್ತು. ಇನ್ನೊಬ್ಬನದು ಎಡ ಭುಜ ಮುರಿದಿತ್ತು.ಎಡಗೆನ್ನೆ ತರಚಿತ್ತು. ಇವರನ್ನು ಶುಶ್ರೂಷೆ ಮಾಡಿ ರೂಮಿನ ದಾರಿ ಹಿಡಿಯುವ ಹೊತ್ತಿಗೆ ಸೂರ್ಯನೂ ಅಪಘಾತವಾಗಿ ಮೇಲೆದ್ದವನಂತೆ ರಕ್ತಮಯವಾಗಿದ್ದ.

ಹೀಗೆ ಎಂ.ಡಿ. ಮುಗಿಸಿಕೊಂಡು ಮನೆಗೆ ಬಂದ ವಿನಯ್ ;ಹಳ್ಳಿಯ ಆಸ್ಪತ್ರೆಯಲ್ಲಿಯೇ ಮೊದಲ ಸೇವೆಗೈಯಬೇಕೆಂದುಕೊಂಡು ಸಿದ್ದಾಪುರದ ಬಳಿಯ ಕರಲಕಟ್ಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಘಟಕಕ್ಕೆ ಸರ್ಕಾರಿ ವೈದ್ಯನಾಗಿ ಸೇರಿದ. ಅವಿವಾಹಿತನಾಗಿದ್ದವನಿಗೆ ಆಸ್ಪತ್ರೆ ಸಮೀಪದ ಪುಟ್ಟ ಕ್ವಾರ್ಟರ್ಸೇ ನಿತ್ಯದ ವಸತಿಯಾಯ್ತು.

ವಿನಯ್ ಹಳ್ಳಿಯ ವೃದ್ಧರಿಗೆ ಮೊಮ್ಮಗನಾದ.

ಅವರು ಆಸ್ಪತ್ರೆಗೆ ಬಂದಾಗ  ಅವರು ಬಣ್ಣಿಸುತ್ತಿದ್ದ ತಮ್ಮ ಕಾಯಿಲೆಯ ಕತೆಗಳನ್ನು ಸಹನೆಯಿಂದ ಕೇಳಿ ನಗುತ್ತಲೇ ಚಿಕಿತ್ಸೆ ಮಾಡುತ್ತಿದ್ದ. ಚುಚ್ಚು ಮದ್ದು ಕೊಟ್ಟಕೂಡಲೆ ರೂಢಿಯಂತೆ ಅವರು ಮುಚ್ಚಿದ ಮುಷ್ಠಿಯಿಂದ ಎರಡು ರೂಪಾಯಿ ತೆಗೆದ ಕೂಡಲೇ ಸಣ್ಣಗೆ ಗದರಿ ಮತ್ತು ನಕ್ಕು ಹಣ ಪಡೆಯದೆ ಕಳಿಸುತ್ತಿದ್ದ. ಚಿಕ್ಕ ಮಕ್ಕಳು ಬಂದರೆಂದರೆ ಅವರಿಗೆ ಮೊದಲು ತನ್ನ ಟೇಬಲ್ ಮೇಲಿಟ್ಟುಕೊಂಡ ಚಾಕೊಲೇಟ್ ನೀಡಿ,ಅವರ ಅಳು ಮುಖವ ಆಡಿ ನಗಿಸಿ ಚಿಕಿತ್ಸೆ ಮಾಡುತ್ತಿದ್ದ.

ದಿನದಿಂದ ದಿನಕ್ಕೆ ಊರಿನ ಜನ "ಸಿದ್ದಾಪುರದ ಮಲ್ತಪ್ಪನ ಮಗ ಅಂತೆ, ಬಾಳ ಒಳ್ಳೇ ಡಾಕ್ಟ್ರು ಬಿಡು" ಅಂತ ಮಾತಾಡಿಕೊಂಡ ವಿಷಯ ಕೇಳಿ ವಿನಯ್ ಗೆ ತನ್ನ ವೃತ್ತಿ ಮೇಲಿನ ಪ್ರೀತಿ ಇಮ್ಮಡಿಸಿತ್ತು.

ಒಂದಿನ ಸಂಜೆ ರೋಗಿಗಳಿಲ್ಲದ ವೇಳೆಯಲ್ಲಿ ಇಬ್ಬರು ಆಸಾಮಿಗಳು ಬಂದರು.ನಮಸ್ಕರಿಸಿದರು. ಒಬ್ಬ ನಡು ವಯಸ್ಸಿನವ ಕೈಯಲ್ಲಿನ ಪ್ಲಾಸ್ಟಿಕ್ ಚೀಲದಿಂದ ಒಂದಷ್ಟು ನೋಟ್ ಪ್ಯಾಡ್ ತರಹದವುಗಳನ್ನು ಹೊರತೆಗೆದು ಟೇಬಲ್ ಮೇಲಿಟ್ಟು "ನಂದು ಮೆಡಿಕಲ್ ಶಾಪಿದೆ ಸರ್...ನಿಮ್ಮ ಹೆಸರಿನ ಪ್ರಿಸ್ಕ್ರಿಪ್ಶನ್ ಪ್ಯಾಡ್ ಇವು....ಹಿಂದಿದ್ದ ಡಾಕ್ಟ್ರಿಗೆ ಟೂ ಪರ್ಸೆಂಟ್ ಕೊಡ್ತಿದ್ದೆ ಸರ್...." ಮೆಲುವಾಗಿ ಗೊಣಗಿದ.ಅದರ ಹಿಂದೆಯೇ ಮತ್ತೊಬ್ಬ "ನಾನು ಜಂಬನಗೌಡಾಂತ ರೀ...ಪಂಚಾತಿ ಅದ್ಯಕ್ಷ..ಬಾಳಾ ದಿನಗುಳಿಂದ ನಿಮ್ಮನ್ನ ಮಾತಾಡಿಸ್ಗೆಂದೋಗನೂ ಅನ್ಕಂಡಿದ್ದ್ರೀ...ಆಗಿರ್ಲುಲ್ಲ..ಇವರು ನಮ್ಮಳಿಯ ರೀ...ಒಂದ ಔಸ್ದದ್ದಂಗ್ಡೀರಿ ಊರಾಗಿರಾದು...ಓಟುಪಕಾರ ಮಾಡ್ರಿ" ಅನ್ನುತ್ತಾ ಎದುರಿನ ಕುರ್ಚಿ ಮೇಲೆ ಕೂತ. ವಿನಯ್ ಗೆ ಒಂದು ಕ್ಷಣ ಏನು ಹೇಳಬೇಕೋ ತೋಚಲಿಲ್ಲ. ಹಾಸ್ಟೆಲ್ ನಲ್ಲಿ ಅವನ ಗೆಳೆಯರು ಗಾಂಧಿ ಹೆಸರಿನಿಂದ ಲೇವಡಿ ಮಾಡುವುದೆಲ್ಲಾ ಸುಳಿದು ಹೋಯಿತು. ಆದರೂ ದೃಢತೆಯಿಂದ "ಸಾರಿ ಈ ವ್ಯವಹಾರ ಎಲ್ಲಾ ಆಸ್ಪತ್ರೆಗೆ ತರಬೇಡಿ. ನಮ್ಮಲ್ಲಿ ಇಲ್ಲದ ಮೆಡಿಸಿನ್ಸ್ ಬೇಕಾದರೆ ಬರೆದು ಕಳಿಸ್ತೀನಿ. ಈ ಪ್ಯಾಡ್ ವಾಪಸ್ ತಗೊಳ್ಳಿ". ಅದಕ್ಕೆ ಜಂಬನಗೌಡ " ತಮ್ಮ ನೀನಿನ್ನೂ ಉಡುಗ್ಬಟ್ಟಿ ಡಾಕ್ರು. ಇವನ್ನ ತಗ ತಗ ಅಂಗನ್ಬ್ಯಾಡ"ಎನ್ನುತ್ತ ಆ ಪ್ಯಾಡ್ ಗಳನ್ನು ಮತ್ತೆ ಕೊಡ ಹೋದ. ವಿನಯ್ ಮುಟ್ಟಲಿಲ್ಲ. ಊರಿಗೆ ಹೊಸಬನನ್ನು ನಾಯಿಯೊಂದು ಗುರುಗುಟ್ಟಿ ನೋಡುವಂತೆ ನೋಡಿ ಅವರು ತೆರಳಿದರು.

ಜನರ ಪ್ರೀತಿ ಮತ್ತು ಅಂದಿನ ಸಂಜೆಯ ಘಟನೆ ಎರಡೂ ಒಂದರ ಮೇಲೊಂದರಂತೆ ವಿನಯ್ ಮನಸ್ಸಿನಲ್ಲಿ ಮರುಕಳಿಸಿ ಸ್ವಲ್ಪ ಕಾಲ ಆ ರಾತ್ರಿಯ ನಿದ್ರೆಯ ಕಲಕಿದವು. ಆ ವೇಳೆ ಕಾಂಪೌಂಡರ್ ಸದಾನಂದ ಬಂದವರ ಬಳಿ ಗುಸು ಗುಸು ಮಾಡಿದ್ದೂ ನೆನಪಾಗಿ ಮುಳ್ಳಿನಂತೆ ಚುಚ್ಚಿತು. ಕರೆಂಟಿಲ್ಲದ ಬೇಸಗೆಯ ರಾತ್ರಿ ಹೇಗೋ ಕಳೆದು ಬೆಳಗಾಯಿತು.

ಇದೆಲ್ಲ ಆಗಿ ಕೆಲ ದಿನ ಕಳೆದಿರಬೇಕು. ಮಟ ಮಟ ಮಧ್ಯಾಹ್ನ ಜನರ ಗುಂಪು ಗದ್ದಲ ಮಾಡುತ್ತ ಆಸ್ಪತ್ರೆಗೆ ನುಗ್ಗಿತು. ಒಡೆದ ತಲೆ ಬುರುಡೆಗೆ ಕೈ ಒತ್ತಿಕೊಂಡವನೊಬ್ಬನು ಮತ್ತೊಬ್ಬನ ನೆರವಿನಿಂದ ಒಳ ಬಂದ. ಹಿಂದೆ ಜಂಬನಗೌಡ ಯಾರಿಗೋ "ಬರ್ಲಿ ಆ ಸೂಳೆಮಗ, ನಮ್ಮುಡ್ಗುಂಗ ಕೈ ಮಾಡಂಗಾದ್ನ!?" ಇನ್ನೂ ಏನೇನೋ ಬೈಯುತ್ತಿದ್ದ. ಅವನ ಗದ್ದಲಕ್ಕೆ ಚಿಕಿತ್ಸೆ ನಿರೀಕ್ಷಿಸಿ ಕಾಯುತ್ತಿದ್ದ ರೋಗಿಗಳು ಕಂಗಾಲಾದರು.

ತಲೆ ಬುರುಡೆ ಒಂದಿಂಚಗಲ ಸೀಳಿತ್ತು. ಆತನಿಗೆ ಬ್ಯಾಂಡೇಜ್ ಮಾಡಿ, ಇಂಜೆಕ್ಷನ್ ಕೊಟ್ಟು, ಒಂದಷ್ಟು ಗುಳಿಗೆ ವಿತರಿಸಿದ. ಆ ವೇಳೆಗೆ ಸೊಂಟದ ಮೇಲೆ ಒಂದು ಕೈಯಿಟ್ಟುಕೊಂಡು  ಕೂಗಾಡುತ್ತಲೇ ಒಳ ಬಂದ ಜಂಬನಗೌಡನಿಗೆ ವಿನಯ್ "ಆಸ್ಪತ್ರೆ ಸ್ವಾಮಿ ಇದು. ಸ್ವಲ್ಪ ಸಮಾಧಾನ ಇರ್ಲಿ" ಎಂದದ್ದಕ್ಕೆ "ಯೋಯ್ ಡಾಕ್ರೆ, ಯಾವನ ತುಕಾಲಿ ನನ್ಮಗಂತಗ ವಡಿಸ್ಗೆಂಡು ಸುಮ್ಕುರಾಕ. ಕೇಸಾಕಿ ಅವನ್ನ ಕಂಬಿ ಎಣಸಂಗ ಮಾಡ್ಲುಲ್ಲಾಂದ್ರ ನಮ್ಮಪ್ಪಗುಟ್ಟಿದ ಮಗನೇ ಅಲ್ಲ. ಮಾರಣಾಂತಿಕ ಅಲ್ಲೆ ಅಂತ ಗಡ ಗಡ ಸರ್ಕಿಪಿಕೀಟ್ ಬರೀರಿ ಜಲ್ದಿ" ಅಂದ. "ನೋಡ್ರಿ ನೀವೇಳ್ದೆಂಗ ಬರ್ದು ಕೊಡೋಕೆಲ್ಲ ಆಗಲ್ಲ. ಮೈನರ್ ಇಂಜುರಿ ಆಗಿದೆ. ಅದೇನಿದೆಯೋ ಅದನ್ನು ಕೊಡ್ತೀನಿ" ಅಂದ ವಿನಯ್. "ರೀ ಒಂದು ಟವಲ್ ರಕ್ತ ಮುಣುಗ್ಯಾತಿ.. ಯಾಕ ನಮ್ಮನ್ನೋಡಿದ್ರ ಎಂಗನ್ನಿಸ್ತಾತಿ? ಎಮ್ಮೆಲ್ಲೆ ವಾಸಣ್ಣರು ನಮಿಗತ್ಯಂತ..ಸುಮ್ನ ಯೋಳ್ದೋಟು ಬರೀರಿ" ಗದರಿದ ಜಂಬನಗೌಡ. ರೋಗಿಯ ವಿವರ ಕೇಳಿ,ಸ್ವಲ್ಪ ಮೌನದ ಬಳಿಕ

ವಿನಯ್-"ಏನಿದೆಯೋ ಅದನ್ನು ಬರೆದಿದ್ದೀನಿ ತಗೊಳ್ಳಿ. ಹೊರಗಡೆ ಪೇಶಂಟ್ಸಿದಾರೆ ಅವರನ್ನೋಡ್ಬೇಕು ಹೊರಡಿ."

"ಹೇ ಡಾಕ್ಟ್ರೆ ಯಾಕ ಬಲು ಮಾಡಕಚ್ಚಿ ನೀನು, ಆಮೇಲೆ ಬರ್ತಿನಿ ತಡೀಲ್ಲಿ..ಬರ್ರೆಲೆ ವೋಗನ" ಎನ್ನುತ್ತಾ ಜಂಬನಗೌಡ ಹೊರಟ.

ಅಂದೇ ಸಂಜೆ ಶಾಸಕ ವಾಸಣ್ಣನಿಂದ ಫೋನ್ ಬಂತು. ಏನು ಹೇಳಿದರೂ ಆ ಕಡೆಯಿಂದ ಬೈಗುಳ ಮಾತ್ರ ಕೇಳಿತು. ಬೇಸರದಿಂದ ಬೆಂದ ವಿನಯ್ ರಾಜೀನಾಮೆ ಇಟ್ಟು ಊರಿಗೆ ಹೊರಟ.

ವಿನಯ್ ಮನೆಯಲ್ಲಿ ಅಪ್ಪ ಅಮ್ಮನಿಗೆ ನಿರಂತರ ಜಗಳ. ಹೊಸ ಮನೆ ಕಟ್ಟಿಸಿ,ಡಾಕ್ಟರ್ ಮಗನಿಗೆ ಇದ್ದಂಥವರ ಮನೆಯಿಂದ ಹೆಣ್ಣು ತಂದು ಮದುವೆ ಮಾಡಬೇಕೆಂಬ ಹಂಬಲ ಅಮ್ಮನದು.ಮನೆ ಕಟ್ಟಿಸಲು ದುಡ್ಡಿರದ ಅಪ್ಪನದು ಈ ಮನೆಯೇ ಸಾಕೆಂಬ ವಾದ.ದುಡ್ಡಿರದಿದ್ದರೆ ತನ್ನ ಹೆಸರಿಗಿರುವ ಹೊಲ ಮಾರಿ, ಬೆಂಡಿಗೇರಿ ಸಿಟಿಯಲ್ಲಿ ಮನೆ ಕಟ್ಟಿಸುವ ಹಟ ಅಮ್ಮನಿಗೆ. ಕೆಲಸ ಬಿಟ್ಟು ಬಂದ ವಿನಯ್ ಗೆ ತಿಂಗಳೊಪ್ಪತ್ತಿಗೇ ಮನೆ ಸಾಕಾಯಿತು. ಅಪ್ಪನ ಜೊತೆಗೆ ಕುರಿ ಕಾಯಲು ಕೆಲ ದಿನ ಹೋದ. ಜನ ಏನೇನೋ ವಿನಯ್ ಬಗ್ಗೆ ಮಾತಾಡಲು ಶುರು ಮಾಡಿದರು.ಅಮ್ಮನೂ ಜನರ ಉದಾಹರಿಸಿ ಬೈದಳು. ಮಾಲತಪ್ಪ ಮಾತ್ರ ಮಗನ ನೋಯಿಸಲು ಮುಂದಾಗಲಿಲ್ಲ. ಕುರಿಗೆ ಹೋದಾಗ ಮರದ ನೆರಳಡಿ ಅವನನ್ನು ತೊಡೆಯ ಮೇಲೆ ಮಲಗಿಸಿಕೊಂಡು ತಲೆಯಲ್ಲಿ ನಚ್ಚಗೆ ಬೆರಳಾಡಿಸಿ "ಇರಲಿ ಬಿಡು ವಿನ್ನಪ್ಪ..ನಿನಿಗೆ ಮನಸಿದ್ದ್ರ ಕೆಲಸಕ್ಕೋಗು

ಇಲ್ದಿದ್ದ್ರ ದೇವರಮ್ಮನು ವೊಲ ಮನಿ ಈ ಕುರಿ ಕೊಟ್ಟಾನ. ಯಂಗಾದ್ರೂ ಜೀವ್ನ ಮಾಡದಲ? ಮೂರೊತ್ತಿನ ಮುದ್ದಿಗಿನ್ನೇಟು ಬೇಕಲೆ ತಮ್ಮಾ, ಆರಾಮಿರು" ಎಂದು ಮಲಗಿಸುತ್ತಿದ್ದ. ಮನೆಗೆ ಬಂದರೆ ಮಾತ್ರ ಅಮ್ಮನದು ಕೆಲಸಕ್ಕೆ ಹೋಗೆಂಬ ಅದೇ ಒತ್ತಡ.

ವಿನಯ್ ಉಬ್ಲೂರೆಂಬ ಮಹಾನಗರದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಮತ್ತೊಮ್ಮೆ ಹೋದ. ಅತ್ತ ವಿನಯ್ ಹೋಗುತ್ತಿದ್ದಂತೆಯೇ ಮಾಲತಪ್ಪನೊಂದಿಗೆ ಹೊನ್ನಮ್ಮನ ಜಗಳ.ಬೆಂಡಿಗೇರಿ ಕಾರ್ಪೊರೇಟರ್ ಆಗಿದ್ದ ತನ್ನ ಬಂಧುವೊಬ್ಬನನ್ನು ಹಿಡಿದು ಇಪ್ಪತ್ತು ಲಕ್ಷಕ್ಕೆ ಮನೆ ಖರೀದಿಗೆ ನಿಂತಳು. ತನ್ನಪ್ಪನಿಂದ ಬಂದ, ಬೆಂಡಿಗೇರಿ ವರ್ತುಲ ರಸ್ತೆಗೆ ಹತ್ತಿರವೇ ಇದ್ದ ತನ್ನ ನಾಕೆಕರೆ ಹೊಲವನ್ನು ಹತ್ತು ಲಕ್ಷಕ್ಕೆ ಎಕರೆಯಂತೆ ಮಾರಲು ಮುಂದಾದಳು. ನೆಲವೆಂದರೆ ತಾಯಿಯಂತೆ ಪ್ರೀತಿಸುತ್ತಿದ್ದ ಮಾಲತಪ್ಪನಿಗೆ ಹೊನ್ನಮ್ಮನ ದುರಾಸೆಯ ಬುದ್ಧಿ ತಿದ್ದಲಾಗಲಿಲ್ಲ. ಹೊಲದ ವ್ಯಾಪಾರ, ಮನೆಯ ಖರೀದಿ ಒಂದೇ ದಿನ ಮಾಲತಪ್ಪನನ್ನು ಅಕ್ಷರಶಃ ಹೊರಗಿಟ್ಟು ನಡೆದವು. ಭತ್ತ ತುಂಬಿ ತುಳುಕುತ್ತಿದ್ದ ಆ ಹೊಲಕ್ಕೆ ಹೋಗಿ ಉರುಳಾಡಿ ಅತ್ತ. ಒಂದು ಮುಂಜಾನೆ ಹಟ್ಟಿಯಲ್ಲಿದ್ದ ಕುರಿ ಹೊಡೆದುಕೊಂಡು ತನ್ನ ಹುಟ್ಟಿದೂರು ಸಿದ್ದಾಪುರ ಸೇರಿದ. ಜುಗುಪ್ಸೆ ಹೊಂದಿ ಹುಚ್ಚನಂತೆ ಒಬ್ಬನೇ ಮಾತಾಡಿಕೊಳ್ಳುತ್ತ ಕುರಿ ಕಾದ.ಅದರ ಮೇಲೂ ಒಲವು ಕುಸಿದು ಹುಚ್ಚನಾದ.

ಹೊಸ ಆಸ್ಪತ್ರೆಯ ವಿಚಿತ್ರ ನಿಯಮಗಳು ವಿನಯ್ ನನ್ನು ಉಸಿರುಗಟ್ಟಿಸುತ್ತಿದ್ದವು.ರೋಗಿಗಳ ಬಳಿಯಿದ್ದಾಗಿನ ಸಮಾಧಾನ ವೈದ್ಯರ ಬಳಿಯಿದ್ದಾಗ ಇರುತ್ತಿರಲಿಲ್ಲ. ಆಸ್ಪತ್ರೆಯ ಮೆಡಿಕಲ್ ಸೂಪರಿಂಡೆಂಟ್ ಒಂದು ದಿನ ಎಲ್ಲಾ ವೈದ್ಯರ ಮಾಸಿಕ ಸಭೆ ಕರೆದರು. ವಿಭಾಗವಾರು ಆದಾಯದ ಲೆಕ್ಕ ಪರಿಶೀಲಿಸತೊಡಗಿದರು. ಜನರಲ್ ಮೆಡಿಸಿನ್ ವಿಭಾಗದವರ ಮೇಲೆ ಆದಾಯ ತರದ್ದಕ್ಕೆ ರೇಗಿ "ಏನ್ರೀ ಇದು ಧರ್ಮ ಛತ್ರ ಅಲ್ಲ.ನಿಮಗೆಲ್ಲ ಲಕ್ಷಗಟ್ಳೆ ಸ್ಯಾಲರಿ ಬೇಕು, ನಮಗೆ ರೆವಿನ್ಯೂ ಬೇಡ್ವಾ? ಸ್ವಲ್ಪ ನಿಮ್ಮ ಎಥಿಕ್ಸ್ ಬದಿಗಿಟ್ಟು ಕೆಲಸ ಮಾಡಿ. ಹೇ ಹುಡುಗ ಏನು ನಿನ್ನ ಹೆಸರು?" ವಿನಯ್ ನನ್ನು ಪ್ರಶ್ನಿಸಿದರು ಎಂ.ಎಸ್. "ವಿನಯ್ ಸರ್" ಎಂದಷ್ಟೇ ಹೇಳಿ ಕುಳಿತ. "ರೀ ಹೆಚ್ವೋಡಿ ಕುಲಕರ್ಣಿ ನೀವು ಟೆಸ್ಟ್ಸ್ ರೆಫರ್ ಮಾಡದಿದ್ದರೆ ಲ್ಯಾಬ್ ಗಳನ್ನೇನು ಮುಚ್ಬೇಕ ನಾವು? ಸ್ವಲ್ಪ ಕಾರ್ಡಿಯಾಲಜಿಯವರ್ನ, ಯೂರಾಲಜಿಯವರ್ನ, ಎಂಡೋಕ್ರಿನಲಾಜಿಯವರ್ನ ನೋಡಿ ಕಲೀರಿ" ಮತ್ತೆ ದಬಾಯಿಸುವ ಧಾಟಿಯಲ್ಲಿ ಗುಡುಗಿದರು ಎಂ.ಎಸ್ -ಜಾಧವ್. ಕುಲಕರ್ಣಿಯವರಿಗೂ ಅವಮಾನವಾದಂತಾಗಿ "ನಮಗೆಲ್ಲ ಜಾಸ್ತಿ ಬಡ ಜನನೇ ಪೇಶಂಟ್ಸ್ ಸರ್" ಅಂದರು. ಅದಕ್ಕೆ ಜಾಧವ್ ಮತ್ತೂ ರೇಗಿ "ಒಬೇದ ಆರ್ಡರ್. ಅದರ್ವೈಸ್ ಕ್ವಿಟ್ ದ ಹಾಸ್ಪಿಟಲ್" ಅಂದರು.

ಯಾಕೋ ಎಲ್ಲರೂ ಒಪ್ಪಿರುವ ಈ ವ್ಯಾವಹಾರಿಕತೆಯೇ ಹಿಡಿಸಲಿಲ್ಲ ವಿನಯ್ ಗೆ.ಉಳಿದ ವೈದ್ಯರ ಮಧ್ಯೆ ಇವನು ನಗೆಪಾಟಲಿಗೀಡಾದಂತೆನ್ನಿಸಿ ನಿತ್ಯವೂ ನಿದ್ದೆ ಬರದೆ ಅಪ್ಪ, ಕುರಿ ಮತ್ತು ಹೊಲ ನೆನಪಾಗುತ್ತಿದ್ದವು. ಈ ನರಳಾಟ ತಡೆಯದೆ ಅಲ್ಲೂ ಬಿಟ್ಟು ಊರಿಗೆ ಬಂದ.
      
ಇಷ್ಟೆಲ್ಲಾ ಕತೆ ಓದಿ ಸುಮ್ಮನಾದ ವಿನಯ್ ಗೆ

ಅಷ್ಟೊತ್ತಿನಿಂದಲೂ ಅದುಮಿಟ್ಟುಕೊಂಡ ಪ್ರಶ್ನೆ ಕೇಳಿದೆ "ನೀವು ಡಾಕ್ಟ್ರಾ?". ವಿನಯ್ ಹೌದೆಂಬಂತೆ ನಕ್ಕರು.

ಅಪ್ಪ ಮನೆ ಬಿಟ್ಟು ಹೋದ ವಿಷಯ ತಿಳಿದು ಅವರೂ ಸಿದ್ದಾಪುರಕ್ಕೆ ಬಂದರಂತೆ. ಮಗನ ನೋಡಿ ಕೊಂಚ ಚೇತರಿಸಿಕೊಂಡ ತಂದೆಯ ಜೊತೆಗೆ ಈ ಹೊಲದಲ್ಲಿಯೇ ಕೊಟ್ಟಿಗೆ ಹಾಕಿಕೊಂಡು ಈ ತೋಟ ಮಾಡಿದರಂತೆ. ಅಪ್ಪ ಸಾಯೋವರೆಗೂ ಅಮ್ಮ ಬರಲಿಲ್ವಂತೆ. "ಈ ಆರು ತಿಂಗಳ ಹಿಂದೆ ಅಪ್ಪ ಹೋದ್ರು.ಅಮ್ಮ ಬಂದ್ರು. ಅವರಿಗಿನ್ನೂ ಶ್ರೀಮಂತ ಮನೆಯ ಹುಡುಗಿ ತರೋ ಆಸೆ" ಅಂದು ಮತ್ತೆ ನಕ್ಕರು.ಅವರಷ್ಟೇ ಶುಭ್ರವಾಗಿದ್ದ ಆ ತೋಟ ಮತ್ತೊಮ್ಮೆ ಸುತ್ತಿ ಹೊರ ಬಂದೆವು. ನನ್ನ ಕಳಿಸಲು ಬಂದ ವಿನಯ್ ಬಳಿ ಮೊಲದ ಬಣ್ಣದ ಬೀದಿ ನಾಯಿ ಮರಿ ಬಂದು ಕಾಲು ನೆಕ್ಕುತ್ತಾ ಕುಯ್ಗುಟ್ಟತೊಡಗಿತು.ಅದನ್ನು ಅವುಚಿಕೊಂಡು ಅವರು ಒಳ ಹೋದರು.

ದಾರಿ ತುಂಬಾ ನನಗೆ ನಾನು ಚಿಕ್ಕವನಿದ್ದಾಗ ನಮ್ಮೂರಾಸ್ಪತ್ರೆಯಲ್ಲಿದ್ದ ಶ್ರೀನಿವಾಸ್ ಡಾಕ್ಟರ್ ನೆನಪು ಕಾಡುತ್ತಿತ್ತು. ಊರ ಮುಂದಿನ ಕ್ವಾರ್ಟರ್ಸ್ ಮುಂದೆ ಸಂಜೆ ಹೊತ್ತು ಅಳಿಲೊಂದನ್ನು ಮೈಮೇಲೆ ಬಿಟ್ಟುಕೊಂಡು ಆಡುತ್ತಿರುವ ನಮ್ಮಂಥ ಹುಡುಗರ ನೋಡಿ ತಾವೂ ನಲಿಯುತ್ತಿದ್ದರು.

ಬೆಂಡಿಗೇರಿಯ ಒಳ ಬಂದ ಕೂಡಲೇ ನನಗೂ ಏನೋ ಒಗ್ಗದ ಅನುಭವ. ನನ್ನ ಬಾಡಿಗೆ ಮನೆಯಿರುವ ತಿರುವಿನ ಮೂಲೆಗೇ ಇದ್ದ ನವಯುಗ ಫಾರ್ಮಾದವರ ದೊಡ್ಡ ಬಂಗಲೆಯೆದುರು ಬಹಳಷ್ಟು ಕಾರು ನಿಂತಿದ್ದವು.ಜಿಲ್ಲಾ ಮಂತ್ರಿಗಳನ್ನು ಸ್ವಾಗತಿಸುವ ಕಮಾನು ಹೂವಿನಿಂದ ಅಲಂಕೃತಗೊಂಡಿತ್ತು. ಅಲ್ಲಿಯೇ ತೇಜಸ್ವಿಯವರ ತಬರನಂಥವನೊಬ್ಬ ತಲೆ ಕೆರೆದುಕೊಂಡು ನಗುತ್ತಾ ನಿಂತ ದೃಶ್ಯ ಎಷ್ಟು ಉಜ್ಜಿಕೊಂಡರೂ ಕಣ್ಣಿಂದ ಸರಿಯಲಿಲ್ಲ.